ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವ ರಾಸಾಯನ ವಿಜ್ಞಾನಿ ತನ್ನ ನಂಬಿಕೆ ಬಗ್ಗೆ ಮಾತಾಡುತ್ತಿದ್ದಾರೆ

ಜೀವ ರಾಸಾಯನ ವಿಜ್ಞಾನಿ ತನ್ನ ನಂಬಿಕೆ ಬಗ್ಗೆ ಮಾತಾಡುತ್ತಿದ್ದಾರೆ

ಸಂದರ್ಶನ | ಪಾಲ ಕ್ಯೋಟ್ಸೀ

ಜೀವ ರಾಸಾಯನ ವಿಜ್ಞಾನಿ ತನ್ನ ನಂಬಿಕೆ ಬಗ್ಗೆ ಮಾತಾಡುತ್ತಿದ್ದಾರೆ

ಪಾಲ ಕ್ಯೋಟ್ಸೀ 20ಕ್ಕೂ ಹೆಚ್ಚು ವರ್ಷ ಇಟಲಿಯ ಫೆರ್ರಾರ ವಿಶ್ವವಿದ್ಯಾನಿಲಯದಲ್ಲಿ ಜೀವ ರಾಸಾಯನ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ವಿಜ್ಞಾನ ಹಾಗೂ ತಮ್ಮ ನಂಬಿಕೆಗಳ ಬಗ್ಗೆ ಎಚ್ಚರ! ಪತ್ರಿಕೆ ಕೇಳಿದಾಗ ಅವರು ಮಾತಿನರಗಿಣಿಯಾದರು.

ನಿಮ್ಮ ಬಗ್ಗೆ ಸ್ವಲ್ಪ ಹೇಳ್ತಿರಾ?

ಅಪ್ಪ ಚಮ್ಮಾರ ಕೆಲಸ ಮಾಡುತ್ತಿದ್ದರು. ಅಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ನನಗೆ ವಿಜ್ಞಾನಿ ಆಗುವ ಆಸೆ. ನಮ್ಮ ಮನೆ ಸುತ್ತಲು ಇದ್ದ ಹೂಗಳು, ಪಕ್ಷಿಗಳು, ಕೀಟಗಳನ್ನು ನೋಡಿ ನಿಬ್ಬೆರಗಾಗುತ್ತಿದ್ದೆ. ಮನುಷ್ಯನಿಗಿಂತ ಬುದ್ಧಿವಂತನೇ ಇವನ್ನೆಲ್ಲ ಸೃಷ್ಟಿಮಾಡಿರಬೇಕು ಅಂತ ಅನಿಸುತ್ತಿತ್ತು.

ಹಾಗಾದರೆ ಸೃಷ್ಟಿಕರ್ತ ಇದ್ದಾನೆ ಅನ್ನೋ ನಂಬಿಕೆ ನಿಮಗೆ ಮುಂಚೆಯಿಂದ್ಲೂ ಇತ್ತು.

ಇಲ್ಲ. ನಾನು ಚಿಕ್ಕ ಹುಡುಗಿಯಾಗಿದ್ದಾಗ ದೇವರ ಬಗ್ಗೆ ಸಂಶಯ ಇತ್ತು. ಅಪ್ಪ ಹೃದಯಾಘಾತದಿಂದ ತೀರಿಕೊಂಡಾಗ ನನಗೊಂದು ಪ್ರಶ್ನೆ ಬಂತು ‘ಪ್ರತಿಯೊಂದನ್ನು ಅಷ್ಟೊಂದು ಅದ್ಭುತವಾಗಿ ಸೃಷ್ಟಿಮಾಡಿದ ದೇವರು ಯಾಕೆ ಕಷ್ಟ, ಸಾವು ಕೊಟ್ಟಿದ್ದಾನೆ?’

ವಿಜ್ಞಾನದ ಅಧ್ಯಯನದಿಂದ ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಕ್ತಾ?

