ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಯನ ಲೇಖನ 7

ದೀನರನ್ನು ಕಂಡರೆ ದೇವರಿಗೆ ಇಷ್ಟ

ದೀನರನ್ನು ಕಂಡರೆ ದೇವರಿಗೆ ಇಷ್ಟ

“ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ . . . ದೈನ್ಯವನ್ನು ಹೊಂದಿಕೊಳ್ಳಿರಿ.”ಚೆಫ. 2:3.

ಗೀತೆ 95 “ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”

ಕಿರುನೋಟ *

1-2. (ಎ) ಮೋಶೆಯ ಬಗ್ಗೆ ಬೈಬಲ್‌ ಏನು ಹೇಳುತ್ತದೆ? (ಬಿ) ಆತನು ಏನು ಮಾಡಿದನು? (ಸಿ) ದೀನತೆ ಬೆಳೆಸಿಕೊಳ್ಳಲು ಬೈಬಲ್‌ ಯಾವ ಕಾರಣ ಕೊಡುತ್ತದೆ?

ಮೋಶೆ “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಎಂದು ಬೈಬಲ್‌ ಹೇಳುತ್ತದೆ. (ಅರ. 12:3) ಹಾಗಾದರೆ ಆತನು ಬಲಹೀನ ವ್ಯಕ್ತಿ, ತೀರ್ಮಾನಗಳನ್ನು ತಗೊಳ್ಳುವಷ್ಟು ಧೈರ್ಯ ಇಲ್ಲದವ, ಯಾರಾದರೂ ವಿರೋಧಿಸಿದರೆ ನಿಂತು ಉತ್ತರ ಕೊಡುವಷ್ಟು ಗುಂಡಿಗೆ ಇಲ್ಲದವ ಎಂದರ್ಥನಾ? ಕೆಲವರು ಒಬ್ಬ ಸಾತ್ವಿಕ ಅಥವಾ ದೀನ ವ್ಯಕ್ತಿ ಬಗ್ಗೆ ಹಾಗೆ ಅಂದುಕೊಳ್ಳುತ್ತಾರೆ. ಆದರೆ ಇದು ಸತ್ಯ ಅಲ್ಲ. ಮೋಶೆ ಬಲಶಾಲಿ, ಧೈರ್ಯದಿಂದ ತೀರ್ಮಾನಗಳನ್ನು ತಗೊಳ್ಳುತ್ತಿದ್ದ ವ್ಯಕ್ತಿ, ದೇವರ ಧೀರ ಸೇವಕ. ಯೆಹೋವನ ಸಹಾಯದಿಂದ ಆತನು ಐಗುಪ್ತದ ಸಾಮ್ರಾಟನ ಮುಂದೆ ಹೋಗಿ ನಿಂತನು. ಸುಮಾರು 30 ಲಕ್ಷ ಜನರನ್ನು ಮರಳುಗಾಡು ಪ್ರದೇಶದಲ್ಲಿ ನಡೆಸಿದನು. ವೈರಿಗಳ ವಿರುದ್ಧ ಜಯಸಾಧಿಸಲು ಇಸ್ರಾಯೇಲ್ಯರಿಗೆ ಸಹಾಯ ಮಾಡಿದನು.

2 ಮೋಶೆಗೆ ಎದುರಾದ ಸವಾಲುಗಳನ್ನು ನಾವು ಎದುರಿಸಿಲ್ಲ. ಆದರೆ ಪ್ರತಿದಿನ ಕೆಲವು ಜನರಿಂದಾಗಿ ಅಥವಾ ಸನ್ನಿವೇಶಗಳಿಂದಾಗಿ ನಮಗೆ ದೀನತೆ ತೋರಿಸಲು ಕಷ್ಟ ಆಗುತ್ತದೆ. ಹಾಗಿದ್ದರೂ ಈ ಗುಣವನ್ನು ಬೆಳೆಸಿಕೊಳ್ಳಲು ಬೈಬಲ್‌ ಒಂದು ಬಲವಾದ ಕಾರಣ ಕೊಡುತ್ತದೆ. ಅದೇನೆಂದರೆ “ದೀನರು ದೇಶವನ್ನು ಅನುಭವಿಸುವರು” ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. (ಕೀರ್ತ. 37:11) ನಿಮ್ಮ ಬಗ್ಗೆ ಏನು? ನೀವು ದೀನ ವ್ಯಕ್ತಿನಾ? ನಿಮ್ಮಲ್ಲಿ ದೀನತೆ ಇದೆ ಎಂದು ಬೇರೆಯವರಿಗೆ ಅನಿಸುತ್ತದಾ? ಆ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳುವ ಮುಂಚೆ ದೀನತೆ ಅಂದರೆ ಏನೆಂದು ನಾವು ಅರ್ಥಮಾಡಿಕೊಳ್ಳಬೇಕು.

ದೀನತೆ ಅಂದರೆ ಏನು?

3-4. (ಎ) ದೀನತೆಯನ್ನು ನಾವು ಯಾವುದಕ್ಕೆ ಹೋಲಿಸಬಹುದು? (ಬಿ) ದೀನತೆ ತೋರಿಸಲು ನಮ್ಮಲ್ಲಿ ಯಾವ ಗುಣಗಳು ಇರಬೇಕು? ಯಾಕೆ?

3 ದೀನತೆ * ಒಂದು ಸುಂದರವಾದ ಚಿತ್ರದಂತೆ ಇದೆ. ಹೇಗೆ? ಒಬ್ಬ ಚಿತ್ರಕಾರ ಸುಂದರವಾದ  ಅನೇಕ ಬಣ್ಣಗಳನ್ನು ಕಲೆಸಿ ಒಂದು ಚಿತ್ರವನ್ನು ಬಿಡಿಸುತ್ತಾನೆ. ಅದೇ ರೀತಿ ಸುಂದರವಾದ ಅನೇಕ ಗುಣಗಳು ಸೇರಿದರೆ ದೀನತೆ ಎದ್ದುಕಾಣುತ್ತದೆ. ಈ ಗುಣಗಳಲ್ಲಿ ಅಧೀನತೆ, ಸೌಮ್ಯಭಾವ ಮತ್ತು ಆಂತರಿಕ ಶಕ್ತಿ ಮುಖ್ಯ ಗುಣಗಳಾಗಿವೆ. ಯೆಹೋವನನ್ನು ಮೆಚ್ಚಿಸಲು ಈ ಗುಣಗಳು ಯಾಕೆ ಬೇಕು?

