ಪ್ರೀತಿ ಅವರ ಮನಸ್ಸು ಮುಟ್ಟಿತು
ಯೊಮಾರ ಗ್ವಾಟೆಮಾಲದಲ್ಲಿರೋ ಒಂದು ಚಿಕ್ಕ ಹಳ್ಳಿಯಲ್ಲಿ ಇದ್ದಾಳೆ. ಯೊಮಾರ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್ ಕಲಿಯೋಕೆ ಶುರು ಮಾಡಿದಳು. ಸ್ವಲ್ಪ ದಿನ ಆದ್ಮೇಲೆ ಅವಳ ತಮ್ಮಂದಿರು ಮಾರ್ಸಿಲೋ ಮತ್ತು ಹೈವರ್ ಕೂಡ ಅವಳ ಜೊತೆ ಬೈಬಲ್ ಕಲಿಯೋಕೆ ಕೂತ್ಕೊಂಡ್ರು. ಆದ್ರೆ ಆ ಮೂರೂ ಜನಕ್ಕೆ ಕಣ್ಣು ಕಾಣಲ್ಲ. ಬ್ರೇಲ್ ಭಾಷೆ ಓದೋಕೂ ಗೊತ್ತಿರ್ಲಿಲ್ಲ. ಅದಕ್ಕೆ ಅವ್ರಿಗೆ ಬೈಬಲ್ ಕಲಿಸ್ತಿದ್ದ ಸಹೋದರ ಪ್ಯಾರಗಳನ್ನ ಮತ್ತು ಅದ್ರಲ್ಲಿರೋ ವಚನಗಳನ್ನ ಅವ್ರಿಗೋಸ್ಕರ ಜೋರಾಗಿ ಓದ್ತಾ ಇದ್ರು.
ಇವ್ರಿಗೆ ಕೂಟಗಳಿಗೆ ಹೋಗೋಕೂ ಕಷ್ಟ ಆಗ್ತಿತ್ತು. ಯಾಕಂದ್ರೆ ಅವ್ರ ಮನೆಯಿಂದ ಸಭಾಗೃಹಕ್ಕೆ ಬರೋಕೆ 40 ನಿಮಿಷ ಆಗ್ತಿತ್ತು. ಆದ್ರೆ ಅಲ್ಲಿದ್ದ ಸಹೋದರರು ಅವ್ರನ್ನ ಪ್ರತಿ ವಾರ ಕೂಟಗಳಿಗೆ ಕರ್ಕೊಂಡು ಬರ್ತಿದ್ರು. ಸ್ವಲ್ಪ ಸಮಯ ಆದ್ಮೇಲೆ ಅವ್ರಿಗೆ ಮಧ್ಯವಾರದ ಕೂಟಗಳಲ್ಲಿ ನೇಮಕಗಳು ಸಿಕ್ತು. ಅದನ್ನ ತಯಾರಿ ಮಾಡೋಕೆ, ಅದನ್ನ ನೆನಪಲ್ಲಿ ಇಟ್ಕೊಂಡು ನೇಮಕಗಳನ್ನ ಚೆನ್ನಾಗಿ ಮಾಡೋಕೂ ಸಹೋದರರು ಸಹಾಯ ಮಾಡಿದ್ರು.
