ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಜೀವನ ಕಥೆ

ಆಧ್ಯಾತ್ಮಿಕ ವಾತಾವರಣದಲ್ಲಿಆಧ್ಯಾತ್ಮಿಕವಾಗಿ ಬೆಳೆದೆ

ಆಧ್ಯಾತ್ಮಿಕ ವಾತಾವರಣದಲ್ಲಿಆಧ್ಯಾತ್ಮಿಕವಾಗಿ ಬೆಳೆದೆ

ಮಧ್ಯರಾತ್ರಿ, ನಾನು ಮತ್ತು ಒಬ್ಬ ಸಹೋದರ ನೈಜರ್‌ ನದಿ ದಡದಲ್ಲಿ ನಿಂತಿದ್ವಿ. ಇದು ದೊಡ್ಡ ನದಿ, ಸುಮಾರು ಒಂದೂವರೆ ಕಿ.ಮೀ. ಅಗಲ. ನೀರು ವೇಗವಾಗಿ ಹರಿಯುತ್ತಿತ್ತು. ನೈಜೀರಿಯದಲ್ಲಿ ಅಂತರ್ಯುದ್ಧ ನಡೆಯುತ್ತಾ ಇತ್ತು. ಆದ್ದರಿಂದ ನೈಜರ್‌ ನದಿಯನ್ನು ದಾಟಿದರೆ ನಮ್ಮ ಜೀವ ಹೋಗುವ ಸಾಧ್ಯತೆ ಇತ್ತು. ಆದರೂ ನಾವು ಒಂದಲ್ಲ ಎರಡಲ್ಲ, ಅನೇಕ ಸಲ ನಮ್ಮ ಜೀವ ಕೈಯಲ್ಲಿ ಹಿಡುಕೊಂಡು ಈ ಸಾಹಸ ಮಾಡಬೇಕಿತ್ತು. ನನ್ನ ಜೀವನದಲ್ಲಿ ಇಂಥ ಸನ್ನಿವೇಶ ಹೇಗೆ ಬಂತು? ನನ್ನ ಕಥೆ ಹೇಳುತ್ತೇನೆ ಕೇಳಿ.

1913 ರಲ್ಲಿ ನನ್ನ ತಂದೆ ಜಾನ್‌ ಮಿಲ್ಸ್‌ ನ್ಯೂಯಾರ್ಕ್‌ ನಗರದಲ್ಲಿ ದೀಕ್ಷಾಸ್ನಾನ ಪಡೆದರು. ಆಗ ಅವರಿಗೆ 25 ವಯಸ್ಸು. ಸಹೋದರ ರಸಲ್‌ ದೀಕ್ಷಾಸ್ನಾನದ ಭಾಷಣವನ್ನು ಕೊಟ್ಟರು. ಇದಾದ ಕೂಡಲೆ ನನ್ನ ಅಪ್ಪ ಟ್ರಿನಿಡಾಡ್‌ಗೆ ಹೋದರು. ಅಲ್ಲಿ ಅವರು ಕಾನ್ಸ್‌ಟನ್ಸ್‌ ಫಾರ್ಮರ್‌ ಎಂಬ ಹುರುಪುಳ್ಳ ಬೈಬಲ್‌ ವಿದ್ಯಾರ್ಥಿಯನ್ನು ಮದುವೆ ಮಾಡಿಕೊಂಡರು. “ಫೋಟೋ ಡ್ರಾಮ ಆಫ್‌ ಕ್ರಿಯೇಷನ್‌” ಅನ್ನು ತೋರಿಸಲು ನನ್ನ ಅಪ್ಪ ಅವರ ಸ್ನೇಹಿತರಾದ ವಿಲ್ಯಮ್‌ ಬ್ರೌನ್‌ಗೆ ಸಹಾಯ ಮಾಡಿದರು. 1923 ರಲ್ಲಿ ಬ್ರೌನ್‌ ದಂಪತಿಯನ್ನು ಪಶ್ಚಿಮ ಆಫ್ರಿಕಕ್ಕೆ ನೇಮಿಸುವ ತನಕ ಅವರಿಗೆ ಸಹಾಯ ಮಾಡಿದರು. ಆದರೆ ಅಪ್ಪ-ಅಮ್ಮ ಟ್ರಿನಿಡಾಡ್‌ನಲ್ಲೇ ಉಳಿದರು. ಅವರಿಬ್ಬರಿಗೂ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇತ್ತು.

ಅಪ್ಪ-ಅಮ್ಮಂಗೆ ನಾವೆಂದರೆ ಜೀವ

ನಾವು ಒಂಭತ್ತು ಜನ ಮಕ್ಕಳು. ಮೊದಲನೇ ಮಗನಿಗೆ ಅಪ್ಪ-ಅಮ್ಮ ರದರ್‌ಫರ್ಡ್‌ ಎಂದು ಹೆಸರಿಟ್ಟರು. ಆಗ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಸಹೋದರ ರದರ್‌ಫರ್ಡ್‌ ಹೆಸರನ್ನೇ ಅಣ್ಣನಿಗೆ ಇಟ್ಟರು. ನಾನು 1922 ರ ಡಿಸೆಂಬರ್‌ 30 ರಂದು ಹುಟ್ಟಿದೆ. ನನಗೆ ವುಡ್‌ವರ್ತ್‌ ಅಂತ ಹೆಸರಿಟ್ಟರು. ಇದು ಆಗ ಗೋಲ್ಡನ್‌ ಏಜ್‌ (ಈಗ ಎಚ್ಚರ!) ಪತ್ರಿಕೆಯ ಸಂಪಾದಕರಾದ ಕ್ಲೇಟನ್‌ ವುಡ್‌ವರ್ತ್‌ ಅವರ ಹೆಸರಾಗಿತ್ತು. ನಮ್ಮ ಹೆತ್ತವರು ನಮ್ಮೆಲ್ಲರಿಗೂ ಮೂಲಭೂತ ಶಿಕ್ಷಣ ಕೊಟ್ಟರು. ಆದರೆ ಆಧ್ಯಾತ್ಮಿಕ ಗುರಿಗಳು ಮುಖ್ಯ ಎಂದು ಯಾವಾಗಲೂ ಹೇಳುತ್ತಿದ್ದರು. ಅಮ್ಮಂಗೆ ಬೈಬಲಿಂದ ತರ್ಕಿಸಿ ಮಾತಾಡುವ ವಿಶೇಷ ಸಾಮರ್ಥ್ಯ ಇತ್ತು. ಅಪ್ಪ ನಮಗೆ ಬೈಬಲ್‌ ಕಥೆಗಳನ್ನು ಹೇಳಲು ಇಷ್ಟಪಡುತ್ತಿದ್ದರು. ಕಥೆ ಹೇಳುವಾಗ ಅವರು ಕಥೆಯಲ್ಲಿ ಬರುವ ವ್ಯಕ್ತಿ ತರಾನೇ ಸನ್ನೆ ಮಾಡುತ್ತಾ ಭಾವನೆ ತೋರಿಸುತ್ತಾ ಮಾತಾಡುತ್ತಿದ್ದರು. ಇದರಿಂದ ನಮಗೆ ನಡೆದ ಘಟನೆಯನ್ನು ಚಿತ್ರಿಸಿಕೊಳ್ಳಲು ಸಹಾಯವಾಗುತ್ತಿತ್ತು.

