ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೇಮಬಂಧ ಮುರಿಯಬೇಕೇ?

ಪ್ರೇಮಬಂಧ ಮುರಿಯಬೇಕೇ?

ಯುವಜನರು ಪ್ರಶ್ನಿಸುವುದು

ಪ್ರೇಮಬಂಧ ಮುರಿಯಬೇಕೇ?

“ಮೂರು ತಿಂಗಳಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು. ನಮಗಿಂತ ಉತ್ತಮ ಜೋಡಿ ಬೇರೊಂದಿಲ್ಲ ಎಂದನಿಸಿತ್ತು ನಮಗೆ. ಬಾಳಪಯಣದಲ್ಲಿ ನಾವಿಬ್ಬರೂ ಒಂದೇ ಉಸಿರಾಗಿ ಇರುವೆವೆಂದು ಆವಾಗಲೇ ನಿಶ್ಚಯಿಸಿಕೊಂಡೆವು.”—ಜೆಸ್ಸಿಕ. *

“ನಾನು ಅವನಲ್ಲಿ ತೀರಾ ಮೋಹಿತಳಾಗಿದ್ದೆ. ಆದರೆ ಅವನು ನನ್ನನ್ನು ಗಮನಿಸಿದ್ದು ಕೆಲವು ವರ್ಷಗಳ ನಂತರವೇ! ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಹಾಗೂ ವಯಸ್ಸಲ್ಲಿ ದೊಡ್ಡವನಾದ ಬಾಯ್‌ಫ್ರೆಂಡ್‌ ನನಗೆ ಇಷ್ಟವಾಗಿದ್ದ.”—ಕ್ಯಾರಲ್‌.

ಸಮಯಾನಂತರ ಜೆಸ್ಸಿಕ ಮತ್ತು ಕ್ಯಾರಲ್‌ ಇಬ್ಬರೂ ತಮ್ಮ ಬಾಯ್‌ಫ್ರೆಂಡ್‌ನೊಂದಿಗಿನ ಸಂಬಂಧವನ್ನು ಮುರಿದರು. ಏಕೆ? ಅಂಥ ಮಹಾನುಭಾವರನ್ನು ಬಿಟ್ಟುಬಿಡಲು ಅವರೇನು ಮೂರ್ಖರೋ?

ಸುಮಾರು ಒಂದು ವರ್ಷದಿಂದಲೇ ನೀವು ಡೇಟಿಂಗ್‌ ಮಾಡುತ್ತಿರಬಹುದು. ‘ಅವನೇ ನನಗೆ ಸರಿಯಾದ ಜೋಡಿ’ ಎಂದನಿಸಿತ್ತು ನಿಮಗೆ ಮೊದಲಲ್ಲಿ. * ನಿಮ್ಮ ಸಂಬಂಧದ ಆರಂಭದಲ್ಲಿ ನಿಮಗಾದ ಆ ಪ್ರಣಯ ಭಾವನೆಗಳನ್ನು ಕೆಲವೊಮ್ಮೆ ನೀವು ನೆನಪಿಸಿಕೊಳ್ಳಲೂಬಹುದು. ಆದರೆ ಈಗ ನಿಮಗೆ ಆ ಹುಡುಗನ ಬಗ್ಗೆ ಏನೋ ಒಂದು ತರ ಸಂಶಯ. ಅಂಥ ಯೋಚನೆಗಳನ್ನು ನೀವು ಅಲಕ್ಷಿಸಬೇಕೋ? ಒಂದುವೇಳೆ ಆ ಸಂಬಂಧವನ್ನು ಮುರಿಯಬೇಕಾದರೆ, ಅದು ನಿಮಗೆ ತಿಳಿಯುವುದು ಹೇಗೆ?

