ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಸಹೋದರ ಸಹೋದರಿಯರ ನಂಬಿಕೆನ ನಾನು ನೋಡ್ದೆ

ಸಹೋದರ ಸಹೋದರಿಯರ ನಂಬಿಕೆನ ನಾನು ನೋಡ್ದೆ

ನಾವು ತುಂಬ ಜನ್ರ ಜೊತೆ ಮಾತಾಡಿರ್ತೀವಿ. ಆದ್ರೆ ಕೆಲವರ ಜೊತೆ ಮಾತಾಡಿದ್ದ ವಿಷ್ಯನ ಎಷ್ಟೇ ವರ್ಷ ಆದ್ರೂ ನಾವು ಮರೆಯಲ್ಲ. ನಂಗೂ ನನ್ನ ಫ್ರೆಂಡ್‌ ಜೊತೆ ಮಾತಾಡಿದ್ದ ಒಂದ್‌ ವಿಷ್ಯ ಇನ್ನೂ ನೆನಪಿದೆ. ಇದಾಗಿ 50 ವರ್ಷ ಆಯ್ತು. ಆಗ ನಾನೂ ನನ್ನ ಫ್ರೆಂಡ್‌ ಕೀನ್ಯದಲ್ಲಿ ಇದ್ವಿ. ಅಲ್ಲಿ ಬೆಂಕಿ ಹಾಕಿ ಚಳಿ ಕಾಯಿಸ್ಕೊಂಡು ಕೂತಿದ್ವಿ. ನಾವು ತಿಂಗಳುಗಟ್ಟಲೆ ಸುತ್ತಾಡಿ ಆಗಷ್ಟೇ ಅಲ್ಲಿಗೆ ಬಂದು ಮುಟ್ಟಿದ್ವಿ. ಬಿಸಿಲಿಗೆ ಮೈ-ಕೈಯೆಲ್ಲಾ ಕಪ್ಪಾಗಿಬಿಟ್ಟಿತ್ತು. ನಾವು ಒಂದು ಸಿನಿಮಾ ಬಗ್ಗೆ ಮಾತಾಡ್ತಿದ್ವಿ. ಅದ್ರಲ್ಲಿ “ಬೈಬಲ್‌ ಬಗ್ಗೆ ಇಲ್ದೆ ಇರೋದ್ನೆಲ್ಲಾ ಹೇಳ್ಬಿಟ್ಟಿದ್ದಾರೆ” ಅಂತ ನನ್‌ ಫ್ರೆಂಡ್‌ ಹೇಳ್ದ.

‘ದೇವ್ರು-ಗೀವ್ರು ಅಂತ ಇವನು ಯಾವಾಗ ಶುರು ಮಾಡಿಕೊಂಡ್ನಪ್ಪಾ’ ಅಂತ ನಗು ಬಂತು. ಅದ್ಕೆ ‘ಬೈಬಲ್‌ ಬಗ್ಗೆ ನಿಂಗೆ ಹೇಗೆ ಗೊತ್ತು?’ ಅಂತ ಕೇಳ್ದೆ. ಅವ್ನು ತಕ್ಷಣ ಏನೂ ಉತ್ರ ಕೊಡ್ಲಿಲ್ಲ. ಆದ್ರೆ ಸ್ವಲ್ಪ ಹೊತ್ತು ಆದ್ಮೇಲೆ ‘ನಮ್ಮಮ್ಮ ಒಬ್ಬ ಯೆಹೋವನ ಸಾಕ್ಷಿ, ಅವ್ರೇ ನಂಗೆ ಬೈಬಲಲ್ಲಿ ಇರೋದನ್ನ ಹೇಳ್ಕೊಟ್ಟಿದ್ದು’ ಅಂದ. ಹಾಗಾದ್ರೆ ‘ನಂಗೂ ಹೇಳ್ಕೊಡು’ ಅಂದೆ.

ಹೀಗೇ ರಾತ್ರಿಯೆಲ್ಲಾ ಮಾತಾಡ್ಕೊಂಡು ಕೂತಿದ್ವಿ. ಆಗ ನನ್‌ ಫ್ರೆಂಡ್‌ ‘ಈ ಭೂಮಿ ಸೈತಾನನ ಕೈಯಲ್ಲಿದೆ ಅಂತ ಬೈಬಲ್‌ ಹೇಳುತ್ತೆ’ ಅಂದ. (ಯೋಹಾ. 14:30) ನೀವು ಇದನ್ನ ಚಿಕ್ಕ ವಯಸ್ಸಿಂದಾನೂ ಕೇಳಿರ್ತೀರ. ಆದ್ರೆ ನಂಗೆ ಇದು ಹೊಸದಾಗಿತ್ತು. ನಾನು ಇದೇ ಮೊದಲನೇ ಸಲ ಈ ತರ ಕೇಳಿದ್ದು. ಈ ಲೋಕ ಪ್ರೀತಿಯಿರೋ ದೇವರ ಕೈಯಲ್ಲಿದೆ ಅಂತ ಅಂದ್ಕೊಂಡಿದ್ದೆ. ಆದ್ರೆ ನನ್ನ ಸುತ್ತಮುತ್ತ ನಡೀತಿದ್ದ ವಿಷ್ಯಗಳನ್ನ ನೋಡಿ ಬೇಜಾರಾಗ್ತಿತ್ತು. 26ನೇ ವಯಸ್ಸಿನ ತನಕ ನಾನು ಬರೀ ಕಷ್ಟಗಳನ್ನೇ ನೋಡ್ತಾ ಬಂದೆ.

ನಾನು ಚಿಕ್ಕವನಾಗಿದ್ದಾಗ ನಮ್ಮಪ್ಪ ಅಮೆರಿಕದ ಏರ್‌ಫೋರ್ಸ್‌ನಲ್ಲಿ ಪೈಲಟ್‌ ಆಗಿ ಕೆಲ್ಸ ಮಾಡ್ತಿದ್ರು. ನಮ್ಮ ದೇಶದವರು ನ್ಯೂಕ್ಲಿಯರ್‌ ಬಾಂಬ್‌ ಹಾಕೋಕೆ ರೆಡಿ ಇದ್ದಾರೆ, ಯಾವಾಗ ಬೇಕಾದ್ರೂ ಯುದ್ಧ ಆಗ್ಬೋದು ಅಂತ ನನಗೆ ಗೊತ್ತಿತ್ತು. ವಿಯೆಟ್ನಾಂನಲ್ಲಿ ಯುದ್ಧ ಶುರು ಆಯ್ತು. ಆಗ ನಾನು ಕ್ಯಾಲಿಫೋರ್ನಿಯಾದಲ್ಲಿ ಕಾಲೇಜ್‌ಗೆ ಹೋಗ್ತಿದ್ದೆ. ವಿದ್ಯಾರ್ಥಿಗಳ ಜೊತೆ ಸೇರ್ಕೊಂಡು ಪ್ರತಿಭಟನೆ ಮಾಡ್ತಿದ್ದೆ. ಪೊಲೀಸರು ಲಾಟಿ ಹಿಡ್ಕೊಂಡು ನಮ್ಮನ್ನ ಅಟ್ಟಿಸ್ಕೊಂಡು ಬರ್ತಿದ್ರು. ಅಶ್ರುವಾಯು ಸಿಡಿಸ್ತಿದ್ರು. ಆಗ ನಮಗೆ ಉಸಿರುಗಟ್ಟಿದ ಹಾಗೆ ಆಗ್ತಿತ್ತು. ಹೊಗೆ ತುಂಬ್ಕೊಂಡು ಕಣ್ಣು ಕಾಣಿಸ್ತಾ ಇರ್ಲಿಲ್ಲ. ನಾವೆಲ್ಲಾ ಓಡಿಹೋಗ್ತಿದ್ವಿ. ಜನ ದಂಗೆ ಏಳ್ತಿದ್ರು, ಮುಷ್ಕರ ಮಾಡ್ತಿದ್ರು, ರಾಜಕಾರಣಿಗಳನ್ನ ಕೊಲ್ತಿದ್ರು. ಏನ್‌ ಮಾಡ್ಬೇಕು ಏನ್‌ ಮಾಡ್ಬಾರ್ದು ಅಂತ ಒಬ್ಬೊಬ್ರು ಒಂದೊಂದ್‌ ಥರ ಹೇಳ್ತಿದ್ರು.

