ನನಗಿರುವ ಸ್ನೇಹಿತರು ಒಳ್ಳೆಯವರೋ?
ಯುವಜನರು ಪ್ರಶ್ನಿಸುವುದು
ನನಗಿರುವ ಸ್ನೇಹಿತರು ಒಳ್ಳೆಯವರೋ?
“ಸಿಟ್ಟುಬಂದಾಗ ಅದನ್ನು ಹೊರಗೆಡಹಲು ನನಗೆ ಯಾರಾದರೂ ಬೇಕು. ಬೇಸರಗೊಂಡಾಗ ಸಮಜಾಯಿಸಲು ಒಬ್ಬರು ಬೇಕು, ಸಂತಸದಿಂದ ಹಿಗ್ಗುವಾಗ ಹಂಚಿಕೊಳ್ಳಲು ಒಬ್ಬರು ಬೇಕೇಬೇಕು. ಸ್ನೇಹಿತರು ನನಗೆ ಅನಿವಾರ್ಯ.”—ಬ್ರಿಟನಿ.
ಚಿಕ್ಕ ಮಕ್ಕಳಿಗೆ ಒಡನಾಡಿಗಳು ಬೇಕಿರುವಾಗ ಯುವಕರಿಗಾದರೋ ಸ್ನೇಹಿತರು ಬೇಕು. ಇವರಿಬ್ಬರಲ್ಲಿರುವ ವ್ಯತ್ಯಾಸವೇನು?
ಒಡನಾಡಿ ಎಂದರೆ ನಿಮ್ಮ ಜೊತೆಯಲ್ಲಿರುವವರು
ಸ್ನೇಹಿತರೆಂದರೆ ನಿಮ್ಮ ಸುಖದುಃಖ ಎರಡರಲ್ಲಿಯೂ ಪಾಲಿಗರಾಗುವವರು
ಅದಲ್ಲದೆ, “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 17:17) ಇದು ಆಟದ ಮೈದಾನದಲ್ಲಿ ನಿಮಗೆ ಸಿಕ್ಕಿರಬಹುದಾದ ಗೆಳೆತನಕ್ಕಿಂತ ಹೆಚ್ಚು ಆಳವಾದ ಆಪ್ತ ಸ್ನೇಹ!
ನಿಜತ್ವ: ಪ್ರಾಪ್ತವಯಸ್ಕರಾದಷ್ಟಕ್ಕೆ ನಿಮಗೆ ಬೇಕಾಗಿರುವ ಮಿತ್ರರಲ್ಲಿ
(1) ಮೆಚ್ಚತಕ್ಕ ಗುಣಗಳಿರಬೇಕು.
(2) ನೀತಿಯುತ ಮಟ್ಟಗಳಿರಬೇಕು.
(3) ನಿಮ್ಮ ಮೇಲೆ ಸತ್ಪ್ರಭಾವ ಬೀರಬೇಕು.
ಪ್ರಶ್ನೆ: ನಿಮ್ಮ ಸ್ನೇಹಿತರು ಈ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದ್ದಾರೆ ಎಂದು ಹೇಗೆ ಹೇಳಬಲ್ಲಿರಿ? ಅವನ್ನು ಒಂದೊಂದಾಗಿ ಪರೀಕ್ಷಿಸೋಣ.
