ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 37

ಗೀತೆ 81 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

ಪತ್ರ ಓದಿ—ಕೊನೇ ತನಕ ನಂಬಿಗಸ್ತರಾಗಿರಿ

ಪತ್ರ ಓದಿ—ಕೊನೇ ತನಕ ನಂಬಿಗಸ್ತರಾಗಿರಿ

“ಮೊದ್ಲು ನಮಗಿದ್ದ ನಂಬಿಕೆಯನ್ನ ಕೊನೇ ತನಕ” ಕಾಪಾಡ್ಕೊಳ್ತೀವಿ.—ಇಬ್ರಿ. 3:14.

ಈ ಲೇಖನದಲ್ಲಿ ಏನಿದೆ?

ಇಬ್ರಿಯ ಪತ್ರದಿಂದ ನಾವು ಕಲಿಯೋ ಪಾಠಗಳು ಲೋಕದ ಅಂತ್ಯ ಬರೋವರೆಗೂ ನಂಬಿಗಸ್ತರಾಗಿ ಇರೋಕೆ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.

1-2. (ಎ) ಅಪೊಸ್ತಲ ಪೌಲ ಇಬ್ರಿಯರಿಗೆ ಪತ್ರ ಬರೆದಾಗ ಯೂದಾಯದ ಕ್ರೈಸ್ತರ ಪರಿಸ್ಥಿತಿ ಹೇಗಿತ್ತು? (ಬಿ) ಯಾಕೆ ಆ ಪತ್ರ ಸಮಯಕ್ಕೆ ಸರಿಯಾಗಿತ್ತು?

 ಯೇಸು ತೀರಿಹೋದ್ಮೇಲೆ ಯೆರೂಸಲೇಮ್‌ ಮತ್ತು ಯೂದಾಯದಲ್ಲಿದ್ದ ಕ್ರೈಸ್ತರಿಗೆ ಒಂದಾದ ಮೇಲೊಂದು ಕಷ್ಟ ಬಂತು. ಆಗಷ್ಟೇ ಶುರು ಆಗಿದ್ದ ಕ್ರೈಸ್ತ ಸಭೆ ಮೇಲೆ ಸಿಕ್ಕಾಪಟ್ಟೆ ಹಿಂಸೆ ಬಂತು. (ಅ. ಕಾ. 8:1) ಸುಮಾರು 20 ವರ್ಷ ಆದ್ಮೇಲೆ ಅವ್ರಿಗೆ ಬರಗಾಲ ಬಂತು, ಹಣಕಾಸಿನ ತೊಂದ್ರೆ ಬಂತು. (ಅ. ಕಾ. 11:27-30) ಆದ್ರೆ ಕ್ರಿಸ್ತಶಕ 61ರಲ್ಲಿ ಸ್ವಲ್ಪಮಟ್ಟಿಗೆ ಶಾಂತಿ-ಸಮಾಧಾನ ಇತ್ತು ಸಿಕ್ತು. ಆ ಸಮಯದಲ್ಲೇ ಅಪೊಸ್ತಲ ಪೌಲ ಅವ್ರಿಗೆ ಒಂದು ಪತ್ರ ಬರೆದನು. ಆ ಪತ್ರ ಸಮಯಕ್ಕೆ ಸರಿಯಾಗಿತ್ತು. ಯಾಕಂದ್ರೆ ಅವರು ಮುಂದೆ ದೊಡ್ಡ ಕಷ್ಟವನ್ನ ಎದುರಿಸಬೇಕಿತ್ತು.

2 ಪೌಲ ಬರೆದ ಈ ಪತ್ರದಿಂದ ಕ್ರೈಸ್ತರಿಗೆ ತುಂಬ ಪ್ರಯೋಜನ ಆಯ್ತು. ಯಾಕಂದ್ರೆ ಅವ್ರಿಗೆ ಆಗ ಇದ್ದ ಶಾಂತಿ ಸ್ವಲ್ಪ ಸಮಯದಲ್ಲಿ ಕಣ್ಮರೆ ಆಗಲಿತ್ತು. ಯೇಸು ಹೇಳಿದ ತರ ಇಡೀ ಯೆರೂಸಲೇಮಿನ ನಾಶನ ತುಂಬ ಹತ್ರ ಆಗಿತ್ತು. ಇಂಥ ಸಂದರ್ಭದಲ್ಲಿ ಪೌಲ ಈ ಪತ್ರದಿಂದ ಕೊಟ್ಟ ಸಲಹೆಗಳು ಕ್ರೈಸ್ತರು ಬಂದ ಕಷ್ಟಗಳನ್ನ ಧೈರ್ಯವಾಗಿ ಎದುರಿಸೋಕೆ ಸಹಾಯ ಮಾಡ್ತು. (ಲೂಕ 21:20) ನಿಜ, ಆಗಿನ ಕ್ರೈಸ್ತರಿಗೇ ಆಗ್ಲಿ ಪೌಲನಿಗೇ ಆಗ್ಲಿ ಯೆರೂಸಲೇಮಿನ ನಾಶನ ಕರೆಕ್ಟಾಗಿ ಯಾವಾಗ ಬರುತ್ತೆ ಅಂತ ಗೊತ್ತಿರಲಿಲ್ಲ. ಆದ್ರೆ ಅವ್ರ ಹತ್ರ ಉಳಿದಿದ್ದ ಸ್ವಲ್ಪ ಸಮಯದಲ್ಲಿ ಅವ್ರ ನಂಬಿಕೆನ, ತಾಳ್ಮೆನ ಬಲಪಡಿಸ್ಕೊಂಡು ಆ ಕಷ್ಟ ಎದುರಿಸೋಕೆ ತಯಾರಾಗಬಹುದಿತ್ತು.—ಇಬ್ರಿ. 10:25; 12:1, 2.

3. ಇಬ್ರಿಯ ಪತ್ರದಿಂದ ಈಗಿರೋ ಕ್ರೈಸ್ತರಿಗೂ ಏನು ಪ್ರಯೋಜನ ಇದೆ?

3 ಆಗಿನ ಕ್ರೈಸ್ತರಿಗೆ ಬಂದ ಕಷ್ಟಕ್ಕಿಂತ ಎಷ್ಟೋ ದೊಡ್ಡ ಕಷ್ಟನ ನಾವು ಇನ್ನೇನು ಎದುರಿಸೋಕೆ ಇದ್ದೀವಿ. (ಮತ್ತಾ. 24:21; ಪ್ರಕ. 16:14, 16) ಹಾಗಾಗಿ ಯೆಹೋವ ದೇವರು ಆಗಿನ ಕ್ರೈಸ್ತರಿಗೆ ಯಾವ ಸಲಹೆಗಳನ್ನ ಕೊಟ್ಟನು ಅಂತ ನೋಡೋಣ. ಅದ್ರಿಂದ ನಾವು ಹೇಗೆ ಪ್ರಯೋಜನ ಪಡಿಯೋದು ಅಂತಾನೂ ಕಲಿಯೋಣ.

