ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ

“ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ

“ನನ್ನ ಸೇವಕನಾದ ಇಸ್ರಾಯೇಲೇ, ನಾನು ಆದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ.”—ಯೆಶಾ. 41:8.

ಗೀತೆಗಳು: 91, 22

1, 2. (ಎ) ಮಾನವರು ದೇವರ ಸ್ನೇಹಿತರಾಗಲು ಸಾಧ್ಯವಿದೆಯಾ? ವಿವರಿಸಿ. (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

ಪ್ರೀತಿ! ಹುಟ್ಟಿನಿಂದ ಸಾವಿನ ವರೆಗೂ ನಮಗೆಲ್ಲರಿಗೆ ಅದು ಬೇಕೇ ಬೇಕು. ಪ್ರಣಯ-ಪ್ರೇಮ ಒಂದೇ ಅಲ್ಲ, ಪ್ರೀತಿ ತುಂಬಿದ ಇತರ ಆಪ್ತ ಸ್ನೇಹಬಂಧಗಳೂ ಬೇಕು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಬೇಕಾಗಿರುವುದು ಯೆಹೋವ ದೇವರ ಪ್ರೀತಿ. ದೇವರು ಅದೃಶ್ಯನೂ ಸರ್ವಶಕ್ತನೂ ಆಗಿರುವುದರಿಂದ ಮಾನವರು ಆತನೊಂದಿಗೆ ಪ್ರೀತಿ ತುಂಬಿದ ಆಪ್ತ ಸ್ನೇಹ ಬೆಳೆಸಲು ಸಾಧ್ಯವಿಲ್ಲವೆಂದು ಅನೇಕರು ನೆನಸುತ್ತಾರೆ. ಆದರೆ ಇದು ನಿಜವಲ್ಲ.

2 ನಿಜವೇನೆಂದರೆ ಮನುಷ್ಯರು ದೇವರ ಆಪ್ತ ಸ್ನೇಹವನ್ನು ಬೆಳೆಸಿದ್ದಾರೆಂದು ಬೈಬಲ್‌ ತೋರಿಸುತ್ತದೆ. ಅವರ ಮಾದರಿಯಿಂದ ನಾವು ಕಲಿಯಬೇಕು. ಏಕೆಂದರೆ ದೇವರೊಂದಿಗೆ ಸ್ನೇಹ ಬೆಳೆಸುವುದೇ ನಮ್ಮ ಜೀವನದ ಅತಿ ಮುಖ್ಯ ಗುರಿಯಾಗಿರಬೇಕು. ಅಬ್ರಹಾಮನು ದೇವರ ಜೊತೆ ಅಂಥ ಸ್ನೇಹವನ್ನು ಬೆಳೆಸಿಕೊಂಡ. (ಯಾಕೋಬ 2:23 ಓದಿ.) ಹೇಗೆ? ಅವನು ದೇವರಲ್ಲಿಟ್ಟ ನಂಬಿಕೆಯಿಂದಲೇ. ಅವನಿಗೆಷ್ಟು ನಂಬಿಕೆಯಿತ್ತೆಂದರೆ ಅವನನ್ನು ‘ನಂಬಿಕೆಯಿರುವ ಎಲ್ಲರಿಗೆ ತಂದೆ’ ಎಂದು ಕರೆಯಲಾಗಿದೆ. (ರೋಮ. 4:11) ನಾವೀಗ ಅಬ್ರಹಾಮನ ಮಾದರಿಯನ್ನು ಚರ್ಚಿಸೋಣ. ಹೀಗೆ ಕೇಳಿಕೊಳ್ಳಿ: ‘ನಾನು ಹೇಗೆ ಅಬ್ರಹಾಮನ ನಂಬಿಕೆಯನ್ನು ಅನುಕರಿಸಲಿ?  ಯೆಹೋವನೊಂದಿಗಿನ ಸ್ನೇಹವನ್ನು ಹೇಗೆ ಇನ್ನೂ ಗಟ್ಟಿಗೊಳಿಸಲಿ?’

ಅಬ್ರಹಾಮನು ಹೇಗೆ ಯೆಹೋವನ ಆಪ್ತ ಸ್ನೇಹಿತನಾದ?

3, 4. (ಎ) ಅಬ್ರಹಾಮನ ನಂಬಿಕೆಗೆ ಬಂದಿರಬಹುದಾದ ಅತಿ ದೊಡ್ಡ ಪರೀಕ್ಷೆಯನ್ನು ವಿವರಿಸಿ. (ಬಿ) ಇಸಾಕನನ್ನು ಯಜ್ಞವಾಗಿ ಅರ್ಪಿಸಲು ಅಬ್ರಹಾಮ ಯಾಕೆ ಸಿದ್ಧನಿದ್ದನು?

3 ಅಬ್ರಹಾಮ ಸುಮಾರು 125⁠ರ ವಯಸ್ಸಿನಲ್ಲಿ ಮೆಲ್ಲಮೆಲ್ಲ ನಡೆಯುತ್ತಾ ಬೆಟ್ಟ ಹತ್ತುತ್ತಿದ್ದದನ್ನು ಚಿತ್ರಿಸಿಕೊಳ್ಳಿ.  [1] ಅವನ ಹಿಂದೆ ಮಗ ಇಸಾಕ ಕಟ್ಟಿಗೆ ಹೊತ್ತುಕೊಂಡು ಹೋಗುತ್ತಿದ್ದಾನೆ. ಅವನಿಗೆ ಸುಮಾರು 25 ವಯಸ್ಸು. ಅಬ್ರಹಾಮನ ಹತ್ತಿರ ಬೆಂಕಿ ಹೊತ್ತಿಸಲು ಬೇಕಾದ ವಸ್ತುಗಳು ಮತ್ತು ಕತ್ತಿ ಇತ್ತು. ಅಬ್ರಹಾಮ ತನ್ನ ಜೀವಮಾನದಲ್ಲಿ ಈ ವರೆಗೆ ಮಾಡಿದ ಪ್ರಯಾಣಗಳಲ್ಲೇ ಇದು ಅತಿ ಕಷ್ಟದ್ದಾಗಿತ್ತು. ಏಕೆ? ಅವನಿಗೆ ವಯಸ್ಸಾಗಿತ್ತು ಅದಕ್ಕಾ? ಇಲ್ಲ. ಅವನಿಗಿನ್ನೂ ದೇಹದಲ್ಲಿ ಶಕ್ತಿಯಿತ್ತು. ಮತ್ತೇಕೆ? ಏಕೆಂದರೆ ಮಗ ಇಸಾಕನನ್ನು ಯಜ್ಞವಾಗಿ ಅರ್ಪಿಸುವಂತೆ ಯೆಹೋವನು ಹೇಳಿದ್ದನು.—ಆದಿ. 22:1-8.

