ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಯನ ಲೇಖನ 19

ದುಷ್ಕೃತ್ಯ ನಡೆದಾಗ ಪ್ರೀತಿ ಮತ್ತು ನ್ಯಾಯ

ದುಷ್ಕೃತ್ಯ ನಡೆದಾಗ ಪ್ರೀತಿ ಮತ್ತು ನ್ಯಾಯ

“ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಕೆಟ್ಟದ್ದು ನಿನ್ನ ಬಳಿಯಲ್ಲಿ ತಂಗಲಾರದು.”—ಕೀರ್ತ. 5:4.

ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು

ಕಿರುನೋಟ *

1-3. (ಎ) ಕೀರ್ತನೆ 5:4-6​ರ ಪ್ರಕಾರ, ದುಷ್ಟತನದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ? (ಬಿ) ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಯಾಕೆ ‘ಕ್ರಿಸ್ತನ ನಿಯಮಕ್ಕೆ’ ವಿರುದ್ಧವಾಗಿದೆ?

ಯೆಹೋವ ದೇವರು ಎಲ್ಲಾ ರೀತಿಯ ದುಷ್ಟತನವನ್ನು ದ್ವೇಷಿಸುತ್ತಾನೆ. (ಕೀರ್ತನೆ 5:4-6 ಓದಿ.) ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದನ್ನಂತೂ ಆತನು ತುಂಬಾನೇ ದ್ವೇಷಿಸುತ್ತಾನೆ. ಯಾಕೆಂದರೆ ಇದು ನೀಚಕೃತ್ಯಗಳಲ್ಲೇ ಅತಿ ನೀಚವಾದ ಕೃತ್ಯ. ಆತನ ಸಾಕ್ಷಿಗಳಾಗಿರುವ ನಾವು ಆತನ ತರಾನೇ ಮಕ್ಕಳ ಲೈಂಗಿಕ ದೌರ್ಜನ್ಯವನ್ನು ದ್ವೇಷಿಸುತ್ತೇವೆ. ಮಕ್ಕಳನ್ನು ಈ ರೀತಿ ತಪ್ಪಾಗಿ ಉಪಯೋಗಿಸುವವರು ಸಭೆಯಲ್ಲಿದ್ದರೆ ತಕ್ಷಣ ತಕ್ಕ ಕ್ರಮವನ್ನು ತಗೊಳ್ಳುತ್ತೇವೆ.—ರೋಮ. 12:9; ಇಬ್ರಿ. 12:15, 16.

2 ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ದೌರ್ಜನ್ಯ ‘ಕ್ರಿಸ್ತನ ನಿಯಮಕ್ಕೆ’ ವಿರುದ್ಧವಾಗಿದೆ. (ಗಲಾ. 6:2) ಯಾಕೆ? ನಾವು ಹಿಂದಿನ ಲೇಖನದಲ್ಲಿ ಕಲಿತಂತೆ, ಕ್ರಿಸ್ತನ ನಿಯಮ (ಕ್ರಿಸ್ತನು ತನ್ನ ಮಾತು ಮತ್ತು ಮಾದರಿಯ ಮೂಲಕ ಕಲಿಸಿದ ಎಲ್ಲಾ ವಿಷಯಗಳು) ಪ್ರೀತಿ ಮತ್ತು ನ್ಯಾಯದ ಮೇಲೆ ಆಧರಿತವಾಗಿದೆ. ಸತ್ಯ ಕ್ರೈಸ್ತರಾದ ನಾವು ಈ ನಿಯಮಕ್ಕೆ ಬದ್ಧರಾಗಿ ನಡಕೊಳ್ಳುತ್ತೇವೆ. ನಾವು ಮಕ್ಕಳ ಜೊತೆ ನಡಕೊಳ್ಳುವ ರೀತಿಯಿಂದ ಅವರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುತ್ತೇವೆ, ಅವರಿಗೆ ನಿಜವಾದ ಪ್ರೀತಿ ತೋರಿಸುತ್ತೇವೆ. ಆದರೆ ಅವರ ಮೇಲೆ ದೌರ್ಜನ್ಯ ನಡೆಸುವವರು ಸ್ವಾರ್ಥಿಗಳು. ಇದರಿಂದ ಮಕ್ಕಳು ಹೆದರಿ-ಬೆದರಿ ಬದುಕಬೇಕಾಗುತ್ತದೆ, ತಮ್ಮನ್ನು ಯಾರೂ ಪ್ರೀತಿಸಲ್ಲ ಅನ್ನುವ ಭಾವನೆ ಅವರಿಗೆ ಬಂದುಬಿಡುತ್ತದೆ.

3 ದುಃಖದ ವಿಷಯ ಏನೆಂದರೆ, ಇಂದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದು ಒಂದು ರೋಗದಂತೆ ಇಡೀ ಲೋಕದಲ್ಲಿ ಹರಡಿದೆ. ಇದು ಸತ್ಯ ಕ್ರೈಸ್ತರನ್ನೂ ಬಾಧಿಸಿದೆ. ಯಾಕೆ? ಈ ಕಾಲದಲ್ಲಿ “ದುಷ್ಟರೂ ವಂಚಕರೂ” ಜಾಸ್ತಿ ಆಗಿದ್ದಾರೆ. ಇಂಥವರು ಸಭೆಯ ಭಾಗವಾಗಲು ಪ್ರಯತ್ನಿಸುತ್ತಾರೆ. (2 ತಿಮೊ. 3:13) ಸಭೆಯ ಸದಸ್ಯರಾಗಿರುವ ಕೆಲವರು ಸಹ ನೀಚವಾದ ಶಾರೀರಿಕ ಆಸೆಗಳಿಗೆ ಬಲಿಬಿದ್ದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಮಕ್ಕಳ ಲೈಂಗಿಕ ಪೀಡನೆ ಯಾಕೆ ತುಂಬ ಗಂಭೀರವಾದ ಪಾಪವಾಗಿದೆ ಎಂದು ಈಗ ಚರ್ಚಿಸೋಣ. ನಂತರ ಇಂಥ ಒಂದು ಗಂಭೀರ ತಪ್ಪು ನಡೆದಿದೆ ಎಂದು ಗೊತ್ತಾದಾಗ ಹಿರಿಯರು ಏನು ಮಾಡುತ್ತಾರೆ ಮತ್ತು  ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಸಂರಕ್ಷಿಸಬಹುದು ಎಂದು ನೋಡೋಣ. *

ಒಂದು ಘೋರ ಪಾಪ

4-5. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಯಾಕೆ ಅವರ ವಿರುದ್ಧ ಮಾಡುವ ಪಾಪವಾಗಿದೆ?

