ಅಧ್ಯಯನ ಲೇಖನ 9
ಜೀವ ದೇವರು ಕೊಟ್ಟಿರೋ ಒಂದು ದೊಡ್ಡ ಗಿಫ್ಟ್!
“ಆತನಿಂದಾನೇ ನಾವು ಬದುಕಿದ್ದೀವಿ, ನಡೆದಾಡ್ತೀವಿ, ಇವತ್ತು ಇಲ್ಲಿದ್ದೀವಿ.”—ಅ. ಕಾ. 17:28.
ಗೀತೆ 130 ಜೀವವೆಂಬ ಅದ್ಭುತ
ಈ ಲೇಖನದಲ್ಲಿ ಏನಿದೆ? a
1. ಯೆಹೋವ ನಮ್ಮ ಜೀವಕ್ಕೆ ಎಷ್ಟು ಬೆಲೆ ಕೊಡ್ತಾನೆ?
ನಿಮ್ಮ ಸ್ನೇಹಿತ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಒಂದು ಮನೆನ ಗಿಫ್ಟಾಗಿ ಕೊಟ್ಟಿದ್ದಾನೆ ಅಂದ್ಕೊಳಿ. ಆದ್ರೆ ಆ ಮನೆಯ ಪೇಂಟಿಂಗ್ ಹಾಳಾಗಿದೆ, ಅಲ್ಲಲ್ಲಿ ನೀರು ಸೋರ್ತಾ ಇದೆ. ಆಗ ನೀವು ‘ಆ ಮನೆ ಉಳ್ಕೊಳ್ಳೋಕೆ ಲಾಯಕ್ಕಿಲ್ಲ, ಅಲ್ಲಿಗೆ ಹೋಗೋದು ಬೇಡ’ ಅಂತ ಯೋಚಿಸ್ತೀರಾ? ಇಲ್ಲ ಅಲ್ವಾ! ಅದೇ ತರಾನೇ ಯೆಹೋವ ನಮಗೆ ಜೀವವನ್ನ ಗಿಫ್ಟಾಗಿ ಕೊಟ್ಟಿದ್ದಾನೆ. ನಮ್ಮ ಜೀವಕ್ಕೆ ಎಷ್ಟು ಬೆಲೆ ಕೊಡ್ತಾನೆ ಅಂದ್ರೆ, ನಮಗೋಸ್ಕರ ತನ್ನ ಮಗನನ್ನೇ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಾನೆ.—ಯೋಹಾ. 3:16.
2. ಯೆಹೋವ ನಮಗೆ ಯಾವ ಜವಾಬ್ದಾರಿ ಕೊಟ್ಟಿದ್ದಾನೆ? (2 ಕೊರಿಂಥ 7:1)
2 ಯೆಹೋವನೇ ನಮಗೆ ಜೀವ ಕೊಟ್ಟಿರೋದು. (ಕೀರ್ತ. 36:9) ಅದಕ್ಕೆ ಅಪೊಸ್ತಲ ಪೌಲ “ಆತನಿಂದಾನೇ ನಾವು ಬದುಕಿದ್ದೀವಿ, ನಡೆದಾಡ್ತೀವಿ, ಇವತ್ತು ಇಲ್ಲಿದ್ದೀವಿ” ಅಂತ ಹೇಳ್ದ. (ಅ. ಕಾ. 17:25, 28) ಅಷ್ಟೇ ಅಲ್ಲ ಯೆಹೋವ ದೇವರು, ನಾವು ಜೀವಂತವಾಗಿ ಇರೋಕೆ ಬೇಕಾಗಿರೋದ್ನೆಲ್ಲಾ ಕೊಟ್ಟಿದ್ದಾನೆ. (ಅ. ಕಾ. 14:15-17) ಆದ್ರೆ ನಮ್ಮ ಜೀವಕ್ಕೆ ಅಪಾಯ ಬಂದಾಗೆಲ್ಲಾ ಯೆಹೋವ ದೇವರು ಬಂದು ನಮ್ಮನ್ನ ಕಾಪಾಡಲ್ಲ. ಅದನ್ನ ಕಾಪಾಡ್ಕೊಳ್ಳೋ ಜವಾಬ್ದಾರಿ ನಮ್ಮದು. (2 ಕೊರಿಂಥ 7:1 ಓದಿ.) ನಾವು ಆರೋಗ್ಯನ ಚೆನ್ನಾಗಿ ನೋಡ್ಕೊಬೇಕು, ಆತನ ಸೇವೆ ಮಾಡ್ಬೇಕು ಅಂತ ಆತನು ಇಷ್ಟಪಡ್ತಾನೆ. ನಾವು ನಮ್ಮ ಜೀವವನ್ನ, ಆರೋಗ್ಯನ ಯಾಕೆ ಕಾಪಾಡ್ಕೊಬೇಕು? ಅದನ್ನ ಕಾಪಾಡ್ಕೊಳ್ಳೋಕೆ ಏನ್ ಮಾಡ್ಬೇಕು?
ಜೀವಕ್ಕೆ ಬೆಲೆ ಕೊಡಿ
3. ನಮ್ಮ ಆರೋಗ್ಯನ ಯಾಕೆ ಕಾಪಾಡ್ಕೊಬೇಕು?
