ಅಧ್ಯಯನ ಲೇಖನ 9
ಯೆಹೋವನಿಂದ ನಿಮಗೆ ಸಮಾಧಾನ ಸಿಗುತ್ತೆ
“ಚಿಂತೆಗಳು ನನ್ನನ್ನು ಮುತ್ತಿಕೊಂಡಿದ್ದಾಗ, ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ.”—ಕೀರ್ತ. 94:19, NW.
ಗೀತೆ 68 ವಿನಮ್ರನ ಪ್ರಾರ್ಥನೆ
ಕಿರುನೋಟ *
1. (ಎ) ನಮ್ಗೆ ಯಾವ ಕಾರಣಗಳಿಂದಾಗಿ ಚಿಂತೆ ಕಾಡ್ಬಹುದು? (ಬಿ) ಇದ್ರಿಂದ ನಾವು ಏನಂತ ಯೋಚಿಸೋಕೆ ಶುರು ಮಾಡ್ಬಹುದು?
ನಿಮ್ಗೆ ಯಾವತ್ತಾದ್ರೂ ತುಂಬ ಚಿಂತೆ * ಕಾಡಿದ್ಯಾ? ಬೇರೆಯವ್ರು ಹೇಳಿರೋ ಅಥವಾ ಮಾಡಿರೋ ವಿಷ್ಯದಿಂದ ನಿಮ್ಗೆ ತುಂಬ ಚಿಂತೆ ಕಾಡಿರ್ಬಹುದು. ಕೆಲವೊಮ್ಮೆ ನೀವೇ ಹೇಳಿರೋ ಮಾತಿನಿಂದ ಅಥವಾ ನಡ್ಕೊಂಡ ರೀತಿಯಿಂದ ನಿಮ್ಗೆ ಚಿಂತೆ ಆಗಿರ್ಬಹುದು. ಉದಾಹರಣೆಗೆ, ನೀವು ಒಂದು ತಪ್ಪುಮಾಡಿ ‘ಯೆಹೋವನು ಆ ತಪ್ಪನ್ನು ಯಾವತ್ತಿಗೂ ಕ್ಷಮಿಸಲ್ಲ’ ಅಂತ ಯೋಚ್ನೆ ಬಂದಿರ್ಬಹುದು. ಅಷ್ಟೇ ಅಲ್ಲ, ನೀವು ತುಂಬಾ ಚಿಂತೆ ಮಾಡೋದ್ರಿಂದ ನಿಮ್ಗೆ ದೇವ್ರ ಮೇಲೆ ನಂಬಿಕೆಯಿಲ್ಲ, ನೀವು ಸರಿಯಿಲ್ಲ ಅಂತ ಯೋಚ್ನೆ ಆಗಿರ್ಬಹುದು. ಆದ್ರೆ ಅದು ನಿಜನಾ?
2. ಚಿಂತೆ ಇದ್ರೆ ಅದರರ್ಥ ನಮ್ಗೆ ನಂಬಿಕೆ ಇಲ್ಲ ಅಂತಲ್ಲ ಅನ್ನೋದು ಬೈಬಲಿನ ಯಾವ ಉದಾಹರಣೆಗಳಿಂದ ಗೊತ್ತಾಗುತ್ತೆ?
2 ನಾವೀಗ ಬೈಬಲ್ನಲ್ಲಿರುವ ಕೆಲವು ಉದಾಹರಣೆಗಳನ್ನು ನೋಡೋಣ. ಮೊದಲ್ನೇದಾಗಿ, ಪ್ರವಾದಿ ಸಮುವೇಲನ ತಾಯಿ ಹನ್ನಳದ್ದು. ಅವ್ಳು ದೇವರಲ್ಲಿ ತುಂಬ ನಂಬಿಕೆಯಿಟ್ಟಿದ್ದ ಸ್ತ್ರೀಯಾಗಿದ್ಳು. ಆದ್ರೂ ಅವ್ಳ ಕುಟುಂಬದಲ್ಲಿದ್ದ ಒಬ್ರು ನೋವು ಮಾಡ್ದಾಗ ಅವ್ಳಿಗೆ ತುಂಬ ಚಿಂತೆಯಾಯಿತು. (1 ಸಮು. 1:7) ಎರಡ್ನೇ ಉದಾಹರಣೆ ಅಪೊಸ್ತಲ ಪೌಲನದ್ದು. ಆತನಿಗೆ ದೇವರಲ್ಲಿ ಬಲವಾದ ನಂಬಿಕೆ ಇದ್ರೂ ‘ಎಲ್ಲ ಸಭೆಗಳ ಕುರಿತಾದ ಚಿಂತೆಯಲ್ಲಿ’ ಮುಳುಗಿಹೋದ್ನು. (2 ಕೊರಿಂ. 11:28) ಮೂರನೇ ಉದಾಹರಣೆ ರಾಜ ದಾವೀದನದ್ದು. ಆತನಿಗೆ ಬಲವಾದ ನಂಬಿಕೆ ಇತ್ತು. ಇದನ್ನು ನೋಡಿ ದೇವರು ಆತನನ್ನು ಪ್ರೀತಿಸಿದ್ನು. (ಅ. ಕಾ. 13:22) ಆದ್ರೆ ಆತನು ತಪ್ಪು ಮಾಡಿದ್ರಿಂದ ಆತನನ್ನು ಚಿಂತೆ ಕಿತ್ತು ತಿನ್ನುತ್ತಿತ್ತು. (ಕೀರ್ತ. 38:4) ಈ ಮೂವರಿಗೂ ಯೆಹೋವನು ಸಾಂತ್ವನ, ಸಮಾಧಾನ ಕೊಟ್ಟನು. ಇವ್ರಿಂದ ನಾವ್ಯಾವ ಪಾಠ ಕಲೀಬಹುದು ಅಂತ ಈಗ ನೋಡೋಣ.
ಹನ್ನಳಿಂದ ಕಲಿಯುವ ಪಾಠ
3. ಯಾರಾದ್ರೂ ನೋವಾಗೋ ತರ ಮಾತಾಡಿದ್ರೆ ನಮ್ಗೆ ಯಾಕೆ ಚಿಂತೆ ಆಗುತ್ತೆ?
