ಜೀವನ ಕಥೆ
ಸೇವೆಯಲ್ಲೇ ಸಾಗಿದ ನನ್ನ ಪಯಣ
1951ರಲ್ಲಿ ನಾನು ರೂಅನ್ ಅನ್ನೋ ಒಂದು ಚಿಕ್ಕ ಪಟ್ಟಣಕ್ಕೆ ಆಗತಾನೇ ಹೋದೆ. ಅದು ಕೆನಡಾದ ಕ್ವಿಬೆಕ್ ನಗರದಲ್ಲಿದೆ. ನನ್ ಹತ್ರ ಒಂದ್ ಅಡ್ರೆಸ್ ಇತ್ತು. ಅದನ್ನ ಹುಡುಕ್ಕೊಂಡು ಒಂದ್ ಮನೆಗೆ ಹೋಗಿ ಬಾಗಿಲು ತಟ್ಟಿದೆ. ಗಿಲ್ಯಡ್ ಪದವಿ ಪಡ್ಕೊಂಡು ಮಿಷನರಿ ಆಗಿದ್ದ ಸಹೋದರ ಮಾರ್ಸೆಲ್ ಫಿಲ್ಟೋ a ಬಾಗಿಲು ತೆಗೆದ್ರು. ಅವ್ರಿಗೆ 23 ವರ್ಷ, ತುಂಬ ಉದ್ದ ಇದ್ರು. ನನಗೆ 16 ವರ್ಷ, ತುಂಬ ಕುಳ್ಳಗಿದ್ದೆ. ನಂಗೆ ಪಯನೀಯರ್ ನೇಮಕ ಸಿಕ್ಕಿತ್ತು, ಆ ಪತ್ರನ ಅವ್ರಿಗೆ ತೋರಿಸಿದೆ. ಅವರು ಅದನ್ನ ಓದಿ ‘ನೀನ್ ಬಂದಿರೋದು ನಿಮ್ಮಮ್ಮಂಗೆ ಗೊತ್ತು ತಾನೇ? ಮನೇಲಿ ಯಾರು ಹುಡುಕಲ್ಲ ಅಲ್ವಾ?’ ಅಂತ ತಮಾಷೆ ಮಾಡಿದ್ರು.
ನನ್ನ ಕುಟುಂಬ
ನಾನ್ ಹುಟ್ಟಿದ್ದು 1934ರಲ್ಲಿ. ನಮ್ಮ ಅಪ್ಪ-ಅಮ್ಮ ಸ್ವಿಜರ್ಲ್ಯಾಂಡ್ನಿಂದ ಟಿಮಿನ್ಸ್ಗೆ ಬಂದು ಸೆಟಲ್ ಆಗಿದ್ರು. ಇದು ಇರೋದು ಕೆನಡಾದ ಆಂಟೇರಿಯೋದಲ್ಲಿ. ನಾವು ಒಟ್ಟು 7 ಜನ ಮಕ್ಕಳು. 1939ರಲ್ಲಿ ನಮ್ಮಮ್ಮ ಕಾವಲಿನಬುರುಜು ಪತ್ರಿಕೆಗಳನ್ನ ಓದೋಕೆ ಮತ್ತು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗೋಕೆ ಶುರುಮಾಡಿದ್ರು. ನಮ್ಮನ್ನೂ ಕರ್ಕೊಂಡು ಹೋಗ್ತಿದ್ರು. ಸ್ವಲ್ಪದ್ರಲ್ಲೇ ಅವರು ಒಬ್ಬ ಯೆಹೋವನ ಸಾಕ್ಷಿ ಆದ್ರು.
ನಮ್ಮಪ್ಪಂಗೆ ಇದು ಒಂಚೂರೂ ಇಷ್ಟ ಆಗ್ಲಿಲ್ಲ. ಆದ್ರೆ ಅಮ್ಮ ಮಾತ್ರ ಯಾವತ್ತೂ ಯೆಹೋವನನ್ನ ಬಿಡಬಾರದು ಅಂತ ತೀರ್ಮಾನ ಮಾಡಿದ್ರು. ಕೆನಡಾದಲ್ಲಿ 1940ರಷ್ಟಕ್ಕೆ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ನಿಷೇಧ ಹಾಕಿದಾಗ್ಲೂ ಅಮ್ಮ ತೀರ್ಮಾನ ಬದಲಾಯಿಸಲಿಲ್ಲ. ಇದಷ್ಟೇ ಅಲ್ಲ, ಅಪ್ಪನೂ ಅಮ್ಮನ ಜೊತೆ ತುಂಬ ಒರಟಾಗಿ ನಡ್ಕೊತಿದ್ರು. ಯಾವಾಗ್ಲೂ ಅವ್ರ ಮನಸ್ಸಿಗೆ ನೋವಾಗೋ ತರ ಮಾತಾಡ್ತಿದ್ರು. ಆದ್ರೆ ಅಮ್ಮ ಮಾತ್ರ ಯಾವಾಗ್ಲೂ ಅಪ್ಪನ ಹತ್ರ ಪ್ರೀತಿಯಿಂದ ಮಾತಾಡ್ತಿದ್ರು, ಅವ್ರಿಗೆ ತುಂಬ ಗೌರವ ಕೊಡ್ತಿದ್ರು. ಅಮ್ಮನ್ನ ನೋಡಿ ನಾವು ಏಳು ಮಕ್ಕಳೂ ಯೆಹೋವನ ಸೇವೆ ಮಾಡಬೇಕು ಅಂದ್ಕೊಂಡ್ವಿ. ಹೋಗ್ತಾಹೋಗ್ತಾ ಅಪ್ಪನೂ ಬದಲಾದ್ರು. ನಮ್ ಜೊತೆ ಪ್ರೀತಿಯಿಂದ ನಡ್ಕೊಳ್ಳೋಕೆ ಶುರು ಮಾಡಿದ್ರು. ಆಗ ನಮಗೆ ಖುಷಿ ಆಯ್ತು.
