ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜ್ಞಾಪಕಶಕ್ತಿ—ವರ್ಧಿಸಬಲ್ಲಿರಿ!

ಜ್ಞಾಪಕಶಕ್ತಿ—ವರ್ಧಿಸಬಲ್ಲಿರಿ!

ಜ್ಞಾಪಕಶಕ್ತಿ—ವರ್ಧಿಸಬಲ್ಲಿರಿ!

“ಜ್ಞಾಪಕಶಕ್ತಿ ನಮ್ಮ ತಿಳಿವಳಿಕೆಯ ಪ್ರಪಂಚವನ್ನು ವಿಸ್ತರಿಸುತ್ತದೆ. ಏಕೆಂದರೆ ಅದರ ಹೊರತು ದಿನದಿನದ ಆಗುಹೋಗುಗಳ ಪರಿವೇ ನಮಗಿರದು. ಜ್ಞಾಪಕವಿಲ್ಲದ ವ್ಯಕ್ತಿ ಪ್ರತಿ ದಿನ ಮುಂಜಾನೆ ಕನ್ನಡಿ ನೋಡುವಾಗ ಅವನಿಗೆ ಕಾಣಿಸುವುದು ಒಬ್ಬ ಆಗಂತುಕನೇ. ದಿನವೂ ಘಟನೆಯೂ ಪರಸ್ಪರ ಸಂಬಂಧವಿಲ್ಲದಂತೆ ದಾಟಿಹೋಗುತ್ತವೆ; ಗತಕಾಲದ ಘಟನೆಗಳಿಂದ ಅವನು ಕಲಿಯಶಕ್ತನೂ ಅಲ್ಲ, ಭವಿಷ್ಯತ್ತನ್ನು ಎದುರು ನೋಡಶಕ್ತನೂ ಅಲ್ಲ.” —“ಮನಸ್ಸಿನ ರಹಸ್ಯಗಳು” (ಇಂಗ್ಲಿಷ್‌).

ಕೆಲವು ಪಕ್ಷಿಗಳು ಚಳಿಗಾಲಕ್ಕಾಗಿ ಬೀಜಗಳನ್ನು ಶೇಖರಿಸಿಡುತ್ತವೆ. ಆದರೆ ಇಟ್ಟ ಸ್ಥಳವನ್ನು ಮಾತ್ರ ತಪ್ಪದೆ ಜ್ಞಾಪಿಸಿಕೊಳ್ಳುತ್ತವೆ. ಅಳಿಲುಗಳು ಸಹ ಕರಟಕಾಯಿಗಳನ್ನು ಹೂತಿಡುತ್ತವೆ. ಆದರೆ ಹೂತಿಟ್ಟ ಸ್ಥಳಗಳನ್ನು ನೆನಪಿನಿಂದ ಗುರುತಿಸುತ್ತವೆ. ಮನುಷ್ಯರ ಕುರಿತೇನು? ಬೀಗದ ಕೈಯಿಟ್ಟ ಜಾಗ ಕೆಲವೇ ನಿಮಿಷಗಳಲ್ಲಿ ನೆನಪಿಲ್ಲ, ಮರೆತುಹೋಗುತ್ತದೆ. ಹೀಗೇಕೆ? ಹೌದು, ನಮ್ಮಲ್ಲಿ ಅನೇಕರು ನಮ್ಮ ಜ್ಞಾಪಕಶಕ್ತಿಯ ಕೊರತೆಯ ಬಗ್ಗೆ ಗೊಣಗುತ್ತೇವೆ. ಆದರೂ, ನಮ್ಮ ಮಿದುಳಿಗೆ ಕಲಿತುಕೊಳ್ಳುವ ಮತ್ತು ನೆನಪಿಸಿಕೊಳ್ಳುವ ಆಶ್ಚರ್ಯಕರ ಸಾಮರ್ಥ್ಯವಿದೆ. ಹೀಗಿರಲಾಗಿ ನಮ್ಮಲ್ಲಿರುವ ಜ್ಞಾಪಕಶಕ್ತಿಯನ್ನು ಹೇಗೆ ಚುರುಕಾಗಿಡಬಹುದು, ವರ್ಧಿಸಬಹುದು ಎಂದು ನಾವು ನೋಡೋಣ.

ಮಿದುಳಿನ ಅಪಾರ ಸಾಮರ್ಥ್ಯ

ಮಾನವ ಮಿದುಳಿನ ಭಾರ ಸುಮಾರು 1.4 ಕಿಲೋಗ್ರ್ಯಾಮ್‌. ಸಾಧಾರಣ ಚಕ್ಕೋತ ಜಾತಿಯ ಒಂದು ಹಣ್ಣಿನ ಗಾತ್ರ. ಆದರೂ ಅದರಲ್ಲಿ ಸುಮಾರು ಹತ್ತುಸಾವಿರ ಕೋಟಿ ನ್ಯೂರಾನ್‌ ಅಥವಾ ನರಕೋಶಗಳಿವೆ. ಇದೆಲ್ಲ ಒಂದು ನಂಬಲಶಕ್ಯವಾದ ಜಟಿಲ ಜಾಲವನ್ನುಂಟುಮಾಡುತ್ತದೆ. ಒಂದೇ ಒಂದು ನ್ಯೂರಾನನ್ನು ಒಂದು ಲಕ್ಷ ಬೇರೆ ನ್ಯೂರಾನಗಳಿಗೆ ಜೋಡಿಸಬಹುದಾಗಿದೆ. ಈ ತಂತಿಜಾಲವು ಅಪಾರ ಮೊತ್ತದ ಮಾಹಿತಿಯನ್ನು ಸಂಸ್ಕರಿಸಿ ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಮಿದುಳಿಗೆ ಕೊಡುತ್ತದೆ. ಆದರೆ ಮಾಹಿತಿಯು ಬೇಕಾದಾಗ ಅದನ್ನು ಜ್ಞಾಪಕಕ್ಕೆ ತರುವುದೇ ವ್ಯಕ್ತಿಗಿರುವ ದೊಡ್ಡ ಸವಾಲು. ಕೆಲವರ ಜ್ಞಾಪಕಶಕ್ತಿ ಬಹಳ ಚುರುಕು. ಶಾಲಾ ಶಿಕ್ಷಣವಿಲ್ಲದಿದ್ದರೂ ಚುರುಕಿನ ನೆನಪುಶಕ್ತಿಯಿರುವ ಅನೇಕರಿದ್ದಾರೆ.