ಅವರ ಪ್ರಯತ್ನಗಳಿಗೆ ಒಳ್ಳೇ ಪ್ರತಿಫಲ ಸಿಕ್ಕಿತು. ಐದು ಗಂಡುಮಕ್ಕಳಲ್ಲಿ ಮೂವರು ಗಿಲ್ಯಡ್‌ ಶಾಲೆಗೆ ಹೋದ್ವಿ. ನನ್ನ ಮೂರು ತಂಗಿಯರು ಟ್ರಿನಿಡಾಡ್‌ ಮತ್ತು ಟೊಬಾಗೊದಲ್ಲಿ ತುಂಬ ವರ್ಷ ಪಯನೀಯರ್‌ ಸೇವೆ ಮಾಡಿದರು. ನಮ್ಮ ಹೆತ್ತವರು ತಮ್ಮ ಮಾತು ಮತ್ತು ಮಾದರಿಯ ಮೂಲಕ ನಮಗೆ ಚೆನ್ನಾಗಿ ಕಲಿಸಿದ್ದರಿಂದ ನಾವು ‘ಯೆಹೋವನ ಆಲಯದಲ್ಲಿ ಸಸಿಗಳಂತೆ ನೆಡಲ್ಪಟ್ಟೆವು.’ ಅವರು ಕೊಟ್ಟ ಪ್ರೋತ್ಸಾಹದಿಂದ ನಾವು ಯೆಹೋವನ ಆಲಯದಲ್ಲೇ ಇದ್ದು ‘ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯಲು’ ಸಾಧ್ಯವಾಯಿತು.—ಕೀರ್ತ. 92:13.

ನಮ್ಮ ಮನೆಯಲ್ಲೇ ಸಾರುವ ಕೆಲಸಕ್ಕೆ ಬೇಕಾದ ಏರ್ಪಾಡಾಗುತ್ತಿತ್ತು. ಹೀಗೆ ನಮ್ಮ ಮನೆಯಲ್ಲಿ ಒಟ್ಟುಸೇರಿದಾಗ ಪಯನೀಯರರು ತುಂಬ ಸಲ ಸಹೋದರ ಜಾರ್ಜ್‌ ಯಂಗ್‌ ಬಗ್ಗೆ ಮಾತಾಡುತ್ತಿದ್ದರು. ಸಹೋದರ  ಯಂಗ್‌ ಕೆನಡದ ಮಿಷನರಿಯಾಗಿದ್ದರು. ಅವರು ಟ್ರಿನಿಡಾಡ್‌ಗೆ ಭೇಟಿ ಕೊಟ್ಟಿದ್ದರು. ಅಪ್ಪ-ಅಮ್ಮ ತಮ್ಮ ಜೊತೆ ಹಿಂದೆ ಸೇವೆ ಮಾಡಿದ್ದ ಬ್ರೌನ್‌ ದಂಪತಿ ಬಗ್ಗೆ ಉತ್ಸಾಹದಿಂದ ಮಾತಾಡುತ್ತಿದ್ದರು. ಆ ಸಮಯದಲ್ಲಿ ಬ್ರೌನ್‌ ದಂಪತಿ ಪಶ್ಚಿಮ ಆಫ್ರಿಕದಲ್ಲಿ ಸೇವೆ ಮಾಡುತ್ತಿದ್ದರು. ಈ ಅನುಭವಗಳನ್ನೆಲ್ಲಾ ಕೇಳಿಸಿಕೊಂಡ ನಾನು 10 ನೇ ವಯಸ್ಸಿಂದಲೇ ಸೇವೆಯಲ್ಲಿ ಭಾಗವಹಿಸಲು ಆರಂಭಿಸಿದೆ.

ಆಗಿನ ಕಾಲದಲ್ಲಿ ಸೇವೆ

ಆಗೆಲ್ಲಾ ನಮ್ಮ ಪತ್ರಿಕೆಗಳಲ್ಲಿ ಬರುತ್ತಿದ್ದ ವಿಷಯಗಳು ಬೆಂಕಿ ತರ ಇರುತ್ತಿದ್ದವು. ಯಾಕೆಂದರೆ ಅವು ಸುಳ್ಳು ಧರ್ಮ, ಸ್ವಾರ್ಥದಿಂದ ತುಂಬಿದ್ದ ವಾಣಿಜ್ಯ ವ್ಯವಸ್ಥೆ ಮತ್ತು ಭ್ರಷ್ಟವಾದ ರಾಜಕೀಯವನ್ನು ನೇರವಾಗಿ ಖಂಡಿಸುತ್ತಿತ್ತು. ಇದರಿಂದ ರೊಚ್ಚಿಗೆದ್ದ ಪಾದ್ರಿಗಳು ಟ್ರಿನಿಡಾಡ್‌ನ ರಾಜ್ಯಪಾಲನಿಗೆ ಹೇಳಿ ವಾಚ್‌ ಟವರ್‌ ಪ್ರಕಾಶನಗಳನ್ನು 1936 ರಲ್ಲಿ ನಿಷೇಧ ಮಾಡಿಬಿಟ್ಟರು. ನಾವು ನಮ್ಮ ಸಾಹಿತ್ಯವನ್ನು ಬಚ್ಚಿಟ್ಟುಕೊಂಡು ಅದು ಖಾಲಿಯಾಗುವ ವರೆಗೂ ಉಪಯೋಗಿಸಿದ್ವಿ. ನಾವು ಮೆರವಣಿಗೆ ಮಾಡುತ್ತಾ ಸೈಕಲಲ್ಲಿ ಹೋಗುತ್ತಾ ಮಾಹಿತಿ ಇರುವ ಫಲಕಗಳನ್ನು ಹಾಕಿಕೊಂಡು ಕರಪತ್ರಗಳನ್ನು ಕೊಡುತ್ತಿದ್ವಿ. ಟೂನಾಪೂನಾದಿಂದ ಬರುತ್ತಿದ್ದ ಸೌಂಡ್‌-ಕಾರ್‌ ಗುಂಪಿನ ಜೊತೆ ಸೇರಿ ನಾವು ಟ್ರಿನಿಡಾಡ್‌ನ ದೂರದೂರದ ಪ್ರದೇಶಗಳಿಗೆ ಹೋಗಿ ಸಾರುತ್ತಿದ್ವಿ. ಈ ಸೇವೆ ತುಂಬ ಆಸಕ್ತಿಕರವಾಗಿ ಇರುತ್ತಿತ್ತು. ಇಂಥ ಆಧ್ಯಾತ್ಮಿಕ ವಾತಾವರಣದಲ್ಲಿ ನಾನು ಬೆಳೆದದ್ದರಿಂದ 16 ನೇ ವಯಸ್ಸಲ್ಲೇ ದೀಕ್ಷಾಸ್ನಾನ ಪಡೆದುಕೊಂಡೆ.