3 ನಾವು ಆರೋಗ್ಯವಾಗಿ ಇದ್ರೆ ಯೆಹೋವನ ಸೇವೆನ ಚೆನ್ನಾಗಿ ಮಾಡೋಕೆ ಆಗುತ್ತೆ. (ಮಾರ್ಕ 12:30) ನಮ್ಮ “ದೇಹಗಳನ್ನ ಜೀವಂತವಾದ, ಪವಿತ್ರವಾದ ಮತ್ತು ದೇವರು ಮೆಚ್ಚೋ ಬಲಿಯಾಗಿ” ಕೊಡೋಕೆ ಆಗುತ್ತೆ. (ರೋಮ. 12:1) ಹಾಗಂತ ನಮಗೆ ಕಾಯಿಲೆನೇ ಬರದೆ ಇರೋ ತರ ನಮ್ಮಿಂದ ತಡೆಯೋಕೆ ಆಗಲ್ಲ. ಆದ್ರೆ ನಮ್ಮ ಆರೋಗ್ಯನ ಆದಷ್ಟು ಚೆನ್ನಾಗಿ ನೋಡ್ಕೊಳ್ಳೋಕೆ ಪ್ರಯತ್ನ ಮಾಡ್ಬೇಕು. ಯೆಹೋವ ಅಪ್ಪ ಕೊಟ್ಟಿರೋ ಗಿಫ್ಟ್ಗೆ ಬೆಲೆ ಕೊಡ್ತೀವಿ ಅಂತ ತೋರಿಸ್ಬೇಕು.
4. ರಾಜ ದಾವೀದನಿಗೆ ಯಾವ ಆಸೆ ಇತ್ತು?
4 ರಾಜ ದಾವೀದ ಕೂಡ ಜೀವಕ್ಕೆ ತುಂಬ ಬೆಲೆ ಕೊಡ್ತಿದ್ದ. ಅದು ಅವನ ಮಾತುಗಳಿಂದ ಗೊತ್ತಾಗುತ್ತೆ. ಅವನು “ನಾನು ಸತ್ತುಹೋದ್ರೆ, ಸಮಾಧಿಗೆ ಇಳಿದು ಹೋದ್ರೆ ಏನು ಲಾಭ? ಮಣ್ಣು ನಿನ್ನನ್ನ ಹೊಗಳುತ್ತಾ? ಅದು ನಿನ್ನ ನಿಷ್ಠೆ ಬಗ್ಗೆ ಮಾತಾಡುತ್ತಾ?” ಅಂತ ಹೇಳ್ದ. (ಕೀರ್ತ. 30:9) ಈ ಮಾತನ್ನ ಹೇಳ್ದಾಗ ಅವನಿಗೆ ತುಂಬ ವಯಸ್ಸಾಗಿತ್ತು. ಆದ್ರೂ ಜೀವಂತವಾಗಿ ಇರ್ಬೇಕು, ಯೆಹೋವ ಆರಾಧನೆ ಮಾಡ್ಬೇಕು ಅನ್ನೋ ಅವನ ಆಸೆ ಒಂಚೂರು ಕಮ್ಮಿ ಆಗಿರ್ಲಿಲ್ಲ. ನಮ್ಮ ಆಸೆನೂ ಅದೇ ಅಲ್ವಾ?
5. ಎಷ್ಟೇ ವಯಸ್ಸಾಗಿದ್ರೂ, ಎಂಥ ಕಾಯಿಲೆ ಬಂದ್ರೂ ನಮ್ಮಿಂದ ಏನ್ ಮಾಡೋಕೆ ಆಗುತ್ತೆ?
5 ನಮಗೆ ವಯಸ್ಸಾದ್ರೆ ಅಥವಾ ಕಾಯಿಲೆ ಬಂದ್ರೆ ಮುಂಚಿನ ತರ ಯೆಹೋವನ ಸೇವೆ ಮಾಡೋಕೆ ಆಗಲ್ಲ. ಆಗ ‘ನಾನು ಯಾಕಾದ್ರೂ ಬದುಕಿದ್ದೀನೋ’ ಅಂತ ಅನಿಸಿಬಿಡುತ್ತೆ. ಆದ್ರೂ ನಾವು ನಮ್ಮ ಆರೋಗ್ಯನ ಚೆನ್ನಾಗಿ ನೋಡ್ಕೊಬೇಕು. ಯಾಕಂದ್ರೆ ನಮಗೆ ಎಷ್ಟೇ ವಯಸ್ಸಾದ್ರೂ, ಹುಷಾರಿಲ್ದೆ ಇದ್ರೂ ದಾವೀದನ ತರ ನಾವು ಯೆಹೋವನ ಸೇವೆ ಮಾಡೋಕೆ ಆಗುತ್ತೆ. ನಾವು ಅಪರಿಪೂರ್ಣರಾಗಿದ್ರೂ, ಯೆಹೋವ ದೇವ್ರಿಗೆ ನಾವಂದ್ರೆ ತುಂಬ ಇಷ್ಟ. ಆತನ ಸೇವೆ ಮಾಡೋಕೆ ನಾವು ಮಾಡೋ ಪ್ರಯತ್ನ ನೋಡಿ ತುಂಬ ಮೆಚ್ಚಿಕೊಳ್ತಾನೆ. (ಮತ್ತಾ. 10:29-31) ಒಂದುವೇಳೆ ನಾವು ಜೀವ ಕಳ್ಕೊಂಡ್ರು, ಮತ್ತೆ ನಮಗೆ ಜೀವ ಕೊಡೋಕೆ ಕಾಯ್ತಾ ಇದ್ದಾನೆ. (ಯೋಬ 14:14, 15) ಹಾಗಾಗಿ ನಮ್ಮ ಜೀವ ಕಾಪಾಡ್ಕೊಳ್ಳೋಕೆ, ಆರೋಗ್ಯವಾಗಿ ಇರೋಕೆ ನಮ್ಮಿಂದ ಆಗೋದನ್ನೆಲ್ಲಾ ಮಾಡ್ತಾ ಇರ್ಬೇಕು.
