ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟಗಳು—ದೇವರು ಕೊಡುವ ಶಿಕ್ಷೆಯಾ?

ಕಷ್ಟಗಳು—ದೇವರು ಕೊಡುವ ಶಿಕ್ಷೆಯಾ?

ಲೂಜಿಯಾಳಿಗೆ ಎಡಗಾಲು ಕುಂಟು. ಚಿಕ್ಕವಳಿದ್ದಾಗ ಆಕೆಗೆ ಪೋಲಿಯೋ ಕಾಯಿಲೆ ಬಂತು. ಇದು ದೇಹದ ನರವ್ಯೂಹದ ಮೇಲೆ ದಾಳಿಮಾಡುವ ಸೋಂಕು ರೋಗವಾಗಿದೆ. ಲೂಜಿಯಾ 16 ವರ್ಷದವಳಾಗಿದ್ದಾಗ ಆಕೆಯ ಯಜಮಾನಿ ಆಕೆಗೆ, “ನೀನು ಅಮ್ಮನ ಮಾತು ಕೇಳದೇ ಇದ್ದದ್ದಕ್ಕೆ ಮತ್ತು ಅವರೊಂದಿಗೆ ಒರಟಾಗಿ ನಡೆದುಕೊಂಡದಕ್ಕೆ ದೇವರು ನಿನಗೆ ಹೀಗೆ ಲಕ್ವಬರಿಸಿ ಶಿಕ್ಷೆಕೊಟ್ಟಿದ್ದಾನೆ” ಎಂದು ಹೇಳಿದಳು. ಇದು ನಡೆದು ಹಲವಾರು ವರ್ಷಗಳೇ ದಾಟಿದರೂ ಆಗ ತನ್ನ ಮನಸ್ಸು ಹೇಗೆ ಚೂರುಚೂರಾಯಿತು ಎನ್ನುವುದು ಲೂಜಿಯಾಳಿಗೆ ಈಗಲೂ ನೆನಪಿದೆ.

ಡ್ಯಾಮರಿಸ್‌ಳಿಗೆ ಮಿದುಳಿನ ಕ್ಯಾನ್ಸರ್‌ ಇದೆಯೆಂದು ತಿಳಿದಾಗ, ಆಕೆಯ ತಂದೆ ಅವಳಿಗೆ, “ನಿನಗೆ ಈ ತರ ಕಾಯಿಲೆ ಬರಬೇಕಂದ್ರೆ ನೀನು ಏನು ಮಾಡಿದೆ? ಖಂಡಿತ ಏನೋ ತುಂಬ ಕೆಟ್ಟ ಕೆಲಸ ಮಾಡಿರಬೇಕು. ಅದಕ್ಕೆ ದೇವರು ನಿನಗೆ ಶಿಕ್ಷೆ ಕೊಡುತ್ತಿದ್ದಾನೆ” ಅಂತ ಹೇಳಿದ. ಅವನ ಮಾತು ಕೇಳಿ ಡ್ಯಾಮರಿಸಳ ಎದೆ ಒಡೆದುಹೋಯಿತು.

