ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಸೇವೆಯಲ್ಲಿ ಸಿಕ್ಕಿದ ಆಶೀರ್ವಾದಗಳು ಮತ್ತು ಪಾಠಗಳು

ಸೇವೆಯಲ್ಲಿ ಸಿಕ್ಕಿದ ಆಶೀರ್ವಾದಗಳು ಮತ್ತು ಪಾಠಗಳು

ನಾನು ಚಿಕ್ಕವನಿದ್ದಾಗ ಆಕಾಶದಲ್ಲಿ ಏರೋಪ್ಲೇನ್‌ ಹೋಗೋದು ನೋಡಿದಾಗೆಲ್ಲ ‘ನಾನೂ ಬೇರೆ ದೇಶಕ್ಕೆ ಹೋಗಬೇಕು’ ಅಂತ ಕನಸು ಕಾಣ್ತಿದ್ದೆ. ಅದು ಕನಸಾಗೇ ಉಳಿಯುತ್ತೆ ಅಂತ ಅಂದ್ಕೊಂಡಿದ್ದೆ.

ಎರಡನೇ ಮಹಾಯುದ್ಧದ ಸಮಯದಲ್ಲಿ ನನ್ನ ಅಪ್ಪ ಅಮ್ಮ ಎಸ್ಟೋನಿಯ ಬಿಟ್ಟು ಜರ್ಮನಿಗೆ ಬಂದ್ರು. ನಾನು ಅಲ್ಲೇ ಹುಟ್ಟಿದೆ. ಆಗ ಅಪ್ಪಅಮ್ಮ ಕೆನಡಗೆ ಹೋಗೋಕೆ ತಯಾರಿ ಮಾಡ್ತಿದ್ರು. ನಾವು ಕೆನಡಗೆ ಹೋದ್ವಿ. ಒಟ್ಟಾವಾ ಅನ್ನೋ ಜಾಗದಲ್ಲಿ ಒಂದು ಮನೇಲಿ ಕೋಳಿಗಳು ಇದ್ವು. ನಾವೂ ಅಲ್ಲೇ ಇದ್ವಿ. ನಾವಷ್ಟು ಬಡವರಾಗಿದ್ವಿ. ದಿನಾ ಬೆಳಗ್ಗೆ ತಿನ್ನೋಕೆ ಏನಿಲ್ಲಾಂದ್ರೂ ಮೊಟ್ಟೆಗಳಾದ್ರೂ ಇರ್ತಿತ್ತು.

ಒಂದಿನ ಯೆಹೋವನ ಸಾಕ್ಷಿಗಳು ಅಮ್ಮನ ಹತ್ರ ಬಂದು ಪ್ರಕಟನೆ 21:3, 4ರಲ್ಲಿ ಇರೋದನ್ನ ಓದಿದ್ರು. ಆಗ ಅಮ್ಮಂಗೆ ಎಷ್ಟು ಖುಷಿ ಆಯ್ತು ಅಂದ್ರೆ ಅವರು ಅತ್ತೇ ಬಿಟ್ರು. ತುಂಬ ಬೇಗ ಅವರು ಮತ್ತು ಅಪ್ಪ ಬೈಬಲ್‌ ಕಲಿತು ದೀಕ್ಷಾಸ್ನಾನ ತಗೊಂಡ್ರು.

ನಮ್ಮ ಅಪ್ಪಅಮ್ಮಗೆ ಅಷ್ಟೇನು ಇಂಗ್ಲಿಷ್‌ ಬರ್ಲಿಲ್ಲ ಅಂದ್ರೂ ಯೆಹೋವನ ಸೇವೆ ಮಾಡೋಕೆ ತುಂಬ ಹುರುಪಿತ್ತು. ಆಂಟೇರಿಯೋದಲ್ಲಿ ಸಡ್‌ಬರಿಯಲ್ಲಿರೋ ನಿಕಲ್‌ ಫ್ಯಾಕ್ಟರಿಯಲ್ಲಿ ಅಪ್ಪ ರಾತ್ರಿ ಇಡೀ ಕೆಲಸ ಮಾಡಿ ಬಂದಿದ್ರೂ ಪ್ರತೀ ಶನಿವಾರ ನನ್ನನ್ನ ಮತ್ತು ನನ್ನ ತಂಗಿ ಸಿಲ್ವಿಯಾನ ಸೇವೆಗೆ ಕರ್ಕೊಂಡು ಹೋಗ್ತಿದ್ರು. ಪ್ರತೀ ವಾರ ಕುಟುಂಬವಾಗಿ ನಾವು ಕಾವಲಿನಬುರುಜು ಅಧ್ಯಯನ ಮಾಡ್ತಿದ್ವಿ. ಹೀಗೆ ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಳ್ಳೋಕೆ ಅವರು ನನಗೆ ಸಹಾಯ ಮಾಡಿದ್ರು. 1956ರಲ್ಲಿ ಅಂದ್ರೆ ನನಗೆ 10 ವರ್ಷ ಇದ್ದಾಗ ದೀಕ್ಷಾಸ್ನಾನ ತಗೊಂಡೆ. ನಮ್ಮ ಅಪ್ಪಅಮ್ಮಗೆ ಯೆಹೋವನ ಮೇಲಿರೋ ಪ್ರೀತಿ ನೋಡಿ ನಾನೂ ಜೀವನ ಪೂರ್ತಿ ಯೆಹೋವನ ಸೇವೆ ಮಾಡ್ಬೇಕು ಅಂತ ಅಂದ್ಕೊಂಡೆ.

ಹೈಸ್ಕೂಲ್‌ ಮುಗಿದ ಮೇಲೆ ಯೆಹೋವನ ಸೇವೆ ಮಾಡೋ ಹುರುಪು ಕಮ್ಮಿ ಆಯ್ತು. ನಾನು ಪಯನೀಯರಿಂಗ್‌ ಮಾಡಿದ್ರೆ ಬೇರೆ ದೇಶಕ್ಕೆ ಹೋಗಿ ಸುತ್ತಾಡುವಷ್ಟು ಹಣ ಮಾಡೋಕೆ ಆಗಲ್ಲ, ನನ್ನ ಕನಸು ನನಸಾಗಲ್ಲ ಅಂತ ಅನಿಸ್ತು. ಅದಕ್ಕೆ ನಾನು ರೇಡಿಯೋ ಜಾಕಿಯಾಗಿ ಕೆಲಸಕ್ಕೆ ಸೇರ್ಕೊಂಡೆ. ಈ ಕೆಲಸ ನನಗೆ ತುಂಬ ಇಷ್ಟ ಆಯ್ತು, ರಾತ್ರಿಯೆಲ್ಲಾ ದುಡೀತಿದ್ದೆ. ಇದ್ರಿಂದ ಕೂಟಗಳಿಗೆ ಹೋಗೋಕೆ ಆಗ್ತಾ ಇರಲಿಲ್ಲ. ಯೆಹೋವ ದೇವರನ್ನ ಪ್ರೀತಿಸದೇ ಇರೋ ಜನ್ರ ಸಹವಾಸ ಮಾಡ್ತಿದ್ದೆ. ಆದ್ರೆ ನನ್ನ ಮನಸ್ಸು ಚುಚ್ಚೋಕೆ ಶುರುವಾಯ್ತು, ಆಮೇಲೆ ನನ್ನ ಗುರಿ ಬದಲಾಯಿಸ್ಕೊಂಡೆ.