4 ದೀನತೆ ಇರುವವರು ಮಾತ್ರ ದೇವರಿಗೆ ಏನಿಷ್ಟಾನೋ ಅದಕ್ಕೆ ಅಧೀನತೆ ತೋರಿಸುತ್ತಾರೆ. ನಾವು ಸೌಮ್ಯಭಾವ ತೋರಿಸಬೇಕೆಂಬುದು ದೇವರ ಆಸೆ. (ಮತ್ತಾ. 5:5; ಗಲಾ. 5:23) ದೇವರಿಗೆ ಏನಿಷ್ಟಾನೋ ಅದನ್ನು ನಾವು ಮಾಡಿದಾಗ ಸೈತಾನನಿಗೆ ತುಂಬ ಕೋಪ ಬರುತ್ತದೆ. ಆದ್ದರಿಂದ ನಾವು ದೀನತೆ ಮತ್ತು ಸೌಮ್ಯಭಾವ ತೋರಿಸಿದರೂ ಸೈತಾನನ ಲೋಕದ ಭಾಗವಾಗಿರುವ ಅನೇಕರು ನಮ್ಮನ್ನು ದ್ವೇಷಿಸುತ್ತಾರೆ. (ಯೋಹಾ. 15:18, 19) ಈ ಕಾರಣದಿಂದ ಸೈತಾನನನ್ನು ಎದುರಿಸಲು ನಮಗೆ ಆಂತರಿಕ ಶಕ್ತಿ ಬೇಕು.

5-6. (ಎ) ಸೈತಾನನಿಗೆ ಯಾಕೆ ದೀನರನ್ನು ಕಂಡರೆ ಆಗುವುದಿಲ್ಲ? (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

5 ದೀನತೆ ಇಲ್ಲದ ವ್ಯಕ್ತಿಯಲ್ಲಿ ಅಹಂಕಾರ ಇರುತ್ತದೆ. ಇಂಥ ವ್ಯಕ್ತಿಗೆ ಮೂಗಿನ ಮೇಲೆ ಕೋಪ ಇರುತ್ತದೆ. ಯೆಹೋವನ ಮಾತನ್ನು ಅವನು ಕಿವಿಗೇ ಹಾಕಿಕೊಳ್ಳಲ್ಲ. ಇದು ಡಿಟ್ಟೋ ಸೈತಾನನನ್ನು ವರ್ಣಿಸುತ್ತದೆ ಅಲ್ವಾ? ಇದಕ್ಕೆ ಅವನಿಗೆ ದೀನ ವ್ಯಕ್ತಿಗಳನ್ನು ಕಂಡರೆ ಮೈ ಎಲ್ಲಾ ಆ್ಯಸಿಡ್‌ ಸುರಿದಂತೆ ಆಗುತ್ತದೆ. ಯಾಕೆಂದರೆ ಇವರನ್ನು ನೋಡಿದಾಗ ಸೈತಾನನ ವ್ಯಕ್ತಿತ್ವ ಎಷ್ಟು ಕಳಪೆ ಎಂದು ಚೆನ್ನಾಗಿ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಅವರು ಸೈತಾನನನ್ನು ಒಬ್ಬ ಸುಳ್ಳ ಎಂದು ಸಹ ರುಜುಪಡಿಸುತ್ತಾರೆ. ಹೇಗೆ ಅಂತೀರಾ? ಸೈತಾನ ತಲೆ ಕೆಳಗೆ ನಿಂತರೂ ದೀನರು ದೇವರ ಸೇವೆ ಮಾಡುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅವನಿಗೆ ಅವರ ಮೇಲೆ ಎಲ್ಲಿಲ್ಲದ ಕೋಪ ಬರುತ್ತದೆ.—ಯೋಬ 2:3-5.

6 ದೀನತೆ ತೋರಿಸಲು ಯಾವಾಗ ಕಷ್ಟ ಆಗುತ್ತದೆ? ಈ ಗುಣವನ್ನು ನಾವು ಯಾಕೆ ಬೆಳೆಸಿಕೊಳ್ಳುತ್ತಾ ಇರಬೇಕು? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮೋಶೆ, ಬಾಬೆಲಿನಲ್ಲಿದ್ದ ಮೂವರು ಇಬ್ರಿಯ ಯುವಕರು ಮತ್ತು ಯೇಸು ಇಟ್ಟಿರುವ ಮಾದರಿಯನ್ನು ನೋಡೋಣ.

ದೀನತೆ ತೋರಿಸಲು ಯಾವಾಗ ಕಷ್ಟ ಆಗುತ್ತದೆ?

7-8. ಮೋಶೆಗೆ ಸಿಗಬೇಕಾದ ಗೌರವ ಸಿಗದಿದ್ದಾಗ ಆತನು ಏನು ಮಾಡಿದನು?

7 ಅಧಿಕಾರ ಸಿಕ್ಕಿದಾಗ: ಅಧಿಕಾರದ ಸ್ಥಾನದಲ್ಲಿರುವವರಿಗೆ ಕೆಲವೊಮ್ಮೆ ದೀನರಾಗಿರಲು ಕಷ್ಟ ಆಗುತ್ತದೆ. ತಮ್ಮ ಮೇಲ್ವಿಚಾರಣೆಯ ಕೆಳಗಿರುವವರು ಅವರಿಗೆ ಗೌರವ ಕೊಡದಿದ್ದಾಗ ಅಥವಾ ಅವರ ತೀರ್ಮಾನಗಳನ್ನು ಪ್ರಶ್ನಿಸುವಾಗ ದೀನತೆ ತೋರಿಸುವುದು ತುಂಬ ಕಷ್ಟ ಆಗುತ್ತದೆ. ನಿಮಗೆ ಇಂಥ ಸನ್ನಿವೇಶ ಎದುರಾಗಿದೆಯಾ? ನಿಮ್ಮ ಕುಟುಂಬದ ಸದಸ್ಯನೇ ಹೀಗೆ ಮಾಡಿದರೆ ನಿಮಗೆ ಹೇಗನಿಸಬಹುದು? ಆಗ ನೀವು ಏನು ಮಾಡುತ್ತೀರಿ? ಇಂಥ ಸನ್ನಿವೇಶದಲ್ಲಿ ಮೋಶೆ ಏನು ಮಾಡಿದ ನೋಡಿ.

