ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಜೀವನ ಕಥೆ

ಕಿವುಡನಾಗಿದ್ದರೂ ಬೇರೆಯವರಿಗೆ ಕಲಿಸುವುದನ್ನು ನಾನು ನಿಲ್ಲಿಸಲಿಲ್ಲ

ಕಿವುಡನಾಗಿದ್ದರೂ ಬೇರೆಯವರಿಗೆ ಕಲಿಸುವುದನ್ನು ನಾನು ನಿಲ್ಲಿಸಲಿಲ್ಲ

ನಾನು 1941ರಲ್ಲಿ ದೀಕ್ಷಾಸ್ನಾನ ಪಡೆದೆ. ಆಗ ನನಗೆ 12 ವರ್ಷ. ಆದರೆ ನನಗೆ ಬೈಬಲ್‌ ಸತ್ಯ ನಿಜವಾಗ್ಲೂ ಅರ್ಥವಾದದ್ದು 1946ರಲ್ಲಿ. ಯಾಕೆ ಅಂತ ನನ್ನ ಕಥೆ ಕೇಳಿದರೆ ನಿಮಗೆ ಅರ್ಥವಾಗುತ್ತದೆ.

ಸುಮಾರು 1910ರಲ್ಲಿ ನನ್ನ ಹೆತ್ತವರು ಜಾರ್ಜಿಯ ದೇಶದಲ್ಲಿರುವ ಟಬಿಲಿಸೀ ಎಂಬಲ್ಲಿಂದ ಕೆನಡಕ್ಕೆ ಬಂದರು. ಪಶ್ಚಿಮ ಕೆನಡದ ಸಾಸ್ಕಾಚವಾನ್‌ನಲ್ಲಿ ಪೆಲೀ ಎಂಬ ಸ್ಥಳದ ಹತ್ತಿರ ಒಂದು ಸಣ್ಣ ತೋಟದ ಮನೆಯಲ್ಲಿ ವಾಸವಾಗಿದ್ದರು. ನಾನು 1928ರಲ್ಲಿ ಹುಟ್ಟಿದೆ. ಆರು ಮಕ್ಕಳಲ್ಲಿ ನಾನೇ ಚಿಕ್ಕವನು. ನನ್ನ ಅಪ್ಪ ನಾನು ಹುಟ್ಟುವುದಕ್ಕಿಂತ ಆರು ತಿಂಗಳ ಮುಂಚೆಯೇ ತೀರಿಕೊಂಡರು. ನಾನು ಮಗುವಾಗಿದ್ದಾಗ ಅಮ್ಮ ತೀರಿಕೊಂಡರು. ಇದಾಗಿ ಸ್ವಲ್ಪದರಲ್ಲೇ ನನ್ನ ದೊಡ್ಡಕ್ಕ ಲೂಸೀ ಸಹ ತೀರಿಕೊಂಡಳು. ಅವಳಿಗಾಗ 17 ವರ್ಷ. ಇದೆಲ್ಲಾ ಆದ ಮೇಲೆ ನಮ್ಮ ಮಾವ ನಿಕ್‌ ನಮ್ಮನ್ನು ನೋಡಿಕೊಂಡರು.

ನಾನು ನಡೆಯಲು ಆರಂಭಿಸಿದಾಗ ಒಂದು ದಿನ ಏನಾಯಿತೆಂದರೆ ನಾವು ಸಾಕಿದ್ದ ಒಂದು ಕುದುರೆಯ ಬಾಲವನ್ನು ಎಳೆಯುತ್ತಾ ನಿಂತಿದ್ದೆ. ನನ್ನ ಕುಟುಂಬದವರು ಇದನ್ನು ನೋಡಿ ಬೆಚ್ಚಿಬಿದ್ದರು. ಕುದುರೆ ಒದ್ದುಬಿಡುತ್ತೆ ಅನ್ನೋ ಭಯದಲ್ಲಿ ‘ಅದನ್ನು ಬಿಟ್ಟುಬಿಡೋ’ ಅಂತ ಗಟ್ಟಿಯಾಗಿ ಕೂಗಿದರು. ಅವರು ನನ್ನ ಹಿಂದೆ ಇದ್ದರು. ಅವರು ಕಿರಿಚಿದ್ದು ನನಗೆ ಕೇಳಿಸಲಿಲ್ಲ. ಸದ್ಯ ಕುದುರೆ ನನಗೇನೂ ಮಾಡಲಿಲ್ಲ. ಆದರೆ ನನಗೆ ಕಿವಿ ಕೇಳಿಸಲ್ಲ ಅಂತ ನನ್ನ ಕುಟುಂಬಕ್ಕೆ ಗೊತ್ತಾಗಿದ್ದು ಅವತ್ತೇ.

