ಈಗಾಗಲೇ ನಿಜವಾಗಿರುವ ಭವಿಷ್ಯನುಡಿಗಳು
ರಾಜ ಕ್ರೀಸಸ್‌ನು ಡೆಲ್ಫಿಯಲ್ಲಿನ ಪಾತ್ರಿ ಕೊಟ್ಟ ಸಂದೇಶ ನಂಬಿ ತಪ್ಪು ಹೆಜ್ಜೆ ಇಟ್ಟು, ಪರ್ಷಿಯದ ರಾಜನಿಂದ ಸೋಲಿಸಲ್ಪಟ್ಟನೆಂದು ಹಿಂದಿನ ಲೇಖನದಲ್ಲಿ ನೋಡಿದೆವು. ಬೈಬಲ್‌ನಲ್ಲೂ ಪರ್ಷಿಯದ ಆ ರಾಜನ ಕುರಿತು ಗಮನಸೆಳೆಯುವಂಥ ಒಂದು ಭವಿಷ್ಯನುಡಿ ಇದೆ. ಅದಂತೂ ಪೂರ್ತಿ ನೆರವೇರಿದೆ. ಅದರ ಸೂಕ್ಷ್ಮ ವಿವರಗಳು ಸಹ.
ಹೀಬ್ರು ಪ್ರವಾದಿ ಯೆಶಾಯ ಎಂಬವನು ಸೈರಸ್‌ನ (ಕೋರೆಷನ) ಹೆಸರು ಹೇಳಿ ಅವನು ಬಲಿಷ್ಠ ನಗರವಾದ ಬಾಬೆಲನ್ನು ಜಯಿಸುವನೆಂದು ಮುಂತಿಳಿಸಿದನು. ಈ ಘಟನೆ ನಡೆಯುವುದಕ್ಕೂ ಸುಮಾರು 200 ವರ್ಷಗಳ ಮುಂಚೆಯೇ ಅಂದರೆ ಕೋರೆಷ ಹುಟ್ಟುವುದಕ್ಕೂ ಎಷ್ಟೋ ಮುಂಚೆ ಅದನ್ನು ತಿಳಿಸಿದ್ದನು.
ಯೆಶಾಯ 44:24, 27, 28: “ಯೆಹೋವನು ಹೀಗೆನ್ನುತ್ತಾನೆ . . . ನಿನ್ನಲ್ಲಿ ಸೇರುವ ನದಿಗಳನ್ನು ಒಣಗಿಸುವೆನು ಎಂದು ನಾನು ಅಪ್ಪಣೆ ಕೊಡುವವನಾಗಿದ್ದೇನೆ; ಮತ್ತು ಕೋರೆಷನ ವಿಷಯವಾಗಿ—ಅವನು ನನ್ನ ಮಂದೆ ಕಾಯುವವನು, ಯೆರೂಸಲೇಮು ಕಟ್ಟಲ್ಪಡಲಿ, ದೇವಸ್ಥಾನದ ಅಸ್ತಿವಾರವು ಹಾಕಲ್ಪಡಲಿ ಎಂದು ಹೇಳಿ ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸತಕ್ಕವನು ಎಂಬದಾಗಿ ಮಾತಾಡುವವನಾಗಿದ್ದೇನೆ.”
ಗ್ರೀಕ್ ಇತಿಹಾಸಕಾರ ಹೆರಾಡಟಸ್ ಹೇಳಿರುವಂತೆ, ಕೋರೆಷನ ಸೈನ್ಯವು ಬಾಬೆಲ್ ನಗರದ ಮಧ್ಯದಿಂದ ಹರಿದುಹೋಗುತ್ತಿದ್ದ ಯೂಫ್ರೇಟೀಸ್ ನದಿಯ ನೀರನ್ನು ಬೇರೆ ದಿಕ್ಕಿಗೆ ತಿರುಗಿಸಿತು. ಕೋರೆಷನ ಈ ಉಪಾಯದಿಂದಾಗಿ ಅವನ ಸೈನಿಕರು ನದೀತಳದಲ್ಲಿ ನಡೆದುಕೊಂಡು ಹೋಗಿ ನಗರವನ್ನು ಪ್ರವೇಶಿಸಲು ಸಾಧ್ಯವಾಯಿತು. ಅದನ್ನು ವಶಪಡಿಸಿಕೊಂಡ ನಂತರ ಕೋರೆಷನು ಬಾಬೆಲಿನಲ್ಲಿ ಬಂದಿಯಾಗಿದ್ದ ಯೆಹೂದ್ಯರನ್ನು ಬಿಡಿಸಿದನು. 70 ವರ್ಷಗಳ ಹಿಂದೆ ನಾಶವಾಗಿದ್ದ ಯೆರೂಸಲೇಮಿಗೆ ಅವರು ಹಿಂದಿರುಗಿ ಅದನ್ನು ಮತ್ತೆ ಕಟ್ಟುವಂತೆ ಅನುಮತಿಕೊಟ್ಟನು.