ಕೆಟ್ಟ ಅಭ್ಯಾಸ ಬೆಳೆಸ್ಕೊಬೇಡಿ
6. ನಾವು ತಿನ್ನೋ, ಕುಡಿಯೋ ವಿಷ್ಯದಲ್ಲಿ ಏನ್ ಮಾಡ್ಬೇಕು ಅಂತ ಯೆಹೋವ ಬಯಸ್ತಾನೆ?
6 ನಾವು ಆರೋಗ್ಯವಾಗಿ ಇರೋಕೆ ಏನ್ ತಿನ್ನಬೇಕು? ಏನ್ ಕುಡಿಬೇಕು? ಅನ್ನೋ ದೊಡ್ಡ ಪಟ್ಟಿನ ಯೆಹೋವ ಬೈಬಲಲ್ಲಿ ಕೊಟ್ಟಿಲ್ಲ. ಆದ್ರೆ ‘ದೇಹಕ್ಕೆ ಹಾನಿ ಮಾಡೋ ವಿಷ್ಯಗಳನ್ನ ದೂರ ಮಾಡಿ’ ಅಂತ ಹೇಳಿದ್ದಾನೆ. (ಪ್ರಸಂ. 11:10) ಉದಾಹರಣೆಗೆ ಹೊಟ್ಟೆ ಬಿರಿಯೋ ತರ ತಿನ್ನೋದು, ಕಂಠ ಪೂರ್ತಿ ಕುಡಿಯೋದು ಜೀವಕ್ಕೆ ಅಪಾಯ ಅಂತ ಬೈಬಲಲ್ಲಿ ಎಚ್ಚರಿಸಿದ್ದಾನೆ. (ಜ್ಞಾನೋ. 23:20) ಹಾಗಾಗಿ ನಾವು ಏನ್ ತಿಂತೀವಿ, ಏನ್ ಕುಡಿತೀವಿ ಅನ್ನೋ ವಿಷ್ಯದಲ್ಲಿ ಹುಷಾರಾಗಿ ಇರ್ಬೇಕು ಅಂತ ಯೆಹೋವ ಬಯಸ್ತಾನೆ. ಅಷ್ಟೇ ಅಲ್ಲ ನಾವು ಎಷ್ಟು ತಿಂತೀವಿ, ಕುಡಿತೀವಿ ಅನ್ನೋ ವಿಷ್ಯದಲ್ಲೂ ಎಚ್ಚರವಾಗಿ ಇರ್ಬೇಕು ಅಂತ ಹೇಳ್ತಿದ್ದಾನೆ.—1 ಕೊರಿಂ. 6:12; 9:25.
7. ಆರೋಗ್ಯ ಕಾಪಾಡ್ಕೊಳ್ಳೋ ವಿಷ್ಯದಲ್ಲಿ ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಜ್ಞಾನೋಕ್ತಿ 2:11 ನಮಗೆ ಹೇಗೆ ಸಹಾಯ ಮಾಡುತ್ತೆ?
7 ತಿನ್ನೋ ಕುಡಿಯೋ ವಿಷ್ಯದಲ್ಲಿ ನಾವು ನಿರ್ಧಾರಗಳನ್ನ ಮಾಡುವಾಗ ಚೆನ್ನಾಗಿ ಯೋಚ್ನೆ ಮಾಡ್ಬೇಕು. ಆಗ ನಾವು ಯೆಹೋವ ಕೊಟ್ಟಿರೋ ಜೀವಕ್ಕೆ ಬೆಲೆ ಕೊಡ್ತೀವಿ ಅಂತ ತೋರಿಸ್ಕೊಡ್ತೀವಿ. (ಕೀರ್ತ. 119:99, 100; ಜ್ಞಾನೋಕ್ತಿ 2:11 ಓದಿ.) ಉದಾಹರಣೆಗೆ ನಿಮಗೆ ಇಷ್ಟವಾದ ತಿಂಡಿ ಇದೆ ಅಂತ ನೆನಸಿ. ಆದ್ರೆ ಅದನ್ನ ತಿಂದ್ರೆ ನಿಮ್ಮ ಆರೋಗ್ಯ ಹಾಳಾಗುತ್ತೆ ಅಂತ ನಿಮಗೆ ಗೊತ್ತು. ನೀವು ಅದನ್ನ ತಿಂತೀರಾ? ಇಲ್ಲ ಅಲ್ವಾ! ಬುದ್ಧಿ ಇರುವವ್ರ ತರ ನಡ್ಕೊಳ್ತೀರ. ಆರೋಗ್ಯ ಕಾಪಾಡ್ಕೊಳ್ಳೋಕೆ ಇನ್ನೂ ಕೆಲವು ವಿಷ್ಯಗಳನ್ನ ಮಾಡ್ಬೇಕು. ಸಾಕಷ್ಟು ನಿದ್ದೆ ಮಾಡ್ಬೇಕು, ವ್ಯಾಯಾಮ ಮಾಡ್ಬೇಕು, ನಮ್ಮನ್ನ ಮತ್ತು ನಮ್ಮ ಮನೆಯನ್ನ ಕ್ಲೀನಾಗಿ ಇಟ್ಕೊಬೇಕು.