ಲಂಡನ್‌ನಿಂದ ಮಧ್ಯ ಆಫ್ರಿಕಾಗೆ

1970ರಲ್ಲಿ ನಂಗೆ ಅಲಾಸ್ಕದ ಉತ್ತರ ಕರಾವಳಿಯಲ್ಲಿ ಕೆಲ್ಸ ಸಿಕ್ತು. ತುಂಬ ದುಡ್ಡು ಮಾಡ್ದೆ. ಆಮೇಲೆ ಲಂಡನ್‌ಗೆ ಹೋದೆ. ಅಲ್ಲಿ ಒಂದು ಬೈಕ್‌ ತಗೊಂಡೆ. ಆಮೇಲೆ ಒಂದು ದಿಕ್ಕಲ್ಲಿ ಸುಮ್ನೆ ಬೈಕ್‌ ಓಡಿಸ್ಕೊಂಡು ಹೋಗ್ತಿದ್ದೆ. ಕೆಲವು ತಿಂಗಳಾದ ಮೇಲೆ ಆಫ್ರಿಕಾಗೆ ತಲುಪಿದೆ. ಜೀವನದಲ್ಲಿ ತುಂಬ ಕಷ್ಟ ಅನುಭವಿಸಿರೋ ಎಷ್ಟೋ ಜನ ದಾರೀಲಿ ಸಿಕ್ಕಿದ್ರು. ಅವ್ರಿಗೂ ನನ್‌ ತರಾನೇ ಎಲ್ಲಾದ್ರೂ ದೂರ ಹೋಗಿಬಿಡ್ಬೇಕು ಅಂತ ಅನಿಸ್ತಿತ್ತು.

ಈ ಭೂಮಿ ಕೆಟ್ಟ ದೇವದೂತನ ಕೈಯಲ್ಲಿದೆ. ಅವನಿಂದಾನೇ ಇವತ್ತು ಇಷ್ಟು ಕೆಟ್ಟ ಕೆಲಸಗಳು ನಡಿತಾ ಇರೋದು ಅಂತ ನನ್‌ ಫ್ರೆಂಡ್‌ ಹೇಳಿದ್ದು ನಿಜ ಅನಿಸ್ತು. ಆದ್ರೆ ಇದನ್ನೆಲ್ಲ ನೋಡ್ಕೊಂಡು ದೇವರು ಯಾಕೆ ಸುಮ್ನೆ ಇದ್ದಾನೆ ಅಂತ ನನಗೆ ಗೊತ್ತಾಗಬೇಕಿತ್ತು.

ಕೆಲವು ತಿಂಗಳಾದ ಮೇಲೆ ಅದಕ್ಕೆ ಉತ್ರ ಸಿಕ್ತು. ಅವತ್ತಿಂದ ಇಲ್ಲಿ ತನಕ ನಂಗೆ ತುಂಬ ಫ್ರೆಂಡ್ಸ್‌ ಸಿಕ್ಕಿದ್ದಾರೆ. ಅವ್ರಿಗೆ ಕಷ್ಟಗಳು ಬಂದ್ರೂ ದೇವರ ಮೇಲಿದ್ದ ನಂಬಿಕೆ ಕಳ್ಕೊಳ್ಳಲಿಲ್ಲ.

“ಬಾಂಬ್‌ ಮತ್ತು ಬಂದೂಕುಗಳ ಬೀಡು”

ಆಮೇಲೆ ನಾನು ಲಂಡನ್‌ಗೆ ವಾಪಸ್‌ ಬಂದೆ. ಅಲ್ಲಿ ನನ್ನ ಸ್ನೇಹಿತನ ತಾಯಿ ಒಂದು ಬೈಬಲ್‌ ಕೊಟ್ರು. ಆಮೇಲೆ ನಾನು ನೆದರ್ಲೆಂಡ್ಸ್‌ನ ಆ್ಯಮ್‌ಸ್ಟರ್‌ಡ್ಯಾಮ್‌ಗೆ ಹೋದೆ. ಅಲ್ಲಿ ಬೀದಿ ದೀಪದ ಕೆಳಗೆ ಬೈಬಲನ್ನ ಓದ್ತಾ ಇದ್ದೆ. ಅದನ್ನ ನೋಡಿದ ಒಬ್ಬ ಯೆಹೋವನ ಸಾಕ್ಷಿ ಇನ್ನೂ ಜಾಸ್ತಿ ಹೇಳಿಕೊಟ್ರು. ಆಮೇಲೆ ನಾನು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಇರೋ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನ ನೋಡೋಣ ಅಂತ ಹೋದೆ. ಅಲ್ಲಿ ಆರ್ತರ್‌ ಮ್ಯಾಥ್ಯೂಸ್‌ ಅನ್ನೋ ಸಹೋದರ ಸಿಕ್ಕಿದ್ರು. ಅವರು ಅನುಭವ ಇರೋ ಒಳ್ಳೇ ಬ್ರದರ್‌ ಆಗಿದ್ರು. ಅವ್ರ ಹತ್ರ, ‘ನಂಗೆ ಬೈಬಲ್‌ ಕಲಿಸ್ತೀರಾ?’ ಅಂತ ಕೇಳ್ದೆ. ಅದಕ್ಕೆ ಅವರು ಒಪ್ಕೊಂಡ್ರು.