ಟೂನಾಪೂನಾದಿಂದ ಬಂದ ಸೌಂಡ್‌ಕಾರ್‌ ಗುಂಪು

ಚಿಕ್ಕ ವಯಸ್ಸಿನಲ್ಲಿ ಅಪ್ಪ-ಅಮ್ಮ ಚೆನ್ನಾಗಿ ಬೆಳೆಸಿದ್ದರಿಂದ ಮತ್ತು ನನಗಾದ ಒಳ್ಳೇ ಅನುಭವಗಳಿಂದ ನನಗೆ ಮಿಷನರಿ ಆಗಬೇಕೆಂಬ ಆಸೆ ಬಂತು. ನಾನು 1944 ರಲ್ಲಿ ಅರೂಬಗೆ ಹೋಗಿ ಸಹೋದರ ಎಡ್ಮಂಡ್‌ ಕಮಿಂಗ್ಸ್‌ ಜೊತೆ ಸೇವೆ ಮಾಡಲು ಆರಂಭಿಸಿದಾಗಲೂ ಮಿಷನರಿ ಆಗಬೇಕೆಂಬ ಆಸೆ ಇತ್ತು. ಅರೂಬದಲ್ಲಿ ನಾವಿಬ್ಬರೂ ಸೇರಿ 1945 ರ ಸ್ಮರಣೆಗೆ 10 ಜನರನ್ನು ಒಟ್ಟುಸೇರಿಸಲು ಸಾಧ್ಯವಾಯಿತು. ಇದರಿಂದ ನಮಗೆ ತುಂಬ ಖುಷಿಯಾಯಿತು. ಮುಂದಿನ ವರ್ಷ ಆ ದ್ವೀಪದಲ್ಲಿ ಮೊದಲನೇ ಸಭೆಯನ್ನು ರಚಿಸಲಾಯಿತು.

ಒರಿಸ್‌ ಅನ್ನು ಮದುವೆಯಾದ ಮೇಲೆ ನನ್ನ ಜೀವನಕ್ಕೆ ಹೊಸ ಸ್ಫೂರ್ತಿ ಸಿಕ್ಕಿತು

ಕೆಲವು ದಿನಗಳಾದ ಮೇಲೆ ನಾನು ನನ್ನ ಜೊತೆ ಕೆಲಸ ಮಾಡುತ್ತಿದ್ದ ಒರಿಸ್‌ ವಿಲ್ಯಮ್ಸ್‌ ಎಂಬವಳಿಗೆ ಸಾಕ್ಷಿ ಕೊಟ್ಟೆ. ಒರಿಸ್‌ ತಾನು ನಂಬುತ್ತಿರುವುದೇ ಸರಿ ಎಂದು ತುಂಬ ವಾದ ಮಾಡಿದಳು. ಆದರೆ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದಾಗ ದೇವರ ವಾಕ್ಯ ನಿಜವಾಗಲೂ ಏನು ಹೇಳುತ್ತದೆ ಎಂದು ಅರ್ಥಮಾಡಿಕೊಂಡಳು. 1947 ರ ಜನವರಿ 5 ರಂದು ದೀಕ್ಷಾಸ್ನಾನ ಪಡೆದುಕೊಂಡಳು. ಆಮೇಲೆ ನಾವಿಬ್ಬರೂ ಪ್ರೀತಿ ಮಾಡಲು ಆರಂಭಿಸಿದ್ವಿ. ನಂತರ ನಮ್ಮ ಮದುವೆ ಆಯಿತು. ಅವಳು 1950 ರ ನವೆಂಬರ್‌ ತಿಂಗಳಲ್ಲಿ ಪಯನೀಯರ್‌ ಸೇವೆ ಆರಂಭಿಸಿದಳು. ಒರಿಸ್‌ ಜೊತೆ ನನ್ನ ಜೀವನ ತುಂಬ ಚೆನ್ನಾಗಿತ್ತು.

ನೈಜೀರಿಯದಲ್ಲಿ ರೋಮಾಂಚಕ ಸೇವೆ

1955 ರಲ್ಲಿ ನಮ್ಮನ್ನು 27 ನೇ ಗಿಲ್ಯಡ್‌ ತರಗತಿಗೆ ಆಮಂತ್ರಿಸಲಾಯಿತು. ಇದೊಂದು ದೊಡ್ಡ ಸುಯೋಗ. ಇದಕ್ಕೆ ತಯಾರಾಗಲು ನಾವು ನಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ವಿ. ನಮ್ಮ ಹತ್ತಿರ ಇದ್ದ ವಸ್ತುಗಳು ಮತ್ತು ಮನೆಯನ್ನು ಮಾರಿ ಅರೂಬದಿಂದ ಹೊರಟ್ವಿ. 1956 ರ ಜುಲೈ 29 ರಂದು ನಮ್ಮ ಪದವಿಪ್ರಾಪ್ತಿ ಕಾರ್ಯಕ್ರಮ ನಡೆಯಿತು. ನಮ್ಮನ್ನು ನೈಜೀರಿಯಕ್ಕೆ ನೇಮಿಸಲಾಯಿತು.

ನೈಜೀರಿಯದ ಲೇಗೊಸ್‌ನಲ್ಲಿ ಬೆತೆಲ್‌ ಕುಟುಂಬದ ಜೊತೆ, 1957

ಇದರ ಬಗ್ಗೆ ಯೋಚಿಸುತ್ತಾ ಒರಿಸ್‌ ಹೇಳಿದ್ದು: “ಮಿಷನರಿ ಜೀವನ ಅಷ್ಟು ಸುಲಭ ಅಲ್ಲ. ಆದರೆ ಏನೇ ಹೆಚ್ಚುಕಡಿಮೆ ಆದರೂ ಅದನ್ನು ತಾಳಿಕೊಂಡು ಹೋಗಲು ಪವಿತ್ರಾತ್ಮ ಸಹಾಯ ಮಾಡುತ್ತದೆ. ಮಿಷನರಿ ಆಗಬೇಕೆಂಬ ಆಸೆ ನನ್ನ ಗಂಡನಿಗಿತ್ತು, ಆದರೆ ನನಗಿರಲಿಲ್ಲ. ಮನೆ-ಮಕ್ಕಳು ಅಂತ ಇರುವುದು ನನಗಿಷ್ಟ. ಆದರೆ ಸಾರುವ ಕೆಲಸ ಎಷ್ಟು ತುರ್ತಿನಿಂದ ಮಾಡಬೇಕು ಎಂದು ಅರ್ಥವಾದಾಗ ನನ್ನ ಮನಸ್ಸನ್ನು ಬದಲಾಯಿಸಿಕೊಂಡೆ. ಗಿಲ್ಯಡ್‌ ಶಾಲೆ ಮುಗಿಸುವಷ್ಟರಲ್ಲಿ ನಾನೊಬ್ಬ ಮಿಷನರಿಯಾಗಿ ಸೇವೆ ಮಾಡಬೇಕೆಂದು ಪೂರ್ತಿ ಮನಸ್ಸು ಮಾಡಿಕೊಂಡಿದ್ದೆ. ನಾವು ಕ್ವೀನ್‌ ಮೇರಿ ಹಡಗನ್ನು ಹತ್ತಿದಾಗ ಸಹೋದರ ನಾರ್‌ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವರ್ತ್‌ ತಾರ್ನ್‌ಟನ್‌ ನಮಗೆ ವಿದಾಯ ಹೇಳಲು ಬಂದರು. ನಾವು ಬೆತೆಲ್‌ನಲ್ಲಿ ಸೇವೆ ಮಾಡಲಿದ್ದೇವೆ ಎಂದು ಹೇಳಿದರು. ನನ್ನ ಎದೆ ಧಸಕ್‌ ಎಂದಿತು. ಆದರೆ ಬೇಗ ಬೆತೆಲ್‌ ಜೀವನಕ್ಕೆ ಹೊಂದಿಕೊಂಡೆ. ಬೆತೆಲ್‌ನಲ್ಲಿ ನನಗೆ ಅನೇಕ ನೇಮಕಗಳು ಸಿಕ್ಕಿತು. ನನಗೆ ತುಂಬ ಇಷ್ಟವಾದ ನೇಮಕ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡಿದ್ದು. ನನಗೆ ಜನರ ಹತ್ತಿರ ಮಾತಾಡುವುದು ತುಂಬ ಇಷ್ಟ. ನನಗೆ ರಿಸೆಪ್ಷನಿಸ್ಟ್‌ ನೇಮಕ ಸಿಕ್ಕಿದ್ದರಿಂದ ನೈಜೀರಿಯದ ಸಹೋದರ-ಸಹೋದರಿಯರ ಜೊತೆ ನೇರವಾಗಿ ಮಾತಾಡಲು ಅನೇಕ ಅವಕಾಶ ಸಿಕ್ಕಿತು. ಬೆತೆಲ್‌ಗೆ ಭೇಟಿಕೊಡಲು ಬಂದ ಸಹೋದರ-ಸಹೋದರಿಯರು ಧೂಳು-ಮಣ್ಣು ಮೆತ್ತಿಕೊಂಡು, ತುಂಬ ಸುಸ್ತಾಗಿ, ಬಾಯಾರಿಕೆ ಹಸಿವೆಯಿಂದ ಬರುತ್ತಿದ್ದರು. ಅವರಿಗೆ ಬೇಕಾದ ಊಟ-ಉಪಚಾರ ಮಾಡಲು ಮತ್ತು ಸಾಂತ್ವನ ಕೊಡಲು ನನಗೆ ತುಂಬ ಸಂತೋಷ ಆಗುತ್ತಿತ್ತು. ಇದೆಲ್ಲಾ ಯೆಹೋವನಿಗೆ ಸಲ್ಲಿಸಿದ ಪವಿತ್ರ ಸೇವೆಯಾಗಿತ್ತು. ಇದರಿಂದ ನನಗೆ ತುಂಬ ತೃಪ್ತಿ ಸಿಗುತ್ತಿತ್ತು.” ಹೌದು, ಪ್ರತಿ ನೇಮಕದಲ್ಲಿ ನಾವು ಆಧ್ಯಾತ್ಮಿಕವಾಗಿ ಬೆಳೆಯಲು ಸಾಧ್ಯವಾಯಿತು.