ಯಾವಾಗ್ಲೂ ಸುರಕ್ಷತೆನ ಮನಸ್ಸಲ್ಲಿಡಿ
8. ನಾವು ಸುರಕ್ಷಿತವಾಗಿ ಇರ್ಬೇಕು ಅನ್ನೋದೇ ಯೆಹೋವನ ಆಸೆ ಅಂತ ಹೇಗೆ ಹೇಳ್ಬೋದು?
8 ಇಸ್ರಾಯೇಲ್ಯರು ಸುರಕ್ಷಿತವಾಗಿ ಇರೋಕೆ ಯೆಹೋವ ದೇವರು ಕೆಲವು ನಿಯಮಗಳನ್ನ ಕೊಟ್ಟಿದ್ದನು. (ವಿಮೋ. 21:28, 29; ಧರ್ಮೋ. 22:8) ಉದಾಹರಣೆಗೆ ಒಬ್ಬ ವ್ಯಕ್ತಿ ಯಾರನ್ನಾದ್ರು ಅಪ್ಪಿತಪ್ಪಿ ಕೊಂದುಬಿಟ್ರೂ ಅವನಿಗೆ ಶಿಕ್ಷೆ ಸಿಗ್ತಿತ್ತು. (ಧರ್ಮೋ. 19:4, 5) ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯ ಕೈಯಿಂದ ಗರ್ಭಿಣಿ ಹೆಂಗಸಿಗೆ ಗೊತ್ತಿಲ್ದೆ ಏಟಾಗಿ ಹೊಟ್ಟೆಲಿರೋ ಮಗು ತೀರಿಹೋದ್ರೂ ಆ ವ್ಯಕ್ತಿಗೆ ಮರಣಶಿಕ್ಷೆ ಸಿಗ್ತಿತ್ತು. (ವಿಮೋ. 21:22, 23) ಈ ನಿಯಮಗಳನ್ನ ಮನಸ್ಸಲ್ಲಿ ಇಟ್ಕೊಂಡ್ರೆ ಇಸ್ರಾಯೇಲ್ಯರು ಮನೇಲಿ, ಕೆಲಸದ ಜಾಗದಲ್ಲಿ ಸುರಕ್ಷಿತವಾಗಿ ಇರೋಕೆ ಆಗ್ತಿತ್ತು. ನಾವು ಯಾವಾಗ್ಲೂ ಸುರಕ್ಷಿತವಾಗಿ ಇರ್ಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅನ್ನೋದು ಇದ್ರಿಂದ ಗೊತ್ತಾಗುತ್ತೆ.
9. ಅನಾಹುತಗಳನ್ನ ತಡಿಯೋಕೆ ನಾವೇನು ಮಾಡ್ಬೇಕು? (ಚಿತ್ರಗಳನ್ನೂ ನೋಡಿ.)
9 ನಾವು ಕೆಲಸದ ಜಾಗದಲ್ಲಿ ಮತ್ತು ಮನೇಲಿ ಇರುವಾಗ್ಲೂ ಸುರಕ್ಷತೆನ ಮನಸ್ಸಲ್ಲಿ ಇಟ್ಕೊಂಡಿರಬೇಕು. ಆಗ ದೇವರು ಕೊಟ್ಟಿರೋ ಜೀವಕ್ಕೆ ನಾವು ಬೆಲೆ ಕೊಡ್ತೀವಿ. ಚೂಪಾದ ವಸ್ತುಗಳನ್ನ, ವಿಷಕಾರಿ ಕೆಮಿಕಲ್ಗಳನ್ನ, ಬೇಡದಿರೋ ಔಷಧಿಗಳನ್ನ ಯಾರಿಗೂ ಹಾನಿ ಆಗದಿರೋ ಜಾಗದಲ್ಲಿ ಬಿಸಾಕ್ಬೇಕು. ಅಂಥ ವಸ್ತುಗಳು ಮಕ್ಕಳ ಕೈಗೆ ಸಿಗದ ಹಾಗೆ ನೋಡ್ಕೊಬೇಕು. ಸ್ಟೌವ್ ಹಚ್ಚಿಟ್ಟು, ನೀರನ್ನ ಕುದಿಯೋಕೆ ಇಟ್ಟು ಬೇರೆ ಕಡೆ ಹೋಗಿಬಿಡ್ಬಾರ್ದು. ಮೆಶಿನ್ಗಳನ್ನ, ಉಪಕರಣಗಳನ್ನ ಉಪಯೋಗಿಸುವಾಗ ಹುಷಾರಾಗಿ ಇರ್ಬೇಕು. ನಾವು ಏನಾದ್ರೂ ಔಷಧಿ ತಿಂದಿದ್ರೆ, ಸರಿಯಾಗಿ ನಿದ್ದೆ ಮಾಡಿಲ್ಲಾಂದ್ರೆ, ಕುಡ್ದಿದ್ರೆ ಗಾಡಿ ಓಡಿಸ್ಬಾರ್ದು. ಗಾಡಿ ಓಡಿಸುವಾಗ ಮೊಬೈಲ್ ಬಳಸ್ಬಾರ್ದು.
ವಿಪತ್ತಿಗೆ ಮುಂಚೆನೇ ತಯಾರಾಗಿರಿ
10. (ಎ) ವಿಪತ್ತುಗಳಾಗೋ ಮುಂಚೆ ಏನ್ ಮಾಡ್ಬೇಕು? (ಬಿ) ವಿಪತ್ತುಗಳು ಆದಾಗ ಏನ್ ಮಾಡ್ಬೇಕು?