ಪೂರ್ಣ ಸಮಯದ ಸೇವೆ
ನಾನು ಆಗಸ್ಟ್ 1950ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ “ದೇವಪ್ರಭುತ್ವದ ಅಭಿವೃದ್ಧಿ” ಅನ್ನೋ ಸಮ್ಮೇಳನಕ್ಕೆ ಹೋದೆ. ಬೇರೆಬೇರೆ ಕಡೆಯಿಂದ ಬಂದಿದ್ದ ಸಹೋದರ ಸಹೋದರಿಯರನ್ನ ಭೇಟಿಮಾಡಿದಾಗ, ಗಿಲ್ಯಡ್ ಪದವಿ ಪಡ್ಕೊಂಡವ್ರ ಸಂದರ್ಶನ ಕೇಳಿಸ್ಕೊಂಡಾಗ ನನಗೂ ಯೆಹೋವನ ಸೇವೆ ಮಾಡಬೇಕು ಅನ್ನೋ ಆಸೆ ಜಾಸ್ತಿ ಆಯ್ತು. ಹೇಗಾದ್ರೂ ಮಾಡಿ ಪೂರ್ಣ ಸಮಯದ ಸೇವೆ ಮಾಡಬೇಕು ಅಂತ ಅಂದ್ಕೊಂಡೆ. ಅದಕ್ಕೇ ಮನೆಗೆ ಹೋದ ತಕ್ಷಣ ರೆಗ್ಯುಲರ್ ಪಯನೀಯರಿಂಗ್ ಮಾಡೋಕೆ ಅರ್ಜಿ ಹಾಕಿದೆ. ಅದನ್ನ ಮಾಡಬೇಕಂದ್ರೆ ಮೊದ್ಲು ನಾನು ದೀಕ್ಷಾಸ್ನಾನ ತಗೊಬೇಕು ಅಂತ ಕೆನಡಾ ಬ್ರಾಂಚ್ನಿಂದ ನನಗೆ ಪತ್ರ ಬಂತು. ಅಕ್ಟೋಬರ್ 1, 1950ರಲ್ಲಿ ನಾನು ದೀಕ್ಷಾಸ್ನಾನ ತಗೊಂಡೆ. ಒಂದು ತಿಂಗಳಾದ್ಮೇಲೆ ರೆಗ್ಯುಲರ್ ಪಯನೀಯರ್ ಆದೆ. ನನಗೆ ಕಪಸ್ಕೇಸಿಂಗ್ ಅನ್ನೋ ಜಾಗಕ್ಕೆ ಮೊದಲನೇ ನೇಮಕ ಸಿಕ್ತು. ಅದು ನಮ್ಮ ಮನೆಯಿಂದ ತುಂಬ ದೂರ ಇತ್ತು.
ಕ್ವಿಬೆಕ್ನ ಫ್ರೆಂಚ್ ಭಾಷೆಯ ಟೆರಿಟರಿಯಲ್ಲಿ ತುಂಬ ಅಗತ್ಯ ಇತ್ತು. ಹಾಗಾಗಿ ಫ್ರೆಂಚ್ ಭಾಷೆ ಗೊತ್ತಿರೋರು ಯಾರಾದ್ರೂ ಅಲ್ಲಿಗೆ ಹೋಗ್ತೀರಾ ಅಂತ ಬ್ರಾಂಚ್ 1951ರಲ್ಲಿ ಕೇಳ್ತು. ನನಗೆ ಫ್ರೆಂಚ್, ಇಂಗ್ಲಿಷ್ ಎರಡೂ ಬರ್ತಿದ್ರಿಂದ ಅಲ್ಲಿಗೆ ಹೋಗೋಕೆ ನಾನು ರೆಡಿ ಇದ್ದೆ. ನನಗೆ ರೂಅನ್ ಅನ್ನೋ ಜಾಗಕ್ಕೆ ಹೋಗೋಕೆ ನೇಮಕ ಸಿಕ್ತು. ಆದ್ರೆ ಅಲ್ಲಿ ನನಗೆ ಯಾರೂ ಪರಿಚಯ ಇರ್ಲಿಲ್ಲ. ನಾನು ಮುಂಚೆ ಹೇಳಿದ ತರ ನನ್ ಕೈಯಲ್ಲಿದ್ದ ಅಡ್ರೆಸ್ನ ಹುಡುಕ್ಕೊಂಡು ಹೋದೆ. ಅಲ್ಲಿ ನಾನು ಮತ್ತು ಮಾರ್ಸೆಲ್ ಒಳ್ಳೇ ಫ್ರೆಂಡ್ಸ್ ಆದ್ವಿ. ನಾನು ಕ್ವಿಬೆಕ್ನಲ್ಲಿ ನಾಲ್ಕು ವರ್ಷ ಸೇವೆ ಮಾಡಿದೆ. ನಾಲ್ಕನೇ ವರ್ಷದ ಕೊನೇಲಿ ವಿಶೇಷ ಪಯನೀಯರ್ ಆದೆ.
ಮೊದ್ಲು ಗಿಲ್ಯಡ್ ಶಾಲೆ, ಆಮೇಲೆ ಮದುವೆ
ನಾನಿನ್ನೂ ಕ್ವಿಬೆಕ್ನಲ್ಲಿದ್ದಾಗ ನ್ಯೂಯಾರ್ಕ್ನ ಸೌತ್ ಲ್ಯಾನ್ಸಿಂಗ್ನಲ್ಲಿ ನಡೆದ 26ನೇ ಗಿಲ್ಯಡ್ ಶಾಲೆಗೆ ಹೋದೆ. ಆಗ ನನಗೆ ತುಂಬ ಖುಷಿ ಆಯ್ತು. ಫೆಬ್ರವರಿ 12, 1956ರಲ್ಲಿ ನನಗೆ ಗಿಲ್ಯಡ್ ಪದವಿ ಸಿಕ್ತು. ಪಶ್ಚಿಮ ಆಫ್ರಿಕಾದಲ್ಲಿ ಇದ್ದ ಘಾನಗೆ b ಹೋಗೋಕೆ ನನಗೆ ಹೇಳಿದ್ರು. ಆದ್ರೆ ಅಲ್ಲಿಗೆ ಹೋಗೋಕೆ ಡಾಕ್ಯುಮೆಂಟ್ಸ್ನ ರೆಡಿ ಮಾಡ್ಕೊಬೇಕಿತ್ತು. ಅದಕ್ಕೇ ನಾನು ಕೆನಡಾಗೆ ವಾಪಸ್ ಹೋಗಬೇಕಿತ್ತು. “ಬರಿ ಒಂದೆರಡು ವಾರದಲ್ಲಿ” ಕೆಲಸ ಮುಗಿದುಹೋಗುತ್ತೆ ಅಂತ ಅಂದ್ಕೊಂಡಿದ್ದೆ.