4 ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಆ ನೋವು ತುಂಬ ಕಾಲ ಉಳಿಯುತ್ತದೆ. ಇದು ಬಲಿಪಶು ಆಗುವ ಮಕ್ಕಳ ಮೇಲೆ ಮಾತ್ರ ಅಲ್ಲ ಅವರ ಕುಟುಂಬದವರ ಮೇಲೆ ಮತ್ತು ಕ್ರೈಸ್ತ ಸಹೋದರ-ಸಹೋದರಿಯರ ಮೇಲೆ ಪ್ರಭಾವ ಬೀರುತ್ತದೆ. ಯಾಕೆಂದರೆ ಇವರೆಲ್ಲರೂ ಮಕ್ಕಳ ಬಗ್ಗೆ ತುಂಬ ಚಿಂತೆ ಮಾಡುತ್ತಾರೆ. ನಿಜಕ್ಕೂ ಮಕ್ಕಳ ಮೇಲೆ ಆಗುವ ದೌರ್ಜನ್ಯ ಒಂದು ಘೋರ ಪಾಪವಾಗಿದೆ.

5 ಬಲಿಪಶು ಆಗುವವರ ವಿರುದ್ಧ ಮಾಡುವ ಪಾಪ. * ಬೇರೆಯವರಿಗೆ ನೋವು ಕೊಟ್ಟು ನರಳುವಂತೆ ಮಾಡುವುದು ಒಂದು ಪಾಪ. ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ, ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ವ್ಯಕ್ತಿ ಆ ಮಗುವಿಗೆ ತುಂಬ ನೋವು ಕೊಡುತ್ತಾನೆ. ನಂಬಿ ಹತ್ತಿರಕ್ಕೆ ಬರುವ ಮಗುವನ್ನು ಹಾಳುಮಾಡುತ್ತಾನೆ. ಇದರಿಂದ ಮಕ್ಕಳಲ್ಲಿರುವ ಸುರಕ್ಷಿತ ಭಾವನೆ ಹೋಗಿ ಭಯದಲ್ಲಿ ಜೀವಿಸಬೇಕಾಗುತ್ತದೆ. ಮಕ್ಕಳನ್ನು ಇಂಥ ಘೋರ ಕೃತ್ಯಕ್ಕೆ ಬಲಿಯಾಗದಂತೆ ಕಾಪಾಡಬೇಕು. ಯಾರು ಇಂಥ ನೀಚಕೃತ್ಯಕ್ಕೆ ಬಲಿಪಶು ಆಗಿದ್ದಾರೋ ಅವರನ್ನು ನಾವು ಸಂತೈಸಬೇಕು, ಸಹಾಯ ಕೊಡಬೇಕು.—1 ಥೆಸ. 5:14.

6-7. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಹೇಗೆ ಸಭೆ ಮತ್ತು ಸರ್ಕಾರದ ವಿರುದ್ಧ ಮಾಡುವ ಪಾಪವಾಗಿದೆ?

6 ಸಭೆಯ ವಿರುದ್ಧ ಮಾಡುವ ಪಾಪ. ಸಭೆಯ ಭಾಗವಾದ ಒಬ್ಬ ವ್ಯಕ್ತಿ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದಾಗ ಸಭೆಗೆ ಕೆಟ್ಟ ಹೆಸರನ್ನು ತರುತ್ತಾನೆ. (ಮತ್ತಾ. 5:16; 1 ಪೇತ್ರ 2:12) ಕ್ರೈಸ್ತ ಸಭೆಯ ಭಾಗವಾಗಿರುವ ಲಕ್ಷಾಂತರ ಸಹೋದರ-ಸಹೋದರಿಯರಿಗೆ ಇದರಿಂದ ತುಂಬ ನೋವಾಗುತ್ತದೆ. ಯಾಕೆಂದರೆ ಅವರು ಯೆಹೋವನಿಗೆ ಅಥವಾ ಸಭೆಗೆ ಯಾವುದೇ ವಿಧದಲ್ಲಿ ಕೆಟ್ಟ ಹೆಸರು ತರದೇ ಇರಲು ತುಂಬ ಪ್ರಯತ್ನ ಮಾಡುತ್ತಾರೆ. (ಯೂದ 3) ತಪ್ಪು ಮಾಡಿ ತಿದ್ದಿಕೊಳ್ಳದೇ ಇರುವವರನ್ನು ಮತ್ತು ಸಭೆಯ ಒಳ್ಳೇ ಹೆಸರನ್ನು ಕೆಡಿಸುವ ರೀತಿ ನಡೆಯುವವರನ್ನು ನಾವು ಸಭೆಯ ಭಾಗವಾಗಿ ಇರಲು ಬಿಡುವುದಿಲ್ಲ.

7 ಸರ್ಕಾರದ ವಿರುದ್ಧ ಮಾಡುವ ಪಾಪ. ಕ್ರೈಸ್ತರು ‘ಮೇಲಧಿಕಾರಿಗಳಿಗೆ ಅಧೀನರಾಗಿರಬೇಕು.’ (ರೋಮ. 13:1) ಸರ್ಕಾರ ಮಾಡಿರುವ ಕಾನೂನು-ಕಾಯಿದೆಗಳನ್ನು ಪಾಲಿಸುವ ಮೂಲಕ ನಾವು ಮೇಲಧಿಕಾರಿಗಳಿಗೆ ಅಧೀನತೆ ತೋರಿಸುತ್ತೇವೆ. ಸಭೆಯಲ್ಲಿರುವ ಒಬ್ಬ ವ್ಯಕ್ತಿ ಕ್ರಿಮಿನಲ್‌ ಕಾಯಿದೆಯನ್ನು ಮುರಿದರೆ, ಉದಾಹರಣೆಗೆ ಮಕ್ಕಳ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದರೆ ಸರ್ಕಾರದ ವಿರುದ್ಧ ಪಾಪ ಮಾಡುತ್ತಾನೆ. (ಅ. ಕಾರ್ಯಗಳು 25:8 ಹೋಲಿಸಿ.) ಕಾನೂನನ್ನು ಮುರಿಯುವ ವ್ಯಕ್ತಿಗಳನ್ನು ಶಿಕ್ಷಿಸುವ ಅಧಿಕಾರ ಹಿರಿಯರಿಗಿಲ್ಲ. ಆದರೆ ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ವ್ಯಕ್ತಿಯನ್ನು ಅವರು ಸರ್ಕಾರ ವಿಧಿಸುವ ಶಿಕ್ಷೆಯಿಂದ ತಪ್ಪಿಸಲು ಪ್ರಯತ್ನಿಸುವುದಿಲ್ಲ. (ರೋಮ. 13:4) ಉಪ್ಪು ತಿಂದವನು ನೀರು ಕುಡಿಯಲೇಬೇಕು, ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.—ಗಲಾ. 6:7.

8. ಬೇರೆಯವರ ವಿರುದ್ಧ ಮಾಡುವ ಪಾಪವನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?