ಯೆಹೋವನ ಸಾಕ್ಷಿಗಳು ಕೊಟ್ಟ ಎಲ್ಲಾ ಪುಸ್ತಕಗಳನ್ನ ಓದ್ತಿದ್ದೆ. ಬೈಬಲ್‌ನ ಕೂಡ ಓದಿ ಮುಗಿಸಿದ್ದೆ. ಅದನ್ನೆಲ್ಲ ಓದಿದಾಗ ನಂಗೆ ತುಂಬ ಖುಷಿಯಾಗ್ತಿತ್ತು. ನಾನು ಕೂಟಗಳಿಗೆ ಹೋದಾಗ ತುಂಬ ಆಶ್ಚರ್ಯ ಆಯ್ತು. ಎಷ್ಟೋ ವರ್ಷಗಳಿಂದ ವಿದ್ಯಾವಂತರ ಮನಸ್ಸು ಕೊರಿತಾ ಇದ್ದ ಪ್ರಶ್ನೆಗಳಿಗೆ, ಉತ್ರ ಏನು ಅಂತ ಅಲ್ಲಿರೋ ಚಿಕ್ಕಮಕ್ಕಳಿಗೂ ಗೊತ್ತಿತ್ತು. ಜನ್ರು ಯಾಕಿಷ್ಟು ಕೆಟ್ಟವರಾಗಿದ್ದಾರೆ? ನಿಜವಾದ ದೇವರು ಯಾರು? ಸತ್ತಮೇಲೆ ಏನಾಗುತ್ತೆ? ಅನ್ನೋ ಪ್ರಶ್ನೆಗಳಿಗೆಲ್ಲ ಆ ಮಕ್ಕಳಿಗೆ ಉತ್ರ ಗೊತ್ತಿತ್ತು. ಆ ದೇಶದಲ್ಲಿ ನಂಗ್ಯಾರೂ ಫ್ರೆಂಡ್ಸೇ ಇರ್ಲಿಲ್ಲ. ಅದು ಒಂಥರಾ ಒಳ್ಳೇದಾಯ್ತು. ಯಾಕಂದ್ರೆ ಇದ್ರಿಂದ ನಾನು ಯೆಹೋವನ ಸಾಕ್ಷಿಗಳ ಜೊತೆ ತುಂಬ ಬೆರೆಯೋಕಾಯ್ತು. ಅವರು ನನಗೆ ಯೆಹೋವ ದೇವರನ್ನ ಪ್ರೀತಿಸೋಕೆ ಕಲಿಸಿದ್ರು, ಆತನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಹೇಳಿಕೊಟ್ರು.

ನೈಜಲ್‌, ಡೆನಿಸ್‌ ಮತ್ತು ನಾನು

1972ರಲ್ಲಿ ನಂಗೆ ದೀಕ್ಷಾಸ್ನಾನ ಆಯ್ತು. 1 ವರ್ಷ ಆದ್ಮೇಲೆ ಪಯನೀಯರಿಂಗ್‌ ಶುರು ಮಾಡ್ದೆ. ಉತ್ತರ ಐರ್ಲೆಂಡಲ್ಲಿದ್ದ ನೆವ್ರಿ ಸಭೆಯಲ್ಲಿ ಸೇವೆ ಶುರು ಮಾಡ್ದೆ. ಬೆಟ್ಟದ ಮೇಲಿರೋ ಒಂದು ಮನೆನ ಬಾಡಿಗೆಗೆ ತಗೊಂಡೆ. ಅದ್ರ ಪಕ್ಕದಲ್ಲೇ ಒಂದು ಹೊಲ ಇತ್ತು. ಅಲ್ಲಿ ಹಸುಗಳು ಯಾವಾಗ್ಲೂ ಮೇಯ್ತಿದ್ವು. ನಾನು ಅವುಗಳ ಮುಂದೆ ಹೋಗಿ ಭಾಷಣ ಕೊಡೋದನ್ನ ಪ್ರ್ಯಾಕ್ಟಿಸ್‌ ಮಾಡ್ತಿದ್ದೆ. ಅವು ಮೆಲುಕು ಹಾಕ್ತಾ ನನ್ನನ್ನೇ ನೋಡ್ತಿದ್ವು. ಅದು ನೋಡೋಕೆ ಅವು ನನ್ನ ಭಾಷಣನ ಆಸಕ್ತಿಯಿಂದ ಕೇಳಿಸ್ಕೊಳ್ತಾ ಇವೆ ಅನ್ನೋ ತರ ಇತ್ತು. ಅವು ನನ್ನ ಭಾಷಣ ಕೇಳಿಸ್ಕೊಳ್ತಿದ್ವು. ಆದ್ರೆ ಸಲಹೆ ಕೊಡ್ತಿರ್ಲಿಲ್ಲ. ಇದ್ರಿಂದ ಸಭಿಕರನ್ನ ನೋಡಿ ಭಾಷಣ ಕೊಡೋದು ಹೇಗೆ ಅಂತ ನಾನು ಕಲಿತೆ. 1974ರಲ್ಲಿ ನಾನು ವಿಶೇಷ ಪಯನೀಯರ್‌ ಆದೆ. ನೈಜಲ್‌ ಪಿಟ್‌ ನನ್ನ ಪಾರ್ಟ್‌ನರ್‌ ಆದ್ರು. ಅವರು ಈಗ್ಲೂ ನಂಗೆ ಒಬ್ಬ ಒಳ್ಳೇ ಸ್ನೇಹಿತ.

ಆ ಕಾಲದಲ್ಲಿ ಉತ್ತರ ಐರ್ಲೆಂಡಲ್ಲಿ ತುಂಬ ಗಲಾಟೆ ನಡೀತಿತ್ತು. ಅದಕ್ಕೆ ಅದನ್ನ “ಬಾಂಬ್‌ ಮತ್ತು ಬಂದೂಕುಗಳ ಬೀಡು” ಅಂತ ಜನ ಕರೀತಿದ್ರು. ಅಲ್ಲಿ ಎಲ್ರೂ ಬೀದಿಗಳಲ್ಲೇ ಹೊಡೆದಾಡ್ತಿದ್ರು, ಗುಂಡು ಹಾರಿಸ್ತಿದ್ರು. ಕಾರ್‌ನಲ್ಲಿ ಬಾಂಬ್‌ ಇಡ್ತಿದ್ರು. ಅದೆಲ್ಲ ಅಲ್ಲಿ ಸರ್ವೇ ಸಾಮಾನ್ಯ ಆಗಿಬಿಟ್ಟಿತ್ತು. ಧರ್ಮ, ರಾಜಕೀಯ ಅಂತ ಯಾವಾಗ್ಲೂ ಜಗಳ ಆಡ್ತಿದ್ರು. ಅಲ್ಲಿದ್ದ ಪ್ರಾಟೆಸ್ಟೆಂಟ್‌ ಮತ್ತು ಕ್ಯಾಥೊಲಿಕ್‌ ಜನ್ರಿಗೆ ಯೆಹೋವನ ಸಾಕ್ಷಿಗಳು ರಾಜಕೀಯ ವಿಷ್ಯಗಳಲ್ಲಿ ತಲೆಹಾಕಲ್ಲ ಅಂತ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಸಿಹಿಸುದ್ದಿ ಸಾರೋಕೆ ನಮಗೆ ತೊಂದ್ರೆ ಮಾಡ್ತಿರ್ಲಿಲ್ಲ. ಅಲ್ಲಿರೋ ಜನ್ರಿಗೆ ಎಲ್ಲಿ, ಯಾವಾಗ ಜಗಳ ಆಗುತ್ತೆ ಅಂತೆಲ್ಲ ಮುಂಚೆನೇ ಗೊತ್ತಾಗ್ತಿತ್ತು. ಅದಕ್ಕೆ ಅವರು ನಮ್ಮನ್ನ ಎಚ್ಚರಿಸ್ತಿದ್ರು.