ದೃಷ್ಟಾಂತಕ್ಕಾಗಿ, ಪಶ್ಚಿಮ ಆಫ್ರಿಕದಲ್ಲಿರುವ ಗ್ರಿಯೋ ಎಂಬ ಬುಡಕಟ್ಟಿನ ಜನರನ್ನು ತೆಗೆದುಕೊಳ್ಳಿ. ಇವರು ಓದುಬರಹವಿಲ್ಲದವರಾದರೂ ಚರಿತ್ರೆಯಲ್ಲಿ ಪಾರಂಗತರಾದ ಕುಲೀಯ ಜನರು. ತಮ್ಮ ಹಳ್ಳಿಪಳ್ಳಿಗಳ ಜನರ ಅನೇಕ ತಲೆಮಾರುಗಳ ಹೆಸರುಗಳನ್ನು ನೆನಪಿನಿಂದ ಪಟಪಟನೆ ಪಠಿಸಬಲ್ಲರು. ಪುಲಿಟ್ಸರ್‌ ಬಹುಮಾನ ಪಡೆದ ರೂಟ್ಸ್‌ ಎಂಬ ಪುಸ್ತಕದ ಲೇಖಕ ಆ್ಯಲಿಕ್ಸ್‌ ಹೇಲೀ ಎಂಬವರಿಗೆ ಗ್ಯಾಂಬಿಯ ದೇಶದ ತನ್ನ ಪೂರ್ವಜರ ಆರು ತಲೆಮಾರುಗಳನ್ನು ಕಂಡುಹಿಡಿಯಲು ಸಾಧ್ಯ ಮಾಡಿದ್ದು ಈ ಗ್ರಿಯೋಗಳೇ. ಹೇಲೀ ಹೇಳಿದ್ದು: “ಆಫ್ರಿಕದ ಗ್ರಿಯೋಗಳಿಗೆ ನಾನು ಚಿರಋಣಿ. ಇಂದು ಅಲ್ಲಿ ಒಬ್ಬ ಗ್ರಿಯೋ ಸಾಯುವಲ್ಲಿ ಒಂದು ಗ್ರಂಥಾಲಯವೇ ಸುಟ್ಟುಹೋದಂತೆ ಎಂದು ಸೂಕ್ತವಾಗಿ ಹೇಳಬಹುದು.”

ಇಟೆಲಿಯ ಪ್ರಸಿದ್ಧ ವಾದ್ಯಮೇಳ ನಿರ್ದೇಶಕ ಆರ್ಟೂರೋ ಟಾಸ್ಕನೀನೀ ಎಂಬವರ ಕುರಿತೂ ಪರಿಗಣಿಸಿ. 19ನೆಯ ವಯಸ್ಸಿನಲ್ಲೇ ‘ಪ್ರಸಿದ್ಧಿಗೊಂಡ’ ಅವರನ್ನು ಬದಲಿ ನಿರ್ದೇಶಕರಾಗಿ ಮೇಳ ನಡೆಸಲು ಕೇಳಿಕೊಳ್ಳಲಾಯಿತು. ಅವರಿಗೆ ದೃಷ್ಟಿದೋಷವಿದ್ದರೂ ಐಡ ಎಂಬ ಇಡೀ ಗೀತನಾಟಕವನ್ನು ಸ್ಕ್ರಿಪ್ಟ್‌ ನೋಡದೆ ನೆನಪಿನಿಂದಲೇ ನಿರ್ದೇಶಿಸಿದರು.

ಇಂಥ ಸಾಧನೆಗಳು ನಮ್ಮನ್ನು ಬೆರಗುಗೊಳಿಸಬಹುದು. ಆದರೂ ಅಧಿಕಾಂಶ ಜನರಿಗೆ ಅವರು ಎಣಿಸುವುದಕ್ಕಿಂತಲೂ ಹೆಚ್ಚಿನ ಜ್ಞಾಪಕಶಕ್ತಿಯಿದೆ. ನೀವು ನಿಮ್ಮ ಜ್ಞಾಪಕಶಕ್ತಿಯನ್ನು ವರ್ಧಿಸಲು ಇಷ್ಟಪಡುತ್ತೀರೋ?

ನಿಮ್ಮ ಜ್ಞಾಪಕಶಕ್ತಿಯನ್ನು ವರ್ಧಿಸುವುದು

ಜ್ಞಾಪಕಶಕ್ತಿಯಲ್ಲಿ ಮೂರು ಹಂತಗಳಿವೆ: ಸಂಕೇತಲಿಪಿ, ಶೇಖರಣೆ, ಪುನರ್ಲಭ್ಯತೆ. ಮಾಹಿತಿಯನ್ನು ಗ್ರಹಿಸಿದಾಗ ನಿಮ್ಮ ಮಿದುಳು ಅದನ್ನು ಸಂಕೇತಲಿಪಿಯಲ್ಲಿಟ್ಟು ನೋಂದಾಯಿಸುತ್ತದೆ. ಬಳಿಕ ಈ ಮಾಹಿತಿಯನ್ನು ಮಿದುಳು ಶೇಖರಿಸುತ್ತದೆ ಮತ್ತು ಮುಂದಕ್ಕೆ ಬೇಕಾದಾಗ ಪುನರ್ಲಭ್ಯಗೊಳಿಸುತ್ತದೆ. ಈ ಮೂರು ಹಂತಗಳಲ್ಲಿ ಯಾವುದಾದರೂ ಒಂದು ಹಂತ ಕೆಲಸ ಮಾಡದಿರುವಾಗ ಜ್ಞಾಪಕಶಕ್ತಿ ಲಾಗಹೊಡೆಯುತ್ತದೆ.