ಕಾಯಿಲೆಗಳು ದೇವರು ಕೊಡುವ ಶಿಕ್ಷೆ ಎಂಬ ಮಾತಿಗೆ ದೀರ್ಘ ಇತಿಹಾಸವಿದೆ. ಯೇಸುವಿನ ಕಾಲದಲ್ಲಿ ಅನೇಕರು, “ಕಾಯಿಲೆಗೆ ಕಾರಣ ರೋಗಿಯ ಅಥವಾ ಅವನ ಸಂಬಂಧಿಕರ ಪಾಪ ಆಗಿದೆ. ಏಕೆಂದರೆ ಆ ಪಾಪಕ್ಕೆ ಈ ಕಾಯಿಲೆ ಶಿಕ್ಷೆಯಾಗಿದೆ” ಎಂದು ನಂಬುತ್ತಿದ್ದರು ಎನ್ನುತ್ತದೆ ಬೈಬಲ್‌ ಕಾಲಗಳ ದೇಶಗಳಲ್ಲಿನ ಶಿಷ್ಟಾಚಾರಗಳು ಮತ್ತು ಪದ್ಧತಿಗಳು (ಇಂಗ್ಲಿಷ್‌) ಎಂಬ ಪುಸ್ತಕ. ಮದ್ಯ ಯುಗಗಳಲ್ಲಿ “ಕೆಲವು ಜನರು ತಮ್ಮ ಪಾಪಗಳಿಗೆ ಶಿಕ್ಷೆಯಾಗಿ ದೇವರು ಪ್ಲೇಗ್‌ ರೋಗಗಳನ್ನು ತರುತ್ತಾನೆಂದು ನಂಬುತ್ತಿದ್ದರು” ಎನ್ನುತ್ತದೆ ಮಧ್ಯಯುಗದ ಔಷಧ ಮತ್ತು ಪ್ಲೇಗ್‌ (ಇಂಗ್ಲಿಷ್‌) ಎಂಬ ಪುಸ್ತಕ. ಹಾಗಾದರೆ, 14​ನೇ ಶತಮಾನದಲ್ಲಿ ಯೂರೋಪಿನಲ್ಲಿ ಪ್ಲೇಗ್‌ನಿಂದಾಗಿ (ಮಾರಕ ವ್ಯಾಧಿ) ಮಿಲಿಯಗಟ್ಟಲೆ ಜನರು ಸತ್ತಾಗ ಅದು ದುಷ್ಟ ಜನರ ಮೇಲೆ ದೇವರು ತಂದ ನ್ಯಾಯ ದಂಡನೆ ಆಗಿತ್ತಾ? ಅಥವಾ ಆಮೇಲೆ ವೈದ್ಯಕೀಯ ಸಂಶೋಧಕರು ಕಂಡುಹಿಡಿದಂತೆ ಅದಕ್ಕೆ ಕಾರಣ ಬ್ಯಾಕ್ಟೀರಿಯಾದಿಂದಾದ ಸೋಂಕು ಆಗಿತ್ತಾ? ಕೆಲವರ ಮನಸ್ಸಲ್ಲಿ ಈ ಪ್ರಶ್ನೆ ಇರಬಹುದು: ಜನರ ಪಾಪಗಳಿಗೆ ಶಿಕ್ಷೆಕೊಡಲಿಕ್ಕೆ ದೇವರು ಕಾಯಿಲೆ ಬರಿಸುತ್ತಾನೆಂಬ ಮಾತು ನಿಜವೇ? *

ಯೋಚಿಸಿ: ಕಾಯಿಲೆ ಮತ್ತು ಕಷ್ಟಗಳನ್ನು ದೇವರು, ಒಬ್ಬನು ಮಾಡಿದ ತಪ್ಪಿಗೆ ಶಿಕ್ಷೆಯಾಗಿ ಕೊಟ್ಟಿದ್ದಲ್ಲಿ, ಆತನ ಮಗನಾದ ಯೇಸು ಕಾಯಿಲೆ ಇದ್ದವರನ್ನು ಯಾಕೆ ಗುಣಪಡಿಸಿದನು? ಹಾಗೆ ಮಾಡುವುದು ದೇವರ ನ್ಯಾಯ ನೀತಿಗೆ ಅಡ್ಡಬಂದ ಹಾಗೆ ಆಗುತ್ತಿತ್ತಲ್ಲವೇ? (ಮತ್ತಾಯ 4:23, 24) ಯೇಸು ಯಾವತ್ತೂ ದೇವರ ಕೆಲಸಕ್ಕೆ ವಿರುದ್ಧವಾಗಿ ನಡೆಯುವಂಥವನಲ್ಲ. ಅವನೇ ಹೀಗಂದಿದ್ದನು: ‘ನಾನು ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುತ್ತೇನೆ’ ಮತ್ತು “ತಂದೆಯು ನನಗೆ ಮಾಡಲು ಆಜ್ಞಾಪಿಸಿದ್ದನ್ನೇ ನಾನು ಮಾಡುತ್ತೇನೆ.”—ಯೋಹಾನ 8:29; 14:31.