ಆದ್ರೆ ನಾನು ಟೊರಾಂಟೊದಲ್ಲಿ ಡಾಕ್ಯುಮೆಂಟ್ಸ್ಗೋಸ್ಕರ 7 ತಿಂಗಳು ಕಾಯಬೇಕಾಯ್ತು. ಆ ಟೈಮಲ್ಲಿ ಸಹೋದರ ಕ್ರಿಪ್ಸ್ ಅವರು ನನ್ನನ್ನ ಅವ್ರ ಮನೇಲಿ ಉಳಿಸ್ಕೊಂಡು ಚೆನ್ನಾಗಿ ನೋಡ್ಕೊಂಡ್ರು. ಅಲ್ಲಿ ನನಗೆ ಅವ್ರ ಮಗಳು ಶೀಲ ಪರಿಚಯ ಆದಳು. ನಾವು ಒಬ್ರನ್ನೊಬ್ರು ತುಂಬ ಇಷ್ಟಪಡ್ತಿದ್ವಿ. ಇನ್ನೇನು ನಾನು ಅವಳಿಗೆ ನಾವಿಬ್ರೂ ಮದ್ವೆ ಆಗೋಣ್ವಾ? ಅಂತ ಕೇಳೋಷ್ಟ್ರಲ್ಲಿ ನನ್ ವೀಸಾ ಬಂದುಬಿಡ್ತು. ಆಗ ನಾನು ಮತ್ತು ಶೀಲ ಒಟ್ಟಿಗೆ ಪ್ರಾರ್ಥನೆ ಮಾಡಿದ್ವಿ. ನಾನು ಘಾನಗೆ ಹೋಗೋದೇ ಒಳ್ಳೇದು ಅಂತ ತೀರ್ಮಾನ ಮಾಡಿದ್ವಿ. ಆದ್ರೆ ಅಲ್ಲಿಗೆ ಹೋದ್ಮೇಲೆ ಪತ್ರಗಳನ್ನ ಬರಿತಾ ಇರೋಣ, ಸ್ವಲ್ಪ ಸಮಯ ಕಾದು ಸರಿಯಾದ ಸಮಯಕ್ಕೆ ಮದ್ವೆ ಆಗೋಣ ಅಂತ ಮಾತಾಡ್ಕೊಂಡ್ವಿ. ಈ ತರ ಒಬ್ರನ್ನೊಬ್ರು ಬಿಟ್ಟಿರೋಕೆ ಕಷ್ಟ ಆಗ್ತಿತ್ತು. ಆದ್ರೆ ಆಮೇಲೆ ನಾವು ಮಾಡಿದ ನಿರ್ಧಾರ ಸರಿಯಾಗೇ ಇತ್ತು ಅಂತ ಗೊತ್ತಾಯ್ತು.
ನಾನು ಟ್ರೈನಲ್ಲಿ, ಹಡಗಲ್ಲಿ ಮತ್ತು ವಿಮಾನದಲ್ಲಿ ಸುಮಾರು 1 ತಿಂಗಳು ಪ್ರಯಾಣ ಮಾಡಿದ ಮೇಲೆ ಘಾನದಲ್ಲಿರೋ ಆಕ್ರಾ ನಗರಕ್ಕೆ ಬಂದು ತಲುಪಿದೆ. ಅಲ್ಲಿ ನಾನು ಜಿಲ್ಲಾ ಮೇಲ್ವಿಚಾರಕನಾಗಿ ಕೆಲಸ ಮಾಡಿದೆ. ನಾನು ಘಾನದಲ್ಲಷ್ಟೇ ಅಲ್ಲ ಐವರಿ ಕೋಸ್ಟ್ (ಈಗಿನ ಕೋಟ್ ಡೀವಾರ್) ಮತ್ತು ಟೋಗೋಲ್ಯಾಂಡ್ನಲ್ಲೂ (ಈಗಿನ ಟೋಗೋ) ಸೇವೆ ಮಾಡ್ತಿದ್ದೆ. ಎಷ್ಟೋ ಸಲ ನಾನು ಅಲ್ಲಿಗೆಲ್ಲ
ಬ್ರಾಂಚ್ ಕೊಟ್ಟಿರೋ ಜೀಪ್ ತಗೊಂಡು ಒಬ್ಬನೇ ಹೋಗ್ತಿದ್ದೆ. ಅಲ್ಲಿ ಸೇವೆ ಮಾಡಿದ ಒಂದೊಂದು ಕ್ಷಣನೂ ನಂಗ್ ತುಂಬ ಹಿಡಿಸ್ತು!ವಾರಾಂತ್ಯಗಳಲ್ಲಿ ನಾನು ಸರ್ಕಿಟ್ ಸಮ್ಮೇಳನಗಳಿಗೆ ಹೋಗ್ತಿದ್ದೆ. ಆದ್ರೆ ಆಗ ನಮಗೆ ಹಾಲ್ಗಳು ಇರ್ತಿರಲಿಲ್ಲ. ಅದಕ್ಕೇ ನಮ್ಮ ಸಹೋದರರು ಬಿದಿರಿಂದ ಚಾವಣಿ ಮಾಡಿ ಅದ್ರ ಮೇಲೆ ತಾಳೆ ಗರಿಗಳನ್ನ ಹಾಕಿ ಒಂದು ಹಾಲ್ ತರ ರೆಡಿ ಮಾಡ್ತಿದ್ರು. ಅದ್ರ ನೆರಳಲ್ಲಿ ನಾವು ಕೂತ್ಕೊತಿದ್ವಿ. ಕ್ಯಾಂಟಿನ್ನಲ್ಲಿ ಫ್ರಿಜ್ ಇಲ್ದೆ ಇದ್ದಿದ್ರಿಂದ ನಮ್ಮ ಸಹೋದರರು ಸಮ್ಮೇಳನಕ್ಕೆ ಬಂದಿರೋರಿಗೆ ಅಡುಗೆ ಮಾಡೋಕಂತ ಪ್ರಾಣಿಗಳನ್ನ ಅಲ್ಲೇ ಇಟ್ಕೊಂಡಿರ್ತಿದ್ರು. ಬೇಕಾದಾಗ ಅದನ್ನ ಕಡಿದು ಅಡುಗೆ ಮಾಡಿ ಕೊಡ್ತಿದ್ರು.