ಮೊದಲು, ನೀವೀಗ ಒಂದು ಕಹಿ ಸತ್ಯವನ್ನು ಒಪ್ಪಿಕೊಳ್ಳಬೇಕು. ಅದೇನಂದರೆ, ಪ್ರಣಯ ಸಂಬಂಧದಲ್ಲಿ ಏಳುವ ಯಾವುದೇ ಅಪಾಯ ಸೂಚನೆಗಳನ್ನು ಅಲಕ್ಷಿಸುವುದು ನಿಮ್ಮ ಕಾರಿನ ಡ್ಯಾಷ್‌ಬೋರ್ಡಿನ ಎಚ್ಚರಿಕೆಯ ಸಿಗ್ನಲ್‌ಗಳನ್ನು ಅಲಕ್ಷಿಸಿದಂತೆಯೇ ಇರುತ್ತದೆ. ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ ಅದು ಇನ್ನೂ ಹೆಚ್ಚಾಗಬಲ್ಲದು. ನೀವು ಪರಿಗಣಿಸಲೇಬೇಕಾದ ಕೆಲವೊಂದು ಅಪಾಯ ಸೂಚನೆಗಳು ಯಾವುವು?

ಅವಸರವಸರದ ಪ್ರಣಯ. ಪ್ರಣಯವು ತೀರ ವೇಗವಾಗಿ ಬೆಳೆದಾಗ ಸಮಸ್ಯೆಗಳು ಶುರುವಾಗುವುದು ಸಹಜ. ಕ್ಯಾರಲ್‌ ನೆನಪಿಸುವುದು: “ನಾವು ಇ-ಮೇಲ್‌, ಆನ್‌ಲೈನ್‌ ಚಾಟಿಂಗ್‌ ಮಾಡುತ್ತಿದ್ದೆವು, ಟೆಲಿಫೋನ್‌ ಮೂಲಕ ಮಾತಾಡುತ್ತಿದ್ದೆವು. ಈ ರೀತಿಯ ಸಂಪರ್ಕ ಮಾಧ್ಯಮಗಳು ಮುಖಾಮುಖಿಯಾಗಿ ಮಾತಾಡುವುದಕ್ಕಿಂತ ಹೆಚ್ಚು ಪ್ರಭಾವಶಾಲಿ. ಏಕೆಂದರೆ ಸಲಿಗೆಯಿಂದ, ಹೆಚ್ಚು ಆಪ್ತತೆಯಿಂದ ಮಾತಾಡುವ ಅವಕಾಶ ಅಲ್ಲಿದೆ! ಮತ್ತು ಪ್ರಣಯ ಅವಸರದಲ್ಲಿ ಬೆಳೆಯುತ್ತದೆ.” ಒಬ್ಬರನ್ನೊಬ್ಬರು ತಿಳುಕೊಳ್ಳಲು ಸಿಗುವ ಈ ಅವಕಾಶಗಳಿಂದ ನಿಮ್ಮನ್ನು ವಂಚಿಸಿಕೊಳ್ಳಬೇಡಿ. ಗಂಡುಹೆಣ್ಣಿನ ಸಂಬಂಧವು, ಬೇಗಬೇಗನೆ ಮೊಳೆತು ಅನಂತರ ಬಾಡಿಹೋಗುವ ಕಳೆಯಂತಿರಬಾರದು. ಬದಲಾಗಿ ಅದು ಮೆಲ್ಲಮೆಲ್ಲನೆ ಬೆಳೆಯುವ ಅಮೂಲ್ಯ ಗಿಡದಂತೆ ಇರಬೇಕು.

ಟೀಕಿಸುವ, ಹೀನೈಸುವ ಮಾತು. ಆ್ಯನ ಎಂಬ ಹುಡುಗಿ ಹೇಳುವುದು: “ನನ್ನ ಬಾಯ್‌ಫ್ರೆಂಡ್‌ ಯಾವಾಗಲೂ ನನ್ನನ್ನು ತುಚ್ಛವಾಗಿ ನೋಡುತ್ತಾನೆ. ಆದರೆ ಅವನನ್ನು ಬಿಟ್ಟಿರಲು ನನ್ನಿಂದ ಆಗುತ್ತಿರಲಿಲ್ಲ. ಸಹಿಸಿಕೊಳ್ಳುತ್ತೇನೆಂದು ಕನಸಿನಲ್ಲೂ ನೆನಸದೆ ಇದ್ದ ಕೆಟ್ಟ ಸಂಗತಿಗಳನ್ನು ಅವನಿಗೋಸ್ಕರ ಸಹಿಸಿಕೊಂಡೆ.” ಬೈಬಲು ‘ದೂಷಣಾ ಮಾತುಗಳನ್ನು’ ಖಂಡಿಸುತ್ತದೆ. (ಎಫೆಸ 4:31) ಹೀನೈಸುವ ಮಾತುಗಳು ಅವೆಷ್ಟೇ ಮೃದುವಾಗಿ ಅಥವಾ ಶಾಂತವಾಗಿ ನುಡಿದಿರಲಿ ಪ್ರೇಮಬಂಧದಲ್ಲಿ ಅದಕ್ಕೆ ಯಾವ ಸ್ಥಳವೂ ಇಲ್ಲ.—ಜ್ಞಾನೋಕ್ತಿ 12:18.