ನಮ್ಮ ಕುಟುಂಬದ ಸ್ನೇಹಿತರೊಬ್ಬರು ನನ್ನನ್ನು ಕಿವುಡ ಮಕ್ಕಳ ಶಾಲೆಗೆ ಕಳುಹಿಸಿದರೆ ಒಳ್ಳೇದಿರುತ್ತೆ ಅಂತ ಹೇಳಿದರು. ಆದ್ದರಿಂದ ಮಾವ ನನ್ನನ್ನು ಸಾಸ್ಕಾಚವಾನ್‌ನಲ್ಲಿ ಸಾಸ್ಕಾಟೂನ್‌ ಎಂಬ ಸ್ಥಳದಲ್ಲಿದ್ದ ಕಿವುಡರ ಶಾಲೆಗೆ ಕಳುಹಿಸಿದರು. ಇದು ನನ್ನ ಕುಟುಂಬವಿದ್ದ ಸ್ಥಳದಿಂದ ತುಂಬ ದೂರದಲ್ಲಿತ್ತು. ಬರೀ ಐದು ವರ್ಷದವನಾಗಿದ್ದ ನನಗೆ ತುಂಬ ಹೆದರಿಕೆ ಆಯಿತು. ಯಾವುದಾದರೂ ರಜೆ ಇದ್ದಾಗ ಮತ್ತು ಬೇಸಗೆ ರಜೆಯಲ್ಲಿ ಮನೆಗೆ ಬರುತ್ತಿದ್ದೆ. ಹೋಗುತ್ತಾ ಹೋಗುತ್ತಾ ಸನ್ನೆ ಭಾಷೆ ಕಲಿತೆ. ನನ್ನಂತಿದ್ದ ಬೇರೆ ಮಕ್ಕಳೊಂದಿಗೆ ಸೇರಿ ಆಟವಾಡುತ್ತಾ ಸಂತೋಷವಾಗಿದ್ದೆ.

ಬೈಬಲ್‌ ಸತ್ಯ ಕಲಿತೆ

1939ರಲ್ಲಿ ಬಿಲ್‌ ಡಾನಿಯೀಲ್ಚುಕ್‌ ಎಂಬವರನ್ನು ನನ್ನ ಎರಡನೇ ಅಕ್ಕ ಮೆರಿಯನ್‌ ಮದುವೆಯಾದರು. ಇವರು ನನ್ನನ್ನು ಮತ್ತು ನನ್ನ ಚಿಕ್ಕ ಅಕ್ಕ ಫ್ರಾನ್ಸಸನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡರು. ನಮ್ಮ ಕುಟುಂಬದವರಲ್ಲಿ ಯೆಹೋವನ ಸಾಕ್ಷಿಗಳ ಜೊತೆ ಮೊದಲು ಅಧ್ಯಯನ ಮಾಡಲು ಆರಂಭಿಸಿದ್ದು ಇವರೇ. ನಾನು ಬೇಸಗೆ ರಜೆಯಲ್ಲಿ ಮನೆಗೆ ಹೋದಾಗ, ಅವರು ಬೈಬಲಿನಿಂದ ಕಲಿಯುತ್ತಿದ್ದ ವಿಷಯಗಳನ್ನು ನನಗೆ ಕಲಿಸಲು ತಮ್ಮಿಂದಾದಷ್ಟು ಪ್ರಯತ್ನ ಮಾಡಿದರು. ಅವರಿಗೆ ಸನ್ನೆ ಭಾಷೆ ಬರುತ್ತಿರಲಿಲ್ಲ. ಆದ್ದರಿಂದ ನಮಗೆ ಸಂವಾದ ಮಾಡಲು ಕಷ್ಟ ಆಗುತ್ತಿತ್ತು. ಆದರೆ ಯೆಹೋವನ ಬಗ್ಗೆ ಕಲಿಯುತ್ತಿದ್ದ ವಿಷಯಗಳು  ನನಗೆ ಇಷ್ಟವಾಗುತ್ತಿದೆ ಎಂದು ಅವರಿಗೆ ಅರ್ಥವಾಯಿತು. ಅವರು ಮಾಡುತ್ತಿರುವ ಕೆಲಸಕ್ಕೂ ಬೈಬಲಿಗೂ ಏನೋ ಸಂಬಂಧ ಇದೆ ಅಂತ ನನಗನಿಸಿತು. ಆದ್ದರಿಂದ ಅವರು ಸೇವೆಗೆ ಹೋದಾಗ ನಾನೂ ಅವರ ಜೊತೆಯಲ್ಲಿ ಹೋದೆ. ಸ್ವಲ್ಪ ಸಮಯದಲ್ಲೇ ದೀಕ್ಷಾಸ್ನಾನ ಪಡೆಯಲು ಮನಸ್ಸುಮಾಡಿದೆ. 1941ರ ಸೆಪ್ಟೆಂಬರ್‌ 5​ರಂದು ಒಂದು ಸ್ಟೀಲ್‌ ಡ್ರಮ್‌ನಲ್ಲಿ ನನ್ನ ಭಾವ ನನಗೆ ದೀಕ್ಷಾಸ್ನಾನ ಕೊಟ್ಟರು. ಒಂದು ಬಾವಿಯಿಂದ ನೀರನ್ನು ತಂದು ಆ ಡ್ರಮ್‌ಗೆ ತುಂಬಿಸಲಾಗಿತ್ತು. ನೀರು ತುಂಬ ಅಂದ್ರೆ ತುಂಬಾ ತಣ್ಣಗಿತ್ತು!