‘ಪ್ರೌಢ ಕ್ರೈಸ್ತರಾಗಿ’

4. ಯೆಹೂದ್ಯರು ಕ್ರೈಸ್ತರಾದಾಗ ಯಾವ ಹೊಂದಾಣಿಕೆ ಮಾಡ್ಕೊಬೇಕಿತ್ತು? (ಚಿತ್ರ ನೋಡಿ.)

4 ಆ ಸಮಯದಲ್ಲಿ ಯೆಹೂದ್ಯರು ದೇವರ ಜನ್ರಾಗಿದ್ರು. ಯೆರೂಸಲೇಮಲ್ಲೇ ದೇವರ ಸಿಂಹಾಸನ ಇತ್ತು, ಶುದ್ಧಾರಾಧನೆಯ ಮುಖ್ಯ ಸ್ಥಳನೂ ಇತ್ತು. ಅಷ್ಟೇ ಅಲ್ಲ, ನಿಯಮ ಪುಸ್ತಕಕ್ಕೆ ಜನ ತುಂಬ ಬೆಲೆ ಕೊಡ್ತಾ ಇದ್ರು. ಚಿಕ್ಕಪುಟ್ಟ ವಿಷ್ಯಗಳಲ್ಲೂ ಧರ್ಮಗುರುಗಳು ಅವರು ಹೇಳೋದನ್ನ ಪಾಲಿಸ್ತಾ ಇದ್ರು. ಏನು ಊಟ ಮಾಡಬೇಕು, ಯೆಹೂದ್ಯರಲ್ಲದ ಜನ್ರ ಜೊತೆ ಹೇಗೆ ನಡ್ಕೊಬೇಕು, ಸುನ್ನತಿ ಬಗ್ಗೆ ಯಾವ ಮನೋಭಾವ ಇಟ್ಕೊಬೇಕು ಇದ್ರ ಬಗ್ಗೆ ಅವರು ಕಲಿಸಿದ್ದನ್ನೇ ಪಾಲಿಸ್ತಿದ್ರು. ಆಗ್ಲೇ ಒಂದು ದೊಡ್ಡ ಬದಲಾವಣೆ ಬಂತು. ಅದೇನಂದ್ರೆ ಯೇಸು ತನ್ನ ಪ್ರಾಣವನ್ನ ಬಲಿಯಾಗಿ ಕೊಟ್ಟ ಮೇಲೆ ಯೆಹೂದ್ಯರು ಕೊಡ್ತಿದ್ದ ಪ್ರಾಣಿ ಬಲಿಗಳನ್ನ ಯೆಹೋವ ದೇವರು ಸ್ವೀಕರಿಸೋದನ್ನ ನಿಲ್ಲಿಸಿಬಿಟ್ಟನು. ಇದನ್ನ ಯೆಹೂದ್ಯರು ಅರ್ಥ ಮಾಡ್ಕಬೇಕಿತ್ತು. ಆದ್ರೆ ಅವರು ಅದನ್ನ ಅರ್ಥ ಮಾಡ್ಕೊಳ್ಳೋಕೆ ಕಷ್ಟಪಡ್ತಿದ್ರು. (ಇಬ್ರಿ. 10:1, 4, 10) ಉದಾಹರಣೆಗೆ ತುಂಬ ನಂಬಿಕೆಯಿದ್ದ ಪೇತ್ರನೂ ಕೆಲವು ಬದಲಾವಣೆ ಮಾಡ್ಕೊಳ್ಳೋಕೆ ಕಷ್ಟಪಟ್ಟ. (ಅ. ಕಾ. 10:9-14; ಗಲಾ. 2:11-14) ಆಗಿನ ಕ್ರೈಸ್ತರು ನಂಬ್ತಿದ್ದ ಹೊಸ ವಿಷ್ಯಗಳನ್ನ ನೋಡಿ ಅಲ್ಲಿದ್ದ ಯೆಹೂದಿ ಧರ್ಮಗುರುಗಳು ಅವ್ರ ಮೇಲೆ ದ್ವೇಷ ಕಾರುತ್ತಿದ್ರು.

ಕ್ರೈಸ್ತರು ಪವಿತ್ರಗ್ರಂಥನ ಚೆನ್ನಾಗಿ ತಿಳ್ಕೊಂಡ್ರೆನೇ ಯೆಹೂದಿ ಧರ್ಮಗುರುಗಳ ಸುಳ್ಳು ಬೋಧನೆಗಳಿಂದ ದೂರ ಇರೋಕೆ ಆಗ್ತಿತ್ತು (ಪ್ಯಾರ 4-5 ನೋಡಿ)


5. ಆಗಿನ ಕ್ರೈಸ್ತರಿಗೆ ಯಾವ ಒತ್ತಡ ಇತ್ತು?

5 ಆಗಿನ ಕ್ರೈಸ್ತರಿಗೆ ಎರಡು ಕಡೆಯಿಂದ ಒತ್ತಡ ಬಂತು. ಒಂದು, ಅವ್ರನ್ನ ಯೆಹೂದಿ ಧರ್ಮಗುರುಗಳು ಧರ್ಮಭ್ರಷ್ಟರ ತರ ನೋಡ್ತಿದ್ರು. ಎರಡು, ಸಭೆಯಲ್ಲೇ ಇದ್ದ ಕೆಲವರು ‘ನಿಯಮ ಪುಸ್ತಕದಲ್ಲಿ ಇರೋದನ್ನ ಈಗ್ಲೂ ಪಾಲಿಸೋಣ, ಬಿಡೋದು ಬೇಡ’ ಅಂತ ಒತ್ತಡ ಹಾಕ್ತಿದ್ರು. ಹೀಗೆ ಮಾಡಿದ್ರೆ ಹಿಂಸೆಯಿಂದ ತಪ್ಪಿಸ್ಕೊಬಹುದು ಅಂತ ಅವರು ಅಂದ್ಕೊಂಡಿರಬಹುದು. (ಗಲಾ. 6:12) ಇಷ್ಟೆಲ್ಲ ಒತ್ತಡ ಇದ್ರೂ ಆಗಿನ ಕ್ರೈಸ್ತರಿಗೆ ನಂಬಿಗಸ್ತರಾಗಿ ಇರೋಕೆ ಯಾವುದು ಸಹಾಯ ಮಾಡ್ತು?