4 ಇದು ಅಬ್ರಹಾಮನಿಗೆ ಯೆಹೋವನಲ್ಲಿದ್ದ ನಂಬಿಕೆಗೆ ಬಂದ ಅತಿ ದೊಡ್ಡ ಪರೀಕ್ಷೆ ಆಗಿದ್ದಿರಬಹುದು. ‘ದೇವರು ತುಂಬ ಕ್ರೂರಿ, ಅಬ್ರಹಾಮನಿಗೆ ಅವನ ಮಗನನ್ನು ಯಜ್ಞವಾಗಿ ಕೊಡುವಂತೆ ಹೇಳಿದನಲ್ಲಾ’ ಎಂದು ಕೆಲವು ಜನರು ಹೇಳುತ್ತಾರೆ. ಇನ್ನೂ ಕೆಲವರು, ‘ಅಬ್ರಹಾಮನಿಗೆ ಮಗನ ಮೇಲೆ ಪ್ರೀತಿ ಇರಲಿಲ್ಲ. ಅದಕ್ಕೇ ದೇವರು ಹೇಳಿದ ತಕ್ಷಣ ಮಗನನ್ನು ಅರ್ಪಿಸಲು ಹೊರಟುಬಿಟ್ಟ’ ಎನ್ನುತ್ತಾರೆ. ಜನರು ಹೀಗೆ ಹೇಳಲು ಕಾರಣ ಅವರಿಗೆ ದೇವರ ಮೇಲೆ ನಂಬಿಕೆ ಇಲ್ಲದ್ದರಿಂದಲೇ. ನಿಜ ನಂಬಿಕೆ ಅಂದರೇನು, ನಂಬಿಕೆಯಿರುವ ವ್ಯಕ್ತಿ ಹೇಗೆ ನಡೆದುಕೊಳ್ಳುತ್ತಾನೆ ಅನ್ನೋದು ಕೂಡ ಅವರಿಗೆ ಗೊತ್ತಿಲ್ಲ. (1 ಕೊರಿಂ. 2:14-16) ಆದರೆ ಅಬ್ರಹಾಮನು ಯೋಚನೆ ಮಾಡದೆ ಕಣ್ಮುಚ್ಚಿಕೊಂಡು ದೇವರಿಗೆ ವಿಧೇಯನಾಗಲಿಲ್ಲ. ಅವನಲ್ಲಿ ನಿಜವಾದ ನಂಬಿಕೆಯಿತ್ತು. ಆದ್ದರಿಂದಲೇ ವಿಧೇಯನಾದ. ತನಗೆ ಶಾಶ್ವತ ಹಾನಿಯನ್ನು ತರುವ ಯಾವ ಕೆಲಸವನ್ನೂ ಮಾಡಲು ಯೆಹೋವನು ಹೇಳುವುದಿಲ್ಲ ಎಂದು ಅಬ್ರಹಾಮನಿಗೆ ಗೊತ್ತಿತ್ತು. ವಿಧೇಯತೆ ತೋರಿಸಿದರೆ ತನ್ನನ್ನೂ ತನ್ನ ಪ್ರೀತಿಯ ಮಗನನ್ನೂ ಯೆಹೋವನು ಆಶೀರ್ವದಿಸುವನೆಂದು ತಿಳಿದಿದ್ದನು. ಅಷ್ಟು ಬಲವಾದ ನಂಬಿಕೆಯನ್ನಿಡಲು ಅಬ್ರಹಾಮನಿಗೆ ಏನು ಬೇಕಿತ್ತು? ಜ್ಞಾನ ಮತ್ತು ಅನುಭವ.

5. (ಎ) ಅಬ್ರಹಾಮನು ಯೆಹೋವನ ಬಗ್ಗೆ ಹೇಗೆ ತಿಳಿದುಕೊಂಡಿರಬಹುದು? (ಬಿ) ಆ ಜ್ಞಾನ ಅವನಿಗೆ ಹೇಗೆ ಸಹಾಯಮಾಡಿತು?