ಭುಗಿಲೇಳುವ ಕೋಪ. “ಶಾಂತಾತ್ಮನು ವಿವೇಕಿ” ಎಂದು ಹೇಳುತ್ತದೆ ಜ್ಞಾನೋಕ್ತಿ 17:27. ಸಿಟ್ಟಿನ ವಿಷಯದಲ್ಲಿ ತನ್ನ ಬಾಯ್‌ಫ್ರೆಂಡ್‌ಗೆ ಸಮಸ್ಯೆ ಇದೆ ಎಂದು ಎರಿನ್‌ಗೆ ತಿಳಿಯಿತು. “ವಾಗ್ವಾದಗಳಾದಾಗ ಅವನು ನನ್ನನ್ನು ಕೋಪದಿಂದ ತಳ್ಳಿಬಿಡುತ್ತಿದ್ದ. ಕೆಲವೊಮ್ಮೆ ನನಗೆ ತರಚು ಗಾಯಗಳಾಗುತ್ತಿದ್ದವು” ಎಂದವಳು ಹೇಳಿದಳು. ಬೈಬಲ್‌ ಕ್ರೈಸ್ತರಿಗೆ ಅನ್ನುವುದು: “ಎಲ್ಲಾ ದ್ವೇಷ ಕೋಪ ಕ್ರೋಧ . . . ಇವುಗಳನ್ನೂ . . . ನಿಮ್ಮಿಂದ ದೂರಮಾಡಿರಿ.” (ಎಫೆಸ 4:31) ಸ್ವಲ್ಪವೂ ಸ್ವನಿಯಂತ್ರಣವಿಲ್ಲದ ವ್ಯಕ್ತಿ ಡೇಟಿಂಗ್‌ ಮಾಡಲು ಕೊಂಚವೂ ಅರ್ಹನಲ್ಲ.—2 ತಿಮೊಥೆಯ 3:1, 3, 5.

ಸಂಬಂಧವನ್ನು ಗುಟ್ಟಾಗಿಡುವುದು. ಏಂಜೆಲ ನೆನಪಿಸುವುದು: “ನಮ್ಮ ಡೇಟಿಂಗ್‌ ಬಗ್ಗೆ ಬೇರೆಯವರಿಗೆ ತಿಳಿಯಬಾರದೆಂದು ನನ್ನ ಬಾಯ್‌ಫ್ರೆಂಡ್‌ ಬಯಸಿದ್ದ. ನನ್ನ ತಂದೆಗೆ ಅದು ತಿಳಿದುಬಂದಾಗ ಸಹ ಅವನು ರೇಗಾಡಿದ.” ತಮ್ಮ ಸಂಬಂಧವನ್ನು ತುಸುಮಟ್ಟಿಗೆ ಗುಟ್ಟಾಗಿಡಲು ಒಂದು ಜೋಡಿಗೆ ಸಕಾರಣವಿದ್ದೀತು ನಿಜ. ಆದರೆ ರಹಸ್ಯವಾಗಿಡುವುದು—ಅಂದರೆ ಅದನ್ನು ತಿಳಿಯಲು ಹಕ್ಕಿರುವ ಆಪ್ತರಿಂದಲೂ ಅದನ್ನು ಬೇಕುಬೇಕೆಂದು ಬಚ್ಚಿಡುವುದು ನಿಮಗೇ ಹಾನಿಕರ.