ಜ್ಞಾಪಕಶಕ್ತಿಯನ್ನೇ ವಿವಿಧ ವಿಧಗಳಲ್ಲಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ, ಸಂವೇದನಾ ಜ್ಞಾಪಕಶಕ್ತಿ, ಅಲ್ಪಾವಧಿಯ ಜ್ಞಾಪಕಶಕ್ತಿ, ದೀರ್ಘಾವಧಿಯ ಜ್ಞಾಪಕಶಕ್ತಿ. ಸಂವೇದನಾ ಜ್ಞಾಪಕಶಕ್ತಿಯು ಉದ್ದೀಪಕ ಕ್ರಿಯಾಶಕ್ತಿಯಾದ ಘ್ರಾಣ, ದರ್ಶನ, ಸ್ಪರ್ಶ ಮುಂತಾದವುಗಳ ಮೂಲಕ ಮಾಹಿತಿಯನ್ನು ಪಡೆಯುತ್ತದೆ. ಅಲ್ಪಾವಧಿಯ ಜ್ಞಾಪಕಶಕ್ತಿ ಚಿಕ್ಕ ಗಾತ್ರದ ಮಾಹಿತಿಯನ್ನು ಸಂಕ್ಷಿಪ್ತ ಅವಧಿಗಾಗಿ ಮಾತ್ರ ಸಂಗ್ರಹಿಸುತ್ತದೆ. ಈ ಕಾರಣದಿಂದ ನಾವು ಮನಸ್ಸಿನಲ್ಲಿ ಲೆಕ್ಕಮಾಡಬಲ್ಲೆವು, ಟೆಲಿಫೋನ್‌ ಕರೆಯನ್ನು ಮಾಡುವ ತನಕ ಆ ನಂಬರನ್ನು ನೆನಪಿಸಬಲ್ಲೆವು ಮತ್ತು ಒಂದು ವಾಕ್ಯದ ಎರಡನೇ ಅರ್ಧ ಭಾಗವನ್ನು ಓದುವಾಗ ಅಥವಾ ಕೇಳುವಾಗ ಆ ವಾಕ್ಯದ ಮೊದಲ ಅರ್ಧಭಾಗವನ್ನು ನೆನಪಿಡಬಲ್ಲೆವು. ಆದರೆ ನಮಗೆಲ್ಲರಿಗೂ ಗೊತ್ತಿರುವಂತೆ, ಈ ಅಲ್ಪಾವಧಿಯ ಜ್ಞಾಪಕಶಕ್ತಿಗೆ ಪರಿಮಿತಿಯಿದೆ.

ನೀವು ಅನಿಶ್ಚಿತ ಕಾಲದ ವರೆಗೆ ಮಾಹಿತಿಯನ್ನು ಶೇಖರಿಸಿಡ ಬಯಸುವುದಾದರೆ, ಅದು ನಿಮ್ಮ ದೀರ್ಘಾವಧಿಯ ಜ್ಞಾಪಕಶಕ್ತಿಯಿರುವ ಸ್ಥಳಕ್ಕೆ ಹೋಗಬೇಕು. ಅದನ್ನು ಅಲ್ಲಿ ಶೇಖರಿಸುವುದು ಹೇಗೆ ಸಾಧ್ಯ? ಈ ಕೆಳಗಿನ ಮೂಲತತ್ತ್ವಗಳು ಸಹಾಯ ಮಾಡುವುವು.

ಆಸಕ್ತಿ: ನೀವು ಕಲಿಯಬಯಸುವ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸಿರಿ. ಅದನ್ನು ಕಲಿಯುವ ಕಾರಣಗಳನ್ನು ಪದೇ ಪದೇ ಜ್ಞಾಪಿಸಿಕೊಳ್ಳಿ. ನಿಮ್ಮ ಸ್ವಂತ ಜೀವನಾನುಭವ ಹೇಳುವಂತೆ, ನಿಮ್ಮ ವೈಯಕ್ತಿಕ ಭಾವಾವೇಶಗಳು ಅದರಲ್ಲಿ ಸೇರಿರುವಾಗ ನಿಮ್ಮ ಸ್ಮರಣಶಕ್ತಿಯು ವರ್ಧಿಸುತ್ತದೆ. ಈ ನಿಜತ್ವ ಬೈಬಲ್‌ ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯಕರ. ಅವರು ದೇವರಿಗೆ ಸಮೀಪವಾಗುವ ಮತ್ತು ಇತರರಿಗೆ ಆತನ ಕುರಿತು ಕಲಿಸುವ ಇಮ್ಮಡಿ ಗುರಿಯಿಂದ ಬೈಬಲನ್ನು ಓದುವುದಾದರೆ ಅವರ ಜ್ಞಾಪಕಶಕ್ತಿ ಗಮನಾರ್ಹವಾಗಿ ವೃದ್ಧಿಯಾಗಬಲ್ಲದು.—ಜ್ಞಾನೋಕ್ತಿ 7:3; 2 ತಿಮೊಥೆಯ 3:16.

ಗಮನ: ಮನಸ್ಸಿನ ರಹಸ್ಯಗಳು ಎಂಬ ಇಂಗ್ಲಿಷ್‌ ಪುಸ್ತಕ ಹೇಳುವುದು: “ಗಮನ ಕೊಡುವುದರಲ್ಲಿ ಲೋಪವೇ ಜ್ಞಾಪಕಶಕ್ತಿಯ ಲೋಪಗಳಿಗೆ ಹೆಚ್ಚಿನ ಕಾರಣ.” ಹಾಗಾದರೆ ಗಮನ ಕೊಡುವಂತೆ ನಿಮಗೆ ಯಾವುದು ಸಹಾಯ ಮಾಡಬಲ್ಲದು? ಅಭಿರುಚಿಯುಳ್ಳವರಾಗಿರ್ರಿ. ಸಾಧ್ಯವಿರುವಲ್ಲಿ ಟಿಪ್ಪಣಿ ಬರೆಯಿರಿ. ಈ ಟಿಪ್ಪಣಿ ಬರೆಯುವಿಕೆ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ ಮಾತ್ರವಲ್ಲ ಕೇಳುಗನು ಬಳಿಕ ಆ ವಿಷಯವನ್ನು ಪುನಃ ಪರಿಶೀಲಿಸುವಂತೆ ಸಾಧ್ಯಮಾಡುತ್ತದೆ.

ತಿಳಿವಳಿಕೆ: “ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು [“ತಿಳಿವಳಿಕೆಯನ್ನು,” NW] ಪಡೆ” ಎನ್ನುತ್ತದೆ ಜ್ಞಾನೋಕ್ತಿ 4:7. ನಿಮಗೆ ಒಂದು ಬೋಧನೆ ಅಥವಾ ವಿಷಯವು ಚೆನ್ನಾಗಿ ಅರ್ಥವಾಗದಿರುವಲ್ಲಿ ನೀವದನ್ನು ಸರಿಯಾಗಿ ನೆನಪಿಸಿಕೊಳ್ಳಲಾರಿರಿ ಇಲ್ಲವೆ ಪೂರ್ತಿಯಾಗಿ ಮರೆತುಬಿಡುವಿರಿ. ತಿಳಿವಳಿಕೆಯು ಎರಡು ವಿಷಯಗಳ ಮಧ್ಯೆ ಇರುವ ಸಂಬಂಧದ ಅರ್ಥವನ್ನು ಗ್ರಹಿಸಿಕೊಳ್ಳುವಂತೆ ಮಾಡಿ ಅವನ್ನು ಒಂದು ತರ್ಕಬದ್ಧ ವಿಷಯವನ್ನಾಗಿ ಬೆಸೆಯುತ್ತದೆ. ಉದಾಹರಣೆಗೆ, ಮೆಕ್ಯಾನಿಕ್ಸ್‌ ಕಲಿಯುವವನಿಗೆ ಯಂತ್ರವು ಹೇಗೆ ಕಾರ್ಯನಡೆಸುತ್ತದೆ ಎಂಬ ತಿಳಿವಳಿಕೆ ಸಿಕ್ಕಿದಾಗ ಅವನು ಆ ಯಂತ್ರದ ಭಾಗಗಳ ಎಲ್ಲಾ ವಿವರಣೆಗಳನ್ನು ಹೆಚ್ಚು ಉತ್ತಮವಾಗಿ ನೆನಪಿಸುತ್ತಾನೆ.

