ಮುಖಪುಟ ಲೇಖನ | ಧುತ್ತೆಂದು ದುರಂತಗಳು ಸಂಭವಿಸಿದಾಗ . . .
ಎಲ್ಲವನ್ನೂ ಕಳೆದುಕೊಂಡಾಗ. . .
2011, ಮಾರ್ಚ್ 11ರಂದು ರಿಕ್ಟರ್ ಮಾಪಕದಲ್ಲಿ 9ರಷ್ಟು ತೀವ್ರತೆಯ ಭೀಕರ ಭೂಕಂಪ ಜಪಾನಿನಲ್ಲಿ ಸಂಭವಿಸಿತು. ಸುಮಾರು 15,000ಕ್ಕಿಂತ ಹೆಚ್ಚು ಜನರು ಈ ಭೂಕಂಪಕ್ಕೆ ಬಲಿಯಾದರು. 12 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಆರ್ಥಿಕ ನಷ್ಟವಾಯಿತು. ಈ ಭೂಕಂಪದಿಂದಾಗಿ ಸುನಾಮಿಯೂ ಬರಲಿದೆ ಎಂದು ಮೊದಲೇ ಎಚ್ಚರಿಕೆ ಕೊಟ್ಟಿದ್ದರಿಂದ 32 ವರ್ಷದ ಕೇ ಎಂಬವರು ಸುರಕ್ಷಿತ ಸ್ಥಳಕ್ಕೆ ಹೋಗಿ ತಮ್ಮ ಜೀವವನ್ನು ಕಾಪಾಡಿಕೊಂಡರು. ನಂತರದ ಸನ್ನಿವೇಶವನ್ನು ಅವರು ಹೀಗೆ ವಿವರಿಸುತ್ತಾರೆ, “ಮಾರನೇ ದಿನ ಬೆಳಿಗ್ಗೆ, ಮನೇಲೇನಾದ್ರೂ ಉಳಿದಿದ್ದರೆ ತಗೊಂಡು ಬರೋಣ ಅಂತ ಹೋದೆ, ಆದ್ರೆ ಅಲ್ಲಿ ಅಪಾರ್ಟ್‍ಮೆಂಟ್‍ನ ಪಾಯ ಒಂದು ಬಿಟ್ಟು ಬೇರೇನೂ ಇರಲಿಲ್ಲ. ಮನೆ ಸಹಿತ ಎಲ್ಲವೂ ಸುನಾಮಿಯಲ್ಲಿ ಕೊಚ್ಚಿಕೊಂಡು ಹೋಗಿದ್ದವು.”
“ನನ್ನ ವಸ್ತುಗಳೆಲ್ಲಾ ಹೋದ್ವಲ್ಲಾ ಅನ್ನೋ ಆಘಾತದಲ್ಲಿದ್ದ ನನಗೆ, ನನ್ನ ಪರಿಸ್ಥಿತಿನೇ ಬದಲಾಗಿದೆ ಅನ್ನೋದನ್ನು ಅರ್ಥಮಾಡಿಕೊಳ್ಳೋಕೆ ತುಂಬ ಸಮಯ ಹಿಡೀತು. ನನ್ನ ಕಾರು, ನಾನು ಕೆಲಸ ಮಾಡುತ್ತಿದ್ದ ಕಂಪ್ಯೂಟರ್‌ಗಳು, ಟೇಬಲ್-ಕುರ್ಚಿ, ಸೋಫಾ, ಪಿಯಾನೋ, ಗಿಟಾರ್, ಕೊಳಲು, ನಾನು ಬಿಡಿಸಿದ್ದ ಚಿತ್ರಗಳು, ಡ್ರಾಯಿಂಗ್ ಸಲಕರಣೆಗಳು ಹೀಗೆ ಎಲ್ಲ ಕೊಚ್ಚಿಕೊಂಡು ಹೋಗಿತ್ತು.”
ಏನು ಮಾಡಬಹುದು?
ನೀವು ಏನು ಕಳೆದುಕೊಂಡಿದ್ದೀರ ಅನ್ನೋದರ ಬಗ್ಗೆ ಯೋಚನೆ ಮಾಡದೇ ನಿಮ್ಮ ಹತ್ತಿರ ಇನ್ನೂ ಏನಿದೆಯೋ ಅದರ ಕಡೆಗೆ ಗಮನ ಕೊಡಿ. “ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು” ಅಂತ ಬೈಬಲ್ ಹೇಳುವುದು ಎಷ್ಟು ನಿಜ ಅಲ್ವಾ? (ಲೂಕ 12:15) ಕೇ ತಮ್ಮ ಪರಿಸ್ಥಿತಿಯ ಬಗ್ಗೆ ವಿವರಿಸುವುದು, “ಮೊದಲು ನಂಗೇನು ಬೇಕೆಂದು ಪಟ್ಟಿ ಮಾಡಿದೆ, ಆದರೆ ಅದರಲ್ಲಿ ನಾನು ಕಳೆದುಕೊಂಡ ವಸ್ತುಗಳೇ ಇದ್ದವು. ಆದ್ದರಿಂದ, ಇನ್ನೊಂದು ಹೊಸ ಪಟ್ಟಿ ಮಾಡಿದೆ. ಅದರಲ್ಲಿ ನನ್ನ ಜೀವನ ನಡೆಸೋದಕ್ಕೆ ಯಾವುದು ಅತ್ಯಾವಶ್ಯಕವಾಗಿದ್ದವೋ ಅಂಥವುಗಳನ್ನು ಮಾತ್ರ ಬರೆದೆ. ಒಂದೊಂದಾಗಿ ಆ ವಸ್ತುಗಳನ್ನು ಪಡೆದುಕೊಂಡಾಗ ಅವನ್ನು ಪಟ್ಟಿಯಿಂದ ತೆಗೆದುಹಾಕುತ್ತಿದ್ದೆ. ನನ್ನ ಜೀವನಾನ ಮತ್ತೊಮ್ಮೆ ರೂಪಿಸಿಕೊಳ್ಳೋಕೆ ಈ ಪಟ್ಟಿ ನಂಗೆ ತುಂಬ ಸಹಾಯಮಾಡಿತು.”