6. ಕ್ರೈಸ್ತರು ಏನು ಮಾಡಬೇಕು ಅಂತ ಪೌಲ ಅವ್ರನ್ನ ಪ್ರೋತ್ಸಾಹಿಸಿದ? (ಇಬ್ರಿಯ 5:14–6:1)

6 ಪೌಲ ತನ್ನ ಪತ್ರದಲ್ಲಿ ದೇವರ ವಾಕ್ಯನ ಚೆನ್ನಾಗಿ ಅಧ್ಯಯನ ಮಾಡಬೇಕು ಅಂತ ಪ್ರೋತ್ಸಾಹ ಕೊಟ್ಟನು. (ಇಬ್ರಿಯ 5:14–6:1 ಓದಿ.) ಅದಕ್ಕಂತಾನೇ ಹೀಬ್ರು ಪವಿತ್ರ ಗ್ರಂಥದಿಂದ ಕೆಲವು ವಚನಗಳನ್ನ ಬಳಸಿ ಕ್ರೈಸ್ತರು ಮಾಡೋ ಆರಾಧನೆ ಯೆಹೂದ್ಯರು ಮಾಡೋ ಆರಾಧನೆಗಿಂತ ಯಾಕೆ ಶ್ರೇಷ್ಠವಾಗಿದೆ ಅಂತ ತೋರಿಸ್ಕೊಟ್ಟ. a ಅವನು ಯಾಕೆ ಇದನ್ನೆಲ್ಲ ಮಾಡಿದ? ಯಾಕಂದ್ರೆ ಸತ್ಯನ ಇನ್ನೂ ಚೆನ್ನಾಗಿ ತಿಳ್ಕೊಂಡ್ರೆ, ಅರ್ಥ ಮಾಡ್ಕೊಂಡ್ರೆ ತಪ್ಪಾದ ಬೋಧನೆಗಳನ್ನ ಕಂಡುಹಿಡಿಯೋಕಾಗುತ್ತೆ ಮತ್ತು ಅದ್ರಿಂದ ದೂರ ಇರಕ್ಕಾಗುತ್ತೆ ಅಂತ ಅವನಿಗೆ ಗೊತ್ತಿತ್ತು.

7. ನಾವು ಯಾಕೆ ಹುಷಾರಾಗಿ ಇರಬೇಕು?

7 ಜನ ನಮ್ಮ ಬಗ್ಗೆ ಸುಳ್ಳುಸುದ್ದಿಗಳನ್ನ ಹಬ್ಬಿಸ್ತಾರೆ, ಬೈಬಲಲ್ಲಿರೋ ನೀತಿ-ನಿಯಮಗಳು ತಪ್ಪು ಅಂತ ಹೇಳ್ತಾರೆ. ಉದಾಹರಣೆಗೆ ಲೈಂಗಿಕತೆ ಬಗ್ಗೆ ಬೈಬಲಲ್ಲಿರೋ ನೀತಿ-ನಿಯಮಗಳನ್ನ ನಾವು ಪಾಲಿಸುವಾಗ ಜನ ನಮ್ಮ ಬಗ್ಗೆ ಕ್ರೂರಿಗಳು, ಮನುಷ್ಯತ್ವ ಇಲ್ಲದವರು ಅಂತ ತಪ್ಪುತಪ್ಪಾಗಿ ಮಾತಾಡ್ತಾರೆ. ಇದನ್ನೆಲ್ಲ ನೋಡಿದ್ರೆ, ಜನ ಯೆಹೋವನ ನೀತಿ-ನಿಯಮಗಳಿಂದ ತುಂಬ ದೂರದೂರ ಹೋಗ್ತಿದ್ದಾರೆ ಅಂತ ಗೊತ್ತಾಗುತ್ತೆ. (ಜ್ಞಾನೋ. 17:15) ಅದಕ್ಕೆ ನಾವು ಯಾವುದು ಸರಿ ಯಾವುದು ತಪ್ಪು ಅಂತ ಕಂಡುಹಿಡಿಯೋ ಸಾಮರ್ಥ್ಯ ಬೆಳೆಸ್ಕೊಬೇಕು. ತಪ್ಪಾದ ವಿಷ್ಯಗಳಿಂದ ದೂರ ಇರಬೇಕು. ಇಲ್ಲಾಂದ್ರೆ ಆ ಜನ್ರ ತರ ನಾವೂ ಯೆಹೋವನಿಂದ ದೂರ ಹೋಗಿಬಿಡ್ತೀವಿ.—ಇಬ್ರಿ. 13:9.

8. ನಾವು ಪ್ರೌಢರಾಗೋಕೆ ಏನು ಮಾಡ್ತಾ ಇರಬೇಕು?

8 ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರಿ ಅಂತ ಪೌಲ ಆಗಿನ ಕ್ರೈಸ್ತರಿಗೆ ಸಲಹೆ ಕೊಟ್ಟ. ಇದನ್ನೇ ನಾವೂ ಮಾಡಬೇಕು. ಅದಕ್ಕೆ ನಾವು ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಬೇಕು. ಯೆಹೋವ ದೇವರ ತರಾನೇ ಯೋಚ್ನೆ ಮಾಡೋಕೆ ಕಲಿಬೇಕು. ದೀಕ್ಷಾಸ್ನಾನ ಆದ ತಕ್ಷಣ ಇದನ್ನೆಲ್ಲ ನಿಲ್ಲಿಸಿಬಿಡಬಾರದು. ನಾವು ಎಷ್ಟೇ ವರ್ಷಗಳಿಂದ ಸತ್ಯದಲ್ಲಿದ್ರೂ ಬೈಬಲ್‌ ಓದೋದನ್ನ ಅಧ್ಯಯನ ಮಾಡೋದನ್ನ ಮುಂದುವರಿಸ್ತಾನೇ ಇರಬೇಕು. (ಕೀರ್ತ. 1:2) ಹೀಗೆ ಮಾಡ್ತಾ ಇದ್ರೆ ಇಬ್ರಿಯ ಕ್ರೈಸ್ತರು ಯಾವ ಗುಣಗಳನ್ನ ಬೆಳೆಸ್ಕೊಬೇಕು ಅಂತ ಪೌಲ ಅವ್ರಿಗೆ ಹೇಳಿದನೋ ಅದನ್ನ ನಾವೂ ಬೆಳೆಸ್ಕೊತೀವಿ. ಆ ಗುಣ ನಂಬಿಕೆ.—ಇಬ್ರಿ. 11:1, 6.