ಒಂದ್ಸಲ ಏನಾಯ್ತು ಗೊತ್ತಾ? ಅವತ್ತು ಸಹೋದರ ಹರ್ಬ್ ಜೆನಿಂಗ್ಸ್ c ಭಾಷಣ ಕೊಡ್ತಿದ್ರು. ಅವರು ಮಿಷನರಿ ಆಗಿದ್ರು. ಆಗ ಕ್ಯಾಂಟಿನ್ನಿಂದ ಒಂದು ದನ ತಪ್ಪಿಸ್ಕೊಂಡು ಸ್ಟೇಜ್ ಮುಂದೆ ಬಂದುಬಿಡ್ತು. ಆಗ ಸಹೋದರ ಹರ್ಬ್ ಭಾಷಣ ಕೊಡೋದನ್ನ ನಿಲ್ಲಿಸಿದ್ರು. ಆ ದನಕ್ಕೆ ಎಲ್ಲಿ ಹೋಗಬೇಕು ಅಂತ ಗೊತ್ತಾಗದೇ ಅಲ್ಲಲ್ಲೇ ಸುತ್ತುಹೊಡಿತಿತ್ತು. ಆಗ ಕಟ್ಟುಮಸ್ತಾಗಿರೋ ನಮ್ಮ ನಾಲ್ಕು ಸಹೋದರರು ಹೋಗಿ ಅದನ್ನ ಹಿಡಿದು ಕ್ಯಾಂಟಿನ್ಗೆ ವಾಪಸ್ ತಗೊಂಡು ಹೋದ್ರು. ಆಗ ಅಲ್ಲಿದ್ದ ಸಹೋದರ ಸಹೋದರಿಯರೆಲ್ಲ ನಗಾಡ್ತಾ ಓ. . . . . ! ಅಂತ ಕಿರುಚ್ತಿದ್ರು.
ಸಮ್ಮೇಳನ ಇಲ್ದೆ ಇದ್ದಾಗ ಅಂದ್ರೆ ವಾರಮಧ್ಯದಲ್ಲಿ ನಾನು ಸುತ್ತಮುತ್ತ ಇದ್ದ ಹಳ್ಳಿಗಳಿಗೆ ಹೋಗ್ತಿದ್ದೆ. ಅಲ್ಲಿ ದ ನ್ಯೂ ವರ್ಲ್ಡ್ ಸೊಸೈಟಿ ಇನ್ ಆ್ಯಕ್ಷನ್ ಅನ್ನೋ ಫಿಲ್ಮ್ನ ಜನ್ರಿಗೆ ತೋರಿಸ್ತಿದ್ದೆ. ಒಂದು ಬಿಳೀ ಪರದೆನ ಎರಡು ಮರಕ್ಕೆ ಅಥವಾ ಕಂಬಕ್ಕೆ ಕಟ್ಟಿ ಆ ಫಿಲ್ಮ್ನ ತೋರಿಸ್ತಿದ್ದೆ. ಊರಿನವ್ರಿಗೆಲ್ಲ ಅದು ತುಂಬ ಇಷ್ಟ ಆಯ್ತು. ಎಷ್ಟೋ ಜನ ಅವ್ರ ಜೀವನದಲ್ಲಿ ಇದೇ ಮೊದಲನೇ ಸಲ ಒಂದು ಫಿಲ್ಮ್ ನೋಡ್ತಾ ಇದ್ದಿದ್ದು. ಆ ಫಿಲ್ಮಲ್ಲಿ ಜನ್ರು ದೀಕ್ಷಾಸ್ನಾನ ತಗೊಳ್ಳೋದನ್ನ ನೋಡುವಾಗ ಅವರು ಜೋರಾಗಿ ಚಪ್ಪಾಳೆ ತಟ್ತಿದ್ರು. ಯೆಹೋವನ ಸಾಕ್ಷಿಗಳು ಒಗ್ಗಟ್ಟಾಗಿದ್ದಾರೆ, ಅವರು ಪ್ರಪಂಚದ ಮೂಲೆ ಮೂಲೆಯಲ್ಲೂ ಇದ್ದಾರೆ ಅಂತ ಆ ಜನ್ರಿಗೆ ಗೊತ್ತಾಯ್ತು.
ನಾನು ಆಫ್ರಿಕಾದಲ್ಲಿದ್ದು ಸುಮಾರು 2 ವರ್ಷ ಆದ್ಮೇಲೆ ಅಂದ್ರೆ 1958ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಅಂತರಾಷ್ಟ್ರೀಯ ಅಧಿವೇಶನಕ್ಕೆ ಹೋದೆ. ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು. ಆ ಅಧಿವೇಶನಕ್ಕೆ ಶೀಲನೂ ಬಂದಿದ್ದಳು. ಅವಳು ಕ್ವಿಬೆಕ್ನಲ್ಲಿ ವಿಶೇಷ ಪಯನೀಯರ್ ಆಗಿ ಸೇವೆ ಮಾಡ್ತಿದ್ದಳು. ಇಷ್ಟು ದಿನ ನಾವು ಒಬ್ರಿಗೊಬ್ರು ಪತ್ರ ಬರೀತಿದ್ವಿ ಅದ್ರೆ ಈಗ ಅವಳನ್ನ ಎದುರುಗಡೆನೇ ನೋಡಿದಾಗ ಸಖತ್ ಖುಷಿ ಆಯ್ತು. ನಾವಿಬ್ರು ಮದ್ವೆ ಆಗೋಣ್ವಾ ಅಂತ ಕೇಳ್ದೆ. ಅದಕ್ಕೆ ಅವಳು ಒಪ್ಕೊಂಡಳು. ನಾನು ಸಹೋದರ ನಾರ್ಗೆ d ಪತ್ರ ಬರೆದು ಶೀಲನೂ ಗಿಲ್ಯಡ್ಗೆ ಹೋಗಿ ಆಮೇಲೆ ನನ್ ಜೊತೆ ಬಂದು ಆಫ್ರಿಕಾದಲ್ಲಿ ಸೇವೆ ಮಾಡಬಹುದಾ ಅಂತ ಕೇಳ್ದೆ. ಅದಕ್ಕೆ ಅವರು ಒಪ್ಕೊಂಡ್ರು. ಆಮೇಲೆ ಶೀಲ ಘಾನಗೆ ಬಂದಳು. ಅಕ್ಟೋಬರ್ 3, 1959ರಲ್ಲಿ ಆಕ್ರಾ ನಗರದಲ್ಲಿ ನಾವು ಮದ್ವೆ ಆದ್ವಿ. ನಮ್ ಜೀವನದಲ್ಲಿ ಯೆಹೋವನಿಗೆ ಮೊದಲನೇ ಸ್ಥಾನ ಕೊಟ್ಟಿದ್ರಿಂದ ಯೆಹೋವ ನಮ್ಮನ್ನ ತುಂಬ ಆಶೀರ್ವದಿಸಿದನು.