3 ನಮ್ಮತ್ರ ಯಾರಾದ್ರೂ ಒರಟಾಗಿ ಮಾತಾಡಿದ್ರೆ ಅಥವಾ ನೋವಾಗೋ ತರ ನಡ್ಕೊಂಡ್ರೆ ನಮ್ಗೆ ಚಿಂತೆ ಕಾಡ್ಬಹುದು. ಅದ್ರಲ್ಲೂ ನಮ್ಮ ಆಪ್ತ ಸ್ನೇಹಿತರೋ ಸಂಬಂಧಿಕರೋ ನಮ್ಗೆ ನೋವು ಮಾಡಿದ್ರೆ ತುಂಬನೇ ಬೇಜಾರಾಗುತ್ತೆ. ‘ನಮ್ಮ ಸಂಬಂಧ ಹಾಳಾಗಿ ಹೋಯ್ತಲ್ಲಪ್ಪಾ!’ ಅಂತ ನಾವು ಯೋಚಿಸ್ತೇವೆ. ಕೆಲವೊಮ್ಮೆ ನಮಗೆ ನೋವು ಮಾಡಿದವ್ರು ತಮಗೇ ಗೊತ್ತಿಲ್ಲದೆ ಕತ್ತಿತಿವಿದ ಹಾಗೆ ನಮ್ಮತ್ರ ಮಾತಾಡಿ ಬಿಡಬಹುದು. (ಜ್ಞಾನೋ. 12:18) ಅಥವಾ ಇನ್ನು ಕೆಲವ್ರು ಬೇಕುಬೇಕಂತನೇ ನಮ್ಗೆ ಚುಚ್ಚಿ-ಚುಚ್ಚಿ ಮಾತಾಡ್ಬಹುದು. ಒಬ್ಬ ಯುವ ಸಹೋದರಿ ಇಂಥ ಸವಾಲನ್ನು ಎದುರಿಸಬೇಕಾಯಿತು. ಅವ್ಳು ಹೇಳೋದು: “ಕೆಲವು ವರ್ಷಗಳ ಹಿಂದೆ ನಾನು ಯಾರನ್ನ ಒಬ್ಬ ಒಳ್ಳೇ ಸ್ನೇಹಿತೆ ಅಂತ ಅಂದುಕೊಂಡಿದ್ದೆನೋ ಅವ್ಳು ನನ್ನ ಬಗ್ಗೆ ಇಂಟರ್ನೆಟ್ನಲ್ಲಿ ಏನೇನೋ ಸುಳ್ಳನ್ನ ಹಬ್ಬಿಸಿದಳು. ನನಗೆ ನೋವಾಯ್ತು. ತುಂಬ ಯೋಚನೆನೂ ಆಯ್ತು. ಅವ್ಳು ಯಾಕೆ ನನ್ನ ಬೆನ್ನ ಹಿಂದೆ ಚೂರಿ ಹಾಕೋ ಕೆಲ್ಸ ಮಾಡಿದಳು ಅಂತ ನಂಗೆ ಅರ್ಥನೇ ಆಗ್ಲಿಲ್ಲ.” ನಿಮಗೂ ಆಪ್ತ ಸ್ನೇಹಿತರಿಂದಲೋ ಸಂಬಂಧಿಕರಿಂದಲೋ ನೋವಾಗಿದ್ರೆ ಹನ್ನಳಿಂದ ಅನೇಕ ಪಾಠಗಳನ್ನು ಕಲಿಯಬಹುದು.
4. ಹನ್ನಳಿಗೆ ಯಾವ ಕಷ್ಟಗಳಿದ್ದವು?
4 ಹನ್ನಳಿಗೆ ಅನೇಕ ಕಷ್ಟಗಳಿದ್ದವು. ತುಂಬ ವರ್ಷಗಳು ಅವ್ಳಿಗೆ ಮಕ್ಕಳೇ ಆಗ್ಲಿಲ್ಲ. (1 ಸಮು. 1:2) ಇಸ್ರಾಯೇಲಿನಲ್ಲಿ ಒಬ್ಬ ಸ್ತ್ರೀಗೆ ಮಕ್ಕಳಾಗದಿದ್ರೆ ಅವ್ಳ ಮೇಲೆ ದೇವ್ರ ಆಶೀರ್ವಾದ ಇಲ್ಲ, ಶಾಪಗ್ರಸ್ತಳು ಅಂತ ನೆನಸುತ್ತಿದ್ರು. ಇದ್ರಿಂದಾಗಿ ಹನ್ನಳಿಗೆ ತುಂಬ ಅವಮಾನ ಅನಿಸ್ತಿತ್ತು. (ಆದಿ. 30:1, 2) ಹನ್ನಳಿಗೆ ಇನ್ನೂ ಕಷ್ಟ ಆಗ್ಲಿಕ್ಕೆ ಏನು ಕಾರಣ ಅಂದ್ರೆ ಅವಳ ಗಂಡ ಎಲ್ಕಾನನಿಗೆ ಪೆನಿನ್ನ ಎಂಬ ಇನ್ನೊಬ್ಬ ಹೆಂಡತಿ ಇದ್ದಳು. ಅವ್ಳಿಗೆ ಮಕ್ಕಳಿದ್ರು. ಹನ್ನಳನ್ನು ಕಂಡ್ರೆ ಪೆನಿನ್ನಗೆ ಆಗ್ತಿರಲಿಲ್ಲ. ಸ್ವಲ್ಪನೂ ಕರುಣೆ ತೋರಿಸದೆ ಯಾವಾಗ್ಲೂ “ಆಕೆಯನ್ನು ಕೆಣಕಿ ನೋಯಿಸುತ್ತಿದ್ದಳು.” (1 ಸಮು. 1:6) ಹನ್ನಳಿಗೆ ಮೊದಮೊದ್ಲು ತುಂಬ ಕಷ್ಟ ಆಯ್ತು. ಅವ್ಳಿಗೆ ಎಷ್ಟು ಬೇಜಾರಾಯಿತೆಂದ್ರೆ ಊಟನೂ ಬಿಟ್ಟು “ಅಳುತ್ತಾ ಇದ್ದಳು.” ತುಂಬ ‘ದುಃಖದಲ್ಲಿ’ ಮುಳುಗಿ ಹೋಗಿದ್ದಳು. (1 ಸಮು. 1:7, 10) ಹನ್ನಳು ಹೇಗೆ ಸಾಂತ್ವನ ಪಡಕೊಂಡಳು?
5. ಹನ್ನಳಿಗೆ ಪ್ರಾರ್ಥನೆಯಿಂದ ಹೇಗೆ ಸಹಾಯ ಆಯಿತು?
5 ಹನ್ನಳು ತನ್ನ ನೋವನ್ನೆಲ್ಲಾ ಯೆಹೋವನಿಗೆ ಪ್ರಾರ್ಥನೆಯಲ್ಲಿ ಹೇಳಿಕೊಂಡಳು. ಪ್ರಾರ್ಥನೆ ಮಾಡಿದ ನಂತ್ರ ತನ್ನ ಪರಿಸ್ಥಿತಿಯ ಬಗ್ಗೆ ಮಹಾ ಯಾಜಕನಾದ ಏಲಿಗೆ ವಿವರಿಸಿದಳು. “ಆಗ ಏಲಿಯು ಆಕೆಗೆ—ಸಮಾಧಾನದಿಂದ ಹೋಗು; ಇಸ್ರಾಯೇಲ್ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ” ಅಂದನು. ಆಮೇಲೆ ಏನಾಯ್ತು? ಹನ್ನಳು “ಹೊರಟುಹೋಗಿ ಊಟಮಾಡಿದಳು. ಆಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.” (1 ಸಮು. 1:17, 18) ಪ್ರಾರ್ಥನೆ ಮಾಡಿದ್ರಿಂದ ಹನ್ನಳಿಗೆ ನೆಮ್ಮದಿ ಸಿಕ್ತು.
