ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊರತೋರಿಕೆ ನೋಡಿ ಹಿಂದೇಟು ಹಾಕಬೇಡಿ

ಹೊರತೋರಿಕೆ ನೋಡಿ ಹಿಂದೇಟು ಹಾಕಬೇಡಿ

ಕೆನಡದಲ್ಲಿ ಡಾನ್‌ ಎಂಬ ಯೆಹೋವನ ಸಾಕ್ಷಿ, ಬೀದಿಯಲ್ಲಿ ವಾಸಮಾಡುವ ಜನರೊಂದಿಗೆ ಮಾತಾಡಲು ವಿಶೇಷ ಪ್ರಯತ್ನ ಹಾಕುತ್ತಾರೆ. ಇಂಥ ಒಬ್ಬ ವ್ಯಕ್ತಿಯ ಬಗ್ಗೆ ಡಾನ್‌ ಹೇಳುವುದು: “ಬೀದಿಯಲ್ಲೇ ಬದುಕುವ ಜನರಲ್ಲಿ ತುಂಬ ಕೊಳಕಾಗಿದ್ದ ಒಬ್ಬ ವ್ಯಕ್ತಿಯನ್ನು ನೋಡಿದೆ. ಅವರ ಹೆಸರು ಪೀಟರ್‌. ಅವರು ತುಂಬ ಅಂದ್ರೆ ತುಂಬ ಕೊಳಕಾಗಿದ್ದರು. ಜನರನ್ನು ದೂರ ಇಡುವುದು ಹೇಗೆ ಅಂತ ಅವರಿಗೆ ಗೊತ್ತಿತ್ತು. ಜನರು ದಯೆ ತೋರಿಸಲು ಹೋದರೆ ಇಷ್ಟ ಆಗುತ್ತಿರಲಿಲ್ಲ, ಅವರ ಸಹಾಯವನ್ನು ತಳ್ಳಿಹಾಕುತ್ತಿದ್ದರು.” ಆದರೂ ಡಾನ್‌ 14 ವರ್ಷಗಳ ವರೆಗೆ ತಾಳ್ಮೆಯಿಂದ ಈ ವ್ಯಕ್ತಿಯೊಂದಿಗೆ ದಯೆಯಿಂದ ನಡಕೊಳ್ಳಲು ಪುನಃ ಪುನಃ ಪ್ರಯತ್ನಿಸಿದರು.

ಒಂದು ದಿನ ಪೀಟರ್‌ ಡಾನ್‌ಗೆ, “ಯಾಕೆ ನನ್ನ ಹತ್ತಿರ ಮಾತಾಡಲು ಪುನಃ ಪುನಃ ಪ್ರಯತ್ನಿಸ್ತೀರಾ? ಬೇರೆಲ್ಲರೂ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡುತ್ತಾರೆ. ನಿಮಗೆ ಯಾಕೆ ನನ್ನ ಬಗ್ಗೆ ಚಿಂತೆ?” ಎಂದು ಕೇಳಿದರು. ಅವರ ಹೃದಯ ತಲಪಲು ಡಾನ್‌ ಮೂರು ವಚನಗಳನ್ನು ಜಾಣ್ಮೆಯಿಂದ ಬಳಸಿದರು. ಮೊದಲು, ದೇವರ ಹೆಸರು ಗೊತ್ತಿದೆಯಾ ಎಂದು ಕೇಳಿ ಅದನ್ನು ನೇರವಾಗಿ ಬೈಬಲಿನಿಂದಲೇ ಕೀರ್ತನೆ 83:18​ರಲ್ಲಿ ಓದುವಂತೆ ಪೀಟರ್‌ಗೆ ಹೇಳಿದರು. ನಂತರ, ತಾನು ಯಾಕೆ ಅವರ ಬಗ್ಗೆ ಚಿಂತೆ ಮಾಡುತ್ತೇನೆ ಎಂದು ತೋರಿಸಲು ರೋಮನ್ನರಿಗೆ 10:13, 14​ನ್ನು ಓದುವಂತೆ ಹೇಳಿದರು. “ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು” ಎನ್ನುತ್ತದೆ ಆ ವಚನ. ಕೊನೆಗೆ, ಡಾನ್‌ ಮತ್ತಾಯ 9:36​ನ್ನು ಓದಿ, ಅದೇ ವಚನವನ್ನು ಪುನಃ ಪೀಟರ್‌ ಓದುವಂತೆ ಹೇಳಿದರು. ಆ ವಚನ “[ಯೇಸು] ಜನರ ಗುಂಪನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು” ಎಂದು ಹೇಳುತ್ತದೆ. ಪೀಟರ್‌ ಇದನ್ನು ಓದಿದಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅವರು ಡಾನ್‌ಗೆ “ನಾನೂ ಈ ಕುರಿಗಳಲ್ಲಿ ಒಬ್ಬನಾ?” ಎಂದು ಕೇಳಿದರು.