1961 ರಲ್ಲಿ ಟ್ರಿನಿಡಾಡ್‌ನಲ್ಲಿ ನಾವು ಒಟ್ಟಿಗೆ ಸಮಯ ಕಳೆಯಲು ಒಂದು ಕಡೆ ಸೇರಿದಾಗ ಸಹೋದರ ಬ್ರೌನ್‌ ಆಫ್ರಿಕದಲ್ಲಿ ತಮಗೆ ಸಿಕ್ಕಿದ್ದ ಅದ್ಭುತವಾದ ಅನುಭವಗಳ ಬಗ್ಗೆ ಹೇಳಿದರು. ಆಮೇಲೆ ನಾನು ನೈಜೀರಿಯದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಹೇಳಿದೆ. ಆಗ ಸಹೋದರ ಬ್ರೌನ್‌ ನನ್ನ ಮೇಲೆ ಪ್ರೀತಿಯಿಂದ ಕೈಹಾಕಿ ನನ್ನ ತಂದೆಗೆ “ಜಾನಿ, ನೀನು ಯಾವತ್ತೂ ಆಫ್ರಿಕಕ್ಕೆ ಹೋಗಿ ಸೇವೆ ಮಾಡಲಿಲ್ಲ, ಆದರೆ ವುಡ್‌ವರ್ತ್‌ ಮಾಡಿದ್ದಾನೆ” ಎಂದರು. ಅದಕ್ಕೆ ಅಪ್ಪ “ನಿನ್ನ ಉತ್ತಮ ಸೇವೆಯನ್ನು ಮುಂದುವರಿಸು ವರ್ತ್‌, ಮುಂದುವರಿಸು” ಅಂದರು. ಯೆಹೋವನಿಗೆ ಎಷ್ಟೋ ವರ್ಷಗಳಿಂದ ನಂಬಿಗಸ್ತ ಸೇವೆ ಮಾಡಿದ್ದ ಇಂಥ ಆಧ್ಯಾತ್ಮಿಕ ವ್ಯಕ್ತಿಗಳಿಂದ ಸಿಕ್ಕಿದ ಪ್ರೋತ್ಸಾಹ ನನ್ನ ಸೇವೆಯನ್ನು ಸಂಪೂರ್ಣವಾಗಿ ಮಾಡಿ ಮುಗಿಸುವ ಆಸೆಯನ್ನು ಹೆಚ್ಚಿಸಿತು.

ವಿಲ್ಯಮ್‌ ಬ್ರೌನ್‌ (ಬೈಬಲ್‌ ಬ್ರೌನ್‌) ಮತ್ತು ಅವರ ಪತ್ನಿ ಆ್ಯಂಟೋನಿಯ ನಮ್ಮನ್ನು ತುಂಬ ಪ್ರೋತ್ಸಾಹಿಸಿದರು

1962 ರಲ್ಲಿ ಹೆಚ್ಚಿನ ತರಬೇತಿಗಾಗಿ 37 ನೇ ಗಿಲ್ಯಡ್‌ ಶಾಲೆಗೆ ಹೋಗುವ ಸುಯೋಗ ನನಗೆ ಸಿಕ್ಕಿತು. ಇದು ಹತ್ತು ತಿಂಗಳ ಶಾಲೆಯಾಗಿತ್ತು. ನೈಜೀರಿಯದ ಶಾಖಾ ಕಚೇರಿಯ ಮೇಲ್ವಿಚಾರಕರಾಗಿದ್ದ  ವಿಲ್ಫ್ರೆಡ್‌ ಗೂಚ್‌ 38 ನೇ ಶಾಲೆಗೆ ಹಾಜರಾದರು. ಆಮೇಲೆ ಅವರನ್ನು ಇಂಗ್ಲೆಂಡ್‌ಗೆ ನೇಮಿಸಲಾಯಿತು. ಈಗ ನಾನು ನೈಜೀರಿಯ ಶಾಖೆಯ ಉಸ್ತುವಾರಿ ವಹಿಸಬೇಕಾಯಿತು. ಸಹೋದರ ಬ್ರೌನ್‌ ಅವರ ಮಾದರಿಯನ್ನು ಅನುಕರಿಸುತ್ತಾ ನಾನು ಕೂಡ ತುಂಬ ಪ್ರಯಾಣ ಮಾಡಿ ತುಂಬ ಸಹೋದರರ ಪರಿಚಯ ಮಾಡಿಕೊಂಡೆ. ಇದರಿಂದ ನೈಜೀರಿಯದಲ್ಲಿದ್ದ ಪ್ರೀತಿಯ ಸಹೋದರ-ಸಹೋದರಿಯರ ಮೇಲೆ ನನಗೆ ಪ್ರೀತಿ ಹೆಚ್ಚಾಯಿತು. ಅವರ ಹತ್ತಿರ ಹೆಚ್ಚು ಆಸ್ತಿಪಾಸ್ತಿ ಇಲ್ಲದಿದ್ದರೂ ಅವರು ಸಂತೋಷವಾಗಿದ್ದರು, ಇರುವುದರಲ್ಲೇ ತೃಪ್ತರಾಗಿದ್ದರು. ಜೀವನ ಸಾರ್ಥಕವಾಗಬೇಕಾದರೆ ಅದಕ್ಕೆ ದುಡ್ಡು-ದೌಲತ್ತು ಬೇಕಾಗಿಲ್ಲ ಎಂದು ನನಗೆ ಅರ್ಥವಾಯಿತು. ಅವರ ಪರಿಸ್ಥಿತಿ ಹೀಗಿದ್ದರೂ ಕೂಟಗಳಿಗೆ ಅವರು ಶುದ್ಧವಾಗಿ ನೀಟಾಗಿ ಬರುತ್ತಿರುವುದನ್ನು ನೋಡಿದಾಗ ನನಗೆ ತುಂಬ ಖುಷಿ ಆಗುತ್ತಿತ್ತು. ಅಧಿವೇಶನಗಳಿಗೆ ಅವರು ಲಾರಿಗಳಲ್ಲಿ ಮತ್ತು ಬೊಲಕೇಜಾಗಳಲ್ಲಿ * (ಎರಡೂ ಕಡೆ ತೆರೆದಿರುವ ಸ್ಥಳೀಯವಾಗಿ ತಯಾರಿಸಿದ ಬಸ್ಸು) ಹಿಂಡು-ಹಿಂಡಾಗಿ ಬರುತ್ತಿದ್ದರು. ಈ ಬಸ್ಸುಗಳ ಮೇಲೆ ಆಸಕ್ತಿಕರವಾದ ವಾಕ್ಯಗಳು ಇರುತ್ತಿತ್ತು. ಒಂದು ಬಸ್ಸಿನ ಮೇಲೆ ಇಂಥದೊಂದು ವಾಕ್ಯ ಇತ್ತು: “ಹನಿಹನಿ ಕೂಡಿದರೆ ಹಳ್ಳ.”