6. ಪ್ರಾರ್ಥನೆ ವಿಷ್ಯದಲ್ಲಿ ನಾವು ಹನ್ನಳಿಂದ ಮತ್ತು ಫಿಲಿಪ್ಪಿ 4:6, 7 ರಿಂದ ಯಾವ ಪಾಠಗಳನ್ನು ಕಲೀಬಹುದು?
6 ನಾವು ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ಇದ್ರೆ ನಮ್ಗೆ ಸಮಾಧಾನ-ನೆಮ್ಮದಿ ಸಿಗುತ್ತೆ. ಹನ್ನ ಸ್ವರ್ಗೀಯ ತಂದೆಯಾದ ಯೆಹೋವನ ಹತ್ರ ತುಂಬ ಹೊತ್ತು ಮಾತಾಡಿದಳು. 1 ಸಮು. 1:12) ನಾವು ಸಹ ಯೆಹೋವನ ಹತ್ರ ನಮಗಾಗುತ್ತಿರೋ ಚಿಂತೆ, ಭಯ ಅಥವಾ ನಮ್ಮ ಬಲಹೀನತೆಗಳ ಬಗ್ಗೆ ತುಂಬ ಹೊತ್ತು ಮಾತಾಡಬಹುದು. ನಮ್ಮ ಪ್ರಾರ್ಥನೆ ಸುಂದರ ಕವಿತೆ ತರ ಇರಬೇಕು ಅಥವಾ ಚೆನ್ನಾಗಿ ವಾಕ್ಯನ ಜೋಡಿಸಿ ಏನೂ ತಪ್ಪಿಲ್ಲದೆ ಹೇಳ್ಬೇಕು ಅಂತೇನಿಲ್ಲ. ಕೆಲವೊಮ್ಮೆ ಪ್ರಾರ್ಥನೆಯಲ್ಲಿ ದುಃಖನೆಲ್ಲಾ ಹೇಳಿಕೊಳ್ಳುವಾಗ ನಮ್ಗೆ ಅಳುನೂ ಬಂದುಬಿಡಬಹುದು. ಆದ್ರೂ ಯೆಹೋವನು ಯಾವತ್ತಿಗೂ ‘ಇವ್ರ ಪ್ರಾರ್ಥನೆ ಕೇಳಿ ನಂಗೆ ಸುಸ್ತಾಯಿತಪ್ಪಾ!’ ಅಂತ ಅಂದುಕೊಳ್ಳಲ್ಲ. ನಮ್ಮ ಪ್ರಾರ್ಥನೆಯಲ್ಲಿ ಬರೀ ಸಮಸ್ಯೆಗಳ ಬಗ್ಗೆಯಷ್ಟೇ ಹೇಳದೇ ಇನ್ನೇನು ಮಾಡ್ಬೇಕು ಅಂತ ಫಿಲಿಪ್ಪಿ 4:6, 7 ಸಲಹೆ ಕೊಡುತ್ತೆ. (ಓದಿ.) ನಮ್ಮ ಪ್ರಾರ್ಥನೆಯಲ್ಲಿ ನಾವು ಕೃತಜ್ಞತೆಯನ್ನೂ ಹೇಳ್ಬೇಕು ಅಂತ ಪೌಲನು ಈ ವಚನಗಳಲ್ಲಿ ತಿಳಿಸಿದ್ದಾನೆ. ಯೆಹೋವನಿಗೆ ಕೃತಜ್ಞತೆ ಹೇಳಲು ಅನೇಕ ಕಾರಣಗಳಿವೆ. ಉದಾಹರಣೆಗೆ ಆತನು ನಮ್ಗೆ ಜೀವ ಕೊಟ್ಟಿದ್ದಾನೆ, ನಮಗೋಸ್ಕರ ಸುಂದರ ಸೃಷ್ಟಿಯನ್ನು ಮಾಡಿದ್ದಾನೆ, ನಿಷ್ಠಾವಂತ ಪ್ರೀತಿ ತೋರಿಸಿದ್ದಾನೆ, ಅದ್ಭುತ ನಿರೀಕ್ಷೆ ಕೊಟ್ಟಿದ್ದಾನೆ. ಈ ಎಲ್ಲಾ ವಿಷ್ಯಗಳಿಗೆ ನಾವಾತನಿಗೆ ಕೃತಜ್ಞತೆ ಹೇಳಬೇಕು. ಹನ್ನಳಿಂದ ನಾವು ಇನ್ಯಾವ ಪಾಠ ಕಲೀಬಹುದು?
(7. ಹನ್ನ ಮತ್ತು ಅವಳ ಗಂಡ ತಪ್ಪದೆ ಎಲ್ಲಿಗೆ ಹೋಗ್ತಿದ್ರು?
7 ಹನ್ನಳಿಗೆ ಸಮಸ್ಯೆಗಳಿದ್ದರೂ ಗಂಡನ ಜೊತೆ ಶೀಲೋವಿನಲ್ಲಿದ್ದ ಯೆಹೋವನ ಆರಾಧನಾ ಸ್ಥಳಕ್ಕೆ ತಪ್ಪದೇ ಹೋಗುತ್ತಿದ್ಳು. (1 ಸಮು. 1:1-5) ಅವ್ಳು ದೇವದರ್ಶನ ಗುಡಾರದ ಹತ್ತಿರ ಇದ್ದಾಗ ಮಹಾ ಯಾಜಕನಾದ ಏಲಿ ಬಂದು ಅವ್ಳ ಪ್ರಾರ್ಥನೆಗೆ ಯೆಹೋವನು ಉತ್ತರ ಕೊಡುತ್ತಾನೆ ಎಂಬ ನಂಬಿಕೆ ತನಗಿದೆ ಅಂತ ಅವ್ಳಿಗೆ ಉತ್ತೇಜಿಸಿದನು. ಇದ್ರಿಂದ ಹನ್ನಳಿಗೆ ಸಾಂತ್ವನ ಸಿಕ್ಕಿತು.—1 ಸಮು. 1:9, 17.
8. ಕೂಟಗಳಿಂದ ನಮ್ಗೆ ಹೇಗೆ ಸಹಾಯ ಸಿಗುತ್ತೆ? ವಿವರಿಸಿ.