ಆರಂಭದಲ್ಲಿ ಸಿಗಲಿಲ್ಲ. ನಾನು ಜೀವ ರಾಸಾಯನ ವಿಜ್ಞಾನಿಯಾದಾಗ ನಮ್ಮ ಜೀವಕೋಶಗಳ ವ್ಯವಸ್ಥಿತ ಸಾವಿನ ಬಗ್ಗೆ ಅಧ್ಯಯನ ಆರಂಭಿಸಿದೆ. ಜೀವಕೋಶಗಳ ವ್ಯವಸ್ಥಿತ ಸಾವು ಅನ್ನೋದು ಸಹಜ ಪ್ರಕ್ರಿಯೆ. ಆದರೆ ಕೆಲವೊಮ್ಮೆ ಆಕಸ್ಮಿಕವಾಗಿ ಜೀವಕೋಶಗಳು ಸಾಯುತ್ತವೆ. ಇದರಿಂದ ಊತ ಮತ್ತು ಕೊಳೆತ ಶುರುವಾಗುತ್ತೆ. ಜೀವಕೋಶಗಳ ವ್ಯವಸ್ಥಿತ ಸಾವು ನಮ್ಮ ಆರೋಗ್ಯಕ್ಕೆ ಪೂರಕವಾಗಿದ್ದರೂ ವಿಜ್ಞಾನಿಗಳು ಎಷ್ಟೋ ವರ್ಷಗಳ ತನಕ ಇದಕ್ಕೆ ಹೆಚ್ಚು ಗಮನ ಕೊಟ್ಟಿರಲಿಲ್ಲ.

‘ಜೀವಕೋಶಗಳ ವ್ಯವಸ್ಥಿತ ಸಾವು’ ನಡೆಯಲೇಬೇಕಾ?

ನಮ್ಮ ಶರೀರದಲ್ಲಿ ಕೋಟಿಗಟ್ಟಲೆ ಚಿಕ್ಕಚಿಕ್ಕ ಜೀವಕೋಶಗಳಿವೆ. ಈ ಜೀವಕೋಶಗಳು ಸಾಯೋದು ಹಾಗೂ ಅವುಗಳ ಸ್ಥಾನದಲ್ಲಿ ಹೊಸ ಜೀವಕೋಶಗಳು ಹುಟ್ಟೋದು ಸ್ವಾಭಾವಿಕ. ಬೇರೆ ಬೇರೆ ರೀತಿಯ ಜೀವಕೋಶಗಳಿವೆ, ಅವುಗಳ ಆಯಸ್ಸುಗಳಲ್ಲೂ ವ್ಯತ್ಯಾಸವಿರುತ್ತೆ. ಕೆಲವೇ ವಾರಗಳಲ್ಲಿ ಸಾಯೋ ಜೀವಕೋಶಗಳಿವೆ. ಇನ್ನೂ ಕೆಲವೊಂದು ಕೆಲವು ವರ್ಷಗಳ ನಂತರ ಸಾಯುತ್ತೆ. ಈ ಜೀವಕೋಶಗಳ ವ್ಯವಸ್ಥಿತ ಸಾವು ಅನ್ನೋದು ಸಮರ್ಪಕವಾಗಿ ನಡಿಲೇಬೇಕು. ಆಗಲೇ ಜೀವಕೋಶಗಳ ಸಾವು ಮತ್ತು ಹೊಸ ಜೀವಕೋಶಗಳ ಉತ್ಪಾದನೆಯಲ್ಲಿ ಸಮತೋಲನ ಸಾಧ್ಯವಾಗುತ್ತೆ.

ಜೀವಕೋಶಗಳ ಸಾವಿನಲ್ಲಿ ಏರುಪೇರಾದರೆ ಏನಾಗುತ್ತೆ?

ಸಂಶೋಧನೆ ಹೇಳೋ ಪ್ರಕಾರ, ಸಾಯಬೇಕಾದ ಸಮಯದಲ್ಲಿ ಜೀವಕೋಶಗಳು ಸತ್ತಿಲ್ಲಾಂದ್ರೆ ರೂಮಟೊಯ್‌ಡ್‌ ಆರ್ಥರೈಟಿಸ್‌ (ಉಗ್ರ ಸಂಧಿವಾತ), ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ. ಜೀವಿತಾವಧಿಗಿಂತ ಮುಂಚೆನೇ ಜೀವಕೋಶಗಳು ಸತ್ತರೆ ಪಾರ್ಕಿನ್ಸನ್ಸ್‌ ಕಾಯಿಲೆ, ಆಲ್ಜೀಮರ್‌ ಕಾಯಿಲೆ ಬರಬಹುದು. ಇಂಥ ಕಾಯಿಲೆಗಳಿಗೆ ಮದ್ದು ಕಂಡುಹಿಡಿಯುವುದರ ಬಗ್ಗೆನೇ ನಾವು ಸಂಶೋಧನೆ ನಡೆಸೋದು.

ಜೀವಕೋಶಗಳ ಸಾವಿನ ಬಗ್ಗೆ ನಡೆಸಿರೋ ಅಧ್ಯಯನದಿಂದ ವೈಯಕ್ತಿಕವಾಗಿ ನಿಮಗೆ ಹೇಗೆ ಪ್ರಯೋಜನವಾಯಿತು?

