ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಬೇರೆಯವ್ರ ಮಾದರಿಯಿಂದ ಕಲಿತಿದ್ರಿಂದ ಎಷ್ಟೋ ಆಶೀರ್ವಾದ ಸಿಕ್ತು

ಬೇರೆಯವ್ರ ಮಾದರಿಯಿಂದ ಕಲಿತಿದ್ರಿಂದ ಎಷ್ಟೋ ಆಶೀರ್ವಾದ ಸಿಕ್ತು

ನಾನು ಚಿಕ್ಕವನಾಗಿದ್ದಾಗ ನಂಗೆ ಸೇವೆಯಲ್ಲಿ ಮಾತಾಡೋಕೆ ತುಂಬ ಕಷ್ಟ ಆಗ್ತಿತ್ತು. ದೊಡ್ಡವನಾಗ್ತಾ ಹೋದ ಹಾಗೆ ಯಾವ ನೇಮಕಗಳನ್ನು ಮಾಡೋ ಅರ್ಹತೆ ನನಗಿಲ್ಲ ಅಂತ ಅಂದುಕೊಂಡಿದ್ದೆನೋ ಆ ನೇಮಕಗಳೇ ನಂಗೆ ಸಿಕ್ಕಿದ್ವು. ನನ್ನ ಭಯನ ಮೆಟ್ಟಿನಿಲ್ಲೋಕೆ ಮತ್ತು ನನ್ನ 58 ವರ್ಷದ ಪೂರ್ಣ ಸಮಯದ ಸೇವೆಯಲ್ಲಿ ಅದ್ಭುತ ಆಶೀರ್ವಾದಗಳನ್ನು ಪಡೆಯೋಕೆ ಸಹಾಯ ಮಾಡಿದ ಕೆಲವು ವ್ಯಕ್ತಿಗಳ ಉದಾಹರಣೆಗಳನ್ನು ಈಗ ಹೇಳ್ತೀನಿ.

ನಾನು ಹುಟ್ಟಿದ್ದು ಕೆನಡದ ಕ್ವಿಬೆಕ್‌ ಪ್ರಾಂತ್ಯದಲ್ಲಿ. ಅಲ್ಲಿನ ಭಾಷೆ ಫ್ರೆಂಚ್‌ ಆಗಿತ್ತು. ನನ್ನ ಹೆತ್ತವರಾದ ಲೂಯಿ ಮತ್ತು ಝೇಲಿಯ ನನ್ನನ್ನ ಪ್ರೀತಿ-ವಾತ್ಸಲ್ಯದಿಂದ ಬೆಳೆಸಿದ್ರು. ನಮ್ಮಪ್ಪ ನಾಚಿಕೆ ಸ್ವಭಾವದವರಾಗಿದ್ರು, ಅವ್ರಿಗೆ ಓದೋದಂದ್ರೆ ತುಂಬ ಇಷ್ಟ ಆಗ್ತಿತ್ತು. ನಂಗೆ ಬರೆಯೋದಂದ್ರೆ ಇಷ್ಟ ಇತ್ತು. ಹಾಗಾಗಿ ದೊಡ್ಡವನಾದ ಮೇಲೆ ಪತ್ರಕರ್ತ ಆಗ್ಬೇಕು ಅಂದುಕೊಂಡಿದ್ದೆ.

ನಾನು ಸುಮಾರು 12 ವಯಸ್ಸಿನವನಾಗಿದ್ದಾಗ ನನ್ನ ಅಪ್ಪನ ಜೊತೆ ಕೆಲ್ಸ ಮಾಡ್ತಿದ್ದ ರಡಾಲ್ಫ್‌ ಸೂಸಿಯವ್ರು ತಮ್ಮ ಫ್ರೆಂಡ್‌ ಜೊತೆ ನಮ್ಮನೆಗೆ ಬಂದ್ರು. ಅವ್ರು ಯೆಹೋವನ ಸಾಕ್ಷಿಗಳಾಗಿದ್ರು. ನಂಗೆ ಸಾಕ್ಷಿಗಳ ಬಗ್ಗೆ ಅಷ್ಟೊಂದು ಗೊತ್ತಿರ್ಲಿಲ್ಲ, ಅವ್ರ ಧರ್ಮದ ಬಗ್ಗೆ ನಂಗೆ ಆಸಕ್ತಿನೂ ಇರ್ಲಿಲ್ಲ. ಆದ್ರೆ ಏನೇ ಪ್ರಶ್ನೆ ಕೇಳಿದ್ರೂ ಬೈಬಲಿಂದ ಆಧಾರ ತೋರಿಸ್ತಾ ವಿವರಿಸ್ತಿದ್ದ ರೀತಿ ನಂಗೆ ಇಷ್ಟ ಆಗ್ತಿತ್ತು. ನನ್ನ ಹೆತ್ತವ್ರಿಗೂ ಅದು ತುಂಬ ಇಷ್ಟ ಆಯ್ತು. ಅದಕ್ಕೆ ಅವ್ರು ಬೈಬಲನ್ನು ಕಲಿಯೋಕೆ ಒಪ್ಕೊಂಡ್ರು.

ಆಗ ನಾನೊಂದು ಕ್ಯಾಥೊಲಿಕ್‌ ಚರ್ಚಿನ ಶಾಲೆಗೆ ಹೋಗ್ತಿದ್ದೆ. ಬೈಬಲಿಂದ ಕಲಿತ ವಿಷ್ಯನ ನನ್ನ ಕ್ಲಾಸಲ್ಲಿರೋ ಸ್ನೇಹಿತರಿಗೆ ಹೇಳ್ತಿದ್ದೆ. ಈ ರೀತಿ ಮಾತಾಡ್ವಾಗ ನನ್ನ ಟೀಚರ್‌ಗಳು ಒಂದ್ಸರಿ ಕೇಳಿಸಿಕೊಂಡುಬಿಟ್ರು. ಅವ್ರು ಚರ್ಚಿನ ಪಾದ್ರಿಗಳಾಗಿದ್ರು. ಅವ್ರು ನಾನು ಹೇಳ್ತಿದ್ದದ್ದು ತಪ್ಪು ಅಂತ ಬೈಬಲಿಂದ ತೋರಿಸಲಿಲ್ಲ. ಅವರಲ್ಲೊಬ್ಬರು ನಾನು ಬಂಡಾಯಗಾರ ಅಂತ ಇಡೀ ಕ್ಲಾಸೆದುರು ಆರೋಪ ಹಾಕಿದ್ರು. ಈ ಪರಿಸ್ಥಿತಿನ ಎದುರಿಸೋದು ತುಂಬ ಕಷ್ಟವಾದ್ರೂ ಇದ್ರಿಂದ ಒಳ್ಳೇದೇ ಆಯ್ತು. ಶಾಲೆಯಲ್ಲಿ ಧರ್ಮದ ಬಗ್ಗೆ ಕಲಿಸ್ತಿದ್ದ ವಿಷ್ಯವೆಲ್ಲಾ ಬೈಬಲಿನ ಪ್ರಕಾರ ಇಲ್ಲ ಅಂತ ನಂಗೆ ಗೊತ್ತಾಯ್ತು. ಇನ್ನು ಈ ಶಾಲೆಯಲ್ಲಿ ಇರೋದು ಸರಿಯಲ್ಲ ಅಂತ ಅರ್ಥಮಾಡ್ಕೊಂಡೆ. ಇದ್ರ ಬಗ್ಗೆ ಹೆತ್ತವರ ಹತ್ರ ಮಾತಾಡಿ ಶಾಲೆನ ಬದಲಾಯಿಸಿದೆ.

