ಬೈಬಲ್ ಮಾರ್ಗದರ್ಶನ ಈಗಿನ ಕಾಲಕ್ಕೂ ಸೂಕ್ತವೇ?
ಇಲ್ಲ ಅನ್ನುತ್ತಾರೆ ಕೆಲವರು. ಬೈಬಲಿನಿಂದ ಮಾರ್ಗದರ್ಶನ ಪಡೆಯುವುದು, 1920ರ ದಶಕದ ಪಠ್ಯಪುಸ್ತಕದಿಂದ ರಸಾಯನಶಾಸ್ತ್ರ ಕಲಿಸುವುದಕ್ಕೆ ಸಮ ಎಂದು ಒಬ್ಬ ಡಾಕ್ಟರ್ ಹೇಳಿದರು. ಹೊಸದಾದ, ಆಧುನಿಕ ಕಂಪ್ಯೂಟರ್ ಬಳಸುವುದು ಹೇಗೆಂದು ತಿಳಿದುಕೊಳ್ಳಲು ಈಗ ಬಳಕೆಯಲ್ಲಿಲ್ಲದ ಹಳೇ ಕಂಪ್ಯೂಟರಿನ ಕೈಪಿಡಿ ಬಳಸುತ್ತೀರಾ ಎಂದು ಬೈಬಲ್ ಬಗ್ಗೆ ಗೌರವವಿಲ್ಲದ ಒಬ್ಬ ವ್ಯಕ್ತಿ ಕೇಳಬಹುದು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಬೈಬಲ್ ತೀರ ಹಳೇ ಕಾಲದ್ದು, ಈಗಿನ ಕಾಲಕ್ಕೆ ಸೂಕ್ತವಲ್ಲ ಎನ್ನುವುದು ಕೆಲವರ ಅಭಿಪ್ರಾಯ.
ಈ ಹಳೇ ಕಾಲದ ಮಾರ್ಗದರ್ಶಕ ಪುಸ್ತಕವನ್ನು ಇಂದಿನ ಆಧುನಿಕ, ಉಚ್ಛ ತಂತ್ರಜ್ಞಾನದ ಜಗತ್ತಿನಲ್ಲಿ ಯಾರಾದರೂ ಯಾಕೆ ಬಳಸಬೇಕು? ಹೇಗಿದ್ದರೂ, ಲೆಕ್ಕವಿಲ್ಲದಷ್ಟು ವೆಬ್ಸೈಟ್, ಬ್ಲಾಗ್ಗಳಲ್ಲಿ ಇತ್ತೀಚಿನ ಮಾರ್ಗದರ್ಶನ, ಸಲಹೆಗಳ ಹೊಳೆಯೇ ಹರಿಯುತ್ತಾ ಇರುತ್ತದೆ. ತುಂಬ ಜ್ಞಾನವಿರುವ ಮನಶ್ಶಾಸ್ತ್ರಜ್ಞರು, ಜೀವನಶೈಲಿ ಗುರುಗಳು, ಲೇಖಕರು ಇವರೆಲ್ಲರೂ ಟಿವಿ ಕಾರ್ಯಕ್ರಮಗಳಲ್ಲ ಸಲಹೆಗಳನ್ನು ಕೊಡುತ್ತಾ ಇರುತ್ತಾರೆ. ಪುಸ್ತಕದ ಅಂಗಡಿಗಳಲ್ಲಿ ಸ್ವಸಹಾಯ ಪುಸ್ತಕಗಳ ರಾಶಿಯೇ ಇದೆ. ಇವುಗಳಿಂದಾಗಿ ನೂರಾರು ಕೋಟಿ ಡಾಲರುಗಳ ಉದ್ಯಮ ನಡೆಯುತ್ತಿದೆ.