ನಾನು ಆಂಟೇರಿಯೋದಲ್ಲಿರೋ ಒಷಾವಾಗೆ ಹೋದೆ. ಅಲ್ಲಿ ರೇ ನಾರ್ಮನ್‌, ಅವ್ರ ತಂಗಿ ಲೆಸ್ಲಿ ಮತ್ತು ಇನ್ನಷ್ಟು ಪಯನೀಯರರನ್ನ ಭೇಟಿಯಾದೆ. ಅವ್ರೆಲ್ಲರಿಗೂ ನನ್ನ ಮೇಲೆ ತುಂಬ ಪ್ರೀತಿ ಇತ್ತು. ಅವ್ರೆಲ್ಲ ನನಗೆ ಪಯನೀಯರಿಂಗ್‌ ಮಾಡೋಕೆ ಹೇಳ್ತಿದ್ರು. ಅವ್ರೆಲ್ರೂ ಖುಷಿಯಿಂದ ಇರೋದು ನೋಡಿ ನಾನೂ 1966ರ ಸೆಪ್ಟೆಂಬರ್‌ ತಿಂಗಳಲ್ಲಿ ಪಯನೀಯರಿಂಗ್‌ ಶುರು ಮಾಡಿದೆ. ಎಲ್ಲಾ ಚೆನ್ನಾಗಿ ಹೋಗ್ತಿತ್ತು. ಆಗ ಯೆಹೋವ ದೇವರು ನನ್ನ ಸಂತೋಷಕ್ಕೆ ಇನ್ನೂ ಹೆಚ್ಚು ಸಂತೋಷ ಕೂಡಿಸಿದ್ರು.

ಯೆಹೋವ ಏನಾದ್ರು ಮಾಡೋಕೆ ಹೇಳಿದ್ರೆ ಅದನ್ನ ಮಾಡೋಕೆ ಪ್ರಯತ್ನ ಮಾಡಿ

ನಾನು ಹೈಸ್ಕೂಲಲ್ಲಿ ಇರುವಾಗ್ಲೇ ಕೆನಡದ ಟೊರಾಂಟೊದಲ್ಲಿರೋ ಬೆತೆಲ್‌ಗೆ ಅರ್ಜಿ ಹಾಕಿದ್ದೆ. ಆಮೇಲೆ ಪಯನೀಯರ್‌ ಮಾಡ್ತಾ ಇರುವಾಗ್ಲೇ 4 ವರ್ಷ ಬೆತೆಲಲ್ಲಿ ಸೇವೆ ಮಾಡೋಕೆ ನನ್ನನ್ನ ಕರೆದ್ರು. ಆದ್ರೆ ನನಗೆ ಲೆಸ್ಲಿ ಅಂದ್ರೆ ತುಂಬ ಇಷ್ಟ ಇತ್ತು. ಹಾಗಾಗಿ ಬೆತೆಲ್‌ಗೆ ಹೋದ್ರೆ ಅವಳನ್ನ ನೋಡೋಕೆ ಆಗಲ್ವಲ್ಲಾ ಅಂತ ತುಂಬ ಬೇಜಾರ್‌ ಆಗ್ತಿತ್ತು. ಆದ್ರೂ ಚೆನ್ನಾಗಿ ಪ್ರಾರ್ಥನೆ ಮಾಡಿ ಬೆತೆಲ್‌ಗೆ ಹೋದೆ.

ಒಂದು ಕಡೆ ನಾನು ಬೆತೆಲಲ್ಲಿ ಲಾಂಡ್ರಿಯಲ್ಲಿ ಆಮೇಲೆ ಸೆಕ್ರೆಟರಿಯಾಗಿ ಕೆಲಸ ಮಾಡ್ತಿದ್ದೆ, ಇನ್ನೊಂದು ಕಡೆ ಲೆಸ್ಲಿ ಕ್ವಿಬೆಕ್‌ನ ಘಾಟಿ ನ್ಯುನಲ್ಲಿ ವಿಶೇಷ ಪಯನೀಯರ್‌ ಆಗಿ ಸೇವೆ ಮಾಡ್ತಾ ಇದ್ದಳು. ಈ ವಿಷ್ಯ ನನಗೆ ಗೊತ್ತಿರ್ಲಿಲ್ಲ. ಅವಳು ಏನು ಮಾಡ್ತಿದ್ದಾಳೋ ಏನೋ ಅಂತ ಯೋಚ್ನೆ ಮಾಡ್ತಿದ್ದೆ. ನಾನು ಬೆತೆಲ್‌ಗೆ ಬರಬಾರದಾಗಿತ್ತಾ ಅಂತ ಅನಿಸ್ತಿತ್ತು. ಆದ್ರೆ ಇದ್ದಕ್ಕಿದ್ದ ಹಾಗೆ ಒಂದಿನ ನನ್ನ ಜೀವನದಲ್ಲಿ ಸರ್‌ಪ್ರೈಸ್‌ ಬಂತು. ಲೆಸ್ಲಿ ಅಣ್ಣ ರೇ ಬೆತೆಲ್‌ ನೇಮಕ ಪಡ್ಕೊಂಡು ನನ್ನ ರೂಮ್‌ಮೇಟ್‌ ಆದ್ರು! ಹೀಗೆ ನಾನೂ ಲೆಸ್ಲಿ ಮತ್ತೆ ಫ್ರೆಂಡ್ಸ್‌ ಆದ್ವಿ. ನನ್ನ 4 ವರ್ಷದ ಬೆತೆಲ್‌ ಸೇವೆಯ ಕೊನೇ ದಿನದಲ್ಲಿ ಅಂದ್ರೆ ಫೆಬ್ರವರಿ 27, 1971ರಲ್ಲಿ ನಾವು ಮದ್ವೆ ಆದ್ವಿ.

1975ರಲ್ಲಿ ಸಂಚರಣ ಕೆಲಸ ಶುರುಮಾಡಿದ್ವಿ

ಲೆಸ್ಲಿ ಮತ್ತು ನನಗೆ ಕ್ವಿಬೆಕ್‌ನಲ್ಲಿ ಫ್ರೆಂಚ್‌ ಭಾಷೆ ಮಾತಾಡೋ ಸಭೇಲಿ ನೇಮಕ ಸಿಕ್ತು. ಕೆಲವು ವರ್ಷಗಳಾದ ಮೇಲೆ ನನಗೆ ಸಂಚರಣ ಮೇಲ್ವಿಚಾರಕನಾಗೋ ನೇಮಕ ಸಿಕ್ತು. ಆದ್ರೆ ನನಗೆ ಆಗ ಬರೀ 28 ವರ್ಷ. ನಾನಿನ್ನೂ ತುಂಬ ಚಿಕ್ಕವನು, ಇದನ್ನೆಲ್ಲ ನನ್ನಿಂದ ಮಾಡೋಕೆ ಆಗುತ್ತಾ ಅಂತ ಅನಿಸ್ತಿತ್ತು. ಆದ್ರೆ ಯೆರೆಮೀಯ 1:7, 8ರಲ್ಲಿರೋ ಮಾತು ತುಂಬ ಧೈರ್ಯ ಕೊಡ್ತು. ಲೆಸ್ಲಿಗೆ ಒಂದೆರಡು ಸಲ ಕಾರ್‌ ಆ್ಯಕ್ಸಿಡೆಂಟ್‌ ಆಗಿತ್ತು. ಅಷ್ಟೇ ಅಲ್ಲ, ಅವಳಿಗೆ ರಾತ್ರಿ ಸರಿಯಾಗಿ ನಿದ್ದೆ ಬರ್ತಾ ಇರ್ಲಿಲ್ಲ. ಪರಿಸ್ಥಿತಿ ಹೀಗೆ ಇದ್ದಿದ್ರಿಂದ ನಮ್ಮಿಂದ ಸಂಚರಣ ಕೆಲಸ ಮಾಡೋಕೆ ಆಗುತ್ತಾ ಅಂತ ಚಿಂತೆ ಆಗ್ತಿತ್ತು. ಆದ್ರೆ ಲೆಸ್ಲಿ ನನಗೆ “ಯೆಹೋವನೇ ನಮಗೊಂದು ಕೆಲಸ ಮಾಡೋಕೆ ಕೊಟ್ಟಿದ್ದಾನೆ ಅಂದ್ಮೇಲೆ ಅದನ್ನ ಮಾಡೋಕೆ ಪ್ರಯತ್ನ ಹಾಕಬೇಕಲ್ವಾ” ಅಂತ ಹೇಳಿದಳು. ಆಗ ನಾವು ಆ ನೇಮಕ ಒಪ್ಕೊಂಡ್ವಿ, 17 ವರ್ಷ ಸಂತೋಷವಾಗಿ ಸಂಚರಣ ಕೆಲಸ ಮಾಡಿದ್ವಿ.