ಸೇವೆಯಲ್ಲಿ ಆನಂದಿಸಲು ಕಲಿತೆ

ನಾನು ಬೈಬಲ್‌ ಕಲಿಯೋದನ್ನು ಮುಂದುವರಿಸಿದೆ. ಆದ್ರೆ ಅಷ್ಟು ಬೇಗ ಪ್ರಗತಿ ಮಾಡ್ಲಿಲ್ಲ. ಯಾಕೆಂದ್ರೆ ಮನೆಯಿಂದ ಮನೆಗೆ ಹೋಗಿ ಸಾರೋದಂದ್ರೆ ಭಯ ಆಗ್ತಿತ್ತು. ಜನ್ರ ಮೇಲೆ ಕ್ಯಾಥೊಲಿಕ್‌ ಚರ್ಚಿನ ಪ್ರಭಾವ ತುಂಬ ಇತ್ತು ಮತ್ತು ಚರ್ಚಿನವ್ರು ಸಾರುವ ಕೆಲಸವನ್ನ ತುಂಬ ವಿರೋಧಿಸ್ತಿದ್ರು. ಕ್ವಿಬೆಕ್‌ನ ಅಧಿಕಾರಿಯಾಗಿದ್ದ ಮಾರಿಸ್‌ ಡ್ಯೂಪ್ಲೆಸಿ ಚರ್ಚಿಗೆ ಆಪ್ತರಾಗಿದ್ರು. ಅವ್ರ ಬೆಂಬಲ ಇದ್ದದ್ರಿಂದ ಜನ್ರು ಗುಂಪುಗುಂಪಾಗಿ ಸಾಕ್ಷಿಗಳ ಮೇಲೆ ಆಕ್ರಮಣ ಮಾಡ್ತಿದ್ರು. ಹಾಗಾಗಿ ಸಾರಬೇಕಂದ್ರೆ ನಿಜವಾಗಿಯೂ ಧೈರ್ಯ ಬೇಕಿತ್ತು.

ಈ ನನ್ನ ಭಯನ ಮೆಟ್ಟಿನಿಲ್ಲೋಕೆ ಜಾನ್‌ ರೇ ಎಂಬ ಸಹೋದರರು ಸಹಾಯ ಮಾಡಿದ್ರು. ಅವ್ರು 9 ನೇ ಗಿಲ್ಯಡ್‌ ಶಾಲೆಯ ಪದವೀಧರರಾಗಿದ್ರು. ಅವ್ರು ತುಂಬ ಅನುಭವ ಇದ್ದ, ಸೌಮ್ಯ ಸ್ವಭಾವದ, ದೀನತೆಯಿದ್ದ ಮತ್ತು ಸ್ನೇಹಮಯಿ ಸಹೋದರರಾಗಿದ್ರು. ಅವ್ರು ನಂಗೆ ನೇರವಾಗಿ ಸಲಹೆ ಕೊಟ್ಟಿದ್ದು ತುಂಬ ಕಡಿಮೆನೇ. ಆದ್ರೆ ಅವ್ರ ಮಾದರಿಯಿಂದ ನಾನು ಎಷ್ಟೋ ವಿಷಯಗಳನ್ನ ಕಲಿಯಕ್ಕಾಯ್ತು. ಅವ್ರಿಗೆ ಫ್ರೆಂಚ್‌ ಮಾತಾಡೋಕೆ ಕಷ್ಟ ಆಗ್ತಿತ್ತು. ಆದ್ರಿಂದ ಅವ್ರಿಗೆ ಸಹಾಯ ಮಾಡಲಿಕ್ಕೋಸ್ಕರ ಅವ್ರ ಜೊತೆ ನಾನು ಸೇವೆಗೆ ಹೋಗ್ತಿದ್ದೆ. ಯೆಹೋವನ ಸಾಕ್ಷಿಯಾಗುವ ದೃಢನಿರ್ಧಾರ ಮಾಡೋಕೆ ಅವ್ರ ಒಡನಾಟ ನಂಗೆ ತುಂಬ ಸಹಾಯ ಮಾಡ್ತು. ಯೆಹೋವನ ಸಾಕ್ಷಿಗಳ ಪರಿಚಯ ಆಗಿ 10 ವರ್ಷಗಳ ನಂತ್ರ ಕೊನೆಗೂ ಮೇ 26, 1951 ರಲ್ಲಿ ನಾನು ದೀಕ್ಷಾಸ್ನಾನ ತಗೊಂಡೆ.

ಮನೆ-ಮನೆ ಸೇವೆ ಮಾಡೋಕೆ ನನಗಿದ್ದ ಭಯನ ಮೆಟ್ಟಿನಿಲ್ಲೋಕೆ ಜಾನ್‌ ರೇಯವರ (1) ಒಳ್ಳೇ ಮಾದರಿ ನಂಗೆ (2) ಸಹಾಯಮಾಡ್ತು