10 ಕೆಲವು ಸಂದರ್ಭಗಳಲ್ಲಿ ನಾವೆಷ್ಟೇ ಹುಷಾರಾಗಿ ಇದ್ರೂ ನಮ್ಮ ಜೀವಕ್ಕೆ ಅಪಾಯ ಆಗೋ ಘಟನೆಗಳು ನಡೆದುಬಿಡುತ್ತೆ. ಉದಾಹರಣೆಗೆ ಪ್ರಕೃತಿ ವಿಕೋಪಗಳು, ಅಂಟುರೋಗಗಳು ಮತ್ತು ದೊಂಬಿ ಗಲಾಟೆಗಳು. ಇಂಥ ಸಂದರ್ಭಗಳಲ್ಲಿ ನಾವು ಸುರಕ್ಷಿತವಾಗಿ ಇರೋಕೆ ಪ್ರಯತ್ನ ಮಾಡ್ಬೇಕು. ಸರ್ಕಾರ ಕರ್ಫ್ಯೂ ಹಾಕಿದಾಗ ನಾವು ಪಾಲಿಸ್ಬೇಕು. ಜಾಗ ಖಾಲಿ ಮಾಡಿ ಬೇರೆ ಕಡೆ ಹೋಗಿ ಅಂತ ಹೇಳಿದ್ರೆ ಹೋಗ್ಬೇಕು. (ರೋಮ. 13:1, 5-7) ಇನ್ನು ಕೆಲವೊಮ್ಮೆ ವಿಪತ್ತುಗಳು ಆಗೋ ಮುಂಚೆನೇ ಸರ್ಕಾರ ನಮಗೆ ಎಚ್ಚರಿಕೆ ಕೊಡುತ್ತೆ. ಆಗ ನಾವು ತಯಾರಿ ಮಾಡ್ಕೊಬೇಕು. ಉದಾಹರಣೆಗೆ ಒಂದು ಬ್ಯಾಗಲ್ಲಿ ಕುಡಿಯೋ ನೀರನ್ನ, ತುಂಬ ದಿನ ಇಟ್ರೂ ಕೆಟ್ಟು ಹೋಗದಿರೋ ಆಹಾರನ, ಔಷಧಿಗಳನ್ನ ಇಟ್ಕೊಬೇಕು.
11. ಅಂಟುರೋಗ ಹರಡ್ತಾ ಇರುವಾಗ ನಾವೇನ್ ಮಾಡ್ಬೇಕು?
11 ನೀವು ಇರೋ ಕಡೆ ರೋಗ ಹರಡ್ತಾ ಇದ್ರೆ ಏನ್ ಮಾಡ್ಬೇಕು? ಸರ್ಕಾರ ನಿಯಮಗಳನ್ನ ಹಾಕಿದಾಗ ಅದನ್ನ ಪಾಲಿಸ್ಬೇಕು. ಅಂದ್ರೆ ಸಾಮಾಜಿಕ ಅಂತರ ಕಾಪಾಡ್ಕೊಬೇಕು, ಆಗಾಗ ಕೈ ತೊಳಿಬೇಕು, ಮಾಸ್ಕ್ ಹಾಕಬೇಕು, ಕ್ವಾರಂಟೈನ್ ಮಾಡ್ಕೊಬೇಕು. ಇದನ್ನೆಲ್ಲ ಪಾಲಿಸಿದ್ರೆ ದೇವರು ಕೊಟ್ಟ ಜೀವಕ್ಕೆ ನಾವು ಬೆಲೆ ಕೊಡ್ತೀವಿ ಅಂತ ತೋರಿಸ್ತೀವಿ.
12. ವಿಪತ್ತುಗಳು ಬಂದಾಗ ನಾವು ಯಾವುದನ್ನ ನಂಬಬೇಕು, ಯಾವುದನ್ನ ನಂಬಾರ್ದು? (ಜ್ಞಾನೋಕ್ತಿ 14:15)
12 ವಿಪತ್ತುಗಳು ಬಂದಾಗ ಜನ್ರು ಗಾಳಿಸುದ್ದಿ ಹಬ್ಬಿಸ್ತಾರೆ. ಆಗ ನಮ್ಮ ಅಕ್ಕಪಕ್ಕದ ಮನೆಯವರು, ನಮ್ಮ ಫ್ರೆಂಡ್ಸ್ ಅಥವಾ ನ್ಯೂಸಲ್ಲಿ “ಹೇಳಿದ್ದನ್ನೆಲ್ಲ” ನಾವು ನಂಬಾರ್ದು. ಸರ್ಕಾರದವರು ಅಥವಾ ಡಾಕ್ಟರುಗಳು ಕೊಡೋ ಮಾಹಿತಿನ ನಾವು ನಂಬಬೇಕು. (ಜ್ಞಾನೋಕ್ತಿ 14:15 ಓದಿ.) ಕೂಟಗಳನ್ನ ಹೇಗೆ ನಡೆಸ್ಬೇಕು, ಹೇಗೆ ಸೇವೆ ಮಾಡ್ಬೇಕು ಅನ್ನೋ ನಿರ್ದೇಶನಗಳನ್ನ ಆಡಳಿತ ಮಂಡಲಿ ಮತ್ತು ಬ್ರಾಂಚ್ ಆಫೀಸ್ ನಮಗೆ ಕೊಡುತ್ತೆ. ಆದ್ರೆ ಈ ನಿರ್ದೇಶನಗಳನ್ನ ಕೊಡೋ ಮುಂಚೆ ಅವರು ಪೂರ್ತಿ ಮಾಹಿತಿ ತಿಳ್ಕೊಂಡಿರ್ತಾರೆ. (ಇಬ್ರಿ. 13:17) ಅವರು ಹೇಳೋದನ್ನ ಪಾಲಿಸಿದಾಗ ನಾವು ನಮ್ಮ ಜೀವ ಕಾಪಾಡ್ಕೊಳ್ತೀವಿ. ಅಷ್ಟೇ ಅಲ್ಲ ಯೆಹೋವನ ಸಾಕ್ಷಿಗಳಾಗಿ ನಮಗಿರೋ ಒಳ್ಳೇ ಹೆಸ್ರನ್ನೂ ಉಳಿಸ್ಕೊತೀವಿ.—1 ಪೇತ್ರ 2:12.