ಸ್ನೇಹಕ್ಕೆ ಅಗತ್ಯ #1 ಮೆಚ್ಚತಕ್ಕ ಗುಣಗಳು
ನಿಮಗೇನು ತಿಳಿದಿರಬೇಕು? ಸ್ನೇಹಿತರು ಎಂದು ಹೇಳಿಕೊಳ್ಳುವ ಎಲ್ಲರೂ ನಿಜ ಸ್ನೇಹಿತರಲ್ಲ. “ಬಹು ಮಂದಿ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ” ಎಂದೂ ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 18:24) ಇದು ಅತಿಶಯೋಕ್ತಿ ಎಂದು ನಿಮಗೆ ಕಾಣಬಹುದು. ಆದರೆ ಗಮನಿಸಿ: ನಿಮ್ಮ ಸ್ನೇಹವನ್ನು ಸ್ವಲಾಭಕ್ಕಾಗಿ ಬಳಸಿಕೊಂಡ ಮಿತ್ರರೊಬ್ಬರು ನಿಮಗಿದ್ದರೋ? ನಿಮ್ಮ ಎದುರಲ್ಲಿ ಒಳ್ಳೇ ಮಾತುಗಳನ್ನಾಡಿ ಹಿಂದಿನಿಂದ ಇಲ್ಲಸಲ್ಲದ ಚಾಡಿ ಹರಡಿಸುವ ಸ್ನೇಹಿತರಿದ್ದರೋ? ಅಂಥ ಅನುಭವವು ನಿಮ್ಮ ಭರವಸೆಯನ್ನು ನುಚ್ಚುನೂರಾಗಿಸಬಹುದು ನಿಜ. * ಮಿತ್ರರ ವಿಷಯದಲ್ಲಾದರೋ, ಸಂಖ್ಯೆಗಿಂತ ಗುಣಮಟ್ಟವೇ ಹೆಚ್ಚು ಪ್ರಾಮುಖ್ಯ ಎಂದು ನೆನಪಿರಲಿ.
ನೀವೇನು ಮಾಡಬೇಕು? ಅನುಕರಣೀಯ ಗುಣಗಳಿರುವವರನ್ನು ಮಿತ್ರರಾಗಿ ಆರಿಸಿಕೊಳ್ಳಿ.
“ನನ್ನ ಸ್ನೇಹಿತೆ ಫೀಯೋನಳ ವಿಷಯದಲ್ಲಿ ಎಲ್ಲರಿಗೂ ತುಂಬ ಒಳ್ಳೇ ಭಾವನೆಯಿದೆ. ನನ್ನ ಬಗ್ಗೆ ಸಹ ಎಲ್ಲರೂ ಅದೇ ಭಾವನೆ ತಾಳಬೇಕೆಂದು ನನ್ನಿಷ್ಟ. ಅವಳಂತೆಯೇ ನನಗೆ ಒಳ್ಳೇ ಹೆಸರಿರಬೇಕು. ನನಗೆ ಮೆಚ್ಚಿಗೆಯಾದ ಗುಣ ಅದೇ.”—ಇವೆಟ್, 17 ವರ್ಷ.
ಪ್ರಯತ್ನಿಸಿ ನೋಡಿ.
1. ಗಲಾತ್ಯ 5:22, 23 ಓದಿ.
2. ನಿಮ್ಮನ್ನು ಕೇಳಿಕೊಳ್ಳಿ,“‘ಆತ್ಮದ ಫಲದಲ್ಲಿರುವ’ ಗುಣಗಳು ನನ್ನ ಸ್ನೇಹಿತರಲ್ಲಿವೆಯೋ?”
3. ಈ ಕೆಳಗೆ ನಿಮ್ಮ ಅತ್ಯಾಪ್ತ ಸ್ನೇಹಿತರ ಹೆಸರನ್ನು ಪಟ್ಟಿಮಾಡಿ. ಪ್ರತಿಯೊಂದು ಹೆಸರಿನ ಪಕ್ಕದಲ್ಲಿ ಆ ವ್ಯಕ್ತಿಯನ್ನು ಅತ್ಯುತ್ತಮವಾಗಿ ವರ್ಣಿಸುವ ಗುಣವನ್ನು ಬರೆಯಿರಿ.
ಹೆಸರು ಗುಣ
..... .....
..... .....
..... .....
ಸೂಚನೆ: ನಕಾರಾತ್ಮಕ ಗುಣಗಳೇ ಮನಸ್ಸಿಗೆ ಬರುವಲ್ಲಿ ಒಳ್ಳೇ ಸ್ನೇಹಿತರನ್ನು ಹುಡುಕುವ ಸಮಯ ಇದೇ ಆಗಿದೆ!