ನಾವು ಕ್ವಿಬೆಕ್‌ ಪಟ್ಟಣದಲ್ಲಿದ್ದ ಒಂದು ಚಿಕ್ಕ ಸಭೆಗೆ ಹೋಗ್ತಿದ್ವಿ. ಅಲ್ಲಿ ಹೆಚ್ಚಿನವ್ರು ಪಯನೀಯರರಾಗಿದ್ರು. ಅವ್ರಿಂದಾಗಿ ನಂಗೆ ಪಯನೀಯರ್‌ ಸೇವೆ ಆರಂಭಿಸುವ ಉತ್ತೇಜನ ಸಿಗ್ತು. ಆಗಿನ ಕಾಲದಲ್ಲಿ ಮನೆಯಿಂದ ಮನೆಗೆ ಸಾರುವಾಗ ಬೈಬಲನ್ನು ಮಾತ್ರ ಉಪಯೋಗಿಸ್ತಿದ್ವಿ. ಸಾಹಿತ್ಯ ಇಲ್ಲದಿದ್ರಿಂದ ಬೈಬಲನ್ನು ಚೆನ್ನಾಗಿ ಉಪಯೋಗಿಸೋಕೆ ಕಲಿತಿರಬೇಕಿತ್ತು. ಆದ್ರಿಂದ ನಾನು ಸತ್ಯವನ್ನ ಸಮರ್ಥಿಸಲಿಕ್ಕೋಸ್ಕರ ಬೈಬಲ್‌ ವಚನಗಳನ್ನ ಚೆನ್ನಾಗಿ ತಿಳುಕೊಳ್ಳೋಕೆ ಪ್ರಯತ್ನಿಸಿದೆ. ಆದ್ರೂ ಅನೇಕರು ಕ್ಯಾಥೊಲಿಕ್‌ ಚರ್ಚಿನ ಅನುಮತಿ ಇಲ್ಲದಿರುವಂಥ ಬೈಬಲಿಂದ ಓದೋಕೆ ಒಪ್ತಿರ್ಲಿಲ್ಲ.

1952 ರಲ್ಲಿ ನಾನು ನಮ್ಮ ಸಭೆಯಲ್ಲಿದ್ದ ಸಿಮನ್‌ ಪ್ಯಾಟ್ರಿ ಎಂಬ ಸಹೋದರಿಯನ್ನು ಮದುವೆಯಾದೆ. ನಂತ್ರ ನಾವು ಮಾಂಟ್ರಿಯಲ್‌ಗೆ ಹೋಗಿ ವಾಸಮಾಡೋಕೆ ಶುರುಮಾಡಿದ್ವಿ. ಒಂದು ವರ್ಷದೊಳಗೆ ನಮಗೆ ಲಿಝ್‌ ಹುಟ್ಟಿದಳು. ನಾನು ಮದುವೆಗೆ ಸ್ವಲ್ಪ ಮುಂಚೆನೇ ಪಯನೀಯರಿಂಗ್‌ ನಿಲ್ಲಿಸಿದ್ರೂ ನಾವಿಬ್ರು ಕುಟುಂಬವಾಗಿ ದೇವ್ರ ಸೇವೆಗೆ ಸಂಬಂಧಪಟ್ಟ ಚಟುವಟಿಕೆಗಳನ್ನ ಸಾಧ್ಯವಾದಷ್ಟು ಹೆಚ್ಚು ಮಾಡಲಿಕ್ಕೋಸ್ಕರ ನಮ್ಮ ಜೀವನವನ್ನ ಸರಳವಾಗಿ ಇಟ್ಟುಕೊಂಡಿದ್ವಿ.

ಹತ್ತು ವರ್ಷಗಳ ನಂತ್ರ ನಾನು ಪುನಃ ಪಯನೀಯರ್‌ ಸೇವೆ ಆರಂಭಿಸೋ ಬಗ್ಗೆ ಯೋಚಿಸೋಕೆ ಶುರುಮಾಡಿದೆ. 1962 ರಲ್ಲಿ ನಂಗೆ ಒಂದು ತಿಂಗಳು ನಡೆಯಲಿದ್ದ ಹಿರಿಯರ ರಾಜ್ಯ ಶುಶ್ರೂಷಾ ಶಾಲೆಗಾಗಿ ಕೆನಡದ ಬೆತೆಲ್‌ಗೆ ಕರೆಯಲಾಯಿತು. ಅಲ್ಲಿ ನನ್ನ ಜೊತೆ ರೂಮಲ್ಲಿ ಸಹೋದರ ಕ್ಯಾಮಿಲ್‌ ವಾಲೆಟ್‌ ಇದ್ರು. ಸೇವೆ ಕಡೆಗೆ ಅವ್ರಿಗಿದ್ದ ಹುರುಪು ನನ್ನ ಮೇಲೆ ತುಂಬ ಪ್ರಭಾವ ಬೀರಿತು. ಯಾಕೆಂದ್ರೆ ಅವ್ರಿಗೂ ಮದುವೆಯಾಗಿ ಮಕ್ಕಳಿದ್ರು. ಆಗಿನ ಕಾಲದಲ್ಲಿ ಕ್ವಿಬೆಕ್‌ನಲ್ಲಿ ಚಿಕ್ಕ ಮಕ್ಕಳಿರೋ ಹೆತ್ತವರು ಪಯನೀಯರ್‌ ಸೇವೆ ಮಾಡ್ತಿದ್ದದ್ದೇ ತುಂಬ ಕಡಿಮೆ. ಆದ್ರೂ ಕ್ಯಾಮಿಲ್‌ಗೆ ಪಯನೀಯರ್‌ ಸೇವೆ ಮಾಡೋ ಗುರಿ ಇತ್ತು. ನಾವಿಬ್ರು ಒಟ್ಟಿಗಿದ್ದ ಆ ಒಂದು ತಿಂಗಳ ಸಮ್ಯದಲ್ಲಿ ಅವ್ರು ನಂಗೆ ಪಯನೀಯರ್‌ ಸೇವೆ ಮಾಡೋಕೆ ತುಂಬ ಪ್ರೋತ್ಸಾಹ ಕೊಟ್ರು. ಇದಾಗಿ ಕೆಲವು ತಿಂಗಳ ನಂತ್ರ ನನ್ನಿಂದನೂ ಪಯನೀಯರ್‌ ಸೇವೆ ಮಾಡೋಕಾಗುತ್ತೆ ಅಂತ ಅನಿಸ್ತು. ನನ್ನ ಈ ನಿರ್ಣಯ ಅಷ್ಟೊಂದು ಒಳ್ಳೇದಲ್ಲ ಅಂತ ಕೆಲವ್ರು ಹೇಳಿದ್ರು. ಆದ್ರೂ ನಾನು ಪಯನೀಯರ್‌ ಸೇವೆ ಆರಂಭಿಸಿದೆ. ಯಾಕೆಂದ್ರೆ ಸೇವೆಯನ್ನ ಹೆಚ್ಚು ಮಾಡೋಕೆ ಹಾಕ್ತಿರೋ ಪ್ರಯತ್ನನ ಯೆಹೋವನು ಆಶೀರ್ವದಿಸ್ತಾನೆ ಅನ್ನೋ ಭರವಸೆ ನನಗಿತ್ತು.