ಯೆಶಾಯ 45:1: “ಯೆಹೋವನು ಯಾವನ ಕೈಹಿಡಿದು ಯಾವನೆದುರಿಗೆ ಜನಾಂಗಗಳನ್ನು ತುಳಿದು ರಾಜರ ನಡುಕಟ್ಟನ್ನು ಬಿಚ್ಚಿ ಯಾವನ ಮುಂದೆ . . . ಹೆಬ್ಬಾಗಿಲುಗಳನ್ನು ತೆರೆದು ಮುಚ್ಚಲೀಸನೋ ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ.”
ಪರ್ಷಿಯನ್ನರು ಆ ನಗರವನ್ನು ಅದರ ಬೃಹತ್ತಾದ ಹೆಬ್ಬಾಗಿಲುಗಳ ಮೂಲಕ ಪ್ರವೇಶಿಸಿದರು. ಯಾಕೆಂದರೆ ಆ ಹೆಬ್ಬಾಗಿಲ ಎರಡೂ ಕದಗಳನ್ನು ನಿರ್ಲಕ್ಷ್ಯದಿಂದ ತೆರೆದಿಡಲಾಗಿತ್ತು. ಕೋರೆಷನ ಯೋಜನೆಗಳ ಬಗ್ಗೆ ಬಾಬೆಲಿನವರಿಗೆ ಮುಂಚೆಯೇ ಗೊತ್ತಿದ್ದರೆ, ನದಿ ಕಡೆಗೆ ತೆರೆದುಕೊಂಡಿದ್ದ ಎಲ್ಲ ದ್ವಾರಗಳನ್ನು ಅವರು ಮುಚ್ಚಿಡುತ್ತಿದ್ದರು. ಆದರೆ ನಡೆದ ಸಂಗತಿ ನೋಡಿದರೆ ಅಂದು ಆ ನಗರಕ್ಕೆ ಯಾವುದೇ ರೀತಿಯ ರಕ್ಷಣೆವ್ಯವಸ್ಥೆ ಇರಲಿಲ್ಲವೆಂದು ಗೊತ್ತಾಗುತ್ತದೆ.
ಈ ಗಮನಾರ್ಹ ಭವಿಷ್ಯನುಡಿಯಂತೆ ಚಾಚೂತಪ್ಪದೇ ನಿಜವೆಂದು ರುಜುವಾದ ನೂರಾರು ಭವಿಷ್ಯನುಡಿಗಳು ಬೈಬಲಿನಲ್ಲಿವೆ. a ಮನುಷ್ಯರ ಭವಿಷ್ಯನುಡಿಗಳು ಹೆಚ್ಚಾಗಿ ಅವರ ಸುಳ್ಳು ದೇವರುಗಳಿಂದ ಬಂದವುಗಳಾಗಿವೆ. ಆದರೆ ಬೈಬಲ್ ಭವಿಷ್ಯನುಡಿಗಳು ಹಾಗಿರುವುದಿಲ್ಲ. ಅವು “ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; . . . ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ” ಎಂದು ಘೋಷಿಸಿರುವವನಿಂದ ಬರುತ್ತವೆ.—ಯೆಶಾಯ 46:10.
