ಅಧ್ಯಯನ ಲೇಖನ 49
ಯೆಹೋವ ನನ್ನ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನಾ?
“ನೀವು ನನ್ನನ್ನ ಬೇಡ್ಕೊಳ್ತೀರ, ನನ್ನ ಹತ್ರ ಬಂದು ಪ್ರಾರ್ಥನೆ ಮಾಡ್ತೀರ, ನಿಮ್ಮ ಪ್ರಾರ್ಥನೆ ಕೇಳ್ತೀನಿ.”—ಯೆರೆ. 29:12.
ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
ಈ ಲೇಖನದಲ್ಲಿ ಏನಿದೆ? a
1-2. ಯೆಹೋವ ನಮ್ಮ ಪ್ರಾರ್ಥನೆ ಕೇಳಿಸ್ಕೊಳ್ತಿಲ್ಲ ಅಂತ ಯಾಕೆ ಅನಿಸಬಹುದು?
“ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ, ಆತನು ನಿನ್ನ ಹೃದಯದ ಆಸೆಗಳನ್ನ ನೆರವೇರಿಸ್ತಾನೆ.” (ಕೀರ್ತ. 37:4) ಯೆಹೋವ ಕೊಟ್ಟಿರೋ ಈ ಮಾತನ್ನ ಕೇಳಿದಾಗ ನಮಗೆ ಎಷ್ಟು ಖುಷಿ ಆಗುತ್ತೆ ಅಲ್ವಾ? ಹಾಗಂತ ನಾವು ಪ್ರಾರ್ಥನೆ ಮಾಡಿದ ತಕ್ಷಣ ಉತ್ರ ಸಿಗಬೇಕು ಅಂತ ಅಂದ್ಕೊಳ್ಳೋದು ಸರಿನಾ? ಇಲ್ಲ. ಯಾಕೆ ಅನ್ನೋದಕ್ಕೆ ಈ ಉದಾಹರಣೆ ನೋಡಿ. ಮದುವೆ ಆಗದಿರೋ ಒಬ್ಬ ಸಹೋದರಿಗೆ ರಾಜ್ಯ ಪ್ರಚಾರಕರ ಶಾಲೆಗೆ ಹೋಗಬೇಕು ಅಂತ ತುಂಬ ಆಸೆ ಇರುತ್ತೆ. ಅದಕ್ಕೊಸ್ಕರ ಅವರು ಪ್ರಾರ್ಥನೆ ಮಾಡ್ತಿರ್ತಾರೆ. ಆದ್ರೆ ಎಷ್ಟೇ ವರ್ಷಗಳು ಉರುಳಿದ್ರೂ ಅವ್ರಿಗೆ ಅವಕಾಶನೇ ಸಿಗಲ್ಲ. ಒಬ್ಬ ಯುವ ಸಹೋದರ ಕಾಯಿಲೆಯಿಂದ ಕಷ್ಟ ಪಡ್ತಿರ್ತಾನೆ. ಅದನ್ನ ಯೆಹೋವ ತೆಗೆದು ಹಾಕಿ ಬಿಟ್ರೆ ಸಭೆಲಿ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಲ್ವಾ ಅಂತ ಪ್ರಾರ್ಥಿಸ್ತಾನೆ. ಆದ್ರೆ ಅವನು ಎಷ್ಟು ಪ್ರಾರ್ಥಿಸಿದ್ರೂ ಅವನ ಕಾಯಿಲೆ ವಾಸಿ ಆಗಲ್ಲ. ಒಬ್ಬ ದಂಪತಿ ತಮ್ಮ ಮಗ ಯಾವಾಗ್ಲೂ ಸತ್ಯದಲ್ಲೇ ಇರಬೇಕು ಅಂತ ಪ್ರಾರ್ಥನೆ ಮಾಡ್ತಿರ್ತಾರೆ. ಆದ್ರೆ ಅವ್ರ ಮಗ ಸತ್ಯನೇ ಬಿಟ್ಟು ಹೋಗಿಬಿಡ್ತಾನೆ. ಈ ತರ ಆದಾಗ ನಮಗೂ ಬೇಜಾರಾಗುತ್ತೆ ಅಲ್ವಾ?
2 ನಾವೂ ಕೂಡ ಯೆಹೋವನ ಹತ್ರ ಏನೋ ಒಂದು ಕೇಳಿರ್ತೀವಿ. ಆದ್ರೆ ಅದು ನಮಗೆ ಸಿಕ್ಕಿರಲ್ಲ. ಆಗ ‘ಯೆಹೋವ ಕೆಲವ್ರ ಪ್ರಾರ್ಥನೆ ಮಾತ್ರ ಕೇಳ್ತಾನೆ ನಮ್ಮ ಪ್ರಾರ್ಥನೆ ಕೇಳಲ್ಲ’ ಅಂತ ಅನಿಸಬಹುದು. ಅಥವಾ ‘ನಾನೇನೋ ತಪ್ಪು ಮಾಡಿದ್ದೀನಿ ಅನ್ಸುತ್ತೆ, ಅದಕ್ಕೇ ಯೆಹೋವ ನನ್ನ ಪ್ರಾರ್ಥನೆ ಕೇಳ್ತಾ ಇಲ್ಲ’ ಅಂತ ಅಂದ್ಕೊತೀವಿ. ಸಹೋದರಿ ಜ್ಯಾನೀಸ್ b ಅವ್ರ ಉದಾಹರಣೆ ನೋಡಿ. ಅವ್ರಿಗೆ ಮತ್ತು ಅವ್ರ ಗಂಡನಿಗೆ ಬೆತೆಲ್‌ಗೆ ಹೋಗಿ ಸೇವೆ ಮಾಡಬೇಕು ಅಂತ ತುಂಬ ಆಸೆ ಇತ್ತು. ಅದ್ರ ಬಗ್ಗೆ ಯೆಹೋವನ ಹತ್ರ ತುಂಬ ಪ್ರಾರ್ಥಿಸಿದ್ರು. “ನಾವು ಬೆತೆಲಿಗೆ ಹೋಗೇ ಹೋಗ್ತೀವಿ ಅಂತ ಅಂದ್ಕೊಂಡಿದ್ದೆ. ಆದ್ರೆ ಕರೆಯದೆ ಇದ್ದಾಗ ನನಗೆ ತುಂಬಾ ಬೇಜಾರಾಯ್ತು. ನಾನೇನಾದ್ರೂ ಯೆಹೋವನ ಮನಸ್ಸು ನೋವು ಮಾಡಿ ಬಿಟ್ಟಿದ್ದೀನಾ ಅಂತ ಅನಿಸ್ತು. ಈ ವಿಷ್ಯದ ಬಗ್ಗೆ ನಾನು ಯೆಹೋವನ ಹತ್ರ ಎಷ್ಟು ಪ್ರಾರ್ಥನೆ ಮಾಡಿದ್ರೂ ಯಾಕೆ ಉತ್ರ ಕೊಟ್ಟಿಲ್ಲ ಅಂತ ಅನಿಸ್ತು” ಅಂತ ಅವರು ಹೇಳ್ತಾರೆ. ಈಗ್ಲೂ ಅವ್ರನ್ನ ಬೆತೆಲಿಗೆ ಕರೆದಿಲ್ಲ.