‘ಜೀವ ಉಳಿಸೋ ನಂಬಿಕೆ’

9. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಯಾಕೆ ತುಂಬ ನಂಬಿಕೆ ಬೇಕಿತ್ತು?

9 ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ತುಂಬ ನಂಬಿಕೆ ಬೆಳೆಸ್ಕೊಬೇಕಿತ್ತು. ಯಾಕಂದ್ರೆ ಯೇಸು ಹೇಳಿದ ಹಾಗೆ ದೊಡ್ಡ ಸಂಕಟ ಇನ್ನೇನು ಬರಕ್ಕಿತ್ತು. (ಇಬ್ರಿ. 10:37-39) ಶತ್ರು ಸೈನ್ಯ ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ ಅದನ್ನ ನೋಡಿದ ಜನ್ರೆಲ್ಲ ಬೆಟ್ಟಗಳಿಗೆ ಓಡಿಹೋಗಬೇಕು ಅಂತ ಯೇಸು ಎಚ್ಚರಿಕೆ ಕೊಟ್ಟಿದ್ದನು. ಇದನ್ನ ಯೆರೂಸಲೇಮ್‌ ಪಟ್ಟಣದಲ್ಲಿ ಇದ್ದವರೂ ಸುತ್ತಮುತ್ತ ಹಳ್ಳಿಯಲ್ಲಿ ಇದ್ದವರೂ ಪಾಲಿಸಬೇಕಿತ್ತು. (ಲೂಕ 21:20-24) ಆಗಿನ ಕಾಲದಲ್ಲಿ ಶತ್ರುಗಳು ಈ ತರ ದಾಳಿ ಮಾಡಿದ್ರೆ ಜನ್ರೆಲ್ಲ ಪಟ್ಟಣದ ಒಳಗೆ ಓಡಿಹೋಗಿ ಪ್ರಾಣ ಉಳಿಸ್ಕೊಳ್ತಿದ್ರು. ಆದ್ರೆ ಯೇಸು ಇಲ್ಲಿ ಪಟ್ಟಣದಿಂದ ಹೊರಗೆ ಓಡಿ ಬನ್ನಿ ಅಂತ ಉಲ್ಟಾ ಹೇಳ್ತಿದ್ದಾನೆ. ಇದನ್ನ ಕೇಳಿಸ್ಕೊಂಡಾಗ ಜನ್ರಿಗೆ ‘ತಲೆಬುಡನೇ ಇಲ್ವಲ್ಲಾ’ ಅಂತ ಅನಿಸಿರುತ್ತೆ. ಆದ್ರೂ ಯೇಸು ಹೇಳಿದ ಹಾಗೆ ಮಾಡಬೇಕಂದ್ರೆ ಅವ್ರಿಗೆ ತುಂಬ ನಂಬಿಕೆ ಬೇಕಿತ್ತು.

10. ಒಂದನೇ ಶತಮಾನದ ಕ್ರೈಸ್ತರು ಸಭೆ ನಡಿಸೋರ ಮೇಲೆ ನಂಬಿಕೆ ಬೆಳೆಸ್ಕೊಳ್ಳೋದು ಯಾಕೆ ಮುಖ್ಯ ಆಗಿತ್ತು? (ಇಬ್ರಿಯ 13:17)

10 ಆಗಿನ ಕ್ರೈಸ್ತರು ಸಭೆಯನ್ನ ನಡಿಸ್ತಿದ್ದ ಸಹೋದರರ ಮೇಲೂ ನಂಬಿಕೆ ಇಡಬೇಕಿತ್ತು. ಯಾಕಂದ್ರೆ ಯಾವಾಗ ಓಡಿಹೋಗಬೇಕು, ಹೇಗೆ ಓಡಿಹೋಗಬೇಕು ಅಂತ ಅವ್ರೇ ನಿರ್ದೇಶನ ಕೊಡ್ತಿದ್ರು. (ಇಬ್ರಿಯ 13:17 ಓದಿ.) ಇಬ್ರಿಯ 13:17ರಲ್ಲಿ ಪೌಲ, ಸಭೆ ನಡಿಸೋರು ಅಧಿಕಾರದಲ್ಲಿದ್ದಾರೆ ಅಂತ ಅವ್ರ “ಮಾತನ್ನ ಕೇಳಿ” ಅಂತ ಹೇಳ್ತಿಲ್ಲ. ಅವ್ರ ಮೇಲೆ ನಂಬಿಕೆ ಇಟ್ಟು ಅವ್ರ ಮಾತು ಕೇಳಿ ಅಂತ ಹೇಳ್ತಿದ್ದಾನೆ. ಹಾಗಾಗಿ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಆ ಸಂಕಟ ಬರೋ ಮೊದ್ಲೇ ಸಭೆ ನಡಿಸ್ತಾ ಇದ್ದವ್ರ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಬೇಕಾಗಿತ್ತು. ಶಾಂತಿ-ಸಮಾಧಾನ ಇದ್ದಾಗ್ಲೇ ಅವರು ನಂಬಿಕೆ ಜಾಸ್ತಿ ಮಾಡ್ಕೊಂಡಿಲ್ಲಾಂದ್ರೆ ಸಂಕಟ ಬಂದಾಗ ಹಿರಿಯರು ಹೇಳೋ ಮಾತು ಕೇಳೋಕೆ ತುಂಬಾನೇ ಕಷ್ಟ ಆಗ್ತಿತ್ತು.

11. ಇವತ್ತು ನಮಗೂ ಯಾಕೆ ತುಂಬ ನಂಬಿಕೆ ಬೇಕು?