ಕ್ವಿಬೆಕ್‌ನಲ್ಲಿ ವಿಶೇಷ ಪಯನೀಯರ್‌ ಸೇವೆ

1964 ರಲ್ಲಿ ಸಿಮನ್‌ ಮತ್ತು ನನ್ನನ್ನು ನಮ್ಮೂರಾದ ಕ್ವಿಬೆಕ್‌ಗೆ ವಿಶೇಷ ಪಯನೀಯರರನ್ನಾಗಿ ನೇಮಿಸಲಾಯಿತು. ಅಲ್ಲಿ ನಾವು ಅನೇಕ ವರ್ಷಗಳು ಸೇವೆ ಮಾಡಿದ್ವಿ. ಆಗ ಕೆಲವು ಜನ್ರು ನಮ್ಮನ್ನ ವಿರೋಧಿಸಿದ್ರು. ಆದ್ರೆ ಸಾರೋ ಕೆಲ್ಸಕ್ಕೆ ಮೊದ್ಲಿನಷ್ಟು ವಿರೋಧ ಇರ್ಲಿಲ್ಲ.

ಒಂದು ಶನಿವಾರ ಮಧ್ಯಾಹ್ನ ನನ್ನನ್ನ ಕ್ವಿಬೆಕ್‌ ಪಟ್ಟಣದ ಹತ್ತಿರದಲ್ಲೇ ಇದ್ದ ಸೇಂಟ್‌-ಮರೀ ಎಂಬ ಚಿಕ್ಕ ಪಟ್ಟಣದಲ್ಲಿ ಪೊಲೀಸ್ರು ಬಂಧಿಸಿದ್ರು. ಅನುಮತಿ ಇಲ್ಲದೆ ಮನೆಯಿಂದ ಮನೆಗೆ ಸುವಾರ್ತೆ ಸಾರಿದ್ರಿಂದ ನನ್ನನ್ನ ಒಬ್ಬ ಅಧಿಕಾರಿ ಪೊಲೀಸ್‌ ಸ್ಟೇಷನ್‌ಗೆ ಕರ್ಕೊಂಡು ಹೋದ್ರು ಮತ್ತು ನಂತ್ರ ಜೈಲಿಗೆ ಹಾಕಿದ್ರು. ಆಮೇಲೆ ನನ್ನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಗ ಬೈಯಾರ್ಝೊ ಎಂಬ ಪ್ರಭಾವಶಾಲಿ ವ್ಯಕ್ತಿ ನ್ಯಾಯಾಧೀಶರಾಗಿದ್ರು. ಅವ್ರು ನಂಗೆ “ನಿನ್ನ ಪರವಾಗಿ ಯಾರು ವಾದಿಸ್ತಾರೆ?” ಅಂತ ಕೇಳಿದ್ರು. ಆಗ ನಾನು ಯೆಹೋವನ ಸಾಕ್ಷಿಗಳ ಪರವಾಗಿ ವಾದಿಸ್ತಿದ್ದ ಪ್ರಸಿದ್ಧ ವಕೀಲರಾಗಿದ್ದ ಗ್ಲೆನ್‌ ಹೌರವ್ರ * ಹೆಸ್ರನ್ನು ಹೇಳಿದೆ. ತಕ್ಷಣ ನ್ಯಾಯಾಧೀಶರು ಗಾಬರಿಯಿಂದ “ಅಯ್ಯೋ! ಅವ್ರಾ!” ಅಂತ ಹೇಳಿದ್ರು. ಯಾಕೆಂದ್ರೆ ಗ್ಲೆನ್‌ ಹೌರು ಈಗಾಗ್ಲೇ ಯೆಹೋವನ ಸಾಕ್ಷಿಗಳ ಪರವಾಗಿ ಎಷ್ಟೋ ಕೇಸುಗಳನ್ನು ವಾದಿಸಿ ಗೆದ್ದಿದ್ರು. ಕೊನೆಗೆ ನಾನು ನಿರಪರಾಧಿ ಅಂತ ನ್ಯಾಯಾಲಯ ತೀರ್ಪು ಕೊಟ್ಟಿತು.

ಕ್ವಿಬೆಕ್‌ನಲ್ಲಿ ನಮ್ಮ ಕೆಲ್ಸಕ್ಕೆ ವಿರೋಧ ಇದ್ದದ್ರಿಂದ ಕೂಟಗಳನ್ನು ನಡ್ಸೋಕೆ ಬಾಡಿಗೆಗಾಗಿ ಒಂದು ಸರಿಯಾದ ಸ್ಥಳ ಸಿಗ್ತಿರಲಿಲ್ಲ. ಕೊನೆಗೂ ಕೂಟಗಳನ್ನ ನಡ್ಸೋಕೆ ನಮ್ಗೆ ಒಂದು ಹಳೆ ಗ್ಯಾರೇಜ್‌ ಸಿಗ್ತು. ಆದ್ರೆ ಚಳಿಗಾಲದಲ್ಲಿ ಅಲ್ಲಿ ಕೂತ್ಕೊಳ್ಳೋಕೆ ತುಂಬ ಕಷ್ಟ ಆಗ್ತಿತ್ತು. ಹಾಗಾಗಿ ಸಹೋದರರು ಕೋಣೆಯನ್ನು ಬೆಚ್ಚಗಿಡಲಿಕ್ಕಾಗಿ ಒಂದು ಚಿಕ್ಕ ಮೆಷಿನ್‌ ಅನ್ನು ಉಪಯೋಗಿಸ್ತಿದ್ರು. ಹೆಚ್ಚಾಗಿ ನಾವೆಲ್ರೂ ಕೂಟಗಳಿಗೆ ಕೆಲವು ತಾಸುಗಳ ಮುಂಚೆನೇ ಬಂದು ಆ ಮೆಷಿನ್ನಿನ ಸುತ್ತ ಕೂತ್ಕೊಂಡು ನಮ್ಮ ಅನುಭವಗಳನ್ನ ಒಬ್ರಿಗೊಬ್ರು ಹೇಳಿ ಉತ್ತೇಜನ ಪಡ್ಕೊಳ್ತಿದ್ವಿ.

ಅಂದಿನಿಂದ ಇಂದಿನವರೆಗೆ ಸಾರೋ ಕೆಲ್ಸಕ್ಕೆ ತುಂಬ ಪ್ರತಿಫಲ ಸಿಕ್ಕಿದೆ. ಅದನ್ನು ನೋಡುವಾಗ ನಮ್ಗೆ ತುಂಬ ಖುಷಿಯಾಗುತ್ತೆ. 1960 ರ ಸಮ್ಯದಲ್ಲಿ ಕ್ವಿಬೆಕ್‌ ನಗರದಲ್ಲಿ (ಕೋಟ್‌ ನಾರ್‌ ಮತ್ತು ಗ್ಯಾಸ್ಪೇ ಪರ್ಯಾಯದ್ವೀಪದಲ್ಲಿ) ಕೆಲವೇ ಕೆಲವು ಸಭೆಗಳಿದ್ವು. ಆದ್ರೆ ಈಗ ಅಲ್ಲಿ ಎರಡಕ್ಕೂ ಹೆಚ್ಚು ಸರ್ಕಿಟ್‌ಗಳಿವೆ. ಸಹೋದರರಿಗೆ ಕೂಟಕ್ಕಾಗಿ ಕೂಡಿಬರಲು ಸುಂದರವಾದ ರಾಜ್ಯಸಭಾಗೃಹಗಳಿವೆ.