ಆದ್ರೆ ಕೆಲವೊಮ್ಮೆ ತೊಂದ್ರೆಗಳಾಗಿವೆ. ಒಂದಿನ ನಾನು ಮತ್ತು ಡೆನಿಸ್‌ ಕ್ಯಾರಿಗನ್‌ ಅನ್ನೋ ಸಹೋದರ ಪಕ್ಕದಲ್ಲಿದ್ದ ಪಟ್ಟಣಕ್ಕೆ ಸೇವೆ ಮಾಡೋಕೆ ಹೋಗಿದ್ವಿ. ಅಲ್ಲಿ ಯೆಹೋವನ ಸಾಕ್ಷಿಗಳು ಯಾರೂ ಇರ್ಲಿಲ್ಲ. ಈ ಮುಂಚೆ ನಾವು ಅಲ್ಲಿಗೆ ಒಂದೇ ಒಂದು ಸಲ ಹೋಗಿದ್ವಿ. ಈ ಸಲ ಹೋದಾಗ ಅಲ್ಲಿ ಒಬ್ಬ ಮಹಿಳೆ ನಮ್ಮನ್ನ ನೋಡಿ ವೇಷ ಬದಲಾಯಿಸ್ಕೊಂಡು ಬಂದಿರೋ ಬ್ರಿಟಿಷ್‌ ಸೈನಿಕರು ಅಂತ ಅಂದ್ಕೊಂಡುಬಿಟ್ರು. ನಮ್ಮ ಭಾಷೆ ಅಲ್ಲಿನ ಜನ ಮಾತಾಡೋ ತರ ಇರ್ಲಿಲ್ಲ. ಅದಕ್ಕೆ ಅವರು ಹಾಗೆ ಅಂದ್ಕೊಂಡಿರಬೇಕು. ನಾವು ಬ್ರಿಟಿಷ್‌ ಸೈನಿಕರ ಜೊತೆ ಸಂಪರ್ಕ ಇಟ್ಕೊಂಡಿದ್ದೀವಿ ಅಂತ ಜನ್ರಿಗೆ ಸ್ವಲ್ಪ ಅನ್ಸಿದ್ರೂ ಅವರು ನಮ್ಮನ್ನ ಶೂಟ್‌ ಮಾಡಿ ಸಾಯಿಸಿಬಿಡ್ತಿದ್ರು. ಅದ್ಕೆ ನಮಗೆ ತುಂಬ ಭಯ ಆಯ್ತು. ನಾವು ಅಲ್ಲಿಂದ ಹೇಗಾದ್ರೂ ಹೋಗಿಬಿಡ್ಬೇಕು ಅಂದ್ಕೊಂಡು ಬಸ್ಸಿಗೆ ಕಾಯ್ತಾ ನಿಂತಿದ್ವಿ. ಅಲ್ಲಿದ್ದ ಕಾಫೀ ಶಾಪ್‌ ಹತ್ರ ಒಂದು ಕಾರ್‌ ಬಂದು ನಿಲ್ತು. ಅದ್ರಲ್ಲಿ ಇಬ್ರು ಗಂಡಸರಿದ್ರು. ನಮ್ಮತ್ರ ಮಾತಾಡಿದ ಆ ಮಹಿಳೆ ಅವ್ರ ಹತ್ರ ಹೋಗಿ ನಮ್ಮ ಕಡೆ ಕೈತೋರಿಸಿ ಏನೋ ಹೇಳ್ತಿದ್ದಳು. ಆಮೇಲೆ ಆ ಇಬ್ರು ಗಂಡಸರು ನಮ್ಮ ಹತ್ರ ಬಂದು ‘ಬಸ್‌ ಯಾವಾಗ ಬರುತ್ತೆ’ ಅಂತ ಕೇಳಿದ್ರು. ಅಷ್ಟರಲ್ಲಿ ಒಂದು ಬಸ್‌ ಬಂತು. ಅವರು ಆ ಡ್ರೈವರ್‌ ಹತ್ರ ಹೋಗಿ ಏನೋ ಮಾತಾಡ್ತಿದ್ರು. ಬಸ್ಸಲ್ಲಿ ಯಾರೂ ಇರ್ಲಿಲ್ಲ. ನಮ್ಮನ್ನ ಊರಾಚೆ ಕರ್ಕೊಂಡು ಹೋಗಿ ಚಳಿಬಿಡಿಸ್ತಾರೆ ಅಂತ ಅಂದ್ಕೊಂಡಿದ್ವಿ. ಆದ್ರೆ ಆ ತರ ಏನೂ ಆಗ್ಲಿಲ್ಲ. ನಾನು ಇಳಿವಾಗ ಡ್ರೈವರ್‌ ಹತ್ರ ಹೋಗಿ “ಅವರು ನಮ್ಮ ಬಗ್ಗೆ ಕೇಳ್ತಿದ್ರಾ” ಅಂತ ಕೇಳ್ದೆ. ಅದ್ಕೆ ಆ ಡ್ರೈವರ್‌ “ಹೌದು, ಆದ್ರೆ ನಂಗೆ ನೀವ್ಯಾರು ಅಂತ ಚೆನ್ನಾಗಿ ಗೊತ್ತು. ನಾನು ನಿಮ್ಮ ಬಗ್ಗೆ ಅವ್ರ ಹತ್ರ ಹೇಳ್ದೆ. ನೀವೇನು ಚಿಂತೆ ಮಾಡ್ಬೇಡಿ, ಆರಾಮಾಗಿ ಹೋಗಿ” ಅಂದ.

ನಮ್ಮ ಮದುವೆ ದಿನ, ಮಾರ್ಚ್‌ 1977

1976ರಲ್ಲಿ ಡಬ್ಲಿನ್‌ನಲ್ಲಿ ಒಂದು ಜಿಲ್ಲಾ ಅಧಿವೇಶನ a ನಡಿತು. ವಿಶೇಷ ಪಯನೀಯರ್‌ ಆಗಿದ್ದ ಪೌಲಿನ್‌ ಲೋಮ್ಯಾಕ್ಸ್‌ ಅನ್ನೋ ಸಹೋದರಿ ಅಲ್ಲಿಗೆ ಬಂದಿದ್ರು. ಅವರು ಇಂಗ್ಲೆಂಡ್‌ನವರು. ಅವ್ರಿಗೆ ದೇವರ ಮೇಲೆ ತುಂಬ ಪ್ರೀತಿ, ಭಕ್ತಿ ಇತ್ತು. ನೋಡೋಕೆ ತುಂಬ ಚೆನ್ನಾಗಿದ್ರು. ತುಂಬ ಒಳ್ಳೆಯವರಾಗಿದ್ರು. ಅವರೂ, ಅವರ ತಮ್ಮ ಚಿಕ್ಕ ವಯಸ್ಸಲ್ಲೇ ಸತ್ಯ ಕಲಿತ್ರು. ಒಂದು ವರ್ಷ ಆದ್ಮೇಲೆ ನಾನೂ, ಪೌಲಿನ್‌ ಮದ್ವೆ ಆದ್ವಿ. ಆಮೇಲೆ ಉತ್ತರ ಐರ್ಲೆಂಡ್‌ನ ಬ್ಯಾಲಿಮಿನದಲ್ಲಿ ವಿಶೇಷ ಪಯನೀಯರ್‌ ಸೇವೆ ಮುಂದುವರೆಸಿದ್ವಿ.