ಯೆಹೋವ ದೇವರು “ನಡಿಸುವದೆಲ್ಲಾ ನ್ಯಾಯ” ಎಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. (ಧರ್ಮೋಪದೇಶಕಾಂಡ 32:4) ಉದಾಹರಣೆಗೆ, ದೇವರು ಒಂದು ವಿಮಾನದಲ್ಲಿರುವ ಯಾವುದೊ ಒಬ್ಬ ವ್ಯಕ್ತಿಯನ್ನು ಶಿಕ್ಷಿಸಲಿಕ್ಕಾಗಿ ಆ ವಿಮಾನವನ್ನು ಅಪಘಾತಕ್ಕೀಡು ಮಾಡಿ ನೂರಾರು ಅಮಾಯಕರನ್ನು ಖಂಡಿತ ಕೊಲ್ಲುವುದಿಲ್ಲ! ದೇವರ ನಂಬಿಗಸ್ತ ಸೇವಕನಾಗಿದ್ದ ಅಬ್ರಹಾಮನಿಗೆ ದೇವರ ನೀತಿಯಲ್ಲಿ ಎಷ್ಟು ನಂಬಿಕೆಯಿತ್ತೆಂದರೆ, ದೇವರು “ದುಷ್ಟರ ಸಂಗಡ ನೀತಿವಂತರನ್ನೂ ನಾಶ”ಮಾಡಲಾರನು. “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ” ಎಂದು ಹೇಳಿದನು. (ಆದಿಕಾಂಡ 18:23, 25) ದೇವರು “ಅನ್ಯಾಯವನ್ನು” ಅಥವಾ “ಕೆಟ್ಟದ್ದನ್ನು ನಡಿಸುವದೇ ಇಲ್ಲ” ಎಂದೂ ಬೈಬಲ್‌ ಹೇಳುತ್ತದೆ.—ಯೋಬ 34:10-12.

ಕಷ್ಟಗಳ ಬಗ್ಗೆ ಬೈಬಲ್‌ ಏನು ಕಲಿಸುತ್ತದೆ?

ನಮಗೆ ಬರುವ ಕಷ್ಟಗಳು ನಾವು ಮಾಡಿದ ಯಾವುದೋ ಪಾಪಕ್ಕಾಗಿ ದೇವರು ಕೊಡುವ ಶಿಕ್ಷೆಯಲ್ಲ. ಈ ವಿಷಯವನ್ನು ಯೇಸುವೇ ತುಂಬ ಸ್ಪಷ್ಟವಾಗಿ ತಿಳಿಸಿದನು. ಹುಟ್ಟು ಕುರುಡನಾಗಿದ್ದ ಒಬ್ಬ ವ್ಯಕ್ತಿಯನ್ನು ನೋಡಿದಾಗ “ಅವನ ಶಿಷ್ಯರು ಅವನಿಗೆ ‘ರಬ್ಬೀ, ಈ ಮನುಷ್ಯನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೊ ಅಥವಾ ಇವನ ಹೆತ್ತವರೊ?’ ಎಂದು ಕೇಳಿದರು. ಅದಕ್ಕೆ ಯೇಸು, ‘ಇವನೂ ಪಾಪಮಾಡಲಿಲ್ಲ ಇವನ ಹೆತ್ತವರೂ ಪಾಪಮಾಡಲಿಲ್ಲ; ಆದರೆ ದೇವರ ಕ್ರಿಯೆಗಳು ಇವನ ವಿಷಯದಲ್ಲಿ ವ್ಯಕ್ತವಾಗುವಂತೆ ಹೀಗಾಯಿತು’” ಎಂದನು.—ಯೋಹಾನ 9:1-3.

ಆ ಕಾಲದ ಹೆಚ್ಚಿನವರಿಗೆ ಇಂಥ ತಪ್ಪಭಿಪ್ರಾಯಗಳಿದ್ದವು. ಆದ್ದರಿಂದಲೇ ಯೇಸು, ಆ ಮನುಷ್ಯನಾಗಲಿ ಅವನ ಹೆತ್ತವರಾಗಲಿ ಮಾಡಿದ ಪಾಪದಿಂದ ಅವನಿಗೆ ಹಾಗಾಗಿಲ್ಲ ಎಂದಾಗ ಶಿಷ್ಯರಿಗೆ ಆಶ್ಚರ್ಯವಾಗಿರಬೇಕು. ಯೇಸು ಆ ಕುರುಡ ವ್ಯಕ್ತಿಯನ್ನು ವಾಸಿಮಾಡಿದನು ಮಾತ್ರವಲ್ಲ ಹಾಗೆ ಮಾಡುವ ಮೂಲಕ ಕಷ್ಟಗಳು ದೇವರಿಂದ ಬಂದ ಶಿಕ್ಷೆಯಾಗಿವೆ ಎಂಬ ನಂಬಿಕೆ ತಪ್ಪು ಎಂದು ತೋರಿಸಿಕೊಟ್ಟನು. (ಯೋಹಾನ 9:6, 7) ಇಂದು ಗಂಭೀರ ಆರೋಗ್ಯ ಸಮಸ್ಯೆಗಳಿಂದ ನರಳುವವರು, ತಮ್ಮ ಈ ಕಷ್ಟಕ್ಕೆ ದೇವರು ಕಾರಣನಲ್ಲ ಎಂಬ ಮಾತಿನಿಂದ ಸಾಂತ್ವನ ಪಡೆಯಬಲ್ಲರು.

