ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲಿಯಾಸ್‌ ಹಟರ್‌ ಮತ್ತು ಅವರ ಅದ್ಭುತ ಹೀಬ್ರು ಬೈಬಲ್‌ಗಳು

ಎಲಿಯಾಸ್‌ ಹಟರ್‌ ಮತ್ತು ಅವರ ಅದ್ಭುತ ಹೀಬ್ರು ಬೈಬಲ್‌ಗಳು

ನಿಮಗೆ ಮೂಲ ಹೀಬ್ರು ಭಾಷೆಯ ಬೈಬಲನ್ನು ಓದಲು ಆಗುತ್ತಾ? ಬಹುಶಃ ಆಗದಿರಬಹುದು ಅಥವಾ ನಿಮ್ಮ ಜೀವನದಲ್ಲಿ ಹೀಬ್ರು ಬೈಬಲನ್ನೇ ನೋಡದಿರಬಹುದು. ಆದರೆ ಎಲಿಯಾಸ್‌ ಹಟರ್‌ರವರ ಬಗ್ಗೆ ಮತ್ತು ಅವರ ಬೈಬಲ್‌ ಭಾಷಾಂತರಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಬಳಿ ಇರುವ ಯಾವುದೇ ಭಾಷೆಯ ಬೈಬಲ್‌ ಮೇಲೆ ಗೌರವ ಹೆಚ್ಚಾಗುತ್ತದೆ. ಹಟರ್‌ 16ನೇ ಶತಮಾನದ ವಿದ್ವಾಂಸರಾಗಿದ್ದರು ಹಾಗೂ ಹೀಬ್ರು ಭಾಷೆಯಲ್ಲಿ ಬೈಬಲಿನ ಎರಡು ಆವೃತ್ತಿಗಳನ್ನು ಪ್ರಕಾಶಿಸಿದರು.

1553ರಲ್ಲಿ ಎಲಿಯಾಸ್‌ ಹಟರ್‌ರವರು ಗೊರ್ಲಿಟ್ಸ್‌ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದರು. ಇದು ಜರ್ಮನಿಗೆ ಸೇರಿದ್ದು, ಪೊಲೆಂಡ್‌ ಮತ್ತು ಚೆಕ್‌ ಗಣರಾಜ್ಯದ ಈಗಿನ ಗಡಿಭಾಗದಲ್ಲಿದೆ. ಇವರು ಜೆನ ಪಟ್ಟಣದಲ್ಲಿನ ಲೂಥರನ್‌ ವಿಶ್ವವಿದ್ಯಾನಿಲಯದಲ್ಲಿ ಏಷ್ಯಾದ ಭಾಷೆಗಳನ್ನು ಅಧ್ಯಯನ ಮಾಡಿದರು. ಕೇವಲ 24 ವರ್ಷವಿರುವಾಗಲೇ ಲೈಪ್‌ಜಿಗ್‌ನಲ್ಲಿ ಹೀಬ್ರು ಭಾಷೆಯ ಉಪನ್ಯಾಸಕರಾದರು. ಸಮಯಾನಂತರ, ಶಿಕ್ಷಣ ವ್ಯವಸ್ಥೆಯ ಸುಧಾರಕರಾಗಿ ನ್ಯೂರೆಂಬರ್ಗ್‌ನಲ್ಲಿ ಸ್ವಂತ ಶಾಲೆಯನ್ನು ಸ್ಥಾಪಿಸಿದರು. ಕೇವಲ ನಾಲ್ಕು ವರ್ಷಗಳಲ್ಲೇ ಇವರು ತಮ್ಮ ವಿದ್ಯಾರ್ಥಿಗಳಿಗೆ ಹೀಬ್ರು, ಗ್ರೀಕ್‌, ಲ್ಯಾಟಿನ್‌ ಮತ್ತು ಜರ್ಮನ್‌ ಭಾಷೆಗಳನ್ನು ಕಲಿಸುತ್ತಿದ್ದರು. ಆಗಿನ ಕಾಲದಲ್ಲಿ ಬೇರೆ ಯಾವ ಶಾಲೆ ಅಥವಾ ವಿಶ್ವವಿದ್ಯಾನಿಲಯದಲ್ಲೂ ಇದು ಕಂಡು ಕೇಳದ ವಿಷಯವಾಗಿತ್ತು.