ಸಂಚರಣ ಕೆಲಸ ಮಾಡೋ ನೇಮಕ

1977 ರಲ್ಲಿ ನಾನು ಕೆನಡದ ಟೊರಾಂಟೊದಲ್ಲಿ ಸಂಚರಣ ಮೇಲ್ವಿಚಾರಕರಿಗಾಗಿರೋ ಕೂಟಕ್ಕೆ ಹಾಜರಾದೆ

1970 ರಲ್ಲಿ ನಮ್ಗೆ ಸರ್ಕಿಟ್‌ ಮೇಲ್ವಿಚಾರಕರಾಗಿ ಕೆಲ್ಸ ಮಾಡೋ ನೇಮಕ ಸಿಕ್ತು. ನಂತ್ರ 1973 ರಲ್ಲಿ ನಮ್ಗೆ ಡಿಸ್ಟ್ರಿಕ್ಟ್‌ ನೇಮಕ ಸಿಕ್ತು. ಈ ಸಮ್ಯದಲ್ಲಿ ಸಂಚರಣ ಕೆಲಸ ಮಾಡುತ್ತಿದ್ದಂಥ ಲಾರ್ಯೆ ಸೊಮ್ಯೂರ್‌ * ಮತ್ತು ಡೇವಿಡ್‌ ಸ್ಪ್ಲೇನ್‌ರಂಥ * ಅರ್ಹ ಸಹೋದರರಿಂದ ನಾನು ಅನೇಕ ವಿಷ್ಯಗಳನ್ನು ಕಲಿತುಕೊಳ್ಳೋಕಾಯ್ತು. ಪ್ರತಿ ಸಮ್ಮೇಳನ ಮುಗಿದ ನಂತ್ರ ಡೇವಿಡ್‌ ಮತ್ತು ನಾನು ಇನ್ನೂ ಚೆನ್ನಾಗಿ ಬೋಧಿಸಲಿಕ್ಕೆ ಏನು ಮಾಡಬಹುದು ಅಂತ ಮಾತಾಡಿಕೊಳ್ತಿದ್ವಿ. ಒಂದ್ಸಲ ಡೇವಿಡ್‌ ನಂಗೆ ಹೀಗೆ ಹೇಳಿದ್ರು: “ಲೆಯಾನ್ಸ್‌, ನಿಮ್ಮ ಕೊನೆ ಭಾಷಣ ನಂಗೆ ತುಂಬ ಇಷ್ಟ ಆಯ್ತು. ತುಂಬ ಚೆನ್ನಾಗಿತ್ತು. ಆದ್ರೆ ನೀವು ಹೇಳಿದ್ದೆಲ್ಲಾ ವಿಷ್ಯನ ನಾನು ಹೇಳಬೇಕಂತಿದ್ರೆ ಮೂರು ಭಾಷಣ ಕೊಡಬೇಕಾಗ್ತಿತ್ತು.” ಅವ್ರು ಹೇಳಿದ ಆ ಮಾತು ನನಗಿನ್ನೂ ನೆನಪಿದೆ. ಸಾಮಾನ್ಯವಾಗಿ ನಾನು ಭಾಷಣದಲ್ಲಿ ತುಂಬ ವಿಷ್ಯಗಳನ್ನ ತುರುಕಿಸೋಕೆ ಪ್ರಯತ್ನಿಸ್ತಿದ್ದೆ. ಆದ್ರೆ ವಿಷ್ಯವನ್ನು ಚುಟುಕಾಗಿ ಹೇಳೋಕೆ ಕಲೀಬೇಕಿತ್ತು.

ಪೂರ್ವ ಕೆನಡದಲ್ಲಿರೋ ಅನೇಕ ನಗರಗಳಲ್ಲಿ ನಾನು ಸೇವೆ ಮಾಡ್ದೆ

ಜಿಲ್ಲಾ ಮೇಲ್ವಿಚಾರಕರಿಗೆ ಸರ್ಕಿಟ್‌ ಮೇಲ್ವಿಚಾರಕರನ್ನು ಉತ್ತೇಜಿಸೋ ಕೆಲ್ಸ ಇರುತ್ತಿತ್ತು. ಆದ್ರೆ ನಂಗೆ, ಕ್ವಿಬೆಕ್‌ನಲ್ಲಿದ್ದ ಅನೇಕ ಪ್ರಚಾರಕರ ಪರಿಚಯ ಇದ್ದದ್ರಿಂದ ನಾನು ಭೇಟಿ ಮಾಡಿದಾಗ ಅವ್ರೆಲ್ಲಾ ನನ್ನ ಜೊತೆ ಸೇವೆ ಮಾಡೋಕೆ ಇಷ್ಟಪಡ್ತಿದ್ರು. ನನ್ಗೂ ಅವ್ರ ಜೊತೆ ಸೇವೆ ಮಾಡೋದಂದ್ರೆ ಇಷ್ಟ ಆಗ್ತಿತ್ತು. ಆದ್ರೆ ಹೀಗೆ ಮಾಡೋದ್ರಿಂದ ಸರ್ಕಿಟ್‌ ಮೇಲ್ವಿಚಾರಕರ ಜೊತೆ ಸಾಕಷ್ಟು ಸಮ್ಯ ಕಳೆಯೋಕೆ ಆಗ್ತಿರಲಿಲ್ಲ. ಒಂದ್ಸಲ ಒಬ್ಬ ಸರ್ಕಿಟ್‌ ಮೇಲ್ವಿಚಾರಕ ನಂಗೆ ಹೀಗೆ ಹೇಳಿದ್ರು: “ನೀವು ಸಹೋದರರಿಗೆ ಸಮ್ಯ ಕೊಡ್ತಿರೋದು ತುಂಬ ಒಳ್ಳೇದೇ. ಆದ್ರೆ ಈ ವಾರ ನನ್ನನ್ನ ಭೇಟಿ ಮಾಡೋಕೆ ಬಂದಿರೋದು ಅನ್ನೋದನ್ನ ಮರೆಯಬೇಡಿ. ನನ್ಗೂ ಉತ್ತೇಜನ ಬೇಕು.” ಅವ್ರು ದಯೆಯಿಂದ ಕೊಟ್ಟ ಈ ಸಲಹೆಯಿಂದ ನಾನೆಷ್ಟೋ ಕಲಿಯಕ್ಕಾಯಿತು.