ಸ್ನೇಹಕ್ಕೆ ಅಗತ್ಯ #2 ನೀತಿಯುತ ಮಟ್ಟಗಳು
ನಿಮಗೇನು ತಿಳಿದಿರಬೇಕು? ಬೇಗನೆ ಮಿತ್ರರು ಸಿಗಬೇಕೆಂದು ವಿಪರೀತ ಆತುರಪಟ್ಟಲ್ಲಿ ಕೆಟ್ಟ ಮಿತ್ರರು ನಿಮಗೆ ಸಿಗುವ ಹೆಚ್ಚಿನ ಸಂಭಾವ್ಯತೆ ಇದೆ. ಬೈಬಲ್ ಅನ್ನುವುದು: “ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ‘ಜ್ಞಾನಹೀನರು’ ಎಂದರೆ ಬುದ್ಧಿಶಕ್ತಿಯಿಲ್ಲದವರೆಂದಲ್ಲ. ಬದಲಿಗೆ ವಿವೇಚನಾಶಕ್ತಿ ಇಲ್ಲದವರನ್ನು ಮತ್ತು ನೈತಿಕವಾಗಿ ಬುದ್ಧಿಹೀನ ಮಾರ್ಗವನ್ನು ಅನುಸರಿಸುವವರನ್ನು ಅದು ಸೂಚಿಸುತ್ತದೆ. ಅಂಥ ಸ್ನೇಹಿತರು ನಿಮಗೆ ಇರದಿರುವುದೇ ಮೇಲು!
ನೀವೇನು ಮಾಡಬೇಕು? ನಿಮ್ಮನ್ನು ಮಿತ್ರರನ್ನಾಗಿ ಸ್ವೀಕರಿಸುವ ಯಾವನೇ ವ್ಯಕ್ತಿಯೊಂದಿಗಾದರೂ ಸ್ನೇಹ ಬೆಳೆಸುವ ಬದಲು ವ್ಯಕ್ತಿಯ ಯೋಗ್ಯತೆಗಳನ್ನು ವಿವೇಚಿಸಿ ನೋಡಿ. (ಕೀರ್ತನೆ 26:4) ಇದರ ಅರ್ಥ ನಾವು ಪೂರ್ವಗ್ರಹವನ್ನು ತೋರಿಸಬೇಕೆಂದಲ್ಲ. ಈ ಪೂರ್ವಾಪರದಲ್ಲಿ, ಯೋಗ್ಯತೆಯನ್ನು ವಿವೇಚಿಸಿ ನೋಡುವುದೆಂದರೆ “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು” ಕಾಣಲು ನಾವು ಸಾಕಷ್ಟು ಗ್ರಹಿಕೆಯುಳ್ಳವರಾಗಿರುವುದೇ.—ಮಲಾಕಿಯ 3:18.
ದೇವರು ಪಕ್ಷಪಾತಿಯಲ್ಲ, ಆದರೆ ‘ತನ್ನ ಗುಡಾರದಲ್ಲಿ ಇಳುಕೊಳ್ಳಲು ಯೋಗ್ಯರಾದವರನ್ನು’ ಸ್ವೀಕರಿಸುವ ವಿಷಯದಲ್ಲಿ ಆತನು ವಿವೇಚಿಸಿ ನೋಡುತ್ತಾನೆ. (ಕೀರ್ತನೆ 15:1-5) ನೀವು ಕೂಡ ಹಾಗೆ ಮಾಡಸಾಧ್ಯವಿದೆ. ನೀತಿಯುತ ಮಟ್ಟಗಳಿಗೆ ಅನುಸಾರ ಜೀವಿಸಿರಿ. ಹಾಗೆ ಜೀವಿಸಲು ಪ್ರಯಾಸಪಡುವ ಬೇರೆಯವರು ಸಹ ನಿಮಗೆ ಸಿಕ್ಕುವ ಸಂಭಾವ್ಯತೆಯಿದೆ. ಕೊನೆಗೆ ಅವರು ನಿಮ್ಮ ಆಪ್ತ ಸ್ನೇಹಿತರಾಗುವರು!
“ದೇವರ ನೀತಿಯುತ ಮಟ್ಟಗಳನ್ನು ಅನುಸರಿಸುವ ನನ್ನ ಸಮಪ್ರಾಯದ ಮಿತ್ರರನ್ನು ಕಂಡುಕೊಳ್ಳಲು ಹೆತ್ತವರು ಮಾಡಿದ ಸಹಾಯಕ್ಕಾಗಿ ನಾನು ಋಣಿ.”—ಕ್ರಿಸ್ಟಫರ್, 13 ವರ್ಷ.