ಮದುವೆಯಾಗುವ ಇರಾದೆಯಿಲ್ಲ. ಕ್ರೈಸ್ತರ ಮಧ್ಯೆ ‘ಡೇಟಿಂಗ್‌’ಗೆ ಒಂದು ಗೌರವಾರ್ಹ ಉದ್ದೇಶವಿದೆ. ಯುವಕ ಮತ್ತು ಯುವತಿಯು ವಿವಾಹವಾಗ ಬಯಸುತ್ತಾರೋ ಇಲ್ಲವೊ ಎಂದು ನಿರ್ಣಯಿಸುವಂತೆ ಅದು ಸಹಾಯಮಾಡುತ್ತದೆ. ಡೇಟಿಂಗ್‌ ಮಾಡಿದಾಕ್ಷಣವೇ ವಿವಾಹದ ಯೋಜನೆಗಳನ್ನು ಮಾಡಬೇಕೆಂದು ಇದರ ಅರ್ಥವಲ್ಲ ನಿಶ್ಚಯ. ಅನೇಕ ಜನರು ತಾವು ಡೇಟ್‌ ಮಾಡುವ ಮೊದಲ ವ್ಯಕ್ತಿಯನ್ನೇ ಮದುವೆಯಾಗಿ ಬಿಡುವುದಿಲ್ಲ ನಿಜ. ಅದೇ ಸಮಯದಲ್ಲಿ, ವಿವಾಹದ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿರದ ವ್ಯಕ್ತಿಗಳು ಡೇಟ್‌ ಮಾಡಲೇಬಾರದು.

ಸಂಬಂಧವು ಅಸ್ಥಿರ, ಏಳುಬೀಳುಗಳಿವೆ. “ಮಿತ್ರನ ಪ್ರೀತಿಯು ನಿರಂತರ” ಎಂದು ಜ್ಞಾನೋಕ್ತಿ 17:17 ಹೇಳುತ್ತದೆ. ನಿಮ್ಮಿಬ್ಬರ ಅಭಿಪ್ರಾಯಗಳು ಯಾವಾಗಲೂ ಒಂದೇ ಆಗಿರುತ್ತವೆ ಎಂದಲ್ಲ. ಆದರೆ ಒಂದು ಸಂಬಂಧವು ಯಾವಾಗಲೂ ಜಗಳ-ರಾಜಿಗಳ ಮಧ್ಯೆ ಅತ್ತಿತ್ತ ಒಲೆದಾಡುತ್ತಲೆ ಇದ್ದಲ್ಲಿ, ಸರಿಪಡಿಸಬೇಕಾದ ಗಂಭೀರ ಸಮಸ್ಯೆ ಅಲ್ಲಿದೆ ಎಂಬುದಕ್ಕೆ ಸೂಚನೆ. ಆ್ಯನ ಇದನ್ನು ಮನಗಾಣುತ್ತಾ ಅಂದದ್ದು: “ನನ್ನ ಬಾಯ್‌ಫ್ರೆಂಡ್‌ನೊಂದಿಗೆ ಸಂಬಂಧ ಮುರಿದಾಗಲೆಲ್ಲಾ ಹೃದಯವೇದನೆಯಿಂದ ಬಳಲುತ್ತಿದ್ದೆ. ಮತ್ತೆ ಮತ್ತೆ ಆ ಸಂಬಂಧವನ್ನು ಬೆಸೆಯಲು ಪ್ರಯತ್ನಿಸುತ್ತಿದ್ದೆ. ಆದರೆ ಹಾಗೆ ಮಾಡಿರದಿದ್ರೇ ಒಳ್ಳೆದಿತ್ತು.”