1946ರಲ್ಲಿ ಒಹಾಯೋದ ಕ್ಲೀವ್‌ಲ್ಯಾಂಡಿನಲ್ಲಿ ನಡೆದ ಅಧಿವೇಶನದಲ್ಲಿ ಕಿವುಡರ ಒಂದು ಗುಂಪಿನ ಜೊತೆ

1946ರಲ್ಲಿ ನಾನು ಬೇಸಗೆ ರಜೆಯಲ್ಲಿ ಮನೆಗೆ ಬಂದಾಗ, ಎಲ್ಲರೂ ಅಮೆರಿಕದ ಒಹಾಯೋದ ಕ್ಲೀವ್‌ಲ್ಯಾಂಡಿನಲ್ಲಿ ನಡೆದ ಒಂದು ಅಧಿವೇಶನಕ್ಕೆ ಹೋದ್ವಿ. ಮೊದಲನೇ ದಿನ, ಭಾಷಣಕಾರರು ಏನು ಹೇಳುತ್ತಿದ್ದಾರೆಂದು ನನ್ನ ಅಕ್ಕಂದಿರು ನನಗೆ ಬರೆದು ತೋರಿಸಿದರು. ಆದರೆ ಎರಡನೇ ದಿನ, ಅದೇ ಅಧಿವೇಶನದಲ್ಲಿ ಕಿವುಡರ ಒಂದು ಗುಂಪು ಇದೆ ಮತ್ತು ಸನ್ನೆ ಭಾಷೆಯಲ್ಲಿ ಒಬ್ಬರು ಕಾರ್ಯಕ್ರಮವನ್ನು ಅನುವಾದ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ತುಂಬ ಖುಷಿಯಾಯಿತು. ಇದರಿಂದ ಉಳಿದ ಕಾರ್ಯಕ್ರಮವನ್ನು ಆನಂದಿಸಲು ಸಾಧ್ಯವಾಯಿತು. ಬೈಬಲು ಏನು ಕಲಿಸುತ್ತದೆಂದು ನನಗೆ ಸ್ಪಷ್ಟವಾಗಿ ಅರ್ಥವಾದದ್ದು ಇದೇ ಮೊದಲನೇ ಸಾರಿ.

ಸತ್ಯವನ್ನು ಕಲಿಸಿದೆ

ಎರಡನೇ ಲೋಕ ಯುದ್ಧ ಆಗಷ್ಟೇ ಮುಗಿದಿತ್ತು. ಜನ ತಮ್ಮ ದೇಶಭಕ್ತಿಯನ್ನು ತೋರಿಸಲು ಬಯಸುತ್ತಿದ್ದರು. ಆದರೆ ನಾನು ಅಧಿವೇಶನದ ನಂತರ ಶಾಲೆಗೆ ಹೋದಾಗ, ಏನೇ ಆದರೂ ಯೆಹೋವನಿಗೆ ನಂಬಿಗಸ್ತನಾಗಿರಬೇಕು ಎಂದು ತೀರ್ಮಾನ ಮಾಡಿಕೊಂಡಿದ್ದೆ. ಆದ್ದರಿಂದ ಧ್ವಜವಂದನೆ ಮಾಡುವುದನ್ನು ನಿಲ್ಲಿಸಿದೆ, ರಾಷ್ಟ್ರ ಗೀತೆಯನ್ನು ಸನ್ನೆ ಭಾಷೆಯಲ್ಲಿ ಹಾಡುತ್ತಿರಲಿಲ್ಲ, ಹಬ್ಬದ ಆಚರಣೆಗಳಲ್ಲಿ ಭಾಗವಹಿಸಲಿಲ್ಲ. ಶಾಲೆಯಲ್ಲಿದ್ದ ಮಕ್ಕಳ ಜೊತೆ ಚರ್ಚಿಗೆ ಹೋಗುವುದನ್ನೂ ನಿಲ್ಲಿಸಿದೆ. ಶಾಲೆಯ ಸಿಬ್ಬಂದಿಗೆ ಇದು ಇಷ್ಟವಾಗಲಿಲ್ಲ. ನನಗೆ ಕಿರುಕುಳ ಕೊಡಲು ಆರಂಭಿಸಿದರು. ನನ್ನ ಮನಸ್ಸನ್ನು ಬದಲಾಯಿಸಲು ಇಲ್ಲ-ಸಲ್ಲದ ವಿಷಯಗಳನ್ನು ಹೇಳಿದರು. ನನ್ನ ಜೊತೆ ಓದುತ್ತಿದ್ದ ಬೇರೆ ಮಕ್ಕಳು ಇದನ್ನೆಲ್ಲಾ ನೋಡುತ್ತಿದ್ದರು. ಹಾಗಾಗಿ ಅವರಿಗೆ ಸಾಕ್ಷಿಕೊಡಲು ನನಗೆ ತುಂಬ ಅವಕಾಶ ಸಿಕ್ಕಿತು. ನನ್ನ ಸಹಪಾಠಿಗಳಲ್ಲಿ ಕೆಲವರು ಸತ್ಯ ಸ್ವೀಕರಿಸಿದರು. ಲ್ಯಾರಿ ಆಂದ್ರೆಸಾಫ್‌, ನಾರ್ಮನ್‌ ಡಿಟ್ರಿಕ್‌ ಮತ್ತು ಈಮಲ್‌ ಶ್ನೈಡರ್‌ ಇವರಲ್ಲಿ ಕೆಲವರು. ಅವರು ಈಗಲೂ ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡುತ್ತಿದ್ದಾರೆ.