ಇಷ್ಟೊಂದು ಆಧುನಿಕ ಮಾಹಿತಿ ಲಭ್ಯ ಇರುವಾಗ ಸುಮಾರು 2,000 ವರ್ಷಗಳ ಹಿಂದೆ ಬರೆದು ಮುಗಿಸಲಾದ ಬೈಬಲಿನ ಸಲಹೆ ಯಾಕೆ ಪಡೆಯಬೇಕು? ಹಾಗೆ ಮಾಡಿದರೆ, ಬೈಬಲನ್ನು ಗೌರವಿಸದವರು ಹೇಳಿದ ಹಾಗೆ ಹಳೇ ಕಾಲದ ಕಂಪ್ಯೂಟರ್ ಕೈಪಿಡಿ ಬಳಸಿದಂತೆ ಆಗುತ್ತದಲ್ಲವೇ? ನಿಜವೇನೆಂದರೆ ಆ ಹೋಲಿಕೆಯಲ್ಲಿ ಒಂದು ತಪ್ಪಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬದಲಾಗುತ್ತವೆ, ಆದರೆ ಮಾನವನ ಮೂಲ ಅಗತ್ಯಗಳು ಬದಲಾಗಿಲ್ಲ ತಾನೇ? ಈಗಲೂ ಜನರಿಗೆ ಬದುಕಿಗೊಂದು ಅರ್ಥ, ಸಂತೋಷ, ಭದ್ರತೆ, ಸುಖೀ ಸಂಸಾರ ಮತ್ತು ಒಳ್ಳೇ ಸ್ನೇಹಿತರು ಬೇಕು.
ಬೈಬಲ್ ಅಷ್ಟು ಹಳೇ ಕಾಲದ್ದಾಗಿದ್ದರೂ ಮಾನವನ ಈ ಅಗತ್ಯಗಳನ್ನು ಮತ್ತು ಬೇರೆ ಅಗತ್ಯಗಳನ್ನು ಪೂರೈಸಲು ಸಹಾಯಮಾಡುತ್ತದೆ. ಅದನ್ನು ಸೃಷ್ಟಿಕರ್ತನ ಪ್ರೇರಣೆಯಿಂದ ಬರೆಯಲಾಯಿತೆಂದು ಬೈಬಲೇ ಹೇಳುತ್ತದೆ. ಅದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಮಗೆ ದಾರಿತೋರಿಸಿ, ಪ್ರಾಮುಖ್ಯವಾದ ಯಾವುದೇ ಸವಾಲನ್ನು ಎದುರಿಸಲು ಬೇಕಾದ ಸಹಾಯ ನೀಡುತ್ತದೆಂದೂ ಹೇಳುತ್ತದೆ. (2 ತಿಮೊಥೆಯ 3:16, 17) ಅಷ್ಟುಮಾತ್ರವಲ್ಲ, ಯಾವತ್ತೂ ಹಳೇದಾಗದ, ಸದಾ ಪ್ರಯೋಜನ ತರುವ ಬುದ್ಧಿವಾದ-ಸಲಹೆ ಕೊಡುತ್ತದೆಂದೂ ಹೇಳುತ್ತದೆ! ‘ದೇವರ ವಾಕ್ಯ ಸಜೀವವಾದದ್ದು’ ಅಂದರೆ ಜೀವಂತವಾದದ್ದು ಎಂದು ಅದು ಹೇಳುತ್ತದೆ.—ಇಬ್ರಿಯ 4:12.
ಬೈಬಲ್ ಹೇಳುವ ಈ ಎಲ್ಲ ಮಾತು ನಿಜನಾ? ಅದು ಈಗಿನ ಕಾಲಕ್ಕೆ ಪ್ರಯೋಜನವಿಲ್ಲದ ಪುಸ್ತಕನಾ? ಅಥವಾ ಒಂದು ಜೀವಂತ ಪುಸ್ತಕ ಅಂದರೆ ನಮ್ಮ ಕಾಲಕ್ಕೂ ತುಂಬ ಸೂಕ್ತ, ಪ್ರಾಯೋಗಿಕ ಪುಸ್ತಕ ಆಗಿದೆಯಾ? ನೀವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಸಹಾಯಮಾಡುವುದೇ ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯ ಉದ್ದೇಶ ಆಗಿದೆ. ಇದು ವಿಶೇಷ ಸಂಚಿಕೆಗಳ ಸರಮಾಲೆಯಲ್ಲಿ ಮೊದಲನೆಯದ್ದು.