“ರಕ್ತದಿಂದ ದೂರ ಇರಿ”
13. ರಕ್ತ ತಗೊಳ್ಳೋ ಪರಿಸ್ಥಿತಿ ಬಂದಾಗ ಯೆಹೋವ ಕೊಟ್ಟಿರೋ ಜೀವಕ್ಕೆ ನಾವು ಹೇಗೆ ಬೆಲೆ ಕೊಡ್ತೀವಿ?
13 ಯೆಹೋವನ ಸಾಕ್ಷಿಗಳು ರಕ್ತ ತಗೊಳಲ್ಲ ಅಂತ ತುಂಬ ಜನ್ರಿಗೆ ಗೊತ್ತು. ಯಾಕಂದ್ರೆ ನಾವು ರಕ್ತನ ಪವಿತ್ರವಾಗಿ ನೋಡ್ಬೇಕು ಅಂತ ಯೆಹೋವ ಹೇಳಿದ್ದಾನೆ. ಅದಕ್ಕೆ ಜೀವ ಹೋಗೋ ಪರಿಸ್ಥಿತಿ ಬಂದ್ರೂ ನಾವು ರಕ್ತ ತಗೊಳಲ್ಲ. (ಅ. ಕಾ. 15:28, 29) ಇದ್ರರ್ಥ ನಾವು ಸಾಯೋಕೆ ಇಷ್ಟಪಡ್ತೀವಿ ಅಂತಲ್ಲ. ಬದಲಿಗೆ ದೇವರು ಕೊಟ್ಟಿರೋ ಜೀವಕ್ಕೆ ಗೌರವ ತೋರಿಸ್ತಾ ಇದ್ದೀವಿ ಅಂತ ಅರ್ಥ. ಅದಕ್ಕೆ ನಾವು ರಕ್ತ ಇಲ್ಲದೆ ಒಳ್ಳೇ ಚಿಕಿತ್ಸೆ ಪಡ್ಕೊಳ್ಳೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡ್ತೀವಿ.
14. ದೊಡ್ಡದೊಡ್ಡ ಆರೋಗ್ಯ ಸಮಸ್ಯೆಗಳು ಬರದಿರೋ ಹಾಗೆ ತಡಿಯೋಕೆ ನಾವೇನು ಮಾಡ್ಬೇಕು?
14 ಈ ಲೇಖನದಲ್ಲಿ ಕೊಟ್ಟಿರೋ ಸಲಹೆಗಳನ್ನ ನಾವು ಪಾಲಿಸಿದ್ರೆ ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ಅಷ್ಟೇ ಅಲ್ಲ ಮನೇಲಿ, ಕೆಲಸದ ಜಾಗದಲ್ಲಿ ಜೀವಕ್ಕೆ ಅಪಾಯ ಆಗೋ ಸನ್ನಿವೇಶಗಳು ಬರದಿರೋ ತರ ನೋಡ್ಕೊಳ್ತೀವಿ. ಅದ್ರ ಜೊತೆಗೆ, ಟ್ರಾಫಿಕ್ ನಿಯಮಗಳನ್ನೂ ಪಾಲಿಸ್ತಾ ಹುಷಾರಾಗಿ ಇರ್ತಿವಿ. ಇದನ್ನೆಲ್ಲ ಮಾಡಿದ್ರೆ ದೊಡ್ಡ ಅನಾಹುತಗಳಾಗಲ್ಲ. ಆಪರೇಷನ್ ಮಾಡಿಸ್ಕೊಳ್ಳೋ ಪರಿಸ್ಥಿತಿ ಬರಲ್ಲ. ಒಂದುವೇಳೆ ಅಂಥ ಪರಿಸ್ಥಿತಿ ಬಂದ್ರೂ ನಾವು ಬೇಗ ಚೇತರಿಸ್ಕೊಳ್ತೀವಿ.
15. (ಎ) ಇತ್ತೀಚೆಗೆ ತುಂಬಿಸಿರೋ ಡಿಪಿಎ ಕಾರ್ಡನ್ನ ಇಟ್ಕೊಂಡಿರೋದು ಯಾಕೆ ಮುಖ್ಯ? (ಚಿತ್ರನೂ ನೋಡಿ.) (ಬಿ) ಚಿಕಿತ್ಸೆಯಲ್ಲಿ ರಕ್ತದ ಬಳಕೆ ಬಗ್ಗೆ ನಾವು ಹೇಗೆ ನಿರ್ಧಾರ ಮಾಡ್ಬೇಕು ಅಂತ ಈ ವಿಡಿಯೋದಲ್ಲಿ ತಿಳ್ಕೊಂಡ್ವಿ?
