ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ?

ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ?

ನೀವೋ ನಿಮ್ಮ ಕುಟುಂಬದವರೋ ಯಾವತ್ತಾದರೂ ಹಿಂಸೆಗೆ ಗುರಿಯಾಗಿದ್ದೀರಾ? ಮುಂದೆ ಗುರಿಯಾಗಬಹುದೇನೋ ಅಂತ ಭಯ ಆಗುತ್ತಿದೆಯಾ? ಯಾಕೆಂದರೆ, ಹಿಂಸಾಚಾರ “ದೊಡ್ಡ ಅಂಟುರೋಗದಂತೆ ಸಮಾಜದಲ್ಲೆಲ್ಲ ಹರಡುತ್ತಿದೆ.” ಎಷ್ಟರ ಮಟ್ಟಿಗೆ ಹರಡಿದೆ ಎನ್ನುವುದಕ್ಕೆ ಕೆಲವು ಅಂಕಿಅಂಶಗಳು ಇಲ್ಲಿವೆ ನೋಡಿ.

ಗೃಹಹಿಂಸಾಚಾರ ಮತ್ತು ಲೈಂಗಿಕ ಕಿರುಕುಳ: “ಮೂವರು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಒಂದು ಸಲವಾದರೂ ತಮ್ಮ ಸಂಗಾತಿಯಿಂದ ದೈಹಿಕವಾಗಿಯೋ ಲೈಂಗಿಕವಾಗಿಯೋ ದೌರ್ಜನ್ಯಕ್ಕೆ ಒಳಗಾಗುತ್ತಾರೆ” ಎನ್ನುತ್ತೆ ವಿಶ್ವ ಸಂಸ್ಥೆ. ಇನ್ನೂ ಬೇಜಾರಿನ ವಿಷಯ ಏನೆಂದರೆ, “ಪ್ರಪಂಚದಲ್ಲಿ ಐವರು ಮಹಿಳೆಯರಲ್ಲಿ ಒಬ್ಬರ ಮೇಲೆ ಅತ್ಯಾಚಾರವಾಗುತ್ತಿದೆ ಅಥವಾ ಅತ್ಯಾಚಾರದ ಪ್ರಯತ್ನ ನಡೆಯುತ್ತಿದೆ.”

ಬೀದಿ ಪಾತಕ: ಅಮೆರಿಕದಲ್ಲಿ 30 ಸಾವಿರಕ್ಕೂ ಹೆಚ್ಚು ಗ್ಯಾಂಗ್‌ಗಳು ಹಿಂಸಾಚಾರದಲ್ಲಿ ತೊಡಗಿವೆ ಎನ್ನುತ್ತೆ ವರದಿಗಳು. ಲ್ಯಾಟಿನ್‌ ಅಮೆರಿಕದಲ್ಲಿ, ಹೆಚ್ಚುಕಡಿಮೆ ಮೂವರಲ್ಲಿ ಒಬ್ಬರು ಹಿಂಸೆಗೆ ಗುರಿಯಾಗುತ್ತಿರುವುದು ವರದಿಯಾಗುತ್ತಿದೆ.

ಕೊಲೆ: ಒಂದು ವರ್ಷದಲ್ಲಿ 5 ಲಕ್ಷ ಜನರು ಕೊಲೆಯಾಗಿದ್ದಾರೆಂದು ಅಂದಾಜು ಮಾಡಲಾಗಿದೆ. ಯುದ್ಧದಲ್ಲಿ ಸತ್ತಿರುವ ಜನರ ಸಂಖ್ಯೆಗಿಂತ ಇದು ಜಾಸ್ತಿ. ಆಫ್ರಿಕಾದ ದಕ್ಷಿಣ ಭಾಗದಲ್ಲಿ ಮತ್ತು ಅಮೆರಿಕದ ಮಧ್ಯಭಾಗದಲ್ಲಿ ಅತೀ ಹೆಚ್ಚು ಕೊಲೆಗಳಾದವು. ಬೇರೆ ದೇಶಗಳಲ್ಲಿ ನಡೆಯುವ ಕೊಲೆಗಳಿಗಿಂತ ಈ ಎರಡು ದೇಶಗಳಲ್ಲಿ ನಡೆದ ಕೊಲೆಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು. ಕೇವಲ ಒಂದೇ ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಲ್ಯಾಟಿನ್‌ ಅಮೆರಿಕದಲ್ಲಿ ಕೊಲೆಯಾಗಿದ್ದಾರೆ. ಅದರಲ್ಲಿ 50 ಸಾವಿರಕ್ಕೂ ಹೆಚ್ಚು ಕೊಲೆಗಳು ಬ್ರೆಸಿಲ್‌ ಒಂದರಲ್ಲೇ ನಡೆದಿವೆ. ಹಾಗಾದರೆ ಈ ಹಿಂಸಾಚಾರಗಳಿಗೆ ಕೊನೆನೇ ಇಲ್ವಾ?