ನಾನು ಬೇರೆ ಊರುಗಳಿಗೆ ಹೋದಾಗ, ಕಿವುಡರನ್ನು ಹುಡುಕಿಕೊಂಡು ಹೋಗಿ ಸಾರುತ್ತಿದ್ದೆ. ಹೀಗೆ ಮಾಂಟ್ರಿಯಾಲ್‌ಗೆ ಹೋಗಿದ್ದಾಗ, ಅಲ್ಲಿದ್ದ ಕಿವುಡರ ಕ್ಲಬ್‌ಗೆ ಹೋದೆ. ಅಲ್ಲಿ ನನಗೆ ಎಡೀ ಟೇಗರ್‌ ಎಂಬ ಯುವಕ ಸಿಕ್ಕಿದ. ಅವನು ಕಿವುಡರ ಒಂದು ಗುಂಪಿನ ನಾಯಕನಾಗಿದ್ದ. ಕಳೆದ ವರ್ಷ ಅವನು ತೀರಿಕೊಳ್ಳುವ ವರೆಗೆ ಕ್ವಿಬೆಕ್‌ನಲ್ಲಿರುವ ಲವಾಲ್‌ನ ಸನ್ನೆ ಭಾಷೆ ಸಭೆಯಲ್ಲಿದ್ದ. ನನಗೆ ಕ್ವಾನ್‌ ಆರ್ಡೆನಾಸ್‌ ಎಂಬ ಯುವಕನೂ ಸಿಕ್ಕಿದ. ಇವನು ತಾನು ಕಲಿಯುತ್ತಿದ್ದ ವಿಷಯಗಳು ಬೈಬಲಿನಲ್ಲಿವೆಯಾ ಎಂದು ಹಿಂದಿನ ಕಾಲದ ಬೆರೋಯದವರಂತೆ ಪರೀಕ್ಷಿಸಿ ನೋಡುತ್ತಿದ್ದ. (ಅ. ಕಾ. 17:10, 11) ಅವನೂ ಸತ್ಯಕ್ಕೆ ಬಂದ. ಅವನು ತೀರಿಹೋಗುವ ವರೆಗೆ ಆಂಟೇರಿಯೋವಿನ ಆಟವಾದಲ್ಲಿ ಹಿರಿಯನಾಗಿ ಸೇವೆ ಮಾಡಿದ.