5 ಜ್ಞಾನ. ಅಬ್ರಹಾಮನು ಊರ್‌ ಎಂಬ ಪಟ್ಟಣದಲ್ಲಿ ಬೆಳೆದನು. ಅಲ್ಲಿ ಜನರು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಅವನ ಸ್ವಂತ ತಂದೆ ವಿಗ್ರಹಾರಾಧಕನಾಗಿದ್ದ. (ಯೆಹೋ. 24:2) ಹಾಗಾದರೆ ಅಬ್ರಹಾಮನಿಗೆ ಯೆಹೋವನ ಬಗ್ಗೆ ಹೇಗೆ ಗೊತ್ತಾಯಿತು? ಬೈಬಲ್‌ ತೋರಿಸುವ ಪ್ರಕಾರ ನೋಹನ ಮಗ ಶೇಮ್‌ ಅಬ್ರಹಾಮನ ಸಂಬಂಧಿಕ. ಶೇಮನು ತೀರಿಹೋಗುವಾಗ ಅಬ್ರಹಾಮನಿಗೆ ಸುಮಾರು 150 ವಯಸ್ಸು. ಶೇಮನಿಗೆ ಯೆಹೋವನಲ್ಲಿ ತುಂಬ ನಂಬಿಕೆಯಿತ್ತು. ಅವನು ಯೆಹೋವನ ಕುರಿತು ತನ್ನ ಸಂಬಂಧಿಕರೊಂದಿಗೆ ಮಾತಾಡಿರಬಹುದು. ಅಬ್ರಹಾಮನು ಯೆಹೋವನ ಕುರಿತು ಹೇಗೆ ತಿಳಿದುಕೊಂಡನೆಂದು ನಾವು ಖಚಿತವಾಗಿ ಹೇಳಲು ಆಗದಿದ್ದರೂ ಅವನು ಶೇಮನಿಂದ ಕಲಿತಿರುವ ಸಾಧ್ಯತೆಯಿದೆ. ಅಬ್ರಹಾಮನು ಯೆಹೋವನ ಕುರಿತು ಕಲಿಯುತ್ತಾ ಹೋದಂತೆ ಆತನನ್ನು ಪ್ರೀತಿಸಿದನು. ಆ ಜ್ಞಾನವು ಅವನ ನಂಬಿಕೆಯನ್ನು ದೃಢಗೊಳಿಸಿತು.

6, 7. ಅಬ್ರಹಾಮನಿಗಾದ ಯಾವ ಅನುಭವಗಳು ಅವನ ನಂಬಿಕೆಯನ್ನು ಬಲಗೊಳಿಸಿದವು?

6 ಅನುಭವ. ಅಬ್ರಹಾಮನಿಗಾದ ಯಾವ ಅನುಭವವು ಅವನ ನಂಬಿಕೆಯನ್ನು ಬಲಗೊಳಿಸಿತು? ಕೆಲವರು ಹೇಳುವಂತೆ ಆಲೋಚನೆಗಳು ಭಾವನೆಗಳನ್ನು ಹುಟ್ಟಿಸುತ್ತವೆ ಮತ್ತು ಭಾವನೆಗಳು ಕ್ರಿಯೆಗೈಯಲು ಪ್ರಚೋದಿಸುತ್ತವೆ. ಅಬ್ರಹಾಮನು ಯೆಹೋವನ ಬಗ್ಗೆ ಕಲಿತ ವಿಷಯಗಳು ಅವನ ಹೃದಯವನ್ನು ಸ್ಪರ್ಶಿಸಿ ‘ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರದೇವರಾಗಿರುವ ಯೆಹೋವನಿಗೆ’ ಆಳವಾದ ಗೌರವ ತೋರಿಸುವಂತೆ ಅವನನ್ನು ಪ್ರೇರಿಸಿದವು. (ಆದಿ. 14:22) ಈ ರೀತಿಯ ಆಳವಾದ ಗೌರವವನ್ನು ಬೈಬಲ್‌ “ದೇವಭಯ” ಎಂದು ಕರೆಯುತ್ತದೆ. (ಇಬ್ರಿ. 5:7) ನಾವು ದೇವರ ಆಪ್ತ ಸ್ನೇಹಿತರಾಗಬೇಕಾದರೆ ದೇವಭಯ ನಮ್ಮಲ್ಲಿರಬೇಕು. (ಕೀರ್ತ. 25:14) ಈ ದೇವಭಯವೇ ಯೆಹೋವನಿಗೆ ವಿಧೇಯನಾಗುವಂತೆ ಅಬ್ರಹಾಮನನ್ನು ಪ್ರೇರಿಸಿತು. ಹೇಗೆ?

7 ದೇವರು ಒಮ್ಮೆ ಅಬ್ರಹಾಮ ಮತ್ತು ಅವನ ಪತ್ನಿ ಸಾರಳಿಗೆ ಊರ್‌ ಪಟ್ಟಣದಲ್ಲಿದ್ದ ಅವರ ಮನೆಯನ್ನು ಬಿಟ್ಟು ಅಪರಿಚಿತ ದೇಶಕ್ಕೆ ಹೋಗುವಂತೆ ಹೇಳಿದನು. ಅವರಿಬ್ಬರಿಗೂ ವಯಸ್ಸಾಗಿತ್ತು. ತಮ್ಮ ಊರು ಬಿಟ್ಟು ಬಂದರೆ ಜೀವಮಾನವಿಡೀ ಡೇರೆಗಳಲ್ಲೇ  ವಾಸಿಸಬೇಕಿತ್ತು. ಅನೇಕ ಅಪಾಯಗಳು ಎದುರಾಗಲಿದ್ದವು. ಇದು ಗೊತ್ತಿದ್ದರೂ ಅಬ್ರಹಾಮ ಯೆಹೋವನ ಮಾತಿಗೆ ವಿಧೇಯನಾದ. ಆದ್ದರಿಂದ ದೇವರು ಅವನನ್ನು ಆಶೀರ್ವದಿಸಿ ಸಂರಕ್ಷಿಸಿದನು. ಉದಾಹರಣೆಗೆ, ಬಹುಸುಂದರಿಯಾಗಿದ್ದ ಸಾರಳನ್ನು ಒಬ್ಬ ಅರಸನು ತನ್ನ ಮನೆಗೆ ಸೇರಿಸಿಕೊಂಡನು. ಅಬ್ರಹಾಮನು ಕೊಲೆಯಾಗುವ ಅಪಾಯವೂ ಇತ್ತು. ಆಗ ಯೆಹೋವನು ಅದ್ಭುತವಾಗಿ ಅವರಿಬ್ಬರನ್ನೂ ಕಾಪಾಡಿದನು. ಹೀಗೆ ಎರಡು ಸಲ ಕಾಪಾಡಿದನು. (ಆದಿ. 12:10-20; 20:2-7, 10-12, 17, 18) ಈ ಅನುಭವಗಳು ಅಬ್ರಹಾಮನ ನಂಬಿಕೆಯನ್ನು ಬಲಗೊಳಿಸಿದವು.