8 ಯೆಹೋವನು ಮೋಶೆಯನ್ನು ಇಸ್ರಾಯೇಲ್ಯರ ಮೇಲೆ ನಾಯಕನಾಗಿ ನೇಮಿಸಿ ದೇಶದ ಕಾನೂನು-ಕಾಯಿದೆಗಳನ್ನು ದಾಖಲಿಸುವ ಜವಾಬ್ದಾರಿಯನ್ನು ಕೊಟ್ಟನು. ಯೆಹೋವನು  ಮೋಶೆಯನ್ನು ಬೆಂಬಲಿಸುತ್ತಿದ್ದಾನೆ ಅಂತ ಚೆನ್ನಾಗಿ ಗೊತ್ತಾಗುತ್ತಿತ್ತು. ಆದರೂ ಮೋಶೆಯ ಸ್ವಂತ ಅಕ್ಕ ಮಿರ್ಯಾಮ ಮತ್ತು ಅಣ್ಣ ಆರೋನ ಮೋಶೆಯ ವಿರುದ್ಧ ಮಾತಾಡಿದರು. ಮೋಶೆ ಬೇರೆ ದೇಶದ ಸ್ತ್ರೀಯನ್ನು ಮದುವೆಯಾದದ್ದು ಸರಿನಾ ಎಂದು ಪ್ರಶ್ನಿಸಿದರು. ಮೋಶೆಯ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಕೋಪ ಮಾಡಿಕೊಳ್ಳುತ್ತಿದ್ದರು ಮತ್ತು ಸರಿಯಾದ ತಿರುಗೇಟು ಕೊಡಲು ನೋಡುತ್ತಿದ್ದರು. ಆದರೆ ಮೋಶೆ ಹಾಗೆ ಮಾಡಲಿಲ್ಲ. ಆತನು ಕೋಪ ಮಾಡಿಕೊಳ್ಳಲಿಲ್ಲ. ಮಿರ್ಯಾಮಳನ್ನು ದಯವಿಟ್ಟು ಕ್ಷಮಿಸಿಬಿಡು ಎಂದು ಯೆಹೋವನಲ್ಲಿ ಬೇಡಿಕೊಂಡನು. (ಅರ. 12:1-13) ಮೋಶೆ ಯಾಕೆ ಹೀಗೆ ಪ್ರತಿಕ್ರಿಯಿಸಿದನು?

ಮಿರ್ಯಾಮಳನ್ನು ಕ್ಷಮಿಸುವಂತೆ ಮೋಶೆ ದೇವರ ಹತ್ತಿರ ಬೇಡಿಕೊಂಡನು (ಪ್ಯಾರ 8 ನೋಡಿ)

9-10. (ಎ) ಯೆಹೋವನು ಮೋಶೆಗೆ ಯಾವ ವಿಷಯವನ್ನು ಅರ್ಥಮಾಡಿಸಿದನು? (ಬಿ) ಕುಟುಂಬದ ತಲೆಗಳು ಮತ್ತು ಹಿರಿಯರು ಮೋಶೆಯಿಂದ ಏನು ಕಲಿಯಬಹುದು?

9 ತನ್ನನ್ನು ಯೆಹೋವನು ರೂಪಿಸಲು ಮೋಶೆ ಬಿಟ್ಟುಕೊಟ್ಟನು. ಸುಮಾರು 40 ವರ್ಷಗಳ ಹಿಂದೆ, ಐಗುಪ್ತದ ರಾಜಮನೆತನದ ಸದಸ್ಯನಾಗಿದ್ದಾಗ ಮೋಶೆಯಲ್ಲಿ ದೀನತೆ ಇರಲಿಲ್ಲ. ಆತನಿಗೆ ಎಷ್ಟು ಬೇಗ ಕೋಪ ಬರುತ್ತಿತ್ತೆಂದರೆ, ಒಮ್ಮೆ ಒಬ್ಬ ವ್ಯಕ್ತಿ ಅನ್ಯಾಯ ಮಾಡುತ್ತಿರುವುದನ್ನು ನೋಡಿ ಅವನನ್ನು ಕೊಂದು ಹೂತುಹಾಕಿಬಿಟ್ಟ. ತನ್ನ ಈ ಸಾಹಸ ಕೃತ್ಯಗಳನ್ನು ಯೆಹೋವನು ಮೆಚ್ಚುತ್ತಾನೆ ಎಂದು ಇವನೇ ತೀರ್ಮಾನ ಮಾಡಿಕೊಂಡಿಬಿಟ್ಟಿದ್ದನು. ಆದರೆ ಇಸ್ರಾಯೇಲಿನ ನಾಯಕನಾಗಲು ಧೈರ್ಯ ಮಾತ್ರ ಸಾಕಾಗಲ್ಲ ದೀನತೆನೂ ಬೇಕೆಂದು ಅರ್ಥಮಾಡಿಸಲು ಯೆಹೋವನು ಮೋಶೆಗೆ 40 ವರ್ಷ ತರಬೇತಿ ಕೊಟ್ಟನು. ದೀನತೆ ಬೇಕಾದರೆ ಆತನು ಅಧೀನತೆ ಮತ್ತು ಸೌಮ್ಯಭಾವವನ್ನು ಸಹ ಬೆಳೆಸಿಕೊಳ್ಳಬೇಕಿತ್ತು. ಮೋಶೆ ಯೆಹೋವನು ಕೊಟ್ಟ ತರಬೇತಿಗೆ ಒಳ್ಳೇ ರೀತಿ ಸ್ಪಂದಿಸಿ ಅತ್ಯುತ್ತಮ ನಾಯಕನಾದ.—ವಿಮೋ. 2:11, 12; ಅ. ಕಾ. 7:21-30, 36.

10 ಇಂದು ಕುಟುಂಬದ ತಲೆಗಳು ಮತ್ತು ಹಿರಿಯರು ಮೋಶೆಯನ್ನು ಅನುಕರಿಸಬೇಕು. ಯಾರಾದರೂ ಗೌರವ ಕೊಡದಿದ್ದರೆ ಸಿಟ್ಟುಮಾಡಿಕೊಳ್ಳಬೇಡಿ. ನಿಮ್ಮಿಂದ ಏನಾದರೂ ತಪ್ಪಾಗಿಬಿಟ್ಟರೆ ಅದನ್ನು ದೀನತೆಯಿಂದ ಒಪ್ಪಿಕೊಳ್ಳಿ. (ಪ್ರಸಂ. 7:9, 20) ಸಮಸ್ಯೆಗಳು ಎದುರಾದಾಗ ಅಧೀನತೆಯಿಂದ ಯೆಹೋವನು ಕೊಡುವ ಸಲಹೆಗಳನ್ನು ಅನ್ವಯಿಸಿಕೊಳ್ಳಿ. ಯಾವುದೇ ಸನ್ನಿವೇಶ ಇರಲಿ ಸೌಮ್ಯಭಾವದಿಂದ ಉತ್ತರ ಕೊಡಿ. (ಜ್ಞಾನೋ. 15:1) ಈ ರೀತಿ ನಡಕೊಳ್ಳುವ ಕುಟುಂಬದ ತಲೆಗಳು ಮತ್ತು ಮೇಲ್ವಿಚಾರಕರನ್ನು ನೋಡುವಾಗ ಯೆಹೋವನಿಗೆ ಇಷ್ಟವಾಗುತ್ತದೆ. ಇಂಥವರು ಮನೆಯಲ್ಲಿ ಮತ್ತು ಸಭೆಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ. ದೀನತೆ ತೋರಿಸುವುದರಲ್ಲಿ ಇವರು ಒಳ್ಳೇ ಮಾದರಿ ಇಡುತ್ತಾರೆ.