8 ನಾವು ಕೂಟಗಳಿಗೆ ತಪ್ಪದೇ ಹಾಜರಾದ್ರೆ ನಮ್ಗೆ ಶಾಂತಿ-ನೆಮ್ಮದಿ ಸಿಗುತ್ತೆ. ಕೂಟದ ಪ್ರಾರಂಭದ ಪ್ರಾರ್ಥನೆಯಲ್ಲಿ ನಮ್ಮೆಲ್ರಿಗೂ ಪವಿತ್ರಾತ್ಮ ಸಹಾಯ ಮಾಡುವಂತೆ ಬೇಡಿಕೊಳ್ಳಲಾಗುತ್ತೆ. ಶಾಂತಿ ಪವಿತ್ರಾತ್ಮದ ಫಲದಲ್ಲಿರೋ ಒಂದು ಅಂಶವಾಗಿದೆ. (ಗಲಾ. 5:22) ನಮ್ಗೆ ಒತ್ತಡಗಳಿದ್ದರೂ ನಾವು ಕೂಟಗಳಿಗೆ ಹಾಜರಾದ್ರೆ ಯೆಹೋವನಿಂದ ಮತ್ತು ಸಹೋದರ-ಸಹೋದರಿಯರಿಂದ ಪ್ರೋತ್ಸಾಹ ಸಿಗುತ್ತೆ, ಮನ್ಸಿಗೆ ಶಾಂತಿ-ನೆಮ್ಮದಿನೂ ಸಿಗುತ್ತೆ. ನಮ್ಗೆ ಸಮಾಧಾನ ಕೊಡಲಿಕ್ಕಾಗಿ ಯೆಹೋವನು ಉಪಯೋಗಿಸುವ ಎರಡು ಮುಖ್ಯ ವಿಧಗಳು ಪ್ರಾರ್ಥನೆ ಮತ್ತು ಕೂಟಗಳೇ ಆಗಿವೆ. (ಇಬ್ರಿ. 10:24, 25) ಹನ್ನಳ ಅನುಭವದಿಂದ ನಾವು ಇನ್ನೂ ಯಾವ ಪಾಠ ಕಲೀಬಹುದು ಅನ್ನೋದನ್ನ ಈಗ ನೋಡೋಣ.
9. (ಎ) ಹನ್ನಳ ಪರಿಸ್ಥಿತಿ ಬದಲಾಯ್ತಾ? ವಿವರಿಸಿ. (ಬಿ) ಅವ್ಳಿಗೆ ಯಾವುದು ಸಹಾಯ ಮಾಡಿತು?
9 ಹನ್ನಳಿಗಿದ್ದ ಕಷ್ಟಗಳು ತಕ್ಷಣ ಹೋಗಲಿಲ್ಲ. ಅವಳು ದೇವಗುಡಾರದಿಂದ ವಾಪಸ್ ಮನೆಗೆ ಹೋದ ಮೇಲೂ ಪೆನಿನ್ನಳ ಜೊತೆ ಅದೇ ಮನೇಲಿ ಇರಬೇಕಾಗಿತ್ತು. ಪೆನಿನ್ನ ಅವಳ ಜೊತೆ ನಡಕೊಳ್ತಿದ್ದ ರೀತಿಯನ್ನ ಬದಲಾಯಿಸಿಕೊಂಡಳು ಅಂತ ಬೈಬಲ್ ಹೇಳಲ್ಲ. ಹಾಗಾಗಿ ಅವಳಾಡುತ್ತಿದ್ದ ಚುಚ್ಚುಮಾತನ್ನ ಹನ್ನಳು ಇನ್ನೂ ಸಹಿಸಿಕೊಳ್ಳಬೇಕಾಗಿತ್ತು. ಆದ್ರೆ ಹನ್ನಳಿಗೆ ಬೇಜಾರಾಗಲಿಲ್ಲ. ಅವಳಿಗೆ ಮನಶ್ಶಾಂತಿ ಇತ್ತು. ಅವಳು ತನ್ನೆಲ್ಲಾ ಕಷ್ಟವನ್ನ ಯೆಹೋವನ ಕೈಗೆ ಒಪ್ಪಿಸಿದ ಮೇಲೆ ಮತ್ತೆ ಚಿಂತೆಯಲ್ಲಿ ಮುಳುಗಿಹೋಗಲಿಲ್ಲ ಅನ್ನೋದನ್ನ ನೆನಪಿಸಿಕೊಳ್ಳಿ. ಯೆಹೋವನ ಮೇಲೆ ಪೂರ್ತಿ ಆತುಕೊಂಡ್ಳು. ಯೆಹೋವನು ಅವ್ಳ ಪ್ರಾರ್ಥನೆಗೆ ಉತ್ತರ ಕೊಟ್ಟನು. ಅವ್ಳಿಗೆ ಮಕ್ಕಳಾದವು!—1 ಸಮು. 1:19, 20; 2:21.
10. ಹನ್ನಳ ಉದಾಹರಣೆಯಿಂದ ನಾವೇನು ಕಲಿಯಬಹುದು?
10 ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ರೂ ನಾವು ಮನಶ್ಶಾಂತಿಯನ್ನ ಪಡಕೊಳ್ಳಬಹುದು. ನಾವು ತುಂಬ ಪ್ರಾರ್ಥನೆ ಮಾಡಿದ್ರೂ, ತಪ್ಪದೇ ಕೂಟಗಳಿಗೆ ಹಾಜರಾದ್ರೂ ಕೆಲವು ಸಮಸ್ಯೆಗಳು ಪರಿಹಾರ ಆಗದೇ ಇರಬಹುದು. ಆದ್ರೆ ಯೆಹೋವನು ನಮ್ಗೆ ಬೇಕಾದ ಸಮಾಧಾನವನ್ನ ಕೊಡುತ್ತಾನೆ. ಇದನ್ನು ತಡೆಯಲು ಯಾರಿಂದಲೂ ಯಾವುದರಿಂದಲೂ ಆಗಲ್ಲ ಅಂತ ಹನ್ನಳ ಉದಾಹರಣೆಯಿಂದ ಕಲಿಯುತ್ತೇವೆ. ಯೆಹೋವನು ಯಾವತ್ತಿಗೂ ನಮ್ಮನ್ನು ಮರೆಯಲ್ಲ. ಇವತ್ತಲ್ಲ ನಾಳೆ ನಮ್ಮ ನಂಬಿಕೆಗೆ ಆತನು ತಕ್ಕ ಪ್ರತಿಫಲ ಕೊಡುತ್ತಾನೆ.—ಇಬ್ರಿ. 11:6.
ಅಪೊಸ್ತಲ ಪೌಲನಿಂದ ಕಲಿಯುವ ಪಾಠಗಳು
11. ಪೌಲನಿಗೆ ಚಿಂತೆಯಾಗಲಿಕ್ಕೆ ಯಾವೆಲ್ಲಾ ಕಾರಣಗಳಿದ್ದವು?