3. ನಾವು ಈ ಲೇಖನದಲ್ಲಿ ಏನು ಕಲಿತೀವಿ?
3 ಒಂದೊಂದು ಸಲ ಯೆಹೋವ ನಮ್ಮ ಪ್ರಾರ್ಥನೆ ಕೇಳ್ತಿದ್ದಾನಾ, ಇಲ್ವಾ ಅಂತ ಅನಿಸುತ್ತೆ. ಈ ತರ ನಿಮಗಷ್ಟೇ ಅಲ್ಲ ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರಿಗೂ ಅನಿಸ್ತು. (ಯೋಬ 30:20; ಕೀರ್ತ. 22:2; ಹಬ. 1:2) ಹಾಗಾದ್ರೆ ಯೆಹೋವ ನಮ್ಮ ಪ್ರಾರ್ಥನೆ ಕೇಳ್ತಾನೆ, ನಮಗೆ ಖಂಡಿತ ಉತ್ರ ಕೊಡ್ತಾನೆ ಅಂತ ಹೇಗೆ ನಂಬಬಹುದು? (ಕೀರ್ತ 65:2) ಅದಕ್ಕೆ ಉತ್ರ ತಿಳ್ಕೊಳ್ಳೋಕೆ ನಾವು ಮೂರು ಪ್ರಶ್ನೆಗಳನ್ನ ನೋಡೋಣ. (1) ಯೆಹೋವ ತಾನು ಏನು ಮಾಡ್ತೀನಿ ಅಂತ ಹೇಳಿದ್ದಾನೆ? (2) ನಾವು ಏನು ಮಾಡಬೇಕು ಅಂತ ಯೆಹೋವ ಇಷ್ಟ ಪಡ್ತಾನೆ? (3) ನಮ್ಮ ಪ್ರಾರ್ಥನೆಗಳಿಗೆ ಉತ್ರ ಸಿಗ್ತಿಲ್ಲ ಅಂತ ಅನಿಸಿದಾಗ ನಾವೇನು ಮಾಡಬೇಕು?
ಯೆಹೋವ ಏನು ಮಾಡ್ತೀನಿ ಅಂತ ಹೇಳಿದ್ದಾನೆ?
4. ಯೆರೆಮೀಯ 29:12ರಲ್ಲಿ ಯೆಹೋವ ಏನಂತ ಮಾತು ಕೊಟ್ಟಿದ್ದಾನೆ?
4 ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನೆ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಯೆರೆಮೀಯ 29:12 ಓದಿ.) ಯೆಹೋವ ದೇವರಿಗೆ ನಾವಂದ್ರೆ ತುಂಬ ಇಷ್ಟ. ಹಾಗಾಗಿ ನಾವು ಮಾಡೋ ಪ್ರಾರ್ಥನೆಗಳನ್ನ ಕೇಳೇ ಕೇಳ್ತಾನೆ. (ಕೀರ್ತ. 10:17; 37:28) ಆದ್ರೆ ಅದ್ರ ಅರ್ಥ ನಾವು ಕೇಳಿದ್ದನ್ನೆಲ್ಲ ಆತನು ಕೊಡ್ತಾನೆ ಅಂತಲ್ಲ. ಕೆಲವೊಂದು ವಿಷ್ಯಗಳನ್ನ ಆತನು ಹೊಸ ಲೋಕದಲ್ಲಿ ನಮಗೆ ಕೊಡ್ತಾನೆ. ಅಲ್ಲಿ ತನಕ ನಾವು ಕಾಯಬೇಕು.
5. ನಮ್ಮ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ಳುವಾಗ ಯೆಹೋವ ಏನನ್ನ ಗಮನಿಸ್ತಾನೆ? ವಿವರಿಸಿ.
5 ನಾವು ಮಾಡೋ ಪ್ರಾರ್ಥನೆ ಆತನ ಇಷ್ಟದ ಪ್ರಕಾರ ಇದ್ಯಾ ಅಂತ ಯೆಹೋವ ಗಮನಿಸ್ತಾ ಇರ್ತಾನೆ. (ಯೆಶಾ. 55:8, 9) ಮನುಷ್ಯರು ಈ ಭೂಮಿಯಲ್ಲಿ ತುಂಬ್ಕೊಬೇಕು, ಅವರು ತನ್ನ ಆಳ್ವಿಕೆಯಲ್ಲಿ ಯಾವಾಗ್ಲೂ ಖುಷಿಖುಷಿಯಾಗಿ ಇರ್ಬೇಕು ಅನ್ನೋದೇ ಯೆಹೋವನ ಉದ್ದೇಶ. ಆದ್ರೆ ಸೈತಾನ, ಮನುಷ್ಯರಿಗೆ ದೇವರು ಬೇಕಾಗಿಲ್ಲ ಅವರು ತಮ್ಮನ್ನ ತಾವೇ ಆಳ್ಕೊಬಹುದು ಅಂತ ಹೇಳಿದ್ದಾನೆ. (ಆದಿ. 3:1-5) ಅದನ್ನ ಸುಳ್ಳು ಅಂತ ಸಾಬೀತು ಮಾಡೋಕೆ ಯೆಹೋವ, ಮನುಷ್ಯರಿಗೆ ತಮ್ಮನ್ನ ತಾವೇ ಆಳ್ಕೊಳ್ಳೋಕೆ ಬಿಟ್ಟಿದ್ದಾನೆ. ಆದ್ರೆ ಇದ್ರಿಂದ ಇವತ್ತು ಎಲ್ರಿಗೂ ತೊಂದ್ರೆ ಆಗಿದೆ. (ಪ್ರಸಂ. 8:9) ಈ ತೊಂದ್ರೆಗಳನ್ನೆಲ್ಲ ಯೆಹೋವ ಈಗ್ಲೇ ಸರಿ ಮಾಡಿಬಿಟ್ರೆ ಮನುಷ್ಯರ ಆಳ್ವಿಕೆನೇ ಚೆನ್ನಾಗಿದೆ ಅಂತ ಜನ ಅಂದ್ಕೊಳ್ತಾರೆ. ಅದಕ್ಕೇ ಯೆಹೋವ ಇದನ್ನೆಲ್ಲ ಈಗ್ಲೇ ಸರಿ ಮಾಡದೆ ಸರಿಯಾದ ಸಮಯಕ್ಕೆ ಕಾಯ್ತಿದ್ದಾನೆ.