ನಾನು ಸಂಚರಣ ಕೆಲಸದಲ್ಲೇ ತುಂಬ ಬಿಜಿ಼ಯಾಗಿ ಇರ್ತಿದ್ದೆ. ಲೆಸ್ಲಿಗೆ ಟೈಮ್‌ ಕೊಡೋಕೇ ಆಗ್ತಿರ್ಲಿಲ್ಲ. ಒಂದಿನ ಸೋಮವಾರ ಬೆಳಬೆಳಗ್ಗೆ ನಮ್ಮ ಮನೆ ಬೆಲ್‌ ರಿಂಗ್‌ ಆಯ್ತು. ಹೊರಗೆ ಹೋಗಿ ನೋಡಿದ್ರೆ ಯಾರೂ ಇರ್ಲಿಲ್ಲ. ಆದ್ರೆ ಒಂದು ಪಿಕ್‌ನಿಕ್‌ ಬಾಸ್ಕೆಟ್‌ ಇತ್ತು. ಅದ್ರಲ್ಲಿ ಹಾಸ್ಕೊಂಡು ಕೂರೋಕೆ ಒಂದು ಬಟ್ಟೆ, ಹಣ್ಣುಗಳು, ಚೀಸ್‌, ಬ್ರೆಡ್‌, ವೈನ್‌ ಬಾಟಲ್‌, ಗ್ಲಾಸ್‌ಗಳು ಜೊತೆಗೆ ಒಂದು ಚೀಟಿನೂ ಇತ್ತು. ಅದ್ರಲ್ಲಿ “ನಿಮ್ಮ ಹೆಂಡತಿನ ಪಿಕ್‌ನಿಕ್‌ಗೆ ಕರ್ಕೊಂಡು ಹೋಗಿ” ಅಂತ ಬರೆದಿತ್ತು. ಅವತ್ತು ವಾತಾವರಣ ತುಂಬ ಚೆನ್ನಾಗಿತ್ತು. ಆದ್ರೆ ನನಗೆ ಟಾಕ್‌ ತಯಾರಿ ಮಾಡಬೇಕಾಗಿದ್ರಿಂದ ಪಿಕ್‌ನಿಕ್‌ ಹೋಗೋಕೆ ಆಗಲ್ಲ ಅಂತ ಲೆಸ್ಲಿಗೆ ಹೇಳಿದೆ. ಅವಳದನ್ನ ಅರ್ಥ ಮಾಡ್ಕೊಂಡಳು. ಆದ್ರೆ ಅವಳಿಗೆ ಸ್ವಲ್ಪ ಬೇಜಾರೂ ಆಯ್ತು. ಟಾಕ್‌ ತಯಾರಿ ಮಾಡೋಕೆ ಕೂತಾಗ ನನ್ನ ಮನಸ್ಸು ಚುಚ್ತಾ ಇತ್ತು. ಆಗ ಎಫೆಸ 5:25, 28ರಲ್ಲಿರೋ ಮಾತು ನೆನಪಿಗೆ ಬಂತು. ಯೆಹೋವ ದೇವರೇ ನನಗೆ ‘ಲೆಸ್ಲಿ ಬಗ್ಗೆ ಯೋಚಿಸು’ ಅಂತ ಹೇಳಿದ ಹಾಗಿತ್ತು. ಹಾಗಾಗಿ ಚೆನ್ನಾಗಿ ಪ್ರಾರ್ಥನೆ ಮಾಡಿದೆ, ಲೆಸ್ಲಿ ಹತ್ರ ಹೋಗಿ “ಬಾ ಹೋಗೋಣ” ಅಂದೆ. ಆಗ ಅವಳ ಮುಖ ನೋಡಬೇಕಿತ್ತು, ಏನು ಖುಷಿ! ನಾವು ನದಿ ಹತ್ರ ಹೋದ್ವಿ. ಆ ಜಾಗ ತುಂಬ ಚೆನ್ನಾಗಿತ್ತು. ಆ ದಿನ ನಾವಿಬ್ರು ಜೊತೆಯಾಗಿ ತುಂಬ ಆನಂದಿಸಿದ್ವಿ. ನಾನು ಟಾಕೂ ತಯಾರಿ ಮಾಡ್ಕೊಂಡೆ. ಹೀಗೆ ಒಂದೊಳ್ಳೆ ಪಾಠ ಕಲಿತೆ.

ನಾವು ಬ್ರಿಟಿಷ್‌ ಕೊಲಂಬಿಯಾದಿಂದ ನ್ಯೂಫೌಂಡ್‌ ಲ್ಯಾಂಡ್‌ ತನಕ ಬೇರೆಬೇರೆ ಊರುಗಳಲ್ಲಿ ಸಂಚರಣ ಕೆಲಸ ಮಾಡಿದ್ವಿ. ಅದು ತುಂಬ ಚೆನ್ನಾಗಿತ್ತು. ಬೇರೆಬೇರೆ ಜಾಗಗಳಿಗೆ ಹೋಗಬೇಕು ಅನ್ನೋ ನನ್ನ ಕನಸು ನನಸಾಯ್ತು. ಗಿಲ್ಯಡ್‌ ಶಾಲೆಗೆ ಹೋಗಬೇಕು ಅಂತ ನನಗೆ ಆಸೆ ಇತ್ತು. ಆದ್ರೆ ಬೇರೆ ದೇಶಕ್ಕೆ ಮಿಷನರಿಯಾಗಿ ಹೋಗೋಕೆ ಮನಸ್ಸಿರಲಿಲ್ಲ. ಮಿಷನರಿ ಆಗೋರೆಲ್ಲ ತುಂಬ ಸ್ಪೆಷಲ್‌ ಜನ್ರು, ಆ ಕೆಲಸ ಮಾಡೋಕೆ ನನಗೆ ಯೋಗ್ಯತೆ ಇಲ್ಲ ಅಂತ ಅನಿಸ್ತು. ಅಷ್ಟೇ ಅಲ್ಲ, ಆಫ್ರಿಕಾದ ದೇಶಗಳಿಗೆ ನನ್ನನ್ನ ಕಳಿಸಿಬಿಟ್ರೆ ಅಂತ ಭಯ ಆಗ್ತಿತ್ತು. ಯಾಕಂದ್ರೆ ಅಲ್ಲೆಲ್ಲಾ ಯಾವಾಗ್ಲೂ ಯುದ್ಧ ಆಗ್ತಿತ್ತು, ರೋಗಗಳು ಹರಡ್ತಾ ಇತ್ತು. ನಾನು ಈಗ ಇರೋ ಕಡೆನೇ ಖುಷಿಯಾಗಿದ್ದೆ.