11 ಸ್ನೇಹಿತರೇ, ಆಗಿನ ಕ್ರೈಸ್ತರ ತರ ನಮಗೂ ತುಂಬ ನಂಬಿಕೆ ಬೇಕು. ಲೋಕಾಂತ್ಯ ತುಂಬ ಹತ್ರ ಇದೆ. ಇದ್ರ ಬಗ್ಗೆ ಜನ್ರಿಗೆ ಹೇಳಿದ್ರೆ ಅವ್ರದನ್ನ ಕಿವಿಗೇ ಹಾಕೊಳ್ತಿಲ್ಲ. ನಮ್ಮನ್ನೂ ಗೇಲಿ ಮಾಡ್ತಿದ್ದಾರೆ. (2 ಪೇತ್ರ 3:3, 4) ಇದೊಂದು ಕಡೆ ಆದ್ರೆ, ಇನ್ನೊಂದು ಕಡೆ ಮಹಾ ಸಂಕಟದಲ್ಲಿ ಏನೆಲ್ಲ ಆಗುತ್ತೆ ಅಂತ ಎಲ್ಲಾ ವಿಷ್ಯ ನಮಗೂ ಗೊತ್ತಿಲ್ಲ. ಹಾಗಿದ್ರೂ ನಾವು ಯೆಹೋವನನ್ನ ಪೂರ್ತಿ ನಂಬ್ತೀವಿ. ಯಾಕಂದ್ರೆ ಯೆಹೋವ ಅಂತ್ಯವನ್ನ ಸರಿಯಾದ ಸಮಯಕ್ಕೆ ತಂದೇ ತರ್ತಾನೆ, ಆ ಸಮಯದಲ್ಲಿ ನಮ್ಮನ್ನ ಕಾಪಾಡೇ ಕಾಪಾಡ್ತಾನೆ.—ಹಬ. 2:3.

12. ನಾವು ಮಹಾ ಸಂಕಟ ಪಾರಾಗಬೇಕಂದ್ರೆ ಈಗ್ಲೇ ಏನು ಮಾಡಬೇಕು?

12 ಇವತ್ತು ಕೂಡ ನಾವು ನಮ್ಮನ್ನ ಮುಂದೆ ನಿಂತು ನಡೆಸೋರ ಮೇಲೆ ತುಂಬ ನಂಬಿಕೆ ಬೆಳೆಸ್ಕೊಬೇಕು. ಅವ್ರೇ “ನಂಬಿಗಸ್ತ, ವಿವೇಕಿ ಆದ ಆಳು.” (ಮತ್ತಾ. 24:45) ರೋಮನ್ನರು ದಾಳಿ ಮಾಡಿದಾಗ ಆ ಕಾಲದ ಕ್ರೈಸ್ತರಿಗೆ ಕೆಲವು ನಿರ್ದೇಶನ ಸಿಕ್ಕಿರಬಹುದು. ಅದೇ ತರ ಮಹಾ ಸಂಕಟ ಶುರು ಆದಾಗ ಏನು ಮಾಡಬೇಕು, ಏನು ಮಾಡಬಾರದು ಅಂತ ನಮಗೂ ನಿರ್ದೇಶನ ಸಿಗಬಹುದು. ಅದಕ್ಕೆ ಈಗ್ಲೇ ಸಂಘಟನೆಯಲ್ಲಿರೋ ಮೇಲ್ವಿಚಾರಕರ ಮಾತು ಕೇಳಬೇಕು. ಈಗ ನಾವು ನಂಬಿಕೆ ಬೆಳೆಸ್ಕೊಂಡಿಲ್ಲ ಅಂದ್ರೆ ಮುಂದೆ ಮಹಾ ಸಂಕಟದಲ್ಲಿ ಅವರು ನಮಗೆ ನಿರ್ದೇಶನ ಕೊಟ್ಟಾಗ ಅದನ್ನ ಪಾಲಿಸೋಕೆ ಗ್ಯಾರಂಟಿ ಕಷ್ಟ ಆಗುತ್ತೆ.

13. ಆಗಿನ ಕ್ರೈಸ್ತರು ಇಬ್ರಿಯ 13:5ರಲ್ಲಿರೋ ಸಲಹೆನ ಯಾಕೆ ಪಾಲಿಸ್ಲೇಬೇಕಿತ್ತು?

13 ಎಲ್ಲಾ ಬಿಟ್ಟು ಒಂದಿನ ಅಲ್ಲಿಂದ ಓಡಿಹೋಗಬೇಕು ಅಂತ ಆ ಕ್ರೈಸ್ತರಿಗೆ ಗೊತ್ತಿತ್ತು. ಆದ್ರೂ ಅವರು ಸರಳ ಜೀವನ ಮಾಡ್ತಾ ‘ಹಣದಾಸೆಯಿಂದ’ ದೂರ ಇರಬೇಕಿತ್ತು. (ಇಬ್ರಿಯ 13:5 ಓದಿ.) ನಿಜ, ಬರಗಾಲ ಮತ್ತು ಬಡತನ ಬಂದಿದ್ರಿಂದ ಕೆಲವ್ರ ಜೀವನ ತಲೆಕೆಳಗಾಗಿತ್ತು. (ಇಬ್ರಿ. 10:32-34) ಹಾಗಿದ್ರೂ ಅವರು ಸತ್ಯಕ್ಕಾಗಿ ಎಷ್ಟೋ ತ್ಯಾಗ ಮಾಡಿ ಕಷ್ಟನೆಲ್ಲ ಸಹಿಸ್ಕೊಂಡಿದ್ರು. ಆದ್ರೆ ಇನ್ನು ಕೆಲವರು ತಮ್ಮನ್ನ ತಾವು ಕಾಪಾಡ್ಕೊಳ್ಳೋಕೆ ಹಣದ ಹಿಂದೆ ಹೋಗಿಬಿಟ್ಟಿದ್ರು. ಆದ್ರೆ ಅವರೆಷ್ಟೇ ಹಣನ ಗುಡ್ಡೆ ಹಾಕೊಂಡ್ರೂ ಬರೋಕಿದ್ದ ಆ ನಾಶನದಿಂದ ತಮ್ಮನ್ನ ಕಾಪಾಡ್ಕೊಳ್ಳೋಕೆ ಸಾಧ್ಯನೇ ಇರ್ಲಿಲ್ಲ. (ಯಾಕೋ. 5:3) ಸಕ್ಕರೆ ಇರೋ ಕಡೆನೇ ಇರುವೆ ಇರುತ್ತೆ ಅನ್ನೋ ತರ ಹಣ ಇರೋ ಕಡೆ ಮನಸ್ಸಿರುತ್ತೆ. ಅವ್ರೇನಾದ್ರೂ ಹಣ-ಆಸ್ತಿ ಮೇಲೆ ತುಂಬ ಆಸೆ ಇಟ್ಕೊಂಡಿದ್ರೆ ಅದು ಅವ್ರನ್ನ ಕಾಪಾಡೋ ಬದ್ಲು ಅದೇ ಅವ್ರಿಗೆ ಉರುಲಾಗಿ ಬಿಡ್ತಿತ್ತು.

14. ನಮಗೆ ತುಂಬ ನಂಬಿಕೆ ಇದ್ರೆ ಹಣ-ಆಸ್ತಿನ ಹೇಗೆ ನೋಡ್ತೀವಿ?