6. ನಾವು ಅಂದ್ಕೊಂಡ ತರ ಯೆಹೋವ ಉತ್ರ ಕೊಡ್ಲಿಲ್ಲ ಅಂದ್ರೆ ಏನನ್ನ ನೆನಪಲ್ಲಿ ಇಟ್ಕೊಬೇಕು?
6 ಯೆಹೋವ ಒಬ್ಬೊಬ್ರಿಗೆ ಒಂದೊಂದು ರೀತಿಲಿ ಉತ್ರ ಕೊಡ್ತಾನೆ. ಉದಾಹರಣೆಗೆ, ರಾಜ ಹಿಜ್ಕೀಯನಿಗೆ ತುಂಬ ಹುಷಾರಿರ್ಲಿಲ್ಲ. ಆಗ ಅವನು ಯೆಹೋವನಿಗೆ ಪ್ರಾರ್ಥನೆ ಮಾಡಿದ. ಯೆಹೋವ ಅವನನ್ನ ವಾಸಿ ಮಾಡಿದನು. (2 ಅರ. 20:1-6) ಅಪೊಸ್ತಲ ಪೌಲನಿಗೂ ಆರೋಗ್ಯ ಸಮಸ್ಯೆ ಇತ್ತು. ಅವನು ತನ್ನ ‘ದೇಹದಲ್ಲಿ ಮುಳ್ಳಿನ ತರ’ ಇದ್ದ ಸಮಸ್ಯೆಯನ್ನ ತೆಗೆದು ಹಾಕು ಅಂತ ಯೆಹೋವನನ್ನ ಕೇಳ್ಕೊಂಡನು. ಆದ್ರೆ ಯೆಹೋವ ಅದನ್ನ ತೆಗಿಲಿಲ್ಲ. (2 ಕೊರಿಂ. 12:7-9) ಅಷ್ಟೇ ಅಲ್ಲ ಅಪೊಸ್ತಲ ಪೇತ್ರ ಮತ್ತು ಯಾಕೋಬನಿಗೆ ಏನಾಯ್ತು ಅಂತ ನೋಡಿ. ರಾಜ ಹೆರೋದ ಅವ್ರಿಬ್ರನ್ನೂ ಸಾಯಿಸಬೇಕು ಅಂದ್ಕೊಂಡಿದ್ದ. ಆಗ ಪೇತ್ರ ಮತ್ತು ಯಾಕೋಬನಿಗಾಗಿ ಸಭೆಯಲ್ಲಿದ್ದ ಎಲ್ರೂ ಪ್ರಾರ್ಥನೆ ಮಾಡಿದ್ರು. ಆದ್ರೂ ಹೆರೋದ ಯಾಕೋಬನನ್ನ ಸಾಯಿಸಿಬಿಟ್ಟ. ಆದ್ರೆ ಪೇತ್ರನನ್ನ ಯೆಹೋವ ಕಾಪಾಡಿದನು. (ಅ. ಕಾ. 12:1-11) ಯೆಹೋವ ಯಾಕೋಬನನ್ನ ಯಾಕೆ ಕಾಪಾಡಲಿಲ್ಲ ಅಂತ ಬೈಬಲಲ್ಲಿ ಎಲ್ಲೂ ಹೇಳಿಲ್ಲ. c ಆದ್ರೆ ಆತನು ಏನೇ ಮಾಡಿದ್ರೂ ಅದ್ರಲ್ಲಿ ನ್ಯಾಯ ಇರುತ್ತೆ, ಯಾರಿಗೂ ಆತನು “ಅನ್ಯಾಯ ಮಾಡಲ್ಲ” ಅಂತ ನಮಗೆ ಗೊತ್ತು. (ಧರ್ಮೋ 32:4) ಅಷ್ಟೇ ಅಲ್ಲ ಪೇತ್ರ ಮತ್ತು ಯಾಕೋಬ ಇಬ್ರ ಮೇಲೂ ಯೆಹೋವನಿಗೆ ಪ್ರೀತಿ ಇತ್ತು. (ಪ್ರಕ. 21:14) ಕೆಲವೊಂದು ಸಲ ನಾವು ಅಂದ್ಕೊಂಡ ತರ ಯೆಹೋವ ನಮಗೂ ಉತ್ರ ಕೊಡದೇ ಇರಬಹುದು. ಹಾಗಂತ ಯೆಹೋವ ಯಾಕೆ ಹೀಗೆ ಮಾಡ್ತಿದ್ದಾನೆ ಅಂತ ನಾವು ಬೇಜಾರು ಮಾಡ್ಕೊಳ್ಳಲ್ಲ. ಆತನು ಏನೇ ಮಾಡಿದ್ರೂ ಅದ್ರಲ್ಲಿ ಪ್ರೀತಿ, ನ್ಯಾಯ ಇರುತ್ತೆ ಅಂತ ನಾವು ನಂಬ್ತೀವಿ.—ಯೋಬ 33:13.
7. ನಾವು ಏನು ಮಾಡಬಾರದು ಮತ್ತು ಯಾಕೆ?