ಆ ವಾಕ್ಯ ಎಷ್ಟು ಸತ್ಯವಾಗಿತ್ತು! ಒಬ್ಬೊಬ್ಬರೂ ಹಾಕುವ ಒಂದೊಂದು ಪ್ರಯತ್ನವೂ ಪ್ರಾಮುಖ್ಯ. ನಾವು ನಮ್ಮ ಪ್ರಯತ್ನ ಮಾಡಿದ್ವಿ. 1974 ರಷ್ಟಕ್ಕೆ ನೈಜೀರಿಯದಲ್ಲಿ ಪ್ರಚಾರಕರ ಸಂಖ್ಯೆ 1,00,000 ದಾಟಿತು. ಅಮೆರಿಕ ಬಿಟ್ಟು ಬೇರೆ ಯಾವ ದೇಶದಲ್ಲೂ ಇಷ್ಟು ಪ್ರಚಾರಕರು ಆಗ ಇರಲಿಲ್ಲ. ಕೆಲಸ ಖಂಡಿತ ಬೆಳೆದು ತುಂಬ ಫಲ ಕೊಡುತ್ತಿತ್ತು.

ಇಷ್ಟೆಲ್ಲಾ ಪ್ರಗತಿ ಆಗುತ್ತಿರುವಾಗ 1967 ರಿಂದ 1970 ರ ವರೆಗೆ ನೈಜೀರಿಯದಲ್ಲಿ ಅಂತರ್ಯುದ್ಧ ನಡೆಯುತ್ತಿತ್ತು. ಇದರಿಂದ ನೈಜರ್‌ ನದಿಯ ಬಿಯಾಫ್ರದ ಕಡೆಯಲ್ಲಿದ್ದ ಸಹೋದರರಿಗೂ ಶಾಖಾ ಕಚೇರಿಗೂ ಎಷ್ಟೋ ತಿಂಗಳುಗಳ ವರೆಗೆ ಸಂಪರ್ಕ ಇಲ್ಲದೇ ಹೋಯಿತು. ಆದ್ದರಿಂದ ನಾವು ಅವರಿಗೆ ಆಧ್ಯಾತ್ಮಿಕ ಆಹಾರವನ್ನು ತಗೊಂಡು ಹೋಗಲೇಬೇಕಾದ ಪರಿಸ್ಥಿತಿ ಎದುರಾಯಿತು. ಆರಂಭದಲ್ಲಿ ಹೇಳಿದಂತೆ ಯೆಹೋವನಿಗೆ ಪ್ರಾರ್ಥಿಸಿ ಧೈರ್ಯ ತಂದುಕೊಂಡು ನಾವು ನದಿಯನ್ನು ಅನೇಕ ಸಲ ದಾಟಬೇಕಾಗಿತ್ತು.

ನೈಜರ್‌ ನದಿಯನ್ನು ದಾಟುವುದು ತುಂಬ ಅಪಾಯಕಾರಿ ಆಗಿತ್ತು. ಸೈನಿಕರ ಕಣ್ಣಿಗೆ ಬಿದ್ದರೆ ಅವರು ಹಿಂದೆ-ಮುಂದೆ ಯೋಚಿಸದೆ ಗುಂಡು ಹಾರಿಸಿಬಿಡುತ್ತಿದ್ದರು. ಕಾಯಿಲೆಗಳು ಮತ್ತು ಬೇರೆ ಅಪಾಯಗಳೂ ಇತ್ತು. ಸಂದೇಹದಿಂದ ನೋಡುತ್ತಿದ್ದ ಸೈನಿಕರನ್ನು ದಾಟಿ ಹೋಗುವುದೇ ಸಾವಿಗೆ ಶೇಕ್‌ಹ್ಯಾಂಡ್‌ ಕೊಡುವ ತರ ಇತ್ತು. ಆದರೆ ಬಿಯಾಫ್ರ ಪ್ರಾಂತವನ್ನು ನಿಯಂತ್ರಿಸುತ್ತಿದ್ದ ಪಡೆಗಳನ್ನು ದಾಟುವಾಗ ನಮ್ಮ ಹೃದಯನೇ ಬಾಯಿಗೆ ಬಂದಂತೆ ಆಗುತ್ತಿತ್ತು. ಒಂದಿನ ರಾತ್ರಿ ನಾನು ಉಕ್ಕಿಹರಿಯುತ್ತಿದ್ದ ನೈಜರ್‌ ನದಿಯನ್ನು ಒಂದು ಚಿಕ್ಕ ದೋಣಿಯಲ್ಲಿ ದಾಟಿದೆ. ಅಸಾಬಾದಿಂದ ಒನಿಚಾಗೆ ಬಂದೆ ಮತ್ತು ಏನೂಗೂ ಎಂಬ ಸ್ಥಳದಲ್ಲಿದ್ದ ಮೇಲ್ವಿಚಾರಕರನ್ನು ಪ್ರೋತ್ಸಾಹಿಸಲು ಹೋದೆ. ಇನ್ನೊಂದು ಸಲ ನಾನು ಆಬಾದಲ್ಲಿದ್ದ ಹಿರಿಯರನ್ನು ಪ್ರೋತ್ಸಾಹಿಸಲು ಹೋದೆ. ಆಬಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವ ಮನೆಯಲ್ಲಿ ಆಗಲಿ ಕಟ್ಟಡದಲ್ಲಿ ಆಗಲಿ ಸಾಯಂಕಾಲ ಆದಮೇಲೆ ಲೈಟ್‌ ಹಾಕುವಂತಿರಲಿಲ್ಲ. ಪೋರ್ಟ್‌ ಹಾರ್ಕರ್ಟ್‌ನಲ್ಲಿ ನಾವು ಕೂಟಗಳನ್ನು ಬೇಗ-ಬೇಗ ಪ್ರಾರ್ಥನೆ ಮಾಡಿ ಮುಗಿಸಬೇಕಾಯಿತು. ಯಾಕೆಂದರೆ ಸರ್ಕಾರೀ ಪಡೆಗಳು ಬಿಯಾಫ್ರ ಪಟ್ಟಣದ ಹೊರಗೆ ಇದ್ದ ಬಂಡಾಯಗಾರರನ್ನು ಭೇದಿಸಿಕೊಂಡು ಬಂದರು.