ಎಸ್ಟೋನಿಯ, ಲ್ಯಾಟ್ವಿಯ, ಲಿಥುವೇನಿಯದಲ್ಲಿ

ಲ್ಯಾಟ್ವಿಯ, ಲಿಥುವೇನಿಯ ಮತ್ತು ಎಸ್ಟೋನಿಯದಲ್ಲಿ ಪ್ರಯಾಣ

ಮುಂಚೆ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಕೆಲವು ದೇಶಗಳಲ್ಲಿ 1992ರಿಂದ ಸಾರ್ವಜನಿಕವಾಗಿ ಸಿಹಿಸುದ್ದಿ ಸಾರೋ ಕೆಲಸ ಆರಂಭ ಆಯ್ತು. ಆಗ ಎಸ್ಟೋನಿಯಗೆ ಮಿಷನರಿಯಾಗಿ ಹೋಗೋಕೆ ಆಗುತ್ತಾ ಅಂತ ನಮಗೆ ಕೇಳಿದ್ರು. ಇದನ್ನ ಕೇಳಿಸ್ಕೊಂಡಾಗ ಏನು ಹೇಳಬೇಕಂತನೇ ಗೊತ್ತಾಗ್ಲಿಲ್ಲ. ಚೆನ್ನಾಗಿ ಪ್ರಾರ್ಥನೆ ಮಾಡಿದ್ವಿ. ‘ಯೆಹೋವ ದೇವರೇ ನಮಗೊಂದು ಕೆಲಸ ಕೊಟ್ಟಿದ್ದಾನೆ ಅಂದ್ಮೇಲೆ ಅದನ್ನ ಮಾಡೋಕೆ ನಾವು ಪ್ರಯತ್ನ ಹಾಕಬೇಕಲ್ವಾ’ ಅಂತ ಯೋಚಿಸಿದ್ವಿ. ಅಲ್ಲಿಗೆ ಹೋಗೋಕೆ ಒಪ್ಕೊಂಡ್ವಿ. ‘ಆಫ್ರಿಕಾಗಂತೂ ನಾವು ಹೋಗ್ತಿಲ್ವಲ್ಲಾ’ ಅನ್ನೋ ಸಮಾಧಾನ ಇತ್ತು.

ಅಲ್ಲಿಗೆ ಹೋದ ತಕ್ಷಣ ನಾವು ಎಸ್ಟೋನಿಯನ್‌ ಭಾಷೆ ಕಲಿಯೋಕೆ ಶುರು ಮಾಡಿದ್ವಿ. ಕೆಲವು ತಿಂಗಳಾದ್ಮೇಲೆ ಸಂಚರಣ ಕೆಲಸ ಮಾಡೋಕೆ ನಮಗೆ ಹೇಳಿದ್ರು. ನಾವು ಲ್ಯಾಟ್ವಿಯ, ಲಿಥುವೇನಿಯ ಮತ್ತು ರಷ್ಯಾದ ಕಲಿನಿನ್‌ಗ್ರಾಡ್‌ನಲ್ಲಿರೋ 46 ಸಭೆ ಮತ್ತು ಗುಂಪುಗಳನ್ನ ಭೇಟಿ ಮಾಡಬೇಕಿತ್ತು. ಜೊತೆಗೆ ಲ್ಯಾಟ್ವಿಯನ್‌, ಲಿಥುವೇನಿಯನ್‌ ಮತ್ತು ರಷ್ಯನ್‌ ಭಾಷೆ ಕೂಡ ಕಲಿಬೇಕಿತ್ತು. ಇದು ಅಷ್ಟು ಸುಲಭ ಆಗಿರ್ಲಿಲ್ಲ. ಆದ್ರೆ ನಾವು ಪ್ರಯತ್ನ ಹಾಕ್ತಾ ಇರೋದನ್ನ ಸಹೋದರ ಸಹೋದರಿಯರು ನೋಡಿದಾಗ ತುಂಬ ಖುಷಿಪಟ್ರು, ನಮಗೆ ಸಹಾಯನೂ ಮಾಡಿದ್ರು. 1999ರಲ್ಲಿ ಎಸ್ಟೋನಿಯದಲ್ಲಿ ಬ್ರಾಂಚ್‌ ಆಫೀಸ್‌ ತೆರೀತು. ಆಗ ಟಾಮಸ್‌ ಎಡುರ್‌, ಲೆಂಬಿಟ್‌ ರೆಲಿ, ಮತ್ತು ಟಾಮಿ ಕೌಕೊ ಅನ್ನೋ ಸಹೋದರರ ಜೊತೆ ಬ್ರಾಂಚ್‌ ಕಮಿಟಿಯಲ್ಲಿ ಸೇವೆ ಮಾಡೋ ಅವಕಾಶ ಸಿಕ್ತು.

ಎಡಗಡೆ: ಲಿಥುವೇನಿಯದ ಅಧಿವೇಶನದಲ್ಲಿ ಭಾಷಣ ಕೊಡ್ತಿರುವಾಗ

ಬಲಗಡೆ: ಎಸ್ಟೋನಿಯದಲ್ಲಿ 1999ರಲ್ಲಿ ಬ್ರಾಂಚ್‌ ಕಮಿಟಿ ಶುರು ಆದಾಗ

ಸೈಬೀರಿಯಾಗೆ ಗಡಿಪಾರಾಗಿದ್ದ ಎಷ್ಟೋ ಸಹೋದರ ಸಹೋದರಿಯರ ಅನುಭವ ಕೇಳಿಸ್ಕೊಂಡ್ವಿ. ಅವರು ಜೈಲಲ್ಲಿ ತುಂಬ ಹಿಂಸೆ ಅನುಭವಿಸಿದ್ರೂ ಕುಟುಂಬದಿಂದ ದೂರ ಇದ್ರೂ ಬೇಜಾರ್‌ ಮಾಡ್ಕೊಳ್ಳಲಿಲ್ಲ. ಸಿಹಿಸುದ್ದಿ ಸಾರೋಕೆ ಹುರುಪನ್ನ ಕಳ್ಕೊಂಡಿರ್ಲಿಲ್ಲ. ಇದ್ರಿಂದ ನಮಗೂ ಎಷ್ಟೇ ಕಷ್ಟ ಬಂದ್ರೂ ಸಹಿಸ್ಕೊಂಡು ಖುಷಿಯಾಗಿ ಇರೋಕೆ ಆಗುತ್ತೆ ಅಂತ ಕಲಿತ್ವಿ.

