ನಿಮಗೆ ಗೊತ್ತಿತ್ತಾ?
ಬಾಬೆಲ್‌ನಲ್ಲಿದ್ದ ಇಟ್ಟಿಗೆಗಳು ಮತ್ತು ಅದನ್ನ ಮಾಡ್ತಿದ್ದ ವಿಧದಿಂದ ಬೈಬಲಲ್ಲಿರೋದು ಸತ್ಯ ಅಂತ ಹೇಗೆ ಗೊತ್ತಾಗುತ್ತೆ?
ಭೂಅಗೆತ ಶಾಸ್ತ್ರಜ್ಞರು ಹಿಂದೆ ಬಾಬೆಲ್‌ನಲ್ಲಿ ಮನೆಗಳನ್ನ ಕಟ್ಟಲು ಬಳಸ್ತಿದ್ದ ಇಟ್ಟಿಗೆಗಳನ್ನ ಅಗೆದು ತೆಗೆದಿದ್ದಾರೆ. ಅವರಿಗೆ ಸಿಕ್ಕ ಲಕ್ಷಾಂತರ ಇಟ್ಟಿಗೆಗಳು ಸುಟ್ಟ ಇಟ್ಟಿಗೆಗಳಾಗಿದ್ದವು. ಭೂಅಗೆತ ಶಾಸ್ತ್ರಜ್ಞರಾದ ರಾಬರ್ಟ್ ಕೋಲ್ಡ್‌ವಿಯವರ ಪ್ರಕಾರ ಇಂಥ ಇಟ್ಟಿಗೆಗಳನ್ನ ಕುಲುಮೆಗಳಲ್ಲಿ ಹಾಕಿ ಸುಡ್ತಿದ್ರು, ಈ ಕುಲುಮೆಗಳು “ಊರ ಹೊರಗೆ ಇರ್ತಿದ್ವು, ಯಾಕಂದ್ರೆ ಅಲ್ಲಿ ಇಟ್ಟಿಗೆ ಮಾಡೋಕೆ ಬೇಕಾದ ಮಣ್ಣು, ಬೆಂಕಿ ಹಚ್ಚೋಕೆ ಹುಲ್ಲು-ಕಡ್ಡಿಗಳು . . . ಜಾಸ್ತಿ ಸಿಗ್ತಿತ್ತು.”
ಬಾಬೆಲಿನ ಅಧಿಕಾರಿಗಳು ಈ ಕುಲುಮೆಗಳನ್ನ ಭಯಾನಕ ವಿಷ್ಯಗಳನ್ನ ಮಾಡೋಕೂ ಬಳಸ್ತಿದ್ರು ಅಂತ ಭೂಅಗೆತ ಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಪ್ರಾಚೀನ ಅಶ್ಶೂರ್ಯದ ಇತಿಹಾಸ ಮತ್ತು ಭಾಷೆಯ ಬಗ್ಗೆ ಚೆನ್ನಾಗಿ ಗೊತ್ತಿರೋ ಟೊರಾಂಟೊ ವಿಶ್ವವಿದ್ಯಾಲಯದ ಪ್ರೊಫೆಸರ್ ಪಾಲ್-ಔಲಾ ಬೊಲಾಯೂ ಹೀಗೆ ಹೇಳ್ತಾರೆ: “ಯಾರು ರಾಜನ ಮಾತನ್ನ ಕೇಳೋದಿಲ್ವೋ, ಪವಿತ್ರ ವಸ್ತುಗಳನ್ನ ಗೌರವಿಸೋದಿಲ್ವೋ ಅಂಥವ್ರನ್ನ ಕುಲುಮೆಗೆ ಎಸೆದು ಸುಟ್ಟುಬಿಡುತಿದ್ರು ಅಂತ ಬಾಬೆಲ್ ಭಾಷೆಯಲ್ಲಿ ಬರೆದಿರೋ ಕೆಲವು ಬರಹಗಳಲ್ಲಿದೆ.” ಉದಾಹರಣೆಗೆ, ರಾಜ ನೆಬೂಕದ್ನೆಚ್ಚರನ ಕಾಲದಲ್ಲಿದ್ದ ಒಂದು ಬರವಣಿಗೆ ಭೂಅಗೆತ ಶಾಸ್ತ್ರಜ್ಞರಿಗೆ ಸಿಕ್ಕಿದೆ. ಅದ್ರಲ್ಲಿ, “ಅವ್ರನ್ನ ನಾಶ ಮಾಡಿ, ಬೆಂಕಿಯಲ್ಲಿ ಸುಡಿ . . . ಉರಿಯುತ್ತಿರೋ ಕುಲುಮೆಗೆ ಎಸೆದು ಹೊಗೆ ಮೇಲೆ ಬರೋ ತರ ಮಾಡಿ, ಧಗಧಗನೆ ಉರಿಯೋ ಬೆಂಕಿಗೆ ಹಾಕಿ ಅವ್ರನ್ನ ಸುಟ್ಟು ಬೂದಿ ಮಾಡಿ” ಅಂತ ಇತ್ತು.