ಪೀಟರ್‌ ಬದಲಾದರು. ಸ್ನಾನ ಮಾಡಿಕೊಂಡು ಗಡ್ಡ ಟ್ರಿಮ್‌ ಮಾಡಿ, ಡಾನ್‌ ಕೊಟ್ಟ ಒಳ್ಳೇ ಬಟ್ಟೆ ಹಾಕಿಕೊಂಡರು. ಅಂದಿನಿಂದ ತಮ್ಮ ಹೊರತೋರಿಕೆ ಶುದ್ಧವಾಗಿ ಇಟ್ಟುಕೊಂಡರು.

ಪೀಟರ್‌ಗೆ ಡೈರಿ ಬರೆಯುವ ಅಭ್ಯಾಸ ಇತ್ತು. ಆ ಡೈರಿಯಲ್ಲಿ ಅವರು ಆರಂಭದಲ್ಲಿ ಬರೆದಿರುವ ವಿಷಯಗಳು ತುಂಬ ದುಃಖಕರವಾಗಿ, ಆಶಾರಹಿತವಾಗಿ ಕಾಣುತ್ತವೆ. ಆದರೆ ನಂತರ ಅವರು ಬರೆದಿರುವ ವಿಷಯಗಳು ಭಿನ್ನವಾಗಿವೆ. ಅದರಲ್ಲಿ ಒಂದು ವಿಷಯ ಹೀಗಿದೆ: “ನನಗೆ ಇವತ್ತು ದೇವರ ಹೆಸರು ಏನು ಅಂತ ಗೊತ್ತಾಯಿತು. ಈಗ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥನೆ ಮಾಡಬಹುದು. ಆತನ ಹೆಸರು ಗೊತ್ತಾಗಿ ನನಗೆ ತುಂಬ ಸಂತೋಷವಾಗಿದೆ. ಯೆಹೋವನನ್ನು ನನ್ನ ಸ್ನೇಹಿತನಾಗಿ ಮಾಡಿಕೊಳ್ಳಬಹುದು, ಯಾವಾಗ ಬೇಕಾದರೂ ಏನು ಬೇಕಾದರೂ ಆತನ ಹತ್ತಿರ ಹೇಳಿಕೊಳ್ಳಬಹುದು, ಆತನು ನನಗೆ ಯಾವಾಗಲೂ ಸಮಯ ಕೊಡುತ್ತಾನೆ ಎಂದು ಡಾನ್‌ ಹೇಳಿದರು.”

ಡೈರಿಯಲ್ಲಿ ಪೀಟರ್‌ ಕೊನೆಗೆ ತನ್ನ ಒಡಹುಟ್ಟಿದವರಿಗೆ ಈ ಮಾತುಗಳನ್ನು ಬರೆದಿದ್ದರು:

“ನನಗೆ ಇವತ್ತು ಸೌಖ್ಯ ಇಲ್ಲ. ತುಂಬ ವಯಸ್ಸಾಯಿತಲ್ಲಾ ಅದಕ್ಕೆ ಇರಬಹುದು. ಒಂದುವೇಳೆ ಇದೇ ನನ್ನ ಕೊನೆ ದಿನ ಆಗಿದ್ದರೂ ಪರದೈಸಿನಲ್ಲಿ ನನ್ನ ಸ್ನೇಹಿತ [ಡಾನ್‌] ಸಿಗುತ್ತಾರೆ ಅನ್ನುವ ಭರವಸೆ ಇದೆ. ನೀವು ಇದನ್ನು ಓದುತ್ತಿದ್ದೀರಾದರೆ ಇದರರ್ಥ ನಾನು ಈಗಾಗಲೇ ತೀರಿಕೊಂಡಿದ್ದೇನೆ. ನನ್ನ ಶವಸಂಸ್ಕಾರಕ್ಕೆ ಬಂದವರಲ್ಲಿ ತುಂಬ ಭಿನ್ನರಾಗಿ ಕಾಣುವ ಒಬ್ಬ ವ್ಯಕ್ತಿ ಇದ್ದರೆ ಅವರ ಹತ್ತಿರ ಮಾತಾಡಿ. ಈ ಚಿಕ್ಕ ನೀಲಿ ಪುಸ್ತಕವನ್ನು ದಯವಿಟ್ಟು ಓದಿ. * ನಾನು ಪುನಃ ನನ್ನ ಆ ಸ್ನೇಹಿತನನ್ನು ಪರದೈಸಿನಲ್ಲಿ ನೋಡುವೆ ಎಂದು ಈ ಪುಸ್ತಕ ಹೇಳುತ್ತದೆ. ನನಗೆ ಇದರಲ್ಲಿ ಪೂರ್ಣ ನಂಬಿಕೆ ಇದೆ. ನಿಮ್ಮ ಪ್ರೀತಿಯ ಸಹೋದರ, ಪೀಟರ್‌.”