8. ಯೆಹೋವನೊಂದಿಗೆ ನಮ್ಮ ಸ್ನೇಹವನ್ನು ಬಲಪಡಿಸುವ ಜ್ಞಾನ ಮತ್ತು ಅನುಭವವನ್ನು ನಾವು ಹೇಗೆ ಪಡೆಯಬಹುದು?

8 ನಾವು ಯೆಹೋವನ ಸ್ನೇಹಿತರಾಗಲು ಸಾಧ್ಯವೇ? ಖಂಡಿತ ಸಾಧ್ಯವಿದೆ. ಅಬ್ರಹಾಮನಂತೆ ನಾವು ಯೆಹೋವನ ಕುರಿತು ಕಲಿಯಬೇಕು. ಈ ಜ್ಞಾನ ಮತ್ತು ಅನುಭವವನ್ನು ಪಡೆಯಲಿಕ್ಕಾಗುತ್ತದೆ. ಅಬ್ರಹಾಮನಿಗಿಂತಲೂ ಹೆಚ್ಚು ಜ್ಞಾನ ನಮಗಿಂದು ಬೈಬಲಿನಲ್ಲಿ ಲಭ್ಯವಿದೆ. (ದಾನಿ. 12:4; ರೋಮ. 11:33) “ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ” ಯೆಹೋವನ ಕುರಿತ ಜ್ಞಾನವು ಇಡೀ ಬೈಬಲಿನಲ್ಲಿ ತುಂಬಿದೆ. ಆತನ ಕುರಿತು ನಾವು ಕಲಿಯುವ ವಿಷಯಗಳು ಆತನನ್ನು ಪ್ರೀತಿಸುವಂತೆ ಮತ್ತು ಆತನಿಗೆ ಆಳವಾದ ಗೌರವ ತೋರಿಸುವಂತೆ ಮಾಡುತ್ತವೆ. ಈ ಪ್ರೀತಿ ಮತ್ತು ಗೌರವ ನಾವು ಯೆಹೋವನಿಗೆ ವಿಧೇಯರಾಗುವಂತೆ ಮಾಡುತ್ತದೆ. ಆಗ ಯೆಹೋವನು ನಮ್ಮನ್ನು ಹೇಗೆ ಕಾಪಾಡುತ್ತಾನೆ, ಹೇಗೆ ಆಶೀರ್ವದಿಸುತ್ತಾನೆ ಎಂಬ ಅನುಭವ ನಮಗಾಗುತ್ತದೆ. ಇದರಿಂದ ನಮ್ಮ ನಂಬಿಕೆ ಇನ್ನಷ್ಟು ಬಲವಾಗುತ್ತದೆ. ಪೂರ್ಣ ಮನಸ್ಸಿನಿಂದ ಯೆಹೋವನ ಸೇವೆ ಮಾಡುವುದರಿಂದ ನಮಗೆ ಸಂತೃಪ್ತಿ, ಶಾಂತಿ, ಸಂತೋಷ ಸಿಗುತ್ತದೆ. (ಕೀರ್ತ. 34:8; ಜ್ಞಾನೋ. 10:22) ನಾವು ಎಷ್ಟು ಹೆಚ್ಚು ಜ್ಞಾನ ಮತ್ತು ಅನುಭವ ಪಡೆಯುತ್ತೇವೊ ಯೆಹೋವನೊಂದಿಗಿನ ನಮ್ಮ ಸ್ನೇಹ ಅಷ್ಟೇ ಹೆಚ್ಚು ಬಲವಾಗುತ್ತದೆ.

ಅಬ್ರಹಾಮ ದೇವರೊಂದಿಗೆ ಸ್ನೇಹವನ್ನು ಹೇಗೆ ಉಳಿಸಿಕೊಂಡನು?

9, 10. (ಎ) ಸ್ನೇಹಬಂಧವನ್ನು ಬಲಪಡಿಸಲು ಏನು ಬೇಕು? (ಬಿ) ಯೆಹೋವನೊಟ್ಟಿಗಿನ ಸ್ನೇಹವನ್ನು ಅಬ್ರಹಾಮನು ಅಮೂಲ್ಯವಾಗಿ ಕಂಡನು, ಉಳಿಸಿಕೊಂಡನೆಂದು ಹೇಗೆ ಗೊತ್ತಾಗುತ್ತದೆ?

9 ಆಪ್ತ ಸ್ನೇಹ ಅನ್ನೋದು ಅಮೂಲ್ಯ ನಿಧಿ. (ಜ್ಞಾನೋಕ್ತಿ 17:17 ಓದಿ.) ಆದರೆ ಸ್ನೇಹವು ಮೂಲೆಗೆ ಬಿದ್ದು ಧೂಳುಹಿಡಿಯುವ ನಿರ್ಜೀವ ವಸ್ತುವಿನಂತಿಲ್ಲ. ಬದಲಿಗೆ ಹೂಗಿಡದಂತಿದೆ ಅಂದರೆ ಅದಕ್ಕೆ ಸದಾ ಪೋಷಣೆ ಆರೈಕೆ ಬೇಕು. ಆಗ ಮಾತ್ರ ಸ್ನೇಹಬಂಧ ಬಾಳುತ್ತದೆ, ಚೆನ್ನಾಗಿರುತ್ತದೆ. ಅಬ್ರಹಾಮನು ಯೆಹೋವನೊಟ್ಟಿಗಿನ ಸ್ನೇಹವನ್ನು ಅಮೂಲ್ಯವಾಗಿ ಕಂಡನು ಮತ್ತು ಉಳಿಸಿಕೊಂಡನು. ಹೇಗೆ?