ಮೇ 2019ರಲ್ಲಿ, ಅವ್ರ ಹಳ್ಳಿಯಲ್ಲಿ ಕೂಟಗಳು ಶುರು ಆಯ್ತು. ಆದ್ರೆ ಅದಕ್ಕೆ ಮುಂಚೆನೇ ಒಬ್ಬ ಪಯನೀಯರ್ ದಂಪತಿ ಆ ಹಳ್ಳಿಯಲ್ಲಿ ಮನೆ ಮಾಡ್ಕೊಂಡಿದ್ರು. ಆ ಮೂವರಿಗೂ ಬ್ರೇಲ್ ಕಲಿಸ್ಕೊಡಬೇಕು ಅಂತ ಆ ದಂಪತಿಗಳಿಗೆ ತುಂಬ ಆಸೆ ಇತ್ತು. ಆದ್ರೆ ಬ್ರೇಲ್ ಭಾಷೆ ಓದೋಕೆ ಅಥವಾ ಬರೆಯೋಕೆ ಅವ್ರಿಗೆ ಬರ್ತಿರಲಿಲ್ಲ. ಅದಕ್ಕೆ ಅದನ್ನ ಕಲಿಯೋಕೆ ತುಂಬ ಪ್ರಯತ್ನ ಮಾಡಿದ್ರು. ಅವರು ಒಂದು ಲೈಬ್ರರಿಗೆ ಹೋಗಿ ಬ್ರೇಲ್ ಪುಸ್ತಕಗಳನ್ನ ತಗೊಂಡು ಬಂದು, ಅದನ್ನ ಓದೋದು ಹೇಗೆ ಅಂತ ಕಲಿತ್ಕೊಂಡ್ರು ಮತ್ತು ಈ ಮೂವರಿಗೂ ಕಲಿಸಿದ್ರು.
ಕೆಲವು ತಿಂಗಳಲ್ಲೇ ಈ ಮೂವರು ಬ್ರೇಲ್ ಓದೋದನ್ನ ಕಲಿತ್ಕೊಂಡ್ರು. ಇದ್ರಿಂದ ಯೆಹೋವನ ಜೊತೆಗಿರೋ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ಆಯ್ತು. ಈಗ ಯೊಮಾರ, ಮಾರ್ಸಿಲೋ ಮತ್ತು ಹೈವರ್ ಪಯನೀಯರ್ ಸೇವೆ ಮಾಡ್ತಿದ್ದಾರೆ. ಮಾರ್ಸಿಲೋ ಸಹಾಯಕ ಸೇವಕನಾಗಿ ಸೇವೆ ಮಾಡ್ತಿದ್ದಾನೆ. ಈ ಮೂರೂ ಜನ ಯಾವಾಗ್ಲೂ ದೇವರ ಸೇವೆ ಮಾಡೋದ್ರಲ್ಲಿ ಬಿಜಿ಼ಯಾಗಿ ಇರ್ತಾರೆ. ಇವ್ರನ್ನ ನೋಡಿ ಬೇರೆ ಸಹೋದರ ಸಹೋದರಿಯರಿಗೂ ಯೆಹೋವ ದೇವರ ಸೇವೆ ಮಾಡೋ ಆಸೆ ಜಾಸ್ತಿ ಆಗಿದೆ.
ಸಭೆಯವರು ಮಾಡಿರೋ ಸಹಾಯಕ್ಕೆ ಈ ಮೂವರೂ ತುಂಬ ಥ್ಯಾಂಕ್ಸ್ ಹೇಳ್ತಾರೆ. “ನಮಗೆ ಯೆಹೋವನ ಸಾಕ್ಷಿಗಳು ಪರಿಚಯ ಆದಾಗಿಂದ ಇವತ್ತಿನ ತನಕ ತುಂಬ ಪ್ರೀತಿ ತೋರಿಸಿದ್ದಾರೆ” ಅಂತ ಯೊಮಾರ ಹೇಳ್ತಾರೆ. “ಸಭೆಯಲ್ಲಿರೋ ಎಲ್ಲರೂ ನಮಗೆ ಒಳ್ಳೆ ಫ್ರೆಂಡ್ಸ್ ಆಗಿದ್ದಾರೆ, ನಮ್ಮನ್ನ ಪ್ರೀತಿಸೋ ದೊಡ್ಡ ಕುಟುಂಬನೇ ನಮಗೆ ಸಿಕ್ಕಿದೆ” ಅಂತ ಮಾರ್ಸಿಲೋ ಹೇಳ್ತಾರೆ. ಈ ಇಡೀ ಭೂಮಿ ಪರದೈಸ್ ಆಗೋದನ್ನ ನೋಡೋಕೆ ಯೊಮಾರ ಮತ್ತು ಅವಳ ತಮ್ಮಂದಿರು ಕಾಯ್ತಾ ಇದ್ದಾರೆ.—ಕೀರ್ತ. 37:10, 11; ಯೆಶಾ. 35:5.