ನಾವು ತುಂಬ ವರ್ಷ ದೇವರ ಸೇವೇಲಿ ಬಿಜಿ಼ಯಾಗಿದ್ವಿ. ಜಾಸ್ತಿ ರೆಸ್ಟ್‌ ತಗೊಳ್ತಾ ಇರ್ಲಿಲ್ಲ. ಲೆಸ್ಲಿಗೆ ಆಗಾಗ ತುಂಬ ಸುಸ್ತಾಗ್ತಾ ಇತ್ತು. ಅವಳಿಗೆ ಫೈಬ್ರೊಮ್ಯಾಲ್ಜಿಯ ಅನ್ನೋ ಕಾಯಿಲೆ ಇದೆ ಅಂತ ಆಮೇಲೆ ಗೊತ್ತಾಯ್ತು. ನಾವು ಕೆನಡಗೆ ವಾಪಸ್‌ ಹೋಗೋಣ ಅಂತ ಅಂದ್ಕೊಂಡ್ವಿ. ಆದ್ರೆ ಆಗ ಅಮೆರಿಕಾದ ನ್ಯೂಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿರೋ ಬ್ರಾಂಚ್‌ ಶಾಲೆಗೆ ಹಾಜರಾಗೋಕೆ ಆಮಂತ್ರಣ ಸಿಕ್ತು. ನಾವಲ್ಲಿಗೆ ಹೋಗೋಕೆ ಆಗಲ್ಲ ಅಂತ ಅಂದ್ಕೊಂಡ್ವಿ. ಆದ್ರೆ ಯೆಹೋವ ದೇವರಿಗೆ ತುಂಬ ಪ್ರಾರ್ಥನೆ ಮಾಡಿದ ಮೇಲೆ ಹೋದ್ವಿ. ಯೆಹೋವ ನಮ್ಮನ್ನ ಆಶೀರ್ವದಿಸಿದನು. ಆ ಶಾಲೆಯಲ್ಲಿ ತರಬೇತಿ ಪಡೀತಾ ಇರುವಾಗ್ಲೇ ಲೆಸ್ಲಿಗೆ ಒಳ್ಳೇ ಚಿಕಿತ್ಸೆ ಸಿಕ್ತು. ಇದ್ರಿಂದ ನಾವು ಮುಂಚೆ ತರ ಮತ್ತೆ ಸೇವೆ ಶುರು ಮಾಡಿದ್ವಿ.

ಆಫ್ರಿಕಾದಲ್ಲಿ

2008ರಲ್ಲಿ ನಾನು ಎಸ್ಟೋನಿಯದಲ್ಲಿ ಇದ್ದಾಗ ಒಂದು ಸಂಜೆ ಮುಖ್ಯ ಕಾರ್ಯಾಲಯದಿಂದ ಒಂದು ಕಾಲ್‌ ಬಂತು. ಸಹೋದರರು ನನಗೆ ನೀವು ಆಫ್ರಿಕಾದಲ್ಲಿರೋ ಕಾಂಗೋದಲ್ಲಿ ಸೇವೆ ಮಾಡೋಕೆ ಇಷ್ಟ ಪಡ್ತೀರಾ ಅಂತ ಕೇಳಿದ್ರು. ಆಗ ನನಗೆ ತುಂಬ ಶಾಕ್‌ ಆಯ್ತು. ಅದ್ರಲ್ಲೂ ನಾವು ಹೋಗ್ತೀವಾ ಇಲ್ವಾ ಅಂತ ಮಾರನೇ ದಿನಾನೇ ಹೇಳಬೇಕಿತ್ತು. ಇದ್ರ ಬಗ್ಗೆ ಲೆಸ್ಲಿಗೆ ಹೇಳಿದ್ರೆ ಅವಳು ರಾತ್ರಿಯೆಲ್ಲಾ ಕೂತ್ಕೊಂಡು ಯೋಚ್ನೆ ಮಾಡ್ತಾಳೆ ಅಂತ ಅವಳಿಗೆ ಹೇಳೋಕೆ ಹೋಗ್ಲಿಲ್ಲ. ಆದ್ರೆ ನಿಜ ಹೇಳಬೇಕಂದ್ರೆ, ನಾನೇ ರಾತ್ರಿಯೆಲ್ಲಾ ತಲೆ ಕೆಡಿಸ್ಕೊಂಡು ಯೆಹೋವ ದೇವರಿಗೆ ಪ್ರಾರ್ಥನೆ ಮಾಡ್ತಿದ್ದೆ. ಆಫ್ರಿಕಾಗೆ ಹೋಗೋಕೆ ನನಗೆ ಯಾಕೆ ಚಿಂತೆ ಆಗ್ತಿದೆ ಅಂತ ಹೇಳ್ಕೊಳ್ತಿದ್ದೆ.

ಮಾರನೇ ದಿನ ನಾನು ಈ ವಿಷ್ಯನ ಲೆಸ್ಲಿಗೆ ತಿಳಿಸಿದೆ. ಆಗ ನಾವು “ಯೆಹೋವ ದೇವರೇ ನಮ್ಮನ್ನ ಆಫ್ರಿಕಾಗೆ ಕರೀತಾ ಇದ್ದಾರೆ, ನಾವು ಹೋಗೋಣ. ಅಲ್ಲಿಗೆ ಹೋಗದೆನೇ ನಾವು ನಮ್ಮಿಂದ ಮಾಡಕ್ಕಾಗಲ್ಲ ಅಂತ ಹೇಳೋದು ಹೇಗೆ” ಅಂತ ಅಂದ್ಕೊಂಡ್ವಿ. ಹಾಗಾಗಿ ಕಾಂಗೋದ ಕಿನ್ಶಾಸಾಗೆ ನಾವು ಹೊರಟ್ವಿ. 16 ವರ್ಷ ನಾವು ಎಸ್ಟೋನಿಯದಲ್ಲಿ ಮಾಡಿದ ಸೇವೆನ ಮಿಸ್‌ ಮಾಡ್ಕೊಂಡ್ವಿ. ಆದ್ರೂ ಕಾಂಗೋದಲ್ಲಿ ಇರೋ ಬ್ರಾಂಚ್‌ ಆಫೀಸ್‌ ತುಂಬ ಚೆನ್ನಾಗಿತ್ತು. ಅದ್ರ ಸುತ್ತ ಸುಂದರವಾದ ತೋಟ ಇತ್ತು. ತುಂಬ ಖುಷಿಯಾಯ್ತು. ನಾವು ರೂಮ್‌ಗೆ ಹೋದ ತಕ್ಷಣನೇ ಲೆಸ್ಲಿ ಕೆನಡ ಬಿಡುವಾಗ ಇಟ್ಕೊಂಡಿದ್ದ ಒಂದು ಕಾರ್ಡ್‌ನ ಕಾಣಿಸೋ ತರ ಇಟ್ಟಳು. ಅದ್ರಲ್ಲಿ “ನಿನ್ನನ್ನ ಎಲ್ಲಿ ನೆಟ್ಟರೂ ಅಲ್ಲಿ ಅರಳು” ಅಂತ ಬರೆದಿತ್ತು. ಅಲ್ಲಿನ ಸಹೋದರರನ್ನ ಭೇಟಿ ಮಾಡಿದ ಮೇಲೆ, ಬೈಬಲ್‌ ಸ್ಟಡಿಗಳನ್ನ ಶುರು ಮಾಡಿದ ಮೇಲೆ ನಮ್ಮ ಮಿಷನರಿ ಸೇವೆನ ತುಂಬ ಎಂಜಾಯ್‌ ಮಾಡಿದ್ವಿ. ಸ್ವಲ್ಪ ಸಮಯ ಆದ್ಮೇಲೆ ಆಫ್ರಿಕಾದಲ್ಲಿರೋ ಇನ್ನೂ ಬೇರೆ 13 ದೇಶದಲ್ಲಿರೋ ಬ್ರಾಂಚ್‌ ಆಫೀಸ್‌ಗಳನ್ನ ಭೇಟಿ ಮಾಡೋ ಸುಯೋಗ ನಮಗೆ ಸಿಕ್ತು. ಇದ್ರಿಂದ ಬೇರೆ ಬೇರೆ ಜನ್ರ ಹಿನ್ನೆಲೆ, ಸಂಸ್ಕೃತಿ ಮತ್ತು ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡೋಕಾಯ್ತು. ನನಗೆ ಆಫ್ರಿಕಾಗೆ ಹೋಗೋಕೆ ಮುಂಚೆ ಇದ್ದ ಭಯ ಹೊರಟುಹೋಯ್ತು. ಆಫ್ರಿಕಾದಲ್ಲಿ ಸೇವೆ ಮಾಡೋಕೆ ಅವಕಾಶ ಕೊಟ್ಟಿದ್ದಕ್ಕೆ ಯೆಹೋವ ದೇವರಿಗೆ ನಾವು ತುಂಬ ಥ್ಯಾಂಕ್ಸ್‌ ಹೇಳ್ತೀವಿ.