8 ಎಲ್ಲಕ್ಕಿಂತ ಮುಖ್ಯವಾಗಿ ದೇವರ ವಿರುದ್ಧ ಮಾಡುವ ಪಾಪ. (ಕೀರ್ತ. 51:4) ಒಬ್ಬ ವ್ಯಕ್ತಿ ಇನ್ನೊಬ್ಬನ ವಿರುದ್ಧ ತಪ್ಪು ಮಾಡುವಾಗ ಅದು ಯೆಹೋವನ ವಿರುದ್ಧವೂ ಮಾಡಿದ ತಪ್ಪಾಗುತ್ತದೆ. ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಇದಕ್ಕೊಂದು ಉದಾಹರಣೆ ಇದೆ. ಒಬ್ಬ ವ್ಯಕ್ತಿ ತನ್ನ ನೆರೆಯವನಿಂದ ಏನಾದರೂ ಕದ್ದರೆ ಅಥವಾ ಮೋಸ ಮಾಡಿದರೆ ಅವನು “ಯೆಹೋವನಿಗೆ ದ್ರೋಹಿಯಾಗಿ” ನಡಕೊಳ್ಳುತ್ತಿದ್ದಾನೆ ಎಂದು ಧರ್ಮಶಾಸ್ತ್ರ ಹೇಳಿತು. (ಯಾಜ. 6:2-4) ಅದೇ ರೀತಿ ಸಭೆಯ ಭಾಗವಾಗಿರುವ ವ್ಯಕ್ತಿ ಒಂದು ಮಗುವಿನ ಮೇಲೆ ದೌರ್ಜನ್ಯ ನಡೆಸಿದಾಗ ಆ ಮಗುವಿನಿಂದ ಸುರಕ್ಷಿತ ಭಾವನೆಯನ್ನು ಕದಿಯುತ್ತಾನೆ. ಇದು ಯೆಹೋವನಿಗೆ ದ್ರೋಹಿಯಾಗಿ ನಡಕೊಳ್ಳುವ ರೀತಿ ಇದೆ. ಇದರಿಂದ ಯೆಹೋವನ ಹೆಸರಿಗೆ ದೊಡ್ಡ ಕಳಂಕ ಬರುತ್ತದೆ. ಆದ್ದರಿಂದ ಇದು ಚಿಕ್ಕ ವಿಷಯ ಅಲ್ಲ, ದೇವರ ವಿರುದ್ಧ ಮಾಡುವ ದೊಡ್ಡ ಪಾಪ.

9. ಸುಮಾರು ವರ್ಷಗಳಿಂದ ಯೆಹೋವನ ಸಂಘಟನೆ ಯಾವುದರ ಬಗ್ಗೆ ಬೈಬಲಾಧಾರಿತ ಮಾಹಿತಿಯನ್ನು ಕೊಡುತ್ತಾ ಬಂದಿದೆ? ಯಾಕೆ?

9 ಸುಮಾರು ವರ್ಷಗಳಿಂದ ಯೆಹೋವನ ಸಂಘಟನೆ ಮಕ್ಕಳ ದೌರ್ಜನ್ಯದ ವಿಷಯದಲ್ಲಿ ಬೈಬಲಾಧಾರಿತವಾದ ಮಾಹಿತಿಯನ್ನು ಕೊಡುತ್ತಾ ಬಂದಿದೆ. ಉದಾಹರಣೆಗೆ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಬಂದಿರುವ ಲೇಖನಗಳು  ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಅನುಭವಿಸುವ ಭಾವನಾತ್ಮಕ ನೋವನ್ನು ಹೇಗೆ ನಿಭಾಯಿಸುವುದು, ಸಭೆಯಲ್ಲಿರುವವರು ಇಂಥ ವ್ಯಕ್ತಿಗಳಿಗೆ ಹೇಗೆ ಸಹಾಯ ಮತ್ತು ಪ್ರೋತ್ಸಾಹ ಕೊಡಬಹುದು, ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಸಂರಕ್ಷಿಸಬಹುದು ಎಂದು ಹೇಳಿದೆ. ಯಾರಾದರೂ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದರೆ ಏನು ಮಾಡಬೇಕು ಅನ್ನುವುದರ ಬಗ್ಗೆ ಹಿರಿಯರಿಗೆ ಸವಿವರವಾದ ಸಲಹೆ-ಸೂಚನೆಗಳನ್ನು ಬೈಬಲ್‌ ಆಧರಿತವಾಗಿ ಕೊಡಲಾಗಿದೆ. ಮಕ್ಕಳ ದೌರ್ಜನ್ಯಕ್ಕೆ ಸಂಬಂಧಪಟ್ಟ ವಿಷಯವನ್ನು ಸಭೆ ಹೇಗೆ ನಿಭಾಯಿಸಬೇಕೆಂದು ಆಗಾಗ ಸಂಘಟನೆ ಮಾತಾಡಿದೆ ಮತ್ತು ಕೆಲವೊಮ್ಮೆ ಈ ವಿಷಯದಲ್ಲಿ ಹೊಸ ನಿರ್ದೇಶನಗಳನ್ನು ಕೊಟ್ಟಿದೆ. ಯಾಕೆ? ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಹಿರಿಯರು ಕ್ರಿಸ್ತನ ನಿಯಮವನ್ನು ಅನ್ವಯಿಸುತ್ತಾ ಹೇಗೆ ಪ್ರೀತಿ ಮತ್ತು ನ್ಯಾಯದಿಂದ ನಡಕೊಳ್ಳಬೇಕು ಎಂದು ಅರ್ಥಮಾಡಿಸಲು ಇದನ್ನು ಮಾಡುತ್ತದೆ.

ಗಂಭೀರವಾದ ತಪ್ಪು ನಡೆದಾಗ ಹಿರಿಯರು ತಗೊಳ್ಳುವ ಕ್ರಮ

10-12. (ಎ) ಗಂಭೀರವಾದ ತಪ್ಪು ನಡೆದಿದೆ ಎಂದು ಗೊತ್ತಾದಾಗ ಹಿರಿಯರು ಏನು ಮಾಡಬೇಕು? (ಬಿ) ಯಾಕೋಬ 5:14, 15​ಕ್ಕೆ ಅನುಸಾರ, ಹಿರಿಯರು ಏನು ಮಾಡಲು ಪ್ರಯತ್ನಿಸುತ್ತಾರೆ?