ಆದ್ರೆ 1976 ರಲ್ಲಿ ನಾನು ಕನಸುಮನಸ್ಸಲ್ಲೂ ನೆನಸಿರದಂಥ ದುರ್ಘಟನೆ ನಡೆಯಿತು. ನನ್ನ ಪ್ರೀತಿಯ ಹೆಂಡತಿ ಸಿಮನ್‌ನ ಆರೋಗ್ಯ ತುಂಬ ಹಾಳಾಗಿ ಕೊನೆಗೆ ತೀರ್ಕೊಂಡುಬಿಟ್ಟಳು. ಅವ್ಳು ನಂಗೆ ಒಳ್ಳೇ ಸಂಗಾತಿಯಾಗಿದ್ದಳು. ಅವ್ಳಿಗೆ ಸ್ವತ್ಯಾಗದ ಗುಣ ಇತ್ತು. ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ನಾನು ಸೇವೆಯಲ್ಲಿ ಬ್ಯುಸಿಯಾಗಿದ್ರಿಂದ ಅವ್ಳನ್ನ ಕಳಕೊಂಡ ನೋವನ್ನ ಮರೆಯೋಕೆ ಸಾಧ್ಯವಾಯ್ತು. ಈ ಕಷ್ಟದ ಸಮ್ಯದಲ್ಲಿ ಯೆಹೋವನು ನಂಗೆ ತುಂಬ ಸಹಾಯ ಮಾಡಿದ್ನು. ನಾನದಕ್ಕೆ ತುಂಬ ಕೃತಜ್ಞನಾಗಿದ್ದೇನೆ. ನಂತ್ರ ನಾನು ಕ್ಯಾರಲನ್‌ ಈಲಿಯಟ್‌ ಎಂಬ ಇಂಗ್ಲಿಷ್‌ ಮಾತಾಡುವ ಹುರುಪಿನ ಪಯನೀಯರ್‌ ಸಹೋದರಿಯನ್ನು ಮದ್ವೆಯಾದೆ. ಕ್ವಿಬೆಕ್‌ನಲ್ಲಿ ಸೇವೆ ಮಾಡುವವರ ಅಗತ್ಯ ಇದ್ದದರಿಂದ ಆಕೆ ಅಲ್ಲಿ ಬಂದು ಸೇವೆ ಮಾಡ್ತಿದ್ಳು. ಅವ್ಳು ಸ್ನೇಹಮಯಿ ಆಗಿದ್ಳು. ಬೇರೆಯವ್ರ ಬಗ್ಗೆ ತುಂಬ ಆಸಕ್ತಿ ತೋರಿಸ್ತಿದ್ಳು. ಅದ್ರಲ್ಲೂ ಮುಖ್ಯವಾಗಿ ಯಾರು ನಾಚಿಕೆ ಸ್ವಭಾವದವ್ರು ಆಗಿದ್ದಾರೋ, ಒಬ್ರೇ ಇರ್ತಾರೋ ಅವ್ರ ಬಗ್ಗೆ ತುಂಬ ಕಾಳಜಿವಹಿಸ್ತಿದ್ಳು. ಅವ್ಳು ನನ್ನ ಜೊತೆ ಸಂಚರಣ ಕೆಲ್ಸಕ್ಕೆ ಬಂದಾಗ ಅವ್ಳಿಂದ ನಂಗೆ ತುಂಬ ಸಹಾಯ ಆಯ್ತು.

ಮರೆಯಲಾಗದ ವರ್ಷ

ಜನವರಿ 1978 ರಲ್ಲಿ ಮೊಟ್ಟಮೊದಲ ಬಾರಿಗೆ ಕ್ವಿಬೆಕ್‌ನಲ್ಲಿ ನಡೆಸಲಾದ ಪಯನೀಯರ್‌ ಸೇವಾ ಶಾಲೆಯಲ್ಲಿ ಕಲಿಸೋ ನೇಮಕ ನಂಗೆ ಸಿಕ್ತು. ಆಗ ನಂಗೆ ತುಂಬ ಭಯ ಆಯ್ತು. ಯಾಕೆಂದ್ರೆ ಸ್ವತಃ ನಾನೇ ಪಯನೀಯರ್‌ ಶಾಲೆಗೆ ಹೋಗಿರ್ಲಿಲ್ಲ. ಪಯನೀಯರ್‌ ಪುಸ್ತಕನೂ ನೋಡಿರ್ಲಿಲ್ಲ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ನಂಗೂ ಈ ವಿಷ್ಯಗಳು ಹೊಸದಾಗಿದ್ವು. ಆದ್ರೆ ಆ ಮೊದಲನೇ ತರಗತಿಯಲ್ಲಿ ಅನುಭವ ಇದ್ದ ಅನೇಕ ಪಯನೀಯರರಿದ್ರು. ಇದ್ರಿಂದ ನಂಗೆ ತುಂಬ ಸಹಾಯ ಆಯ್ತು. ನಾನು ಆ ಶಾಲೆಯ ಶಿಕ್ಷಕನಾಗಿದ್ರೂ ವಿದ್ಯಾರ್ಥಿಗಳಿಂದ ಅನೇಕ ವಿಷ್ಯಗಳನ್ನ ಕಲಿಯೋಕಾಯ್ತು.