ನಾವು ಕಾಂಗೋದಲ್ಲಿ ಹೊಸ ತರದ ಆಹಾರನ ತಿನ್ನಬೇಕಾಯ್ತು. ಅಲ್ಲಿರೋರು ಹುಳ-ಹುಪ್ಪಡಿನೆಲ್ಲ ತಿಂತಿದ್ರು. ಅಯ್ಯೋ ಇದನ್ನೆಲ್ಲ ನಮ್ಮಿಂದ ತಿನ್ನೋಕಾಗಲ್ಲ ಅಂತ ಅಂದ್ಕೊಳ್ತಿದ್ವಿ. ಆದ್ರೆ ಅಲ್ಲಿರೋ ಸಹೋದರರೆಲ್ಲ ಖುಷಿಯಾಗಿ ಅದನ್ನ ತಿಂತಾ ಇದ್ದಿದ್ದನ್ನ ನೋಡಿ ನಾವೂ ತಿಂದ್ವಿ. ನಮಗೆ ತುಂಬ ಇಷ್ಟ ಆಯ್ತು.

ನಾವು ಆಫ್ರಿಕಾದ ಪೂರ್ವ ದೇಶಗಳಿಗೆಲ್ಲ ಹೋಗ್ತಿದ್ವಿ. ಅಲ್ಲಿರೋ ಸಹೋದರರನ್ನ ಪ್ರೋತ್ಸಾಹಿಸ್ತಿದ್ವಿ. ಅವ್ರಿಗೆ ಬೇಕಾಗಿರೋದನ್ನ ತಂದ್ಕೊಡ್ತಿದ್ವಿ. ಯಾಕಂದ್ರೆ ಅಲ್ಲಿ ಗೆರಿಲ್ಲಾ ಗುಂಪಿನ ಜನ್ರು ಅಲ್ಲಿರೋ ಹಳ್ಳಿಗಳಿಗೆ ನುಗ್ಗಿ ಹೆಂಗಸ್ರಿಗೆ ಮತ್ತು ಮಕ್ಕಳಿಗೆ ತುಂಬ ತೊಂದ್ರೆ ಕೊಡ್ತಿದ್ರು. ಅಲ್ಲಿರೋ ಸಹೋದರರು ಕೂಡ ತುಂಬ ಬಡವರಾಗಿದ್ರು. ನಮ್ಮ ಜೀವ ಹೋದ್ರೂ ಯೆಹೋವ ಮತ್ತೆ ನಮಗೆ ಜೀವ ಕೊಡ್ತಾನೆ ಅಂತ ನಂಬಿದ್ರು. ಆತನ ಮೇಲೆ ಅವ್ರಿಗೆ ತುಂಬ ಪ್ರೀತಿ ಇತ್ತು. ಆತನ ಸಂಘಟನೆಗೆ ತುಂಬ ನಿಯತ್ತಾಗಿದ್ರು. ಇದೆಲ್ಲ ನನ್ನ ಮನಸ್ಸು ಮುಟ್ತು. ಇವ್ರನ್ನ ನೋಡಿ ನಮಗೆ ಯೆಹೋವನ ಸೇವೆನ ಜಾಸ್ತಿ ಮಾಡಬೇಕು ಅಂತ ಅನಿಸ್ತು. ಆತನ ಮೇಲಿರೋ ನಂಬಿಕೆ ಇನ್ನೂ ಜಾಸ್ತಿ ಆಯ್ತು. ಕೆಲವು ಸಹೋದರರು ಮನೆ ಕಳ್ಕೊಂಡಿದ್ರು. ಅವ್ರ ಹೊಲದಲ್ಲಿದ್ದ ಬೆಳೆಯೆಲ್ಲ ನಾಶ ಆಗೋಗಿತ್ತು. ಇದನ್ನ ನೋಡಿದಾಗ, ‘ವಸ್ತುಗಳು ಶಾಶ್ವತ ಅಲ್ಲ, ಇವತ್ತಿದ್ದು ನಾಳೆ ಹೋಗುತ್ತೆ. ಆದ್ರೆ ಯೆಹೋವನ ಜೊತೆ ಇರೋ ನಮ್ಮ ಸಂಬಂಧ ಯಾವಾಗ್ಲೂ ಇರುತ್ತೆ’ ಅನ್ನೋದು ನಮ್ಮ ನೆನಪಿಗೆ ಬಂತು. ಇಷ್ಟೆಲ್ಲಾ ಕಷ್ಟ ಅನುಭವಿಸ್ತಿದ್ರೂ ಅಲ್ಲಿನ ಸಹೋದರರು ‘ನಮಗೆ ಅದಿಲ್ಲ, ಇದಿಲ್ಲ’ ಅಂತ ಕೊರಗ್ತಾ ಇರಲಿಲ್ಲ. ಇವ್ರನ್ನ ನೋಡಿ ನಮಗೆ ತುಂಬ ಬಲ ಸಿಕ್ತು. ಏನೇ ಕಷ್ಟ ಬಂದ್ರೂ ಆರೋಗ್ಯ ಸಮಸ್ಯೆ ಬಂದ್ರೂ ಧೈರ್ಯವಾಗಿ ತಾಳ್ಕೊಬಹುದು ಅಂತ ಗೊತ್ತಾಯ್ತು.