10 ಏನಾದರೂ ಗಂಭೀರವಾದ ತಪ್ಪು ನಡೆದರೆ, ಹಿರಿಯರು ಕ್ರಿಸ್ತನ ನಿಯಮವನ್ನು ಮನಸ್ಸಲ್ಲಿಟ್ಟು ಸಭೆಯನ್ನು ಪ್ರೀತಿಯಿಂದ ನಡೆಸಬೇಕು ಮತ್ತು ದೇವರ ದೃಷ್ಟಿಯಲ್ಲಿ ಯಾವುದು ಸರಿಯಾಗಿದೆಯೋ, ನ್ಯಾಯವಾಗಿದೆಯೋ ಅದನ್ನು ಮಾಡಬೇಕು. ಈ ಕಾರಣದಿಂದ, ಏನಾದರೂ ತಪ್ಪು ನಡೆದಿದೆ ಎಂದು ಗೊತ್ತಾದಾಗ ಅವರು ತುಂಬ ವಿಷಯಗಳ ಬಗ್ಗೆ ಯೋಚಿಸಬೇಕು. ಹಿರಿಯರು ಮುಖ್ಯವಾಗಿ ದೇವರ ಹೆಸರನ್ನು ಕಾಪಾಡಲು ಏನು ಮಾಡಬೇಕೆಂದು ಯೋಚಿಸುತ್ತಾರೆ. (ಯಾಜ. 22:31, 32; ಮತ್ತಾ. 6:9) ಸಭೆಯಲ್ಲಿರುವ ಸಹೋದರ-ಸಹೋದರಿಯರ ಆಧ್ಯಾತ್ಮಿಕ ಹಿತಕ್ಷೇಮದ ಬಗ್ಗೆ ತುಂಬ ಯೋಚಿಸುತ್ತಾರೆ ಮತ್ತು ಯಾರಾದರೂ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅವರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ.

11 ಅಷ್ಟು ಮಾತ್ರವಲ್ಲ, ತಪ್ಪು ಮಾಡಿದ ವ್ಯಕ್ತಿ ಸಭೆಯ ಭಾಗವಾಗಿದ್ದರೆ ಹಿರಿಯರು ಅವನಲ್ಲಿ ಪಶ್ಚಾತ್ತಾಪ ಇದೆಯಾ ಎಂದು ನೋಡಿ ಯೆಹೋವನ ಜೊತೆ ಇರುವ ಅವನ ಸಂಬಂಧವನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ. (ಯಾಕೋಬ 5:14, 15 ಓದಿ.) ತಪ್ಪಾದ ಆಸೆಗೆ ಬಲಿಬಿದ್ದು ಗಂಭೀರವಾದ ತಪ್ಪನ್ನು ಮಾಡುವ ವ್ಯಕ್ತಿ ಆಧ್ಯಾತ್ಮಿಕವಾಗಿ ಅಸ್ವಸ್ಥನಾಗಿದ್ದಾನೆ. ಇದರಿಂದ ಯೆಹೋವನ ಜೊತೆ ಅವನಿಗೆ ಒಳ್ಳೇ ಸಂಬಂಧ ಇರಲ್ಲ. * ಒಂದರ್ಥದಲ್ಲಿ ಹಿರಿಯರು ಆಧ್ಯಾತ್ಮಿಕ ವೈದ್ಯರಂತೆ ಕೆಲಸ ಮಾಡುತ್ತಾ ‘ಅಸ್ವಸ್ಥನನ್ನು [ಈ ವಿಷಯದಲ್ಲಿ, ತಪ್ಪು ಮಾಡಿದವನನ್ನು] ಗುಣಪಡಿಸಲು’ ನೋಡುತ್ತಾರೆ. ಹಿರಿಯರು ಕೊಡುವ ಬೈಬಲಾಧಾರಿತ ಸಲಹೆ ಯೆಹೋವನ ಜೊತೆ ಸಂಬಂಧವನ್ನು ಸರಿಪಡಿಸಿಕೊಳ್ಳಲು ಅವನಿಗೆ ಸಹಾಯ ಮಾಡುತ್ತದೆ. ತಪ್ಪು ಮಾಡಿದ ವ್ಯಕ್ತಿ ನಿಜವಾಗಿ ಪಶ್ಚಾತ್ತಾಪಪಟ್ಟರೆ ಮಾತ್ರ ಯೆಹೋವನ ಜೊತೆ ಅವನಿಗಿರುವ ಸಂಬಂಧ ಸರಿಯಾಗುತ್ತೆ.—ಅ. ಕಾ. 3:19; 2 ಕೊರಿಂ. 2:5-10.

12 ಹಿರಿಯರ ಮೇಲೆ ದೊಡ್ಡ ಜವಾಬ್ದಾರಿ ಇದೆ ಅನ್ನುವುದು ಇದರಿಂದ ಗೊತ್ತಾಗುತ್ತದೆ. ಅವರು ಸಭೆಯನ್ನು ತುಂಬ ಪ್ರೀತಿಸುತ್ತಾರೆ. ಯಾಕೆಂದರೆ ದೇವರು ತನ್ನ ಮಂದೆಯನ್ನು ಪರಾಮರಿಸುವ ಜವಾಬ್ದಾರಿಯನ್ನು ಹಿರಿಯರಿಗೆ ಕೊಟ್ಟಿದ್ದಾನೆ. (1 ಪೇತ್ರ 5:1-3) ಸಭೆಯಲ್ಲಿರುವ ಸಹೋದರ-ಸಹೋದರಿಯರಿಗೆ ಸುರಕ್ಷಿತ ಭಾವನೆ ಇರಬೇಕೆಂದು ಅವರು ಬಯಸುತ್ತಾರೆ. ಆದಕಾರಣ ಮಕ್ಕಳ ದೌರ್ಜನ್ಯದಂಥ ಯಾವುದಾದರೂ ಗಂಭೀರವಾದ ತಪ್ಪು ನಡೆದಿದೆ ಎಂದು ಗೊತ್ತಾದ ಕೂಡಲೆ ಅವರು ಕ್ರಮ ತಗೊಳ್ಳುತ್ತಾರೆ. ಅವರೇನು ಮಾಡುತ್ತಾರೆ ಎಂದು ಮುಂದಿನ ಪ್ಯಾರಗಳಲ್ಲಿ ನೋಡೋಣ.

13-14. ಮಕ್ಕಳ ದೌರ್ಜನ್ಯ ನಡೆದರೆ ಅದರ ಬಗ್ಗೆ ದೂರು ಕೊಡಬೇಕು ಎಂಬ ಸರ್ಕಾರದ ನಿಯಮವನ್ನು ಹಿರಿಯರು ಪಾಲಿಸುತ್ತಾರಾ? ವಿವರಿಸಿ.

13 ಮಕ್ಕಳ ದೌರ್ಜನ್ಯ ನಡೆದರೆ ಅದರ ಬಗ್ಗೆ ದೂರು ಕೊಡಬೇಕು ಎಂಬ ಸರ್ಕಾರದ ನಿಯಮವನ್ನು ಹಿರಿಯರು ಪಾಲಿಸುತ್ತಾರಾ? ಹೌದು. ಒಂದು ಮಗುವಿನ ಮೇಲೆ ದೌರ್ಜನ್ಯ ನಡೆದರೆ ಅದರ ಬಗ್ಗೆ ದೂರು ಕೊಡಬೇಕೆಂದು ಕೆಲವು ದೇಶಗಳಲ್ಲಿ ಕಾನೂನಿದೆ. (ರೋಮ. 13:1) ಅಂಥ ನಿಯಮಗಳು ದೇವರ ನಿಯಮಕ್ಕೆ ವಿರುದ್ಧವಾಗಿಲ್ಲ. (ಅ. ಕಾ. 5:28, 29) ಹಾಗಾಗಿ ಇಂಥ ಒಂದು ವಿಷಯ ನಡೆದಿದೆ ಎಂದು ಗೊತ್ತಾದ ಕೂಡಲೆ ಹಿರಿಯರು ಶಾಖಾ ಕಚೇರಿಯನ್ನು ಸಂಪರ್ಕಿಸುತ್ತಾರೆ. ನಡೆದ ವಿಷಯದ ಬಗ್ಗೆ ದೂರು ಕೊಡಬೇಕೆಂಬ ನಿಯಮವನ್ನು ಹೇಗೆ ಪಾಲಿಸುವುದೆಂದು ಸಲಹೆ ಪಡೆಯುತ್ತಾರೆ.