ಯೆಹೋವ. ಅನೇಕ ವಿದ್ವಾಂಸರ ಪ್ರಕಾರ ಈ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಇದು, ಆತನಿಗೆ ಭವಿಷ್ಯದಲ್ಲಾಗುವ ಘಟನೆಗಳನ್ನು ತಿಳಿದುಕೊಳ್ಳುವ ಮತ್ತು ಅವುಗಳನ್ನು ತನ್ನ ಉದ್ದೇಶಕ್ಕನುಸಾರ ನಿರ್ದೇಶಿಸುವ ಸಾಮರ್ಥ್ಯವಿದೆ ಎಂದು ತೋರಿಸುತ್ತದೆ. ಆತನು ಕೊಟ್ಟ ಮಾತನ್ನೆಲ್ಲ ಖಂಡಿತ ಪೂರೈಸುವನೆಂಬ ಭರವಸೆಯನ್ನೂ ಅದು ಕೊಡುತ್ತದೆ.
ಹಾಗೆ ಘೋಷಿಸುವ ಸಾಮರ್ಥ್ಯ ಸತ್ಯ ದೇವರಿಗೆ ಮಾತ್ರ ಇದೆ. ಆತನ ಹೆಸರುಇಂದು ನಿಜವಾಗುತ್ತಿರುವ ಭವಿಷ್ಯನುಡಿಗಳು
ನಮ್ಮ ಕಾಲದ ಬಗ್ಗೆ ಬೈಬಲ್‌ನಲ್ಲಿ ಯಾವ ಭವಿಷ್ಯನುಡಿಗಳಿವೆ ಎಂದು ತಿಳಿಯಲು ಬಯಸುತ್ತೀರಾ? “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು” ಎಂದು 2,000 ವರ್ಷಗಳ ಹಿಂದೆಯೇ ಬೈಬಲ್ ಭವಿಷ್ಯ ನುಡಿದಿತ್ತು. ಯಾವುದಕ್ಕೆ ಕಡೇ ದಿವಸಗಳು? ಭೂಮಿಗಲ್ಲ ಅಥವಾ ಮಾನವಕುಲಕ್ಕಲ್ಲ, ಬದಲಾಗಿ ಸಹಸ್ರಾರು ವರ್ಷಗಳಿಂದ ಮಾನವಕುಲವನ್ನು ಬಾಧಿಸುತ್ತಿರುವ ಹೋರಾಟ-ಸಂಘರ್ಷಗಳು, ದಬ್ಬಾಳಿಕೆ ಮತ್ತು ನರಳಾಟಕ್ಕೆ. ಈ ‘ಕಡೇ ದಿವಸಗಳನ್ನು’ ಗುರುತಿಸುವ ಕೆಲವು ಭವಿಷ್ಯನುಡಿಗಳನ್ನು ನೋಡೋಣ.
2 ತಿಮೊಥೆಯ 3:1-5: ‘ಕಡೇ ದಿವಸಗಳಲ್ಲಿ ಜನರು ಸ್ವಪ್ರೇಮಿಗಳು, ಹಣಪ್ರೇಮಿಗಳು, ಸ್ವಪ್ರತಿಷ್ಠೆಯುಳ್ಳವರು, ಅಹಂಕಾರಿಗಳು, ದೇವದೂಷಕರು, ಹೆತ್ತವರಿಗೆ ಅವಿಧೇಯರು, ಕೃತಜ್ಞತೆಯಿಲ್ಲದವರು, ನಿಷ್ಠೆಯಿಲ್ಲದವರು, ಸ್ವಾಭಾವಿಕ ಮಮತೆಯಿಲ್ಲದವರು, ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರು, ಮಿಥ್ಯಾಪವಾದಿಗಳು, ಸ್ವನಿಯಂತ್ರಣವಿಲ್ಲದವರು, ಉಗ್ರರು, ಒಳ್ಳೇತನವನ್ನು ಪ್ರೀತಿಸದವರು, ದ್ರೋಹಿಗಳು, ಹಟಮಾರಿಗಳು, ಹೆಮ್ಮೆಯಿಂದ ಉಬ್ಬಿಕೊಂಡವರು, ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರು, ದೇವಭಕ್ತಿಯ ವೇಷವಿದ್ದು ಅದರ ಶಕ್ತಿಗೆ ವಿರುದ್ಧವಾಗಿ ವರ್ತಿಸುವವರು ಆಗಿರುವರು.’