10 ಅಬ್ರಹಾಮನು ದೇವಭಯ, ವಿಧೇಯತೆಯನ್ನು ಒಮ್ಮೆ ತೋರಿಸಿ ಬಿಟ್ಟುಬಿಡಲಿಲ್ಲ, ಮುಂದಕ್ಕೂ ತೋರಿಸಿದನು. ಉದಾಹರಣೆಗೆ ಅವನು ತನ್ನ ಕುಟುಂಬ ಮತ್ತು ಸೇವಕರ ಸಮೇತ ಕಾನಾನಿಗೆ ಪ್ರಯಾಣಿಸುತ್ತಿದ್ದಾಗ ಯೆಹೋವನ ಮಾರ್ಗದರ್ಶನಕ್ಕನುಸಾರ ಚಿಕ್ಕ ದೊಡ್ಡ ನಿರ್ಣಯಗಳನ್ನು ಮಾಡಿದನು. ಇಸಾಕನು ಹುಟ್ಟುವ ಒಂದು ವರ್ಷಕ್ಕೆ ಮುಂಚೆ ನಡೆದ ವಿಷಯವನ್ನು ಗಮನಿಸಿ. ಆಗ ಅಬ್ರಹಾಮನಿಗೆ 99 ವಯಸ್ಸು. ಅವನ ಮನೆವಾರ್ತೆಯ ಎಲ್ಲ ಗಂಡಸರಿಗೆ ಸುನ್ನತಿ ಮಾಡಿಸುವಂತೆ ಯೆಹೋವನು ಹೇಳಿದನು. ಯೆಹೋವನು ಯಾಕೆ ಹೀಗೆ ಹೇಳುತ್ತಿದ್ದಾನೆಂದು ಅಬ್ರಹಾಮ ಸಂಶಯಪಟ್ಟನಾ? ಅದರಿಂದ ಜಾರಿಕೊಳ್ಳಲು ಏನಾದರೂ ನೆಪ ಹುಡುಕಿದನಾ? ಇಲ್ಲ. ಅವನು ಯೆಹೋವನಲ್ಲಿ ಭರವಸೆಯಿಟ್ಟನು. ಆ ಆಜ್ಞೆಯನ್ನು ಯೆಹೋವನು ಕೊಟ್ಟ “ಅದೇ ದಿನದಲ್ಲಿ” ಪಾಲಿಸಿದನು.—ಆದಿ. 17:10-14, 23.

11. (ಎ) ಸೊದೋಮ್‌ ಗೊಮೋರ ಪಟ್ಟಣಗಳ ಬಗ್ಗೆ ಅಬ್ರಹಾಮ ಏಕೆ ತುಂಬ ಚಿಂತಿತನಾಗಿದ್ದನು? (ಬಿ) ಅವನಿಗೆ ಯೆಹೋವನು ಹೇಗೆ ಸಹಾಯಮಾಡಿದನು?

 11 ಅಬ್ರಹಾಮನು ಚಿಕ್ಕಪುಟ್ಟ ವಿಷಯಗಳಲ್ಲೂ ಯೆಹೋವನಿಗೆ ವಿಧೇಯನಾದ್ದರಿಂದ ಆತನೊಟ್ಟಿಗಿನ ಸ್ನೇಹಬಂಧ ಇನ್ನೂ ಬಲವಾಯಿತು. ಅವನು ಯಾವುದೇ ವಿಷಯದ ಬಗ್ಗೆ ದೇವರ ಹತ್ತಿರ ಮಾತಾಡಲು ಹಿಂಜರಿಯಲಿಲ್ಲ. ಮನಸ್ಸನ್ನು ಕಾಡುತ್ತಿದ್ದ ಪ್ರಶ್ನೆಗಳನ್ನೂ ಕೇಳಿದನು. ಉದಾಹರಣೆಗೆ, ಸೊದೋಮ್‌ ಗೊಮೋರ ಪಟ್ಟಣಗಳನ್ನು ನಾಶಮಾಡುವೆನೆಂದು ಯೆಹೋವನು ಹೇಳಿದಾಗ ಅಬ್ರಹಾಮ ತುಂಬ ಚಿಂತಿತನಾದನು. ಏಕೆಂದರೆ ಕೆಟ್ಟ ಜನರೊಂದಿಗೆ ಒಳ್ಳೆಯವರೂ ನಾಶವಾಗಬಹುದೇನೊ ಎಂದು ಹೆದರಿದನು. ಸೊದೋಮ್‌ನಲ್ಲಿ ವಾಸಿಸುತ್ತಿದ್ದ ತನ್ನ ಅಣ್ಣನ ಮಗನಾದ ಲೋಟ ಮತ್ತು ಅವನ ಕುಟುಂಬದ ಬಗ್ಗೆ ಬಹುಶಃ ಅಬ್ರಹಾಮ ಯೋಚಿಸಿದ್ದಿರಬೇಕು. “ಸರ್ವಲೋಕಕ್ಕೆ ನ್ಯಾಯತೀರಿಸುವ” ಯೆಹೋವನಲ್ಲಿ ಅಬ್ರಹಾಮ ಭರವಸೆಯಿಟ್ಟನು. ಆದ್ದರಿಂದ ದೀನತೆಯಿಂದ ತನ್ನ ಕಳವಳವನ್ನು ಯೆಹೋವನಲ್ಲಿ ಹೇಳಿಕೊಂಡನು. ತನ್ನ ಈ ಸ್ನೇಹಿತನ ಮಾತನ್ನು ಯೆಹೋವನು ತಾಳ್ಮೆಯಿಂದ ಕೇಳಿಸಿಕೊಂಡನು. ನಾಶನ ತಂದರೂ ಒಳ್ಳೇ ಜನರನ್ನು ಹುಡುಕಿ ಕಾಪಾಡುತ್ತೇನೆಂದು ವಿವರಿಸಿದನು. ಹೀಗೆ ಆತನೆಷ್ಟು ಕರುಣಾಮಯಿ ಎಂದು ಅಬ್ರಹಾಮನಿಗೆ ತೋರಿಸಿಕೊಟ್ಟನು.—ಆದಿ. 18:22-33.