ಕಾಯಿಲೆಯು ಒಬ್ಬನು ಮಾಡಿದ ತಪ್ಪಿಗೆ ದೇವರು ಕೊಡುವ ಶಿಕ್ಷೆಯಾಗಿದ್ದರೆ ಕಾಯಿಲೆ ಇರುವವರನ್ನು ಯೇಸು ಯಾಕೆ ಗುಣಪಡಿಸಿದನು?

ಬೈಬಲ್‌ ಕೊಡುವ ಆಶ್ವಾಸನೆ

  • “ಕೆಟ್ಟ ಸಂಗತಿಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ.” (ಯಾಕೋಬ 1:13) ಶತಮಾನಗಳಿಂದ ಮಾನವಕುಲವನ್ನು ಪೀಡಿಸುತ್ತಿರುವ ಕಾಯಿಲೆ, ನೋವು, ಮರಣಗಳಂಥ ಎಲ್ಲಾ ‘ಕೆಟ್ಟ ಸಂಗತಿಗಳನ್ನು’ ಬೇಗನೆ ನಿರ್ಮೂಲಗೊಳಿಸಲಾಗುವುದು.

  • ಯೇಸು ಕ್ರಿಸ್ತನು “ಅಸ್ವಸ್ಥರಾಗಿದ್ದ ಎಲ್ಲರನ್ನೂ ವಾಸಿಮಾಡಿದನು.” (ಮತ್ತಾಯ 8:16) ದೇವರ ಮಗನು ತನ್ನ ಬಳಿ ಬಂದವರೆಲ್ಲರನ್ನು ವಾಸಿಮಾಡುವ ಮೂಲಕ ದೇವರ ರಾಜ್ಯವು ಇಡೀ ಭೂಮಿಯಲ್ಲಿ ಏನನ್ನು ಸಾಧಿಸಲಿದೆ ಎಂದು ತೋರಿಸಿಕೊಟ್ಟನು.

  • “ಆತನು [ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” ಪ್ರಕಟನೆ 21:3-5.

ಯಾರು ಕಾರಣ?

ಹಾಗಾದರೆ ಮಾನವಕುಲವು ಯಾಕೆ ಇಷ್ಟೊಂದು ನೋವು, ಕಷ್ಟಗಳನ್ನು ಅನುಭವಿಸಬೇಕಾಗಿ ಬಂದಿದೆ? ಈ ಪ್ರಶ್ನೆಯ ಬಗ್ಗೆ ಮಾನವರು ಶತಮಾನಗಳಿಂದ ಯೋಚಿಸುತ್ತಾ ಇದ್ದಾರೆ. ಕಷ್ಟಗಳಿಗೆ ದೇವರು ಕಾರಣನಲ್ಲವಾದರೆ ಇನ್ಯಾರು ಕಾರಣ? ಉತ್ತರಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

^ ಪ್ಯಾರ. 4 ಗತಕಾಲದಲ್ಲಿ ದೇವರು ಕೆಲವರಿಗೆ ನಿರ್ದಿಷ್ಟ ಪಾಪಗಳಿಗಾಗಿ ಶಿಕ್ಷೆ ಕೊಟ್ಟಿರುವುದಾದರೂ, ಈಗಿನ ಕಾಲದಲ್ಲಿ ಜನರ ಪಾಪಗಳಿಗೆ ಶಿಕ್ಷೆ ಕೊಡಲು ದೇವರು ಕಾಯಿಲೆಗಳನ್ನಾಗಲಿ ದುರಂತಗಳನ್ನಾಗಲಿ ಬಳಸುತ್ತಾನೆಂದು ಬೈಬಲಿನಲ್ಲೆಲ್ಲೂ ಹೇಳಲಾಗಿಲ್ಲ.