ಕ್ಯಾಮರೂನ್ನಲ್ಲಿ ಒಟ್ಟಿಗೆ ಸೇವೆ ಮಾಡಿದ್ವಿ
1961ರಲ್ಲಿ ನಮ್ಮನ್ನ ಕ್ಯಾಮರೂನ್ಗೆ ಕಳಿಸಿದ್ರು. ಅಲ್ಲಿ ನಾನು ಒಂದು ಹೊಸ ಬ್ರಾಂಚ್ ಆಫೀಸ್ನ ಶುರು ಮಾಡಬೇಕಿತ್ತು. ಹಾಗಾಗಿ ನಾನು ಆ ಕೆಲಸದಲ್ಲಿ ಬಿಜ಼ಿ ಇದ್ದೆ. ಕ್ಯಾಮರೂನ್ನಲ್ಲಿ ನಡಿತಿರೋ ಎಲ್ಲಾ ಕೆಲಸಗಳನ್ನ ನಾನೇ ನೋಡ್ಕೊಬೇಕಿದ್ರಿಂದ ತುಂಬ ವಿಷ್ಯಗಳನ್ನ ಕಲಿಬೇಕಿತ್ತು. ಆದ್ರೆ 1965ರಲ್ಲಿ ಶೀಲ ಅಮ್ಮ ಆಗ್ತಿದ್ದಾಳೆ ಅಂತ ಗೊತ್ತಾಯ್ತು. ಅಪ್ಪಅಮ್ಮ ಆಗಿ ಆ ಮಗುನ ಹೇಗೆ ಬೆಳೆಸ್ತೀವೋ ಅಂತ ತುಂಬ ಚಿಂತೆ ಆಗ್ತಿತ್ತು. ಆದ್ರೆ ಯೆಹೋವ ಕೊಟ್ಟಿರೋ ಈ ದೊಡ್ಡ ಜವಾಬ್ದಾರಿನ ಚೆನ್ನಾಗಿ ಮಾಡೋಕೆ ನಾವು ತಯಾರಾಗ್ತಿದ್ವಿ. ಕೆನಡಾಗೆ ವಾಪಸ್ ಹೋಗೋಕೂ ಪ್ಲಾನ್ ಮಾಡ್ತಿದ್ವಿ. ಆದ್ರೆ ನಮ್ ಎದೆನೇ ಒಡೆದುಹೋಗೋ ಒಂದು ಘಟನೆ ನಡಿತು.
ನಮ್ ಮಗು ಹೊಟ್ಟೆಲಿ ಇರುವಾಗ್ಲೇ ತೀರಿಹೋಯ್ತು. ಅದು ಗಂಡುಮಗು ಆಗಿತ್ತು ಅಂತ ಡಾಕ್ಟರ್ ನಮಗೆ ಹೇಳಿದ್ರು. ಇದೆಲ್ಲ ಆಗಿ 50 ವರ್ಷದ ಮೇಲಾಯ್ತು. ಆದ್ರೂ ಅದನ್ನ ನಾವಿನ್ನು ಮರೆತಿಲ್ಲ. ಆಗ ನಮಗೆ ಆ ನೋವನ್ನ ತಡ್ಕೊಳ್ಳೋಕಾಗಲಿಲ್ಲ. ಆದ್ರೂ ನಮಗೆ ಕೊಟ್ಟಿದ್ದ ನೇಮಕನ ನಾವು ಮುಂದುವರಿಸ್ಕೊಂಡು ಹೋದ್ವಿ. ಯಾಕಂದ್ರೆ ಆ ನೇಮಕ ನಮಗೆ ತುಂಬ ಇಷ್ಟ ಆಗಿತ್ತು.
ನಮ್ಮ ಸಹೋದರ ಸಹೋದರಿಯರು ರಾಜಕೀಯ ವಿಷ್ಯದಲ್ಲಿ ತಲೆ ಹಾಕದೆ ಇದ್ದಿದ್ರಿಂದ ಕ್ಯಾಮರೂನ್ನಲ್ಲಿ ಅವ್ರಿಗೆ ತುಂಬ ಹಿಂಸೆ ಬಂತು. ಅದ್ರಲ್ಲೂ ಚುನಾವಣೆ ಬಂದಾಗಂತೂ ಅವ್ರಿಗೆ ತುಂಬ ಕಷ್ಟ ಆಗ್ತಿತ್ತು. ನಾವು ಏನಾಗಬಾರದು ಅಂದ್ಕೊಂಡಿದ್ವೋ ಅದು ಮೇ 13, 1970ರಲ್ಲಿ ಆಗೇ ಬಿಡ್ತು. ಕ್ಯಾಮರೂನ್ ದೇಶ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ತಂತು. ಅಷ್ಟೇ ಅಲ್ಲ, ನಾವು ಹೊಸ ಬ್ರಾಂಚ್ ಆಫೀಸಿಗೆ ಹೋಗಿ ಬರೀ 5 ತಿಂಗಳಾಗಿತ್ತಷ್ಟೆ. ಅದನ್ನೂ ಸರ್ಕಾರ ಜಪ್ತಿ ಮಾಡ್ತು. ಅದೂ ಅಲ್ದೆ, ಒಂದೇ ವಾರದಲ್ಲಿ ನನ್ನನ್ನೂ ಶೀಲನ್ನೂ ಸೇರಿಸಿ ಎಲ್ಲಾ ಮಿಷನರಿಗಳನ್ನೂ ದೇಶದಿಂದ ಹೊರಗೆ ಹಾಕಿಬಿಟ್ರು. ಆಗ ನಮ್ಮ ಸಹೋದರ ಸಹೋದರಿಯರನ್ನೆಲ್ಲ ಬಿಟ್ಟುಹೋಗೋಕೆ ನಮಗೆ ತುಂಬ ಕಷ್ಟ ಆಯ್ತು. ಯಾಕಂದ್ರೆ ನಾವು ಅವ್ರನ್ನ ತುಂಬ ಪ್ರೀತಿಸ್ತಿದ್ವಿ. ಅವರು ಮುಂದೆ ಏನ್ ಮಾಡ್ತಾರೋ, ಹೇಗಿರ್ತಾರೋ ಅನ್ನೋ ಚಿಂತೆ ಯಾವಾಗ್ಲೂ ಕಾಡ್ತಿತ್ತು.