11 ಪೌಲನಿಗೆ ಚಿಂತೆಯಾಗೋಕೆ ಅನೇಕ ಕಾರಣಗಳಿದ್ದವು. ಉದಾಹರಣೆಗೆ, ಆತನ ಪ್ರೀತಿಯ ಸಹೋದರ ಸಹೋದರಿಯರು ಅನುಭವಿಸುತ್ತಿದ್ದ ಕಷ್ಟಗಳಿಂದಾಗಿ ಅವನ ಮನಸ್ಸು ಭಾರವಾಗಿತ್ತು. (2 ಕೊರಿಂ. 2:4; 11:28) ಅಪೊಸ್ತಲನಾಗಿ ಆತನು ಸೇವೆ ಮಾಡ್ತಿದ್ದಾಗ ವಿರೋಧಿಗಳು ಆತನನ್ನು ಹೊಡೆದ್ರು, ಜೈಲಿಗೂ ಹಾಕಿದ್ರು. ‘ಆಹಾರದ ಕೊರತೆಯಂಥ’ ಸಮಸ್ಯೆಯನ್ನೂ ಆತನು ಅನುಭವಿಸ್ಬೇಕಾಯ್ತು. (ಫಿಲಿ. 4:12) ಕಡಿಮೆ ಪಕ್ಷ ಮೂರು ಸಲ ಆತನು ಪ್ರಯಾಣಿಸುತ್ತಿದ್ದ ಹಡಗುಗಳು ಒಡೆದುಹೋದವು. ಇದೆಲ್ಲಾ ಆದ್ಮೇಲೆ, ಆತನು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗೆಲ್ಲ ಎಷ್ಟು ಚಿಂತೆ-ಗಾಬರಿ ಆಗಿರಬಹುದು ಅಂತ ಯೋಚಿಸಿ. (2 ಕೊರಿಂ. 11:23-27) ಈ ಎಲ್ಲಾ ಚಿಂತೆಗಳಿಂದ ಪೌಲನು ಹೇಗೆ ಹೊರಬಂದನು?
12. ಯಾವುದ್ರಿಂದ ಪೌಲನ ಚಿಂತೆ ಕಡಿಮೆಯಾಯಿತು?
12 ಸಹೋದರ ಸಹೋದರಿಯರಿಗೆ ಕಷ್ಟಗಳು ಎದುರಾದಾಗ ಪೌಲನಿಗೆ ಚಿಂತೆಯಾಗಿರುತ್ತೆ. ಆದ್ರೆ ಅವ್ರೆಲ್ಲರ ಸಮಸ್ಯೆಗಳನ್ನ ಆತನೊಬ್ಬನೇ ಸರಿಮಾಡಲಿಕ್ಕೆ ಹೋಗಲಿಲ್ಲ. ತನ್ನೊಬ್ಬನಿಂದ ಇದು ಸಾಧ್ಯವಿಲ್ಲ ಅಂತ ಆತನು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು. ಹಾಗಾಗಿ, ಸಭೆಗೆ ಬೇಕಾದ ಸಹಾಯವನ್ನು ಮಾಡುವಂತೆ ಬೇರೆಯವರತ್ರ ಕೇಳ್ಕೊಂಡನು. ಉದಾಹರಣೆಗೆ, ನಂಬಿಗಸ್ತ ವ್ಯಕ್ತಿಗಳಾಗಿದ್ದಂಥ ತಿಮೊಥೆಯ ಮತ್ತು ತೀತನಿಗೆ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಟ್ಟನು. ಈ ಸಹೋದರರು ಮಾಡಿದ ಸೇವೆಯಿಂದ ಪೌಲನ ಚಿಂತೆ ಖಂಡಿತ ಕಡಿಮೆಯಾಗಿರುತ್ತೆ.—ಫಿಲಿ. 2:19, 20; ತೀತ 1:1, 4, 5.
13. ಹಿರಿಯರು ಪೌಲನನ್ನು ಹೇಗೆ ಅನುಕರಿಸಬಹುದು?
13 ಬೇರೆಯವ್ರ ಸಹಾಯವನ್ನ ಕೇಳಿಕೊಳ್ಳಿ. ಸಭೆಯಲ್ಲಿರೋ ಅನೇಕರು ಕಷ್ಟಗಳನ್ನು ಅನುಭವಿಸ್ತಾ ಇರೋದ್ರಿಂದ ಪೌಲನಂತೆ ಇಂದು ಕೂಡ ಕಾಳಜಿ ತೋರಿಸುವಂಥ ಹಿರಿಯರಿಗೆ ಚಿಂತೆಯಾಗುತ್ತೆ. ಆದ್ರೆ ಒಬ್ಬ ಹಿರಿಯನು ಸಭೆಯಲ್ಲಿರೋ ಎಲ್ರಿಗೆ ಸಹಾಯ ಮಾಡಕ್ಕೆ ಆಗಲ್ಲ. ಇದನ್ನು ಹಿರಿಯರು ಅರ್ಥಮಾಡಿಕೊಂಡ್ರೆ ಕೆಲವು ಜವಾಬ್ದಾರಿಗಳನ್ನು ಬೇರೆ ಅರ್ಹ ಸಹೋದರರಿಗೂ ಕೊಡ್ತಾರೆ ಮತ್ತು ದೇವರ ಮಂದೆಯನ್ನು ನೋಡಿಕೊಳ್ಳೋದು ಹೇಗೆ ಅಂತ ಯುವ ಸಹೋದರರಿಗೆ ತರಬೇತಿಯನ್ನೂ ಕೊಡ್ತಾರೆ.—2 ತಿಮೊ. 2:2.
14. (ಎ) ಪೌಲನು ಯಾವುದರ ಬಗ್ಗೆ ಚಿಂತೆ ಮಾಡ್ಲಿಲ್ಲ? (ಬಿ) ನಾವು ಆತನ ಉದಾಹರಣೆಯಿಂದ ಏನು ಕಲೀಬಹುದು?
14 ಬೇರೆಯವ್ರಿಂದ ನಿಮ್ಗೆ ಸಾಂತ್ವನ ಬೇಕು ಅನ್ನೋದನ್ನ ಒಪ್ಕೊಳ್ಳಿ. ಪೌಲನು ದೀನನಾಗಿದ್ದನು. ಹಾಗಾಗಿ ತನ್ನ ಸ್ನೇಹಿತರಿಂದ ತನಗೆ ಸಾಂತ್ವನ ಬೇಕು ಅನ್ನೋದನ್ನ ಆತನು ಒಪ್ಕೊಂಡನು. ಬೇರೆಯವ್ರು ತನಗೆ ಸಾಂತ್ವನ ಕೊಟ್ರು ಅನ್ನೋದನ್ನ ಒಪ್ಕೊಂಡ್ರೆ ಜನ ‘ಇವನೊಬ್ಬ ಬಲಹೀನ ವ್ಯಕ್ತಿ’ ಅಂತ ನೆನಸ್ತಾರೆ ಎಂದು ಆತನು ಚಿಂತೆ ಮಾಡ್ಲಿಲ್ಲ. ಫಿಲೆಮೋನನಿಗೆ ಬರೆದ ಪತ್ರದಲ್ಲಿ ಪೌಲ ಹೀಗೆ ಹೇಳಿದ್ನು: “ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಆನಂದವೂ ಸಾಂತ್ವನವೂ ಉಂಟಾಯಿತು.” (ಫಿಲೆ. 7) ತಾನು ಕಷ್ಟದಲ್ಲಿದ್ದಾಗ ಯಾರೆಲ್ಲಾ ಸಹಾಯ ಮಾಡಿದ್ದರೋ ಅವರ ಬಗ್ಗೆನೂ ಪೌಲನು ಹೇಳಿಕೊಂಡಿದ್ದಾನೆ. (ಕೊಲೊ. 4:7-11) ನಮ್ಗೆ ಪ್ರೋತ್ಸಾಹದ ಅಗತ್ಯ ಇದೆ ಅನ್ನೋದನ್ನ ನಾವು ದೀನತೆಯಿಂದ ಒಪ್ಕೊಂಡ್ರೆ ನಮ್ಮ ಸಹೋದರ ಸಹೋದರಿಯರು ನಮ್ಗೆ ಬೇಕಾದ ಸಹಾಯವನ್ನ ಸಂತೋಷದಿಂದ ಕೊಡ್ತಾರೆ.