7 ನಿಮ್ಮನ್ನ ಯಾವತ್ತೂ ಬೇರೆಯವ್ರ ಜೊತೆ ಹೋಲಿಸ್ಕೊಬೇಡಿ. ಕೆಲವೊಂದು ಸಲ ನಾವು ಯೆಹೋವನ ಹತ್ರ ನಿರ್ದಿಷ್ಟವಾಗಿ ಒಂದು ವಿಷ್ಯ ಕೇಳಿರ್ತೀವಿ ಆದ್ರೆ ಆತನು ನಮಗೆ ಅದನ್ನ ಕೊಟ್ಟಿರಲ್ಲ. ನಾವು ಕೇಳಿದನ್ನೇ ಬೇರೆಯವರು ಕೇಳುವಾಗ ಯೆಹೋವ ಅದನ್ನ ಅವ್ರಿಗೆ ಕೊಡಬಹುದು. ಸಹೋದರಿ ಆ್ಯನಾಗೂ ಹೀಗೇ ಅನಿಸ್ತು. ಅವ್ರ ಗಂಡನಿಗೆ ಮತ್ತು ಇನ್ನಿಬ್ರು ವಯಸ್ಸಾದ ಸಹೋದರಿಯರಿಗೆ ಕ್ಯಾನ್ಸರ್ ಇತ್ತು. ಆಗ ಆ್ಯನಾ ಮೂರೂ ಜನ್ರಿಗಾಗಿ ಬೇಡ್ಕೊಂಡ್ರು. ಆ ಇಬ್ರು ಸಹೋದರಿಯರು ಗುಣ ಆದ್ರು. ಆದ್ರೆ ಅವ್ರ ಗಂಡ ಮ್ಯಾಥ್ಯೂ ತೀರಿಹೋಗಿ ಬಿಟ್ರು. ಆಗ ಆ್ಯನಾಗೆ ತುಂಬ ದುಃಖ ಆಯ್ತು. ಯೆಹೋವ ಆ ಸಹೋದರಿಯರನ್ನ ಕಾಪಾಡಿ ತನ್ನ ಗಂಡನನ್ನ ಮಾತ್ರ ಯಾಕೆ ಕಾಪಾಡಲಿಲ್ಲ ಅಂತ ಅಂದ್ಕೊಂಡ್ರು. ಆ ಸಹೋದರಿಯರು ಹೇಗೆ ಗುಣ ಆದ್ರು ಅಂತ ನಮಗೆ ಗೊತ್ತಿಲ್ಲ. ಆದ್ರೆ ಒಂದು ವಿಷ್ಯ ಅಂತೂ ಚೆನ್ನಾಗಿ ಗೊತ್ತು. ಅದೇನಂದ್ರೆ, ಯೆಹೋವ ಸಾವು, ನೋವು, ದುಃಖನೆಲ್ಲ ತೆಗೆದು ಹಾಕ್ತಾನೆ. ಅಷ್ಟೇ ಅಲ್ಲ ನಾವು ಒಂದುವೇಳೆ ತೀರಿ ಹೋದ್ರೂ ನಮ್ಮನ್ನ ಮತ್ತೆ ಎಬ್ಬಿಸೋಕೆ ಆತನು ಕಾಯ್ತಾ ಇದ್ದಾನೆ.—ಯೋಬ 14:15.
8. (ಎ) ಯೆಶಾಯ 43:2ರಲ್ಲಿ ಹೇಳಿದ ಹಾಗೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? (ಬಿ) ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ? (ಸಹಿಸಲು ಪ್ರಾರ್ಥನೆಯ ಸಹಾಯ ಅನ್ನೋ ವಿಡಿಯೋ ನೋಡಿ.)
8 ಯೆಹೋವ ನಮಗೆ ಯಾವಾಗ್ಲೂ ಸಹಾಯ ಮಾಡ್ತಾನೆ. ಯೆಹೋವ ನಮ್ಮನ್ನ ತುಂಬ ಪ್ರೀತಿಸೋ ಅಪ್ಪ. ಹಾಗಾಗಿ ನಾವು ಕಷ್ಟ ಪಡೋದನ್ನ, ನೋವು ಅನುಭವಿಸೋದನ್ನ ಆತನಿಗೆ ನೋಡೋಕೆ ಆಗಲ್ಲ. (ಯೆಶಾ. 63:9) ಹಾಗಂತ ನದಿ ತರ, ಬೆಂಕಿ ತರ ಇರೋ ಕಷ್ಟಗಳನ್ನ ಆತನು ತೆಗೆದು ಹಾಕಲ್ಲ. (ಯೆಶಾಯ 43:2 ಓದಿ.) ಆದ್ರೆ ಅದನ್ನ ‘ದಾಟಿ ಹೋಗೋಕೆ’ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಎಷ್ಟೇ ಕಷ್ಟಗಳಿದ್ರೂ ಆತನ ಜೊತೆ ಇರೋ ಫ್ರೆಂಡ್‌ಶಿಪ್ ಇನ್ನೂ ಗಟ್ಟಿಯಾಗೋಕೆ ಸಹಾಯ ಮಾಡ್ತಾನೆ ಮತ್ತು ಅದನ್ನ ಸಹಿಸ್ಕೊಳ್ಳೋಕೆ ತನ್ನ ಪವಿತ್ರ ಶಕ್ತಿನೂ ಕೊಡ್ತಾನೆ. (ಲೂಕ 11:13; ಫಿಲಿ. 4:13) ಹಾಗಾಗಿ ನಮಗೆ ಏನೇ ಕಷ್ಟಗಳು ಬಂದ್ರೂ ಅದನ್ನ ತಾಳ್ಕೊಳ್ಳೋಕೆ ಅಥವಾ ಸಹಿಸ್ಕೊಳ್ಳೋಕೆ ಮತ್ತು ಕೊನೇ ತನಕ ಆತನಿಗೆ ನಿಯತ್ತಾಗಿ ಇರೋಕೆ ಆತನು ಸಹಾಯ ಮಾಡೇ ಮಾಡ್ತಾನೆ ಅಂತ ನಾವು ನಂಬಬಹುದು. d
ನಾವು ಏನು ಮಾಡಬೇಕು ಅಂತ ಯೆಹೋವ ಇಷ್ಟ ಪಡ್ತಿದ್ದಾನೆ?
9. ಯಾಕೋಬ 1:6, 7ರಲ್ಲಿ ಹೇಳಿರೋ ಹಾಗೆ ನಾವ್ಯಾಕೆ ಯೆಹೋವ ಸಹಾಯ ಮಾಡ್ತಾನೆ ಅಂತ ನಂಬಬೇಕು?
9 ನಾವು ಯೆಹೋವನ ಮೇಲೆ ನಂಬಿಕೆ ಇಡಬೇಕು ಅಂತ ಆತನು ಇಷ್ಟ ಪಡ್ತಾನೆ. (ಇಬ್ರಿ. 11:6) ಕೆಲವೊಮ್ಮೆ ನಮಗೆ ಕಷ್ಟಗಳು ಬಂದಾಗ ಆಕಾಶನೇ ತಲೆ ಮೇಲೆ ಬಿದ್ದಂಗೆ ಅನಿಸಿ ಬಿಡುತ್ತೆ. ಆಗ ಯೆಹೋವ ನಮಗೆ ಸಹಾಯ ಮಾಡ್ತಾನಾ ಇಲ್ವಾ ಅಂತ ಅನಿಸುತ್ತೆ. ಆದ್ರೆ ನಾವು ದೇವರ ಬಲದಿಂದ ‘ಗೋಡೆಯನ್ನೂ ಜಿಗಿಯೋಕೆ’ ಆಗುತ್ತೆ ಅಂತ ಬೈಬಲ್ ಹೇಳುತ್ತೆ. (ಕೀರ್ತ. 18:29) ಹಾಗಾಗಿ ಯೆಹೋವ ನಮಗೆ ಸಹಾಯ ಮಾಡ್ತಾನಾ ಇಲ್ವಾ ಅಂತ ಅನುಮಾನ ಪಡೋ ಬದ್ಲು, ಯೆಹೋವ ನನ್ನ ಪ್ರಾರ್ಥನೆ ಕೇಳಿಸ್ಕೊಳ್ತಾನೆ, ನನಗೆ ಸಹಾಯ ಮಾಡ್ತಾನೆ ಅನ್ನೋ ನಂಬಿಕೆಯಿಂದ ಪ್ರಾರ್ಥಿಸಿ.—ಯಾಕೋಬ 1:6, 7 ಓದಿ.