ಈ ಹಿಂಸಾಚಾರವನ್ನು ಹೇಗೆ ತಡೆಯಬಹುದು?

ಹಿಂಸಾಚಾರ ಯಾಕಿಷ್ಟು ಹರಡುತ್ತಿದೆ? ಅನೇಕ ಕಾರಣಗಳಲ್ಲಿ ಕೆಲವು ಹೀಗಿವೆ: ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯಗಳಿಂದ ಹೆಚ್ಚುತ್ತಿರುವ ಒತ್ತಡ, ಬೇರೆಯವರ ಜೀವಗಳಿಗೆ ಬೆಲೆನೇ ಕೊಡದ ಮನೋಭಾವ, ಕುಡಿಕತನ ಮತ್ತು ಮಾದಕ ವಸ್ತುಗಳ ಸೇವನೆ, ದೊಡ್ಡವರ ಕ್ರೌರ್ಯವನ್ನು ನೋಡಿ ಕಲಿಯುತ್ತಿರುವ ಮಕ್ಕಳು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆ ಸಿಗದಿರುವುದು.

ಪ್ರಪಂಚದ ಕೆಲವು ಕಡೆಗಳಲ್ಲಿ ಹಿಂಸಾಚಾರ, ಅಪರಾಧಗಳು ಕಡಿಮೆಯಾಗಿವೆ ನಿಜ. ಉದಾಹರಣೆಗೆ, ಬ್ರೆಸಿಲ್‌ನ ಹೆಚ್ಚು ಜನಸಂದಣಿ ಇರುವ ನಗರವಾದ ಸಾವೋ ಪೌಲೋದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 80%ದಷ್ಟು ಕೊಲೆಗಳ ಪ್ರಮಾಣ ಕಡಿಮೆಯಾಗಿದೆ. ಒಂದು ಲಕ್ಷಕ್ಕೆ ಹತ್ತರಂತೆ ಕೊಲೆಗಳು ನಡೆಯುತ್ತಿವೆ. ಆದರೂ ಕ್ರೌರ್ಯ ತುಂಬಿದ ಅಪರಾಧಗಳು ನಡೆಯುತ್ತಲೇ ಇವೆ. ಹಾಗಾದರೆ ಹಿಂಸಾಕೃತ್ಯಗಳನ್ನೆಲ್ಲಾ ಶಾಶ್ವತವಾಗಿ ಬೇರು ಸಮೇತ ಕಿತ್ತುಹಾಕಲು ಏನು ಮಾಡಬೇಕು?

ಅಂಥ ಒಂದು ಶಾಶ್ವತ ಪರಿಹಾರ ಬೇಕೆಂದರೆ ಜನರ ಮನೋಭಾವ ಮತ್ತು ವರ್ತನೆಯಲ್ಲಿ ಬದಲಾವಣೆ ಆಗಬೇಕು. ಜನರು ಅಹಂಕಾರ, ಅತಿಯಾಸೆ, ಸ್ವಾರ್ಥ ಅನ್ನೋ ಕೆಟ್ಟಗುಣಗಳನ್ನು ತೆಗೆದುಹಾಕಿ ತಮ್ಮ ಹೃದಯಗಳಲ್ಲಿ ಪ್ರೀತಿ, ಗೌರವ, ಸಹಾಯ ಮಾಡುವಂಥ ಒಳ್ಳೇ ಗುಣಗಳಿಗೆ ಜಾಗಕೊಡಬೇಕು.

ಈ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳಲು ಜನರನ್ನು ಯಾವುದು ಪ್ರೇರಿಸುತ್ತದೆ? ಇದರ ಬಗ್ಗೆ ಬೈಬಲ್‌ ಹೇಳುವುದನ್ನು ಗಮನಿಸಿ:

  • “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ.”—1 ಯೋಹಾನ 5:3.