ಪ್ರಯತ್ನಿಸಿ ನೋಡಿ.
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
◼ ಸ್ನೇಹಿತರೊಂದಿಗಿರುವಾಗ, ನಾನು ತಪ್ಪೆಂದು ತಿಳಿದಿರುವ ವಿಷಯವನ್ನು ಮಾಡುವಂತೆ ಅವರು ಒತ್ತಾಯಿಸುವರೋ ಏನೋ ಎಂದು ಗಾಬರಿಗೊಳ್ಳುತ್ತೇನೋ?
❑ ಹೌದು ❑ ಇಲ್ಲ
◼ ಹೆತ್ತವರು ನನ್ನ ಮಿತ್ರರನ್ನು ಮೆಚ್ಚಲಿಕ್ಕಿಲ್ಲ ಎಂಬ ಭಯದಿಂದ ಅವರನ್ನು ಪರಿಚಯಿಸಲು ನಾನು ಹಿಂಜರಿಯುತ್ತೇನೋ?
❑ ಹೌದು ❑ ಇಲ್ಲ
ಸೂಚನೆ: ಮೇಲಿನ ಪ್ರಶ್ನೆಗಳಿಗೆ ನೀವು ಹೌದು ಎಂದು ಉತ್ತರಿಸಿದರೆ ನೀತಿಯುತ ಮಟ್ಟಗಳಿರುವ ಸ್ನೇಹಿತರಿಗಾಗಿ ಹುಡುಕಿರಿ. ನಿಮಗಿಂತ ಸ್ವಲ್ಪ ದೊಡ್ಡವರಾದ ಹಾಗೂ ಕ್ರೈಸ್ತ ಜೀವಿತದಲ್ಲಿ ಒಳ್ಳೇ ಮಾದರಿಯನ್ನು ಇಟ್ಟಿರುವವರನ್ನು ಸ್ನೇಹಿತರಾಗಿ ಆರಿಸಿಕೊಳ್ಳಬಾರದೇಕೆ?
ಸ್ನೇಹಕ್ಕೆ ಅಗತ್ಯ #3 ಸತ್ಪ್ರಭಾವ
ನಿಮಗೇನು ತಿಳಿದಿರಬೇಕು? “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು ಹೇಳುತ್ತದೆ ಬೈಬಲ್. (1 ಕೊರಿಂಥ 15:33) ಲಾರೆನ್ ಎಂಬ ಯುವತಿ ಅನ್ನುವುದು: “ನಾನು ಎಷ್ಟರ ತನಕ ನನ್ನ ಸಹಪಾಠಿಗಳು ಹೇಳಿದ್ದನ್ನು ಮಾಡಿದೆನೋ ಆ ತನಕ ಅವರ ಸ್ನೇಹಿತಳಾಗಿದ್ದೆ. ನಾನು ಒಂಟಿಯಾಗಿದ್ದರಿಂದ ಅವರು ನನ್ನನ್ನು ಸೇರಿಸಿಕೊಳ್ಳಬೇಕೆಂಬ ಬರೇ ಆಶೆಯಿಂದ ಅವರಂತೆ ವರ್ತಿಸಲು ನಿರ್ಣಯಿಸಿದೆ.” ಲಾರೆನ್ ಕಂಡುಕೊಂಡಂತೆ, ಬೇರೆಯವರ ಮಟ್ಟಗಳಿಗೆ ನಿಮ್ಮನ್ನು ಹೊಂದಿಸಿಕೊಂಡಾಗ ನೀವು ಚದುರಂಗದ ದಾಳದಂತೆ ಇರುತ್ತೀರಿ, ಅವರು ನಿಮ್ಮನ್ನು ತಮಗೆ ಬೇಕಾದ ಹಾಗೆ ಕುಣಿಸುತ್ತಾರೆ. ಅಂಥವರಿಗಿಂತಲೂ ಉತ್ತಮ ಸ್ನೇಹಿತರು ನಿಮಗೆ ಬೇಕು!