10. ನಾವು ಮಾಡಿದ ಪ್ರಾರ್ಥನೆಗೆ ತಕ್ಕ ಹಾಗೆ ನಡ್ಕೊಳ್ಳೋದು ಹೇಗೆ? ಉದಾಹರಣೆ ಕೊಡಿ.
10 ನಮ್ಮ ಪ್ರಾರ್ಥನೆಗೆ ತಕ್ಕ ಹಾಗೆ ನಾವು ನಡ್ಕೊಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. ಒಬ್ಬ ಸಹೋದರ ಅಧಿವೇಶನಕ್ಕೆ ಹೋಗೋಕೆ ತನ್ನ ಬಾಸ್ ಹತ್ರ ರಜೆ ಕೇಳೋಕೂ ಮುಂಚೆ ಯೆಹೋವನ ಹತ್ರ ಪ್ರಾರ್ಥಿಸ್ತಾನೆ ಅಂದ್ಕೊಳ್ಳಿ. ಆಗ ಯೆಹೋವ ಅವನ ಪ್ರಾರ್ಥನೆಗೆ ಹೇಗೆ ಉತ್ರ ಕೊಡ್ತಾನೆ? ಅವನ ಬಾಸ್ ಹತ್ರ ಹೋಗಿ ಮಾತಾಡೋಕೆ ಅವನಿಗೆ ಧೈರ್ಯ ಕೊಡಬಹುದು. ಆದ್ರೆ ಆ ಸಹೋದರ ಕೂಡ ತನ್ನ ಕಡೆಯಿಂದ ಪ್ರಯತ್ನ ಹಾಕಬೇಕಾಗುತ್ತೆ. ಅವನು ಒಂದು ಸಲ ಬಾಸ್ ಹತ್ರ ಹೋಗಿ ಕೇಳಿ ಸುಮ್ಮನಾಗೋದಲ್ಲ, ಪದೇಪದೇ ಕೇಳಬೇಕಾಗುತ್ತೆ. ಅಥವಾ ಬೇರೆ ಕೆಲಸದವ್ರ ಹತ್ರ ಶಿಫ್ಟ್ ಚೇಂಜ್ ಮಾಡ್ಕೊಳ್ಳೋಕೆ ಆಗುತ್ತಾ ಅಂತ ಕೇಳಿ ನೋಡಬೇಕಾಗುತ್ತೆ. ಇಲ್ಲಾಂದ್ರೆ ಅವತ್ತಿನ ಸಂಬಳ ಕೊಡದೇ ಇದ್ರೂ ಪರವಾಗಿಲ್ಲ ರಜೆ ಕೊಡಿ ಅಂತ ಬಾಸ್ ಹತ್ರ ಕೇಳಬೇಕಾಗುತ್ತೆ.
11. ನಾವ್ಯಾಕೆ ಪದೇಪದೇ ಪ್ರಾರ್ಥಿಸ್ತಾ ಇರಬೇಕು?
11 ನಾವು ಪದೇಪದೇ ಪ್ರಾರ್ಥನೆ ಮಾಡಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. (1 ಥೆಸ. 5:17) ಕೆಲವೊಮ್ಮೆ ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ರ ಸಿಗಲ್ಲ ಅಂತ ಯೇಸು ಹೇಳಿದನು. (ಲೂಕ 11:9) ಹಾಗಾಗಿ ಬಿಡದೇ ಪ್ರಾರ್ಥನೆ ಮಾಡ್ತಾ ಇರಿ. (ಲೂಕ 18:1-7) ಹಾಗೆ ಮಾಡಿದಾಗ ನಾವು ಕೇಳ್ತಾ ಇರೋ ವಿಷ್ಯ ಎಷ್ಟು ಮುಖ್ಯ ಅಂತ ತೋರಿಸ್ತೀವಿ. ಅಷ್ಟೇ ಅಲ್ಲ ನಮಗೆ ಸಹಾಯ ಮಾಡೋಕೆ ಯೆಹೋವನಿಗೆ ಆಗುತ್ತೆ ಅನ್ನೋ ನಂಬಿಕೆ ತೋರಿಸ್ತೀವಿ.
ನಮ್ಮ ಪ್ರಾರ್ಥನೆಗೆ ಉತ್ರ ಸಿಕ್ತಿಲ್ಲ ಅಂತ ಅನಿಸಿದಾಗ ಏನು ಮಾಡಬೇಕು?