ಎಡಗಡೆ: ಒಂದು ನಿರಾಶ್ರಿತರ ಗುಂಪಿಗೆ ಭಾಷಣ ಕೊಡ್ತಿರೋದು

ಬಲಗಡೆ: ಕಾಂಗೋದಲ್ಲಿರೋ ಡುಂಗು ಪ್ರದೇಶದ ಜನ್ರಿಗೆ ಬೇಕಾದ ವಸ್ತುಗಳನ್ನ, ಔಷಧಿಗಳನ್ನ ಸಾಗಿಸ್ತಿರೋದು

ಏಷ್ಯಾದಲ್ಲಿ

ಇದಾದ್ಮೇಲೆ ನಮಗೆ ಇನ್ನೂ ಒಂದ್‌ ಸರ್‌ಪ್ರೈಸ್‌ ಕಾದಿತ್ತು. ಸಂಘಟನೆ ನಮಗೆ ಹಾಂಗ್‌ ಕಾಂಗ್‌ ಬ್ರಾಂಚ್‌ಗೆ ಹೋಗಿ ಸೇವೆ ಮಾಡೋಕೆ ಹೇಳ್ತು. ನಾವು ಏಷ್ಯಾಗೆ ಹೋಗ್ತೀವಿ ಅಂತ ಕನಸು ಮನಸ್ಸಲ್ಲೂ ಅಂದ್ಕೊಂಡಿರ್ಲಿಲ್ಲ. ಆದ್ರೆ ಇಲ್ಲಿ ತನಕ ನಮಗೆ ಎಲ್ಲಾ ನೇಮಕಗಳನ್ನೂ ಮಾಡೋಕೆ ಯೆಹೋವ ತುಂಬ ಸಹಾಯ ಮಾಡಿದ್ದಾನೆ. ಇನ್ಮುಂದೆನೂ ಮಾಡ್ತಾನೆ ಅನ್ನೋ ನಂಬಿಕೆ ನಮಗಿತ್ತು. ಹಾಗಾಗಿ ಹಾಂಗ್‌ ಕಾಂಗ್‌ಗೆ ಹೋಗೋಕೆ ನಾವು ಒಪ್ಕೊಂಡ್ವಿ. ಆಫ್ರಿಕಾದಲ್ಲಿರೋ ನಮ್ಮ ಸ್ನೇಹಿತರನ್ನೆಲ್ಲಾ ಬಿಟ್ಟುಹೋಗೋಕೆ ನಮಗೆ ತುಂಬ ಕಷ್ಟ ಆಯ್ತು. ಅಳ್ತಾ ಅವ್ರಿಗೆ 2013ರಲ್ಲಿ ಬಾಯ್‌ ಹೇಳಿದ್ವಿ.

ಬೇರೆ ದೇಶಗಳಿಗಿಂತ ಹಾಂಗ್‌ ಕಾಂಗ್‌ ತುಂಬ ಭಿನ್ನವಾಗಿತ್ತು. ಯಾಕಂದ್ರೆ ಅಲ್ಲಿ ತುಂಬ ಜನ ಇದ್ರು. ಬೇರೆ ಬೇರೆ ದೇಶದಿಂದ ಬಂದವರಾಗಿದ್ರು. ಅಷ್ಟೇ ಅಲ್ಲ, ಅಲ್ಲಿ ಚೈನೀಸ್‌ ಭಾಷೆ ಮಾತಾಡ್ತಾ ಇದ್ರು. ಅದು ನಮಗೆ ಕಷ್ಟ ಅನಿಸ್ತು. ಆದ್ರೂ ಅಲ್ಲಿರೋ ಸಹೋದರರು ನಮಗೆ ಪ್ರೀತಿಯಿಂದ ಸಹಾಯ ಮಾಡಿದ್ರು. ಅಲ್ಲಿರೋ ಊಟ ನಮಗೆ ತುಂಬ ಇಷ್ಟ ಆಯ್ತು. ಅಲ್ಲಿ ನಮ್ಮ ಸಂಘಟನೆ ಕೆಲಸ ಜಾಸ್ತಿ ನಡೀತಿತ್ತು. ಹಾಗಾಗಿ ಕೆಲಸ ಮಾಡೋಕೆ ಜಾಗ ಬೇಕಿತ್ತು. ಆದ್ರೆ ಅದನ್ನ ಖರೀದಿ ಮಾಡೋಕೆ ತುಂಬ ದುಡ್ಡು ಖರ್ಚಾಗ್ತಿತ್ತು. ಅದ್ಕೆ ಆಡಳಿತ ಮಂಡಲಿ ನಮ್ಮ ಬ್ರಾಂಚ್‌ಗೆ ಸಂಬಂಧ ಪಟ್ಟ ಕೆಲವು ಬಿಲ್ಡಿಂಗ್‌ಗಳನ್ನ ಮತ್ತು ಜಾಗಗಳನ್ನ ಮಾರೋಕೆ ನಿರ್ಧಾರ ಮಾಡ್ತು. ಇದಾಗಿ ಸ್ವಲ್ಪದರಲ್ಲೇ ಅಂದ್ರೆ 2015ರಲ್ಲಿ ನಮ್ಮನ್ನ ದಕ್ಷಿಣ ಕೊರಿಯಾಗೆ ಹೋಗೋಕೆ ಹೇಳಿದ್ರು. ಅಲ್ಲಿಗೆ ಹೋದ್ವಿ, ಆದ್ರೆ ಅಲ್ಲಿನ ಭಾಷೆ ಕಲಿಯೋಕೆ ನಮಗೆ ತುಂಬ ಕಷ್ಟ ಆಗ್ತಿತ್ತು. ಆ ಭಾಷೆ ನಮಗೆ ಅಷ್ಟು ಚೆನ್ನಾಗಿ ಬರದೇ ಇದ್ರೂ ಅಲ್ಲಿನ ಸಹೋದರರು ‘ಇಲ್ಲ, ನೀವು ಚೆನ್ನಾಗೇ ಮಾತಾಡ್ತಾ ಇದ್ದೀರ, ಬೇಗ ಕಲಿತುಬಿಡ್ತೀರ’ ಅಂತ ಪ್ರೋತ್ಸಾಹಿಸ್ತಿದ್ರು.

ಎಡಗಡೆ: ಹಾಂಗ್‌ ಕಾಂಗ್‌ನಲ್ಲಿ

ಬಲಗಡೆ: ಕೊರಿಯಾ ಬ್ರಾಂಚ್‌

ನಾವು ಕಲಿತ ಪಾಠಗಳು

ಹೊಸ ಫ್ರೆಂಡ್ಸ್‌ನ ಮಾಡ್ಕೊಳ್ಳೋದು ಸ್ವಲ್ಪ ಕಷ್ಟಾನೇ. ಆದ್ರೆ ನಾವೇ ಮುಂದೆ ಹೋಗಿ ಅವ್ರನ್ನ ಮನೆಗೆ ಕರೆದಾಗ, ಅತಿಥಿಸತ್ಕಾರ ತೋರಿಸಿದಾಗ ಅವ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ. ಬೇಗ ಫ್ರೆಂಡ್ಸ್‌ ಆಗೋಕೆ ಆಗುತ್ತೆ ಅಂತ ನಮಗೆ ಗೊತ್ತಾಯ್ತು. ಅಷ್ಟೇ ಅಲ್ಲ, ಅಲ್ಲಿರೋ ಸಹೋದರರು ಕೂಡ ನಮ್ಮ ತರಾನೇ ಅಂತ ಅರ್ಥ ಆಯ್ತು. ಯೆಹೋವ ದೇವರು ನಮ್ಮೆಲ್ರನ್ನೂ ಒಬ್ರಿಗೊಬ್ರು ಪ್ರೀತಿಸೋ ಹಾಗೆ, ಮನಸ್ಸು ಬಿಚ್ಚಿ ಮಾತಾಡೋ ಹಾಗೆ ಸೃಷ್ಟಿ ಮಾಡಿದ್ದಾನೆ.—2 ಕೊರಿಂ. 6:11.