“ಆವೃತ್ತಿಯ ವಿಶೇಷತೆ”

1587ರಲ್ಲಿ ಹಟರ್‌ರವರು ಪ್ರಕಾಶಿಸಿದ ಹೀಬ್ರು ಬೈಬಲಿನ ಮುಖಪುಟ

1587ರಲ್ಲಿ ಹಟರ್‌ರವರು ಬೈಬಲಿನ ಹಳೇ ಒಡಂಬಡಿಕೆಯ ಹೀಬ್ರು ಆವೃತ್ತಿಯನ್ನು ಪ್ರಕಾಶಿಸಿದರು. ಈ ಆವೃತ್ತಿಗೆ ಯೆಶಾಯ 35:8​ನ್ನು ಆಧರಿಸಿ ಡೆರೆಖ್‌ ಹಾ-ಕೊಡೇಶ್‌ ಎಂಬ ಹೆಸರನ್ನಿಟ್ಟರು. ಇದರ ಅರ್ಥ “ಪರಿಶುದ್ಧ ಮಾರ್ಗ” ಎಂದಾಗಿದೆ. ಈ ಪುಸ್ತಕದ ಅದ್ಭುತ ಅಕ್ಷರಶೈಲಿಯ ಬಗ್ಗೆ ಏನು ಹೇಳಲಾಗಿದೆಯೆಂದರೆ, “ಇದರಲ್ಲಿರುವ ಪ್ರತಿಯೊಂದು ವಿಷಯವೂ ಈ ಆವೃತ್ತಿಯ ವಿಶೇಷತೆಯನ್ನು ಸಾರಿ ಹೇಳುತ್ತದೆ.” ಈ ಬೈಬಲಿನಲ್ಲಿದ್ದಂಥ ವಿಶೇಷತೆಯಾದರೂ ಏನು? ಹೀಬ್ರು ಭಾಷೆಯನ್ನು ಕಲಿಸಲು ವಿದ್ಯಾರ್ಥಿಗಳಿಗೆ ಈ ಬೈಬಲನ್ನೇ ಉಪಯೋಗಿಸುತ್ತಿದ್ದರು.

ಹೀಬ್ರು ಕಲಿಯುವವರು ಹೀಬ್ರು ಬೈಬಲನ್ನು ಓದುವಾಗ ಎದುರಿಸುತ್ತಿದ್ದ ಎರಡು ಸವಾಲುಗಳನ್ನು ಗಮನಿಸೋಣ. ಇದರಿಂದ, ಹಟರ್‌ರವರ ಹೀಬ್ರು ಬೈಬಲ್‌ ಯಾಕಷ್ಟು ವಿಶೇಷ ಎಂದು ಗೊತ್ತಾಗುತ್ತದೆ. ಮೊದಲನೆಯ ಸವಾಲು ಏನೆಂದರೆ, ಆ ಮೂಲ ಹೀಬ್ರು ಬೈಬಲಿನಲ್ಲಿ ಭಿನ್ನವಾದ ಮತ್ತು ಅಪರಿಚಿತ ಅಕ್ಷರಗಳನ್ನು ಉಪಯೋಗಿಸಲಾಗುತ್ತಿತ್ತು. ಎರಡನೆಯದ್ದು, ಮೂಲ ಪದದ ಆರಂಭ ಹಾಗೂ ಕೊನೆಯಲ್ಲಿ ಬೇರೆ ಅಕ್ಷರಗಳನ್ನು ಸೇರಿಸುತ್ತಿದ್ದರು. ಇದರಿಂದ ಮೂಲ ಪದವನ್ನು ಕಂಡುಹಿಡಿಯಲು ಕಷ್ಟವಾಗುತ್ತಿತ್ತು. ಉದಾಹರಣೆಗೆ, נפשׁ (ಲಿಪ್ಯಂತರದಲ್ಲಿ ನೆಫೆಶ್‌) ಎಂಬ ಹೀಬ್ರು ಪದವನ್ನು ಗಮನಿಸಿ. ಇದರ ಅರ್ಥ “ಆತ್ಮ” ಎಂದಾಗಿದೆ. ಯೆಹೆಜ್ಕೇಲ 18:4​ರಲ್ಲಿ ಇರುವ ಈ ಪದದ ಆರಂಭದಲ್ಲಿ ה (ಹಾ) ಎಂಬ ಅಕ್ಷರವನ್ನು ಸೇರಿಸಲಾಗಿದೆ. ಇದು ನಿರ್ದೇಶಸೂಚಿಯಾಗಿದ್ದು, ಈ ಅಕ್ಷರವನ್ನು ನೆಫೆಶ್‌ನೊಂದಿಗೆ ಜೋಡಿಸಿದಾಗ הנפשׁ (ಹಾನ್ನೆಫೆಶ್‌) ಎಂದಾಗುತ್ತದೆ. ಹೊಸದಾಗಿ ಈ ಭಾಷೆಯನ್ನು ಕಲಿಯುವವರಿಗೆ הנפשׁ (ಹಾನ್ನೆಫೆಶ್‌) ಎನ್ನುವುದು ಒಂದು ಹೊಸ ಪದವಾಗಿ ಕಂಡುಬರುತ್ತಿತ್ತು. ಆದ್ದರಿಂದ ಅವರಿಗೆ ಮೂಲ ಪದವನ್ನು ಗುರುತಿಸಲು ಕಷ್ಟವಾಗುತ್ತಿತ್ತು.