11-13. ಮೂವರು ಇಬ್ರಿಯರು ಯಾವ ಒಳ್ಳೇ ಮಾದರಿ ಇಟ್ಟಿದ್ದಾರೆ?

11 ಹಿಂಸೆ ಬಂದಾಗ: ಹಿಂದಿನ ಕಾಲದಿಂದಲೂ ಮಾನವ ನಾಯಕರು ಯೆಹೋವನ ಜನರಿಗೆ ಹಿಂಸೆ ಕೊಟ್ಟಿದ್ದಾರೆ. ನಮ್ಮ ಮೇಲೆ ಅವರು ಏನೇನೋ ಅಪವಾದ ಹಾಕಬಹುದು. ಆದರೆ ಅವರು ನಮ್ಮ ಮೇಲೆ ಕೋಪ ಮಾಡಿಕೊಳ್ಳಲು ನಿಜವಾದ ಕಾರಣ ಏನೆಂದರೆ, ‘ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದೇ.’ (ಅ. ಕಾ. 5:29) ನಮ್ಮನ್ನು ಅವಮಾನ ಮಾಡುವುದು, ಜೈಲಿಗೆ ಹಾಕುವುದಷ್ಟೇ ಅಲ್ಲ ಮೈಮೇಲೆ ಕೈಮಾಡಲು ಸಹ ಹೇಸುವುದಿಲ್ಲ. ಆದರೆ ಯೆಹೋವನು ಸಹಾಯ ಕೊಡುವುದರಿಂದ ನಾವು ಅವರ ವಿರುದ್ಧ ಎಗರಾಡದೇ ಶಾಂತವಾಗಿರಲು ಪ್ರಯತ್ನಿಸುತ್ತೇವೆ.

12 ಬಾಬೆಲಿನಲ್ಲಿದ್ದ ಮೂವರು ಇಬ್ರಿಯ ಯುವಕರು ಅಂದರೆ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಬಗ್ಗೆ ಯೋಚಿಸಿ. *  ಬಾಬೆಲಿನ ರಾಜ ಬಂಗಾರದ ದೊಡ್ಡ ವಿಗ್ರಹವನ್ನು ಮಾಡಿ ಅದಕ್ಕೆ ಅಡ್ಡಬೀಳಬೇಕೆಂದು ಆಜ್ಞಾಪಿಸಿದನು. ಅವರು ಸೌಮ್ಯಭಾವದಿಂದ ವಿಗ್ರಹವನ್ನು ಆರಾಧಿಸಲು ಆಗುವುದಿಲ್ಲ ಎಂದು ರಾಜನಿಗೆ ವಿವರಿಸಿದರು. ‘ಬೆಂಕಿಗೆ ಹಾಕಿ ಸುಟ್ಟುಹಾಕಿಬಿಡುತ್ತೇನೆ’ ಎಂದು ರಾಜ ಬೆದರಿಕೆ ಹಾಕಿದರೂ ಅವರು ದೇವರಿಗೆ ಅಧೀನರಾಗಿ ಉಳಿದರು. ಅವರನ್ನು ರಾಜ ಬೆಂಕಿಗೆ ಹಾಕಿದಾಗ ಯೆಹೋವನು ತಕ್ಷಣ ಅವರನ್ನು ಕಾಪಾಡಿದ. ಆದರೆ ಯೆಹೋವನು ತಮ್ಮನ್ನು ಕಾಪಾಡಲೇಬೇಕೆಂದು ನೆನಸದೆ, ಆತನು ಏನನ್ನೇ ಅನುಮತಿಸಿದರೂ ಅದನ್ನು ಸ್ವೀಕರಿಸುತ್ತೇವೆ ಎಂದು ಅವರು ತೀರ್ಮಾನ ಮಾಡಿಕೊಂಡಿದ್ದರು. (ದಾನಿ. 3:1, 8-28) ದೀನರಲ್ಲಿ ನಿಜವಾದ ಧೀರತೆ ಇರುತ್ತದೆ ಎಂದು ಅವರು ತೋರಿಸಿಕೊಟ್ಟರು. ಯೆಹೋವನಿಗೆ ಕೊಡಬೇಕಾದ ಭಕ್ತಿಯನ್ನು ಬೇರೆ ಯಾರಿಗೂ ಕೊಡಬಾರದೆಂದು ನಾವು ಸಹ ತೀರ್ಮಾನ ಮಾಡಿಕೊಂಡಿದ್ದೇವೆ. ಇದನ್ನು ಯಾವ ನಾಯಕನಾಗಲಿ, ಯಾವ ಬೆದರಿಕೆಯಾಗಲಿ, ಯಾವ ಶಿಕ್ಷೆಯಾಗಲಿ ಕದಲಿಸಲು ಸಾಧ್ಯವಿಲ್ಲ.—ವಿಮೋ. 20:4, 5.

13 ನಮ್ಮ ನಿಷ್ಠೆಗೆ ಏನಾದರೂ ಸವಾಲು ಎದುರಾದರೆ ಆ ಮೂವರು ಇಬ್ರಿಯರನ್ನು ನಾವು ಹೇಗೆ ಅನುಕರಿಸಬಹುದು? ಏನೇ ಆದರೂ ನಾವು ದೀನರಾಗಿದ್ದು ಯೆಹೋವನು ನಮ್ಮ ಕೈಬಿಡಲ್ಲ ಎಂದು ನಂಬಬೇಕು. (ಕೀರ್ತ. 118:6, 7) ಯಾರಾದರೂ ನಮ್ಮ ಮೇಲೆ ಏನಾದರೂ ಅಪವಾದ ಹಾಕಿದರೆ ಸೌಮ್ಯಭಾವದಿಂದ, ಗೌರವದಿಂದ ಉತ್ತರ ಕೊಡಬೇಕು. (1 ಪೇತ್ರ 3:15) ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯ ಜೊತೆ ಇರುವ ಸಂಬಂಧವನ್ನು ಏನೇ ಆದರೂ ಬಿಟ್ಟುಕೊಡಬಾರದು.

ಬೇರೆಯವರು ನಮ್ಮನ್ನು ವಿರೋಧಿಸುವಾಗ ನಾವು ಗೌರವದಿಂದ ಮಾತಾಡುತ್ತೇವೆ (ಪ್ಯಾರ 13 ನೋಡಿ)

14-15. (ಎ) ಒತ್ತಡದಲ್ಲಿ ಇದ್ದಾಗ ನಾವೇನು ಮಾಡಿಬಿಡಬಹುದು? (ಬಿ) ಯೆಶಾಯ 53:7, 10 ಕ್ಕೆ ಅನುಸಾರ, ಒತ್ತಡದಲ್ಲಿ ಇದ್ದಾಗ ದೀನತೆ ತೋರಿಸಿದವರಲ್ಲಿ ಯೇಸುವೇ ಅತ್ಯುತ್ತಮ ಮಾದರಿ ಇಟ್ಟಿದ್ದಾನೆಂದು ಹೇಗೆ ಹೇಳಬಹುದು?