ಆ ಕೂಟಗಳು ತುಂಬ ಮುಖ್ಯವಾಗಿದ್ದವು. ಇದರ ಮೂಲಕ ನಾವು ನಮ್ಮ ಪ್ರೀತಿಯ ಸಹೋದರರಿಗೆ ಯೆಹೋವನು ಅವರನ್ನು ಪ್ರೀತಿಸುತ್ತಾನೆ ಎಂದು ಆಶ್ವಾಸನೆ ಕೊಡಲು ಸಾಧ್ಯವಾಯಿತು. ಅಷ್ಟೇ ಅಲ್ಲ, ಅವರಿಗೆ ತಟಸ್ಥರಾಗಿರುವುದರ ಬಗ್ಗೆ ಮತ್ತು ಐಕ್ಯವಾಗಿರುವುದರ ಬಗ್ಗೆ ಸಲಹೆ ಕೊಡುವುದು ತುಂಬ ಜರೂರಿಯಾಗಿತ್ತು. ನೈಜೀರಿಯದಲ್ಲಿ ನಡೆದ ಆ ಘೋರ ಯುದ್ಧವನ್ನು ಅವರು ಯಶಸ್ವಿಕರವಾಗಿ ಪಾರಾದರು. ಯಾವುದೇ ಕುಲ, ಜಾತಿ ಅನ್ನುವ ಭೇದವನ್ನು ಮೀರಿಸುವ ಪ್ರೀತಿ ತೋರಿಸಿದರು. ಕ್ರೈಸ್ತ ಐಕ್ಯತೆಯನ್ನು ಕಾಪಾಡಿಕೊಂಡರು. ಅಂಥ ಘೋರ ಸಮಯದಲ್ಲಿ ಅವರ ಜೊತೆ ಇದ್ದದ್ದನ್ನು ನಾನೊಂದು ಸುಯೋಗ ಎಂದು ನೆನಸುತ್ತೇನೆ.

1969 ರಲ್ಲಿ ಸಹೋದರ ಮಿಲ್ಟನ್‌ ಹೆನ್ಶೆಲ್‌ ನ್ಯೂಯಾರ್ಕ್‌ನ ಯಾಂಕೀ ಸ್ಟೇಡಿಯಂನಲ್ಲಿ ನಡೆದ “ಭೂಮಿಯ ಮೇಲೆ ಶಾಂತಿ” ಎಂಬ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾನು ಅವರ ಸಹಾಯಕನಾಗಿದ್ದೆ. ಅವರಿಂದ ತುಂಬ ವಿಷಯಗಳನ್ನು ಕಲಿಯಕ್ಕಾಯಿತು. ಇದು ಸರಿಯಾದ ಸಮಯಕ್ಕೆ ಸಿಕ್ಕಿದ ತರಬೇತಿಯಾಗಿತ್ತು. ಯಾಕೆಂದರೆ 1970 ರಲ್ಲಿ ನೈಜೀರಿಯದ ಲೇಗೊಸ್‌ನಲ್ಲಿ “ದೇವರ ಪ್ರಸನ್ನತೆಯಿರುವ ಜನರು” ಎಂಬ ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ ನಾವು ಏರ್ಪಾಡು ಮಾಡಬೇಕಾಯಿತು. ಅಂತರ್ಯುದ್ಧ ಆಗಷ್ಟೇ ಮುಗಿದಿತ್ತು. ಆದ್ದರಿಂದ ಇಷ್ಟು ದೊಡ್ಡ ಅಧಿವೇಶನವನ್ನು ನಾವು ಯೆಹೋವನ ಸಹಾಯದಿಂದ ಮಾತ್ರ ಯಶಸ್ವಿಕರವಾಗಿ ಮಾಡಲು ಸಾಧ್ಯವಾಯಿತು. 17 ಭಾಷೆಗಳಲ್ಲಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಸುಮಾರು 1,21,128 ಮಂದಿ ಹಾಜರಿದ್ದರು. ಇದೆಲ್ಲಾ ದೊಡ್ಡ ದಾಖಲೆಯಾಗಿತ್ತು. ಸಹೋದರ ನಾರ್‌ ಮತ್ತು ಹೆನ್ಶೆಲ್‌ ಹಾಗೂ ಬೇರೆ ಸಹೋದರ-ಸಹೋದರಿಯರು ಅಮೆರಿಕ ಮತ್ತು ಇಂಗ್ಲೆಂಡ್‌ನಿಂದ ವಿಮಾನಗಳಲ್ಲಿ ಬಂದರು. 33 ನೇ ಪಂಚಾಶತ್ತಮದ ನಂತರ ನಡೆದ ಅತಿ ಹೆಚ್ಚು ಸಂಖ್ಯೆಯಲ್ಲಾದ ದೀಕ್ಷಾಸ್ನಾನವನ್ನು ಆ ಸಹೋದರ-ಸಹೋದರಿಯರು ನೋಡಲು ಸಾಧ್ಯವಾಯಿತು. 3,775 ಮಂದಿ ದೀಕ್ಷಾಸ್ನಾನ ಪಡಕೊಂಡರು! ಈ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳನ್ನು ಮಾಡುವಾಗ ನಾನು ತುಂಬ ಅಂದರೆ ತುಂಬ ಬ್ಯುಸಿಯಾಗಿದ್ದೆ. ನನ್ನ ಜೀವನದಲ್ಲಿ ಬೇರೆ ಯಾವ ಸಮಯದಲ್ಲೂ ನಾನಿಷ್ಟು ಬ್ಯುಸಿಯಾಗಿರಲಿಲ್ಲ. ಪ್ರಚಾರಕರ ಸಂಖ್ಯೆಯಲ್ಲಿ ಪ್ರಗತಿ ಅಲ್ಲ ಪ್ರವಾಹನೇ ಆಗಿಹೋಯಿತು!

“ದೇವರ ಪ್ರಸನ್ನತೆಯಿರುವ ಜನರು” ಎಂಬ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ 1,21,128 ಮಂದಿ ಹಾಜರಿದ್ದರು; ಇಬೋ ಸೇರಿಸಿ 17 ಭಾಷೆಗಳಲ್ಲಿ ಕಾರ್ಯಕ್ರಮ ನಡೆಯಿತು

ನಾನು ನೈಜೀರಿಯದಲ್ಲಿ 30 ವರ್ಷ ಇದ್ದೆ. ಪಶ್ಚಿಮ ಆಫ್ರಿಕದಲ್ಲಿ ಆಗಾಗ ಸಂಚರಣ ಮೇಲ್ವಿಚಾರಕನಾಗಿ ಮತ್ತು ಜೋನ್‌ ಮೇಲ್ವಿಚಾರಕನಾಗಿ ಸೇವೆ ಮಾಡಿದ್ದೇನೆ. ಈ ರೀತಿ ಮಿಷನರಿಗಳಿಗೆ ವೈಯಕ್ತಿಕ ಗಮನ ಮತ್ತು ಪ್ರೋತ್ಸಾಹ ಕೊಟ್ಟಾಗ ಅವರಿಗೆ ತುಂಬ ಸಂತೋಷವಾಗುತ್ತಿತ್ತು. ಅವರನ್ನು ಯೆಹೋವನು ಮರೆತಿಲ್ಲ ಎಂಬ ಆಶ್ವಾಸನೆ ಅವರಿಗೆ ಸಿಗುತ್ತಿತ್ತು. ಜನರಿಗೆ ವೈಯಕ್ತಿಕ ಆಸಕ್ತಿ ತೋರಿಸುವುದರಿಂದ ಅವರು ಬೆಳೆಯಲು  ಸಹಾಯವಾಗುತ್ತದೆ ಎಂದು ನಾನು ಅರ್ಥಮಾಡಿಕೊಂಡೆ. ಇದರಿಂದ ಯೆಹೋವನ ಸಂಘಟನೆ ಬಲವಾಗಿರುತ್ತದೆ, ಐಕ್ಯವಾಗಿರುತ್ತದೆ.