ತನ್ನ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿಕ್ಕಾಗಿಯೇ ಹಟರ್‌ರವರು ಒಂದು ವಿಶೇಷ ಮುದ್ರಣ ತಂತ್ರವನ್ನು ಉಪಯೋಗಿಸಿದರು.  ಇವರು ಹೀಬ್ರುವಿನ ಮೂಲಪದಗಳನ್ನು ದಪ್ಪಕ್ಷರದಲ್ಲಿ ಮುದ್ರಿಸಿ, ಮೂಲಪದದ ಆರಂಭ ಮತ್ತು ಕೊನೆಯಲ್ಲಿ ಸೇರಿಸುವ ಪದಗಳನ್ನು ತೆಳುವಾಗಿ ಮುದ್ರಿಸಿದನು. ಈ ಒಂದು ಸರಳ ಸಾಧನ ವಿದ್ಯಾರ್ಥಿಗಳಿಗೆ ಹೀಬ್ರು ಭಾಷೆಯ ಮೂಲಪದವನ್ನು ಸುಲಭವಾಗಿ ಕಂಡುಹಿಡಿಯಲು ಮತ್ತು ಭಾಷೆ ಕಲಿಯಲು ಸಹಾಯ ಮಾಡಿತು. ನ್ಯೂ ವಲ್ಡ್‌ ಟ್ರಾನ್ಸಲೇಷನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿತ್‌ ರೆಫರೆನ್ಸಸ್‌ ಸಹ ಪಾದಟಿಪ್ಪಣಿಗಳಲ್ಲಿ ಈ ಸರಳ ವಿಧಾನವನ್ನೇ ಬಳಸಿದೆ. * ಲಿಪ್ಯಂತರಗೊಂಡ ಮೂಲಪದ ದಪ್ಪಕ್ಷರದಲ್ಲಿದ್ದು ಈ ಪದದ ಆರಂಭ ಮತ್ತು ಕೊನೆಯಲ್ಲಿ ಸೇರುವ ಇತರ ಪದಗಳು ತೆಳು ಅಕ್ಷರದಲ್ಲಿವೆ. ಹಟರ್‌ರವರ ಹೀಬ್ರು ಬೈಬಲಿನ ಯೆಹೆಜ್ಕೇಲ 18:4​ರಲ್ಲಿ ಮತ್ತು ರೆಫರೆನ್ಸ್‌ ಬೈಬಲ್‌ನ ಅದೇ ವಚನದ ಪಾದಟಿಪ್ಪಣಿಯಲ್ಲಿ ಉಪಯೋಗಿಸಲಾದ ಅಕ್ಷರ ಶೈಲಿಯನ್ನು ಚಿತ್ರಗಳು ತೋರಿಸುತ್ತವೆ.