12, 13. (ಎ) ಜ್ಞಾನ ಮತ್ತು ಅನುಭವ ಅಬ್ರಹಾಮನಿಗೆ ಮುಂದಕ್ಕೆ ಹೇಗೆ ಸಹಾಯ ಮಾಡಿತು? (ಬಿ) ಅಬ್ರಹಾಮನು ಯೆಹೋವನಲ್ಲಿ ಭರವಸೆ ಇಟ್ಟಿದ್ದನೆಂದು ಯಾವುದು ತೋರಿಸುತ್ತದೆ?

12 ಅಬ್ರಹಾಮ ಪಡೆದುಕೊಂಡ ಜ್ಞಾನ ಮತ್ತು ಅನುಭವವೆಲ್ಲ ಯೆಹೋವನೊಂದಿಗಿನ ಆಪ್ತ ಸ್ನೇಹವನ್ನು ಉಳಿಸಿಕೊಳ್ಳಲು ಸಹಾಯಮಾಡಿತು ಎಂಬುದು ಸ್ಪಷ್ಟ. ಆದ್ದರಿಂದಲೇ ಮುಂದೆ ಇಸಾಕನನ್ನು ಯಜ್ಞವಾಗಿ ಕೊಡುವಂತೆ ಯೆಹೋವನು ಹೇಳಿದಾಗ ಅಬ್ರಹಾಮನಿಗೆ ಯೆಹೋವನ ತಾಳ್ಮೆ, ಕರುಣೆ, ಭರವಸಾರ್ಹತೆ, ಸಂರಕ್ಷಣೆಯ ಬಗ್ಗೆ ಸ್ವಲ್ಪವೂ ಸಂಶಯ ಹುಟ್ಟಲಿಲ್ಲ. ಇದ್ದಕ್ಕಿದ್ದಂತೆ ಯೆಹೋವನು ಕ್ರೂರಿ, ನಿರ್ದಯಿ ಆಗಿಲ್ಲವೆಂಬ ಪೂರ್ಣ ಭರವಸೆ ಅಬ್ರಹಾಮನಿಗಿತ್ತು. ನಾವು ಹೀಗೆ ಹೇಳುವುದು ಏಕೆ?

13 ಅಬ್ರಹಾಮನು ತನ್ನ ಸೇವಕರಿಗೆ ಹೇಳಿದ ಮಾತುಗಳಿಂದ ಅದು ಗೊತ್ತಾಗುತ್ತದೆ. ಅವನು ಹೇಳಿದ್ದು: “ನೀವು ಇಲ್ಲೇ ಕತ್ತೆಯ ಬಳಿಯಲ್ಲಿರ್ರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ತಿರಿಗಿ ಬರುತ್ತೇವೆ.” (ಆದಿ. 22:5) ಅಬ್ರಹಾಮನ ಈ ಮಾತಿನ ಅರ್ಥವೇನು? ಮಗನನ್ನು ಯಜ್ಞವಾಗಿ ಅರ್ಪಿಸಲಿಕ್ಕಿದೆ ಎಂದು ಗೊತ್ತಿದ್ದರೂ ‘ನಾನೂ ನನ್ನ ಮಗನೂ ತಿರುಗಿ ಬರುತ್ತೇವೆ’ ಎಂದು ಅಬ್ರಹಾಮ ಸುಳ್ಳು ಹೇಳುತ್ತಿದ್ದನಾ? ಇಲ್ಲ. ಇಸಾಕನು ಸತ್ತರೂ ಅವನನ್ನು ಪುನಃ ಬದುಕಿಸಲು ಯೆಹೋವನು ಶಕ್ತನೆಂದು ಅಬ್ರಹಾಮನಿಗೆ ಗೊತ್ತಿತ್ತು ಎಂದು ಬೈಬಲ್‌ ಹೇಳುತ್ತದೆ. (ಇಬ್ರಿಯ 11:19 ಓದಿ.) ತಾನು, ತನ್ನ ಹೆಂಡತಿ ತುಂಬ ವೃದ್ಧರಾಗಿದ್ದರೂ ಒಬ್ಬ ಮಗನನ್ನು ಹುಟ್ಟಿಸುವ ಶಕ್ತಿಯನ್ನು ಯೆಹೋವನು ಕೊಟ್ಟದ್ದನ್ನು ಅಬ್ರಹಾಮ ನೆನಪಿಸಿಕೊಂಡನು. (ಇಬ್ರಿ. 11:11, 12, 18) ಹಾಗಾಗಿ ಯೆಹೋವನಿಗೆ ಯಾವುದೂ ಅಸಾಧ್ಯವಲ್ಲ ಎಂದು ಅಬ್ರಹಾಮನಿಗೆ ಮನದಟ್ಟಾಗಿತ್ತು. ಆ ದಿನ ಏನಾಗುತ್ತದೆಂದು ಅಬ್ರಹಾಮನಿಗೆ ಗೊತ್ತಿರಲಿಲ್ಲ. ಆದರೆ ತನ್ನ ಎಲ್ಲ ವಾಗ್ದಾನಗಳನ್ನು ನೆರವೇರಿಸಲಿಕ್ಕಾಗಿ ಅಗತ್ಯವಿದ್ದರೆ ಯೆಹೋವನು ಇಸಾಕನನ್ನು ಪುನರುತ್ಥಾನಗೊಳಿಸಲೂ ಶಕ್ತನು ಎಂಬ ನಂಬಿಕೆ ಅಬ್ರಹಾಮನಿಗಿತ್ತು. ಆದ್ದರಿಂದಲೇ ಅವನನ್ನು ‘ನಂಬಿಕೆಯಿರುವ ಎಲ್ಲರಿಗೆ ತಂದೆ’ ಎಂದು ಕರೆಯಲಾಯಿತು.

14. (ಎ) ಯೆಹೋವನ ಸೇವೆಯಲ್ಲಿ ನಿಮಗೆ ಯಾವ ಸಮಸ್ಯೆಗಳು ಎದುರಾಗುತ್ತಿವೆ? (ಬಿ) ಅಬ್ರಹಾಮನ ಮಾದರಿ ನಿಮಗೆ ಹೇಗೆ ಸಹಾಯ ಮಾಡಬಹುದು?