14 ದೌರ್ಜನ್ಯಕ್ಕೆ ಒಳಗಾದ ಮಗು, ಮಗುವಿನ ಹೆತ್ತವರು ಮತ್ತು ಈ ವಿಷಯ ತಿಳಿದ ಬೇರೆಯವರ ಜೊತೆ ಹಿರಿಯರು ಮಾತಾಡುವಾಗ ನಡೆದ ವಿಷಯದ ಬಗ್ಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವ ಹಕ್ಕು ನಿಮಗಿದೆ ಎಂದು ಹೇಳಬೇಕು. ಆದರೆ ಸಭೆಯ ಭಾಗವಾಗಿರುವ ಒಬ್ಬ ವ್ಯಕ್ತಿ ಬಗ್ಗೆನೇ ದೂರು ಕೊಡಬೇಕಿದ್ದರೆ ಮತ್ತು ಈ ವಿಷಯ ಮುಂದೆ ಹೊರಗಿನವರಿಗೂ ಗೊತ್ತಾಗುವುದಾದರೆ  ಆಗೇನು? ದೂರು ಕೊಟ್ಟ ಕ್ರೈಸ್ತನು ದೇವರ ಹೆಸರಿಗೆ ಕಳಂಕ ತಂದುಬಿಟ್ಟೆ ಎಂದು ನೆನಸಬೇಕಾ? ಇಲ್ಲ. ದೇವರ ಹೆಸರಿಗೆ ಕಳಂಕ ತರುವುದು ದೌರ್ಜನ್ಯ ನಡೆಸಿದ ವ್ಯಕ್ತಿ.

15-16. (ಎ) ಒಂದನೇ ತಿಮೊಥೆಯ 5:19​ಕ್ಕೆ ಅನುಸಾರ, ಹಿರಿಯರು ನ್ಯಾಯನಿರ್ಣಾಯಕ ಕ್ರಮ ತಗೊಳ್ಳುವ ಮುಂಚೆ ಯಾಕೆ ಇಬ್ಬರು ಸಾಕ್ಷಿಗಳಾದರೂ ಬೇಕು? (ಬಿ) ಸಭೆಯಲ್ಲಿರುವ ಒಬ್ಬ ವ್ಯಕ್ತಿ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂಬ ಸುದ್ದಿ ಸಿಕ್ಕಿದಾಗ ಹಿರಿಯರು ಏನು ಮಾಡುತ್ತಾರೆ?

15 ಸಭೆಯಲ್ಲಿ ಒಬ್ಬರು ಗಂಭೀರ ತಪ್ಪು ಮಾಡಿದ್ದಾರೆ ಎಂದು ಹಿರಿಯರಿಗೆ ಗೊತ್ತಾದರೆ ನ್ಯಾಯನಿರ್ಣಾಯಕ ಕ್ರಮ ತಗೊಳ್ಳಲು ಯಾಕೆ ಇಬ್ಬರು ಸಾಕ್ಷಿಗಳಾದರೂ ಬೇಕು? ಯಾಕೆಂದರೆ ಇದೇ ನ್ಯಾಯ ಎಂದು ಬೈಬಲ್‌ ಹೇಳುತ್ತದೆ. ಒಬ್ಬನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿಲ್ಲವಾದರೆ, ಆರೋಪವನ್ನು ಸಾಬೀತುಪಡಿಸಲು ಇಬ್ಬರು ಸಾಕ್ಷಿಗಳಾದರೂ ಬೇಕು. ಸಾಕ್ಷಿಗಳು ಹೇಳಿಕೆ ಕೊಟ್ಟ ಮೇಲೆ ಹಿರಿಯರು ನ್ಯಾಯನಿರ್ಣಾಯಕ ಕ್ರಮ ತಗೊಳ್ಳುತ್ತಾರೆ. (ಧರ್ಮೋ. 19:15; ಮತ್ತಾ. 18:16; 1 ತಿಮೊಥೆಯ 5:19 ಓದಿ.) ಹಾಗಾದರೆ ಇಬ್ಬರು ಸಾಕ್ಷಿಗಳು ಇದ್ದರೆ ಮಾತ್ರ ಒಂದು ಮಗುವಿನ ಮೇಲೆ ದೌರ್ಜನ್ಯ ನಡೆದಿದೆ ಎಂದು ಮೇಲಧಿಕಾರಿಗಳಿಗೆ ದೂರು ಕೊಡಬೇಕು ಅಂತಾನಾ? ಇಲ್ಲ. ಇದೊಂದು ಅಪರಾಧ ಆಗಿರುವುದರಿಂದ ಹಿರಿಯರಾಗಲಿ ಬೇರೆಯವರಾಗಲಿ ಮೇಲಧಿಕಾರಿಗಳಿಗೆ ದೂರು ಕೊಡಲಿಕ್ಕೆ ಸಾಕ್ಷಿಗಳು ಬೇಕು ಅಂತ ಇಲ್ಲ.