ನಿಮ್ಮ ಬಗ್ಗೆನೇ ಯೋಚಿಸುವ ಬದಲು ನಿಮ್ಮಂಥ ಪರಿಸ್ಥಿತಿಯನ್ನು ಎದುರಿಸುತ್ತಿರುವವರಿಗೆ ಸಮಾಧಾನ ಮಾಡಿ. ನೀವು ಹೇಗೆ ಅಂಥ ಪರಿಸ್ಥಿತಿಯಿಂದ ಹೊರಬಂದಿರಿ ಅಂತ ಹೇಳಿ. “ಸರಕಾರದ ವತಿಯಿಂದ ಕೊಡಲಾದ ಪರಿಹಾರ ಮತ್ತು ನನ್ನ ಸ್ನೇಹಿತರಿಂದ ಸಿಗುತ್ತಿದ್ದ ಬೆಂಬಲ ನಂಗೆ ತುಂಬಾನೇ ಸಹಾಯ ಮಾಡಿತು. ಆದರೆ ಆ ರೀತಿ ಪದೇ ಪದೇ ಇನ್ನೊಬ್ಬರಿಂದ ತೆಗೆದುಕೊಳ್ಳುತ್ತಾ ಇದ್ದಿದ್ದು ನನಲ್ಲಿ ಕೀಳರಿಮೆ ಹುಟ್ಟಿಸಿತು. ಇಂಥ ಮನೋಭಾವ ಬದಲಾಯಿಸಿಕೊಳ್ಳೋಕೆ ಬೈಬಲಿನ ಅಪೊಸ್ತಲರ ಕಾರ್ಯಗಳು ಪುಸ್ತಕದ 20:35ರಲ್ಲಿರುವ ಮಾತು ನನಗೆ ಸಹಾಯ ಮಾಡಿತು. ಅದು ಹೇಳುತ್ತೆ ‘ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.’ ಹಾಗಾಗಿ ಇತರರಿಗೆ ನೆರವು ನೀಡಲು ನಿರ್ಧರಿಸಿದೆ. ನನ್ನಂತೆ ವಿಪತ್ತಿನಿಂದ ಬಾಧಿತರಾದವರಿಗೆ ಆರ್ಥಿಕ ಸಹಾಯ ಮಾಡಲು ಆಗದಿದ್ದರೂ ಅವರಿಗೆ ಆ ಪರಿಸ್ಥಿತಿಯಿಂದ ಹೊರಬರಲು ಉತ್ತೇಜನ ನೀಡುತ್ತಿದ್ದೆ. ಈ ರೀತಿ ಮಾಡಿದ್ದರಿಂದ ನನ್ನಲ್ಲಿದ್ದ ಕೀಳರಿಮೆ ಕಡಿಮೆಯಾಯಿತು” ಅಂತ ಕೇ ಹೇಳುತ್ತಾರೆ.
ನಿಮ್ಮ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿ. ಆತನು ಖಂಡಿತ ಸಹಾಯ ಮಾಡುತ್ತಾನೆ. ದೇವರು ‘ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸುವನು’ ಎಂದು ಬೈಬಲ್ ಕೊಡುವ ಆಶ್ವಾಸನೆಯನ್ನು ಕೇ ಸಂಪೂರ್ಣವಾಗಿ ನಂಬಿದರು. (ಕೀರ್ತನೆ 102:15) ನೀವು ಸಹ ಅದೇ ನಂಬಿಕೆಯಿಂದ ಪ್ರಾರ್ಥನೆ ಮಾಡಿ.
ನಿಮಗಿದು ಗೊತ್ತಿತ್ತಾ? ಮುಂದೊಂದು ದಿನ ನೈಸರ್ಗಿಕ ವಿಪತ್ತು ಇಲ್ಲದೇ ಹೋಗುತ್ತದೆ ಮತ್ತು ಯಾರೂ ತಮ್ಮ ಆಸ್ತಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ಬೈಬಲ್ ಹೇಳುತ್ತದೆ. *—ಯೆಶಾಯ 65:21-23. (g14-E 07)
^ ಪ್ಯಾರ. 9 ಭೂಮಿಗಾಗಿ ದೇವರ ಉದ್ದೇಶವೇನು ಎಂದು ತಿಳಿದುಕೊಳ್ಳಲು ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 3ನೇ ಅಧ್ಯಾಯ ಓದಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಇದು www.jw.org/knನಲ್ಲೂ ಲಭ್ಯ.