ಇದಾದ್ಮೇಲೆ ಫ್ರಾನ್ಸ್ ಬ್ರಾಂಚ್ ಆಫೀಸಲ್ಲಿ 6 ತಿಂಗಳು ಇದ್ವಿ. ಅಲ್ಲಿಂದಾನೇ ಕ್ಯಾಮರೂನ್ನಲ್ಲಿದ್ದ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನಮ್ಮಿಂದ ಆಗಿದ್ದನ್ನೆಲ್ಲ ಮಾಡಿದ್ವಿ. ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ನಮ್ಮನ್ನ ನೈಜೀರಿಯ ಬ್ರಾಂಚ್ಗೆ ಕಳಿಸಿದ್ರು. ನೈಜೀರಿಯದಲ್ಲಿದ್ದ ಸಹೋದರ ಸಹೋದರಿಯರು ನಮ್ಮನ್ನ ತುಂಬ ಪ್ರೀತಿಯಿಂದ ಸ್ವಾಗತಿಸಿದ್ರು. ಆ ಬ್ರಾಂಚಲ್ಲಿರೋ ಸಹೋದರರು ಕ್ಯಾಮರೂನ್ನಲ್ಲಿರೋ ಎಲ್ಲ ಕೆಲಸಗಳನ್ನ ನೋಡ್ಕೊಳ್ಳೋಕೆ ಶುರುಮಾಡಿದ್ರು. ನಾವು ಅಲ್ಲಿ ಕೆಲವು ವರ್ಷ ಸೇವೆ ಮಾಡ್ತಾ ಖುಷಿಯಾಗಿದ್ವಿ.
ಒಂದು ಕಷ್ಟವಾದ ತೀರ್ಮಾನ ಮಾಡಬೇಕಾಯ್ತು
1973ರಲ್ಲಿ ನಾವೊಂದು ಕಷ್ಟವಾದ ತೀರ್ಮಾನ ತಗೊಬೇಕಾಯ್ತು. ಶೀಲಗೆ ಆರೋಗ್ಯ ಹಾಳಾಯ್ತು. ನಾವು ಅಧಿವೇಶನಕ್ಕಂತ ನ್ಯೂಯಾರ್ಕ್ಗೆ ಹೋಗಿದ್ದಾಗ ಅವಳು ನನ್ನ ಹತ್ರ ಬಂದು ಅತ್ಕೊಂಡು ‘ಇನ್ನು ನನ್ನಿಂದ ಆಗಲ್ಲ, ನನಗೆ ಆಗಾಗ ಹುಷಾರು ತಪ್ತಿದೆ, ತುಂಬ ಕಷ್ಟ ಆಗ್ತಿದೆ’ ಅಂತ ಹೇಳಿದಳು. ಶೀಲ ನನ್ ಜೊತೆ ಪಶ್ಚಿಮ ಆಫ್ರಿಕಾದಲ್ಲಿ ಸುಮಾರು 14 ವರ್ಷ ಸೇವೆ ಮಾಡಿದ್ದಳು. ಅದನ್ನ ನೆನಸ್ಕೊಂಡಾಗ ಅವಳನ್ನ ನೋಡಿದ್ರೆ ಹೆಮ್ಮೆ ಆಗ್ತಿತ್ತು. ಆಗ ನಾವು ಕೆಲವು ಬದಲಾವಣೆಗಳನ್ನ ಮಾಡ್ಕೊಬೇಕಾಯ್ತು. ನಮಗೆ ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ತುಂಬ ಪ್ರಾರ್ಥನೆ ಮಾಡಿದ್ವಿ. ಕೆನಡಾಗೆ ಹೋದ್ರೆ ಅವಳನ್ನ ಚೆನ್ನಾಗಿ ನೋಡ್ಕೊಬಹುದು ಅಂತ ಅನಿಸ್ತು. ಹಾಗಾಗಿ ನಮ್ಮ ಮಿಷನರಿ ನೇಮಕನ ಮತ್ತು ಪೂರ್ಣ ಸಮಯದ ಸೇವೆನ ನಿಲ್ಲಿಸೋಕೆ ತೀರ್ಮಾನ ಮಾಡಿದ್ವಿ. ಆಗ ಮನ್ಸಿಗೆ ತುಂಬ ಕಷ್ಟ ಆಯ್ತು.
ನನ್ ಹಳೇ ಫ್ರೆಂಡ್ ಒಬ್ಬ ಕೆನಡಾದ ಟೊರಾಂಟೊದಲ್ಲಿ ಕಾರ್ ಬಿಜ಼್ನೆಸ್ ಮಾಡ್ತಿದ್ದ. ನಾನು ಅವನ ಜೊತೆ ಕೆಲ್ಸಕ್ಕೆ ಸೇರ್ಕೊಂಡೆ. ಆಮೇಲೆ ನಾವು ಒಂದು ಬಾಡಿಗೆ ಮನೆ ತಗೊಂಡ್ವಿ. ಸೆಕೆಂಡ್ ಹ್ಯಾಂಡ್ ವಸ್ತುಗಳನ್ನ ತಗೊಂಡ್ವಿ. ಇದನ್ನೆಲ್ಲ ತಗೊಳ್ಳೋಕೆ ನಾವು
ಯಾವತ್ತೂ ಸಾಲ ಮಾಡ್ಲಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚ್ಕೊಂಡು ಜೀವನ ಮಾಡೋಕೆ ಪ್ಲ್ಯಾನ್ ಮಾಡಿದ್ವಿ. ಯಾಕಂದ್ರೆ ಮುಂದೆ ಮತ್ತೆ ಪೂರ್ಣ ಸಮಯದ ಸೇವೆ ಮಾಡೋ ಗುರಿ ನಮಗಿತ್ತು. ಆದ್ರೆ ಆ ಗುರಿನ ತುಂಬ ಬೇಗ ತಲುಪ್ತೀವಿ ಅಂತ ಅಂದ್ಕೊಂಡೇ ಇರ್ಲಿಲ್ಲ.ಆಂಟೇರಿಯೋದ ನಾರ್ವಲ್ನಲ್ಲಿ ಒಂದು ಹೊಸ ಅಸ್ಸೆಂಬ್ಲಿ ಹಾಲ್ ಕಟ್ತಿದ್ರು. ನಾನು ಅಲ್ಲಿಗೆ ಪ್ರತೀ ಶನಿವಾರ ಹೋಗಿ ಕೆಲಸ ಮಾಡ್ತಿದ್ದೆ. ಸ್ವಲ್ಪ ದಿನ ಆದ್ಮೇಲೆ ನನಗೆ ಅಸೆಂಬ್ಲಿ ಹಾಲ್ನ ಮೇಲ್ವಿಚಾರಕನಾಗಿ ಸೇವೆ ಮಾಡೋ ನೇಮಕ ಸಿಕ್ತು. ಅಷ್ಟ್ರಲ್ಲಿ ಶೀಲನೂ ಚೇತರಿಸ್ಕೊಂಡಿದ್ದಳು. ಆಗ ನಮ್ಮಿಬ್ರಿಗೂ ಈ ಹೊಸ ನೇಮಕನ ಮಾಡೋಕಾಗುತ್ತೆ ಅಂತ ಅನಿಸ್ತು. ಹಾಗಾಗಿ ಜೂನ್ 1974ರಲ್ಲಿ ಅಸೆಂಬ್ಲಿ ಹಾಲ್ ಅಪಾರ್ಟ್ಮೆಂಟ್ಗೆ ಬಂದ್ವಿ. ಪೂರ್ಣ ಸಮಯದ ಸೇವೆನ ಮತ್ತೆ ಶುರುಮಾಡಿದ್ವಿ.