16 ಸಭೆಯಲ್ಲಿರುವ ಒಬ್ಬ ವ್ಯಕ್ತಿ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂಬ ಸುದ್ದಿ ಸಿಕ್ಕಿದಾಗ ಹಿರಿಯರು ಈ ವಿಷಯದ ಬಗ್ಗೆ ದೂರು ಕೊಡಬೇಕೆಂಬ ಕಾನೂನನ್ನು ಪಾಲಿಸಲು ಬೇಕಾದ ಏರ್ಪಾಡು ಮಾಡುತ್ತಾರೆ. ನಂತರ ಅವರು ಸಭೆಯ ಕಡೆಯಿಂದ ವಿಚಾರಣೆಯನ್ನು ಆರಂಭಿಸುತ್ತಾರೆ. ಅವರು ಮೊದಲು ಆರೋಪಿಯ ಹತ್ತಿರ ಮಾತಾಡುತ್ತಾರೆ. ಅವನು ತಪ್ಪು ಮಾಡಿದ್ದಾನಾ ಎಂದು ಕೇಳುತ್ತಾರೆ. ಅವನು ಇಲ್ಲ ಅಂದರೆ ಸಾಕ್ಷಿಗಳ ಹೇಳಿಕೆಯನ್ನು ತಗೊಳ್ಳುತ್ತಾರೆ. ಆರೋಪ ಮಾಡುತ್ತಿರುವವನು ಮತ್ತು ಇನ್ನೊಬ್ಬ ಸಾಕ್ಷಿ ಈ ವ್ಯಕ್ತಿ ಒಂದು ಮಗುವಿನ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ಹೇಳಿದರೆ ನ್ಯಾಯನಿರ್ಣಾಯಕ ಕಮಿಟಿಯನ್ನು ರಚಿಸಬಹುದು. ಈ ವ್ಯಕ್ತಿ ಒಂದೇ ಮಗುವಿನ ಮೇಲೆ ಅಲ್ಲ ಬೇರೆ ಬೇರೆ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ ಇವರು ಪ್ರತ್ಯೇಕ ಸಾಕ್ಷಿಗಳಾಗಿದ್ದರೂ ನ್ಯಾಯನಿರ್ಣಾಯಕ ಕಮಿಟಿಯನ್ನು ರಚಿಸಬಹುದು. * ಒಂದುವೇಳೆ ಎರಡನೇ ಸಾಕ್ಷಿ ಇಲ್ಲವಾದರೆ ಮೊದಲನೇ ಸಾಕ್ಷಿ ಸತ್ಯ ಹೇಳುತ್ತಿಲ್ಲ ಎಂದಾಗುವುದಿಲ್ಲ. ಒಂದು ತಪ್ಪಿಗೆ ಇಬ್ಬರು ಸಾಕ್ಷಿಗಳು ಇಲ್ಲದೇ ಹೋದಾಗಲೂ ಒಂದು ಗಂಭೀರ ತಪ್ಪು ನಡೆದಿರಬಹುದು ಮತ್ತು ಇದರಿಂದ ಬೇರೆಯವರಿಗೆ ಹಾನಿಯಾಗಿರಬಹುದು ಎಂದು ಹಿರಿಯರು ಗಮನದಲ್ಲಿ ಇಟ್ಟುಕೊಳ್ಳುತ್ತಾರೆ. ಯಾರಿಗೆ ನೋವಾಗಿದೆಯೋ ಅವರಿಗೆ ಹಿರಿಯರು ಸಾಂತ್ವನ ಮತ್ತು ಬೆಂಬಲ ಕೊಡುತ್ತಾರೆ. ಮಕ್ಕಳ ಪೀಡಕನೆಂದು ಆರೋಪಿಸಲಾದ ವ್ಯಕ್ತಿಯ ಮೇಲೆ ಸಹ ಒಂದು ಕಣ್ಣಿಡುತ್ತಾರೆ. ಅವನಿಂದ ಸಭೆಯಲ್ಲಿರುವ ಬೇರೆಯವರನ್ನು ಸಂರಕ್ಷಿಸಲು ಇದನ್ನು ಮಾಡುತ್ತಾರೆ.—ಅ. ಕಾ. 20:28.

17-18. ನ್ಯಾಯನಿರ್ಣಾಯಕ ಕಮಿಟಿ ಏನು ಮಾಡುತ್ತದೆ?

17 ನ್ಯಾಯನಿರ್ಣಾಯಕ ಕಮಿಟಿ ಏನು ಮಾಡುತ್ತೆ? ಗಂಭೀರವಾದ ತಪ್ಪು ಮಾಡಿದ ವ್ಯಕ್ತಿಯನ್ನು ಸಭೆಯಲ್ಲಿ ಉಳಿಸಬೇಕಾ ಬಾರದಾ ಎಂದು ಕಮಿಟಿ ತೀರ್ಮಾನಿಸುತ್ತದೆ. ತಪ್ಪು ಮಾಡಿದ ವ್ಯಕ್ತಿ ಒಂದು ಕಾನೂನನ್ನು ಮುರಿದಿರುವುದರಿಂದ ಅವನಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕಾ ಬಾರದಾ ಎಂದು ಹಿರಿಯರು ತೀರ್ಮಾನಿಸುವುದಿಲ್ಲ. ಯಾಕೆಂದರೆ ಕಾನೂನನ್ನು ಮುರಿದ ವ್ಯಕ್ತಿಗೆ ಯಾವ ಶಿಕ್ಷೆಯಾಗಬೇಕೆಂದು ನಿರ್ಧರಿಸುವುದು ಸರ್ಕಾರಿ ಅಧಿಕಾರಿಗಳು.—ರೋಮ. 13:2-4; ತೀತ 3:1.

18 ಹಿರಿಯರು ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಮಾತ್ರ ನ್ಯಾಯನಿರ್ಣಯ ಮಾಡುತ್ತಾರೆ. ಪೀಡಕನು ಪಶ್ಚಾತ್ತಾಪಪಟ್ಟಿದ್ದಾನಾ ಇಲ್ಲವಾ ಎಂದು ಬೈಬಲಿನ ಸಹಾಯದಿಂದ ನಿರ್ಧರಿಸುತ್ತಾರೆ. ಪೀಡಕನು ಪಶ್ಚಾತ್ತಾಪಪಟ್ಟಿಲ್ಲ ಅಂದರೆ ಅವನನ್ನು ಬಹಿಷ್ಕರಿಸಲಾಗುತ್ತದೆ ಮತ್ತು ಸಭೆಗೆ ಒಂದು ಪ್ರಕಟಣೆಯನ್ನು ಮಾಡಲಾಗುತ್ತದೆ. (1 ಕೊರಿಂ. 5:11-13) ಅವನು ಪಶ್ಚಾತ್ತಾಪಪಟ್ಟರೆ ಅವನನ್ನು ಸಭೆಯಲ್ಲಿ ಉಳಿಸಿಕೊಳ್ಳುತ್ತಾರೆ. ಆದರೆ ಸಭೆಯಲ್ಲಿ ಅವನಿಗೆ ಯಾವುದೇ ಸುಯೋಗಗಳು ತುಂಬ ವರ್ಷಗಳ ವರೆಗೆ ಅಥವಾ ಜೀವನಪೂರ್ತಿ ಸಿಗಲಿಕ್ಕಿಲ್ಲ ಎಂದು ಹೇಳುತ್ತಾರೆ. ಮಕ್ಕಳನ್ನು ಸಂರಕ್ಷಿಸಲಿಕ್ಕಾಗಿ ಹಿರಿಯರು ಚಿಕ್ಕ ಮಕ್ಕಳಿರುವ ಹೆತ್ತವರ ಹತ್ತಿರ ವೈಯಕ್ತಿಕವಾಗಿ ಮಾತಾಡಬಹುದು. ತಮ್ಮ ಮಕ್ಕಳು ಪೀಡಕನ ಆಸುಪಾಸಿನಲ್ಲಿರುವಾಗ ಹೆತ್ತವರು ಜಾಗ್ರತೆ ವಹಿಸಬೇಕೆಂದು ಹೇಳಬಹುದು. ಆದರೆ ಇಂಥ ಕ್ರಮಗಳನ್ನು ತಗೊಳ್ಳುವಾಗ, ಪೀಡಕನು ಈಗಾಗಲೇ ಯಾರ ಮೇಲೆ ದೌರ್ಜನ್ಯ ನಡೆಸಿದ್ದಾನೆ ಅಂತ ಹೇಳುವುದಿಲ್ಲ.