ಸೆಕ್ಸ್‌ಗಾಗಿ ಒತ್ತಾಯ. “ನಿನಗೆ ನನ್ನ ಮೇಲೆ ಪ್ರೀತಿ ಇದ್ದರೆ ನೀನು ಅದಕ್ಕೆ ಒಪ್ಪುವಿ.” “ನಮ್ಮ ಸಂಬಂಧ ಬಲವಾಗಬೇಕಾದರೆ ಸೆಕ್ಸ್‌ ಇರಲೇಬೇಕು.” “ಸಂಭೋಗದ ಹೊರತು ಸೆಕ್ಸ್‌ಗೆ ಅರ್ಥವಿಲ್ಲ.” ಹುಡುಗರು ಸೆಕ್ಸ್‌ಗಾಗಿ ಒತ್ತಾಯಿಸುವಾಗ ಬಳಸುವ ಪುಸಲಾಯಿಸುವ ಮಾತುಗಳಿವು. ಯಾಕೋಬ 3:17 ಹೇಳುವುದು: “ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು.” ನೈತಿಕವಾಗಿ ಶುದ್ಧನೂ ಮತ್ತು ನಿಮ್ಮ ಶುದ್ಧ ಲೈಂಗಿಕ ಮೇರೆಗಳನ್ನು ಗೌರವಿಸುವವನೂ ಆಗಿರುವ ಬಾಯ್‌ಫ್ರೆಂಡ್‌ ನಿಮಗಿರಬೇಕು. ನೈತಿಕತೆಯಲ್ಲಿ ಕಿಂಚಿತ್ತೂ ಕಡಿಮೆಯಾದ ವ್ಯಕ್ತಿಗಳನ್ನು ಆರಿಸಬೇಡಿ!

ಇತರರು ಎಚ್ಚರಿಕೆ ನೀಡುತ್ತಾರೆ. ಬೈಬಲ್‌ ಅನ್ನುವುದು: “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.” (ಜ್ಞಾನೋಕ್ತಿ 15:22) “ಈ ಪ್ರೇಮಬಂಧ ಒಳ್ಳೆಯದಲ್ಲ ಎಂಬ ಮನಸ್ಸಿನ ಎಚ್ಚರಿಕೆಯ ಕರೆಗಂಟೆಯನ್ನು ನೀವು ಹೇಗೆ ಅಲಕ್ಷಿಸ ಸಾಧ್ಯವಿಲ್ಲವೊ ಹಾಗೆ ನಿಮ್ಮ ಕುಟುಂಬದ ಹಾಗೂ ಆಪ್ತಮಿತ್ರರ ಎಚ್ಚರಿಕೆಯ ಮಾತುಗಳನ್ನೂ ಅಲಕ್ಷಿಸಸಾಧ್ಯವಿಲ್ಲ. ಇತರರು ಹೇಳುವುದನ್ನು ನೀವು ಎಷ್ಟು ಹೆಚ್ಚಾಗಿ ಅಲಕ್ಷಿಸುತ್ತೀರೋ ಅಷ್ಟೇ ಹೆಚ್ಚು ತೊಂದರೆಯನ್ನು ನಿಮ್ಮ ಮೇಲೆ ತಂದುಕೊಳ್ಳುವಿರಿ” ಎನ್ನುತ್ತಾಳೆ ಜೆಸ್ಸಿಕ.

ನಿಮ್ಮ ಪ್ರಣಯಬಂಧದಲ್ಲಿ ತೊಂದರೆಯಿದೆ ಎಂದು ಸೂಚಿಸುವ ಅಪಾಯದ ಚಿಹ್ನೆಗಳಲ್ಲಿ ಮೇಲಿನವು ಕೆಲವಷ್ಟೇ. * ನೀವು ಡೇಟಿಂಗ್‌ ಮಾಡುತ್ತಿರುವುದಾದರೆ, ಮೇಲೆ ಚರ್ಚಿಸಿದ ಕೆಲವು ಅಪಾಯದ ಲಕ್ಷಣಗಳು ನಿಮ್ಮ ಬಾಯ್‌ಫ್ರೆಂಡ್‌ನಲ್ಲಿ ಇರುವುದನ್ನು ನೀವು ಗಮನಿಸಿದ್ದೀರೋ? ಹಾಗಿದ್ದರೆ ನಿಮ್ಮ ವೈಯಕ್ತಿಕ ವ್ಯಾಕುಲಗಳನ್ನು ಕೆಳಗೆ ಬರೆಯಿರಿ.

.....

ಸಂಬಂಧವನ್ನು ಹೇಗೆ ಮುರಿಯಲಿ?