ನೀವೇನು ಮಾಡಬೇಕು? ಅವರ ಜೀವನಶೈಲಿಗೆ ಹೊಂದಿಕೊಳ್ಳುವಂತೆ ನಿಮ್ಮನ್ನು ಒತ್ತಾಯಿಸುವವರ ಸ್ನೇಹಸಂಬಂಧವನ್ನು ಕಡಿದುಹಾಕಿ. ನೀವು ಈ ಹೆಜ್ಜೆ ತಕ್ಕೊಂಡಲ್ಲಿ ಸರಿಯಾದುದ್ದನ್ನೇ ಮಾಡಿದ ಭಾವನೆ ನಿಮಗಿರುವುದು. ಅಲ್ಲದೆ ನಿಮ್ಮ ಮೇಲೆ ಸತ್ಪ್ರಭಾವವನ್ನು ಬೀರುವ ಒಳ್ಳೆಯ ಗೆಳೆತನಕ್ಕೆ ದಾರಿಮಾಡುವಿರಿ.—ರೋಮಾಪುರ 12:2.
“ನನ್ನ ಆಪ್ತ ಮಿತ್ರ ಕ್ಲಿಂಟ್ ವಿವೇಚನಾಶೀಲ ಹಾಗೂ ಪರಹಿತ ಚಿಂತಕ. ಹಾಗಾಗಿ ನನಗೆ ಅವನು ಮಹಾ ಉತ್ತೇಜನದ ಚಿಲುಮೆ.”—ಜೇಸನ್, 21 ವರ್ಷ.
ಪ್ರಯತ್ನಿಸಿ ನೋಡಿ.
ಹೀಗೆ ಕೇಳಿಕೊಳ್ಳಿ:
◼ ನನ್ನ ಸ್ನೇಹಿತರ ಮನಮೆಚ್ಚಿಸಲು ನಾನು ನನ್ನ ಉಡುಗೆ-ತೊಡುಗೆ, ಮಾತಾಡುವ ಶೈಲಿ, ನಡವಳಿಕಾ ರೀತಿಯನ್ನು ಬದಲಾಯಿಸುತ್ತೇನೋ?
❑ ಹೌದು ❑ ಇಲ್ಲ
◼ ನನ್ನ ಮಿತ್ರರಿಗಾಗಿ ನಾನು ನೈತಿಕವಾಗಿ ಕೆಟ್ಟದಾದ ಸ್ಥಳಗಳನ್ನು ಆಗಿಂದಾಗ್ಗೆ ಸಂದರ್ಶಿಸುತ್ತೇನೋ?
❑ ಹೌದು ❑ ಇಲ್ಲ
ಸೂಚನೆ: ಮೇಲಿನ ಪ್ರಶ್ನೆಗಳಿಗೆ ನೀವು ಹೌದು ಎಂದು ಉತ್ತರಿಸಿದ್ದಲ್ಲಿ ಸಲಹೆಗಳಿಗಾಗಿ ನಿಮ್ಮ ಹೆತ್ತವರ ಬಳಿಗೊ ಇನ್ನೊಬ್ಬ ಪ್ರೌಢ ವ್ಯಕ್ತಿಯ ಬಳಿಗೊ ಹೋಗಿ. ನೀವು ಯೆಹೋವನ ಸಾಕ್ಷಿಯಾಗಿದ್ದಲ್ಲಿ ಕ್ರೈಸ್ತ ಹಿರಿಯನ ಬಳಿಗೆ ಹೋಗಿ ನಿಮ್ಮ ಮೇಲೆ ಸತ್ಪ್ರಭಾವವನ್ನು ಬೀರುವಂಥ ಮಿತ್ರರನ್ನು ಆರಿಸಿಕೊಳ್ಳಲು ಸಹಾಯ ಕೇಳಿ. (g 3/09)
“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು
[ಪಾದಟಿಪ್ಪಣಿ]
^ ಪ್ರತಿಯೊಬ್ಬರೂ ತಪ್ಪುಮಾಡುತ್ತಾರೆ ನಿಶ್ಚಯ. (ರೋಮಾಪುರ 3:23) ಆದುದರಿಂದ ಒಬ್ಬ ಮಿತ್ರನು ನಿಮಗೆ ನೋವನ್ನುಂಟುಮಾಡಿ ಆಮೇಲೆ ನಿಜ ಪಶ್ಚಾತ್ತಾಪ ತೋರಿಸುವುದಾದರೆ “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ” ಎಂದು ನೆನಪಿಡಿರಿ.—1 ಪೇತ್ರ 4:8.