12. (ಎ) ನಾವು ಯಾವ ಪ್ರಶ್ನೆಯನ್ನ ಕೇಳ್ಕೋಬೇಕು ಮತ್ತು ಯಾಕೆ? (ಬಿ) ಪ್ರಾರ್ಥನೆ ಮಾಡುವಾಗ ನಮಗೆ ಯೆಹೋವನ ಮೇಲೆ ಗೌರವ ಇದೆ ಅಂತ ಹೇಗೆ ತೋರಿಸಬಹುದು? (“ ನಾನು ಮಾಡೋ ಪ್ರಾರ್ಥನೆ ಯೆಹೋವನಿಗೆ ಗೌರವ ತರೋ ಹಾಗೆ ಇದ್ಯಾ?” ಅನ್ನೋ ಚೌಕ ನೋಡಿ)
12 ನೀವು ಮಾಡಿದ ಪ್ರಾರ್ಥನೆಗೆ ಉತ್ರ ಸಿಕ್ತಿಲ್ಲ ಅಂತ ಅನಿಸಿದಾಗ ಬೇಜಾರು ಮಾಡ್ಕೋಬೇಡಿ. ಅದ್ರ ಬದ್ಲು ಮೂರು ಪ್ರಶ್ನೆಗಳ ಬಗ್ಗೆ ಯೋಚನೆ ಮಾಡಿ ನೋಡಿ. ಅದ್ರಲ್ಲೊಂದು, ನಾನು ಸರಿಯಾದ ವಿಷ್ಯಕ್ಕೆ ಪ್ರಾರ್ಥನೆ ಮಾಡ್ತಿದ್ದೀನಾ? ಅಂತ ಕೇಳ್ಕೋಬೇಕು. ಕೆಲವೊಮ್ಮೆ ನಮಗೇನು ಒಳ್ಳೇದು ಅಂತ ನಮಗೇ ಚೆನ್ನಾಗಿ ಗೊತ್ತಿದೆ ಅಂತ ಅಂದ್ಕೊಳ್ತೀವಿ. ಆದ್ರೆ ಯೆಹೋವನಿಗೆ ನಮಗಿಂತ ಚೆನ್ನಾಗಿ ಗೊತ್ತಿರುತ್ತೆ. ಹಾಗಾಗಿ ನಾವೊಂದು ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಿದಾಗ ಅದಕ್ಕೆ ಉತ್ರ ಸಿಗದೆ ಹೋದ್ರೆ ನಾವು ಅಂದ್ಕೊಂಡಿದ್ದಕ್ಕಿಂತ ಒಳ್ಳೇದನ್ನ ಕೊಡೋಕೆ ಯೆಹೋವ ಕಾಯ್ತಾ ಇದ್ದಾನೆ ಅಂತ ಅರ್ಥ. ಇನ್ನೂ ಕೆಲವೊಮ್ಮೆ ನಾವು ಕೇಳೋ ವಿಷ್ಯಗಳು ಯೆಹೋವನ ಇಷ್ಟದ ಪ್ರಕಾರ ಇಲ್ಲದೆ ಇರಬಹುದು. (1 ಯೋಹಾ. 5:14) ಉದಾಹರಣೆಗೆ ಮೊದಲನೇ ಪ್ಯಾರದಲ್ಲಿ ನೋಡಿದ ಆ ದಂಪತಿ ಏನು ಕೇಳಿದರು? ಅವ್ರ ಮಗ ಸತ್ಯ ಬಿಟ್ಟು ಹೋಗಬಾರದು ಅಂತ ಪ್ರಾರ್ಥನೆ ಮಾಡಿದ್ದು ಸರಿಯಾಗಿತ್ತಾ? ಅವರಿಗೆ ಅದು ಸರಿ ಅಂತ ಅನಿಸಬಹುದು. ಆದ್ರೆ ಎಲ್ಲರೂ ತನ್ನನ್ನ ಆರಾಧಿಸಬೇಕು ಅಂತ ಯೆಹೋವ ಯಾವತ್ತೂ ಯಾರನ್ನು ಒತ್ತಾಯ ಮಾಡಲ್ಲ. ಬದ್ಲಿಗೆ ನಾವಾಗ್ಲಿ, ನಮ್ಮ ಮಕ್ಕಳಾಗ್ಲಿ ತನ್ನನ್ನ ಇಷ್ಟ ಪಟ್ಟು ಆರಾಧಿಸಬೇಕು ಅಂತ ಆಸೆ ಪಡ್ತಾನೆ. (ಧರ್ಮೋ. 10:12, 13; 30:19, 20) ಹಾಗಾದ್ರೆ ಆ ದಂಪತಿ ಯೆಹೋವನ ಹತ್ರ ಏನು ಕೇಳಬಹುದಿತ್ತು? ‘ನಮ್ಮ ಮಗ ನಿನ್ನನ್ನ ಪ್ರೀತಿಸೋ ಹಾಗೆ, ನಿನ್ನ ಫ್ರೆಂಡ್ ಆಗೋ ಹಾಗೆ ಕಲಿಸೋಕೆ ನಮಗೆ ಸಹಾಯ ಮಾಡಪ್ಪ’ ಅಂತ ಕೇಳಬಹುದಿತ್ತು.—ಜ್ಞಾನೋ. 22:6; ಎಫೆ. 6:4.
13. ಇಬ್ರಿಯ 4:16ರಲ್ಲಿ ಹೇಳಿರೋ ತರ ಯೆಹೋವ ನಮಗೆ ಯಾವಾಗ ಸಹಾಯ ಮಾಡ್ತಾನೆ? ವಿವರಿಸಿ.
13 ಎರಡನೇದು, ಯೆಹೋವ ಸರಿಯಾದ ಸಮಯಕ್ಕೆ ಉತ್ರ ಕೊಡೋ ತನಕ ನಾನು ಕಾಯಬೇಕಾ? ಅಂತ ಯೋಚನೆ ಮಾಡಿ. ನಾವು ಮಾಡಿದ ಪ್ರಾರ್ಥನೆಗೆ ತಕ್ಷಣ ಉತ್ರ ಸಿಗಬೇಕು ಅಂತ ಅಂದ್ಕೊತೀವಿ. ಆದ್ರೆ ನಮ್ಮ ಪ್ರಾರ್ಥನೆಗೆ ಯಾವಾಗ ಉತ್ರ ಕೊಡಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. (ಇಬ್ರಿಯ 4:16 ಓದಿ.) ಹಾಗಾಗಿ ನಮ್ಮ ಪ್ರಾರ್ಥನೆಗೆ ಉತ್ರ ಸಿಕ್ಕಿಲ್ಲ ಅಂದ ತಕ್ಷಣ ನಾವೇನು ಅಂದ್ಕೊಬಾರದು? ಯೆಹೋವ ನಮ್ಮ ಪ್ರಾರ್ಥನೆಗೆ ಉತ್ರ ಕೊಡಲ್ಲ ಅಂತ ಅಂದ್ಕೊಬಾರದು. ಬದ್ಲಿಗೆ ‘ಕೊಡ್ತಾನೆ’ ಆದ್ರೆ ‘ಈಗಲ್ಲ’ ಅಂತ ನೆನಸಬೇಕು. ತನ್ನ ಕಾಯಿಲೆ ವಾಸಿ ಆಗಬೇಕು ಅಂತ ಪ್ರಾರ್ಥನೆ ಮಾಡ್ತಿದ್ದ ಆ ಯುವ ಸಹೋದರನನ್ನ ಸ್ವಲ್ಪ ನೆನಪಿಸ್ಕೊಳ್ಳಿ. ಆ ಸಹೋದರ ಅಂದ್ಕೊಂಡ ಹಾಗೆ ಯೆಹೋವ ಅವನನ್ನ ಅದ್ಭುತವಾಗಿ ವಾಸಿ ಮಾಡಿದ್ದಿದ್ರೆ ಏನಾಗ್ತಿತ್ತು? ‘ನೀನು ಅವನನ್ನ ವಾಸಿ ಮಾಡಿದ್ದಕ್ಕೆ ಅವನು ನಿನ್ನನ್ನ ಆರಾಧಿಸುತ್ತಿದ್ದಾನೆ’ ಅಂತ ಸೈತಾನ ಯೆಹೋವನಿಗೆ ಹೇಳಿರುತ್ತಿದ್ದ ಅಲ್ವಾ? (ಯೋಬ 1:9-11; 2:4) ಅದೂ ಅಲ್ಲದೇ ತನ್ನ ಸರ್ಕಾರ ಬಂದಾಗ ಎಲ್ಲ ಕಾಯಿಲೆನೂ ವಾಸಿ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಯೆಶಾ. 33:24; ಪ್ರಕ. 21:3, 4) ಹಾಗಾಗಿ ಈಗ ಯೆಹೋವ ನಮ್ಮ ಕಾಯಿಲೆನ ಅದ್ಭುತವಾಗಿ ವಾಸಿ ಮಾಡ್ತಾನೆ ಅಂತ ಅಂದ್ಕೊಬಾರದು. ಹಾಗಾದ್ರೆ ಆ ಸಹೋದರ ಏನಂತ ಪ್ರಾರ್ಥನೆ ಮಾಡಬಹುದಿತ್ತು? ನನಗೆ ಆಗ್ತಿರೋ ಕಷ್ಟ ಸಹಿಸ್ಕೊಳ್ಳೋಕೆ ಸಹಾಯ ಮಾಡು, ಮನಶ್ಶಾಂತಿ ಕೊಡು, ನಿನ್ನನ್ನ ಕೊನೆವರೆಗೂ ನಂಬಿಕೆಯಿಂದ ಸೇವೆ ಮಾಡೋಕೆ ಸಹಾಯ ಮಾಡು ಅಂತ ಕೇಳಬಹುದಿತ್ತು.—ಕೀರ್ತ. 29:11.