ಸಂಬಂಧವನ್ನು ಮುರಿಯುವುದೇ ಲೇಸೆಂದು ನೀವು ನಿರ್ಧರಿಸಿದಿರಿ ಎಂದೆಣಿಸಿ. ಹಾಗಾದರೆ ಅದನ್ನು ಹೇಗೆ ಮಾಡುವಿರಿ? ಹಲವಾರು ವಿಧಾನಗಳಿವೆಯಾದರೂ ಈ ಕೆಳಗಿನವುಗಳನ್ನು ಮನಸ್ಸಿನಲ್ಲಿಡಿ.

ಧೈರ್ಯದಿಂದ ಮಾತಾಡಿ. “ನಾನವನನ್ನು ಎಷ್ಟು ನೆಚ್ಚಿಕೊಂಡಿದ್ದೆ ಎಂದರೆ ಅವನನ್ನು ಬಿಟ್ಟಿರಲು ಅಸಾಧ್ಯವಾಗಿತ್ತು” ಎಂದಳು ಟ್ರೀನ ಎಂಬ ಹುಡುಗಿ. ಒಂದು ಸಂಬಂಧವನ್ನು ಮುರಿಯಬೇಕಾದಾಗ ಅದನ್ನು ತಿಳಿಸಲು ಧೈರ್ಯಬೇಕು. ಆದರೆ ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಿ ನಿಮ್ಮನ್ನು ಸಮರ್ಥಿಸುವುದು ಹಿತಕರ. (ಜ್ಞಾನೋಕ್ತಿ 22:3) ಡೇಟಿಂಗ್‌ ಸಂಬಂಧದಲ್ಲಿ ಮತ್ತು ಮುಂದೆ ಮದುವೆಯಲ್ಲಿ ನೀವು ಏನನ್ನು ಸಹಿಸಿಕೊಳ್ಳುವಿರಿ ಮತ್ತು ಏನನ್ನು ಸಹಿಸುವುದಿಲ್ಲ ಎಂಬ ವಿಷಯದಲ್ಲಿ ದೃಢವಾದ ಮೇರೆಗಳನ್ನಿಡುವಂತೆ ಅದು ನಿಮಗೆ ಸಾಧ್ಯಗೊಳಿಸುವುದು.

ಪರಿಗಣನೆ ತೋರಿಸಿ. ಸಂಬಂಧವನ್ನು ಹುಡುಗನೇ ಮುರಿಯುವವನಾಗಿದ್ದಲ್ಲಿ ಅದನ್ನು ನಿಮಗೆ ಹೇಗೆ ತಿಳಿಸಬೇಕೆಂದು ನೀವು ಬಯಸುತ್ತೀರಿ? (ಮತ್ತಾಯ 7:12) “ನಮ್ಮ ಸಂಬಂಧ ಇಲ್ಲಿಗೆ ಮುಗಿಯಿತು” ಎಂಬ ಚುಟುಕು ಇ-ಮೇಲ್‌, ಟೆಕ್ಸ್‌ಟ್‌ ಮೆಸಿಜ್‌ ಅಥವಾ ವಾಯ್ಸ್‌ ಮೇಲ್‌ ಕಳಿಸಿ ಸಂಬಂಧವನ್ನು ಮುರಿಯುವುದಕ್ಕಿಂತ ಹೆಚ್ಚಿನದಕ್ಕೆ ನಿಮ್ಮ ಬಾಯ್‌ಫ್ರೆಂಡ್‌ ಅರ್ಹನಾಗಿರುವನು ನಿಶ್ಚಯ!