ನಿಜಹೇಳಬೇಕಂದ್ರೆ ನನ್ನ ತಲೆ ತುಂಬ ಪ್ರಶ್ನೆಗಳೇ ತುಂಬಿಕೊಳ್ತು. ಮನುಷ್ಯರು ಆರೋಗ್ಯವಾಗಿರಬೇಕು ಅನ್ನೋ ಉದ್ದೇಶದಿಂದಲೇ ಇಂಥ ವಿಸ್ಮಯಕಾರಿ ವ್ಯವಸ್ಥೆಯನ್ನು ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿತ್ತು. ಹಾಗಾಗಿ ನನ್ನ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆ, ಮತ್ಯಾಕೆ ಜನರು ನರಳುತ್ತಾರೆ, ಸಾಯ್ತಾರೆ? ಈ ಪ್ರಶ್ನೆಗೆ ಮಾತ್ರ ನನಗೆ ಉತ್ತರ ಸಿಕ್ಕಿರಲೇ ಇಲ್ಲ.

ಆದರೆ ದೇವರೇ ಜೀವಕೋಶಗಳ ವ್ಯವಸ್ಥಿತ ಸಾವಿನ ಪ್ರಕ್ರಿಯೆಯನ್ನು ಮಾಡಿರುವುದು ಅನ್ನೋದರಲ್ಲಿ ನಿಮಗೆ ಸಂಶಯ ಇಲ್ಲ ಅಲ್ವಾ.

ಹೌದು. ಬಹಳ ಜಟಿಲವಾದ ಈ ಪ್ರಕ್ರಿಯೆ ಸಾಧಾರಣ ವಿಷಯವಲ್ಲ, ನಮ್ಮ ಊಹೆಗೆ ನಿಲುಕದ ಅತ್ಯದ್ಭುತ ವ್ಯವಸ್ಥೆ. ಅದರ ಪರಿ, ಚಿತ್ತಾಕರ್ಷಕ ಸೊಬಗಿನ ಹಿಂದೆ ಒಬ್ಬ ಅಪ್ರತಿಮ ಜ್ಞಾನಿ ಇರೋದು ಗೊತ್ತಾಗುತ್ತೆ. ಅದು ಖಂಡಿತ ದೇವರೇ. ಜೀವಕೋಶಗಳ ಈ ಪ್ರಕ್ರಿಯೆಯನ್ನು, ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡಲು ಅತ್ಯಾಧುನಿಕವಾದ ಸೂಕ್ಷ್ಮದರ್ಶಕಗಳನ್ನು ಬಳಸುತ್ತೀನಿ. ಕೆಲವೊಮ್ಮೆ ಜೀವಕೋಶಗಳು ತಮ್ಮ ಸ್ವ-ನಾಶದಲ್ಲಿ ತೊಡಗಿರುತ್ತವೆ. ಈ ಪ್ರಕ್ರಿಯೆ ಕೆಲವು ಸೆಕೆಂಡುಗಳಲ್ಲೇ ಮುಗಿದಿರುತ್ತೆ. ಈ ಎಲ್ಲ ಪ್ರಕ್ರಿಯೆ ಎಷ್ಟು ಅಚ್ಚುಕಟ್ಟಾಗಿದೆ ಅಂದ್ರೆ ಇದರ ಬಗ್ಗೆ ಯೋಚಿಸಿದರೆ ದೇವರ ಮೇಲೆ ಭಯಭಕ್ತಿ ಉಕ್ಕುತ್ತೆ.

ನಿಮಗೆ ದೇವರ ಬಗ್ಗೆ, ಮನುಷ್ಯರ ನೋವು-ನರಳಾಟದ ಬಗ್ಗೆ ಪ್ರಶ್ನೆಗಳಿದ್ದವಲ್ಲಾ. ಅವಕ್ಕೆಲ್ಲ ಹೇಗೆ ಉತ್ತರ ಸಿಕ್ಕಿತು?