  • “ದುಷ್ಟತ್ವವನ್ನು ಹಗೆ ಮಾಡುವುದೇ ಯೆಹೋವನ ಭಯವಾಗಿದೆ.”—ಜ್ಞಾನೋಕ್ತಿ 8:13, ಪವಿತ್ರ ಗ್ರಂಥ.

ದೇವರನ್ನು ಎಲ್ಲಿ ನೋಯಿಸಿಬಿಡುತ್ತೇವೋ ಎನ್ನುವ ಭಯ ಮತ್ತು ಆತನ ಮೇಲಿನ ಪ್ರೀತಿ ಬದಲಾಗುವಂತೆ ಜನರನ್ನು ಪ್ರೇರಿಸುತ್ತದೆ. ಎಷ್ಟರ  ಮಟ್ಟಿಗೆಂದರೆ ಕ್ರೂರ ಜನರು ಕೂಡ ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವಷ್ಟು ಪ್ರಭಾವ ಬೀರುತ್ತದೆ. ಅವರ ಇಡೀ ವ್ಯಕ್ತಿತ್ವವನ್ನೇ ಬದಲಾಯಿಸಿಬಿಡುತ್ತದೆ. ಇದು ನಿಜವಾಗಲೂ ಸಾಧ್ಯನಾ?

ಬ್ರೆಸಿಲ್‌ನ ಅಲೆಕ್ಸ್‌ * ಎಂಬವರ ಬಗ್ಗೆ ನೋಡೋಣ. ಅವರು ಮಾಡಿದ ಅಪರಾಧಗಳಿಂದಾಗಿ ಅವರು 19 ವರ್ಷ ಜೈಲಲ್ಲಿದ್ದರು. ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್‌ ಕಲಿತು ಇಸವಿ 2000ದಲ್ಲಿ ಒಬ್ಬ ಯೆಹೋವನ ಸಾಕ್ಷಿಯಾದರು. ಅಲೆಕ್ಸ್‌ ನಿಜವಾಗಲೂ ಬದಲಾದರಾ? ಹೌದು, ತಾವು ಮಾಡಿದ ಕೆಲಸಗಳಿಗಾಗಿ ಈಗಲೂ ದುಃಖಪಡುತ್ತಾರೆ. ಅವರು ಹೇಳುವುದು: “ನಾನ್‌ ಮಾಡಿದ್ದನ್ನೆಲ್ಲ ದೇವರು ಸಂಪೂರ್ಣವಾಗಿ ಕ್ಷಮಿಸಿದ್ದಾನೆ. ಆತನನ್ನು ಪ್ರೀತಿಸುವ ಅವಕಾಶ ಕೊಟ್ಟಿದ್ದಾನೆ. ಯೆಹೋವ ದೇವರ ಮೇಲೆ ನನಗಿರುವ ಪ್ರೀತಿ ಮತ್ತು ಕೃತಜ್ಞತೆಯಿಂದ ನಾನಿವತ್ತು ನನ್ನ ಬದುಕನ್ನ ಬದಲಾಯಿಸಿಕೊಂಡಿದ್ದೇನೆ.”

ಅದೇ ದೇಶದ ಸಾಜಾರ್‌ ಎನ್ನುವವರ ಕಥೆ ಕೇಳಿ. ಇವರು ಮನೆಗಳಿಗೆ ನುಗ್ಗಿ ಚಾಕು ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು. 15 ವರ್ಷಗಳ ತನಕ ಇದೇ ಅವರ ಕೆಲಸವಾಗಿತ್ತು. ಒಮ್ಮೆ ಇವರು ಜೈಲಲ್ಲಿದ್ದಾಗ ಯೆಹೋವನ ಸಾಕ್ಷಿಗಳು ಭೇಟಿ ಮಾಡಿ ಬೈಬಲ್‌ ಕಲಿಯಲು ಸಹಾಯ ಮಾಡಿದರು. ಸಾಜಾರ್‌ ಏನು ಹೇಳುತ್ತಾರೆಂದರೆ: “ಮೊತ್ತಮೊದಲ ಬಾರಿ ನನ್ನ ಬದುಕಿಗೊಂದು ಅರ್ಥ ಸಿಕ್ಕಿದ ಅನುಭವವಾಯಿತು. ನಾನು ದೇವರನ್ನ ಪ್ರೀತಿಸಕ್ಕೆ ಕಲಿತೆ. ದೇವರ ಮೇಲೆ ಭಯನೂ ಹುಟ್ಟಿತು. ಎಲ್ಲಿ ನಾನ್‌ ಮತ್ತೆ ಕೆಟ್ಟ ಕೆಲಸ ಮಾಡಿ ಯೆಹೋವ ದೇವರನ್ನ ನೋಯಿಸಿಬಿಡುತ್ತೀನೋ ಅನ್ನುವ ಭಯ ಇತ್ತು. ನನಗೆ ಪ್ರೀತಿ, ದಯೆ ತೋರಿಸಿರೋ ದೇವರಿಗೆ ದ್ರೋಹ ಬಗೆಯೋದು ನನಗಿಷ್ಟವಿರಲಿಲ್ಲ. ದೇವರ ಮೇಲಿದ್ದ ಪ್ರೀತಿ ಮತ್ತು ಭಯವೇ ನಾನು ಬದಲಾಗಲು ಕಾರಣ.”