ಯೋಚಿಸಿ
◼ ಸ್ನೇಹಿತರೊಬ್ಬರಲ್ಲಿ ನೀವು ಯಾವ ಗುಣಗಳನ್ನು ಅಮೂಲ್ಯವೆಂದೆಣಿಸುತ್ತೀರಿ ಮತ್ತು ಏಕೆ?
◼ ನೀವು ಒಳ್ಳೇ ಸ್ನೇಹಿತರಾಗಿರಲು ಯಾವ ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ?
[ಪುಟ 23ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮಪ್ರಾಯದವರು ಹೇಳುವುದು
“ಇಂಥಿಂಥ ಸ್ನೇಹಿತರಿಂದ ದೂರವಿರುವಂತೆ ಹೆತ್ತವರು ಹೇಳಿದಾಗ ನಾನಾದರೋ ಅಂಥವರೇ ಬೇಕೆಂದು ಅಂದುಕೊಂಡೆ. ಆದರೆ ನನ್ನ ಹೆತ್ತವರ ಸಲಹೆ ಒಳ್ಳೇದಾಗಿತ್ತು. ಅದರ ಕುರಿತು ನಾನು ಗಂಭೀರವಾಗಿ ಯೋಚಿಸಿದಾಗ ನನಗೆ ತಿಳಿದುಬಂತು ಏನೆಂದರೆ ಬೇರೆ ಅನೇಕ ಒಳ್ಳೇ ಮಿತ್ರರು ಇದ್ದಾರೆಂಬುದಾಗಿ.”—ಕೋಲ್.
“ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದೇ ಸಭೆಯಲ್ಲಿರುವವರನ್ನು ತಿಳುಕೊಳ್ಳುವ ಉತ್ತಮ ಮಾರ್ಗ ಎಂದು ನನಗೆ ತಿಳಿಯಿತು. ಅಲ್ಲಿ ನನಗೆ ಹಿರಿ-ಕಿರಿಯರಾದ ವಿವಿಧ ಜನರು ಜೊತೆಗೂಡಲು ಸಿಗುತ್ತಾರೆ. ಮಾತ್ರವಲ್ಲ, ಯೆಹೋವನನ್ನು ಪ್ರೀತಿಸುವ ಜನರೊಂದಿಗೆ ನಾನು ಸಮಯವನ್ನು ಕಳೆಯುತ್ತಿರುವೆನು.”—ಇವೆಟ್.
“ಸ್ನೇಹಿತರಿಗಾಗಿ ಪ್ರಾರ್ಥಿಸುತ್ತಿದ್ದೆ, ಆದರೆ ಅವರನ್ನು ಕಂಡುಕೊಳ್ಳಲು ಏನನ್ನೂ ಮಾಡುತ್ತಿರಲಿಲ್ಲ. ಆದ್ದರಿಂದ ನಾನೇ ಮುಂದಡಿಯಿಟ್ಟು ಕ್ರೈಸ್ತ ಕೂಟಗಳಲ್ಲಿರುವ ಇತರರೊಂದಿಗೆ ಮಾತಾಡತೊಡಗಿದೆ. ಅನೇಕ ಹೊಸ ಮಿತ್ರರು ಆ ಕೂಡಲೇ ದೊರೆತರು. ಮುಂದೆಂದೂ ಒಂಟಿತನ ನನ್ನನ್ನು ಕಾಡಲಿಲ್ಲ.”—ಸ್ಯಾಮ್.
