ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2012​ರಲ್ಲಿ ಯುಕ್ರೇನಿನ ನಶ್‌ನ ಆಪ್ಶಾದಲ್ಲಿ ನಡೆದ ಜಿಲ್ಲಾ ಅಧಿವೇಶನ

ಬಂಪರ್‌ ಕೊಯ್ಲು!

ಬಂಪರ್‌ ಕೊಯ್ಲು!

ಕಡೇ ದಿನಗಳಲ್ಲಿ ತನ್ನ ಹಿಂಬಾಲಕರಿಗೆ ಅಮೋಘವಾದ ಕೊಯ್ಲು ಸಿಗುತ್ತದೆ ಎಂದು ಯೇಸು ಮುಂತಿಳಿಸಿದ್ದನು. (ಮತ್ತಾ. 9:37; 24:14) ಈ ಮಾತು ಯುಕ್ರೇನ್‌ನ ಟ್ರಾನ್ಸ್‌ಕಾರ್‌ಪತಿಯಲ್ಲಿ ಒಂದು ಅಪೂರ್ವ ವಿಧದಲ್ಲಿ ಹೇಗೆ ನಿಜವಾಯಿತು ಎಂದು ನೋಡಿ. ಈ ಸ್ಥಳದಲ್ಲಿ ಪಕ್ಕಪಕ್ಕ ಇರುವ ಮೂರು ಪಟ್ಟಣಗಳಲ್ಲಿ 50 ಸಭೆಗಳಿವೆ, 5,400 ಪ್ರಚಾರಕರು ಇದ್ದಾರೆ! * ಈ ಪಟ್ಟಣಗಳಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ 4​ರಲ್ಲಿ ಒಬ್ಬ ವ್ಯಕ್ತಿ ಯೆಹೋವನ ಸಾಕ್ಷಿ!

ಈ ಕ್ಷೇತ್ರದಲ್ಲಿರುವ ಜನರ ಬಗ್ಗೆ ಏನು ಹೇಳಬಹುದು? “ಇಲ್ಲಿರುವ ಜನರಿಗೆ ಬೈಬಲ್‌ ಮೇಲೆ ಗೌರವ ಇದೆ, ನ್ಯಾಯದಿಂದ ನಡಕೊಳ್ಳುತ್ತಾರೆ, ಅವರ ಕುಟುಂಬಗಳಲ್ಲಿ ಒಗ್ಗಟ್ಟಿದೆ, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ” ಎಂದು ಅಲ್ಲಿನ ನಿವಾಸಿಯಾದ ಸಹೋದರ ವಾಸೀಲೆ ಹೇಳುತ್ತಾರೆ. “ಕೆಲವೊಮ್ಮೆ ಜನರು ನಮ್ಮ ನಂಬಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಬೈಬಲಿಂದ ಏನಾದರೂ ತೋರಿಸಿದರೆ ಗಮನಕೊಟ್ಟು ಕೇಳುತ್ತಾರೆ” ಎಂದೂ ಅವರು ಹೇಳುತ್ತಾರೆ.

ಇಷ್ಟೊಂದು ಪ್ರಚಾರಕರಿರುವ ಸ್ಥಳದಲ್ಲಿ ಸುವಾರ್ತೆ ಸಾರುವಾಗ ನಮ್ಮ ಸಹೋದರ ಸಹೋದರಿಯರಿಗೆ ಕೆಲವು ಅಸಾಮಾನ್ಯವಾದ ಸವಾಲುಗಳು ಎದುರಾಗುತ್ತವೆ. ಉದಾಹರಣೆಗೆ, 134 ಪ್ರಚಾರಕರಿರುವ ಒಂದು ಸಭೆಯ ಕ್ಷೇತ್ರದಲ್ಲಿ 50 ಮನೆಗಳು ಮಾತ್ರ ಇವೆ. ಈ ಸನ್ನಿವೇಶವನ್ನು ಪ್ರಚಾರಕರು ಹೇಗೆ ನಿಭಾಯಿಸುತ್ತಾರೆ?