ಸಂಘಟನೆ: ಒಂದೇ ರೀತಿಯ ವಿಷಯಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ವರ್ಗೀಕರಿಸಿರಿ. ಉದಾಹರಣೆಗೆ, ಮಾರ್ಕೆಟಿನಿಂದ ತರಬೇಕಾದ ಸಾಮಾನಿನ ಪಟ್ಟಿಯಲ್ಲಿ ಮಾಂಸ, ತರಕಾರಿ, ಹಣ್ಣುಹಂಪಲುಗಳು ಇತ್ಯಾದಿಯನ್ನು ವರ್ಗೀಕರಿಸಿದರೆ ನೆನಪಿನಲ್ಲಿಡುವುದು ಸುಲಭ. ಇದಲ್ಲದೆ, ವರ್ಗೀಕರಿಸಿದ ವಸ್ತುಗಳನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿರಿ. ಒಂದೊಂದು ಭಾಗದಲ್ಲಿ ಐದರಿಂದ ಏಳು ವಸ್ತುಗಳ ಹೊರತು ಹೆಚ್ಚನ್ನು ಕೂಡಿಸಬೇಡಿ. ಕೊನೆಗೆ, ಎಲ್ಲಾ ಐಟಮ್‌ಗಳನ್ನು ಪ್ರಾಯಶಃ ಅಕ್ಷರಾನುಕ್ರಮದಲ್ಲಿ ಹಾಕುವ ಮೂಲಕ ಸಹಾಯಕಾರಿಯಾದೀತು. ಟೆಲಿಫೋನ್‌ ನಂಬರನ್ನು ಸಹ ಸುಲಭವಾಗಿ ಜ್ಞಾಪಿಸಿಕೊಳ್ಳಲು ಅದನ್ನು ಎರಡು ಭಾಗವಾಗಿ ವಿಂಗಡಿಸಬಹುದು.

ಪಠನ ಅಥವಾ ಪುನರಾವರ್ತನೆ: ನೀವು ನೆನಪಿಸಬಯಸುವುದನ್ನು ಗಟ್ಟಿಯಾಗಿ ಹೇಳಿ ಪುನರಾವರ್ತಿಸುವುದರಿಂದ ನಿಮ್ಮ ಮಿದುಳಿನ ನರಗಳ ಜೋಡಣೆಯು ಬಲಗೊಳ್ಳುವುದು. ಅದು ಹೇಗೆ? ಉದಾಹರಣೆಗೆ, ವಿದೇಶೀ ಭಾಷೆಯ ಶಬ್ದ ಅಥವಾ ಪದಗುಚ್ಛವನ್ನು ತೆಗೆದುಕೊಳ್ಳಿ. ಪ್ರಥಮವಾಗಿ, ಆ ಭಾಷೆ ಶಬ್ದವನ್ನು ಗಟ್ಟಿಯಾಗಿ ಹೇಳುವಾಗ ಆ ಶಬ್ದಕ್ಕೆ ಒತ್ತಾದ ಗಮನ ಕೊಡುವಂತೆ ನಿಮ್ಮ ಮಿದುಳು ನಿರ್ಬಂಧಿಸುತ್ತದೆ. ಎರಡನೆಯದಾಗಿ, ನಿಮಗೆ ಕಲಿಸುವವರು ಆ ಕೂಡಲೇ ಪ್ರತಿಕ್ರಿಯೆ ತೋರಿಸಿ ಆ ಶಬ್ದವು ಸರಿಯೋ ತಪ್ಪೋ ಎಂದು ತಿಳಿಸುವರು. ಮೂರನೆಯದಾಗಿ, ನೀವು ಹೇಳಿದ ಪದಕ್ಕೆ ನೀವೇ ಕಿವಿಗೊಡುವುದರಿಂದ ನಿಮ್ಮ ಮಿದುಳಿನ ಇತರ ಭಾಗಗಳು ಕೆಲಸಕ್ಕೆ ತೊಡಗುವವು.

ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ: ನೀವು ಜ್ಞಾಪಿಸಿಕೊಳ್ಳಬಯಸುವ ವಸ್ತುವಿನ ಮಾನಸಿಕ ಚಿತ್ರಣವನ್ನು ಮಾಡಿಕೊಳ್ಳಿರಿ. ಅದರ ಚಿತ್ರ ಬರೆಯುವುದು ಇಲ್ಲವೆ ರೇಖಾಚಿತ್ರ ಮಾಡುವುದು ಸಹ ನಿಮಗೆ ಸಹಾಯಕಾರಿ. ಮೌಖಿಕ ಪುನರಾವರ್ತನೆ ಹೇಗೋ ಹಾಗೆಯೇ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದು ಸಹ ನಿಮ್ಮ ಮಿದುಳಿನ ವಿವಿಧ ಭಾಗಗಳನ್ನು ಕೆಲಸಕ್ಕೆ ಹಾಕುತ್ತದೆ. ನಾವು ಜ್ಞಾನೇಂದ್ರಿಯಗಳನ್ನು ಎಷ್ಟು ಹೆಚ್ಚು ಬಳಸುತ್ತೇವೋ ಅಷ್ಟು ಹೆಚ್ಚಾಗಿ ಮಾಹಿತಿಯು ಆಳವಾಗಿ ಬೇರೂರುತ್ತದೆ ಮತ್ತು ಜ್ಞಾಪಕವೂ ವರ್ಧಿಸುತ್ತದೆ.