[ಪುಟ 24ರಲ್ಲಿರುವ ಚೌಕ]
ಈ ಸಲಹೆಗಳನ್ನು ಪ್ರಯತ್ನಿಸಿ
ಗೆಳೆತನದ ಕುರಿತು ಹೆತ್ತವರೊಂದಿಗೆ ಮಾತಾಡಿ. ನಿಮ್ಮ ಪ್ರಾಯದವರಾಗಿದ್ದಾಗ ಅವರಿಗಿದ್ದ ಮಿತ್ರರ ಕುರಿತು ಕೇಳಿರಿ. ತಾವು ಆರಿಸಿಕೊಂಡ ಗೆಳೆಯರ ಬಗ್ಗೆ ಅವರು ವಿಷಾದಿಸುತ್ತಾರೋ? ಹೌದಾದರೆ ಅದಕ್ಕೆ ಕಾರಣ? ಅವರಿಗೆ ಎದುರಾಗಿದ್ದ ಕೆಲವು ಸಮಸ್ಯೆಗಳನ್ನು ನೀವು ಹೇಗೆ ತಡೆಯಬಲ್ಲಿರೆಂದು ಕೇಳಿರಿ.
ಮಿತ್ರರನ್ನು ಹೆತ್ತವರಿಗೆ ಪರಿಚಯಿಸಿರಿ. ಹಾಗೆ ಮಾಡಲು ಹಿಂಜರಿಯುವುದಾದರೆ ‘ನಾನೇಕೆ ಹಾಗೆ ಮಾಡುತ್ತೇನೆ’ ಎಂದು ಕೇಳಿಕೊಳ್ಳಿ. ನಿಮ್ಮ ಹೆತ್ತವರು ಮೆಚ್ಚದಂಥ ವಿಷಯಗಳನ್ನು ನಿಮ್ಮ ಮಿತ್ರರು ಮಾಡುತ್ತಾರೆಂದು ನಿಮಗೆ ತಿಳಿದಿದೆಯೋ? ಹಾಗಿದ್ದರೆ ಮಿತ್ರರನ್ನು ಆಯ್ದುಕೊಳ್ಳುವ ವಿಷಯದಲ್ಲಿ ಹೆಚ್ಚು ವಿವೇಚನೆಯನ್ನು ಉಪಯೋಗಿಸುವ ಅಗತ್ಯವಿದೆ.
[ಪುಟ 24ರಲ್ಲಿರುವ ಚೌಕ]
ಒಳ್ಳೇ ಗೆಳೆಯರನ್ನು ಉಳಿಸಿಕೊಳ್ಳುವ ಮೂರು ವಿಧಾನ
◼ ಚೆನ್ನಾಗಿ ಕಿವಿಗೊಡಿ. ನಿಮ್ಮ ಸ್ನೇಹಿತರ ಹಿತಕ್ಷೇಮ ಮತ್ತು ಚಿಂತೆಗಳ ವಿಷಯದಲ್ಲಿ ಆಸಕ್ತಿ ತೋರಿಸಿ.—ಫಿಲಿಪ್ಪಿ 2:4.
◼ ಕ್ಷಮಿಸುವವರಾಗಿರಿ. ಅವರಿಂದ ತಪ್ಪಾಗುವುದಿಲ್ಲವೆಂದು ನಿರೀಕ್ಷಿಸಬೇಡಿ. “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.”—ಯಾಕೋಬ 3:2.
◼ ಅವಕಾಶ ಕೊಡಿ. ಯಾವಾಗಲೂ ಅವರೊಂದಿಗೆ ಅಂಟಿಕೊಂಡಿರುವ ಅಗತ್ಯವಿಲ್ಲ. ನಿಜ ಮಿತ್ರರು ನಿಮಗೆ ಬೇಕಾದಾಗ ತಪ್ಪದೆ ನಿಮ್ಮ ಸಂಗಡ ಇರುವರು.—ಪ್ರಸಂಗಿ 4:9, 10.
[ಪುಟ 22ರಲ್ಲಿರುವ ಚಿತ್ರ]
ಬೇರೆಯವರು ನಿಮ್ಮನ್ನು ಸೇರಿಸಿಕೊಳ್ಳಬೇಕೆಂಬ ಬರೇ ಆಶೆಯಿಂದ ಅವರ ಮಟ್ಟಗಳಿಗೆ ಹೊಂದಿಕೊಂಡಲ್ಲಿ ನೀವು ಚದುರಂಗದ ದಾಳದಂತೆ ಇರುತ್ತೀರಿ, ಅವರು ನಿಮ್ಮನ್ನು ತಮಗೆ ಬೇಕಾದ ಹಾಗೆ ಕುಣಿಸುತ್ತಾರೆ