14 ಲೋಕದ ಅಂತ್ಯ ಹತ್ರ ಇದೆ. ಹಾಗಾಗಿ ನಾವು ತುಂಬ ನಂಬಿಕೆ ಬೆಳೆಸ್ಕೊಬೇಕು. ಹಣದಾಸೆ ಮತ್ತು ವಸ್ತುಗಳ ಮೇಲೆ ಆಸೆ ಬಿಟ್ಟು ಬಿಡಬೇಕು. ಮರಿಬೇಡಿ, ಮಹಾ ಸಂಕಟದಲ್ಲಿ ಜನ “ತಮ್ಮ ಬೆಳ್ಳಿಯನ್ನ ಬೀದಿಗಳಲ್ಲಿ ಬಿಸಾಡ್ತಾರೆ.” ಯಾಕಂದ್ರೆ “ಯೆಹೋವನ ಉಗ್ರಕೋಪದ ದಿನ ಅವ್ರ ಹತ್ರ ಇರೋ ಚಿನ್ನಕ್ಕಾಗಲಿ ಬೆಳ್ಳಿಗಾಗಲಿ ಅವ್ರನ್ನ ಕಾಪಾಡೋಕೆ ಆಗಲ್ಲ” ಅಂತ ಅವ್ರಿಗೆ ಗೊತ್ತಾಗುತ್ತೆ. (ಯೆಹೆ. 7:19) ಹಾಗಾಗಿ ನಾವು ಹಣ-ಆಸ್ತಿ ಮಾಡೋದ್ರ ಬಗ್ಗೆ ಯೋಚ್ನೆ ಮಾಡಬಾರದು. ಬದ್ಲಿಗೆ ಸರಳ ಜೀವನ ಮಾಡೋದ್ರ ಬಗ್ಗೆ, ಕುಟುಂಬವಾಗಿ ಎಲ್ರೂ ಯೆಹೋವನ ಸೇವೆ ಮಾಡೋದ್ರ ಬಗ್ಗೆ ಯೋಚ್ನೆ ಮಾಡಬೇಕು. ಅದಕ್ಕೆ ತಕ್ಕ ಹಾಗೆ ನಿರ್ಧಾರಗಳನ್ನ ಮಾಡಬೇಕು. ಆಗ ಸುಮ್ಮಸುಮ್ಮನೆ ಸಾಲ ಮಾಡಲ್ಲ, ಬೇಡದಿರೋ ವಸ್ತುಗಳನ್ನ ತಗೊಳ್ಳೋಕೆ ಹೋಗಲ್ಲ. ಅಷ್ಟೇ ಅಲ್ಲ, ಒಂದುವೇಳೆ ನಮ್ಮ ಹತ್ರ ಹಣ-ಆಸ್ತಿ ಇದ್ರೆ ಅದನ್ನೂ ಜಾಸ್ತಿ ಹಚ್ಕೊಳ್ಳೋಕೆ ಹೋಗಲ್ಲ. (ಮತ್ತಾ. 6:19, 24) ಅಂತ್ಯ ಹತ್ರ ಆಗ್ತಿದ್ದಂಗೆ ನಾವೆಲ್ರೂ ಒಂದು ನಿರ್ಧಾರ ಮಾಡಬೇಕು. ನಾವು ಯೆಹೋವನನ್ನ ಹೆಚ್ಚು ನಂಬ್ತೀವಾ? ಅಥವಾ ಹಣ-ಆಸ್ತಿಯನ್ನ ನಂಬ್ತೀವಾ?

“ಸಹಿಸ್ಕೊಳ್ಳಿ”

15. ಒಂದನೇ ಶತಮಾನದ ಕ್ರೈಸ್ತರು ಸಹಿಸ್ಕೊಳ್ಳೋ ಗುಣನ ಯಾಕೆ ಬೆಳೆಸ್ಕೊಬೇಕಿತ್ತು?

15 ಯೂದಾಯದ ಪರಿಸ್ಥಿತಿ ಹೋಗ್ತಾಹೋಗ್ತಾ ತುಂಬ ಹದಗೆಡ್ತು. ಅಲ್ಲಿನ ಕ್ರೈಸ್ತರು ನಂಬಿಕೆ ತೋರಿಸೋದ್ರ ಜೊತೆಗೆ ತಾಳ್ಕೊಳ್ಳೋದನ್ನೂ ಕಲಿಬೇಕಿತ್ತು. (ಇಬ್ರಿ. 10:36) ನಿಜ ಈಗಾಗ್ಲೇ ತುಂಬ ಕ್ರೈಸ್ತರಿಗೆ ಹಿಂಸೆ ಬಂದಿತ್ತು. ಆದ್ರೂ ಕೆಲವು ಕ್ರೈಸ್ತರು ಪರಿಸ್ಥಿತಿ ಎಲ್ಲಾ ಚೆನ್ನಾಗಿದ್ದಾಗ ಸತ್ಯಕ್ಕೆ ಬಂದಿದ್ರು. ಅವರು ಜೀವನದಲ್ಲಿ ಹೆಚ್ಚು ಕಷ್ಟಗಳನ್ನ ನೋಡಿರಲಿಲ್ಲ. ಅದಕ್ಕೇ ಪೌಲ, ಅವರು ಯೇಸು ಕ್ರಿಸ್ತನ ತರ ಪ್ರಾಣ ತ್ಯಾಗ ಮಾಡೋಷ್ಟು ಕಷ್ಟಪಟ್ಟಿಲ್ಲ ಮುಂದೆ ಅದನ್ನೂ ಅನುಭವಿಸಬೇಕಾಗುತ್ತೆ ಅಂತ ಹೇಳಿದ. (ಇಬ್ರಿ. 12:4) ಕ್ರೈಸ್ತರು ಹೆಚ್ಚಾಗ್ತಾ ಹೋದಂಗೆ ಧರ್ಮಗುರುಗಳಿಗೆ ಅವ್ರ ಮೇಲೆ ಹೊಟ್ಟೆಕಿಟ್ಟು, ದ್ವೇಷನೂ ಹೆಚ್ಚಾಯ್ತು. ಒಂದು ಸಲ ಪೌಲ ಯೆರೂಸಲೇಮಲ್ಲಿ ಸಿಹಿಸುದ್ದಿ ಸಾರುತ್ತಿದ್ದಾಗ ಜನ ಅವನ ಮೇಲೆ ದಾಳಿ ಮಾಡಿದ್ರು. 40ಕ್ಕಿಂತ ಜಾಸ್ತಿ ಯೆಹೂದ್ಯರು “ಪೌಲನನ್ನ ಸಾಯಿಸದೆ ನಾವೇನಾದ್ರೂ ತಿಂದ್ರೆ ಕುಡಿದ್ರೆ ನಮ್ಮ ಮೇಲೆ ಶಾಪ ಬರಲಿ” ಅಂತ ಆಣೆ ಮಾಡಿದ್ರು. (ಅ. ಕಾ. 22:22; 23:12-14) ಜನ ದ್ವೇಷಿಸ್ತಾರೆ, ಹಿಂಸಿಸ್ತಾರೆ ಅಂತ ಗೊತ್ತಿದ್ರೂ ಆಗಿನ ಕ್ರೈಸ್ತರು ಆರಾಧನೆ ಮಾಡೋಕೆ ಸೇರಿಬರಬೇಕಿತ್ತು, ಸಿಹಿಸುದ್ದಿ ಸಾರಬೇಕಿತ್ತು. ಒಬ್ರಿಗೊಬ್ರು ನಂಬಿಕೆನ ಬಲಪಡಿಸ್ಕೊಬೇಕಿತ್ತು. ಇದನ್ನೆಲ್ಲ ಮಾಡೋಕೆ ಅವರು ಸಹಿಸ್ಕೊಳ್ಳೋ ಗುಣ ಬೆಳೆಸ್ಕೊಬೇಕಿತ್ತು.