‘ಹೊಸ ಒಡಂಬಡಿಕೆಯ’ ಹೀಬ್ರು ಆವೃತ್ತಿ

ಹಟರ್‌ ಹೊಸ ಒಡಂಬಡಿಕೆಯನ್ನು ಅಥವಾ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥವನ್ನು ಸಹ ಸುಮಾರು 12 ಭಾಷೆಗಳಲ್ಲಿ ಮುದ್ರಿಸಿದರು. 1599ರಲ್ಲಿ ನ್ಯೂರೆಂಬರ್ಗ್‌ನಲ್ಲಿ ಪ್ರಕಾಶಿಸಲಾದ ಈ ಆವೃತ್ತಿಯನ್ನು ನ್ಯೂರೆಂಬರ್ಗ್‌ ಪಾಲಿಗ್ಲಾಟ್‌ ಎಂದು ಕರೆಯಲಾಗುತ್ತದೆ. ಇದರಲ್ಲಿ ಹೊಸ ಒಡಂಬಡಿಕೆಯ ಹೀಬ್ರು ಭಾಷಾಂತರವನ್ನೂ ಸೇರಿಸಿಕೊಳ್ಳಬೇಕೆಂಬ ಆಸೆ ಹಟರ್‌ರವರಿಗಿತ್ತು. ಆದರೆ ಹೀಬ್ರು ಭಾಷೆಯ ಹೊಸ ಒಡಂಬಡಿಕೆಯನ್ನು “ಹಣ ಕೊಟ್ಟು ತೆಗೆದುಕೊಳ್ಳಲು ತಯಾರಿದ್ದರೂ,” ಅದಕ್ಕಾಗಿ ಹುಡುಕುತ್ತಾ ಹೋಗಿದ್ದರೆ ಅದು ವ್ಯರ್ಥವಾಗುತ್ತಿತ್ತು ಎಂದು ಅವರು ಹೇಳಿದರು. * ಆದ್ದರಿಂದ ಹೊಸ ಒಡಂಬಡಿಕೆಯನ್ನು ಸ್ವತಃ ಅವರೇ ಗ್ರೀಕ್‌ನಿಂದ ಹೀಬ್ರು ಭಾಷೆಗೆ ಭಾಷಾಂತರಿಸಲು ನಿರ್ಧರಿಸಿದರು. ತನ್ನ ಬೇರೆಲ್ಲ ಕೆಲಸವನ್ನು ಪಕ್ಕಕ್ಕಿಟ್ಟು ಕೇವಲ ಒಂದು ವರ್ಷದಲ್ಲೇ ಅವರು ಅದನ್ನು ಭಾಷಾಂತರಿಸಿದರು!

ಹಟರ್‌ರವರ ಹೊಸ ಒಡಂಬಡಿಕೆಯ ಹೀಬ್ರು ಭಾಷಾಂತರ ಹೇಗಿತ್ತು? 19 ನೇ ಶತಮಾನದಲ್ಲಿ ಹೀಬ್ರು ವಿದ್ವಾಂಸರಾದ ಫ್ರಾಂಟ್ಸ್‌ ಡೆಲಿಟ್ಶ್‌ ಬರೆದದ್ದೇನೆಂದರೆ, “ಅವರಿಗೆ ಹೀಬ್ರು ಭಾಷೆಯ ಮೇಲೆ ಎಷ್ಟು ಹಿಡಿತ ಇತ್ತು ಎಂದು ಅವರ ಹೀಬ್ರು ಭಾಷಾಂತರದಿಂದ ಗೊತ್ತಾಗುತ್ತದೆ. ಅದು ಕ್ರೈಸ್ತರ ಮಧ್ಯೆಯೂ ಅಪರೂಪ. ಅವರು ಎಲ್ಲಾ ಕಡೆಗಳಲ್ಲೂ ಸರಿಯಾದ ಪದಗಳನ್ನು ಉಪಯೋಗಿಸಿದ್ದಾರೆ. ಹಾಗಾಗಿ, ಇವತ್ತಿಗೂ ಆ ಭಾಷಾಂತರವನ್ನು ನೋಡುವುದು ಉಪಯುಕ್ತವಾಗಿದೆ.”