1978 ರಲ್ಲಿ ಮಾಂಟ್ರಿಯಲ್‌ನ ಒಲಿಂಪಿಕ್‌ ಸ್ಟೇಡಿಯಂನಲ್ಲಿ “ವಿಜಯಪ್ರದ ನಂಬಿಕೆ” ಎಂಬ ಅಂತಾರಾಷ್ಟ್ರೀಯ ಅಧಿವೇಶನ ನಡೆಯಿತು. ಅದಕ್ಕೆ 80,000ಕ್ಕೂ ಹೆಚ್ಚಿನ ಜನ್ರು ಹಾಜರಾಗಿದ್ರು. ಕ್ವಿಬೆಕ್‌ನಲ್ಲಿ ಅದಕ್ಕೂ ಮುಂಚೆ ಇಷ್ಟೊಂದು ದೊಡ್ಡ ಅಧಿವೇಶನ ನಡೆದಿರ್ಲಿಲ್ಲ. ನಂಗೆ ಅಧಿವೇಶನದಲ್ಲಿ ನ್ಯೂಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲ್ಸ ಮಾಡೋ ನೇಮಕ ಸಿಕ್ತು. ನಾನು ಅನೇಕ ಪತ್ರಕರ್ತರ ಹತ್ರ ಮಾತಾಡ್ದೆ. 20ಕ್ಕೂ ಹೆಚ್ಚು ತಾಸುಗಳ ಸಂದರ್ಶನಗಳನ್ನು ಟಿ.ವಿ. ಮತ್ತು ರೇಡಿಯೋಗಳಲ್ಲಿ ಪ್ರಸಾರ ಮಾಡಲಾಯ್ತು. ನೂರಾರು ಲೇಖನಗಳನ್ನು ಪ್ರಕಟಿಸಲಾಯ್ತು. ಹೀಗೆ ವಾರ್ತಾಮಾಧ್ಯಮದವ್ರು ನಮ್ಮ ಬಗ್ಗೆ ಒಳ್ಳೇ ವರದಿಯನ್ನು ಕೊಟ್ಟಿರೋದನ್ನು ನೋಡುವಾಗ ತುಂಬ ಖುಷಿಯಾಯ್ತು. ಇದ್ರಿಂದಾಗಿ ಅನೇಕ ಜನ್ರಿಗೆ ಸಾಕ್ಷಿ ಕೊಡಲಿಕ್ಕೆ ಸಾಧ್ಯವಾಯ್ತು.

ಬೇರೆ ಭಾಷೆಯಲ್ಲಿ ಸೇವೆ ಮಾಡೋ ನೇಮಕ

1996 ರಲ್ಲಿ ನನ್ನ ನೇಮಕದಲ್ಲಿ ದೊಡ್ಡ ಬದಲಾವಣೆ ಆಯ್ತು. ದೀಕ್ಷಾಸ್ನಾನ ಆದಂದಿನಿಂದ ನಾನು ಕ್ವಿಬೆಕ್‌ನಲ್ಲಿ ಫ್ರೆಂಚ್‌ ಮಾತಾಡೋ ಟೆರಿಟೊರಿಯಲ್ಲಿ ಸೇವೆ ಮಾಡಿದ್ದೆ. ಆದ್ರೆ ಈಗ ನನ್ಗೆ ಟೊರೊಂಟೊದ ಇಂಗ್ಲಿಷ್‌ ಮಾತಾಡೋ ಪ್ರದೇಶದಲ್ಲಿ ಸೇವೆ ಮಾಡೋ ನೇಮಕ ಸಿಕ್ತು. ನನ್ನಿಂದ ಇದನ್ನ ಮಾಡಕಾಗಲ್ಲ ಅಂತ ನನಗನಿಸ್ತು. ನನ್ಗೊತ್ತಿದ್ದ ಹರಕುಮುರುಕು ಇಂಗ್ಲಿಷ್‌ನಲ್ಲಿ ಭಾಷಣ ಕೊಡೋದನ್ನ ನೆನಸ್ಕೊಂಡ್ರೆನೇ ಮೈ ನಡುಕ ಬರ್ತಿತ್ತು. ಹಾಗಾಗಿ ನಾನು ತುಂಬನೇ ಪ್ರಾರ್ಥನೆ ಮಾಡ್ಬೇಕಾಗ್ತಿತ್ತು ಮತ್ತು ಯೆಹೋವನ ಮೇಲೆ ಇನ್ನೂ ಹೆಚ್ಚು ಆತ್ಕೊಳ್ಬೇಕಾಗ್ತಿತ್ತು.

ಆರಂಭದಲ್ಲಿ ನನ್ಗೆ ಭಯ ಆದ್ರೂ ಟೊರೊಂಟೊದ ಇಂಗ್ಲಿಷ್‌ ಪ್ರದೇಶದಲ್ಲಿ 2 ವರ್ಷ ಸೇವೆ ಮಾಡಿ ತುಂಬ ಸಂತೋಷ ಪಡ್ಕೊಂಡೆ. ಇಂಗ್ಲಿಷ್‌ ಮಾತಾಡೋದನ್ನ ಚೆನ್ನಾಗಿ ಕಲ್ತುಕೊಳ್ಳೋಕೆ ಕ್ಯಾರಲನ್‌ ನನ್ಗೆ ತಾಳ್ಮೆಯಿಂದ ಸಹಾಯ ಮಾಡಿದ್ಳು. ಸಹೋದರರು ಸಹ ತುಂಬ ಬೆಂಬಲ ಮತ್ತು ಉತ್ತೇಜನ ನೀಡಿದ್ರು. ಬಲುಬೇಗನೆ ನಮ್ಗೆ ಅನೇಕ್ರು ಸ್ನೇಹಿತರಾದ್ರು.

ಸರ್ಕಿಟ್‌ ಸಮ್ಮೇಳನಗಳಿದ್ದ ವಾರದಲ್ಲಿ ಶುಕ್ರವಾರಗಳಂದು ನಮ್ಗೆ ಅದಕ್ಕಾಗಿ ತಯಾರಿ ಮಾಡ್ಬೇಕಾಗ್ತಿತ್ತು ಮತ್ತು ಬೇರೆ ಕೆಲ್ಸಗಳೂ ಇರ್ತಿದ್ವು. ಆದ್ರೂ ನಾನು ಆ ದಿನ ಸಂಜೆ ಒಂದು ತಾಸು ಮನೆ ಮನೆ ಸೇವೆ ಮಾಡ್ತಿದ್ದೆ. ಇದನ್ನ ನೋಡಿ ಕೆಲವ್ರು ‘ಇಷ್ಟು ಬ್ಯುಸಿ ಇರೋ ಟೈಮಲ್ಲೂ ಸೇವೆಗೆ ಹೋಗೋ ಅಗತ್ಯ ಇದ್ಯಾ?’ ಅಂತ ಯೋಚಿಸಿರ್ಬಹುದು. ಆದ್ರೂ ಸೇವೆಯಲ್ಲಿ ಮಾತಾಡೋದ್ರಿಂದ ನನ್ಗೆ ಚೈತನ್ಯ ಸಿಗ್ತಿತ್ತು, ಉತ್ತೇಜನ ಸಿಗ್ತಿತ್ತು. ಈಗ ಸಹ ಸುವಾರ್ತೆ ಸಾರಿದ ಮೇಲೆ ಚೈತನ್ಯ, ಸಂತೋಷ ಸಿಗುತ್ತೆ.