14 ಒತ್ತಡದಲ್ಲಿ ಇದ್ದಾಗ: ನಮ್ಮೆಲ್ಲರಿಗೂ ಒಂದಲ್ಲ ಒಂದು ಕಾರಣಕ್ಕೆ ಒತ್ತಡ ಆಗುತ್ತದೆ. ಶಾಲಾ ಪರೀಕ್ಷೆಯ ಮುಂಚೆ ಅಥವಾ ಬಾಸ್‌ ಕೊಟ್ಟ ಕೆಲಸ ಮಾಡುವ ಮುಂಚೆ ಒತ್ತಡ ಆಗಿರಬಹುದು. ಆರೋಗ್ಯ ಸರಿ ಇಲ್ಲದ ಕಾರಣ ಚಿಕಿತ್ಸೆ ಪಡೆಯುವ ಮುಂಚೆ ಒತ್ತಡ ಆಗಿರಬಹುದು. ಒತ್ತಡದಲ್ಲಿ ಇದ್ದಾಗ ದೀನತೆ ತೋರಿಸುವುದು ಕಷ್ಟ. ಸಾಮಾನ್ಯವಾಗಿ ನಮಗೆ ಕಿರಿಕಿರಿಮಾಡದ ವಿಷಯಗಳು ಸಹ ಒತ್ತಡ ಇದ್ದಾಗ ಕಿರಿಕಿರಿಮಾಡಬಹುದು. ನಾವು ಬೇರೆಯವರ ಮೇಲೆ ಕಿರಿಚಾಡಬಹುದು, ಒರಟಾಗಿ ನಡಕೊಳ್ಳಬಹುದು. ನಿಮಗೆ ಯಾವತ್ತಾದರೂ ಹೀಗೆ ಆಗಿದ್ದರೆ ಯೇಸುವಿನ ಮಾದರಿಗೆ ಸ್ವಲ್ಪ ಗಮನ ಕೊಡಿ.

15 ಯೇಸು ಭೂಮಿಯ ಮೇಲಿದ್ದ ಕೊನೆಯ ತಿಂಗಳುಗಳಲ್ಲಿ ಆತನ ಮೇಲೆ ವಿಪರೀತವಾದ ಒತ್ತಡ ಇತ್ತು. ಜನರು ತನಗೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಾರೆ ಎಂದು ಆತನಿಗೆ ಗೊತ್ತಿತ್ತು. (ಯೋಹಾ. 3:14, 15; ಗಲಾ. 3:13) ತಾನು ಸಾಯುವ ಕೆಲವು ತಿಂಗಳುಗಳ ಮುಂಚೆ ತುಂಬ ಸಂಕಟದಲ್ಲಿದ್ದೇನೆ ಎಂದು ಯೇಸು ಹೇಳಿದನು. (ಲೂಕ 12:50) ತನ್ನ ಸಾವಿಗೆ ಕೆಲವೇ ದಿನಗಳಿದ್ದಾಗ ‘ನಾನು ಕಳವಳಗೊಂಡಿದ್ದೇನೆ’ ಎಂದನು. ಯೇಸುವಿನಲ್ಲಿ ಎಷ್ಟು ದೀನತೆ ಇತ್ತು, ದೇವರಿಗೆ ಎಷ್ಟು ಅಧೀನನಾಗಿದ್ದನು ಅಂತ ಆತನು ಮಾಡಿದ ಪ್ರಾರ್ಥನೆಯಲ್ಲಿ ಗೊತ್ತಾಗುತ್ತದೆ. “ತಂದೆಯೇ, ಈ ಗಳಿಗೆಯಿಂದ ನನ್ನನ್ನು ಕಾಪಾಡು. ಆದರೆ ನಾನು ಈ ಗಳಿಗೆಗಾಗಿಯೇ ಬಂದಿದ್ದೇನೆ. ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸು” ಎಂದು ಹೇಳಿದನು. (ಯೋಹಾ. 12:27, 28) ಸಮಯ ಬಂದಾಗ ದೇವರ ವೈರಿಗಳಿಗೆ ಯೇಸು ತನ್ನನ್ನೇ ಒಪ್ಪಿಸಿಕೊಟ್ಟನು. ಅವರು ಆತನಿಗೆ ತುಂಬ ನೋವು ಕೊಟ್ಟು ಹೀನಾಯ ರೀತಿಯಲ್ಲಿ ಕೊಂದುಹಾಕಿದರು. ಇಷ್ಟೆಲ್ಲಾ ಒತ್ತಡ ಇದ್ದರೂ, ಇಷ್ಟೆಲ್ಲಾ ನೋವು ತಿನ್ನುತ್ತಿದ್ದರೂ ಯೇಸು ದೀನತೆಯಿಂದ ದೇವರಿಗೆ ಏನಿಷ್ಟಾನೋ ಅದನ್ನು ಮಾಡಿ ಮುಗಿಸಿದನು. ಒತ್ತಡದಲ್ಲಿ ಇದ್ದಾಗ ದೀನತೆ ತೋರಿಸಿದವರಲ್ಲಿ ಯೇಸುವೇ ಅತ್ಯುತ್ತಮ ಮಾದರಿ ಇಟ್ಟಿದ್ದಾನೆಂದು ಖಂಡಿತ ಹೇಳಬಹುದು.—ಯೆಶಾಯ 53:7, 10 ಓದಿ.

ದೀನತೆ ತೋರಿಸಿದ್ದರಲ್ಲಿ ಯೇಸುವೇ ಅತ್ಯುತ್ತಮ ಮಾದರಿ (ಪ್ಯಾರ 16-17 ನೋಡಿ) *

16-17. (ಎ) ಯೇಸುವಿನ ಅಪೊಸ್ತಲರು ಆತನ ದೀನತೆಯನ್ನು ಹೇಗೆ ಪರೀಕ್ಷಿಸಿದರು? (ಬಿ) ನಾವು ಹೇಗೆ ಯೇಸುವನ್ನು ಅನುಕರಿಸಬಹುದು?