1950ರ ದಶಕದ ಆರಂಭದಲ್ಲಿ ಬೀದಿ ಸಾಕ್ಷಿಕಾರ್ಯ ಮಾಡುತ್ತಿರುವುದು

1950ರಲ್ಲಿ ನಾನು ವ್ಯಾಂಕೂವರ್‌ಗೆ ಸ್ಥಳಾಂತರಿಸಿದೆ. ಕಿವುಡರಿಗೆ ಸಾರುವುದು ನನಗೆ ತುಂಬ ಇಷ್ಟವಾದರೂ ಕಿವಿ ಕೇಳಿಸುತ್ತಿದ್ದ ಕ್ರಿಸ್‌ ಸ್ಪೈಸರ್‌ ಎಂಬ ಮಹಿಳೆಗೆ ಸಾರಿದ್ದನ್ನು ನಾನು ಯಾವತ್ತೂ ಮರೆಯಲ್ಲ. ಅವರಿಗೆ ನಾನು ಬೀದಿಯಲ್ಲಿ ಸಾಕ್ಷಿ ಕೊಟ್ಟೆ. ಅವರು ನಮ್ಮ ಪತ್ರಿಕೆಗಳ ಚಂದಾದಾರರಾಗಲು ಒಪ್ಪಿದರು. ನಾನು ಅವರ ಪತಿ ಗ್ಯಾರಿಯನ್ನು ಭೇಟಿಮಾಡಬೇಕೆಂದೂ ಹೇಳಿದರು. ನಾನು ಅವರ ಮನೆಗೆ ಹೋದೆ. ನಾವು ಒಬ್ಬರಿಗೊಬ್ಬರು ಹೇಳಬೇಕೆಂದಿದ್ದ ವಿಷಯಗಳನ್ನು  ಚೀಟಿಯಲ್ಲಿ ಬರೆದು ತೋರಿಸಿದೆವು. ಹೀಗೇ ತುಂಬ ಹೊತ್ತಿನ ವರೆಗೆ ಮಾತುಕತೆ ನಡೆಯಿತು. ಇದರ ನಂತರ ಅವರು ನನಗೆ ಸಿಗಲಿಲ್ಲ. ಕೆಲವು ವರ್ಷಗಳಾದ ಮೇಲೆ ಆಂಟೇರಿಯೋವಿನ ಟೊರಾಂಟೊದಲ್ಲಿ ಒಂದು ಅಧಿವೇಶನದಲ್ಲಿ ಅವರು ಬಂದು ಮಾತಾಡಿಸಿದಾಗ ನನಗೆ ತುಂಬ ಆಶ್ಚರ್ಯವಾಯಿತು. ಗ್ಯಾರಿ ಅದೇ ದಿನ ದೀಕ್ಷಾಸ್ನಾನ ಪಡೆಯಲಿದ್ದರು. ಯಾವ ಸಮಯದಲ್ಲಿ ಯಾರು ಸತ್ಯವನ್ನು ಸ್ವೀಕರಿಸುವರು ಎಂದು ನಮ್ಮಿಂದ ಹೇಳಲಿಕ್ಕಾಗಲ್ಲ. ಆದ್ದರಿಂದ ನಾವು ಎಡೆಬಿಡದೆ ಸಾರುತ್ತಾ ಇರಬೇಕೆಂದು ಈ ಅನುಭವದಿಂದ ಕಲಿತೆ.

ನಂತರ ನಾನು ಸಾಸ್ಕಾಟೂನ್‌ಗೆ ಹಿಂದೆ ಹೋದೆ. ಅಲ್ಲಿ ಒಬ್ಬ ಮಹಿಳೆ ತನ್ನ ಇಬ್ಬರು ಕಿವುಡ ಅವಳಿ ಪುತ್ರಿಯರೊಂದಿಗೆ ಬೈಬಲ್‌ ಅಧ್ಯಯನ ನಡೆಸುವಂತೆ ನನ್ನನ್ನು ಕೇಳಿಕೊಂಡರು. ಆ ಹುಡುಗಿಯರ ಹೆಸರು ಜೀನ್‌ ಮತ್ತು ಜೋನ್‌ ರಾತನ್‌ಬರ್ಗರ್‌. ಅವರು ನಾನು ಓದಿದ್ದ ಶಾಲೆಯಲ್ಲೇ ಓದುತ್ತಿದ್ದರು. ಸ್ವಲ್ಪ ಸಮಯದಲ್ಲೇ ಅವರು ಕಲಿಯುತ್ತಿದ್ದ ವಿಷಯಗಳ ಬಗ್ಗೆ ತಮ್ಮ ಸಹಪಾಠಿಗಳಿಗೆ ಹೇಳಲು ಆರಂಭಿಸಿದರು. ಕಾಲಾನಂತರ ಅವರ ತರಗತಿಯಲ್ಲಿದ್ದ ಐದು ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳಾದರು. ಇವರಲ್ಲಿ ಒಬ್ಬರು ಯೂನಿಸ್‌ ಕೊಲನ್‌. ನಾನು ಕಿವುಡರ ಶಾಲೆಯಲ್ಲಿ ಕೊನೆಯ ವರ್ಷ ಓದುತ್ತಿದ್ದಾಗ ನನಗೆ ಯೂನಿಸ್‌ ಮೊದಲ ಸಾರಿ ಸಿಕ್ಕಿದ್ದಳು. ಆಗ ಅವಳು ನನಗೆ ಒಂದು ಮಿಠಾಯಿ ಕೊಟ್ಟು ನಾವು ಸ್ನೇಹಿತರಾಗಿ ಇರಬಹುದಾ ಅಂತ ಕೇಳಿದ್ದಳು. ಮುಂದೆ ಅವಳು ನನ್ನ ಜೀವನದ ಅವಿಭಾಜ್ಯ ಅಂಗವಾದಳು, ನನ್ನ ಪತ್ನಿಯಾದಳು!