15 ನಾವು ಡಿಪಿಎ ಕಾರ್ಡನ್ನ ತುಂಬಿಸಿ ಅದನ್ನ ಯಾವಾಗ್ಲೂ ನಮ್ಮ ಹತ್ರ ಇಟ್ಕೊಂಡಿದ್ರೆ ಜೀವಕ್ಕೆ ಬೆಲೆ ಕೊಡ್ತೀವಿ ಅಂತ ತೋರಿಸ್ತೀವಿ. ಅದ್ರಲ್ಲಿ, ನೀವು ರಕ್ತ ತಗೊಳಲ್ಲ ಮತ್ತು ಯಾವ ರೀತಿಯ ಚಿಕಿತ್ಸೆ ಪಡ್ಕೊಳ್ಳೋಕೆ ನೀವು ಇಷ್ಟಪಡ್ತೀರ ಅಂತ ಇರುತ್ತೆ. ನೀವು ನಿಮ್ಮ ಡಿಪಿಎ ಕಾರ್ಡನ್ನ ತುಂಬಿಸಿ ಎಷ್ಟು ದಿನ ಆಯ್ತು? ಅದ್ರಲ್ಲಿ ಯಾವುದಾದ್ರೂ ಮಾಹಿತಿನ ಬದ್ಲಾಯಿಸ್ಬೇಕು ಅಂತ ಅಂದ್ಕೊಂಡಿದ್ದೀರಾ? ಹಾಗಾದ್ರೆ ಅದನ್ನ ಬೇಗ ಮಾಡಿ. ಡಿಪಿಎ ಕಾರ್ಡನ್ನ ನೀವು ರೆಡಿಯಾಗಿ ಇಟ್ಕೊಂಡಿಲ್ಲಾಂದ್ರೆ ನೀವು ಚಿಕಿತ್ಸೆ ಪಡ್ಕೊಳ್ಳೋ ಸಮಯದಲ್ಲಿ ತೊಂದ್ರೆಗಳು ಆಗ್ಬೋದು. ಚಿಕಿತ್ಸೆ ಸಿಗೋಕೆ ತಡ ಆಗ್ಬೋದು. ನಿಮ್ಮ ಜೀವಕ್ಕೆ ಅಪಾಯ ತರೋ ಔಷಧಿಗಳನ್ನ ಡಾಕ್ಟರ್ ಅಥವಾ ನರ್ಸ್ ನಿಮಗೆ ಕೊಟ್ಟುಬಿಡ್ಬೋದು. b
16. ಡಿಪಿಎ ಕಾರ್ಡನ್ನ ತುಂಬಿಸೋಕೆ ನಿಮಗೆ ಗೊತ್ತಿಲ್ಲಾಂದ್ರೆ ಏನು ಮಾಡ್ಬೇಕು?
16 ‘ನನಗೇನು ಅಷ್ಟು ವಯಸ್ಸಾಗಿಲ್ಲ, ಆರೋಗ್ಯವಾಗಿ ಇದ್ದೀನಿ’ ಅಂತ ನಮಗೆ ಅನಿಸ್ಬೋದು. ಆದ್ರೆ ಯಾವಾಗ ಏನು ಬೇಕಾದ್ರೂ ಆಗ್ಬೋದು. (ಪ್ರಸಂ. 9:11) ನಮಗೆ ಕಾಯಿಲೆನೂ ಬರಬಹುದು. ಅದಕ್ಕೆ ನಾವು ಡಿಪಿಎ ಕಾರ್ಡನ್ನ ತುಂಬಿಸಿ ಇಟ್ಕೊಂಡಿರಬೇಕು. ನಿಮಗೆ ಇದನ್ನ ಹೇಗೆ ತುಂಬಿಸ್ಬೇಕು ಅಂತ ಗೊತ್ತಿಲ್ಲಾಂದ್ರೆ ನಿಮ್ಮ ಸಭೆಯ ಹಿರಿಯರ ಹತ್ರ ಸಹಾಯ ಕೇಳಿ. ನೀವು ಯಾವ ಚಿಕಿತ್ಸೆ ತಗೊಬೇಕು, ತಗೊಬಾರ್ದು ಅಂತ ಅವರು ನಿಮಗೆ ಹೇಳಲ್ಲ. ಆ ನಿರ್ಧಾರಗಳನ್ನ ನೀವೇ ಮಾಡ್ಬೇಕು. (ಗಲಾ. 6:4, 5) ಆದ್ರೆ ಡಿಪಿಎ ಕಾರ್ಡಲ್ಲಿ ಇರೋದನ್ನೆಲ್ಲ ನೀವು ಅರ್ಥ ಮಾಡ್ಕೊಂಡು ತುಂಬಿಸೋಕೆ ಅವರು ಸಹಾಯ ಮಾಡ್ತಾರೆ.
ನೀವು ಮಾಡಿದ್ದೇ ಸರಿ ಅಂದ್ಕೊಬೇಡಿ
17. ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ನಿಮ್ಮಲ್ಲಿಲ್ಲ ಅಂತ ಹೇಗೆ ತೋರಿಸ್ತೀರ?