14. ಜ್ಯಾನೀಸ್‌ನಿಂದ ನೀವೇನು ಕಲಿತ್ರಿ?
14 ಮೊದಲನೇ ಪ್ಯಾರದಲ್ಲಿ ಹೇಳಿದ್ದ ಜ್ಯಾನೀಸ್ ನಿಮಗೆ ನೆನಪಿದ್ದಾರಾ? ಅವ್ರಿಗೆ ಬೆತೆಲಿಗೆ ಹೋಗಬೇಕು ಅಂತ ತುಂಬ ಆಸೆ ಇತ್ತು. ಅದಕ್ಕೋಸ್ಕರ ಅವರು ಪ್ರಾರ್ಥನೆ ಮಾಡಿದ್ರು. ಯೆಹೋವ ಅವರ ಪ್ರಾರ್ಥನೆಗೆ ಉತ್ರ ಕೊಟ್ಟನು. ಆದ್ರೆ ಅದನ್ನ ಅರ್ಥ ಮಾಡ್ಕೊಳ್ಳೋಕೆ ಅವರಿಗೆ ಐದು ವರ್ಷ ಹಿಡಿತು. ಅವರು ಏನಂತ ಹೇಳ್ತಾರೆ ನೋಡಿ, “ನಾನು ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸ್ಕೊಬೇಕಿತ್ತು. ನಾನು ಬೈಬಲನ್ನ ಇನ್ನೂ ಚೆನ್ನಾಗಿ ಓದಿ ಅಧ್ಯಯನ ಮಾಡಬೇಕಿತ್ತು. ಪರಿಸ್ಥಿತಿ ಹೇಗೇ ಇದ್ರೂ ನಾನು ಖುಷಿಯಾಗಿರೋದು ಹೇಗೆ ಅಂತ ಕಲೀಬೇಕಿತ್ತು. ಇದನ್ನೆಲ್ಲಾ ಯೆಹೋವ ನನಗೆ ಇಷ್ಟು ವರ್ಷ ಕಲಿಸಿಕೊಟ್ಟನು” ಅಂತ ಹೇಳ್ತಾರೆ. ಇದಾದ್ಮೇಲೆ ಜ್ಯಾನೀಸ್ ಮತ್ತು ಅವರ ಗಂಡನಿಗೆ ಸರ್ಕಿಟ್‌ನಲ್ಲಿ ಸೇವೆ ಮಾಡೋ ನೇಮಕ ಸಿಕ್ತು. ಅದ್ರ ಬಗ್ಗೆ ಅವರೇನು ಹೇಳ್ತಾರೆ ಅಂದ್ರೆ “ಯೆಹೋವ ದೇವರು ನಾನು ಅಂದುಕೊಂಡಿದ್ದಕ್ಕಿಂತ ಒಳ್ಳೆ ರೀತಿಯಲ್ಲಿ ಉತ್ರ ಕೊಟ್ಟನು. ಅದನ್ನ ಅರ್ಥ ಮಾಡ್ಕೊಳ್ಳೋಕೆ ನಂಗೆ ಸಮಯ ಹಿಡಿತು. ಆದ್ರೆ ಆಗೆಲ್ಲ ಯೆಹೋವ ನನ್ನನ್ನ ಎಷ್ಟು ಪ್ರೀತಿಸ್ತಾನೆ, ನನಗೆ ಎಷ್ಟು ಚೆನ್ನಾಗಿ ಕಲಿಸ್ತಿದ್ದಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಆಯ್ತು.”
15. ನಾವು ಯಾಕೆ ಬೇರೆ ವಿಷ್ಯಗಳಿಗೋಸ್ಕರನೂ ಪ್ರಾರ್ಥಿಸಬೇಕು? (ಚಿತ್ರಗಳನ್ನೂ ನೋಡಿ.)