1960 ಮತ್ತು 1989ರಲ್ಲಿ ಯೂನಿಸ್‌ ಜೊತೆ

ಯೂನಿಸ್‌ ಬೈಬಲ್‌ ಕಲಿಯುತ್ತಿದ್ದಾಳೆ ಅಂತ ಅವಳ ತಾಯಿಗೆ ಗೊತ್ತಾದಾಗ, ಪ್ರಾಂಶುಪಾಲರ ಮೂಲಕ ಅವಳ ಬೈಬಲ್‌ ಅಧ್ಯಯನವನ್ನು ನಿಲ್ಲಿಸಲು ಪ್ರಯತ್ನಿಸಿದರು. ಅವಳ ಅಧ್ಯಯನದ ಪುಸ್ತಕಗಳನ್ನು ಪ್ರಾಂಶುಪಾಲರು ಕಿತ್ತುಕೊಂಡು ಹೋದರು. ಆದರೆ ಯೂನಿಸ್‌ ಯೆಹೋವನಿಗೆ ನಂಬಿಗಸ್ತಳಾಗಿರಲು ತೀರ್ಮಾನ ಮಾಡಿಕೊಂಡಿದ್ದಳು. ಅವಳು ದೀಕ್ಷಾಸ್ನಾನ ಪಡೆಯಲು ಬಯಸಿದಾಗ ಅವಳ ಹೆತ್ತವರು, “ನೀನು ಯೆಹೋವನ ಸಾಕ್ಷಿಯಾದರೆ ಮನೆ ಬಿಟ್ಟು ಹೋಗಬೇಕು!” ಅಂದರು. ಯೂನಿಸ್‌ಗೆ 17 ವರ್ಷ ಆದಾಗ ಮನೆಯನ್ನು ಬಿಟ್ಟು ಬಂದು ಒಂದು ಸಾಕ್ಷಿ ಕುಟುಂಬದ ಮನೆ ಸೇರಿಕೊಂಡಳು. ಬೈಬಲ್‌ ಅಧ್ಯಯನ ಮಾಡುವುದನ್ನು ಮುಂದುವರಿಸಿ ದೀಕ್ಷಾಸ್ನಾನ ತೆಗೆದುಕೊಂಡಳು. 1960ರಲ್ಲಿ ನಮ್ಮ ಮದುವೆಯಾದಾಗ ಅವಳ ಹೆತ್ತವರು ಮದುವೆಗೆ ಬರಲಿಲ್ಲ. ಆದರೆ ವರ್ಷಗಳು ಕಳೆದ ಹಾಗೆ, ನಮ್ಮ ನಂಬಿಕೆ ಮತ್ತು ನಾವು ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದ ರೀತಿಯನ್ನು ನೋಡಿ ನಮ್ಮ ಮೇಲೆ ಅವರಿಗೆ ಗೌರವ ಮೂಡಿತು.