ಅಂತರ್ಯುದ್ಧ ಮತ್ತು ಕಾಯಿಲೆಗಳು ತಂದ ಸಮಸ್ಯೆಗಳನ್ನು ನಾವು ಯೆಹೋವನು ಕೊಟ್ಟ ಸಹಾಯದಿಂದಲೇ ತಾಳಿಕೊಂಡ್ವಿ. ಯೆಹೋವನ ಆಶೀರ್ವಾದವನ್ನು ನಾವು ಯಾವಾಗಲೂ ನೋಡಲು ಸಾಧ್ಯವಾಗುತ್ತಿತ್ತು. ಒರಿಸ್‌ ಹೇಳಿದ್ದು:

“ನಮ್ಮಿಬ್ಬರಿಗೂ ಅನೇಕ ಸಲ ಮಲೇರಿಯ ಬಂತು. ಒಂದು ಸಲ ಅಂತೂ ವರ್ತ್‌ಗೆ ಪ್ರಜ್ಞೆತಪ್ಪಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಅವರು ಬದುಕುವುದು ಕಷ್ಟ ಎಂದು ಡಾಕ್ಟರ್‌ ಹೇಳಿದ್ರು. ಆದರೆ ಸದ್ಯ ಹಾಗೇನೂ ಆಗಲಿಲ್ಲ. ಅವರಿಗೆ ಪ್ರಜ್ಞೆ ಬಂದಾಗ ತನ್ನನ್ನು ನೋಡಿಕೊಳ್ಳುತ್ತಿದ್ದ ನರ್ಸ್‌ಗೆ ದೇವರ ರಾಜ್ಯದ ಕುರಿತು ಮಾತಾಡಿದರು. ಆಮೇಲೆ ನಾವಿಬ್ಬರೂ ಆ ನರ್ಸನ್ನು ಭೇಟಿ ಮಾಡಿ ಅವರ ಆಸಕ್ತಿಯನ್ನು ಹೆಚ್ಚಿಸಲು ಹೋದ್ವಿ. ಅವರ ಹೆಸರು ನ್ವಾಂಬೀವೆ. ಅವರು ಸತ್ಯವನ್ನು ಸ್ವೀಕರಿಸಿದರು. ನಂತರ ಆಬಾದಲ್ಲಿ ಹಿರಿಯರಾಗಿ ಸೇವೆ ಮಾಡಿದರು. ನಾನು ಕೂಡ ಅನೇಕರಿಗೆ ಸತ್ಯ ಕಲಿಯಲು ಸಹಾಯ ಮಾಡಿದೆ. ಪಕ್ಕಾ ಮುಸ್ಲಿಮರು ಕೂಡ ಯೆಹೋವನ ಸೇವಕರಾಗಲು ಸಹಾಯ ಮಾಡಿದೆ. ನೈಜೀರಿಯದ ಜನರು, ಅವರ ಸಂಸ್ಕೃತಿ, ಅವರ ರೀತಿ-ರಿವಾಜು ಮತ್ತು ಅವರ ಭಾಷೆಯ ಬಗ್ಗೆ ತಿಳಿದುಕೊಂಡ್ವಿ. ಇದೆಲ್ಲಾ ನಮಗೆ ತುಂಬ ಇಷ್ಟವಾಯಿತು, ನಮ್ಮ ಸಂತೋಷಕ್ಕೆ ಕಾರಣವಾಯಿತು.”

ಇದರಲ್ಲಿ ನಾನು ಇನ್ನೊಂದು ಪಾಠ ಕಲಿತೆ: ನಾವು ವಿದೇಶೀ ನೇಮಕದಲ್ಲಿ ಯಶಸ್ಸು ಪಡೆಯಬೇಕಾದರೆ, ನಾವು ಹೋದ ಕಡೆ ಇರುವ ಸಹೋದರ-ಸಹೋದರಿಯರ ಸಂಸ್ಕೃತಿ ಅದೆಷ್ಟೇ ಭಿನ್ನವಾಗಿದ್ದರೂ ನಾವು ಅವರನ್ನು ಪ್ರೀತಿಸಲು ಕಲಿಯಬೇಕು.

ಹೊಸ ನೇಮಕಗಳು

ನೈಜೀರಿಯದ ಬೆತೆಲಿನಲ್ಲಿ ಸೇವೆ ಮಾಡಿದ ಮೇಲೆ 1987 ರಲ್ಲಿ ನಮಗೆ ಒಂದು ಹೊಸ ನೇಮಕ ಸಿಕ್ಕಿತು. ಕೆರೀಬಿಯನ್‌ ಸಮುದ್ರದಲ್ಲಿರುವ ಸೇಂಟ್‌ ಲೂಷಿಯ ಎಂಬ ಸುಂದರವಾದ ದ್ವೀಪದಲ್ಲಿ ನಮ್ಮನ್ನು ಮಿಷನರಿಗಳಾಗಿ ನೇಮಿಸಲಾಯಿತು. ಈ ನೇಮಕ ನಮಗೆ ತುಂಬ ಇಷ್ಟ ಆಯಿತು. ಆದರೆ ಕೆಲವು ಹೊಸ ಸವಾಲುಗಳನ್ನು ಎದುರಿಸಬೇಕಾಯಿತು. ಆಫ್ರಿಕದಲ್ಲಿ ಒಬ್ಬ ಗಂಡಸು ಹೆಚ್ಚು ಹೆಂಗಸರನ್ನು ಮದುವೆಯಾಗುವುದು ಸಮಸ್ಯೆ ಆಗಿತ್ತು. ಆದರೆ ಸೇಂಟ್‌ ಲೂಷಿಯದಲ್ಲಿ ಮದುವೆ ಮಾಡಿಕೊಳ್ಳದೆ ಗಂಡಸರು-ಹೆಂಗಸರು ಒಟ್ಟಿಗೆ ಜೀವಿಸುತ್ತಿದ್ದರು. ದೇವರ ವಾಕ್ಯದ ಶಕ್ತಿಯಿಂದ ನಮ್ಮ ಬೈಬಲ್‌ ವಿದ್ಯಾರ್ಥಿಗಳಲ್ಲಿ ಅನೇಕರು ಬೇಕಾದ ಬದಲಾವಣೆಗಳನ್ನು ಮಾಡಿಕೊಂಡರು.