15 ಮೂರನೇದಾಗಿ, ಬೇರೆ ಯಾವುದಾದರೂ ವಿಷ್ಯಗಳಿಗಳಿಗಾಗಿ ಪ್ರಾರ್ಥನೆ ಮಾಡಬಹುದಾ? ಅಂತ ಯೋಚಿಸಿ. ಯಾವುದಾದರೂ ಒಂದು ವಿಷ್ಯಕ್ಕಾಗಿ ನಾವು ಪ್ರಾರ್ಥನೆ ಮಾಡುವಾಗ ಯೆಹೋವನ ಹತ್ರ ‘ನನಗೆ ಇದನ್ನ ಮಾಡೋಕೆ ಸಹಾಯ ಮಾಡಪ್ಪ’ ಅಂತ ನಿರ್ದಿಷ್ಟವಾಗಿ ಕೇಳೋದು ಒಳ್ಳೇದು. ಆದ್ರೆ ಇನ್ನು ಕೆಲವೊಮ್ಮೆ ‘ನಿನ್ನ ಇಷ್ಟ ಮಾಡೋಕೆ ನಾನು ರೆಡಿ ಇದ್ದೀನಿ’ ಅಂತ ಪ್ರಾರ್ಥಿಸೋದು ತುಂಬ ಒಳ್ಳೇದು. ರಾಜ್ಯ ಪ್ರಚಾರಕರ ಶಾಲೆಗೆ ಹೋಗೋಕೆ ಪ್ರಾರ್ಥನೆ ಮಾಡ್ತಿದ್ದ ಆ ಅವಿವಾಹಿತ ಸಹೋದರಿ ನಿಮಗೆ ನೆನಪಿದ್ದಾರಾ? ಅವ್ರಿಗೆ ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡಬೇಕು ಅಂತ ತುಂಬ ಆಸೆ ಇತ್ತು. ಅದಕ್ಕೆ ಅವರು ಆ ಶಾಲೆಗೆ ಹೋಗೋಕೆ ಇಷ್ಟಪಡ್ತಿದ್ರು. ಆದ್ರೆ ಅವರು ಪ್ರಾರ್ಥನೆಯಲ್ಲಿ ಬೇರೆ ಯಾವ ವಿಷ್ಯನೂ ಕೇಳಬಹುದಿತ್ತು? ಸೇವೆಯನ್ನ ಜಾಸ್ತಿ ಮಾಡೋಕೆ ಇನ್ನೂ ಯಾವುದಾದ್ರೂ ದಾರಿಗಳು ಇದ್ರೆ ತೋರಿಸಿಕೊಡಪ್ಪಾ ಅಂತ ಕೇಳಬಹುದಿತ್ತು. (ಅ. ಕಾ. 16:9, 10) ಆಮೇಲೆ ಸರ್ಕಿಟ್ ಮೇಲ್ವಿಚಾರಕರ ಹತ್ರ ಹೋಗಿ ಹತ್ತಿರದಲ್ಲಿರೋ ಯಾವುದಾದ್ರೂ ಸಭೆಗೆ ಪಯನೀಯರರು ಬೇಕಾಗಿದ್ದಾರಾ ಅಂತ ಕೇಳಬಹುದಿತ್ತು ಅಥವಾ ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋಕೆ ರೆಡಿ ಇದ್ದೀನಿ ಅಂತ ಬ್ರಾಂಚ್ ಆಫೀಸ್‌ಗೆ ಪತ್ರ ಬರಿಬಹುದಿತ್ತು. e
16. ನಾವು ಏನನ್ನ ನಂಬಬಹುದು?
16 ನಾವು ಇಲ್ಲಿ ತನಕ ಏನು ಕಲಿತ್ವಿ? ಯೆಹೋವ ಖಂಡಿತ ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನೆ, ಪ್ರೀತಿಯಿಂದ ಉತ್ರ ಕೊಡ್ತಾನೆ, ಆತನು ಯಾವತ್ತೂ ಅನ್ಯಾಯ ಮಾಡಲ್ಲ ಅಂತ ಕಲಿತ್ವಿ. (ಕೀರ್ತ. 4:3; ಯೆಶಾ. 30:18) ಅಷ್ಟೇ ಅಲ್ಲ, ಕೆಲವೊಮ್ಮೆ ನಾವು ಅಂದ್ಕೊಂಡ ಹಾಗೆ ಉತ್ರ ಸಿಗದೇ ಇರಬಹುದು. ಆದ್ರೆ ಅದ್ರ ಅರ್ಥ ಯೆಹೋವ ನಮ್ಮ ಪ್ರಾರ್ಥನೆ ಕೇಳಲೇ ಇಲ್ಲ ಅಂತಲ್ಲ. ಆತನಿಗೆ ನಾವಂದ್ರೆ ತುಂಬ ಇಷ್ಟ. ಆತನು ಯಾವತ್ತೂ ನಮ್ಮ ಕೈಬಿಡಲ್ಲ. (ಕೀರ್ತ. 9:10) ಹಾಗಾಗಿ “ಯಾವಾಗ್ಲೂ ಆತನ ಮೇಲೆ ಭರವಸೆ” ಇಡೋಣ ಮತ್ತು ಮನಸ್ಸು ಬಿಚ್ಚಿ ಆತನ ಹತ್ರ ಎಲ್ಲ ಹೇಳ್ಕೊಳ್ಳೋಣ.—ಕೀರ್ತ. 62:8.
ಗೀತೆ 13 ಕೃತಜ್ಞತೆಯ ಪ್ರಾರ್ಥನೆ
a ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಹೇಗೆ ಉತ್ರ ಕೊಡಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ಉತ್ರ ಕೊಡ್ತಾನೆ ಅಂತ ಹೇಗೆ ನಂಬಬಹುದು?
b ಕೆಲವರ ಹೆಸ್ರು ಬದಲಾಗಿದೆ.
c ಫೆಬ್ರವರಿ 2022ರ ಕಾವಲಿನಬುರುಜುವಿನ “ಯೆಹೋವ ಮಾಡೋದೆಲ್ಲ ಸರಿಯಾಗೇ ಇರುತ್ತೆ ಅಂತ ನಂಬಿ” ಅನ್ನೋ ಲೇಖನದ ಪ್ಯಾರ 3-6 ನೋಡಿ.
d ಕಷ್ಟಗಳು ಬಂದಾಗ ಯೆಹೋವ ಹೇಗೆ ಸಹಾಯ ಮಾಡ್ತಾನೆ ಅಂತ ತಿಳ್ಕೊಳ್ಳೋಕೆ jw.orgನಲ್ಲಿ ಸಹಿಸಲು ಪ್ರಾರ್ಥನೆಯ ಸಹಾಯ ಅನ್ನೋ ವಿಡಿಯೋ ನೋಡಿ.
e ಅಗತ್ಯ ಇರೋ ಕಡೆ ಸೇವೆ ಮಾಡೋಕೆ ನಿಮಗೆ ಇಷ್ಟ ಇದ್ರೆ ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು ಅನ್ನೋ ಪುಸ್ತಕದ ಪ್ಯಾರ 6-9 ನೋಡಿ.
f ಚಿತ್ರ ವಿವರಣೆ: ಇಬ್ರು ಸಹೋದರಿಯರು ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿ ಹಾಕ್ತಿದ್ದಾರೆ. ಅದ್ರಲ್ಲಿ ಒಬ್ರಿಗೆ ಸಿಗುತ್ತೆ ಇನ್ನೊಬ್ರಿಗೆ ಸಿಗಲ್ಲ. ಆಗ ಆ ಸಹೋದರಿ ಬೇಜಾರು ಮಾಡ್ಕೊಳಲ್ಲ. ಬದ್ಲಿಗೆ ಇನ್ನೂ ಹೇಗೆಲ್ಲ ಸೇವೆ ಮಾಡಬಹುದು ಅಂತ ಯೆಹೋವನ ಹತ್ರ ಕೇಳ್ತಿದ್ದಾಳೆ ಮತ್ತು ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋಕೆ ರೆಡಿ ಇದ್ದೀನಿ ಅಂತ ಬ್ರಾಂಚ್ ಆಫೀಸ್‌ಗೆ ಪತ್ರ ಬರಿತ್ತಿದ್ದಾಳೆ.