15. ಪೌಲನು ತುಂಬ ಕಷ್ಟದಲ್ಲಿದ್ದಾಗ ಏನು ಮಾಡಿದ್ನು?
15 ದೇವ್ರ ವಾಕ್ಯದ ಸಹಾಯ ಪಡ್ಕೊಳ್ಳಿ. ದೇವ್ರ ವಾಕ್ಯದಿಂದ ತನಗೆ ಸಾಂತ್ವನ ಸಿಗುತ್ತೆ ಅಂತ ಪೌಲನಿಗೆ ಗೊತ್ತಿತ್ತು. (ರೋಮ. 15:4) ಬಂದ ಕಷ್ಟಗಳನ್ನು ಎದುರಿಸೋಕೆ ಬೇಕಾದ ವಿವೇಕವನ್ನು ಅದು ಕೊಡುತ್ತೆ ಅಂತನೂ ಆತನಿಗೆ ಗೊತ್ತಿತ್ತು. (2 ತಿಮೊ. 3:15, 16) ಆತನು ಎರಡನೇ ಬಾರಿ ರೋಮ್ನಲ್ಲಿ ಜೈಲಿಗೆ ಹೋದಾಗ ತಾನಿನ್ನು ಹೆಚ್ಚು ಕಾಲ ಬದುಕಲ್ಲ ಅಂತ ಆತನಿಗೆ ಅನಿಸ್ತು. ಇಂಥ ಕಷ್ಟದ ಸಮಯದಲ್ಲಿ ಪೌಲ ಏನು ಮಾಡಿದ್ನು? ತಿಮೊಥೆಯನಿಗೆ ತನ್ನ ಹತ್ರ ಬೇಗ ಬರುವಂತೆ ಮತ್ತು ಬರುತ್ತಾ “ಸುರುಳಿಗಳನ್ನೂ” ತಗೊಂಡು ಬರುವಂತೆ ಹೇಳಿದ್ನು. (2 ತಿಮೊ. 4:6, 7, 9, 13) ಯಾಕೆ? ಬಹುಶಃ ಆ ಸುರುಳಿಗಳಲ್ಲಿ ಹೀಬ್ರು ಶಾಸ್ತ್ರಗ್ರಂಥದ ಕೆಲವು ಭಾಗಗಳಿದ್ದವು. ಹಾಗಾಗಿ, ವೈಯಕ್ತಿಕ ಅಧ್ಯಯನ ಮಾಡುವುದಕ್ಕಾಗಿ ಅದನ್ನು ತರುವಂತೆ ಪೌಲನು ಕೇಳ್ಕೊಂಡಿರಬಹುದು. ದೇವರ ವಾಕ್ಯವನ್ನ ನಾವು ಸಹ ಪೌಲನಂತೆ ತಪ್ಪದೇ ಅಧ್ಯಯನ ಮಾಡಿದ್ರೆ ನಮ್ಗೆ ಯಾವುದೇ ಕಷ್ಟ ಬಂದ್ರೂ ಯೆಹೋವನು ಅದ್ರ ಮೂಲಕ ಬೇಕಾದ ಸಮಾಧಾನವನ್ನ ಕೊಡ್ತಾನೆ.
ರಾಜ ದಾವೀದನಿಂದ ಕಲಿಯುವ ಪಾಠಗಳು
16. ಗಂಭೀರ ತಪ್ಪು ಮಾಡಿದಾಗ ದಾವೀದನಿಗೆ ಹೇಗನಿಸ್ತು?
16 ದಾವೀದನು ಗಂಭೀರ ತಪ್ಪು ಮಾಡಿದ್ರಿಂದ ಅವ್ನ ಮನಸ್ಸಾಕ್ಷಿ ಚುಚ್ಚುತ್ತಿತ್ತು. ಅವ್ನು ಬತ್ಷೆಬೆ ಜೊತೆ ವ್ಯಭಿಚಾರ ಮಾಡಿದ್ನು ಮತ್ತು ಅವ್ಳ ಗಂಡನ ಕೊಲೆ ಮಾಡಿಸಿದ್ನು. ಸ್ವಲ್ಪ ಸಮಯದವರೆಗೆ ಆ ತಪ್ಪುಗಳನ್ನ ಮುಚ್ಚಿಹಾಕಲಿಕ್ಕೆ ಪ್ರಯತ್ನಿಸಿದ್ನು. (2 ಸಮು. 12:9) ಅವ್ನ ಮನಸ್ಸಾಕ್ಷಿ ಚುಚ್ಚಿದ್ರೂ ಮೊದಮೊದ್ಲಿಗೆ ಅದ್ರ ಕಡೆಗೆ ಗಮನ ಕೊಡಲಿಲ್ಲ. ಇದ್ರಿಂದಾಗಿ ಯೆಹೋವನೊಟ್ಟಿಗಿನ ಸಂಬಂಧ ಹಾಳಾಯ್ತು. ಮಾನಸಿಕವಾಗಿ ಒತ್ತಡವನ್ನೂ ಅನುಭವಿಸಿದ್ನು ಮತ್ತು ಅವ್ನ ಆರೋಗ್ಯನೂ ಹಾಳಾಯ್ತು. (ಕೀರ್ತ. 32:3, 4) ಮಾಡಿದ ತಪ್ಪಿನಿಂದ ದಾವೀದನಿಗೆ ಬಂದ ಚಿಂತೆಯಿಂದ ಹೊರಬರಲು ಅವ್ನಿಗೆ ಯಾವುದು ಸಹಾಯ ಮಾಡ್ತು? ನಾವು ಗಂಭೀರ ತಪ್ಪು ಮಾಡಿದಾಗ ನಮ್ಗೆ ಯಾವುದ್ರಿಂದ ಸಹಾಯ ಸಿಗುತ್ತೆ?
17. ದಾವೀದನು ಮನಸಾರೆ ಪಶ್ಚಾತ್ತಾಪಪಟ್ಟನು ಅನ್ನೋದು ಕೀರ್ತನೆ 51:1-4 ರಲ್ಲಿರುವ ಮಾತುಗಳಿಂದ ಹೇಗೆ ಗೊತ್ತಾಗುತ್ತೆ?