ಪೀಟರ್‌ ಅವರ ಶವಸಂಸ್ಕಾರ ಆದ ಮೇಲೆ ಅವರ ಅಕ್ಕ ಉಮಿ ಹೇಳಿದ್ದು: “ಸುಮಾರು ಎರಡು ವರ್ಷಗಳ ಹಿಂದೆ ಪೀಟರ್‌ ನನ್ನನ್ನು ಸಂಪರ್ಕಿಸಿದ. ಅನೇಕ ವರ್ಷಗಳ ನಂತರ ಅವನಲ್ಲಿ ಸಂತೋಷ ಕಾಣಿಸಿತು. ಅವನ ಮುಖದಲ್ಲಿ ನಗು ಇತ್ತು.” ಅವರು ಡಾನ್‌ಗೆ ಹೇಳಿದ್ದು: “ನಾನು ಆ ಪುಸ್ತಕ ಓದುತ್ತೇನೆ. ನನ್ನ ತಮ್ಮನ ಮನಸ್ಸು ಮುಟ್ಟಿದ ಆ ಪುಸ್ತಕದಲ್ಲಿ ಖಂಡಿತ ಏನೋ ವಿಶೇಷತೆ ಇರಬೇಕು.” ಇತ್ತೀಚೆಗೆ ಬಂದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ಉಮಿ ಒಬ್ಬ ಯೆಹೋವನ ಸಾಕ್ಷಿಯೊಟ್ಟಿಗೆ ಚರ್ಚಿಸಲು ಸಹ ಒಪ್ಪಿಕೊಂಡರು.

ನಾವು ಸಹ ಹೊರತೋರಿಕೆಯನ್ನು ನೋಡದೆ ಎಲ್ಲ ರೀತಿಯ ಜನರಿಗೆ ನಿಜವಾದ ಪ್ರೀತಿ ತೋರಿಸಬೇಕು, ತಾಳ್ಮೆ ತೋರಿಸಬೇಕು. (1 ತಿಮೊ. 2:3, 4) ಆಗ ಪೀಟರಂತೆ ಹೊರತೋರಿಕೆ ಚೆನ್ನಾಗಿಲ್ಲದಿದ್ದರೂ, ಒಳ್ಳೇ ಹೃದಯವಿರುವ ವ್ಯಕ್ತಿಗಳ ಮನಸ್ಸನ್ನು ನಾವು ಮುಟ್ಟಲು ಸಾಧ್ಯ. ‘ಹೃದಯವನ್ನು ನೋಡುವವನಾದ’ ಯೆಹೋವನು ಯೋಗ್ಯವಾದ ಮನೋಭಾವವಿರುವ ವ್ಯಕ್ತಿಗಳ ಹೃದಯದಲ್ಲಿ ಸತ್ಯ ಬೆಳೆಯುವಂತೆ ಮಾಡುವನು.—1 ಸಮು. 16:7; ಯೋಹಾ. 6:44.

^ ಪ್ಯಾರ. 7 ಅನೇಕ ವರ್ಷಗಳ ಹಿಂದೆ ಅವರು ಪಡೆದುಕೊಂಡಿದ್ದ ನಿತ್ಯಜೀವಕ್ಕೆ ನಡೆಸುವ ಸತ್ಯವು ಎಂಬ ಬೈಬಲ್‌ ಅಧ್ಯಯನ ಸಹಾಯಕದ ಬಗ್ಗೆ ಹೇಳುತ್ತಿದ್ದಾರೆ. ಇದು ಯೆಹೋವನ ಸಾಕ್ಷಿಗಳ ಪ್ರಕಾಶನ. ಈಗ ಮುದ್ರಿಸಲ್ಪಡುವುದಿಲ್ಲ.