ಈ ಮಾತುಗಳನ್ನ ಕೇಳಿದಾಗ ದಾನಿಯೇಲ 3ನೇ ಅಧ್ಯಾಯದಲ್ಲಿರೋ ವಿಷ್ಯ ನಮಗೆ ನೆನಪಾಗಬಹುದು. ರಾಜ ನೆಬೂಕದ್ನೆಚ್ಚರ ಒಂದು ದೊಡ್ಡ ಚಿನ್ನದ ಮೂರ್ತಿಯನ್ನ ಮಾಡಿಸಿ ಬಾಬೆಲಿನ ಪ್ರಾಂತ್ಯದ ದೂರಾ ಅನ್ನೋ ಬಯಲಲ್ಲಿ ನಿಲ್ಲಿಸಿದ. ಎಲ್ರು ಆ ಮೂರ್ತಿಗೆ ಅಡ್ಡಬಿದ್ದು ಆರಾಧಿಸಬೇಕು ಅಂತ ಆಜ್ಞೆ ಕೊಟ್ಟ. ಆದ್ರೆ ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋ ಅದಕ್ಕೆ ಅಡ್ಡಬೀಳಲಿಲ್ಲ. ಆಗ ನೆಬೂಕದ್ನೆಚ್ಚರನಿಗೆ ಎಷ್ಟು ಕೋಪ ಬಂತಂದ್ರೆ ಅವನು ಆ ಕುಲುಮೆಯನ್ನ “ಸಾಮಾನ್ಯಕ್ಕಿಂತ ಏಳುಪಟ್ಟು ಹೆಚ್ಚಾಗಿ ಉರಿಸೋಕೆ” ಹೇಳಿದ. ಆಮೇಲೆ ಈ ಮೂವರನ್ನ ‘ಹೊತ್ತಿ ಉರಿಯೋ ದೊಡ್ಡ ಕುಲುಮೆಗೆ ಹಾಕಿಸಿದ.’ ಆದ್ರೆ ಒಬ್ಬ ಬಲಶಾಲಿ ದೇವದೂತ ಇವ್ರನ್ನ ಕಾಪಾಡಿದ.—ದಾನಿ. 3:1-6, 19-28.
ಬೈಬಲಿನಲ್ಲಿರೋ ಮಾಹಿತಿ ಸತ್ಯ ಅನ್ನೋದಕ್ಕೆ ಬಾಬೆಲ್‌ನಲ್ಲಿ ಸಿಕ್ಕ ಇಟ್ಟಿಗೆಗಳೇ ಸಾಕ್ಷಿ. ಸಾಮಾನ್ಯವಾಗಿ ಈ ಇಟ್ಟಿಗೆಗಳ ಮೇಲೆ ರಾಜನನ್ನ ಸ್ತುತಿಸುವ ಕೆಲವು ಹೇಳಿಕೆಗಳ ಅಚ್ಚನ್ನ ಹಾಕ್ತಿದ್ರು. ಒಂದು ಇಟ್ಟಿಗೆ ಮೇಲೆ ಹೀಗಿತ್ತು: “ನಾನೇ, ಬಾಬೆಲಿನ ರಾಜ ನೆಬೂಕದ್ನೆಚ್ಚರ . . . ಈ ಅರಮನೆಯನ್ನ ಮಹಾ ರಾಜನಾದ ನಾನೇ ಕಟ್ಟಿದ್ದೇನೆ . . . ನನ್ನ ಮುಂದಿನ ಪೀಳಿಗೆ ಚಿರಕಾಲ ಆಳ್ವಿಕೆ ಮಾಡಲಿ.” ಈ ಮಾತುಗಳು ದಾನಿಯೇಲ 4:30ರಲ್ಲಿರೋ ಮಾತುಗಳಿಗೆ ಹೋಲುತ್ತೆ. ಅಲ್ಲಿ ನೆಬೂಕದ್ನೆಚ್ಚರ ತನ್ನ ಬಗ್ಗೆ ಹೆಮ್ಮೆಯಿಂದ ಬೀಗುತ್ತಾ ಹೀಗೆ ಹೇಳಿದ: “ನನ್ನ ವೈಭವ ಘನತೆಗಾಗಿ, ರಾಜಮನೆತನಕ್ಕಾಗಿ ಈ ಮಹಾ ಬಾಬೆಲನ್ನ ನನ್ನ ಸ್ವಂತ ಶಕ್ತಿಯಿಂದ ಕಟ್ಟಿದ್ದು ನಾನೇ ಅಲ್ವಾ?”