16 ಯೇಸುವಿನ ಜೀವನದ ಕೊನೆಯ ರಾತ್ರಿಯಂದು ಆತನ ಅತ್ಯಾಪ್ತ ಸ್ನೇಹಿತರೇ ಆತನ ದೀನತೆಯನ್ನು ಪರೀಕ್ಷಿಸುವ ರೀತಿ ನಡಕೊಂಡರು. ಆ ರಾತ್ರಿ ಯೇಸು ಎಷ್ಟು ಒತ್ತಡದಲ್ಲಿ ಇದ್ದಿರಬೇಕೆಂದು ಯೋಚಿಸಿ. ಆತನು ಕೊನೆ ಉಸಿರಿರುವ ತನಕ ಸಂಪೂರ್ಣವಾಗಿ ನಂಬಿಗಸ್ತನಾಗಿ ಇರಬೇಕಿತ್ತು. ಆತನು ತೋರಿಸಲಿದ್ದ ನಂಬಿಗಸ್ತಿಕೆಯ ಮೇಲೆ ಕೋಟಿಗಟ್ಟಲೆ ಜನರ ಜೀವ ಅವಲಂಬಿಸಿತ್ತು. (ರೋಮ. 5:18, 19) ಇದಕ್ಕಿಂತಲೂ ಮುಖ್ಯವಾಗಿ ಆತನ ತಂದೆಯ ಹೆಸರನ್ನು ಆತನು ಕಾಪಾಡಬೇಕಿತ್ತು. (ಯೋಬ 2:4) ಇದೆಲ್ಲದರ ಮಧ್ಯೆ, ತನ್ನ ಅತ್ಯಾಪ್ತ ಸ್ನೇಹಿತರು ಅಂದರೆ ತನ್ನ ಅಪೊಸ್ತಲರ ಜೊತೆ ಆತನು ಮಾಡಿದ ಕೊನೇ ಊಟದ ಸಮಯದಲ್ಲಿ ಏನಾಯಿತು ಗೊತ್ತಾ? “ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ ಅವರ ಮಧ್ಯೆ ತೀಕ್ಷ್ಣ ವಾಗ್ವಾದ” ನಡೆಯಿತು. ಈ ವಿಷಯದಲ್ಲಿ ಯೇಸು ಅವರಿಗೆ ಎಷ್ಟೋ ಸಲ ಸಲಹೆ ಕೊಟ್ಟಿದ್ದನು. ಆ ದಿನ ಸಾಯಂಕಾಲ ಕೂಡ ಅವರ ಕಾಲನ್ನು ತೊಳೆಯುವ ಮೂಲಕ ಮಾದರಿ ಇಟ್ಟನು. ಆದರೂ ಅವರು ಹೀಗೆ ಮಾಡುತ್ತಿರುವುದನ್ನು ನೋಡಿ ಆತನಿಗೆ ಕಿರಿಕಿರಿಯಾಗಲಿಲ್ಲ, ಸೌಮ್ಯಭಾವದಿಂದ  ಮಾತಾಡಿದನು. ಅವರಲ್ಲಿ ಯಾವ ಮನೋಭಾವ ಇರಬೇಕೆಂದು ಯೇಸು ಪುನಃ ವಿವರಿಸಿದನು. ಇದನ್ನು ನೇರವಾಗಿ ಹೇಳಿದರೂ ದಯೆಯಿಂದ ಹೇಳಿದನು. ತನ್ನ ಜೊತೆ ನಿಷ್ಠೆಯಿಂದ ಇದ್ದದ್ದಕ್ಕೆ ಆತನು ಅವರನ್ನು ಶ್ಲಾಘಿಸಿದನು.—ಲೂಕ 22:24-28; ಯೋಹಾ. 13:1-5, 12-15.

17 ಇದೇ ರೀತಿಯ ಸನ್ನಿವೇಶದಲ್ಲಿ ನೀವಿರುತ್ತಿದ್ದರೆ ಏನು ಮಾಡುತ್ತಿದ್ದಿರಿ? ನಾವು ಯೇಸುವನ್ನು ಅನುಕರಿಸುತ್ತಾ ಒತ್ತಡದಲ್ಲಿ ಇರುವಾಗಲೂ ಸೌಮ್ಯಭಾವ ತೋರಿಸಬೇಕು. ‘ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ’ ಎಂದು ಯೆಹೋವನು ಕೊಟ್ಟಿರುವ ಆಜ್ಞೆಗೆ ಮನಃಪೂರ್ವಕವಾಗಿ ವಿಧೇಯರಾಗಬೇಕು. (ಕೊಲೊ. 3:13) ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಬೇರೆಯವರಿಗೆ ಕಿರಿಕಿರಿ ಆಗುವ ರೀತಿ ಮಾತಾಡುತ್ತೇವೆ ಅಥವಾ ನಡಕೊಳ್ಳುತ್ತೇವೆ. ಇದನ್ನು ಮನಸ್ಸಲ್ಲಿಟ್ಟರೆ ‘ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ’ ಎಂಬ ದೇವರ ಆಜ್ಞೆಯನ್ನು ಪಾಲಿಸುತ್ತೇವೆ. (ಜ್ಞಾನೋ. 12:18; ಯಾಕೋ. 3:2, 5) ಬೇರೆಯವರಲ್ಲಿರುವ ಒಳ್ಳೇ ವಿಷಯಗಳ ಬಗ್ಗೆ ಮಾತಾಡಲು ನಾವು ಕಲಿಯಬೇಕು.—ಎಫೆ. 4:29.

ಯಾಕೆ ದೀನರಾಗಿಯೇ ಇರಬೇಕು?

18. (ಎ) ದೀನರು ಒಳ್ಳೇ ತೀರ್ಮಾನಗಳನ್ನು ಮಾಡಲು ಯೆಹೋವನು ಹೇಗೆ ಸಹಾಯ ಮಾಡುತ್ತಾನೆ? (ಬಿ) ಆದರೆ ನಾವೇನು ಮಾಡಬೇಕು?

18 ದೀನರಾಗಿದ್ದರೆ ಒಳ್ಳೇ ತೀರ್ಮಾನಗಳನ್ನು ಮಾಡುತ್ತೇವೆ. ಜೀವನದಲ್ಲಿ ನಾವು ಕೆಲವು ಪ್ರಾಮುಖ್ಯವಾದ ತೀರ್ಮಾನಗಳನ್ನು ಮಾಡಬೇಕಾಗಿರುತ್ತದೆ. ಇಂಥ ಸಮಯದಲ್ಲಿ ನಾವು ದೀನರಾಗಿದ್ದರೆ ಮಾತ್ರ ಒಳ್ಳೇ ತೀರ್ಮಾನಗಳನ್ನು ಮಾಡಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ. ಆತನು “ದೀನರ ಕೋರಿಕೆಯನ್ನು” ಕೇಳುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. (ಕೀರ್ತ. 10:17) ಅಷ್ಟೇ ಅಲ್ಲ, “ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡಿಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು” ಎಂದು ಬೈಬಲ್‌ ಹೇಳುತ್ತದೆ. (ಕೀರ್ತ. 25:9) ಯೆಹೋವನು ತನ್ನ ವಾಕ್ಯವಾದ ಬೈಬಲ್‌ ಮತ್ತು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನಿಂದ’ ಬರುವ ಪ್ರಕಾಶನಗಳು * ಮತ್ತು ಕಾರ್ಯಕ್ರಮಗಳ ಮೂಲಕ ನಮಗೆ ಮಾರ್ಗದರ್ಶನ ನೀಡುತ್ತಾನೆ. (ಮತ್ತಾ. 24:45-47) ನಾವೇನು ಮಾಡಬೇಕು? ಯೆಹೋವನು ಕೊಡುವ ಸಹಾಯವನ್ನು ದೀನತೆಯಿಂದ ಸ್ವೀಕರಿಸಬೇಕು, ಆತನು ಕೊಡುವ ಮಾಹಿತಿಯನ್ನು ಅಧ್ಯಯನ ಮಾಡಬೇಕು ಮತ್ತು ಕಲಿತದ್ದನ್ನು ತಕ್ಷಣ ಅನ್ವಯಿಸಿಕೊಳ್ಳಬೇಕು.