ಸಂಬಂಧ ಜೋಡಿಸುವುದು: ಒಂದು ಹೊಸ ವಿಷಯವನ್ನು ಕಲಿಯುವಾಗ ಅದನ್ನು ನಿಮಗೆ ಈ ಮೊದಲೇ ತಿಳಿದಿರುವ ವಿಷಯದೊಂದಿಗೆ ಹೇಗೆ ಸಂಬಂಧ ಜೋಡಿಸಬಹುದೆಂದು ನೋಡಿ. ನೀವು ಮನಸ್ಸಿನಲ್ಲಿ ಈ ಮೊದಲೇ ಶೇಖರಿಸಿದ ನೆನಪುಗಳೊಂದಿಗೆ ಹೊಸ ವಿಚಾರಗಳನ್ನು ಜೋಡಿಸುವಾಗ ಮಿದುಳಿಗೆ ಸಂದೇಶ ದೊರಕಿ ಅದು ಮಾಹಿತಿಯನ್ನು ಪರಿವರ್ತಿಸಿಕೊಳ್ಳಲು ಹಾಗೂ ನೆನಪಿಗೆ ತಂದುಕೊಳ್ಳಲು ಸುಲಭಮಾಡುತ್ತದೆ. ಉದಾಹರಣೆಗಾಗಿ, ಒಬ್ಬನ ಹೆಸರನ್ನು ಜ್ಞಾಪಿಸಿಕೊಳ್ಳಲು ಆ ವ್ಯಕ್ತಿಯ ವಿಶಿಷ್ಟ ತೋರಿಕೆಯೊಂದಕ್ಕೆ ಅಥವಾ ಆ ವ್ಯಕ್ತಿಯ ಹೆಸರನ್ನು ಮನಸ್ಸಿಗೆ ತರುವ ಬೇರೆ ಯಾವುದಾದರೂ ವಿಷಯಕ್ಕೆ ಅವನ ಹೆಸರನ್ನು ಜೋಡಿಸಿರಿ. ಆ ಸಂಬಂಧ ಜೋಡಿಸುವ ವಿಷಯವು ಎಷ್ಟು ಹೆಚ್ಚು ಹಾಸ್ಯಕರವಾಗಿ ಇಲ್ಲವೆ ನಗೆಪಾಟಲಾಗಿ ಇರುತ್ತದೋ ಅಷ್ಟೇ ಹೆಚ್ಚು ಸುಲಭವಾಗಿ ನೆನಪಿಗೆ ಬರುತ್ತದೆ. ಚುಟುಕಾಗಿ ಹೇಳುವುದಾದರೆ, ನಾವು ಜ್ಞಾಪಿಸಿಕೊಳ್ಳ ಬಯಸುವ ಜನರ ಕುರಿತು ಮತ್ತು ವಿಷಯಗಳ ಕುರಿತು ಯೋಚನೆ ಮಾಡುವ ಅಗತ್ಯವಿದೆ.

ಜ್ಞಾಪಕಶಕ್ತಿಗಾಗಿ ಅನ್ವೇಷಣೆ (ಇಂಗ್ಲಿಷ್‌) ಎಂಬ ಪುಸ್ತಕ ಹೇಳುವುದು: “ನಾವು ವಿಮಾನವನ್ನು ನಡೆಸುವಾಗ ಹೆಚ್ಚು ಸಮಯ ಸ್ವಯಂಚಾಲಕ ಸಾಧನವನ್ನೇ ಬಳಸಿದ್ದಾದರೆ, ವಾತಾವರಣದ ಪರಿಸ್ಥಿತಿ ಮತ್ತು ಅನುಭವಗಳನ್ನು ಕಾರ್ಯಗತಗೊಳಿಸದಿದ್ದರೆ ನಾವು ಎಲ್ಲಿಗೆ ಹೋಗಿ ಬಂದೆವು ಮತ್ತು ಏನು ಮಾಡಿದೆವು ಎಂಬುದರ ಸಂಪೂರ್ಣ ವಿವರವನ್ನು ನೆನಪಿಸಿಕೊಳ್ಳುವುದು ಕಷ್ಟ.”

ಕ್ರೋಡೀಕರಣ: ಮಾಹಿತಿಯು ಸಂಸ್ಕರಿಸಲ್ಪಟ್ಟು ಮನಸ್ಸಿನೊಳಗೆ ಇಳಿದು ಲೀನವಾಗುವಂತೆ ಸಮಯಕೊಡಿ. ಇದನ್ನು ಮಾಡುವ ಅತ್ಯುತ್ತಮ ವಿಧಾನಗಳಲ್ಲಿ ಒಂದು ಯಾವುದೆಂದರೆ ನೀವು ಕಲಿತಿರುವುದನ್ನು ಇತರರಿಗೆ ಹೇಳುವ ಮೂಲಕ ಪುನರಾವರ್ತಿಸುವುದೇ. ನಿಮಗೊಂದು ಆಸಕ್ತಿಕರ ಅನುಭವವಿದ್ದಲ್ಲಿ, ಇಲ್ಲವೆ ಬೈಬಲ್‌ ಅಥವಾ ಬೈಬಲ್‌ ಅಧ್ಯಯನ ಸಹಾಯಕಗಳಲ್ಲಿ ಯಾವುದೊ ಭಕ್ತಿವರ್ಧಕ ವಿಷಯವನ್ನು ನೀವು ಓದಿರುವಲ್ಲಿ, ಅದನ್ನು ಯಾರೊಂದಿಗಾದರೂ ಹಂಚಿಕೊಳ್ಳಿ. ಈ ರೀತಿಯಲ್ಲಿ ನಿಮಗೂ ಇತರರಿಗೂ ಪ್ರಯೋಜನವಾಗುವುದು. ಅಂದರೆ ನಿಮ್ಮ ಜ್ಞಾಪಕಶಕ್ತಿ ಬಲಗೊಳ್ಳುವುದು ಮತ್ತು ನಿಮ್ಮ ಸ್ನೇಹಿತನಿಗೂ ಉತ್ತೇಜನ ದೊರೆಯುವುದು. ಸಕಾರಣದಿಂದಲೇ, ಪುನರಾವರ್ತನೆಯನ್ನು ಜ್ಞಾಪಕಶಕ್ತಿಯ ಜನನಿ ಎಂದು ಕರೆಯಲಾಗಿದೆ.