ಸ್ವಲ್ಪ ದಿನ ನಾವು ಸರ್ಕಿಟ್‌ ಕೆಲ್ಸ ಮಾಡಿದ್ವಿ. ಆಗ ಬೆಲ್ಫಾಸ್ಟ್‌, ಲಂಡನ್‌ಡೆರಿ ಮತ್ತು ಇನ್ನೂ ಕೆಲವು ಪ್ರದೇಶಗಳಿಗೆ ಹೋಗಿ ಸೇವೆ ಮಾಡಿದ್ವಿ. ಅಲ್ಲಿ ಅಪಾಯ ಜಾಸ್ತಿನೇ ಇರ್ತಿತ್ತು. ಆದ್ರೂ ಸಂತೋಷದಿಂದ ಸೇವೆ ಮಾಡ್ತಿದ್ವಿ. ಯಾಕಂದ್ರೆ ಅಲ್ಲಿರೋ ಸಹೋದರ ಸಹೋದರಿಯರಿಗೆ ಯೆಹೋವನ ಮೇಲೆ ತುಂಬ ನಂಬಿಕೆ ಇತ್ತು. ಅವ್ರಲ್ಲಿ ಬೇರೂರಿದ್ದ ಧಾರ್ಮಿಕ ಆಚಾರ-ವಿಚಾರಗಳನ್ನ, ಮೇಲು-ಕೀಳು ಅನ್ನೋ ಸ್ವಭಾವನ ಮತ್ತು ದ್ವೇಷನ ಬಿಟ್ಟುಬಿಟ್ಟಿದ್ರು. ಅದ್ಕೆ ಯೆಹೋವ ಅವ್ರನ್ನ ಕಾಪಾಡ್ತಿದ್ದನು, ಆಶೀರ್ವದಿಸ್ತಿದ್ದನು.

ನಾನು ಐರ್ಲೆಂಡ್‌ನಲ್ಲಿ 10 ವರ್ಷ ಇದ್ದೆ. ಆಮೇಲೆ 1981ರಲ್ಲಿ 72ನೇ ಗಿಲ್ಯಡ್‌ ಶಾಲೆಗೆ ಹಾಜರಾದ್ವಿ. ಆಮೇಲೆ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್‌ನಲ್ಲಿ ನೇಮಕ ಸಿಕ್ತು.

ಬಡವರಾಗಿದ್ರೂ ನಂಬಿಕೆಯಲ್ಲಿ ಶ್ರೀಮಂತ್ರು

ಮಿಷನರಿಗಳಾಗಿದ್ದ ಸಹೋದರ ಸಹೋದರಿಯರ ಜೊತೆ ನಾವು ಒಂದು ಮನೇಲಿ ಇದ್ವಿ. ನಾವೆಲ್ಲಾ ಸೇರಿ 11 ಜನ ಇದ್ವಿ. ಅಲ್ಲಿ 1 ಅಡುಗೆ ಮನೆ ಇತ್ತು, 3 ಟಾಯ್ಲೆಟ್‌ ಇತ್ತು, 2 ಬಾತ್‌ರೂಮ್‌ ಇತ್ತು, 1 ಟೆಲಿಫೋನ್‌ ಇತ್ತು, 1 ವಾಷಿಂಗ್‌ ಮೆಷಿನ್‌ ಇತ್ತು ಮತ್ತು ಬಟ್ಟೆ ಒಣಗಿಸೋಕೆ ಒಂದೇ ಒಂದು ಡ್ರೈಯರ್‌ ಇತ್ತು. ಅಲ್ಲಿ ಆಗಾಗ ಕರೆಂಟ್‌ ಹೋಗ್ತಿತ್ತು. ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಅಂತ ಹೇಳೋಕೆ ಆಗ್ತಿರ್ಲಿಲ್ಲ. ಚಾವಣಿಯಲ್ಲಿ ಇಲಿಗಳ ಕಾಟ ಇರ್ತಿತ್ತು. ಬೇಸ್ಮೆಂಟ್‌ನಲ್ಲಿ ನಾಗರ ಹಾವುಗಳು ಸೇರ್ಕೋಳ್ತಿತ್ತು.

ನಾವು ಗಿನಿಯಲ್ಲಿ ನಡೆದ ಅಧಿವೇಶನಕ್ಕೆ ಹೋಗೋಕೆ ನದಿ ದಾಟ್ತಾ ಇರೋದು

ನಾವಿದ್ದ ಮನೇಲಿ ಅಷ್ಟೇನು ಸೌಕರ್ಯಗಳು ಇರ್ಲಿಲ್ಲ. ಆದ್ರೆ ಸೇವೆನ ಖುಷಿ ಖುಷಿಯಾಗಿ ಮಾಡ್ತಾ ಇದ್ವಿ. ಯಾಕಂದ್ರೆ ಜನ್ರಿಗೆ ಬೈಬಲ್‌ ಮೇಲೆ ತುಂಬ ಗೌರವ ಇತ್ತು. ನಾವು ಹೇಳೋದನ್ನ ತುಂಬ ಗಮನಕೊಟ್ಟು ಕೇಳಿಸ್ಕೊಳ್ತಿದ್ರು. ಎಷ್ಟೋ ಜನ ಬೈಬಲ್‌ ಕಲಿಯೋಕೆ ಒಪ್ಕೊಂಡ್ರು. ಅಲ್ಲಿದ್ದವ್ರೆಲ್ಲಾ ನನ್ನನ್ನ “ಮಿಸ್ಟರ್‌ ರಾಬರ್ಟ್‌” ಅಂತ, ನನ್ನ ಹೆಂಡತಿನ “ಮಿಸಸ್‌ ರಾಬರ್ಟ್‌” ಅಂತ ಕರೀತಿದ್ರು. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ನನಗೆ ಬ್ರಾಂಚ್‌ ಆಫೀಸಿನಿಂದ ತುಂಬ ಕೆಲಸಗಳು ಬಂತು. ಇದ್ರಿಂದ ನಾನು ಅಷ್ಟಾಗಿ ಸೇವೆಗೆ ಹೋಗೋಕೆ ಆಗ್ತಿರ್ಲಿಲ್ಲ. ಆದ್ರೆ ನನ್ನ ಹೆಂಡತಿ ಹೋಗ್ತಿದ್ದಳು. ಇದ್ರಿಂದ ಜನ ಅವಳನ್ನ “ಮಿಸಸ್‌ ಪೌಲಿನ್‌” ಅಂತ, ನನ್ನನ್ನ “ಮಿಸ್ಟರ್‌ ಪೌಲಿನ್‌” ಅಂತ ಕರಿಯೋಕೆ ಶುರುಮಾಡಿದ್ರು. ಇದು ನನ್ನ ಹೆಂಡತಿಗೆ ತುಂಬ ಇಷ್ಟ ಆಗ್ತಿತ್ತು!