16. ಕಷ್ಟ, ಹಿಂಸೆಗಳನ್ನ ನಾವು ಹೇಗೆ ನೋಡಬೇಕಂತ ಇಬ್ರಿಯ ಪತ್ರ ಹೇಳುತ್ತೆ? (ಇಬ್ರಿಯ 12:7)

16 ಕಷ್ಟಗಳನ್ನ ತಾಳ್ಕೊಳ್ಳೋಕೆ ಕ್ರೈಸ್ತರಿಗೆ ಪೌಲ ಹೇಗೆ ಸಹಾಯ ಮಾಡಿದ? ಕಷ್ಟಗಳನ್ನ ತಾಳ್ಕೊಳ್ಳೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಅಂತ ಅವನು ಅವ್ರಿಗೆ ಅರ್ಥಮಾಡಿಸಿದ. ಈ ಕಷ್ಟನ ತಾಳ್ಕೊಂಡ್ರೆ ಒಳ್ಳೇ ತರಬೇತಿ ಸಿಗುತ್ತೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೇ ಕಷ್ಟ ಬರೋಕೆ ದೇವರು ಕೆಲವೊಮ್ಮೆ ಬಿಡ್ತಾನೆ ಅಂತ ಹೇಳಿದ. (ಇಬ್ರಿಯ 12:7 ಓದಿ.) ಹೀಗೆ ತರಬೇತಿ ಪಡ್ಕೊಂಡ್ರೆ ದೇವರಿಗೆ ಇಷ್ಟ ಆಗೋ ಒಳ್ಳೊಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋಕಾಗುತ್ತೆ. ಅದಕ್ಕೆ ಕಷ್ಟ ಬಂದಾಗ ‘ಅಯ್ಯೋ ಇಷ್ಟೆಲ್ಲಾ ಕಷ್ಟ ಬಂತಲ್ಲಾ’ ಅಂತ ಚಿಂತೆ ಮಾಡದೆ ಅದ್ರಿಂದ ಏನೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚ್ನೆ ಮಾಡಬೇಕು. ಆಗ ಕಷ್ಟಗಳನ್ನ ತಾಳ್ಕೊಳ್ಳೋಕೆ ಸುಲಭ ಆಗುತ್ತೆ.—ಇಬ್ರಿ. 12:11.

17. ಕಷ್ಟಗಳನ್ನ ತಾಳ್ಕೊಳ್ಳೋದ್ರ ಬಗ್ಗೆ ಪೌಲನಿಗೆ ಏನೆಲ್ಲಾ ಗೊತ್ತಿತ್ತು?

17 ಏನೇ ಕಷ್ಟ ಬಂದ್ರೂ ಅದನ್ನ ಧೈರ್ಯವಾಗಿ ತಾಳ್ಕೊಳ್ಳಿ ಅಂತ ಪೌಲ ಕ್ರೈಸ್ತರನ್ನ ಪ್ರೋತ್ಸಾಹಿಸಿದ. ಯಾಕಂದ್ರೆ ಒಂದು ಕಾಲದಲ್ಲಿ ಅವನೇ ಕ್ರೈಸ್ತರಿಗೆ ಹಿಂಸೆ ಕೊಡ್ತಿದ್ದ. ಹಾಗಾಗಿ ಹಿಂಸೆ ಕೊಡೋರು ಎಷ್ಟರ ಮಟ್ಟಿಗೆ ಹಿಂಸೆ ಕೊಡಬಹುದು, ಏನೆಲ್ಲಾ ಮಾಡಬಹುದು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಜೊತೆಗೆ, ಅವನು ಕ್ರೈಸ್ತನಾದ ಮೇಲೆ ಅವನಿಗೂ ಬೇರೆಬೇರೆ ಹಿಂಸೆ ಬಂತು. (2 ಕೊರಿಂ. 11:23-25) ಹಾಗಾಗಿ ಒಬ್ಬ ವ್ಯಕ್ತಿ ಅದನ್ನ ತಾಳ್ಕೊಬೇಕಂದ್ರೆ ಏನು ಮಾಡಬೇಕು ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅವನು ಕಷ್ಟಗಳನ್ನ ನಮ್ಮ ಸ್ವಂತ ಶಕ್ತಿಯಿಂದ ತಾಳ್ಕೊಳ್ಳೋಕೆ ಆಗಲ್ಲ, ಯೆಹೋವ ದೇವರ ಶಕ್ತಿ ಬೇಕು ಅಂತ ಕ್ರೈಸ್ತರಿಗೆ ನೆನಪಿಸಿದ. ಇದನ್ನ ಪೌಲ ಅರ್ಥಮಾಡ್ಕೊಂಡಿದ್ರಿಂದ “ಯೆಹೋವ ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ” ಅಂತ ಧೈರ್ಯವಾಗಿ ಹೇಳಿದ.—ಇಬ್ರಿ. 13:6.

18. (ಎ) ಮುಂದೆ ಏನಾಗುತ್ತೆ? (ಬಿ) ಅದಕ್ಕೆ ನಾವು ಹೇಗೆ ತಯಾರಾಗಬಹುದು?