ಇಂದು ಜನರಲ್ಲಿ ಇಂಥ ನಡವಳಿಕೆ ಹೆಚ್ಚೆಚ್ಚಾಗಿ ತೋರಿಬರುತ್ತಿದೆ ಎಂಬ ಮಾತನ್ನು ಒಪ್ಪುತ್ತೀರಿ ತಾನೇ? ನಮ್ಮ ಸುತ್ತಲಿರುವ ಜನರು ತಮ್ಮನ್ನೇ ತುಂಬ ಇಷ್ಟಪಡುವುದನ್ನು, ಹಣಕ್ಕಾಗಿ ತುಂಬ ಆಸೆಪಡುವುದನ್ನು, ಅಹಂಕಾರದಿಂದ ನಡೆದುಕೊಳ್ಳುವುದನ್ನು ಗಮನಿಸಿದ್ದೀರಾ? ಇತರರನ್ನು ಖುಷಿಪಡಿಸುವುದು ಹೆಚ್ಚು ಕಷ್ಟಕರವಾಗುತ್ತಿರುವುದನ್ನು, ಜನರು ಬೇರೆಯವರ ಜೊತೆ ಹೊಂದಿಕೊಳ್ಳುವುದು ಕಡಿಮೆ ಆಗುತ್ತಿರುವುದನ್ನು ನೋಡುತ್ತಿದ್ದೀರಲ್ಲವಾ? ಮಕ್ಕಳು ಹೆತ್ತವರಿಗೆ ಅವಿಧೇಯರಾಗುವುದು ಹೆಚ್ಚಾಗುತ್ತಿದೆ ಮತ್ತು ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ದೇವರ ಮೇಲಿನ ಪ್ರೀತಿಗಿಂತ ಸುಖಭೋಗಗಳ ಪ್ರೀತಿಯೇ ಹೆಚ್ಚಾಗುತ್ತಿದೆಯೆಂದು ಖಂಡಿತ ಗಮನಿಸಿರುತ್ತೀರಿ. ಇದೆಲ್ಲ ದಿನೇದಿನೇ ಇನ್ನಷ್ಟು ಜಾಸ್ತಿ ಆಗುತ್ತಾ ಇದೆ.
ಮತ್ತಾಯ 24:6, 7: “ಯುದ್ಧಗಳಾಗುವುದನ್ನೂ ಯುದ್ಧಗಳ ಸುದ್ದಿಯನ್ನೂ ಕೇಳಿಸಿಕೊಳ್ಳುವಿರಿ. . . . ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು.”
1914ರಿಂದ ನಡೆದಿರುವ ಯುದ್ಧಗಳಲ್ಲಿ, ಸಶಸ್ತ್ರ ಘರ್ಷಣೆಗಳಲ್ಲಿ ಸಂಭವಿಸಿರುವ ಮರಣಗಳ ಒಟ್ಟು ಸಂಖ್ಯೆ 10 ಕೋಟಿಗಿಂತಲೂ ಹೆಚ್ಚೆಂದು ಅಂದಾಜಿಸಲಾಗಿದೆ. ಈ ಸಂಖ್ಯೆ ಅನೇಕ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಆ ಬೃಹತ್ತಾದ ಸಂಖ್ಯೆಯನ್ನು ನೋಡುವಾಗ ಆ ಎಲ್ಲ ಸಾವುಗಳ ಹಿಂದೆ ಎಷ್ಟು ಜನರ ಕಣ್ಣೀರು, ದುಃಖ ಮತ್ತು ನರಳಾಟವೂ ಇತ್ತೆಂದು ಸ್ವಲ್ಪ ಯೋಚಿಸಿ. ಇಷ್ಟೆಲ್ಲ ಆದ ಮೇಲೆ ರಾಷ್ಟ್ರಗಳು ಬುದ್ಧಿ ಕಲಿತು ಯುದ್ಧಗಳನ್ನು ನಿಲ್ಲಿಸಿಬಿಟ್ಟಿವೆಯಾ?
ಮತ್ತಾಯ 24:7: ‘ಆಹಾರದ ಕೊರತೆಗಳು ಆಗುವವು.’