ಸಿಯೆರಾ ಲಿಯೋನ್‌ನಲ್ಲಿ ಸಿಹಿಸುದ್ದಿ ಸಾರೋಕೆ ಹೋಗ್ತಿರೋದು

ಅಲ್ಲಿದ್ದ ಸಹೋದರ ಸಹೋದರಿಯರು ತುಂಬ ಬಡವರಾಗಿದ್ರು. ಆದ್ರೆ ಯೆಹೋವ ಅವ್ರನ್ನ ತುಂಬ ಚೆನ್ನಾಗಿ ನೋಡ್ಕೊಂಡಿದ್ದನು. (ಮತ್ತಾ. 6:33) ನನಗೆ ಒಂದು ಘಟನೆ ಇನ್ನೂ ನೆನಪಿದೆ. ಒಬ್ಬ ಸಹೋದರಿ ಹತ್ರ ತನಗೆ ಮತ್ತು ತನ್ನ ಮಕ್ಕಳಿಗೆ ಆ ದಿನಕ್ಕೆ ಊಟ ತಗೊಳ್ಳೋಷ್ಟು ಹಣ ಮಾತ್ರ ಇತ್ತು. ಆದ್ರೆ ಒಬ್ಬ ಸಹೋದರನಿಗೆ ಮಲೇರಿಯಾ ಕಾಯಿಲೆ ಬಂದಿತ್ತು. ಔಷಧಿ ತಗೊಳ್ಳೋಕೆ ಅವನ ಹತ್ರ ಕಾಸು ಇರ್ಲಿಲ್ಲ. ಆಗ ಆ ಸಹೋದರಿ ತನ್ನ ಹತ್ರ ಇದ್ದ ಹಣನೆಲ್ಲಾ ಅವನಿಗೆ ಕೊಟ್ಟು ಬಿಟ್ಟಳು. ಆದ್ರೆ ಸ್ವಲ್ಪ ಹೊತ್ತು ಆದ್ಮೇಲೆ ದಿಢೀರಂತ ಒಬ್ಬ ಸ್ತ್ರೀ ನಮ್ಮ ಸಹೋದರಿಯ ಹತ್ರ ಬಂದು ಕೂದಲು ಕಟ್‌ ಮಾಡಿಸ್ಕೊಂಡು ಹಣ ಕೊಟ್ಟು ಹೋದಳು. ಆ ಸಮಯಕ್ಕೆ ನಮ್ಮ ಸಹೋದರಿಗೆ ಬೇಕಾಗಿದ್ದ ಹಣನ ಯೆಹೋವನೇ ಕೊಟ್ಟನು. ಈ ತರ ತುಂಬ ಅನುಭವಗಳನ್ನ ನಾನು ನೋಡಿದ್ದೀನಿ.

ಇನ್ನೊಂದು ಸಂಸ್ಕೃತಿ ಬಗ್ಗೆ ತಿಳ್ಕೊಂಡ್ವಿ

ನಾವು 9 ವರ್ಷ ಸಿಯೆರಾ ಲಿಯೋನ್‌ನಲ್ಲಿ ಇದ್ವಿ. ಆಮೇಲೆ ನೈಜೀರಿಯ ಬ್ರಾಂಚ್‌ನಲ್ಲಿ ನಮಗೆ ನೇಮಕ ಸಿಕ್ತು. ಆ ಬೆತೆಲ್‌ ತುಂಬ ದೊಡ್ಡದಾಗಿತ್ತು. ನಾನು ಸಿಯೆರಾ ಲಿಯೋನ್‌ನಲ್ಲಿ ಇದ್ದಾಗ ಏನ್‌ ಕೆಲ್ಸ ಮಾಡ್ತಿದ್ನೋ ಅದೇ ಆಫೀಸ್‌ ಕೆಲ್ಸ ಮಾಡ್ತಿದ್ದೆ. ಹಾಗಾಗಿ ನನಗೆ ಹೊಂದ್ಕೊಳ್ಳೋಕೆ ಅಷ್ಟೇನು ಕಷ್ಟ ಆಗಲಿಲ್ಲ. ಆದ್ರೆ ಪೌಲಿನ್‌ಗೆ ಸ್ವಲ್ಪ ಕಷ್ಟ ಆಯ್ತು. ಅವಳು ಪ್ರತಿ ತಿಂಗಳು 130 ಗಂಟೆ ಸೇವೆ ಮಾಡ್ತಿದ್ದಳು. ತುಂಬ ಜನ್ರಿಗೆ ಬೈಬಲ್‌ ಕಲಿಸ್ತಿದ್ದಳು. ಆದ್ರೆ ಈಗ ಒಂದು ರೂಮಲ್ಲಿ ಕೂತ್ಕೊಂಡು ಹರಿದು ಹೋಗಿರೋ ಬಟ್ಟೆನ ಹೊಲಿಯೋ ಕೆಲಸ ಮಾಡ್ತಿದ್ದಳು. ಆದ್ರೆ ಅವಳು ಮಾಡೋ ಈ ಕೆಲಸದಿಂದ ತುಂಬ ಜನ್ರಿಗೆ ಪ್ರಯೋಜನ ಆಗುತ್ತೆ ಅನ್ನೋದನ್ನ ನೆನಸ್ಕೊಂಡು ಅವಳು ಖುಷಿಪಡ್ತಿದ್ದಳು. ಅಷ್ಟೇ ಅಲ್ಲ ಅಲ್ಲಿದ್ದ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಮಾಡ್ತಿದ್ದಳು.

ನೈಜೀರಿಯದ ಸಂಸ್ಕೃತಿ ನಮಗೆ ತುಂಬ ಹೊಸದಾಗಿತ್ತು. ಅಲ್ಲಿನ ಜನ್ರ ಬಗ್ಗೆ ಇನ್ನೂ ಕಲಿಬೇಕಿತ್ತು. ಆಗಷ್ಟೇ ಬೆತೆಲ್‌ಗೆ ಹೊಸದಾಗಿ ಒಬ್ಬ ಸಹೋದರಿ ಬಂದಿದ್ರು. ಒಬ್ಬ ಸಹೋದರ ಅವ್ರನ್ನ ಪರಿಚಯ ಮಾಡಿಸೋಕೆ ನನ್ನ ಆಫೀಸಿಗೆ ಕರ್ಕೊಂಡು ಬಂದ್ರು. ನಾನು ಆ ಸಹೋದರಿಯ ಕೈ ಕುಲುಕೋಕೆ ಕೈ ಚಾಚಿದಾಗ ಆ ಸಹೋದರಿ ನನ್ನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದಳು. ಅದನ್ನ ನೋಡಿದ ತಕ್ಷಣ ನಂಗೆ ಶಾಕ್‌ ಆಯ್ತು. ಅಪೊಸ್ತಲರ ಕಾರ್ಯ 10:25, 26 ಮತ್ತು ಪ್ರಕಟನೆ 19:10ನೇ ವಚನ ನನ್ನ ಮನಸ್ಸಿಗೆ ಬಂತು. ಹಾಗೆಲ್ಲಾ ಮಾಡ್ಬೇಡಿ ಅಂತ ಹೇಳಿಬಿಡೋಣ ಅಂದ್ಕೊಂಡೆ. ಆದ್ರೆ ಬೆತೆಲ್‌ಗೆ ಬಂದಿದ್ದಾರೆ ಅಂದ್ಮೇಲೆ ಬೈಬಲಲ್ಲಿ ಇರೋದು ಅವ್ರಿಗೆ ಗೊತ್ತಿರುತ್ತೆ ಅಲ್ವಾ ಅಂದ್ಕೊಂಡು ಸುಮ್ಮನಾದೆ.