17 ಪ್ರಾರ್ಥನೆಯಲ್ಲಿ ಕ್ಷಮೆ ಕೇಳಿ. ದಾವೀದನು ಸ್ವಲ್ಪ ಸಮಯದ ನಂತ್ರ ಯೆಹೋವನಿಗೆ ಪ್ರಾರ್ಥಿಸಿದನು. ಅವ್ನು ತಾನು ಮಾಡಿದ ತಪ್ಪಿಗೆ ಮನಸಾರೆ ಪಶ್ಚಾತ್ತಾಪಪಟ್ಟನು ಮತ್ತು ಮಾಡಿದ ತಪ್ಪೆಲ್ಲವನ್ನು ಯೆಹೋವನ ಹತ್ರ ಹೇಳ್ಕೊಂಡನು. (ಕೀರ್ತನೆ 51:1-4 ಓದಿ.) ಇದ್ರಿಂದ ಅವ್ನಿಗೆ ಮನಶ್ಶಾಂತಿ ಸಿಗ್ತು, ಪುನಃ ಸಂತೋಷದಿಂದ ಇರಲಿಕ್ಕೆ ಸಾಧ್ಯವಾಯ್ತು. (ಕೀರ್ತ. 32:1, 2, 4, 5) ನೀವು ಒಂದು ಗಂಭೀರ ತಪ್ಪು ಮಾಡಿದ್ರೆ ಅದನ್ನ ಮುಚ್ಚಿಡಬೇಡಿ. ಬದ್ಲಿಗೆ ಪ್ರಾರ್ಥನೆಯಲ್ಲಿ ನಿಮ್ಮ ತಪ್ಪನ್ನೆಲ್ಲಾ ಯೆಹೋವನ ಹತ್ರ ಹೇಳ್ಕೊಳ್ಳಿ. ಆಗ ನಿಮ್ಗೆ ಮನಶ್ಶಾಂತಿ ಸಿಗುತ್ತೆ ಮತ್ತು ‘ತಪ್ಪು ಮಾಡ್ಬಿಟ್ಟೆ’ ಅನ್ನೋ ದೋಷಿ ಮನೋಭಾವ ಕಡಿಮೆಯಾಗುತ್ತೆ. ಆದ್ರೆ ಯೆಹೋವನಿಗೆ ನೀವು ಪುನಃ ಆಪ್ತರಾಗಬೇಕೆಂದ್ರೆ ಪ್ರಾರ್ಥನೆ ಮಾಡಿದರಷ್ಟೇ ಸಾಲದು. ಇನ್ನೂ ಕೆಲವು ವಿಷ್ಯಗಳನ್ನು ಮಾಡಬೇಕು.
18. ಶಿಸ್ತು ಕೊಟ್ಟಾಗ ದಾವೀದನು ಹೇಗೆ ಪ್ರತಿಕ್ರಿಯಿಸಿದನು?
18 ಶಿಸ್ತನ್ನು ಸ್ವೀಕರಿಸಿ. ದಾವೀದನ ತಪ್ಪನ್ನು ಮನಗಾಣಿಸೋಕೆ ಯೆಹೋವನು ಪ್ರವಾದಿ ನಾತಾನನನ್ನು ಕಳುಹಿಸಿದಾಗ ದಾವೀದನು ತನ್ನನ್ನು ಸಮರ್ಥಿಸಿಕೊಳ್ಳಲಿಲ್ಲ ಅಥವಾ ತಾನು ಮಾಡಿರೋದೇನು ಅಷ್ಟು ದೊಡ್ಡ ತಪ್ಪಲ್ಲ ಅಂತ ವಾದ ಮಾಡ್ಲಿಲ್ಲ. ಬತ್ಷೆಬೆಯ ಗಂಡನ ವಿರುದ್ಧ ಮಾತ್ರವಲ್ಲ, ಯೆಹೋವನ ವಿರುದ್ಧ ಸಹ ತಪ್ಪು ಮಾಡಿದ್ದೇನೆ ಅಂತ ಅವ್ನು ತಕ್ಷಣ ಒಪ್ಪಿಕೊಂಡನು. ದಾವೀದನು ಯೆಹೋವನಿಂದ ಬಂದ ಶಿಸ್ತನ್ನು ಸ್ವೀಕರಿಸಿದನು ಮತ್ತು ಯೆಹೋವನು ಅವ್ನನ್ನ ಕ್ಷಮಿಸಿದನು. (2 ಸಮು. 12:10-14) ನಾವು ಒಂದು ವೇಳೆ ಗಂಭೀರ ತಪ್ಪು ಮಾಡಿದ್ರೆ ನಮ್ಮನ್ನು ಪರಿಪಾಲಿಸಲಿಕ್ಕಾಗಿ ಯೆಹೋವನು ನೇಮಿಸಿರುವ ಹಿರಿಯರ ಹತ್ರ ಮಾತಾಡಬೇಕು. (ಯಾಕೋ. 5:14, 15) ನಾವು ಸಮರ್ಥಿಸಿಕೊಳ್ಳಲಿಕ್ಕೆ ಪ್ರಯತ್ನಿಸಬಾರದು. ನಾವೆಷ್ಟು ಬೇಗ ಶಿಸ್ತನ್ನು ಮನಸಾರೆ ಸ್ವೀಕರಿಸುತ್ತೇವೋ ಅಷ್ಟು ಬೇಗ ನಾವು ಕಳಕೊಂಡಿರೋ ಮನಶ್ಶಾಂತಿ ಮತ್ತು ಸಂತೋಷ ಪುನಃ ಸಿಗುತ್ತೆ.
19. ನಾವು ಯಾವ ದೃಢತೀರ್ಮಾನ ಮಾಡಬೇಕು?
19 ಅದೇ ತಪ್ಪನ್ನ ಪುನಃ ಮಾಡದಿರಲು ದೃಢತೀರ್ಮಾನ ಮಾಡಿ. ಅದೇ ತಪ್ಪನ್ನ ಮತ್ತೆ ಮಾಡದಿರಲು ತನಗೆ ಯೆಹೋವನ ಸಹಾಯದ ಅಗತ್ಯವಿದೆ ಅನ್ನೋದು ರಾಜ ದಾವೀದನಿಗೆ ಗೊತ್ತಿತ್ತು. (ಕೀರ್ತ. 51:7, 10, 12) ಯೆಹೋವನು ದಾವೀದನನ್ನು ಕ್ಷಮಿಸಿದ ಮೇಲೆ, ದಾವೀದನು ಇನ್ನೆಂದೂ ತನ್ನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಬರೋಕೆ ಬಿಡಬಾರ್ದು ಅಂತ ದೃಢತೀರ್ಮಾನ ಮಾಡಿದ್ನು. ಇದ್ರಿಂದಾಗಿ ಅವನು ಮನಶ್ಶಾಂತಿಯನ್ನ ಪುನಃ ಪಡಕೊಂಡನು.
20. ಯೆಹೋವನ ಕ್ಷಮೆಯನ್ನು ನಾವು ಮಾನ್ಯಮಾಡುತ್ತೇವಂತ ಹೇಗೆ ತೋರಿಸಿಕೊಡ್ಬಹುದು?