14 ಇಂದು ನಮ್ಮ ಮಕ್ಕಳನ್ನು ಯಜ್ಞವಾಗಿ ಅರ್ಪಿಸುವಂತೆ ಯೆಹೋವನು ಹೇಳುವುದಿಲ್ಲ ನಿಜ. ಆದರೆ ಆತನ  ಆಜ್ಞೆಗಳಿಗೆ ವಿಧೇಯರಾಗುವಂತೆ ಹೇಳುತ್ತಾನೆ. ಕೆಲವೊಮ್ಮೆ ಆ ಆಜ್ಞೆಗಳಿಗೆ ಕಾರಣ ಏನೆಂದು ನಮಗೆ ಅರ್ಥವಾಗಲಿಕ್ಕಿಲ್ಲ ಅಥವಾ ಅವುಗಳಿಗೆ ವಿಧೇಯರಾಗಲು ನಮಗೆ ಕಷ್ಟವೆನಿಸಬಹುದು. ನಿಮಗೆ ಹಾಗನಿಸುತ್ತದಾ? ಕೆಲವರಿಗೆ ಸಾರುವ ಕೆಲಸ ತುಂಬ ಕಷ್ಟ ಎಂದನಿಸುತ್ತದೆ. ಬಹುಶಃ ಅವರು ನಾಚಿಕೆ ಸ್ವಭಾವದವರು. ಹಾಗಾಗಿ ಗುರುತು ಪರಿಚಯವಿಲ್ಲದ ಜನರ ಬಳಿ ಹೋಗಿ ಮಾತಾಡಲು ಅವರಿಗೆ ಕಷ್ಟವಾಗುತ್ತದೆ. ಇನ್ನೂ ಕೆಲವರಿಗೆ ಶಾಲೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಬೇರೆಯವರಿಗಿಂತ ಭಿನ್ನರಾಗಿರಲು ಹೆದರಿಕೆಯಾಗುತ್ತದೆ. (ವಿಮೋ. 23:2; 1 ಥೆಸ. 2:2) ನಿಮಗೆ ಹೇಳಿರುವ ಕೆಲಸ ಮಾಡಲು ನಿಮ್ಮಿಂದ ಆಗುವುದಿಲ್ಲ ಎಂದನಿಸಿದರೆ ಅಬ್ರಹಾಮನ ನಂಬಿಕೆ ಮತ್ತು ಧೈರ್ಯದ ಉತ್ತಮ ಮಾದರಿಯನ್ನು ನೆನಪಿಸಿಕೊಳ್ಳಿ. ನಂಬಿಗಸ್ತ ಸ್ತ್ರೀಪುರುಷರ ಮಾದರಿಗಳ ಕುರಿತು ನಾವು ಧ್ಯಾನಿಸುವುದು ಅವರನ್ನು ಅನುಕರಿಸಲು ಮತ್ತು ನಮ್ಮ ಸ್ನೇಹಿತನಾದ ಯೆಹೋವನಿಗೆ ಇನ್ನೂ ಹತ್ತಿರವಾಗಲು ನೆರವಾಗುತ್ತದೆ.—ಇಬ್ರಿ. 12:1, 2.

ಆಶೀರ್ವಾದಗಳನ್ನು ತರುವ ಸ್ನೇಹ

15. ಯೆಹೋವನಿಗೆ ಜೀವನಪೂರ್ತಿ ವಿಧೇಯತೆ ತೋರಿಸಿದ್ದಕ್ಕಾಗಿ ಅಬ್ರಹಾಮನು ಯಾವತ್ತೂ ವಿಷಾದಿಸಲಿಲ್ಲ ಎಂದು ನಾವೇಕೆ ಖಂಡಿತವಾಗಿ ಹೇಳಬಹುದು?

15 ಯೆಹೋವನ ಆಜ್ಞೆಗಳಿಗೆ ಜೀವನಪೂರ್ತಿ ವಿಧೇಯತೆ ತೋರಿಸಿದ್ದಕ್ಕಾಗಿ ಅಬ್ರಹಾಮ ಎಂದಾದರೂ ವಿಷಾದಿಸಿದನಾ? “ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ಮುದುಕನಾಗಿ ತೃಪ್ತನಾಗಿ ತೀರಿಹೋದನು” ಎಂದು ಬೈಬಲ್‌ ಹೇಳುತ್ತದೆ. (ಆದಿ. 25:8, ನೂತನ ಲೋಕ ಭಾಷಾಂತರ) 175⁠ನೇ ವಯಸ್ಸಿನಲ್ಲಿ ಅಬ್ರಹಾಮ ಸತ್ತನು. ಅಲ್ಲಿವರೆಗೆ ತಾನು ನಡೆಸಿದ ನಂಬಿಗಸ್ತ ಜೀವನವನ್ನು ನೆನಸಿ ತೃಪ್ತಿಪಟ್ಟನು. ಜೀವನದಲ್ಲಿ ಯೆಹೋವನೊಂದಿಗಿನ ಸ್ನೇಹವೇ ಅವನಿಗೆ ಯಾವಾಗಲೂ ಎಲ್ಲದಕ್ಕಿಂತ ಬಹುಮುಖ್ಯವಾಗಿತ್ತು. ಅಬ್ರಹಾಮನು ‘ದಿನತುಂಬಿದ ಮುದುಕನಾಗಿ ತೃಪ್ತನಾಗಿದ್ದನು’ ಎಂಬುದರ ಅರ್ಥ ಅವನಿಗೆ ಭವಿಷ್ಯದಲ್ಲಿ ಜೀವಿಸುವ ಆಸೆ ಇರಲಿಲ್ಲ ಎಂದಾ? ಹಾಗಲ್ಲ.