1991ರಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಬಂದಿದ್ದರು. ನಾವ್ಯಾಕೆ ಸಾಯ್ತೇವೆ ಅಂತ ನಾನು ಅವರ ಹತ್ರ ಕೇಳಿದೆ. ಇದಕ್ಕೆ ಬೈಬಲ್‌ ಹೇಳುವ ಉತ್ತರವನ್ನು ತೋರಿಸಿದರು: “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿ”ತು. (ರೋಮನ್ನರಿಗೆ 5:12) ಆಗ ನನಗೆ ಗೊತಾಯ್ತು ಮೊದಲ ಮನುಷ್ಯ ದೇವರ ಮಾತು ಕೇಳಿದಿದ್ದರೆ ಅವನು ಯಾವತ್ತೂ ಸಾಯ್ತಾನೇ ಇರಲಿಲ್ಲ. ಬೈಬಲ್‌ ಹೇಳುವುದಕ್ಕೂ ನನ್ನ ಸಂಶೋಧನೆಗೂ ತಾಳಮೇಳಗಳಿರುವುದನ್ನು ಗಮನಿಸಿದೆ. ಮನುಷ್ಯರು ಸಾಯಬೇಕು ಅನ್ನೋ ಉದ್ದೇಶದಿಂದ ದೇವರು ಅವರನ್ನು ಸೃಷ್ಟಿಸಲಿಲ್ಲ ಅನ್ನೋದು ನನಗೆ ಸ್ಪಷ್ಟವಾಯಿತು. ಯಾಕಂದ್ರೆ ಹೆಚ್ಚುಕಡಿಮೆ ನಮ್ಮ ದೇಹದಲ್ಲಿರೋ ಜೀವಕೋಶಗಳೆಲ್ಲ ಸತ್ತು ಕಾಲಕಾಲಕ್ಕೆ ಹೊಸ ಜೀವಕೋಶಗಳು ಉತ್ಪಾದನೆ ಆಗುತ್ತೆ. ಅದರರ್ಥ ನಾವು ಸಾಯದೆ ಶಾಶ್ವತವಾಗಿ ಬದುಕೋದು ಸಾಧ್ಯ.

ಬೈಬಲ್‌ ದೇವರ ವಾಕ್ಯ ಅಂತ ನಿಮಗೆ ವಿಶ್ವಾಸ ಮೂಡಿದ್ದು ಹೇಗೆ?

ಬೈಬಲಿನಲ್ಲಿ ಕೀರ್ತನೆ 139:16 ಹೇಳುತ್ತೆ, “ನಾನು ಇನ್ನೂ ಕೇವಲ ಪಿಂಡವಾಗಿರುವಾಗ [ದೇವರ] ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.” ನಾನು ನಮ್ಮ ಅನುವಂಶೀಯ ಮಾಹಿತಿಗಳೆಲ್ಲ ನಮ್ಮ ಜೀವಕೋಶಗಳಲ್ಲಿ ಬರೆದಿರುವುದರ ಬಗ್ಗೆ ನಾನು ಅಧ್ಯಯನ ಮಾಡಿದ್ದೀನಿ. ಒಬ್ಬ ಜೀವ ರಾಸಾಯನ ವಿಜ್ಞಾನಿಯಾಗಿ ನಾನು ಅದನ್ನು ತಿಳಿದುಕೊಂಡಿದ್ದೀನಿ. ಆದರೆ ಕೀರ್ತನೆಗಳನ್ನು ಬರೆದಿರೋ ವ್ಯಕ್ತಿಗೆ ಇದೆಲ್ಲ ಹೇಗೆ ಗೊತ್ತಾಯ್ತು? ಬೈಬಲ್‌ ಕಲಿಯುತ್ತಾ ಹೋದಂತೆ ನನ್ನ ಎಲ್ಲ ಸಂಶಯಗಳು ಬಗೆಹರಿದವು. ದೇವರ ಸಹಾಯದಿಂದಲೇ ಮನುಷ್ಯರು ಬೈಬಲನ್ನು ಬರೆದರು ಅನ್ನೋ ವಿಶ್ವಾಸ ಮೂಡಿತು.

ಬೈಬಲ್‌ನಲ್ಲಿ ಇರುವುದನ್ನೆಲ್ಲ ಅದ್ಹೇಗೆ ಅರ್ಥಮಾಡಿಕೊಂಡ್ರಿ?