ಸೂಕ್ತ ಜಾಗ ಆರಿಸಿಕೊಳ್ಳಿ. ಮುಖಾಮುಖಿ ಮಾತಾಡಬೇಕೋ? ಅಥವಾ ಫೋನ್‌ ಮೂಲಕವೋ? ಒಂದು ಪತ್ರ ಬರೆಯಬೇಕೋ? ಅಥವಾ ನೇರವಾಗಿ ಚರ್ಚಿಸಬೇಕೋ? ಅದು ಸನ್ನಿವೇಶದ ಮೇಲೆ ಹೆಚ್ಚು ಹೊಂದಿಕೊಂಡಿದೆ. ನಿಮ್ಮ ಸುರಕ್ಷೆಯು ಅಪಾಯಕ್ಕೆ ಬೀಳಬಹುದಾದ ಅಥವಾ ಲೈಂಗಿಕ ಭಾವನೆಗಳನ್ನು ಕೆರಳಿಸಬಹುದಾದ ಯಾವುದೇ ಏಕಾಂತ ಸ್ಥಳದಲ್ಲಿ ಭೇಟಿಯಾಗುವುದು ಉಚಿತವಲ್ಲ.—1 ಥೆಸಲೊನೀಕ 4:3.

ಸತ್ಯವನ್ನಾಡಿ. ನಿಮ್ಮ ಸಂಬಂಧವು ಏಕೆ ಮುಂದುವರಿಯಲಾರದು ಎಂದು ಮುಚ್ಚುಮರೆಯಿಲ್ಲದೆ ತಿಳಿಸಿ. ನಿಮ್ಮ ಬಾಯ್‌ಫ್ರೆಂಡ್‌ ನಿಮ್ಮನ್ನು ಸರಿಯಾಗಿ ಉಪಚರಿಸಲಿಲ್ಲವೆಂದು ನಿಮಗನಿಸಿದರೆ ಅದನ್ನು ನೇರವಾಗಿ ತಿಳಿಸಿ. ನಿಮ್ಮ ಸ್ವಂತ ಅನಿಸಿಕೆಯನ್ನೇ ತಿಳಿಸಿ. ಉದಾಹರಣೆಗೆ, “ನೀನು ಯಾವಾಗಲೂ ನನ್ನನ್ನು ಹೀನೈಸುತ್ತಿ” ಎಂದು ಹೇಳುವ ಬದಲಿಗೆ “ನಿನ್ನ ಮಾತುಗಳು . . . ನನ್ನನ್ನು ಹೀನಭಾವನೆಗೆ ಇಳಿಸಿ ನೋಯಿಸುತ್ತವೆ” ಎಂದು ಹೇಳಿ.

ಕಿವಿಗೊಡಲು ಸಹ ಸಿದ್ಧರಾಗಿರಿ. ಯಾವುದಾದರೂ ಸನ್ನಿವೇಶದ ಕುರಿತು ನೀವು ತಪ್ಪರ್ಥ ಮಾಡಿಕೊಂಡಿದ್ದೀರೋ? ಪುಸಲಾಯಿಸುವ ಮಾತುಗಳಿಗೆ ಮರುಳಾಗದಿರಿ. ಆದರೆ ಅದೇ ಸಮಯದಲ್ಲಿ ವಿವೇಚನೆಯಿಂದ ಎಲ್ಲಾ ನಿಜತ್ವಗಳನ್ನು ಪರಿಗಣಿಸಿ. ‘ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಿ’ ಎಂದು ಬೈಬಲ್‌ ಕ್ರೈಸ್ತರಿಗೆ ವಿವೇಕಯುತ ಬುದ್ಧಿವಾದ ನೀಡುತ್ತದೆ.—ಯಾಕೋಬ 1:19. (g 1/09)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿಗಳು]

^ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಈ ಲೇಖನವು ಹುಡುಗಿಯರನ್ನು ಉದ್ದೇಶಿಸಿ ಮಾತಾಡಿದೆಯಾದರೂ ಇದರಲ್ಲಿರುವ ಮೂಲಸೂತ್ರಗಳು ಹುಡುಗ-ಹುಡುಗಿಯರಿಬ್ಬರಿಗೂ ಅನ್ವಯಿಸುತ್ತವೆ.

^ ಹೆಚ್ಚಿನ ಮಾಹಿತಿಗಾಗಿ, ಜುಲೈ-ಸೆಪ್ಟೆಂಬರ್‌ 2007ರ ಎಚ್ಚರ! ಪುಟ 16-18 ನೋಡಿ.