ಹಿಂಸಾಚಾರವೇ ಇಲ್ಲದ ಲೋಕದಲ್ಲಿ ಜೀವಿಸಲು ಏನು ಮಾಡಬೇಕೆಂದು ತಿಳಿದುಕೊಳ್ಳಿ

ಈ ಉದಾಹರಣೆಗಳಿಂದ ನಮಗೇನು ಗೊತ್ತಾಗುತ್ತದೆ? ಬೈಬಲಿಗೆ ಜನರ ಜೀವನದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡುವ ಶಕ್ತಿಯಿದೆ. ಜನರು ಯೋಚಿಸುವ ರೀತಿಯನ್ನೇ ಬದಲಿಸುವಷ್ಟು ಶಕ್ತಿಯಿದೆ. (ಎಫೆಸ 4:23) ಅಲೆಕ್ಸ್‌ ಹೇಳುತ್ತಾರೆ: “ನಾನು ಬೈಬಲಿನಿಂದ ಕಲಿತ ವಿಷಯಗಳು ನನ್ನ ಮೇಲೆ ಸುರಿದ ಶುದ್ಧ ನೀರಿನಂತಿತ್ತು. ಆ ನೀರು ನನ್ನ ಕೆಟ್ಟ ಯೋಚನೆಗಳನ್ನೆಲ್ಲ ತೊಳೆದು ಶುಚಿಮಾಡಿತು. ನನ್ನ ಜೀವನದಲ್ಲಿ ನಾನ್‌ ಯಾವತ್ತೂ ಮಾಡಕ್ಕಾಗಲ್ಲ ಅಂತ ನೆನಸಿದ್ದನ್ನ ಮಾಡಿಬಿಟ್ಟಿತು.” ಹೌದು, ಬೈಬಲಿನಲ್ಲಿರುವ ಒಳ್ಳೇ ಸಂದೇಶವನ್ನು ನಾವು ಮನಸ್ಸಿನಲ್ಲಿ ತುಂಬಿಸಿಕೊಂಡಾಗ ಅದು ನಮ್ಮಲ್ಲಿರುವ ಕೆಟ್ಟ ಯೋಚನೆಗಳನ್ನು ತೊಳೆದು ಶುಚಿಮಾಡುತ್ತದೆ. ದೇವರ ವಾಕ್ಯಕ್ಕೆ ಆ ಶಕ್ತಿ ಇದೆ. (ಎಫೆಸ 5:26) ಜನರು ಎಷ್ಟೇ ಕ್ರೂರಿಗಳಾಗಿದ್ದರೂ ಸ್ವಾರ್ಥಿಗಳಾಗಿದ್ದರೂ ಅವರನ್ನು ಸಾಧುಗಳಾಗಿ ಒಳ್ಳೇ ಜನರಾಗಿ ಬದಲಾಯಿಸಿಬಿಡುತ್ತದೆ. (ರೋಮನ್ನರಿಗೆ 12:18) ಜನರು ಬೈಬಲಲ್ಲಿ ಇರುವ ತತ್ವಗಳನ್ನು ಪಾಲಿಸಿ ಶಾಂತಿ-ಸಮಾಧಾನದಿಂದ ಬದುಕಲು ಕಲಿಯುತ್ತಾರೆ.—ಯೆಶಾಯ 48:18.