1998 ರಲ್ಲಿ ನಮ್ಮಿಬ್ರನ್ನ ಪುನಃ ವಿಶೇಷ ಪಯನೀಯರ್‌ ಆಗಿ ಮಾಂಟ್ರಿಯಲ್‌ಗೆ ನೇಮಿಸಲಾಯಿತು. ಅನೇಕ ವರ್ಷಗಳವರೆಗೆ ವಿಶೇಷ ಸಾರ್ವಜನಿಕ ಸಾಕ್ಷಿಕಾರ್ಯವನ್ನ ಏರ್ಪಡಿಸೋದು ಮತ್ತು ಯೆಹೋವನ ಸಾಕ್ಷಿಗಳ ಬಗ್ಗೆ ಜನರಿಗಿದ್ದ ತಪ್ಪಭಿಪ್ರಾಯವನ್ನ ತೆಗೆದುಹಾಕೋಕೆ ವಾರ್ತಾಮಾಧ್ಯಮದವ್ರೊಂದಿಗೆ ಕೆಲ್ಸ ಮಾಡೋದು ನನ್ನ ನೇಮಕವಾಗಿತ್ತು. ಈಗ ನಾನು ಮತ್ತು ಕ್ಯಾರಲನ್‌ ಬೇರೆ ದೇಶಗಳಿಂದ ಕೆನಡಕ್ಕೆ ಬಂದವ್ರಿಗೆ ಸುವಾರ್ತೆ ಸಾರಿ ಸಂತೋಷ ಪಡಿತಿದ್ದೇವೆ. ಅಂಥವ್ರಲ್ಲಿ ಹೆಚ್ಚಿನವ್ರು ಬೈಬಲ್‌ ಬಗ್ಗೆ ತಿಳುಕೊಳ್ಳೋಕೆ ಆಸಕ್ತಿ ತೋರಿಸ್ತಾರೆ.

ನನ್ನ ಪತ್ನಿ ಕ್ಯಾರಲನ್‌ ಜೊತೆ

ಯೆಹೋವನಿಗೆ ನನ್ನನ್ನು ಸಮರ್ಪಿಸಿಕೊಂಡು ಸಾಕ್ಷಿಯಾಗಿ ಕಳೆದ 68 ವರ್ಷಗಳನ್ನ ತಿರುಗಿ ನೋಡುವಾಗ ನಂಗೆ ಆತನೆಷ್ಟು ಆಶೀರ್ವಾದ ಮಾಡಿದ್ದಾನೆ ಅಂತ ಗೊತ್ತಾಗುತ್ತೆ. ಸೇವೆಯನ್ನ ಚೆನ್ನಾಗಿ ಮಾಡಲು ಕಲ್ತುಕೊಳ್ಳೋದು ಮತ್ತು ಸತ್ಯವನ್ನು ತಿಳಿದುಕೊಳ್ಳಲು ಜನ್ರಿಗೆ ಸಹಾಯ ಮಾಡೋದು ಇವುಗಳಿಂದ ನಂಗೆ ತುಂಬ ಸಂತೋಷ ಸಿಕ್ಕಿದೆ. ನನ್ನ ಮಗ್ಳು ಲಿಝ್‌ ಮತ್ತು ಅವಳ ಗಂಡ ತಮ್ಮ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಪಯನೀಯರ್‌ ಸೇವೆಯನ್ನು ಆರಂಭಿಸಿದ್ದಾರೆ. ಅವ್ಳಿಗೆ ಸೇವೆ ಮಾಡೋಕೆ ಇರೋ ಹುರುಪನ್ನ ನೋಡೋವಾಗ ನನ್ಗೆ ತುಂಬ ಸಂತೋಷ ಆಗುತ್ತೆ. ತಮ್ಮ ಒಳ್ಳೇ ಮಾದರಿ ಮತ್ತು ಸಲಹೆಗಳ ಮೂಲಕ ನಂಗೆ ಆಧ್ಯಾತ್ಮಿಕವಾಗಿ ಪ್ರಗತಿ ಮಾಡೋಕೆ ನನ್ನ ನೇಮಕವನ್ನ ಚೆನ್ನಾಗಿ ನಿರ್ವಹಿಸೋಕೆ ಸಹಾಯ ಮಾಡಿದ ಜೊತೆ ಸಹೋದರರಿಗೆ ನಾನು ಆಭಾರಿಯಾಗಿದ್ದೇನೆ. ಯೆಹೋವನ ಪವಿತ್ರಾತ್ಮ ಶಕ್ತಿಯ ಮೇಲೆ ಆತುಕೊಂಡ್ರೆ ಮಾತ್ರ ನಮಗಿರೋ ನೇಮಕವನ್ನ ನಂಬಿಗಸ್ತಿಕೆಯಿಂದ ಮಾಡೋಕೆ ಸಾಧ್ಯ ಅಂತ ನನ್ಗೆ ನನ್ನ ಅನುಭವದಿಂದ ಗೊತ್ತಾಗಿದೆ. (ಕೀರ್ತ. 51:11) ಯೆಹೋವನ ಹೆಸ್ರಿಗೆ ಸ್ತುತಿ ಕೊಡೋ ಅಮೂಲ್ಯ ಅವಕಾಶ ನನ್ಗೆ ಕೊಟ್ಟಿರೋದಕ್ಕಾಗಿ ನಾನು ಆತನಿಗೆ ಚಿರಋಣಿಯಾಗಿದ್ದೇನೆ.—ಕೀರ್ತ. 54:6.

^ ಪ್ಯಾರ. 16 ಮೇ 8, 2000ದ ಎಚ್ಚರ! ಪತ್ರಿಕೆಯಲ್ಲಿ ಬಂದ ಡಬ್ಲ್ಯೂ. ಗ್ಲೆನ್‌ ಹೌರ ಜೀವನಕಥೆ ನೋಡಿ. ಅದರ ಶೀರ್ಷಿಕೆ: “ಯುದ್ಧವು ನಿಮ್ಮದಲ್ಲ, ದೇವರದೇ.

^ ಪ್ಯಾರ. 20 ನವೆಂಬರ್‌ 15, 1976 ರ ಕಾವಲಿನಬುರುಜು ಪತ್ರಿಕೆಯಲ್ಲಿ (ಇಂಗ್ಲಿಷ್‌) ಬಂದ ಲಾರ್ಯೆ ಸೊಮ್ಯೂರ್‌ರ ಜೀವನ ಕಥೆ ನೋಡಿ. ಅದ್ರ ಶೀರ್ಷಿಕೆ: “ಐ ಫೌಂಡ್‌ ಸಮ್‌ಥಿಂಗ್‌ ವರ್ತ್‌ ಫೈಟಿಂಗ್‌ ಪಾರ್‌.

^ ಪ್ಯಾರ. 20 ಡೇವಿಡ್‌ ಸ್ಪ್ಲೇನ್‌ ಈಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆ ಮಾಡ್ತಿದ್ದಾರೆ.