 ಯೆಹೋವನು ನನ್ನನ್ನು ಚೆನ್ನಾಗಿ ನೋಡಿಕೊಂಡನು

ನನ್ನ ಮಗ ನಿಕೊಲಸ್‌ ಮತ್ತವನ ಪತ್ನಿ ಡೆಬೋರ ಲಂಡನ್‌ ಬೆತೆಲಿನಲ್ಲಿ ಸೇವೆ ಮಾಡುತ್ತಾರೆ

ಕಿವುಡ ಹೆತ್ತವರಾಗಿದ್ದ ನಮಗೆ ಕಿವಿ ಕೇಳುತ್ತಿದ್ದ ಏಳು ಮಂದಿ ಗಂಡುಮಕ್ಕಳನ್ನು ಬೆಳೆಸುವುದು ಸವಾಲಾಗಿತ್ತು. ಆದರೆ ಅವರೊಂದಿಗೆ ಒಳ್ಳೇ ಸಂವಾದ ಮಾಡಲು, ಸತ್ಯ ಕಲಿಸಲು ಅವರು ಸನ್ನೆ ಭಾಷೆ ಕಲಿಯುವಂತೆ ಮಾಡಿದ್ವಿ. ಸಭೆಯಲ್ಲಿರುವ ಸಹೋದರ ಸಹೋದರಿಯರು ತುಂಬ ಸಹಾಯ ಮಾಡಿದರು. ಉದಾಹರಣೆಗೆ, ಒಬ್ಬ ಸಹೋದರ ನಮಗೆ ಒಂದು ಚೀಟಿಯಲ್ಲಿ ‘ನಿಮ್ಮ ಮಗ ರಾಜ್ಯ ಸಭಾಗೃಹದಲ್ಲಿ ಕೆಟ್ಟ ಮಾತು ಆಡುತ್ತಿದ್ದಾನೆ’ ಅಂತ ಬರೆದು ಕೊಟ್ಟರು. ನಾವು ಕೂಡಲೆ ಈ ವಿಷಯಕ್ಕೆ ಗಮನ ಕೊಡಲು ಸಾಧ್ಯವಾಯಿತು. ನಮ್ಮ ಮಕ್ಕಳಲ್ಲಿ ನಾಲ್ಕು ಮಂದಿ ಅಂದರೆ ಜೇಮ್ಸ್‌, ಜೆರಿ, ನಿಕೊಲಸ್‌, ಸ್ಟೀವನ್‌ ಹಿರಿಯರಾಗಿದ್ದಾರೆ ಮತ್ತು ಹೆಂಡತಿ ಮಕ್ಕಳೊಟ್ಟಿಗೆ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಿದ್ದಾರೆ. ನಿಕೊಲಸ್‌ ಮತ್ತವನ ಪತ್ನಿ ಡೆಬೋರ ಬ್ರಿಟನ್‌ ಶಾಖೆಯಲ್ಲಿ ಸನ್ನೆ ಭಾಷೆಯ ಭಾಷಾಂತರ ಕೆಲಸಕ್ಕೆ ನೆರವು ನೀಡುತ್ತಿದ್ದಾರೆ. ಸ್ಟೀವನ್‌ ಮತ್ತವನ ಪತ್ನಿ ಶಾನನ್‌ ಅಮೆರಿಕದ ಶಾಖಾ ಕಚೇರಿಯಲ್ಲಿರುವ ಸನ್ನೆ ಭಾಷೆಯ ತಂಡದಲ್ಲಿದ್ದಾರೆ.

ನನ್ನ ಮಕ್ಕಳಾದ ಜೇಮ್ಸ್‌, ಜೆರಿ, ಸ್ಟೀವನ್‌ ಮತ್ತವರ ಪತ್ನಿಯರು ಸನ್ನೆ ಭಾಷೆಯಲ್ಲಿ ಸಾರುವ ಕೆಲಸಕ್ಕೆ ಬೇರೆಬೇರೆ ವಿಧಗಳಲ್ಲಿ ಬೆಂಬಲ ನೀಡುತ್ತಿದ್ದಾರೆ

ನಮ್ಮ ವಿವಾಹದ 40ನೇ ವಾರ್ಷಿಕೋತ್ಸವಕ್ಕೆ ಒಂದು ತಿಂಗಳಿರುವಾಗ ದುಃಖಕರವಾಗಿ ಯೂನಿಸ್‌ ಕ್ಯಾನ್ಸರ್‌ ಕಾಯಿಲೆಯಿಂದ ತೀರಿಕೊಂಡಳು. ಅವಳು ಈ ಕಾಯಿಲೆಯೊಂದಿಗೆ ಹೋರಾಡುತ್ತಿದ್ದ ಸಮಯದಲ್ಲಿ ಪುನರುತ್ಥಾನದಲ್ಲಿದ್ದ ನಂಬಿಕೆ ಅವಳಿಗೆ ಬೇಕಾದ ಧೈರ್ಯವನ್ನು ಕೊಟ್ಟಿತು. ಅವಳನ್ನು ಪುನಃ ನೋಡುವ ಆ ದಿನಕ್ಕಾಗಿ ನಾನು ಎದುರುನೋಡುತ್ತಿದ್ದೇನೆ.