ಸ್ಮರಣವರ್ಧನೆ—ಉಪಯುಕ್ತ ಸಾಧನ

ಪುರಾತನ ಕಾಲದ ಗ್ರೀಸ್‌ ಮತ್ತು ರೋಮ್‌ ದೇಶಗಳಲ್ಲಿ, ವಾಗ್ಮಿಗಳು ಯಾವುದೇ ನೋಟ್ಸ್‌ ಇಲ್ಲದೆ ಉದ್ದುದ್ದ ಭಾಷಣಗಳನ್ನು ನೀಡುತ್ತಿದ್ದರು. ಅವರು ಅದನ್ನು ಮಾಡಿದ್ದು ಹೇಗೆ? ಅವರು ಸ್ಮರಣವರ್ಧನೆಗಳನ್ನು ಬಳಸುವ ಮೂಲಕವೇ. ಸ್ಮೃತಿ ಸಾಧನ ಅಥವಾ ಸ್ಮರಣವರ್ಧನೆಯು ವಿಷಯಗಳನ್ನು ನೆನಪಿಗೆ ತರುವ ಒಂದು ಕೌಶಲ ಅಥವಾ ಚಾತುರ್ಯ. ಇದು ಮಾಹಿತಿಯನ್ನು ದೀರ್ಘಾವಧಿಯ ಜ್ಞಾಪಕದಲ್ಲಿ ಶೇಖರಿಸಿಡಲು ಸಹಾಯಮಾಡುತ್ತದೆ ಮತ್ತು ಬೇಕಾದಾಗ ನೆನಪಿಗೆ ತರುತ್ತದೆ.

ಪೂರ್ವಕಾಲದ ಗ್ರೀಕ್‌ ವಾಗ್ಮಿಗಳು ಲೋಕೀ ವಿಧಾನ ಉಪಯೋಗಿಸಿ ಮಾತಾಡಿದರು. ಲೋಕೀ ವಿಧಾನ ಎಂದರೆ ಒಂದು ನಿರ್ದಿಷ್ಟ ಗುರುತು ಅಥವಾ ಸ್ಥಳವನ್ನು ನೆನಪಿನಲ್ಲಿಡುವುದು. ಕ್ರಿ.ಪೂ. 477ರಲ್ಲಿ ಇದನ್ನು ಪ್ರಥಮವಾಗಿ ವರ್ಣಿಸಿದವನು ಕೇಆ ಎಂಬ ಸ್ಥಳದ ಗ್ರೀಕ್‌ ಕವಿ ಸೈಮಾನಡೀಸ್‌ ಎಂಬವನು. ಈ ವಿಧಾನವು ಸಂಘಟನೆ, ಮನಸ್ಸಿನಲ್ಲಿ ಚಿತ್ರೀಕರಣ ಮತ್ತು ಸುಪರಿಚಿತ ವಿಷಯಗಳೊಂದಿಗೆ ಸಂಬಂಧ ಜೋಡಿಸುವುದಾಗಿದೆ. ಉದಾಹರಣೆಗೆ ಒಂದು ಹೆದ್ದಾರಿಯ ಹೆಗ್ಗುರುತು ಅಥವಾ ಒಬ್ಬನ ಮನೆ ಇಲ್ಲವೆ ಕೋಣೆಯಲ್ಲಿರುವ ವಸ್ತುವಿನೊಂದಿಗೆ ಸಂಬಂಧ ಜೋಡಿಸುವುದಾಗಿದೆ. ಈ ಲೋಕೀ ಪ್ರಯೋಗ ವಿಧಾನವನ್ನು ಬಳಸುವವರು ಕಲ್ಪನಾನಡಿಗೆಯಲ್ಲಿ ಹೋಗುತ್ತಾ ತಾವು ಜ್ಞಾಪಿಸಬಯಸುವ ಪ್ರತಿಯೊಂದು ಮಾಹಿತಿ ತುಣುಕನ್ನು ಒಂದು ನಿರ್ದಿಷ್ಟ ವಸ್ತುವಿನೊಂದಿಗೆ ಅಥವಾ ಹೆಗ್ಗುರುತಿನೊಂದಿಗೆ ಸಂಬಂಧ ಜೋಡಿಸುತ್ತಾರೆ. ಅವರು ಮಾಹಿತಿಯನ್ನು ಸ್ಮರಿಸಿಕೊಳ್ಳಲು ಬಯಸುವಾಗ ಪುನಃ ಅದೇ ರೀತಿಯ ಕಲ್ಪನಾನಡಿಗೆಗೆ ತೆರಳುತ್ತಾರೆ.—“ಕಾಲ್ಪನಿಕ ನಡಿಗೆಯಲ್ಲಿ ತೊಡಗಿ” ಎಂಬ ಚೌಕ ನೋಡಿ.

ವಾರ್ಷಿಕವಾಗಿ ನಡೆಯುವ ವಿಶ್ವ ಸ್ಮರಣಶಕ್ತಿ ಪಂದ್ಯದಲ್ಲಿ ಉಚ್ಚಾಂಕ ಗಳಿಸಿ ಗೆದ್ದವರ ಮೇಲೆ ಒಂದು ಸಂಶೋಧನೆ ಮಾಡಲಾಯಿತು. ಅದರಲ್ಲಿ, ಅವರ ಮೇಲ್ಮಟ್ಟದ ಸ್ಮರಣೆಗಳು ಅವರ ಅಸಾಧಾರಣ ಬುದ್ಧಿವಂತಿಯ ಮೇಲೆ ಹೊಂದಿಕೊಂಡಿರಲಿಲ್ಲ ಎಂದು ಕಂಡುಹಿಡಿಯಲಾಯಿತು. ಅಲ್ಲದೆ, ಭಾಗವಹಿಸಿದವರಲ್ಲಿ ಹೆಚ್ಚಿನವರು 40ರಿಂದ 50ರ ವಯಸ್ಸಿನವರು ಆಗಿದ್ದರು. ಹಾಗಾದರೆ, ಅವರ ಪ್ರತಿಭೆಯ ರಹಸ್ಯವೇನಾಗಿತ್ತು? ತಮ್ಮ ಕೌಶಲಕ್ಕೆ ಕಾರಣ ಸ್ಮರಣವರ್ಧನೆಯ ವಿಧಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದ್ದೇ ಆಗಿತ್ತು ಎಂದು ಅನೇಕರು ಹೇಳಿದರು.