ಖುಷಿ ವಿಷ್ಯ ಏನಂದ್ರೆ ಶೀಲನ ಆರೋಗ್ಯ ಸುಧಾರಿಸ್ತಾ ಬಂತು. 2 ವರ್ಷ ಆದ್ಮೇಲೆ ನನಗೆ ಸಂಚರಣ ಮೇಲ್ವಿಚಾರಕನಾಗೋಕೆ ನೇಮಕ ಸಿಕ್ತು. ಕೆನಡಾದ ಮನಿಟೋಬಾ ಪ್ರಾಂತ್ಯದಲ್ಲಿ ನಮ್ ಸೇವೆ ಶುರುಮಾಡಿದ್ವಿ. ಅಲ್ಲಿ ಕೊರಿಯೋ ಚಳಿ ಇರ್ತಿತ್ತು. ಆದ್ರೆ ನಮ್ಮ ಸಹೋದರ ಸಹೋದರಿಯರ ಬೆಚ್ಚಗಿನ ಪ್ರೀತಿ ಮುಂದೆ ಆ ಚಳಿ ಏನೇನೂ ಅನಿಸ್ಲಿಲ್ಲ. ಆಗ ನಾನ್ ಕಲಿತ ಒಂದ್ ಪಾಠ ಏನಂದ್ರೆ, ನಾವು ಎಲ್ಲಿ ಸೇವೆ ಮಾಡ್ತೀವಿ ಅನ್ನೋದು ಮುಖ್ಯ ಅಲ್ಲ, ನಾವೆಲ್ಲೇ ಇದ್ರೂ ಯೆಹೋವನ ಸೇವೆ ಮಾಡ್ತಿದ್ದೀವಾ ಅನ್ನೋದು ಮುಖ್ಯ.
ನಾನು ಕಲಿತ ಒಂದು ಮುಖ್ಯ ಪಾಠ
ನಾನು ತುಂಬ ವರ್ಷ ಸರ್ಕಿಟ್ನಲ್ಲಿ ಕೆಲಸ ಮಾಡ್ದೆ. ಆಮೇಲೆ 1978ರಲ್ಲಿ ನನಗೆ ಕೆನಡಾ ಬೆತೆಲ್ಗೆ ಹೋಗೋಕೆ ಆಮಂತ್ರಣ ಸಿಕ್ತು. ನಾನು ಅಲ್ಲಿಗೆ ಹೋದ ಸ್ವಲ್ಪದ್ರಲ್ಲೇ ಒಂದು ಮುಖ್ಯ ಪಾಠ ಕಲಿತೆ. ಮಾಂಟ್ರಿಯಲ್ನಲ್ಲಿ ಒಂದು ವಿಶೇಷ ಕೂಟ ಇತ್ತು. ಅಲ್ಲಿ ಫ್ರೆಂಚ್ ಭಾಷೆಲಿ ಒಂದುವರೆ ತಾಸಿನ ಭಾಷಣ ಕೊಡಬೇಕಿತ್ತು. ಆದ್ರೆ ನನ್ನ ಭಾಷಣ ಜನ್ರಿಗೆ ಇಷ್ಟ ಆಗ್ಲಿಲ್ಲ ಅಂತ ನನಗೆ ಅನಿಸ್ತು. ಸರ್ವಿಸ್ ಡಿಪಾರ್ಟ್ಮೆಂಟ್ನಿಂದ ಒಬ್ಬ ಸಹೋದರ ಬಂದು ನನಗೆ ಸಲಹೆ ಕೊಟ್ರು. ನಿಜ ಹೇಳಬೇಕಂದ್ರೆ ನಾನು ಒಳ್ಳೇ ಭಾಷಣಗಾರ ಅಲ್ಲ ಅಂತ ಆಗ್ಲೇ ಒಪ್ಕೊಬೇಕಿತ್ತು. ಆದ್ರೆ ನಾನು ಆ ಸಲಹೆನ ಮನ್ಸಿಗೇ ತಗೊಳ್ಳಿಲ್ಲ. ಅವ್ರ ಮೇಲೆ ಕೋಪ ಮಾಡ್ಕೊಂಡು ಏನೇನೋ ಮಾತಾಡಿಬಿಟ್ಟೆ. ಭಾಷಣದಲ್ಲಿದ್ದ ಒಳ್ಳೇ ವಿಷ್ಯಗಳನ್ನ ಹೇಳದೇ ಬರೀ ನಾನೇನು ತಪ್ಪು ಮಾಡಿದೆ ಅಂತಷ್ಟೇ ಹೇಳ್ತಿದ್ದಾರಲ್ಲಾ ಅಂತ ಅನಿಸ್ತು. ನಾನು ಆ ಸಲಹೆ ಮೇಲೆ ಗಮನ ಕೊಡದೇ ಆ ವ್ಯಕ್ತಿ ಮೇಲೆ, ಅದನ್ನ ಕೊಟ್ಟ ರೀತಿ ಮೇಲೆ ಗಮನಕೊಟ್ಟೆ.