ಹೆತ್ತವರು ಮಕ್ಕಳನ್ನು ಹೇಗೆ ಸಂರಕ್ಷಿಸಬೇಕು?

ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು ಹೆತ್ತವರು ಸೆಕ್ಸ್‌ ಬಗ್ಗೆ ಮಕ್ಕಳಿಗೆ ಎಷ್ಟು ಸೂಕ್ತನೋ ಅಷ್ಟು ಮಾಹಿತಿ ಕೊಡುತ್ತಿದ್ದಾರೆ. ಇದಕ್ಕಾಗಿ ಸಂಘಟನೆ ಕೊಟ್ಟಿರುವ ಪ್ರಕಾಶನಗಳನ್ನು ಬಳಸುತ್ತಿದ್ದಾರೆ. (ಪ್ಯಾರ 19-22 ನೋಡಿ)

19-22. ಮಕ್ಕಳನ್ನು ಸಂರಕ್ಷಿಸಲು ಹೆತ್ತವರು ಏನು ಮಾಡಬೇಕು? (ಮುಖಪುಟ ಚಿತ್ರ ನೋಡಿ.)

19 ಮಕ್ಕಳನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ಯಾರದ್ದು?  ಹೆತ್ತವರದ್ದು. * ಮಕ್ಕಳು “ಯೆಹೋವನಿಂದ ಬಂದ ಸ್ವಾಸ್ತ್ಯ,” ದೇವರು ಕೊಟ್ಟಿರುವ ಉಡುಗೊರೆ. (ಕೀರ್ತ. 127:3) ಮಕ್ಕಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಯೆಹೋವ ದೇವರು ಹೆತ್ತವರಾದ ನಿಮಗೆ ಕೊಟ್ಟಿದ್ದಾನೆ. ನಿಮ್ಮ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು ನೀವು ಏನು ಮಾಡಬೇಕು?

20 ಮೊದಲನೇದಾಗಿ, ದೌರ್ಜನ್ಯದ ಬಗ್ಗೆ ನೀವು ತಿಳುಕೊಳ್ಳಬೇಕು. ಯಾವ ರೀತಿಯ ವ್ಯಕ್ತಿಗಳು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಮತ್ತು ಮಕ್ಕಳನ್ನು ಪುಸಲಾಯಿಸಲು ಏನು ಮಾಡುತ್ತಾರೆ ಎಂದು ನೀವು ತಿಳುಕೊಳ್ಳಬೇಕು. ಯಾವ ಸನ್ನಿವೇಶಗಳು ನಿಮ್ಮ ಮಗುಗೆ ಅಪಾಯಕಾರಿ ಆಗಬಹುದು ಎಂದು ಗಮನಿಸುತ್ತಾ ಇರಿ. (ಜ್ಞಾನೋ. 22:3; 24:3) ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುವುದು ಮಗುಗೆ ಗೊತ್ತಿರುವ ಮತ್ತು ಮಗು ನಂಬುವ ವ್ಯಕ್ತಿಗಳಿಂದ ಅನ್ನುವುದನ್ನು ಮರೆಯಬೇಡಿ.

21 ಎರಡನೇದಾಗಿ, ಮಕ್ಕಳ ಜೊತೆ ಯಾವಾಗಲೂ ಚೆನ್ನಾಗಿ ಮಾತಾಡುವ ರೂಢಿ ಬೆಳೆಸಿಕೊಳ್ಳಿ. (ಧರ್ಮೋ. 6:6, 7) ಮಕ್ಕಳು ಮಾತಾಡುವಾಗ ನೀವು ಕಿವಿಗೊಡುವುದು ಸಹ ಇದರಲ್ಲಿ ಸೇರಿದೆ. (ಯಾಕೋ. 1:19) ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಅವರು ಹೆಚ್ಚಾಗಿ ಅದರ ಬಗ್ಗೆ ಮಾತಾಡಲು ಇಷ್ಟಪಡಲ್ಲ ಅನ್ನುವುದನ್ನು ಮನಸ್ಸಲ್ಲಿಡಿ. ಅವರು ಹೇಳುವುದನ್ನು ಯಾರೂ ನಂಬಲ್ಲ ಅಥವಾ ನಡೆದ ವಿಷಯವನ್ನು ಹೇಳಿದರೆ ಏನಾದರೂ ಮಾಡಿಬಿಡುತ್ತೇನೆ ಅಂತ ಪೀಡಕನು ಬೆದರಿಕೆ ಕೂಡ ಹಾಕಿರಬಹುದು. ಏನೋ ಸರಿ ಇಲ್ಲ ಅಂತ ನಿಮಗೆ ಸಂಶಯ ಬಂದರೆ, ಮಕ್ಕಳಿಗೆ ದಯಾಭಾವದಿಂದ ಕೆಲವು ಪ್ರಶ್ನೆಗಳನ್ನು ಕೇಳಿ ಮತ್ತು ಅವರು ಮಾತಾಡುವಾಗ ಗಮನಕೊಟ್ಟು ಕೇಳಿ.

22 ಮೂರನೇದಾಗಿ, ನಿಮ್ಮ ಮಕ್ಕಳಿಗೆ ಕಲಿಸಿ. ನೀವು ನಿಮ್ಮ ಮಕ್ಕಳ ಹತ್ತಿರ ಸೆಕ್ಸ್‌ ಬಗ್ಗೆ ಮಾತಾಡಬೇಕು. ಅವರ ವಯಸ್ಸಿಗೆ ತಕ್ಕಂತೆ ಮತ್ತು ಅವರಿಗೆ ಎಷ್ಟು ಅರ್ಥ ಆಗುತ್ತೋ ಅದಕ್ಕೆ ತಕ್ಕಂತೆ ಮಾಹಿತಿಯನ್ನು ಹಂಚಿಕೊಳ್ಳಿ. ಯಾರಾದರೂ ತಪ್ಪಾಗಿ ಮುಟ್ಟಿದರೆ ಏನು ಹೇಳಬೇಕು, ಏನು ಮಾಡಬೇಕೆಂದು ಕಲಿಸಿ. ಮಕ್ಕಳನ್ನು ಸಂರಕ್ಷಿಸಲು ದೇವರ ಸಂಘಟನೆ ಕೊಟ್ಟಿರುವ ಮಾಹಿತಿಯನ್ನು ಉಪಯೋಗಿಸಿ.—“ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಬೇಕಾದ ಮಾಹಿತಿ” ಎಂಬ ಚೌಕ ನೋಡಿ.

23. (ಎ) ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯದ ಬಗ್ಗೆ ನಮಗೆ ಯಾವ ನೋಟ ಇದೆ?(ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗೆ ಉತ್ತರ ಸಿಗಲಿದೆ?