ಪದಗಳ ಪಟ್ಟಿಯನ್ನು ಜ್ಞಾಪಿಸಿಕೊಳ್ಳುವ ಅಗತ್ಯ ನಿಮಗಿದೆಯೆ? ಇದಕ್ಕಾಗಿ ಪರಿಣಾಮಕಾರಿ ಸ್ಮರಣವರ್ಧನೆ ವಿಧಾನವು ಪ್ರಥಮಾಕ್ಷರಿ ಆಗಿದೆ ಅಂದರೆ ಪದಸಮೂಹದ ಆರಂಭದ ಅಕ್ಷರವನ್ನು ಅಥವಾ ಅಕ್ಷರಗಳನ್ನು ಜೋಡಿಸಿ ಹೊಸಪದವನ್ನು ರಚಿಸುವುದಾಗಿದೆ. ಅನೇಕ ಉತ್ತರ ಅಮೆರಿಕನರು ಐದು ಮಹಾ ಸರೋವರ (ಗ್ರೇಟ್‌ ಲೇಕ್ಸ್‌)ಗಳಾದ ಹ್ಯುರಾನ್‌, ಆಂಟೇರಿಯೊ, ಮಿಶಿಗನ್‌, ಇರೀ ಮತ್ತು ಸುಪೀರಿಯರ್‌ ಸರೋವರಗಳ ಹೆಸರುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಹೇಗೆಂದರೆ ಅವುಗಳ ಇಂಗ್ಲಿಷ್‌ ಪ್ರಥಮಾಕ್ಷರಿಯಾದ “HOMES” ಅನ್ನು ನೆನಪಿನಲ್ಲಿಡುವ ಮೂಲಕವೇ. ಇದೇ ರೀತಿಯ ಇನ್ನೊಂದು ಸ್ಮರಣ ಸಹಾಯಕವು ಪದ್ಯಬಂಧ. ಇದನ್ನು ಪೂರ್ವಕಾಲದ ಹೀಬ್ರು ಜನರು ವ್ಯಾಪಕವಾಗಿ ಉಪಯೋಗಿಸುತ್ತಿದ್ದರು. ದೃಷ್ಟಾಂತಕ್ಕೆ, ಅನೇಕ ಕೀರ್ತನೆಗಳಲ್ಲಿ ಪ್ರತಿಯೊಂದು ವಚನದ ಇಲ್ಲವೆ ವಚನಗಳ ಗುಂಪಿನ ಪ್ರಥಮ ಪದ ಹೀಬ್ರು ಅಕ್ಷರಮಾಲೆಯ ಅನುಕ್ರಮ ಅಕ್ಷರಗಳಿಂದ ಆರಂಭಗೊಳ್ಳುತ್ತದೆ. (ಕೀರ್ತನೆ 25, 34, 37, 111, 112 ಮತ್ತು 119 ನೋಡಿ) ಈ ಉಪಯುಕ್ತವಾದ ಸ್ಮರಣ ಸಹಾಯಕವು 119ನೆಯ ಕೀರ್ತನೆಯ ಎಲ್ಲ 176 ವಚನಗಳನ್ನೂ ಜ್ಞಾಪಿಸಿಕೊಳ್ಳುವಂತೆ ಹಾಡುಗಾರರಿಗೆ ಸಹಾಯಮಾಡಿತು!

ಹೌದು, ನೀವು ನಿಮ್ಮ ಜ್ಞಾಪಕಶಕ್ತಿಯನ್ನು ಅಭಿವೃದ್ಧಿಗೊಳಿಸಬಲ್ಲಿರಿ. ಅಧ್ಯಯನಗಳು ತೋರಿಸಿರುವಂತೆ, ನಮ್ಮ ಸ್ಮರಣಶಕ್ತಿ ಒಂದು ಸ್ನಾಯುವಿನಂತಿದೆ. ಅದನ್ನು ನಾವು ಎಷ್ಟು ಹೆಚ್ಚು ಉಪಯೋಗಿಸುತ್ತೇವೊ ಅಷ್ಟು ಹೆಚ್ಚು ಶಕ್ತಿಯುತವಾಗುತ್ತದೆ. ವೃದ್ಧಾಪ್ಯದಲ್ಲಿಯೂ ಇದು ಸತ್ಯ! (g 2/09)

[ಪುಟ 27ರಲ್ಲಿರುವ ಚೌಕ]

ಹೆಚ್ಚಿನ ಸಲಹೆಗಳು

ಹೊಸ ಕೌಶಲಗಳನ್ನು ಅಂದರೆ ಒಂದು ಹೊಸ ಭಾಷೆ ಅಥವಾ ಒಂದು ಸಂಗೀತ ಉಪಕರಣವನ್ನು ಕಲಿಯುವ ಮೂಲಕ ನಿಮ್ಮ ಜ್ಞಾಪಕಶಕ್ತಿಯನ್ನು ಚುರುಕುಗೊಳಿಸಿ.

ನಿಮ್ಮ ಗಮನವನ್ನು ಅತಿ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿ.

ಸ್ಮರಣವರ್ಧಕ ಕಾರ್ಯವಿಧಾನಗಳನ್ನು ಕಲಿಯಿರಿ.

ಸಾಕಷ್ಟು ನೀರು ಕುಡಿಯಿರಿ. ದೇಹದಲ್ಲಿ ನೀರಿನಾಂಶದ ಕೊರತೆಯಿಂದ (ನಿರ್ಜಲೀಕರಣ) ಮಾನಸಿಕ ಗಲಿಬಿಲಿ ಉಂಟಾಗಬಲ್ಲದು.

ಸಾಕಷ್ಟು ನಿದ್ದೆ ಪಡೆದುಕೊಳ್ಳಿ. ನಿದ್ದೆಯ ಸಮಯದಲ್ಲಿ ಮಿದುಳು ನೆನಪುಗಳನ್ನು ಶೇಖರಿಸುತ್ತದೆ.

ಅಧ್ಯಯನ ಮಾಡುವಾಗ ಹಾಯಾಗಿರಬೇಕು. ಏಕೆಂದರೆ ಒತ್ತಡವಿರುವಾಗ ನರಗಳು ಕಾರ್ಟಿಸಾಲ್‌ ಹಾರ್ಮೋನನ್ನು ಸ್ರವಿಸುತ್ತವೆ. ಇದರಿಂದ ನರಗಳ ಪ್ರತಿಕ್ರಿಯೆಗೆ ಅಡ್ಡಿಯಾಗುತ್ತದೆ.

ಕುಡಿಕತನ ಮತ್ತು ಧೂಮಪಾನದಿಂದ ದೂರವಿರಿ. ಮದ್ಯಸಾರವು ಅಲ್ಪಾವಧಿಯ ಜ್ಞಾಪಕಶಕ್ತಿಯನ್ನು ಪ್ರತಿಬಂಧಿಸುತ್ತದೆ. ಇದು, ಜ್ಞಾಪಕಶಕ್ತಿಗೆ ಅವಶ್ಯಕವಾದ ತೈಅಮೀನ್‌ ಬಿ ಜೀವಸತ್ತ್ವದ ಕೊರತೆಗೆ ನಡೆಸಬಲ್ಲದು. ಧೂಮಪಾನದಿಂದಾಗಿ ಮಿದುಳಿಗೆ ಸಾಕಷ್ಟು ಆಮ್ಲಜನಕವು ಸಿಕ್ಕುವುದಿಲ್ಲ. *

[ಪಾದಟಿಪ್ಪಣಿ]

^ ಬ್ರೇನ್‌ ಅಂಡ್‌ ಮೈಂಡ್‌ ಎಂಬ ಇಂಗ್ಲಿಷ್‌ ಇಲೆಕ್ಟ್ರಾನಿಕ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯ ಮೇಲೆ ಆಧರಿತ.