ನಾವಿಬ್ಬರೂ 68 ವರ್ಷ ಒಟ್ಟಿಗೆ ಜೀವನ ಮಾಡಿದ್ವಿ. ನಾನು ಒರಿಸ್‌ ಅನ್ನು ತುಂಬ ಪ್ರೀತಿಸಿ 

ವಯಸ್ಸಾಗುತ್ತಾ ಇದ್ದದರಿಂದ ನಮ್ಮ ಶಕ್ತಿ ಕುಂದುತ್ತಾ ಇತ್ತು. ಆದ್ದರಿಂದ ಆಡಳಿತ ಮಂಡಲಿ ನಮ್ಮನ್ನು 2005 ರಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಮುಖ್ಯ ಕಾರ್ಯಾಲಯಕ್ಕೆ ಸ್ಥಳಾಂತರಿಸಿದರು. ನನಗೆ ಒರಿಸ್‌ ಹೆಂಡತಿಯಾಗಿ ಸಿಕ್ಕಿದ್ದಕ್ಕೆ ಪ್ರತಿ ದಿನ ಯೆಹೋವನಿಗೆ ಧನ್ಯವಾದ ಹೇಳುತ್ತೇನೆ. 2015 ರಲ್ಲಿ ಅವಳನ್ನು ಮರಣ ಎಂಬ ವೈರಿ ನನ್ನಿಂದ ದೂರ ಮಾಡಿತು. ನಾನು ಅವಳನ್ನು ಎಷ್ಟು ಮಿಸ್‌ ಮಾಡುತ್ತೇನೆ ಎಂದು ಮಾತುಗಳಲ್ಲಿ ಹೇಳಕ್ಕಾಗಲ್ಲ. ಅವಳು ನನ್ನ ಬಾಳನ್ನು ಬೆಳಗಿದಳು. ತುಂಬ ಪ್ರೀತಿ ಮಾಡುತ್ತಿದ್ದಳು, ಪ್ರೀತಿಗೆ ಪಾತ್ರಳಾದ ಹೆಂಡತಿಯಾಗಿದ್ದಳು. ನಾವು ಒಟ್ಟಿಗೆ 68 ವರ್ಷ ಜೀವನ ಮಾಡಿದ್ವಿ. ಈ ಎಲ್ಲಾ ಸಮಯದಲ್ಲಿ ನಾನು ಅವಳನ್ನು ತುಂಬ ಪ್ರೀತಿಸಿದೆ. ಕುಟುಂಬದಲ್ಲಾಗಲಿ ಸಭೆಯಲ್ಲಾಗಲಿ ಸಂತೋಷ ಬೇಕಾದರೆ ಮಾಡಬೇಕಾಗಿರುವುದು ಇಷ್ಟೇ: ತಲೆತನಕ್ಕೆ ಗೌರವ ಕೊಡಬೇಕು, ಉದಾರವಾಗಿ ಕ್ಷಮಿಸಬೇಕು, ದೀನರಾಗಿ ಉಳಿಯಬೇಕು, ಪವಿತ್ರಾತ್ಮದ ಫಲವನ್ನು ತೋರಿಸಬೇಕು. ಇದು ನಾವಿಬ್ಬರೂ ಕಂಡುಕೊಂಡ ಸೂತ್ರ.

ನಿರಾಶೆನೋ ನಿರುತ್ಸಾಹನೋ ಕಾಡಿದಾಗ ನಾವು ಯೆಹೋವನ ಹತ್ತಿರ ಪ್ರಾರ್ಥಿಸುತ್ತಿದ್ವಿ. ನಾವು ಮಾಡಿದ ತ್ಯಾಗಗಳು ವ್ಯರ್ಥ ಆಗದಂತೆ ನೋಡಿಕೋ ಅಪ್ಪಾ ಎಂದು ಬೇಡಿಕೊಳ್ಳುತ್ತಿದ್ವಿ. ನಾವು ಬೇಕಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಾ ಇದ್ದಾಗ ಎಲ್ಲಾ ಒಳ್ಳೇದಾಗಿ ನಡೆಯುತ್ತಾ ಇತ್ತು. ಮುಂದೆ ಇನ್ನಷ್ಟು ಒಳ್ಳೇ ವಿಷಯಗಳು ನಡೆಯಲಿವೆ.—ಯೆಶಾ. 60:17; 2 ಕೊರಿಂ. 13:11.

ಟ್ರಿನಿಡಾಡ್‌ ಮತ್ತು ಟೊಬಾಗೊದಲ್ಲಿ ನನ್ನ ಹೆತ್ತವರು ಮತ್ತು ಬೇರೆಯವರು ಮಾಡಿದ ಸೇವೆಯನ್ನು ಯೆಹೋವನು ಆಶೀರ್ವದಿಸಿದನು. ಇತ್ತೀಚೆಗೆ ಸಿಕ್ಕಿದ ವರದಿಗಳ ಪ್ರಕಾರ ಅಲ್ಲಿ 9,892 ಮಂದಿ ಸತ್ಯಾರಾಧನೆಯನ್ನು ಸ್ವೀಕರಿಸಿದ್ದಾರೆ. ಅರೂಬದಲ್ಲಿ ನಾನು ಮೊದಲು ಇದ್ದ ಸಭೆಯನ್ನು ಬಲಪಡಿಸಲು ತುಂಬ ಜನ ಕಷ್ಟಪಟ್ಟಿದ್ದಾರೆ. ಈಗ ಆ ದ್ವೀಪದಲ್ಲಿ 14 ಸಭೆಗಳು ಇವೆ. ನೈಜೀರಿಯದಲ್ಲಿ ಪ್ರಚಾರಕರ ಸಂಖ್ಯೆ ಒಂದು ದೊಡ್ಡ ಜನಸ್ತೋಮ ಆಗಿದೆ. ಈಗ 3,81,398 ಮಂದಿ ಇದ್ದಾರೆ. ಸೇಂಟ್‌ ಲೂಷಿಯದಲ್ಲಿ 783 ಮಂದಿ ದೇವರ ರಾಜ್ಯಕ್ಕೆ ಬೆಂಬಲ ಕೊಟ್ಟಿದ್ದಾರೆ.

ನನಗೀಗ 90 ವಯಸ್ಸು ದಾಟಿದೆ. ಕೀರ್ತನೆ 92:14 ಹೇಳುವ ಪ್ರಕಾರ, ಯೆಹೋವನ ಆಲಯದಲ್ಲಿ ನೆಡಲ್ಪಟ್ಟವರು “ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು.” ಯೆಹೋವನ ಸೇವೆಗೆ ನಾನು ನನ್ನ ಜೀವನವನ್ನು ಕೊಟ್ಟೆ ಅಂತ ನೆನಸುವಾಗ ತುಂಬ ಖುಷಿಯಾಗುತ್ತದೆ. ಆಧ್ಯಾತ್ಮಿಕ ವಾತಾವರಣದಲ್ಲಿ ಇದ್ದದ್ದು ಯೆಹೋವನ ಸೇವೆಯನ್ನು ಜೀವನಪೂರ್ತಿ ಮಾಡಲು ಪ್ರೋತ್ಸಾಹಿಸಿತು. ತನ್ನ ನಿಷ್ಠಾವಂತ ಪ್ರೀತಿಯ ಕಾರಣ ‘ನನ್ನ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯಲು’ ಯೆಹೋವನು ಅನುಮತಿಸಿದನು.—ಕೀರ್ತ. 92:13.

^ ಪ್ಯಾರ. 18 1972 ಮಾರ್ಚ್‌ 8 ರ ಎಚ್ಚರ! ಪತ್ರಿಕೆಯ ಪುಟ 24-26 ನೋಡಿ. ಈ ಲೇಖನ ಇಂಗ್ಲಿಷ್‌ನಲ್ಲಿದೆ.