ಫೇ ಮತ್ತು ಜೇಮ್ಸ್‌, ಜೆರಿ ಮತ್ತು ಎವ್ಲಿನ್‌, ಶಾನನ್‌ ಮತ್ತು ಸ್ಟೀವನ್‌

2012ರ ಫೆಬ್ರವರಿ ತಿಂಗಳಲ್ಲಿ ನಾನು ಬಿದ್ದು ಸೊಂಟ ಮುರಿದುಕೊಂಡೆ. ನನಗೆ ಸಹಾಯದ ಅಗತ್ಯ ಇರುವುದರಿಂದ ನನ್ನ ಒಬ್ಬ ಮಗನ ಮನೆಯಲ್ಲಿದ್ದೇನೆ. ಈಗ ನಾನು ಕ್ಯಾಲ್ಗರಿ ಸನ್ನೆ ಭಾಷೆ ಸಭೆಯ ಭಾಗವಾಗಿದ್ದೇನೆ. ಈಗಲೂ ಹಿರಿಯನಾಗಿ ಸೇವೆ ಮಾಡುತ್ತಿದ್ದೇನೆ. ಹೇಳಬೇಕಾದರೆ ನಾನು ಒಂದು ಸನ್ನೆ ಭಾಷೆಯ ಸಭೆಯ ಭಾಗವಾಗಿರುವುದು ಇದೇ ಮೊದಲನೇ ಸಾರಿ! ಹಾಗಾದರೆ ಇಷ್ಟರ ತನಕ ಇಂಗ್ಲಿಷ್‌ ಸಭೆಯಲ್ಲಿದ್ದುಕೊಂಡು ಯೆಹೋವನೊಂದಿಗಿನ ನನ್ನ ಸಂಬಂಧವನ್ನು ಹೇಗೆ ಬಲವಾಗಿಟ್ಟುಕೊಂಡೆ? ಆತನೇ ನನಗೆ ಸಹಾಯ ಮಾಡಿದನು. ತಂದೆತಾಯಿಯನ್ನು ಕಳೆದುಕೊಂಡು ದಿಕ್ಕಿಲ್ಲದವನಂತೆ ಇದ್ದ ನನ್ನನ್ನು ಯೆಹೋವನು ಕೈಬಿಡಲಿಲ್ಲ. (ಕೀರ್ತ. 10:14) ನನಗೆ ಸಹಾಯ ಮಾಡಲಿಕ್ಕಾಗಿ ವಿಷಯಗಳನ್ನು ಬರೆದು ತೋರಿಸಿದ, ಸನ್ನೆ ಭಾಷೆ ಕಲಿತ, ಅನುವಾದ ಮಾಡಲು ಪ್ರಯತ್ನಿಸಿದ ಎಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ.

79 ವಯಸ್ಸಿನಲ್ಲಿ ಸನ್ನೆ ಭಾಷೆಯ ಪಯನೀಯರ್‌ ಶಾಲೆಗೆ ಹಾಜರಾದದ್ದು

ಕೆಲವೊಮ್ಮೆ ಬೇರೆಯವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿರಲಿಲ್ಲ. ಕಿವುಡರಿಗೆ ಹೇಗೆ ಸಹಾಯ ಮಾಡಬೇಕೆಂದು ಯಾರಿಗೂ ಗೊತ್ತಿಲ್ಲ ಅಂತ ನನಗನಿಸುತ್ತಿದ್ದ ಸಮಯಗಳಿದ್ದವು. ಆಗೆಲ್ಲ ನಾನು ಬೇಸತ್ತು ಎಲ್ಲವನ್ನೂ ಬಿಟ್ಟುಬಿಡೋಣ ಅಂತ ಯೋಚಿಸಿದ್ದೆ. ಹೀಗೆ ಅನಿಸಿದಾಗೆಲ್ಲಾ ಪೇತ್ರನು ಯೇಸುವಿಗೆ ಹೇಳಿದ ಮಾತುಗಳನ್ನು ನೆನಪಿಗೆ ತಂದುಕೊಳ್ಳುತ್ತಿದ್ದೆ. “ಕರ್ತನೇ, ನಾವು ಯಾರ ಬಳಿಗೆ ಹೋಗುವುದು? ನಿತ್ಯಜೀವದ ಮಾತುಗಳು ನಿನ್ನಲ್ಲಿವೆ.” (ಯೋಹಾ. 6:66-68) ಸತ್ಯದಲ್ಲಿ ತುಂಬ ಸಮಯದಿಂದಿರುವ ಅನೇಕ ಕಿವುಡ ಸಹೋದರ ಸಹೋದರಿಯರಂತೆ ನಾನು ಕೂಡ ತಾಳ್ಮೆಯಿಂದಿರಲು ಕಲಿತಿದ್ದೇನೆ. ಯೆಹೋವನಲ್ಲಿ ಮತ್ತು ಆತನ ಸಂಘಟನೆಯಲ್ಲಿ ನಂಬಿಕೆ ಇಡಲು ಕಲಿತಿದ್ದೇನೆ. ಇದರಿಂದ ಅನೇಕ ಪ್ರಯೋಜನಗಳು ಸಿಕ್ಕಿವೆ. ಈಗ ನಮ್ಮ ಎಷ್ಟೋ ಪ್ರಕಾಶನಗಳು ಸನ್ನೆ ಭಾಷೆಯಲ್ಲಿವೆ. ಅಮೆರಿಕನ್‌ ಸನ್ನೆ ಭಾಷೆಯಲ್ಲಿ ನಡೆಯುವ ಕೂಟ, ಅಧಿವೇಶನಗಳನ್ನು ತುಂಬ ಆನಂದಿಸುತ್ತೇನೆ. ನಮ್ಮ ಮಹಾನ್‌ ದೇವರಾದ ಯೆಹೋವನ ಸೇವೆಯಲ್ಲಿ ನಾನು ಕಳೆದ ಜೀವನ ಸಂತೋಷ, ಸಂತೃಪ್ತಿಯಿಂದ ತುಂಬಿದೆಯೆಂದು ಸತ್ಯವಾಗಿ ಹೇಳಬಲ್ಲೆ!