17 ಚಿಕಿತ್ಸೆ ಪಡ್ಕೊಳ್ಳೋ ವಿಷ್ಯ ಬಂದಾಗ ನಾವು ಬೈಬಲಿಂದ ಏನು ಕಲ್ತಿದ್ದೀವೋ ಅದನ್ನ ಮನಸ್ಸಲ್ಲಿಟ್ಟು ನಿರ್ಧಾರಗಳನ್ನ ಮಾಡ್ತೀವಿ. (ಅ. ಕಾ. 24:16; 1 ತಿಮೊ. 3:9) ನಾವು ಮಾಡಿದ ನಿರ್ಧಾರಗಳ ಬಗ್ಗೆ ಬೇರೆಯವ್ರ ಹತ್ರ ಹೇಳುವಾಗ್ಲೂ ಫಿಲಿಪ್ಪಿ 4:5ರಲ್ಲಿ ಇರೋ ತತ್ವ ಪಾಲಿಸ್ತೀವಿ. ಅಲ್ಲಿ “‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ನಿಮ್ಮಲ್ಲಿಲ್ಲ ಅಂತ ಎಲ್ರಿಗೂ ಗೊತ್ತಾಗ್ಲಿ” ಅಂತ ಹೇಳುತ್ತೆ. ಹಾಗಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಅತಿಯಾಗಿ ಚಿಂತೆ ಮಾಡೋಕೆ ಹೋಗಲ್ಲ. ಬೇರೆಯವರು ನಮ್ಮ ತರಾನೇ ನಿರ್ಧಾರಗಳನ್ನ ಮಾಡ್ಬೇಕು ಅಂತ ಅವ್ರನ್ನ ಒತ್ತಾಯನೂ ಮಾಡಲ್ಲ. ನಾವು ನಮ್ಮ ಸಹೋದರ ಸಹೋದರಿಯರನ್ನ ತುಂಬ ಪ್ರೀತಿಸ್ತೀವಿ. ಅದಕ್ಕೆ ಅವರು ತಗೊಳ್ಳೋ ನಿರ್ಧಾರಗಳನ್ನ ಗೌರವಿಸ್ತೀವಿ.—ರೋಮ. 14:10-12.
18. ಜೀವ ಕೊಟ್ಟಿದ್ದಿಕ್ಕೆ ನಾವು ಯೆಹೋವನಿಗೆ ಹೇಗೆ ಥ್ಯಾಂಕ್ಸ್ ಹೇಳ್ಬೋದು?
18 ನಾವು ಜೀವ ಕಾಪಾಡ್ಕೊಬೇಕು. ಯೆಹೋವನ ಸೇವೆನ ಚೆನ್ನಾಗಿ ಮಾಡ್ಬೇಕು. ಆಗ ಜೀವ ಕೊಟ್ಟಿರೋ ಯೆಹೋವ ಅಪ್ಪಾಗೆ ನಾವು ಥ್ಯಾಂಕ್ಸ್ ಹೇಳಿದ ಹಾಗೆ ಇರುತ್ತೆ. (ಪ್ರಕ. 4:11) ನಮಗೆ ಈಗ ಕಾಯಿಲೆಗಳು ಬರುತ್ತೆ, ವಿಪತ್ತುಗಳು ಆಗುತ್ತೆ. ಆದ್ರೆ ನಾವು ಈ ರೀತಿ ಕಷ್ಟ ಪಟ್ಕೊಂಡು ಜೀವನ ಮಾಡ್ಬೇಕು ಅಂತ ಯೆಹೋವ ಇಷ್ಟ ಪಡ್ಲಿಲ್ಲ. ಅದಕ್ಕೆ ಆದಷ್ಟು ಬೇಗ ಇದನ್ನೆಲ್ಲ ಸರಿ ಮಾಡ್ತಾನೆ. ನಮಗೆ ಸಾವು ನೋವು ಇಲ್ಲದಿರೋ ಶಾಶ್ವತ ಜೀವ ಕೊಡ್ತಾನೆ. (ಪ್ರಕ. 21:4) ಅಲ್ಲಿ ತನಕ ನಾವು ನಮ್ಮ ಆರೋಗ್ಯ ಕಾಪಾಡ್ಕೊಳ್ಳೋಣ. ನಮ್ಮನ್ನ ತುಂಬ ಪ್ರೀತಿಸೋ ಯೆಹೋವ ಅಪ್ಪನ ಸೇವೆ ಮಾಡ್ತಾ ಇರೋಣ!
ಗೀತೆ 55 ಅನಂತ ಜೀವನ—ಕಟ್ಟ ಕಡೆಗೂ!
a ದೇವರು ಕೊಟ್ಟಿರೋ ಜೀವಕ್ಕೆ ನಾವು ಬೆಲೆ ಕೊಡ್ತೀವಿ ಅಂತ ತೋರಿಸಿಕೊಡ್ಬೇಕು. ಹಾಗಾಗಿ ನೈಸರ್ಗಿಕ ವಿಪತ್ತುಗಳು ಬಂದಾಗ ನಾವು ಹೇಗೆ ಹುಷಾರಾಗಿ ಇರ್ಬೇಕು? ಸುರಕ್ಷಿತವಾಗಿ ಇರೋಕೆ ನಾವು ಏನ್ ಮಾಡ್ಬೇಕು? ತುರ್ತು ಚಿಕಿತ್ಸೆ ಪಡ್ಕೊಳ್ಳೋ ಪರಿಸ್ಥಿತಿ ಬರೋ ಮುಂಚೆನೇ ಹೇಗೆ ತಯಾರಿ ಮಾಡ್ಕೊಬೇಕು? ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.
b jw.orgನಲ್ಲಿ ಚಿಕಿತ್ಸೆಯಲ್ಲಿ ರಕ್ತದ ಬಳಕೆ: ಸರಿಯಾದ ನಿರ್ಧಾರ ಮಾಡೋದು ಹೇಗೆ? ಅನ್ನೋ ವಿಡಿಯೋ ನೋಡಿ.
c ಚಿತ್ರ ವಿವರಣೆ: ಒಬ್ಬ ಯುವ ಸಹೋದರ ಡಿಪಿಎ ಕಾರ್ಡನ್ನ ತುಂಬಿಸ್ತಾ ಇದ್ದಾನೆ. ಅದನ್ನ ಯಾವಾಗ್ಲೂ ತನ್ನ ಹತ್ರ ಇಟ್ಕೊಂಡಿದ್ದಾನೆ.