ಯೋಚಿಸಿ

◼ ನೀವು ‘ಡೇಟ್‌’ ಮಾಡುವ ವ್ಯಕ್ತಿಯಲ್ಲಿ ಅವಶ್ಯಕವಾಗಿ ಇರಬೇಕೆಂದು ಬಯಸುವ ಗುಣಗಳನ್ನು ಪಟ್ಟಿಮಾಡಿ. .....

◼ ಅವನ ಯಾವ ಗುಣಗಳು ನಿಮಗೆ ಇಷ್ಟವಾಗುವುದಿಲ್ಲ? .....

[ಪುಟ 31ರಲ್ಲಿರುವ ಚೌಕ]

ನೀವು ‘ಡೇಟ್‌’ ಮಾಡಲು ಆರಿಸುವ ವ್ಯಕ್ತಿಯು. . .

❑ ನಿಮ್ಮ ಆಧ್ಯಾತ್ಮಿಕ ನಂಬಿಕೆಗಳನ್ನು ಮಾನ್ಯಮಾಡಬೇಕು.—1 ಕೊರಿಂಥ 7:39.

❑ ನಿಮಗಿರುವ ನೈತಿಕ ಮೇರೆಗಳನ್ನು ಗೌರವಿಸಬೇಕು.—1 ಕೊರಿಂಥ 6:18.

❑ ನಿಮ್ಮ ಮತ್ತು ಬೇರೆಯವರ ಕಡೆಗೆ ಪರಿಗಣನೆ ತೋರಿಸಬೇಕು.—ಫಿಲಿಪ್ಪಿ 2:4.

❑ ಸತ್ಕೀರ್ತಿಯುಳ್ಳವನಾಗಿರಬೇಕು.—ಫಿಲಿಪ್ಪಿ 2:20.

[ಪುಟ 31ರಲ್ಲಿರುವ ಚೌಕ]

ಬಾಯ್‌ಫ್ರೆಂಡ್‌ ಹೀಗಿದ್ದರೆ ಎಚ್ಚರಿಕೆ!

❑ ಯಾವಾಗಲೂ ತನ್ನದೇ ಆಗಬೇಕೆಂದು ಹಠಹಿಡಿಯುವಲ್ಲಿ.

❑ ನಿಮ್ಮದೇ ತಪ್ಪು, ನೀವು ಪೆದ್ದರು ಅಥವಾ ಯೋಗ್ಯರಲ್ಲ ಎಂದು ಸದಾ ಕಾಡಿಸುವಲ್ಲಿ.

❑ ಸ್ನೇಹಿತರು ಮತ್ತು ಕುಟುಂಬದವರಿಂದ ನಿಮ್ಮನ್ನು ದೂರವಿರಿಸಲು ಪ್ರಯತ್ನಿಸುವಲ್ಲಿ.

❑ ನೀವು ಎಲ್ಲೆಲ್ಲಿ ಹೋಗುತ್ತೀರಿ ಬರುತ್ತೀರಿ ಎಂದು ಸದಾ ವಿಚಾರಿಸುವಲ್ಲಿ.

❑ ಬೇರೆಯವರೊಂದಿಗೆ ಚೆಲ್ಲಾಟವಾಡುತ್ತೀರಿ ಎಂದು ವಿನಾಕಾರಣ ಆರೋಪಿಸುವಲ್ಲಿ.

❑ ಬೆದರಿಕೆ ಹಾಕುವವನು ಅಥವಾ ‘ಏನು ಮಾಡ್ತೇನೆ ನೋಡು’ ಎಂದು ಹೆದರಿಸುವಲ್ಲಿ.

[ಪುಟ 30ರಲ್ಲಿರುವ ಚಿತ್ರ]

ಪ್ರಣಯ ಸಂಬಂಧದಲ್ಲಿ ಏಳುವ ಅಪಾಯ ಸೂಚನೆಗಳನ್ನು ಅಲಕ್ಷಿಸುವುದು ನಿಮ್ಮ ಕಾರ್‌ ಡ್ಯಾಷ್‌ಬೋರ್ಡಿನ ಎಚ್ಚರಿಕೆಯ ಸಿಗ್ನಲ್‌ಗಳನ್ನು ಅಲಕ್ಷಿಸಿದಂತೆಯೇ

CHECK OIL