23 ಯೆಹೋವನ ಸಾಕ್ಷಿಗಳಾಗಿರುವ ನಾವು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ತುಂಬ ಘೋರವಾದ ಪಾಪವಾಗಿ, ಗಂಭೀರವಾದ ಅಪರಾಧವಾಗಿ ನೋಡುತ್ತೇವೆ. ಕ್ರಿಸ್ತನ ನಿಯಮಕ್ಕೆ ಬದ್ಧರಾಗಿರುವ ನಾವು ದೌರ್ಜನ್ಯ ನಡೆಸುವವರಿಗೆ ಶಿಕ್ಷೆ ಆಗದಂತೆ ಕಾಪಾಡುವುದಿಲ್ಲ. ಆದರೆ ನಮ್ಮ ಒಬ್ಬ ಸಹೋದರ ಅಥವಾ ಸಹೋದರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ, ಅವರಿಗೆ ನಾವು ಹೇಗೆ ಸಹಾಯ ಮಾಡಬಹುದು? ಮುಂದಿನ ಲೇಖನದಲ್ಲಿ ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳೋಣ.

ಗೀತೆ 123 ಕುರಿಪಾಲರು—ಮನುಷ್ಯರಲ್ಲಿ ದಾನಗಳು

^ ಪ್ಯಾರ. 5 ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಹೇಗೆ ಕಾಪಾಡಬಹುದು ಎಂದು ಈ ಲೇಖನದಲ್ಲಿ ನೋಡಲಿದ್ದೇವೆ. ಹಿರಿಯರು ಸಭೆಯನ್ನು ಹೇಗೆ ಸಂರಕ್ಷಿಸಬೇಕು ಮತ್ತು ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಸಂರಕ್ಷಿಸಬೇಕು ಎಂದು ಕಲಿಯಲಿದ್ದೇವೆ.

^ ಪ್ಯಾರ. 3 ಪದ ವಿವರಣೆ: ವಯಸ್ಕರು ಯಾರಾದರೂ ತಮ್ಮ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಮಕ್ಕಳನ್ನು ದುರುಪಯೋಗಿಸಿದರೆ ಅದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆಗುತ್ತದೆ. ಇದರಲ್ಲಿ ಲೈಂಗಿಕ ಸಂಭೋಗ; ಬಾಯಿ ಅಥವಾ ಗುದದ್ವಾರದ ಮೂಲಕ ನಡೆಸುವ ಸೆಕ್ಸ್‌; ಜನನಾಂಗ, ಸ್ತನ, ಕುಂಡೆಯನ್ನು ಮುಟ್ಟಿ ನೇವರಿಸುವುದು ಅಥವಾ ಬೇರೆ ರೀತಿಯ ವಿಕೃತ ಕಾಮಕೃತ್ಯಗಳು ಸೇರಿದೆ. ಹೆಚ್ಚಾಗಿ ಹೆಣ್ಣುಮಕ್ಕಳು ಈ ದೌರ್ಜನ್ಯಕ್ಕೆ ಬಲಿಪಶು ಆಗುವುದಾದರೂ ಗಂಡುಮಕ್ಕಳನ್ನು ಸಹ ಈ ರೀತಿ ದುರುಪಯೋಗಿಸುವವರು ಇದ್ದಾರೆ. ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಪೀಡಕರು ಹೆಚ್ಚಾಗಿ ಗಂಡಸರಾದರೂ ಕೆಲವು ಹೆಂಗಸರು ಸಹ ಈ ನೀಚಕೃತ್ಯವನ್ನು ನಡೆಸುತ್ತಾರೆ.

^ ಪ್ಯಾರ. 5 ಪದ ವಿವರಣೆ: ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ, “ಬಲಿಪಶು” ಎಂಬ ಪದವನ್ನು ಚಿಕ್ಕವರಿರುವಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ಸೂಚಿಸಲು ಬಳಸಲಾಗಿದೆ. ಮಗುವಿಗೆ ಕಷ್ಟ ಆಗಿದೆ, ದುರುಪಯೋಗಿಸಲಾಗಿದೆ, ಮಗುದು ಯಾವ ತಪ್ಪೂ ಇಲ್ಲ ಎಂದು ಈ ಪದದ ಮೂಲಕ ತೋರಿಸಲು ಬಯಸುತ್ತೇವೆ.

^ ಪ್ಯಾರ. 11 ಯೆಹೋವನ ಜೊತೆ ಒಳ್ಳೇ ಸಂಬಂಧ ಇಲ್ಲದ ಕಾರಣ ಒಬ್ಬ ವ್ಯಕ್ತಿ ಗಂಭೀರವಾದ ಪಾಪ ಮಾಡಿದರೆ ಅವನಿಗೆ ಶಿಕ್ಷೆ ಸಿಗಲ್ಲ ಅಂತಲ್ಲ. ತಪ್ಪು ಮಾಡಿದ ವ್ಯಕ್ತಿ ತನ್ನ ತಪ್ಪಿಗೆ ಪೂರ್ತಿ ಜವಾಬ್ದಾರಿ ತಗೊಳ್ಳಬೇಕು. ಅವನು ಮಾಡಿದ ವಿಷಯಕ್ಕೆ ಯೆಹೋವನು ಅವನಿಂದ ಖಂಡಿತ ಲೆಕ್ಕ ಕೇಳುತ್ತಾನೆ.—ರೋಮ. 14:12.

^ ಪ್ಯಾರ. 16 ದೌರ್ಜನ್ಯಕ್ಕೆ ಒಳಗಾದ ಮಗು ದೌರ್ಜನ್ಯ ನಡೆಸಿದವನ ಮುಂದೆ ಬರಬೇಕೆಂದು ಹಿರಿಯರು ಯಾವತ್ತೂ ಹೇಳಲ್ಲ. ಯಾಕೆಂದರೆ ಇದರಿಂದ ಮಗುವಿನ ಮನಸ್ಸಿಗೆ ಇನ್ನೂ ಘಾಸಿಯಾಗುತ್ತದೆ. ನಡೆದ ವಿಷಯವನ್ನು ಮಗು ತನ್ನ ಹೆತ್ತವರಿಗೆ ಅಥವಾ ತಾನು ನಂಬುವ ಇನ್ನೊಬ್ಬ ವ್ಯಕ್ತಿಯ ಹತ್ತಿರ ಹೇಳಿಕೊಂಡಿರಬಹುದು. ಅವರು ಹಿರಿಯರ ಹತ್ತಿರ ಈ ವಿಷಯದ ಬಗ್ಗೆ ಮಾತಾಡುತ್ತಾರೆ.

^ ಪ್ಯಾರ. 19 ಇಲ್ಲಿ ಹೆತ್ತವರಿಗೆ ಕೊಡಲಾಗಿರುವ ಸಲಹೆಗಳು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವ ಬೇರೆ ವ್ಯಕ್ತಿಗಳಿಗೂ ಅನ್ವಯಿಸುತ್ತೆ.