19-21. (ಎ) ಕಾದೇಶಿನಲ್ಲಿ ಮೋಶೆ ಯಾವ ತಪ್ಪು ಮಾಡಿದನು? (ಬಿ) ಇದರಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು?

19 ದೀನರಾಗಿದ್ದರೆ ನಾವು ಹೆಚ್ಚು ತಪ್ಪು ಮಾಡಲ್ಲ. ಪುನಃ ಮೋಶೆಯ ಬಗ್ಗೆ ಯೋಚಿಸಿ. ಆತನು ಎಷ್ಟೋ ವರ್ಷ ದೀನನಾಗಿದ್ದನು. ಇದು ಯೆಹೋವನಿಗೆ ತುಂಬ ಇಷ್ಟವಾಯಿತು. ಆದರೆ 40 ವರ್ಷ ಅರಣ್ಯದಲ್ಲಿ ಅಲೆದಾಡಿದ ಮೇಲೆ ಮೋಶೆ ದೀನತೆ ತೋರಿಸಲು ತಪ್ಪಿಹೋದನು. ಆತನ ಅಕ್ಕ ಆಗಷ್ಟೇ ತೀರಿಕೊಂಡಿದ್ದಳು ಮತ್ತು ಅವಳನ್ನು ಕಾದೇಶಿನಲ್ಲಿ ಮಣ್ಣುಮಾಡಲಾಗಿತ್ತು. ಮೋಶೆ ಮಗುವಾಗಿದ್ದಾಗ ಆತನ ಜೀವವನ್ನು ಕಾಪಾಡಿದ್ದು ಈ ಅಕ್ಕನೇ ಆಗಿರಬೇಕು. ಈಗ ಇಸ್ರಾಯೇಲ್ಯರು ಮತ್ತೊಮ್ಮೆ ಗೊಣಗಲು ಆರಂಭಿಸಿದರು. ತಮ್ಮನ್ನು ಒಳ್ಳೇದಾಗಿ ನೋಡಿಕೊಳ್ಳುತ್ತಿಲ್ಲ, ನೀರಿಲ್ಲ ಎಂದು ಹೇಳಿ ಮೋಶೆಯ ಜೊತೆ ಜಗಳಕ್ಕಿಳಿದರು. ಯೆಹೋವನು ಮೋಶೆಯ ಮೂಲಕ ನಡಿಸಿದ್ದ ಎಲ್ಲಾ ಅದ್ಭುತಗಳನ್ನು  ಈ ಜನ ನೋಡಿದ್ದರು. ಇಷ್ಟು ವರ್ಷ ಮೋಶೆ ಒಬ್ಬ ಒಳ್ಳೇ ನಾಯಕನಾಗಿ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದರೂ ಜನ ದೂರಿದರು. ನೀರಿಲ್ಲದ್ದಕ್ಕೆ ಮೋಶೆಯೇ ಕಾರಣ ಅನ್ನುವ ರೀತಿ ಆತನ ಮೇಲೆ ಕೋಪಗೊಂಡರು.—ಅರ. 20:1-5, 9-11.

20 ಮೋಶೆಗೆ ಇದನ್ನು ತಡಿಯಕ್ಕಾಗಲಿಲ್ಲ. ಆತನಿಗೆ ತುಂಬ ಕೋಪ ಬಂತು. ಬಂಡೆಯ ಹತ್ತಿರ ಮಾತಾಡುವಂತೆ ಯೆಹೋವನು ಹೇಳಿದ್ದರೂ ಮೋಶೆ ಜನರ ಹತ್ತಿರ ಸಿಟ್ಟಿನಿಂದ ಮಾತಾಡಿದ ಮತ್ತು ತಾನೇ ಒಂದು ಅದ್ಭುತ ಮಾಡುವ ತರ ಮಾತಾಡಿದ. ಬಂಡೆಯನ್ನು ಎರಡು ಸಾರಿ ಬಡಿದಾಗ ತುಂಬ ನೀರು ಬಂತು. ಅಹಂ ಮತ್ತು ಕೋಪ ಸೇರಿ ಈ ಗಂಭೀರ ತಪ್ಪಿಗೆ ನಡೆಸಿಬಿಟ್ಟಿತು. (ಕೀರ್ತ. 106:32, 33) ಮೋಶೆ ಸ್ವಲ್ಪ ಸಮಯಕ್ಕೆ ದೀನತೆ ಕಳೆದುಕೊಂಡದ್ದರಿಂದ ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶ ಆತನಿಗೆ ಸಿಗಲಿಲ್ಲ.—ಅರ. 20:12.

21 ಈ ಘಟನೆಯಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿಯಬಹುದು. ಒಂದು, ನಾವು ಸದಾ ದೀನರಾಗಿರಲು ಪ್ರಯತ್ನ ಹಾಕುತ್ತಾ ಇರಬೇಕು. ಒಂದು ಕ್ಷಣಕ್ಕಾದರೂ ದೀನತೆ ತೋರಿಸದೆ ಹೋದರೆ ಅಹಂ ಬಂದುಬಿಡುತ್ತದೆ ಮತ್ತು ನಾವು ಒರಟಾಗಿ ಏನಾದರೂ ಹೇಳಿಬಿಡಬಹುದು ಅಥವಾ ಮಾಡಿಬಿಡಬಹುದು. ಎರಡು, ಒತ್ತಡ ನಮ್ಮನ್ನು ದುರ್ಬಲ ಮಾಡಿಬಿಡುತ್ತದೆ. ಆದ್ದರಿಂದ ಒತ್ತಡದಲ್ಲಿದ್ದಾಗಲೂ ದೀನರಾಗಿರಲು ನಾವು ಶ್ರಮಿಸಬೇಕು.

22-23. (ಎ) ನಾವು ಯಾಕೆ ದೀನರಾಗಿಯೇ ಇರಬೇಕು? (ಬಿ) ಚೆಫನ್ಯ 2:3 ರಲ್ಲಿರುವ ಮಾತಿನಿಂದ ಏನು ಗೊತ್ತಾಗುತ್ತದೆ?