ಸ್ವಲ್ಪ ದಿನ ಆದ್ಮೇಲೆ ಬ್ರಾಂಚ್ ಕಮಿಟಿಯ ಸದಸ್ಯನಾಗಿದ್ದ ಒಬ್ಬ ಸಹೋದರ ಬಂದು ನನ್ ಹತ್ರ ಮಾತಾಡಿದ್ರು. ಆಗ ನಾನು ಅವ್ರ ಹತ್ರ ‘ನಿಜ, ನಾನು ಹಾಗೆಲ್ಲ ಮಾಡಬಾರದಿತ್ತು, ಅವರು ಕೊಟ್ಟ ಸಲಹೆನ ಒಪ್ಕೊಬೇಕಿತ್ತು. ಅವ್ರ ಮಾತನ್ನ ಕೇಳಬೇಕಿತ್ತು’ ಅಂತ ಹೇಳ್ದೆ. ಆಮೇಲೆ ನಾನು ಕೋಪದಿಂದ ರೇಗಾಡಿದ ಆ ಸಹೋದರನ ಹತ್ರನೂ ಹೋಗಿ ಕ್ಷಮೆ ಕೇಳಿದೆ. ಅವರು ನನ್ನ ಕ್ಷಮಿಸಿದ್ರು. ಇದ್ರಿಂದ ನಾನು ದೀನತೆ ಎಷ್ಟು ಮುಖ್ಯ ಅಂತ ಕಲಿತೆ. ಆ ಪಾಠನ ನಾನು ಇವತ್ತೂ ಮರೆತಿಲ್ಲ. (ಜ್ಞಾನೋ. 16:18) ನಾನು ಯೆಹೋವ ದೇವ್ರ ಹತ್ರ ಇದ್ರ ಬಗ್ಗೆ ತುಂಬ ಸಲ ಪ್ರಾರ್ಥನೆ ಮಾಡಿದ್ದೀನಿ. ಇನ್ಮೇಲೆ ಯಾರೇ ಸಲಹೆ ಕೊಟ್ರೂ ನಾನು ಬೇಜಾರ್ ಮಾಡ್ಕೊಬಾರ್ದು ಅಂತ ತೀರ್ಮಾನ ಮಾಡಿದ್ದೀನಿ.
ನಾನೀಗ ಕೆನಡಾ ಬೆತೆಲ್ಗೆ ಬಂದು 40ಕ್ಕಿಂತ ಜಾಸ್ತಿ ವರ್ಷ ಆಯ್ತು. 1985ರಿಂದ ನಾನು ಬ್ರಾಂಚ್ ಕಮಿಟಿಯ ಸದಸ್ಯನಾಗಿ ಸೇವೆ ಮಾಡ್ತಿದ್ದೀನಿ. ಫೆಬ್ರವರಿ 2021ರಲ್ಲಿ ನನ್ ಮುದ್ದಿನ ಹೆಂಡ್ತಿ ಶೀಲ ತೀರಿಕೊಂಡಳು. ಅದನ್ನ ನನ್ನ ಕೈಲಿ ಸಹಿಸ್ಕೊಳ್ಳೋಕೇ ಆಗ್ಲಿಲ್ಲ. ಅದೂ ಸಾಲದು ಅಂತ ನನಗೆ ಆರೋಗ್ಯ ಸಮಸ್ಯೆಗಳೂ ಶುರು ಆಯ್ತು. ಆದ್ರೆ ಯೆಹೋವನ ಸೇವೆಲಿ ನಾನು ಬಿಜ಼ಿಯಾಗಿ ಇರೋದ್ರಿಂದ ‘ಬದುಕಿನ ಕಷ್ಟಗಳು ನನ್ನ ಗಮನಕ್ಕೆ ಬರಲೇ ಇಲ್ಲ.’ (ಪ್ರಸಂ. 5:20) ನಾನು ತುಂಬ ಖುಷಿಯಾಗಿದ್ದೀನಿ. ಆ ಖುಷಿ ಮುಂದೆ ನನ್ನ ಆರೋಗ್ಯದ ಸಮಸ್ಯೆಗಳು ಏನೇನೂ ಅಲ್ಲ. 70 ವರ್ಷದಿಂದ ನಾನು ಪೂರ್ಣ ಸಮಯದ ಸೇವೆ ಮಾಡ್ತಾ ಯೆಹೋವನಿಗೆ ಮೊದಲನೇ ಸ್ಥಾನ ಕೊಟ್ಟಿದ್ರಿಂದ ನನ್ನ ಜೀವನ ಸಾರ್ಥಕ ಅಂತ ಅನಿಸ್ತಿದೆ. ನಮ್ಮ ಜೊತೆ ಇರೋ ಯುವ ಸಹೋದರ ಸಹೋದರಿಯರೂ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಡಬೇಕು ಅನ್ನೋದು ನನ್ನಾಸೆ. ಅವ್ರಿಗೋಸ್ಕರ ನಾನು ತುಂಬ ಪ್ರಾರ್ಥನೆ ಮಾಡ್ತಾ ಇರ್ತೀನಿ. ಯಾಕಂದ್ರೆ ಯೆಹೋವನ ಸೇವೇಲಿ ಸಿಗೋ ಖುಷಿ ಬೇರೆಲ್ಲೂ ಸಿಗಲ್ಲ. ಆ ಖುಷಿ ಅವ್ರಿಗೂ ಸಿಗಬೇಕು.
a “ಯೆಹೋವನು ನನ್ನ ಆಶ್ರಯದುರ್ಗವೂ ಬಲವೂ ಆಗಿದ್ದಾನೆ” ಅನ್ನೋ ಮಾರ್ಸೆಲ್ ಫಿಲ್ಟೋ ಅವ್ರ ಜೀವನ ಕಥೆನ ಫೆಬ್ರವರಿ 1, 2000ದ ಕಾವಲಿನಬುರುಜುನಲ್ಲಿ ಓದಿ.
b 1957ರ ತನಕ ಈ ಪ್ರದೇಶ ಬ್ರಿಟೀಷ್ ಕಾಲೋನಿಗೆ ಸೇರಿತ್ತು, ಇದನ್ನ ಗೋಲ್ಡ್ ಕೋಸ್ಟ್ ಅಂತ ಕರೀತಿದ್ರು.
c “ನಾಳೆ ಏನಾಗುವುದೋ ನಿಮಗೆ ತಿಳಿಯದು” ಅನ್ನೋ ಹರ್ಬರ್ಟ್ ಜೆನಿಂಗ್ಸ್ ಅವ್ರ ಜೀವನ ಕಥೆನ ಡಿಸೆಂಬರ್ 1, 2000ದ ಕಾವಲಿನಬುರುಜುನಲ್ಲಿ ಓದಿ.
d ಆ ಕಾಲದಲ್ಲಿ ನಮ್ಮ ಸಂಘಟನೆಯ ಕೆಲಸನೆಲ್ಲ ನೇತನ್ ಹೆಚ್. ನಾರ್ ಮುಂದೆ ನಿಂತು ನಡಿಸ್ತಿದ್ರು.