ಅರ್ಧ ಮನಸ್ಸಿಂದ ಅವ್ರ ಹತ್ರ ಮಾತಾಡಿ ಅವ್ರನ್ನ ಕಳಿಸ್ಕೊಟ್ಟೆ. ಆಮೇಲೆ ನಾನು ಸಂಶೋಧನೆ ಮಾಡ್ದೆ. ಯಾರನ್ನಾದ್ರು ವಂದಿಸುವಾಗ ಜನ್ರು ಅವರ ಕಾಲಿಗೆ ಬೀಳ್ತಿದ್ರು. ಅದು ಅಲ್ಲಿನ ಸಂಸ್ಕೃತಿ ಅಂತ ನಂಗೆ ಗೊತ್ತಾಯ್ತು. ಗಂಡಸ್ರು ಕೂಡ ಅದೇ ತರ ಮಾಡ್ತಿದ್ರು. ಇದ್ರಿಂದ ಆ ಸಹೋದರಿ ನಂಗೆ ಮರ್ಯಾದೆ ಕೊಡ್ತಿದ್ದಳು, ಆರಾಧನೆ ಮಾಡ್ತಿರ್ಲಿಲ್ಲ ಅಂತ ಅರ್ಥ ಮಾಡ್ಕೊಂಡೆ. ಹಿಂದಿನ ಕಾಲದಲ್ಲೂ ಜನ ಈ ರೀತಿ ವಂದಿಸ್ತಿದ್ರು ಅಂತ ಬೈಬಲಲ್ಲಿದೆ. (1 ಸಮು. 24:8) ಸದ್ಯ ನಾನು ಆ ಸಹೋದರಿಗೆ ಏನೂ ಹೇಳ್ದೆ ಕಳಿಸಿದ್ದು ಒಳ್ಳೇದಾಯ್ತು ಅಂತ ಮನಸ್ಸಿಗೆ ಸಮಾಧಾನ ಆಯ್ತು.

ಯೆಹೋವ ದೇವ್ರ ಮೇಲೆ ತುಂಬ ನಂಬಿಕೆ ತೋರಿಸ್ತಾ ಇದ್ದ ಎಷ್ಟೋ ಜನ್ರನ್ನ ನಾನು ನೈಜೀರಿಯದಲ್ಲಿ ನೋಡ್ದೆ. ಅವ್ರಲ್ಲಿ ಒಬ್ರು ಐಸಾಅ ಆಡಾಗ್‌ಬೋನ. b ಅವರು ಯುವಕರಾಗಿದ್ದಾಗ ಸತ್ಯ ಕಲಿತ್ರು. ಆದ್ರೆ ಆಮೇಲೆ ಅವ್ರಿಗೆ ಕುಷ್ಠರೋಗ ಬಂದುಬಿಡ್ತು. ಅದಕ್ಕೆ ಅವರು ಕುಷ್ಠರೋಗಿಗಳು ಇರಬೇಕಾದ ಜಾಗಕ್ಕೆ ಹೋಗಬೇಕಾಯ್ತು. ಅಲ್ಲಿ ಅವ್ರಿಗೆ ತುಂಬ ಕಷ್ಟ ಆಯ್ತು. ತುಂಬ ವಿರೋಧಗಳನ್ನ ಎದುರಿಸಿದ್ರು. ಆದ್ರೂ ಅವರು ಅಲ್ಲಿರುವವರಿಗೆ ಬೈಬಲ್‌ ಕಲಿಸಿದ್ರು. 30 ಜನ ಸತ್ಯಕ್ಕೆ ಬಂದ್ರು. ಅಲ್ಲಿ ಒಂದು ಸಭೆ ಕೂಡ ಶುರುವಾಯ್ತು.

ಸಹೋದರರು ನನ್ನ ಜೊತೆ ತಾಳ್ಮೆಯಿಂದ ನಡ್ಕೊಂಡ್ರು

ಕೀನ್ಯದಲ್ಲಿ ಅನಾಥವಾಗಿ ಅಲಿತಾ ಇದ್ದ ಘೇಂಡಾಮೃಗದ ಜೊತೆ ಫೋಟೋ

1996ರಲ್ಲಿ ಕೀನ್ಯ ಬ್ರಾಂಚ್‌ನಲ್ಲಿ ಸೇವೆ ಮಾಡೋಕೆ ನಮಗೆ ನೇಮಕ ಸಿಕ್ತು. ಆರಂಭದಲ್ಲಿ ನಾನು ಹೇಳಿದ ಘಟನೆ ನಡೆದಿದ್ದು ಕೀನ್ಯದಲ್ಲೇ. ಬೆತೆಲನ್ನ ನೋಡೋಕೆ ಜನ್ರು ಮಾತ್ರ ಅಲ್ಲ, ಕೋತಿಗಳೂ ಬರ್ತಿದ್ವು. ಅವು ಸಹೋದರಿಯರ ಕೈಯಲ್ಲಿದ್ದ ಹಣ್ಣುಗಳನ್ನ ಕಿತ್ಕೊಂಡು ಹೋಗ್ತಿದ್ವು. ಒಂದಿನ ಒಬ್ಬ ಸಹೋದರಿ ಅವ್ರ ಮನೇಲಿ ಕಿಟಕಿ ತೆರೆದಿಟ್ಟು ಹೋಗ್ಬಿಟ್ಟಿದ್ರು. ಆಗ ಕೋತಿಗಳ ಸೈನ್ಯನೇ ಒಳಗೆ ನುಗ್ಗಿಬಿಟ್ಟಿತ್ತು. ಆ ಸಹೋದರಿ ವಾಪಸ್‌ ಮನೆಗೆ ಬಂದಾಗ ಕೋತಿಗಳು ಸಿಕ್ಕಿದ ತಿಂಡಿಗಳನ್ನೆಲ್ಲಾ ತಿಂತಾ ಮಜಾ ಮಾಡ್ತಿರೋದನ್ನ ನೋಡಿದ್ರು. ತಕ್ಷಣ ಆ ಸಹೋದರಿ ಜೋರಾಗಿ ಕಿರಿಚ್ಕೊಂಡು ಹೊರಗಡೆ ಓಡಿ ಬಂದ್ರು. ಆ ಕೋತಿಗಳೂ ಕಿರಿಚ್ಕೊಂಡು ಎದ್ದುಬಿದ್ದು ಓಡಿಹೋದ್ವು.