18 ನಮ್ಮಲ್ಲಿ ಕೆಲವು ಸಹೋದರರು ಈಗಾಗ್ಲೆ ಹಿಂಸೆಯನ್ನ ತಾಳ್ಕೊಳ್ತಿದ್ದಾರೆ. ನಾವು ಅವ್ರಿಗೆ ನಮ್ಮ ಬೆಂಬಲ ಕೊಡಬೇಕು. ಅವ್ರಿಗೋಸ್ಕರ ಪ್ರಾರ್ಥನೆ ಮಾಡಬೇಕು. ಕೆಲವೊಮ್ಮೆ ನಮ್ಮ ಕೈಲಾದ ಸಹಾಯನೂ ಮಾಡಬೇಕು. (ಇಬ್ರಿ. 10:33) ಆದ್ರೆ ನಾವೆಲ್ರೂ ಒಂದು ವಿಷ್ಯನ ಮನಸ್ಸಲ್ಲಿ ಇಡಬೇಕು. ಅದೇನಂದ್ರೆ “ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ” ಅಂತ ಬೈಬಲ್‌ ಹೇಳುತ್ತೆ. (2 ತಿಮೊ. 3:12) ಹಾಗಾಗಿ ಮುಂದೆ ಬರೋ ಮಹಾ ಸಂಕಟಕ್ಕೆ ನಾವೆಲ್ರೂ ಈಗ್ಲೇ ತಯಾರಾಗೋಣ. ಅದೇನೇ ಕಷ್ಟ ಬರಲಿ ಅದನ್ನ ತಾಳ್ಕೊಳ್ಳೋಕೆ ಬೇಕಾದ ಶಕ್ತಿನ ಯೆಹೋವ ಕೊಡ್ತಾನೆ ಅಂತ ಪೂರ್ತಿ ನಂಬಿಕೆಯಿಂದ ಇರೋಣ. ತಕ್ಕ ಸಮಯದಲ್ಲಿ ಯೆಹೋವ ತನ್ನ ನಂಬಿಗಸ್ತ ಆರಾಧಕರೆಲ್ಲರನ್ನೂ ಕಾಪಾಡ್ತಾನೆ.—2 ಥೆಸ. 1:7, 8.

19. ಮಹಾ ಸಂಕಟಕ್ಕೆ ತಯಾರಾಗೋಕೆ ನಾವು ಈಗಿಂದಾನೇ ಏನು ಮಾಡಬೇಕು? (ಚಿತ್ರ ನೋಡಿ.)

19 ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಪೌಲ ಬರೆದ ಪತ್ರದಿಂದ ಸಹಾಯ ಆಯ್ತು ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಪೌಲ ಅವ್ರಿಗೆ ಯಾವೆಲ್ಲ ಸಲಹೆ ಕೊಟ್ಟ? 1) ಬೈಬಲನ್ನ ಚೆನ್ನಾಗಿ ತಿಳ್ಕೊಂಡು ಅರ್ಥ ಮಾಡ್ಕೊಳ್ಳೋಕೆ ಪ್ರೋತ್ಸಾಹ ಕೊಟ್ಟ. ಇದ್ರಿಂದ ಅವರು ತಪ್ಪಾದ ಬೋಧನೆಗಳನ್ನ ಕಂಡುಹಿಡಿದು ದೂರ ಇರೋಕಾಯ್ತು. 2) ನಂಬಿಕೆ ಬೆಳೆಸ್ಕೊಳ್ಳಿ ಅಂತ ಹೇಳಿದ. ಇದ್ರಿಂದ ಸಭೆಯನ್ನ ನಡೆಸೋ ಹಿರಿಯರ ಮೇಲೆ ಅವ್ರಿಗೆ ನಂಬಿಕೆ ಬೆಳೆಸ್ಕೊಳ್ಳೋಕೆ ಆಯ್ತು. 3) ತಾಳ್ಕೊಳ್ಳೋ ಗುಣ ಬೆಳೆಸ್ಕೊಳ್ಳೋಕೆ ಪ್ರೋತ್ಸಾಹಿಸಿದ. ಕಷ್ಟ ಹಿಂಸೆಗಳು ಒಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋಕೆ ಪ್ರೀತಿಯ ಅಪ್ಪ ಯೆಹೋವನಿಂದ ಸಿಗೋ ತರಬೇತಿ ಅಂತ ಅರ್ಥಮಾಡಿಸಿದ. ಪೌಲ ಕೊಟ್ಟ ಈ ಎಲ್ಲಾ ಸಲಹೆಗಳು ಕ್ರೈಸ್ತರು ಮಹಾ ಸಂಕಟಕ್ಕೆ ತಯಾರಾಗೋಕೆ ಸಹಾಯ ಮಾಡ್ತು. ನಾವೂ ಪೌಲನ ಸಲಹೆನ ಪಾಲಿಸೋಣ. ಮುಂದೆ ಬರೋ ಮಹಾ ಸಂಕಟವನ್ನ ಧೈರ್ಯವಾಗಿ ಎದುರಿಸೋಣ.—ಇಬ್ರಿ. 3:14.

ನಂಬಿಗಸ್ತ ಕ್ರೈಸ್ತರು ಸಹಿಸ್ಕೊಂಡಿದ್ರಿಂದ ಆಶೀರ್ವಾದ ಪಡೆದ್ರು. ಅವರು ಯೂದಾಯದಿಂದ ಓಡಿ ಬಂದ್ರೂ ಆರಾಧನೆಗಾಗಿ ಸೇರಿಬರ್ತಿದ್ರು. ಅವ್ರಿಂದ ನಾವೇನ್‌ ಕಲಿಬಹುದು? (ಪ್ಯಾರ 19 ನೋಡಿ)

ಗೀತೆ 43 ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ

a ಕ್ರೈಸ್ತರು ಮಾಡೋ ಆರಾಧನೆ ಯೆಹೂದ್ಯರು ಮಾಡೋ ಆರಾಧನೆಗಿಂತ ಎಷ್ಟು ಶ್ರೇಷ್ಠವಾಗಿದೆ ಅಂತ ತೋರಿಸೋಕೆ ಪೌಲ ಮೊದಲ ಅಧ್ಯಾಯದಲ್ಲೇ ಹೀಬ್ರು ಪವಿತ್ರ ಗ್ರಂಥದಲ್ಲಿದ್ದ ವಿಷ್ಯಗಳನ್ನ ಕಡಿಮೆ ಅಂದ್ರೂ ಏಳು ಸಲ ಹೇಳಿದ್ದಾನೆ.—ಇಬ್ರಿ. 1:5-13.