ಯೆಹೋವನ ಸಾಕ್ಷಿಗಳು ಹಿಂಸಾಚಾರವನ್ನು ಕೊನೆಗೊಳಿಸುವ ಮದ್ದನ್ನು ಕಂಡುಹಿಡಿದಿದ್ದಾರೆ. 240 ದೇಶಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಯೆಹೋವನ ಸಾಕ್ಷಿಗಳಿದ್ದಾರೆ. ಇವರು ಬೇರೆ ಬೇರೆ ಜನಾಂಗಕ್ಕೆ ಸೇರಿದವರು. ಇವರ ಸಾಮಾಜಿಕ ಅಂತಸ್ತು, ಹಿನ್ನೆಲೆಗಳು ಬೇರೆ ಬೇರೆ. ಆದರೂ ಎಲ್ಲರೂ ದೇವರನ್ನು ಪ್ರೀತಿಸಲು, ಭಯಪಡಲು ಕಲಿತಿದ್ದಾರೆ. ಇತರರನ್ನೂ ಪ್ರೀತಿಸುತ್ತಾರೆ ಮತ್ತು ಎಲ್ಲರೂ ಅಣ್ಣತಮ್ಮಂದಿರಂತೆ ಅನ್ಯೋನ್ಯವಾಗಿ ಜೀವಿಸುತ್ತಾರೆ. (1 ಪೇತ್ರ 4:8) ಹಿಂಸಾಚಾರವೇ ಇಲ್ಲದ ಲೋಕ ಸಾಧ್ಯ ಎನ್ನುವುದಕ್ಕೆ ಇವರು ಜೀವಂತ ಸಾಕ್ಷಿಗಳಾಗಿದ್ದಾರೆ!!

ಹಿಂಸಾಚಾರವೇ ಇಲ್ಲದ ಲೋಕ!

ಲೋಕದಲ್ಲಿ ಎಲ್ಲೂ ಹಿಂಸಾಚಾರವೇ ನಡೆಯದಂತೆ ದೇವರು ಮಾಡುತ್ತಾನೆಂದು ಬೈಬಲ್‌ ಹೇಳಿದೆ. ಹಿಂಸೆ, ಅಪರಾಧ, ಕ್ರೌರ್ಯಕ್ಕಿಳಿದಿರುವ ಜನರಿಗಾಗಿ ದೇವರು ‘ನ್ಯಾಯತೀರ್ಪಿನ ದಿನವೊಂದನ್ನು’ ಇಟ್ಟಿದ್ದಾನೆ. ದೇವಭಕ್ತಿಯಿಲ್ಲದ ಜನರನ್ನು ದೇವರು ನಾಶಮಾಡಲಿದ್ದಾನೆ. (2 ಪೇತ್ರ 3:5-7) ಆಗ ನಮ್ಮನ್ನು ಪೀಡಿಸಲು ಈ ಭೂಮಿ ಮೇಲೆ ಯಾವ ಕೆಟ್ಟ ಜನರೂ ಇರುವುದಿಲ್ಲ. ದೇವರು ನಿಜವಾಗಲೂ ಇದನ್ನು ಮಾಡುತ್ತಾನೆ ಅಂತ ಹೇಗೆ ನಂಬುವುದು?

ದೇವರು “ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ” ಎನ್ನುತ್ತೆ ಬೈಬಲ್‌. (ಕೀರ್ತನೆ 11:5) ಏಕೆಂದರೆ ನಮ್ಮನ್ನೆಲ್ಲ ಸೃಷ್ಟಿಮಾಡಿರುವ ದೇವರು ಶಾಂತಿ ಮತ್ತು ನ್ಯಾಯವನ್ನು ಪ್ರೀತಿಸುತ್ತಾನೆ. (ಕೀರ್ತನೆ 33:5; 37:28) ಹಾಗಾಗಿ ಹಿಂಸಾಚಾರವನ್ನು ಮಾಡುತ್ತಾ ಇರುವುದನ್ನು ಆತನು ಸಹಿಸುವುದಿಲ್ಲ.

ಭೂಮಿಯಲ್ಲಿ ಎಲ್ಲೆಲ್ಲಿಯೂ ಶಾಂತಿ ಸಮಾಧಾನ ತುಂಬಿರುವ ದಿನ ಬಹಳ ಹತ್ತಿರವಿದೆ. (ಕೀರ್ತನೆ 37:11; 72:14) ಅಲ್ಲಿ ಬದುಕಲು ನೀವೇನು ಮಾಡಬೇಕು ಎನ್ನುವುದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?▪ (w16-E No. 4)

^ ಪ್ಯಾರ. 14 ಹೆಸರುಗಳನ್ನು ಬದಲಿಸಲಾಗಿದೆ.