ಅಗತ್ಯ ಹೆಚ್ಚಿರುವ ಸ್ಥಳಗಳಿಗೆ ಹೋಗಿ ಸೇವೆ ಮಾಡಲು ಅನೇಕ ಸಹೋದರ ಸಹೋದರಿಯರು ತುಂಬ ಪ್ರಯತ್ನ ಮಾಡುತ್ತಾರೆ. ಯೊನಾಶ್‌ ಎಂಬ 90 ವರ್ಷದ ಸಹೋದರ ಹೀಗೆ ಹೇಳುತ್ತಾರೆ: “ನಮ್ಮ ಸಭೆಯ ಕ್ಷೇತ್ರದಲ್ಲಿ ಅರ್ಧಕ್ಕರ್ಧ ಮಂದಿ ಯೆಹೋವನ ಸಾಕ್ಷಿಗಳು. ಇತ್ತೀಚೆಗೆ ನನ್ನ ಆರೋಗ್ಯ ಹಾಳಾಗಿರುವುದರಿಂದ ನಾನು ನಮ್ಮೂರಲ್ಲೇ ಸಾರುತ್ತೇನೆ. ಆದರೆ ಇದಕ್ಕಿಂತ ಮುಂಚೆ ನಾನು 160 ಕಿ.ಮೀ. ದೂರದಲ್ಲಿರುವ ನೇಮಿಸಲಾಗಿಲ್ಲದ ಕ್ಷೇತ್ರಕ್ಕೆ ಹೋಗಿ ಹಂಗೇರಿಯನ್‌ ಭಾಷೆಯಲ್ಲಿ ಸುವಾರ್ತೆ ಸಾರಿದ್ದೇನೆ.” ಬೇರೆ ಕ್ಷೇತ್ರಗಳಿಗೆ ಹೋಗಿ ಸೇವೆ ಮಾಡಲು ಪ್ರಚಾರಕರು ತ್ಯಾಗಗಳನ್ನು ಮಾಡಬೇಕು. “ಟ್ರೈನ್‌ ಹಿಡಿಯಲು ನಾನು ಬೆಳಿಗ್ಗೆ 4 ಗಂಟೆಗೆ ಏಳಬೇಕಿತ್ತು. ಸಾಯಂಕಾಲ 6 ಗಂಟೆಗೆ ಆ ಟ್ರೈನ್‌ ವಾಪಸ್‌ ಬರುತ್ತಿತ್ತು. ಅಷ್ಟರ ತನಕ ಸೇವೆ ಮಾಡುತ್ತಿದ್ದೆ. ವಾರದಲ್ಲಿ ಎರಡು, ಮೂರು ಸಲ ಹೀಗೆ ಮಾಡುತ್ತಿದ್ದೆ” ಎಂದು ಯೊನಾಶ್‌ ಹೇಳುತ್ತಾರೆ. ಅವರ ಪ್ರಯತ್ನಗಳಿಗೆ ಫಲ ಸಿಕ್ಕಿತು ಎಂದು ಅವರಿಗೆ ಅನಿಸುತ್ತದಾ? “ಈ ರೀತಿ ಸೇವೆ ಮಾಡಿ ನನಗೆ ತುಂಬ ಸಂತೋಷ ಸಿಕ್ಕಿತು. ದೂರದ ಪ್ರದೇಶದಲ್ಲಿರುವ ಒಂದು ಕುಟುಂಬ ಸತ್ಯ ಕಲಿಯಲು ನಾನು ಸಹಾಯ ಮಾಡಿದೆ” ಎಂದವರು ಹೇಳುತ್ತಾರೆ.

ಈ ಕ್ಷೇತ್ರದ ಸಭೆಗಳಲ್ಲಿರುವ ಎಲ್ಲರಿಗೂ ದೂರದ ಪ್ರದೇಶಗಳಿಗೆ ಹೋಗಿ ಸೇವೆ ಮಾಡಲು ಸಾಧ್ಯವಾಗಿಲ್ಲ. ಆದರೆ ಎಲ್ಲರೂ, ವಯಸ್ಸಾದ ಪ್ರಚಾರಕರು ಸಹ ಸ್ಥಳೀಯ ಕ್ಷೇತ್ರವನ್ನು ಆವರಿಸಲು ಕೈಜೋಡಿಸುತ್ತಾರೆ. ಇದರಿಂದಾಗಿ 2017​ರಲ್ಲಿ ಈ ಮೂರೂ ಪಟ್ಟಣಗಳಲ್ಲಿ ಸ್ಮರಣೆಗೆ ಬಂದವರ ಒಟ್ಟು ಸಂಖ್ಯೆ ಪ್ರಚಾರಕರ ಸಂಖ್ಯೆಗಿಂತ ಸುಮಾರು ಎರಡು ಪಟ್ಟು ಹೆಚ್ಚಿತ್ತು. ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕರ್ಧ ಮಂದಿ ಸ್ಮರಣೆಗೆ ಹಾಜರಾಗಿದ್ದರು. ನಾವು ಎಲ್ಲೇ ಸೇವೆ ಮಾಡುತ್ತಿರಲಿ ಕರ್ತನ ಕೆಲಸದಲ್ಲಿ ಇನ್ನೆಷ್ಟೋ ಮಾಡಬೇಕಾಗಿದೆ ಅನ್ನುವುದರಲ್ಲಿ ಸಂಶಯವಿಲ್ಲ.—1 ಕೊರಿಂ. 15:58.

^ ಪ್ಯಾರ. 2 ಆ ಮೂರು ಪಟ್ಟಣಗಳ ಹೆಸರು: ಹಲ್‌ಬೊಕ್‌ ಪೊಟೀಕ್‌, ಸರಡ್‌ನ ವೊಡ್ಯಾನ ಮತ್ತು ನಶ್‌ನ ಆಪ್ಶಾ.