ನಾನು ಮತ್ತು ಪೌಲಿನ್‌ ಸ್ವಾಹೀಲಿ ಭಾಷೆಯ ಸಭೆಗೆ ಹೋಗ್ತಿದ್ವಿ. ಸ್ವಲ್ಪ ದಿನ ಆದ್ಮೇಲೆ ನನಗೆ ಸಭಾ ಪುಸ್ತಕ ಅಧ್ಯಯನ ಮಾಡೋಕೆ ಹೇಳಿದ್ರು (ಈಗ ಅದನ್ನ ಸಭಾ ಬೈಬಲ್‌ ಅಧ್ಯಯನ ಅಂತ ಕರಿತೀವಿ). ಆದ್ರೆ ಆ ಭಾಷೆ ನಂಗಷ್ಟು ಚೆನ್ನಾಗಿ ಬರ್ತಾ ಇರ್ಲಿಲ್ಲ. ಇನ್ನೂ ಕಲಿತಾ ಇದ್ದೆ. ನಾನು ಚೆನ್ನಾಗಿ ಓದ್ಕೊಂಡು, ಪ್ರಶ್ನೆಗಳನ್ನ ಕೇಳೋಕೆ ಪ್ರ್ಯಾಕ್ಟಿಸ್‌ ಮಾಡ್ಕೊಂಡು ಹೋಗ್ತಿದ್ದೆ. ಆದ್ರೆ ಸಹೋದರರು ಸ್ವಂತ ಮಾತಲ್ಲಿ ಉತ್ರ ಕೊಟ್ರೆ ನಂಗೆ ಒಂಚೂರು ಅರ್ಥ ಆಗ್ತಿರ್ಲಿಲ್ಲ. ಆಗ ಏನ್‌ ಹೇಳ್ಬೇಕು ಅಂತ ಗೊತ್ತಾಗ್ತಾ ಇರ್ಲಿಲ್ಲ. ಪಾಪ ಆ ಸಹೋದರ ಸಹೋದರಿಯರು ನನ್ನನ್ನ ಎಷ್ಟು ಸಹಿಸ್ಕೊಂಡ್ರೋ ಏನೋ. ಭಾಷೆ ಬರದೆ ಇರೋ ನನ್ನಂಥವನನ್ನ ಪುಸ್ತಕ ಅಧ್ಯಯನ ಮಾಡೋಕೆ ನೇಮಿಸಿದ್ರೂ ಸಹೋದರ ಸಹೋದರಿಯರು ಬೇಜಾರು ಮಾಡ್ಕೊಳ್ಳಿಲ್ಲ. ತುಂಬ ತಾಳ್ಮೆ ತೋರಿಸ್ತಿದ್ರು. ಇದನ್ನ ನೋಡಿ ನಂಗೆ ತುಂಬ ಖುಷಿ ಆಯ್ತು.

ದುಡ್ಡಲ್ಲಿ ಮಾತ್ರ ಅಲ್ಲ, ನಂಬಿಕೆಯಲ್ಲೂ ಶ್ರೀಮಂತ್ರು

ನಾವು ಹತ್ತತ್ರ 1 ವರ್ಷ ಕೀನ್ಯದಲ್ಲಿ ಇದ್ವಿ. ಆಮೇಲೆ 1977ರಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಬೆತೆಲ್‌ನಲ್ಲಿ ನೇಮಕ ಸಿಕ್ತು. ಇದು ಶ್ರೀಮಂತ ದೇಶ. ಅಲ್ಲಿರೋ ಸಹೋದರರು ಹಣದಾಸೆಯಲ್ಲಿ ಮುಳುಗಿ ಹೋಗಬಹುದಿತ್ತು. (ಜ್ಞಾನೋ. 30:8, 9) ಆದ್ರೆ ಅವ್ರಿಗೆ ಹಣ-ಆಸ್ತಿಗಿಂತ ದೇವರ ಜೊತೆಗಿರೋ ಸಂಬಂಧನೇ ಮುಖ್ಯ. ಅದಕ್ಕೆ ತಮ್ಮ ಸಮಯ, ಸಂಪತ್ತನ್ನೆಲ್ಲ ದೇವರ ಸೇವೆಗೆ ಮುಡಿಪಾಗಿಟ್ರು.

ನಾನು ತುಂಬ ಕಡೆ ಓಡಾಡಿದ್ದೀನಿ. ಅಲ್ಲಿರೋ ನಮ್ಮ ಸಹೋದರ ಸಹೋದರಿಯರನ್ನ ನೋಡಿದ್ದೀನಿ. ಅವ್ರ ಸನ್ನಿವೇಶಗಳು ಒಂದೇ ತರ ಇಲ್ಲ. ಆದ್ರೆ ಅವ್ರ ನಂಬಿಕೆನ ಮೆಚ್ಕೊಬೇಕು. ಐರ್ಲೆಂಡ್‌ನಲ್ಲಿ ದೊಂಬಿ, ಗಲಾಟೆಗಳಿದ್ರೂ ಅಲ್ಲಿನ ಸಹೋದರ ಸಹೋದರಿಯರ ನಂಬಿಕೆ ಬಲವಾಗಿತ್ತು. ಆಫ್ರಿಕಾದಲ್ಲಿ ನಮ್ಮ ಸಹೋದರ ಸಹೋದರಿಯರು ಬಡವರಾಗಿದ್ರೂ, ನಂಬಿಕೆಯಲ್ಲಿ ಶ್ರೀಮಂತರಾಗಿದ್ರು. ಅಮೆರಿಕದಲ್ಲಿ ಜನ ಹಣ-ಆಸ್ತಿ ಮೇಲೆ ನಂಬಿಕೆ ಇಟ್ರೆ, ನಮ್ಮ ಸಹೋದರ ಸಹೋದರಿಯರು ಯೆಹೋವನ ಮೇಲೆ ನಂಬಿಕೆ ಇಟ್ರು. ಅವರು ಎಲ್ಲೇ ಇದ್ರೂ, ಎಂಥ ಪರಿಸ್ಥಿತಿಯಲ್ಲಿ ಇದ್ರೂ ಯೆಹೋವನಿಗೆ ಪ್ರೀತಿ ತೋರಿಸಿದ್ರು. ಇದನ್ನ ನೋಡ್ದಾಗ ಯೆಹೋವನಿಗೆ ತುಂಬ ಖುಷಿ ಆಗಿರುತ್ತೆ.

ವಾರ್ವಿಕ್‌ ಬೆತೆಲ್‌ನಲ್ಲಿ ನಾನು ಮತ್ತು ಪೌಲಿನ್‌

ವರ್ಷಗಳು “ಮಗ್ಗಕ್ಕಿಂತ ವೇಗವಾಗಿ” ಓಡಿಹೋಯ್ತು. ಹೇಗೆ ಹೋಯ್ತು ಅಂತನೇ ಗೊತ್ತಾಗ್ಲಿಲ್ಲ. (ಯೋಬ 7:6) ನಾವೀಗ ವಾರ್ವಿಕ್‌ನಲ್ಲಿರೋ ಮುಖ್ಯ ಕಾರ್ಯಾಲಯದಲ್ಲಿ ಕೆಲ್ಸ ಮಾಡ್ತಿದ್ದೀವಿ. ಯೆಹೋವನ ಮೇಲೆ ಪ್ರೀತಿ ಇರೋ ಸಹೋದರ ಸಹೋದರಿಯರ ಜೊತೆ ಕೆಲ್ಸ ಮಾಡೋದು ನಮಗೆ ತುಂಬ ಖುಷಿ ಕೊಡುತ್ತೆ. ನಮ್ಮ ರಾಜನಾದ ಯೇಸು ಕ್ರಿಸ್ತನಿಗೆ ಬೆಂಬಲ ಕೊಡೋದಕ್ಕಿಂತ ಖುಷಿ ಕೊಡೋ ವಿಷ್ಯ ಇನ್ನೇನಿದೆ ಹೇಳಿ!—ಮತ್ತಾ. 25:34.

a ಜಿಲ್ಲಾ ಅಧಿವೇಶನಗಳನ್ನ ನಾವೀಗ ಪ್ರಾದೇಶಿಕ ಅಧಿವೇಶನ ಅಂತ ಕರೀತಿವಿ.

b 1998 ಏಪ್ರಿಲ್‌ 1ರ ಕಾವಲಿನಬುರುಜುವಿನ ಪುಟ 22-27 ಐಸಾಅ ಆಡಾಗ್‌ಬೋನ ಅವರ ಜೀವನ ಕಥೆಯಿದೆ. ಅವರು 2010ರಲ್ಲಿ ತೀರಿಹೋದ್ರು.