ಮರೆಯಲಾಗದ ಉಡುಗೊರೆ

ಹಟರ್‌ನ ಆವೃತ್ತಿಗಳು ಚೆನ್ನಾಗಿ ಮಾರಾಟವಾಗದ ಕಾರಣ ಅವನಿಗೆ ಅಷ್ಟೇನೂ ಹಣ ಸಿಗಲಿಲ್ಲ. ಆದರೂ ಅವನು ಮಾಡಿದ ಕೆಲಸ ತುಂಬ ಪ್ರಾಮುಖ್ಯ ಮತ್ತು ಇವತ್ತಿಗೂ ಬಹಳಷ್ಟು ಮಹತ್ವವನ್ನು ಹೊಂದಿದೆ. ಉದಾಹರಣೆಗೆ, 1661ರಲ್ಲಿ ವಿಲಿಯಮ್‌ ರಾಬರ್ಟ್‌ಸನ್‌ರವರು ಮತ್ತು 1798ರಲ್ಲಿ ರಿಚರ್ಡ್‌ ಕ್ಯಾಡಿಕ್‌ರವರು ಹಟರ್‌ರವರ ಹೊಸ ಒಡಂಬಡಿಕೆಯ ಹೀಬ್ರು ಭಾಷಾಂತರವನ್ನು ಪರಿಷ್ಕರಿಸಿ ಮರುಮುದ್ರಿಸಿದರು. ಹಟರ್‌ರವರು ಮೂಲ ಹೊಸ ಒಡಂಬಡಿಕೆಯನ್ನು ಗ್ರೀಕ್‌ ಭಾಷೆಯಿಂದ ಹೀಬ್ರು ಭಾಷೆಗೆ ಭಾಷಾಂತರಿಸುವಾಗ ಒಂದು ಪ್ರಾಮುಖ್ಯ ವಿಷಯವನ್ನು ಮಾಡಿದರು. ಹಳೇ ಒಡಂಬಡಿಕೆಯಿಂದ ಉದ್ಧರಿಸಲಾದ ವಚನಗಳಲ್ಲಿ ಎಲ್ಲೆಲ್ಲಿ ಯೆಹೋವ ಎಂಬ ಹೆಸರಿತ್ತೋ ಅಲ್ಲೆಲ್ಲಾ ಆ ಹೆಸರನ್ನೇ ಉಪಯೋಗಿಸಿದರು. ಜೊತೆಗೆ, ಕಿರೀಯಾಸ್‌ (ಕರ್ತ) ಮತ್ತು ತಿಯೋಸ್‌ (ದೇವರು) ಎಂಬ ಬಿರುದುಗಳನ್ನು ಸೂಕ್ತವಾಗಿರುವಾಗೆಲ್ಲಾ “ಯೆಹೋವ” (יהוה, JHVH) ಎಂದು ಭಾಷಾಂತರಿಸಿದರು. ಇದು ತುಂಬ ಆಸಕ್ತಿಕರ ವಿಷಯ, ಯಾಕೆಂದರೆ ಹಲವಾರು ಭಾಷಾಂತರಗಳು ಹೊಸ ಒಡಂಬಡಿಕೆಯಿಂದ ಯೆಹೋವ ಎಂಬ ಹೆಸರನ್ನು ತೆಗೆದು ಹಾಕಿವೆ. ಆದರೆ ಹಟರ್‌ ದೇವರ ವೈಯಕ್ತಿಕ ಹೆಸರನ್ನು ಪುನಸ್ಥಾಪಿಸಿದ್ದಾರೆ.

ಮುಂದಿನ ಸಲ ನೀವು ಹೊಸ ಒಡಂಬಡಿಕೆಯಲ್ಲಿ ಯೆಹೋವ ಎಂಬ ದೇವರ ಹೆಸರನ್ನು ಅಥವಾ ರೆಫರೆನ್ಸ್‌ ಬೈಬಲ್‌ನ ಪಾದಟಿಪ್ಪಣಿಯನ್ನು ನೋಡಿದಾಗ ಎಲಿಯಾಸ್‌ ಹಟರ್‌ರವರ ಕೆಲಸವನ್ನು ಮತ್ತು ಅವರ ಅದ್ಭುತ ಬೈಬಲ್‌ ಭಾಷಾಂತರಗಳನ್ನು ನೆನಪಿಸಿಕೊಳ್ಳಿ.

^ ಪ್ಯಾರ. 7 ಯೆಹೆಜ್ಕೇಲ 18:4​ರ ಎರಡನೇ ಪಾದಟಿಪ್ಪಣಿಯನ್ನು ಮತ್ತು ರೆಫರೆನ್ಸ್‌ ಬೈಬಲ್‌ನ ಅಪೆಂಡಿಕ್ಸ್‌ 3Bಯನ್ನು ನೋಡಿ.

^ ಪ್ಯಾರ. 9 ಈಗಾಗಲೇ ಹೊಸ ಒಡಂಬಡಿಕೆಯನ್ನು ಕೆಲವು ವಿದ್ವಾಂಸರು ಹೀಬ್ರು ಭಾಷೆಗೆ ಭಾಷಾಂತರಿಸಿದ್ದರು. ಉದಾಹರಣೆಗೆ, 1360ರಲ್ಲಿ ಸೈಮನ್‌ ಆಟೂಮಾನೊಸ್‌ ಎಂಬ ಬೈಜನ್‌ಟೈನ್‌ ಸನ್ಯಾಸಿ ಇದನ್ನು ಭಾಷಾಂತರಿಸಿದ್ದರು. 1565ರಲ್ಲಿ ಜರ್ಮನ್‌ ವಿದ್ವಾಂಸ ಆಸ್ವಾಲ್ಟ್‌ ಶ್ರೆಕನ್‌ಫುಕ್ಸ್‌ ಸಹ ಭಾಷಾಂತರ ಮಾಡಿದ್ದರು. ಆದರೆ ಇವರ ಭಾಷಾಂತರಗಳನ್ನು ಎಂದೂ ಪ್ರಕಾಶಿಸಿರಲಿಲ್ಲ ಮತ್ತು ಈಗ ಅವು ಕಳೆದುಹೋಗಿವೆ.