22 ದೀನರಾಗಿದ್ದರೆ ನಮಗೆ ಸಂರಕ್ಷಣೆ ಸಿಗುತ್ತದೆ. ಯೆಹೋವನು ತುಂಬ ಬೇಗ ಭೂಮಿಯಿಂದ ದುಷ್ಟರನ್ನು ನಾಶಮಾಡಿಬಿಡುತ್ತಾನೆ. ಆಮೇಲೆ ದೀನರು ಮಾತ್ರ ಇರುತ್ತಾರೆ. ಆಗ ಭೂಮಿಯಲ್ಲಿ ನಿಜ ಶಾಂತಿ ಇರುತ್ತದೆ. (ಕೀರ್ತ. 37:10, 11) ನೀವು ಆ ದೀನರಲ್ಲಿ ಒಬ್ಬರಾಗಿರುತ್ತೀರಾ? ಪ್ರವಾದಿ ಜೆಕರ್ಯನ ಮೂಲಕ ಯೆಹೋವನು ಹೇಳಿರುವ ಮಾತಿಗನುಸಾರ ನಡೆದರೆ ನೀವು ಸಹ ಆ ದೀನರಲ್ಲಿ ಒಬ್ಬರಾಗಿರುತ್ತೀರಿ.—ಚೆಫನ್ಯ 2:3 ಓದಿ.

23 ಚೆಫನ್ಯ 2:3 “ಒಂದುವೇಳೆ ಮರೆಯಾಗುವಿರಿ” ಎಂದು ಯಾಕೆ ಹೇಳುತ್ತದೆ? ಯೆಹೋವನಿಗೆ ಇಷ್ಟವಾದದ್ದನ್ನು ಮಾಡುವ ಜನರನ್ನು ಮತ್ತು ಆತನು ಪ್ರೀತಿಸುವ ಜನರನ್ನು ಕಾಪಾಡಕ್ಕೆ ಆತನಿಗೆ ಆಗಲ್ಲ ಅನ್ನುವ ಅರ್ಥದಲ್ಲಿ ಆ ಮಾತನ್ನು ಕೊಟ್ಟಿಲ್ಲ. ಸಂರಕ್ಷಣೆ ಬೇಕಾದರೆ ನಾವೇನೋ ಮಾಡಬೇಕು ಅನ್ನುವ ವಿಷಯಕ್ಕೆ ಅದು ಸೂಚಿಸುತ್ತದೆ. ‘ಯೆಹೋವನ ಸಿಟ್ಟಿನ ದಿನವನ್ನು’ ಪಾರಾಗಿ ಶಾಶ್ವತವಾಗಿ ಬದುಕುವ ಅವಕಾಶ ನಮ್ಮ ಮುಂದಿದೆ. ಈ ಬದುಕು ನಮಗೆ ಬೇಕಾದರೆ ನಾವು ದೀನರಾಗಿರಬೇಕು ಮತ್ತು ಯೆಹೋವನ ಮನಸ್ಸನ್ನು ಸಂತೋಷಪಡಿಸಬೇಕು.

ಗೀತೆ 82 ಕ್ರಿಸ್ತನ ಸೌಮ್ಯಭಾವವನ್ನು ಅನುಕರಿಸಿರಿ

^ ಪ್ಯಾರ. 5 ಹುಟ್ಟಿನಿಂದಲೇ ನಮಗೆ ದೀನತೆ ಬಂದಿಲ್ಲ. ನಾವು ಅದನ್ನು ಬೆಳೆಸಿಕೊಳ್ಳಬೇಕು. ಸಾಧುಸ್ವಭಾವದ ಜನರ ಹತ್ತಿರ ದೀನತೆ ತೋರಿಸುವುದು ಸುಲಭ. ಆದರೆ ಜಂಬ ಇರುವ ಜನರ ಹತ್ತಿರ ದೀನತೆ ತೋರಿಸುವುದು ಕಷ್ಟ. ದೀನತೆ ಎಂಬ ಸುಂದರವಾದ ಗುಣ ಬೆಳೆಸಿಕೊಳ್ಳಲು ಕೆಲವು ಸವಾಲುಗಳನ್ನು ಜಯಿಸಬೇಕಾಗುತ್ತದೆ. ಅದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸೋಣ.

^ ಪ್ಯಾರ. 3 ಪದ ವಿವರಣೆ: ದೀನತೆ. ದೀನತೆ ಇರುವ ವ್ಯಕ್ತಿ ಬೇರೆಯವರ ಜೊತೆ ದಯೆಯಿಂದ ನಡಕೊಳ್ಳುತ್ತಾನೆ. ಬೇರೆಯವರು ಕಿರಿಕಿರಿ ಮಾಡಿದಾಗಲೂ ಸೌಮ್ಯಭಾವ ತೋರಿಸುತ್ತಾನೆ. ಇಂಥ ವ್ಯಕ್ತಿಯಲ್ಲಿ ಅಹಂಭಾವ ಇರಲ್ಲ. ಬೇರೆಯವರನ್ನು ತನಗಿಂತ ಶ್ರೇಷ್ಠರು ಎಂದು ನೋಡುತ್ತಾನೆ. ಇದೇ ಗುಣವನ್ನು ಯೆಹೋವನಿಗೆ ಸೂಚಿಸಿ ಮಾತಾಡುವಾಗ, ತನ್ನ ಕೆಳಗಿರುವವರ ಜೊತೆ ಆತನು ಪ್ರೀತಿಯಿಂದ ಮತ್ತು ದಯೆಯಿಂದ ನಡಕೊಳ್ಳುತ್ತಾನೆ ಎಂಬರ್ಥ ಬರುತ್ತದೆ.

^ ಪ್ಯಾರ. 12 ಬಾಬೆಲಿನವರು ಈ ಮೂವರು ಇಬ್ರಿಯರನ್ನು ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಎಂಬ ಹೆಸರಿಂದ ಕರೆಯುತ್ತಿದ್ದರು.—ದಾನಿ. 1:7.

^ ಪ್ಯಾರ. 18 ಉದಾಹರಣೆಗೆ, 2011 ಏಪ್ರಿಲ್‌ 15 ರ ಕಾವಲಿನಬುರುಜು ಸಂಚಿಕೆಯಲ್ಲಿ ಬಂದ “ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ” ಎಂಬ ಲೇಖನ ನೋಡಿ.

^ ಪ್ಯಾರ. 59 ಚಿತ್ರ ವಿವರಣೆ: ತಮ್ಮಲ್ಲಿ ಯಾರು ದೊಡ್ಡವರು ಎಂದು ಶಿಷ್ಯರು ವಾಗ್ವಾದ ಮಾಡಿದ ಮೇಲೆ ಯೇಸು ಸೌಮ್ಯಭಾವದಿಂದ ಅವರನ್ನು ತಿದ್ದುತ್ತಿದ್ದಾನೆ.