[ಪುಟ 14ರಲ್ಲಿರುವ ಚೌಕ/ಚಿತ್ರಗಳು]

ಕಾಲ್ಪನಿಕ ನಡಿಗೆಯಲ್ಲಿ ತೊಡಗಿ

ದಿನಸಿ ಪಟ್ಟಿಯಲ್ಲಿರುವ ಬ್ರೆಡ್‌, ಮೊಟ್ಟೆ, ಹಾಲು ಮತ್ತು ಬೆಣ್ಣೆಯೇ ಮುಂತಾದ ವಸ್ತುಗಳನ್ನು ನೀವು ಹೇಗೆ ನೆನಪಿಸಿಕೊಳ್ಳುವಿರಿ? ಕಾಲ್ಪನಿಕವಾಗಿ ನಿಮ್ಮ ಕೋಣೆಯಲ್ಲಿ ನಡೆದಾಡುವಾಗ ಲೋಕೀ ವಿಧಾನವನ್ನು ಉಪಯೋಗಿಸುತ್ತ ಅವನ್ನು ಊಹಿಸಿಕೊಳ್ಳಬಹುದು.

ಚಿತ್ರಿಸಿಕೊಳ್ಳಿ ನಿಮ್ಮ ಕುರ್ಚಿಯ ಮೇಲಿರುವ ದಿಂಬನ್ನು ಬ್ರೆಡ್‌ ಎಂಬುದಾಗಿ

ಮೊಟ್ಟೆಗಳಿಗೆ ದೀಪದ ಕೆಳಗೆ ಕಾವು ಸಿಗುತ್ತಿದೆ ಎಂದು

ನಿಮ್ಮ ಗೋಲ್ಡ್‌ಫಿಷ್‌ ಹಾಲಿನ ಗಾಜು ಪಾತ್ರೆಯಲ್ಲಿ ಈಜುತ್ತಿದೆ ಎಂಬುದಾಗಿ

ಟಿವಿಯ ಸ್ಕ್ರೀನ್‌ ಮೇಲೆಲ್ಲಾ ಬೆಣ್ಣೆ ಸವರಿದೆ ಎಂದು

ಹಾಸ್ಯಮಯ ಅಥವಾ ವಿಚಿತ್ರವಾಗಿ ಚಿತ್ರಿಸಿಕೊಂಡಷ್ಟೂ ನಿಮ್ಮ ಜ್ಞಾಪಕವು ಹೆಚ್ಚು ವರ್ಧಿಸುತ್ತದೆ! ಖರೀದಿಗೆ ಹೋದಾಗ ನೀವು ಕೋಣೆಯಲ್ಲಿ ಚಿತ್ರಿಸಿಕೊಂಡದ್ದನ್ನು ಸ್ಮರಣೆಗೆ ತನ್ನಿ.

[ಪುಟ 16ರಲ್ಲಿರುವ ಚೌಕ]

ಮರೆತುಬಿಡುತ್ತೀರೋ? ಸಂತೋಷಪಡಿ!

ಮುಖ್ಯ ಅಮುಖ್ಯವಾದ ಪ್ರತಿಯೊಂದೂ ವಿಷಯ ನಿಮಗೆ ನೆನಪಿರುವುದಾದರೆ ನಿಮ್ಮ ಜೀವನ ಹೇಗಿದ್ದೀತೆಂದು ಭಾವಿಸಿ. ನಿಮ್ಮ ಮನಸ್ಸು ಅಲ್ಲಸಲ್ಲದ ವಿಷಯಗಳಿಂದ ತುಂಬಿ ಗೊಂದಲದಲ್ಲಿ ಮುಳುಗಿಹೋಗಿರುತ್ತಿತ್ತು ಅಲ್ಲವೆ? ಒಬ್ಬಾಕೆ ತನ್ನ ಜೀವನದಲ್ಲಿ ಸಂಭವಿಸಿರುವ ಹೆಚ್ಚುಕಡಿಮೆ ಎಲ್ಲವನ್ನೂ ಮರುಜ್ಞಾಪಿಸಿಕೊಳ್ಳುತ್ತಿದ್ದಳು. ನ್ಯೂ ಸೈಂಟಿಸ್ಟ್‌ ಪತ್ರಿಕೆ ಅವಳ ಕುರಿತು ಹೇಳುವುದು: “ಒಂದೂ ಬಿಡದೆ ಎಲ್ಲಾ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದ ಅವಳು ಅದನ್ನು ‘ಒಂದು ನಿರಂತರವಾದ, ಅಂಕೆಯಿಲ್ಲದ, ಪೂರ್ತಿ ಸುಸ್ತುಗೊಳಿಸುವ ಹೊರೆ’ ಎಂದು ವಿವರಿಸಿದಳು.” ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಈ ಸಮಸ್ಯೆ ಇಲ್ಲದಿರುವುದಕ್ಕೆ ನಾವು ಆಭಾರಿಗಳು. ಏಕೆಂದರೆ ಬೇಡವಾದ ಇಲ್ಲವೆ ಹಳೆತಾದ ಹಳೇ ನೆನಪುಗಳನ್ನು ಕಿತ್ತುಹಾಕುವ ಸಾಮರ್ಥ್ಯ ನಮ್ಮ ಮನಸ್ಸಿಗಿದೆ ಎಂದು ಸಂಶೋಧಕರು ನಂಬುತ್ತಾರೆ. ನ್ಯೂ ಸೈಂಟಿಸ್ಟ್‌ ಪತ್ರಿಕೆ ಹೇಳುವುದು: “ಬೇಡವಾದ ವಿಷಯಗಳನ್ನು ಮರೆತು ಬಿಡುವುದರಿಂದ ನಮ್ಮ ಜ್ಞಾಪಕಶಕ್ತಿಯು ಪೂರ್ಣವಾಗಿ ಕೆಲಸ ಮಾಡಲು ಸನ್ನದ್ಧ. ಬೇಕಾದದ್ದನ್ನು ನಾವು ಮರೆತುಬಿಡುವಲ್ಲಿ ನೆನಪನ್ನು ಅಳಿಸುವ ಮಿದುಳಿನ ಆ ಸಾಮರ್ಥ್ಯವು ಹೆಚ್ಚು ಚುರುಕಾಗಿ ಕೆಲಸಮಾಡುತ್ತಿದೆ ಎಂದಷ್ಟೇ.”