ಯೆಹೋವನ ಸಾಕ್ಷಿಯೊಬ್ಬರು ಸಹಾಯ ಮಾಡಿದರು. ಮನುಷ್ಯರು ಕಷ್ಟಪಡುವಾಗ ದೇವರು ಯಾಕೆ ಸುಮ್ಮನಿದ್ದಾನೆ ಅಂತ ಬೈಬಲ್‌ ಕಲಿಯುತ್ತಾ ಹೋದಂತೆ ಗೊತ್ತಾಯಿತು. ಅದು ಮಾತ್ರವಲ್ಲ “ಮರಣವನ್ನು ಶಾಶ್ವತವಾಗಿ ನಿರ್ನಾಮ” ಮಾಡ್ತೀನಿ ಅಂತ ದೇವರು ಕೊಟ್ಟಿರೋ ಮಾತಿನ ಬಗ್ಗೆನೂ ತಿಳಿದುಕೊಂಡೆ. (ಯೆಶಾಯ 25:8) ನಾವು ಸಾಯದೆ ಸದಾ ಬದುಕಲು ನಮ್ಮ ದೇಹ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ನಮ್ಮ ನಿರ್ಮಾಣಿಕನಿಗೆ ಕಷ್ಟದ ಕೆಲಸವಲ್ಲ.

ಬೈಬಲಿನಲ್ಲಿರೋ ವಿಷಯಗಳನ್ನು ತಿಳಿದುಕೊಂಡು ಬೇರೆಯವರಿಗೆ ಹೇಗೆ ಸಹಾಯಮಾಡ್ತಾ ಇದ್ದೀರಾ?

ನಾನು 1995ರಲ್ಲಿ ಯೆಹೋವನ ಸಾಕ್ಷಿಯಾದೆ. ಅವತ್ತಿನಿಂದ ನನಗೆ ಸಿಕ್ಕಿರೋ ಪ್ರತಿಯೊಂದು ಸಂದರ್ಭದಲ್ಲೂ ಬೈಬಲ್‌ ಬಗ್ಗೆ ಜನರಿಗೆ ಉಚಿತವಾಗಿ ತಿಳಿಸ್ತಾ ಬಂದಿದ್ದೇನೆ. ನನ್ನ ಜೊತೆ ಕೆಲಸಮಾಡುತ್ತಿದ್ದವರೊಬ್ಬರ ತಮ್ಮ ಆತ್ಮಹತ್ಯೆ ಮಾಡಿಕೊಂಡಾಗ ತುಂಬ ನೊಂದುಹೋಗಿದ್ದರು. ಆತ್ಮಹತ್ಯೆ ಮಾಡಿಕೊಂಡವರಿಗೆ ಕ್ಷಮೆನೇ ಸಿಗಲ್ಲ ಅಂತ ಅವಳ ಚರ್ಚ್‌ನಲ್ಲಿ ಹೇಳುತ್ತಿದ್ದರು. ಆದರೆ ಬೈಬಲ್‌ ಅದನ್ನಲ್ಲ ಹೇಳೋದು, ಸತ್ತ ನಮ್ಮ ಆತ್ಮೀಯರು ಮತ್ತೆ ಬದುಕಿ ಬರುತ್ತಾರೆ ಅನ್ನೋ ಆಶ್ವಾಸನೆ ಕೊಡುತ್ತೆ ಅಂತ ನಾನವಳಿಗೆ ಹೇಳಿದೆ. (ಯೋಹಾನ 5:28, 29) ನಮ್ಮ ನಿರ್ಮಾಣಿಕನಿಗೆ ನಮ್ಮ ಮೇಲೆ ಪ್ರೀತಿ, ಕಕ್ಕುಲಾತಿ ಇದೆ ಅಂತ ತಿಳಿದಾಗ ಅವಳಿಗೆಷ್ಟು ಸಮಾಧಾನ ಆಯ್ತು ಗೊತ್ತಾ? ಹೀಗೆ ಜನರಿಗೆ ಬೈಬಲ್‌ನಲ್ಲಿರೋ ಸತ್ಯ ವಿಷಯಗಳನ್ನು ತಿಳಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ಇದು ವಿಜ್ಞಾನದಿಂದ ಸಿಗಲ್ಲ! ◼ (g13-E 01)

[ಪುಟ 6ರಲ್ಲಿರುವ ಚಿತ್ರ]

[ಪುಟ 6ರಲ್ಲಿರುವ ಚಿತ್ರ]

[ಪುಟ 7ರಲ್ಲಿರುವ ಚಿತ್ರ]

ಹೆಚ್ಚುಕಡಿಮೆ ನಮ್ಮ ದೇಹದಲ್ಲಿರೋ ಜೀವಕೋಶಗಳೆಲ್ಲ ಸತ್ತು ಕಾಲಕಾಲಕ್ಕೆ ಹೊಸ ಜೀವಕೋಶಗಳು ಉತ್ಪಾದನೆ ಆಗುತ್ತೆ. ಅದರರ್ಥ ನಾವು ಸಾಯದೆ ಶಾಶ್ವತವಾಗಿ ಬದುಕೋದು ಸಾಧ್ಯ