‘ಜಾಗತಿಕ ಆಹಾರ ಕಾರ್ಯಕ್ರಮ’ ಎಂಬ ಸಂಸ್ಥೆ ಹೀಗಂದಿತು: “ಎಲ್ಲರಿಗೂ ಬೇಕಾಗುವಷ್ಟು ಆಹಾರ ಉತ್ಪಾದನೆಯಾಗುತ್ತಿರುವ ಈ ಜಗತ್ತಿನಲ್ಲಿ, ಈಗಲೂ 815 ಮಿಲಿಯ ಜನರಿಗೆ, ಅಂದರೆ ಒಂಬತ್ತರಲ್ಲಿ ಒಬ್ಬ ವ್ಯಕ್ತಿಗೆ ರಾತ್ರಿ ಹೊತ್ತು ಊಟ ಇಲ್ಲ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಮೂರರಲ್ಲಿ ಒಬ್ಬರು ಒಂದಲ್ಲ ಒಂದು ವಿಧದ ನ್ಯೂನಪೋಷಣೆಗೆ ಒಳಗಾಗಿರುತ್ತಾರೆ.” ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ 30 ಲಕ್ಷ ಮಕ್ಕಳು ಹೊಟ್ಟೆಗಿಲ್ಲದೆ ಸಾಯುತ್ತಾರೆ!
ಲೂಕ 21:11: “ಮಹಾ ಭೂಕಂಪಗಳಾಗುವವು.”
ಮನುಷ್ಯರಿಗೆ ಗೊತ್ತಾಗುವಷ್ಟು ದೊಡ್ಡದಾದ 50,000 ಭೂಕಂಪಗಳು ಪ್ರತಿ ವರ್ಷ ಆಗುತ್ತವೆ. ಸುಮಾರು 100 ಭೂಕಂಪಗಳು ಕಟ್ಟಡಗಳಿಗೆ ಹಾನಿ ಮಾಡುವಂಥದ್ದಾಗಿರುತ್ತವೆ ಮತ್ತು ಹೆಚ್ಚುಕಡಿಮೆ ಪ್ರತಿ ವರ್ಷ ಒಂದು ಭೂಕಂಪ ತುಂಬ ಹೆಚ್ಚು ತೀವ್ರತೆಯದ್ದಾಗಿರುತ್ತದೆ. 1975ರಿಂದ 2000 ಇಸವಿಯೊಳಗೆ ನಡೆದಿರುವ ಭೂಕಂಪಗಳು 4,71,000 ಜನರ ಜೀವವನ್ನು ಬಲಿತೆಗೆದುಕೊಂಡಿವೆ ಎಂದು ಒಂದು ಸಮೀಕ್ಷೆ ಹೇಳುತ್ತದೆ.
ಮತ್ತಾಯ 24:14: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”
ಎಂಬತ್ತು ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳು ಭೂಮಿಯಲ್ಲೆಲ್ಲ 240 ದೇಶಗಳಲ್ಲಿ ದೇವರ ರಾಜ್ಯದ ಸುವಾರ್ತೆಯ ಬಗ್ಗೆ ಸಾರುತ್ತಿದ್ದಾರೆ, ಸಾಕ್ಷಿ ಕೊಡುತ್ತಿದ್ದಾರೆ. ಜನರಿಂದ ಕಿಕ್ಕಿರಿದಿರುವ ನಗರಗಳಲ್ಲಿ, ದೂರದ ಹಳ್ಳಿಗಳಲ್ಲಿ, ಕಾಡುಗಳಲ್ಲಿ, ಪರ್ವತಪ್ರದೇಶಗಳಲ್ಲಿ ಅವರು ಸುವಾರ್ತೆ ಘೋಷಿಸುತ್ತಾರೆ. ಆ ಭವಿಷ್ಯನುಡಿಗನುಸಾರ ದೇವರಿಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಈ ಕೆಲಸ ಪೂರೈಸಲ್ಪಟ್ಟಾಗ “ಅಂತ್ಯವು ಬರುವುದು.” ಇದರರ್ಥವೇನು? ಮಾನವ ಆಳ್ವಿಕೆ ಅಂತ್ಯವಾಗಿ, ದೇವರ ರಾಜ್ಯದ ಆಳ್ವಿಕೆ ಶುರುವಾಗಲಿದೆ. ದೇವರ ರಾಜ್ಯ ಆಳುವಾಗ ಯಾವೆಲ್ಲ ವಾಗ್ದಾನಗಳು ನಿಜವಾಗಲಿವೆ? ದಯವಿಟ್ಟು ಮುಂದೆ ಓದಿ.
a “ನಿಖರವಾದ ಭವಿಷ್ಯನುಡಿಗೆ ಮೌನ ಸಾಕ್ಷಿ” ಎಂಬ ಲೇಖನ ನೋಡಿ.