20 ನಾವು ಕ್ಷಮೆಗಾಗಿ ಪ್ರಾರ್ಥಿಸುವಾಗ, ಶಿಸ್ತನ್ನು ಸ್ವೀಕರಿಸುವಾಗ ಮತ್ತು ಮಾಡಿದ ತಪ್ಪನ್ನು ಪುನಃ ಮಾಡದೇ ಇರಲಿಕ್ಕೆ ಪ್ರಯತ್ನಿಸುವಾಗ ಯೆಹೋವನ ಕ್ಷಮೆಯನ್ನು ಮಾನ್ಯಮಾಡುತ್ತೇವಂತ ತೋರಿಸಿಕೊಟ್ಟಂತಾಗುತ್ತೆ. ಅಷ್ಟೇ ಅಲ್ಲ, ನಮ್ಗೆ ಪುನಃ ಮನಶ್ಶಾಂತಿನೂ ಸಿಗುತ್ತೆ. ಈ ಮಾತು ಸತ್ಯ ಅಂತ ಹಿಂದೆ ಗಂಭೀರ ತಪ್ಪು ಮಾಡಿದ್ದ ಜೇಮ್ಸ್ ಎಂಬ ಸಹೋದರ ಒಪ್ಕೊಳ್ತಾನೆ. ಅವನು ಹೇಳೋದು: “ನಾನು ಹಿರಿಯರ ಹತ್ರ ನನ್ನ ತಪ್ಪನ್ನ ಒಪ್ಕೊಂಡಾಗ ನನ್ನ ಎದೆ ಮೇಲಿದ್ದ ಭಾರವೆಲ್ಲಾ ಇಳಿದಂತಾಯಿತು. ನನಗೆ ಪುನಃ ಮನ್ಸಿಗೆ ಶಾಂತಿ-ಸಮಾಧಾನ ಸಿಕ್ತು.” “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಅನ್ನೋದು ಎಷ್ಟು ಸಂತೋಷ ಕೊಡುತ್ತಲ್ವಾ!—ಕೀರ್ತ. 34:18.
21. ಯೆಹೋವನಿಂದ ಸಮಾಧಾನ ಸಿಗ್ಬೇಕಂದ್ರೆ ನಾವೇನು ಮಾಡ್ಬೇಕು?
21 ಕಡೇ ದಿವಸಗಳು ಇನ್ನೇನು ಮುಗಿಯುತ್ತಾ ಬರುತ್ತಿರೋದ್ರಿಂದ ನಮ್ಗೆ ಕಷ್ಟಗಳು ಇನ್ನೂ ಹೆಚ್ಚಾಗುತ್ತೆ. ನಿಮ್ಗೆ ಯಾವುದಾದ್ರೂ ವಿಷ್ಯದ ಬಗ್ಗೆ ಚಿಂತೆಯಾದ್ರೆ ತಕ್ಷಣ ಯೆಹೋವನ ಸಹಾಯಕ್ಕಾಗಿ ಪ್ರಾರ್ಥನೆ ಮಾಡಿ. ಬೈಬಲನ್ನು ಶ್ರದ್ಧೆಯಿಂದ ಓದಿ. ಹನ್ನ, ಪೌಲ ಮತ್ತು ದಾವೀದನ ಮಾದರಿಯನ್ನು ಅನ್ವಯಿಸಿಕೊಳ್ಳಿ. ನಿಮ್ಗೆ ಯಾಕೆ ಚಿಂತೆ ಆಗ್ತಿದೆ ಅನ್ನೋದನ್ನ ನೀವು ಅರ್ಥಮಾಡಿಕೊಳ್ಳೋಕೆ ಸಹಾಯ ಮಾಡುವಂತೆ ಯೆಹೋವನ ಹತ್ರ ಬೇಡಿಕೊಳ್ಳಿ. (ಕೀರ್ತ. 139:23) ನಿಮ್ಮ ಚಿಂತಾಭಾರವನ್ನೆಲ್ಲಾ ಆತನಿಗೆ ಒಪ್ಪಿಸಿಬಿಡಿ. ಅದ್ರಲ್ಲೂ ನಿಮ್ಮ ಕೈಯಲ್ಲಿ ಏನೂ ಮಾಡಕ್ಕಾಗದೇ ಇದ್ದಾಗ, ಇದನ್ನು ಮಾಡೋದು ತುಂಬ ಮುಖ್ಯ. ಇದನ್ನೆಲ್ಲಾ ಮಾಡಿದ್ರೆ ಕೀರ್ತನೆಗಾರನಂತೆ ನೀವು ಸಹ ಯೆಹೋವನಿಗೆ ಹೀಗೆ ಹೇಳಬಹುದು: “ಚಿಂತೆಗಳು ನನ್ನನ್ನು ಮುತ್ತಿಕೊಂಡಿದ್ದಾಗ, ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ.”—ಕೀರ್ತ. 94:19, NW.
ಗೀತೆ 22 “ಯೆಹೋವ ನನಗೆ ಕುರುಬನು”
^ ಪ್ಯಾರ. 5 ಸಮಸ್ಯೆಗಳಿಂದಾಗಿ ನಮ್ಮೆಲ್ರಿಗೂ ಒಂದಲ್ಲ ಒಂದು ಸಮ್ಯದಲ್ಲಿ ಚಿಂತೆ ಕಾಡ್ಬಹುದು. ಚಿಂತೆಯಲ್ಲಿ ಮುಳುಗಿಹೋಗಿದ್ದ ಬೈಬಲ್ ಕಾಲದ ಯೆಹೋವನ ಮೂರು ಸೇವಕರ ಉದಾಹರಣೆಗಳನ್ನ ಈ ಲೇಖನದಲ್ಲಿ ನೋಡಲಿದ್ದೇವೆ. ಅವ್ರಲ್ಲಿ ಪ್ರತಿಯೊಬ್ರಿಗೂ ಯೆಹೋವನು ಹೇಗೆ ಸಾಂತ್ವನ, ಸಮಾಧಾನ ಕೊಟ್ನು ಅನ್ನೋದನ್ನ ನಾವು ನೋಡಲಿದ್ದೇವೆ.
^ ಪ್ಯಾರ. 1 ಪದ ವಿವರಣೆ: ಯಾವುದಾದ್ರೂ ಒಂದು ವಿಷ್ಯದ ಬಗ್ಗೆ ನಮ್ಗೆ ಕಳವಳ, ಭಯ ಅಥವಾ ಅತಿಯಾದ ಯೋಚ್ನೆ ಇದ್ರೆ ಅದನ್ನೇ ಚಿಂತೆ ಅಂತ ಹೇಳ್ಬಹುದು. ಈ ಚಿಂತೆ ಹಣದ ಸಮಸ್ಯೆಯಿಂದ, ಆರೋಗ್ಯ ಸಮಸ್ಯೆಯಿಂದ, ಕುಟುಂಬದಲ್ಲಿರುವ ಸಮಸ್ಯೆಯಿಂದ ಅಥವಾ ಬೇರೆ ಯಾವುದಾದ್ರೂ ವಿಷ್ಯಗಳಿಂದ ಬರಬಹುದು. ನಾವು ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಅಥವಾ ಮುಂದೆ ಬರೋ ಕಷ್ಟಗಳ ಬಗ್ಗೆ ಯೋಚ್ಸಿ ನಮ್ಗೆ ಚಿಂತೆಯಾಗ್ಬಹುದು.