ಜನ್ರನ್ನ ಯೆಹೋವ ಹೇಗೆ ನೋಡ್ತಾನೋ ನಾವೂ ಹಾಗೇ ನೋಡಬೇಕು ಅಂತ ಕಲಿತ್ವಿ. ಅಷ್ಟೇ ಅಲ್ಲ, ಯೆಹೋವ ನಮಗೆ ಹೇಗೆಲ್ಲಾ ಪ್ರೀತಿ ತೋರಿಸ್ತಿದ್ದಾನೆ, ನಮ್ಮನ್ನ ಹೇಗೆ ಕೈಹಿಡಿದು ನಡಿಸ್ತಿದ್ದಾನೆ ಅನ್ನೋದನ್ನ ಯೋಚಿಸಬೇಕು ಅಂತ ಅರ್ಥ ಮಾಡ್ಕೊಂಡ್ವಿ. ನಮಗೆ ಕೆಲವೊಮ್ಮೆ ತುಂಬ ಬೇಜಾರಾದಾಗ, ನಮ್ಮನ್ನ ಸಹೋದರ ಸಹೋದರಿಯರು ಇಷ್ಟಪಡ್ತಾರಾ ಇಲ್ವಾ ಅಂತ ಅನಿಸಿದಾಗ ನಮಗೆ ಬಂದಿರೋ ಕಾರ್ಡ್‌ಗಳನ್ನ ಮತ್ತು ಪತ್ರಗಳನ್ನ ಪದೇಪದೇ ಓದ್ತಾ ಇದ್ವಿ. ಯೆಹೋವ ದೇವರು ನಮ್ಮ ಪ್ರಾರ್ಥನೆಗಳಿಗೆ ಹೇಗೆಲ್ಲಾ ಉತ್ರ ಕೊಟ್ಟಿದ್ದಾನೆ ಅನ್ನೋದನ್ನ ನೆನಸ್ಕೊಂಡಾಗ ಆತನು ನಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಆತನ ಸೇವೆನ ಮಾಡ್ಕೊಂಡು ಹೋಗ್ತಾ ಇರೋಕೆ ಶಕ್ತಿ ಸಿಗುತ್ತೆ.

ಇಲ್ಲಿ ತನಕ ನಾನೂ ಲೆಸ್ಲಿ ತುಂಬ ವಿಷ್ಯಗಳನ್ನ ಕಲ್ತಿದ್ದೀವಿ. ಎಷ್ಟೇ ಬಿಜಿ಼ ಇದ್ರೂ ನಾವು ಒಬ್ರಿಗೊಬ್ರು ಸಮಯ ಕೊಡಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡ್ವಿ. ಕೆಲವೊಮ್ಮೆ ನಮ್ಮಿಂದ ಚಿಕ್ಕಪುಟ್ಟ ತಪ್ಪುಗಳಾದಾಗ ಅದ್ರಲ್ಲೂ ಭಾಷೆ ಕಲೀವಾಗ ನಾವು ಮಾಡೋ ತಪ್ಪುಗಳನ್ನ ನೆನಸ್ಕೊಂಡು ಬೇಜಾರ್‌ ಮಾಡ್ಕೊಬಾರದು, ನಗುನಗುತ್ತಾ ಇರಬೇಕು ಅಂತ ಕಲಿತ್ವಿ. ಅಷ್ಟೇ ಅಲ್ಲ, ಪ್ರತೀ ರಾತ್ರಿ ಮಲಗೋ ಮುಂಚೆ ಆ ದಿನ ಖುಷಿಯಾಗಿರೋಕೆ ಯೆಹೋವ ನಮಗೆ ಹೇಗೆ ಸಹಾಯ ಮಾಡಿದ್ದಾನೆ ಅನ್ನೋದನ್ನ ಯೋಚಿಸಿ ಆತನಿಗೆ ಥ್ಯಾಂಕ್ಸ್‌ ಹೇಳ್ತೀವಿ.

ನಿಜ ಹೇಳಬೇಕಂದ್ರೆ, ನಾನೊಬ್ಬ ಮಿಷನರಿ ಆಗ್ತೀನಿ, ಬೇರೆ ದೇಶಕ್ಕೆ ಹೋಗ್ತೀನಿ ಅಂತ ಅಂದ್ಕೊಂಡೇ ಇರ್ಲಿಲ್ಲ. ಆದ್ರೆ ಯೆಹೋವ ದೇವರ ಸಹಾಯ ಇದ್ರೆ ನಾವು ಎಲ್ಲಾನೂ ಮಾಡಬಹುದು ಅಂತ ಅರ್ಥ ಮಾಡ್ಕೊಂಡೆ. “ಯೆಹೋವನೇ, ನಾನು ಆಶ್ಚರ್ಯ ಪಡೋ ತರ ಮಾಡಿದ್ದೀಯ” ಅಂತ ಪ್ರವಾದಿ ಯೆರೆಮೀಯ ಹೇಳಿದ ಮಾತು ನೆನಪಾಗ್ತಿದೆ. (ಯೆರೆ. 20:7) ಯೆಹೋವ ದೇವರು ನನ್ನ ಜೀವನದಲ್ಲಿ ತುಂಬ ಸರ್‌ಪ್ರೈಸ್‌ಗಳನ್ನ ಕೊಟ್ಟಿದ್ದಾನೆ, ಆಶೀರ್ವಾದಗಳನ್ನ ಕೊಟ್ಟಿದ್ದಾನೆ. ನಾನು ಚಿಕ್ಕವಯಸ್ಸಲ್ಲಿ ಕಂಡ ಕನಸ್ಸನ್ನ ನನಸು ಮಾಡಿದ್ದಾನೆ. ನಾನು ಅಂದ್ಕೊಂಡಿದ್ದಕ್ಕಿಂತ ತುಂಬ ದೇಶಗಳಿಗೆ ಹೋಗಿದ್ದೀನಿ. 5 ಖಂಡಗಳಲ್ಲಿರೋ ಬ್ರಾಂಚ್‌ ಆಫೀಸ್‌ಗಳನ್ನ ಭೇಟಿ ಮಾಡಿದ್ದೀನಿ. ಈ ಎಲ್ಲಾ ನೇಮಕಗಳನ್ನ ಮಾಡೋಕೆ ಲೆಸ್ಲಿ ನನಗೆ ಮನಸಾರೆ ಸಹಕಾರ ಕೊಟ್ಟಿದ್ದಾಳೆ. ಅದನ್ನ ನಾನು ಯಾವತ್ತೂ ಮರಿಯೋಕಾಗಲ್ಲ. ಅವಳಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀನಿ.

ನಮಗೆ ಯೆಹೋವ ದೇವರ ಮೇಲೆ ಪ್ರೀತಿ ಇರೋದ್ರಿಂದನೇ ಆತನ ಸೇವೆ ಮಾಡ್ತಾ ಇದ್ದೀವಿ ಅನ್ನೋದನ್ನ ನಾವು ಆಗಾಗ ನೆನಪಿಸ್ಕೊಳ್ತಾ ಇರ್ತೀವಿ. ಯೆಹೋವ ಈಗ ನಮಗೆ ಕೊಟ್ಟಿರೋ ಆಶೀರ್ವಾದಗಳೆಲ್ಲ ಬರೀ ಒಂದು ಸ್ಯಾಂಪಲ್‌ ಅಷ್ಟೇ. ಮುಂದೆ ಆತನು ‘ತನ್ನ ಕೈತೆಗೆದು, ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸುವಾಗ’ ಇನ್ನೂ ತುಂಬ ಆಶೀರ್ವಾದಗಳು ಸಿಗುತ್ತೆ.—ಕೀರ್ತ. 145:16.