16. ಪರದೈಸಿನಲ್ಲಿ ಅಬ್ರಹಾಮ ಯಾವೆಲ್ಲ ವಿಷಯಗಳಿಗಾಗಿ ಸಂತೋಷಪಡುವನು?

16 ಅಬ್ರಹಾಮ “ನಿಜವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಕಟ್ಟಿದ ಮತ್ತು ಸೃಷ್ಟಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು” ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 11:10) ಆ “ಪಟ್ಟಣ” ಅಂದರೆ ದೇವರ ರಾಜ್ಯವು ಈ ಭೂಮಿಯನ್ನು ಆಳುವುದನ್ನು ತಾನು ಮುಂದೊಂದು ದಿನ ನೋಡುವೆನೆಂಬ ನಂಬಿಕೆ ಅಬ್ರಹಾಮನಿಗಿತ್ತು. ಖಂಡಿತ ಅವನು ನೋಡುವನು ಸಹ! ಪರದೈಸ್‌ ಭೂಮಿಯಲ್ಲಿ ಜೀವಿಸಲು ಮತ್ತು ದೇವರೊಂದಿಗೆ ಸ್ನೇಹವನ್ನು ಇನ್ನೂ ಬಲಗೊಳಿಸುತ್ತಾ ಇರಲು ಅಬ್ರಹಾಮ ಖಂಡಿತ ತುಂಬ ಸಂತೋಷಪಡುವನು. ತನ್ನ ನಂಬಿಕೆಯ ಮಾದರಿಯು ಸಾವಿರಾರು ವರ್ಷ ದೇವಜನರಿಗೆ ಹೇಗೆ ಸಹಾಯಮಾಡಿತೆಂದು ತಿಳಿದು ಆನಂದಪಡುವನು. ಅಲ್ಲದೆ, ಮೊರೀಯ ಬೆಟ್ಟದಲ್ಲಿ ತಾನು ಅರ್ಪಿಸಿದ ಯಜ್ಞವು ಮುಂದಕ್ಕೆ ಮಹತ್ತರವಾದ ವಿಷಯವೊಂದನ್ನು ಚಿತ್ರಿಸಿತ್ತೆಂದು ಪರದೈಸಿನಲ್ಲಿ ಅಬ್ರಹಾಮ ತಿಳಿಯುವನು. (ಇಬ್ರಿ. 11:19) ಮಗ ಇಸಾಕನನ್ನು ಅರ್ಪಿಸಲಿದ್ದಾಗ ಅವನಿಗಾದ ನೋವು, ಯೆಹೋವನು ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟಾಗ ಆತನಿಗೆಷ್ಟು ನೋವಾಗಿತ್ತೆಂದು ಗ್ರಹಿಸಲು ಲಕ್ಷಾಂತರ ಮಂದಿಗೆ ನೆರವಾಗಿದೆಯೆಂದು ಕೂಡ ಅಬ್ರಹಾಮ ತಿಳಿದುಕೊಳ್ಳುವನು. (ಯೋಹಾ. 3:16) ಅಬ್ರಹಾಮನ ಉದಾಹರಣೆಯು ವಿಮೋಚನಾ ಮೌಲ್ಯದ ಏರ್ಪಾಡನ್ನು ಹೆಚ್ಚು ಅಮೂಲ್ಯವಾಗಿ ಕಾಣುವಂತೆ ಸಹಾಯ ಮಾಡಿದೆ. ಈ ಏರ್ಪಾಡಿನ ಮೂಲಕ ಯೆಹೋವನು ತೋರಿಸಿದಷ್ಟು ಪ್ರೀತಿ ಬೇರೆ ಯಾರೂ ಎಂದೂ ತೋರಿಸಿಲ್ಲ.

17. (ಎ) ನೀವು ಯಾವ ದೃಢನಿಶ್ಚಯ ಮಾಡಿದ್ದೀರಿ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

17 ನಾವು ಪ್ರತಿಯೊಬ್ಬರು ಅಬ್ರಹಾಮನ ನಂಬಿಕೆಯನ್ನು ಅನುಕರಿಸಲು ದೃಢನಿಶ್ಚಯ ಮಾಡೋಣ. ಅವನಂತೆ ನಾವು ಜ್ಞಾನ ಮತ್ತು ಅನುಭವವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ನಾವು ಯೆಹೋವನಿಗೆ ವಿಧೇಯರಾಗಬೇಕು. ಆಗ ಆತನು ಹೇಗೆ ನಮ್ಮನ್ನು ಆಶೀರ್ವದಿಸುತ್ತಾನೆ, ಸಂರಕ್ಷಿಸುತ್ತಾನೆ ಎಂಬುದನ್ನು ಕಣ್ಣಾರೆ ಕಾಣುವೆವು. (ಇಬ್ರಿಯ 6:10-12 ಓದಿ.) ಯೆಹೋವನು ಎಂದೆಂದಿಗೂ ನಮ್ಮ ಸ್ನೇಹಿತನಾಗಿರಲಿ! ದೇವರ ಆಪ್ತ ಸ್ನೇಹಿತರಾದ ಇನ್ನೂ ಮೂವರು ನಂಬಿಗಸ್ತ ವ್ಯಕ್ತಿಗಳ ಮಾದರಿಯನ್ನು ಮುಂದಿನ ಲೇಖನದಲ್ಲಿ ತಿಳಿಯೋಣ.

^ [1] (ಪ್ಯಾರ 3) ಅಬ್ರಾಮ ಮತ್ತು ಸಾರಯಳ ಹೆಸರನ್ನು ನಂತರ ಅಬ್ರಹಾಮ ಮತ್ತು ಸಾರ ಎಂದು ಯೆಹೋವನು ಬದಲಾಯಿಸಿದನು. ಯೆಹೋವನು ಕೊಟ್ಟ ಹೆಸರುಗಳನ್ನೇ ಈ ಲೇಖನದಲ್ಲಿ ಬಳಸುತ್ತೇವೆ.