ಅಧ್ಯಯನ ಲೇಖನ 30
ನಿಮ್ಮ ಪ್ರೀತಿ ಇನ್ನೂ ಬೆಳೀಲಿ
“ಎಲ್ಲ ವಿಷ್ಯಗಳಲ್ಲೂ ಪ್ರೀತಿಯಿಂದ ಬೆಳೀತಾ ಹೋಗೋಣ.”—ಎಫೆ. 4:15.
ಗೀತೆ 138 ಯೆಹೋವ ನಿನ್ನ ನಾಮ
ಈ ಲೇಖನದಲ್ಲಿ ಏನಿದೆ? a
1. ನೀವು ಸತ್ಯ ಕಲಿತಾಗ ಬೈಬಲಿಂದ ಯಾವ ವಿಷ್ಯಗಳನ್ನ ತಿಳ್ಕೊಂಡ್ರಿ?
ನೀವು ಸತ್ಯ ಕಲಿತಾಗ ಬೈಬಲಿಂದ ಯಾವ್ಯಾವ ವಿಷ್ಯಗಳನ್ನ ಕಲಿತ್ರಿ ಅಂತ ನಿಮಗೆ ನೆನಪಿದ್ಯಾ? ನಿಜವಾದ ದೇವರ ಹೆಸ್ರು ಯೆಹೋವ ಅಂತ ಗೊತ್ತಾದಾಗ ನಿಮಗೆ ಆಶ್ಚರ್ಯ ಆಗಿರುತ್ತೆ. ದೇವರು ನಮ್ಮನ್ನ ನರಕದಲ್ಲಿ ಹಾಕಿ ಚಿತ್ರಹಿಂಸೆ ಕೊಡಲ್ಲ ಅಂತ ಗೊತ್ತಾದಾಗ ಅಬ್ಬಾ! ಅಂತ ಅನಿಸಿರುತ್ತೆ. ಈ ಭೂಮಿ ಪರದೈಸಾಗುತ್ತೆ, ತೀರಿಹೋಗಿರೋ ನಮ್ಮವರು ಮತ್ತೆ ಬದುಕಿ ಬರ್ತಾರೆ, ಅಲ್ಲಿ ನಾವು ಅವ್ರ ಜೊತೆ ಶಾಶ್ವತವಾಗಿ ಜೀವಿಸ್ತೀವಿ ಅಂತ ಗೊತ್ತಾದಾಗ ನಿಮ್ಮ ಮನಸ್ಸು ಖುಷಿಯಿಂದ ಕುಣಿದಾಡಿರುತ್ತೆ.
2. ಬೈಬಲಿಂದ ಒಂದೊಂದೇ ವಿಷ್ಯನ ಕಲಿತಾ ಹೋದ ಹಾಗೆ ನೀವೇನು ಮಾಡಿದ್ರಿ? (ಎಫೆಸ 5:1, 2)
2 ನೀವು ಬೈಬಲನ್ನ ಕಲಿತಾ ಹೋದ ಹಾಗೆ ಯೆಹೋವನ ಮೇಲಿರೋ ನಿಮ್ಮ ಪ್ರೀತಿನೂ ಜಾಸ್ತಿ ಆಯ್ತು. ಇದ್ರಿಂದ ನೀವು ಕಲ್ತಿದ್ದನ್ನ ಪಾಲಿಸೋಕೆ ಶುರುಮಾಡಿದ್ರಿ. ಬೈಬಲ್ ತತ್ವಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡು ಜೀವನದಲ್ಲಿ ನಿರ್ಧಾರಗಳನ್ನ ಮಾಡಿದ್ರಿ. ಯೆಹೋವ ದೇವರಿಗೆ ಇಷ್ಟ ಆಗೋ ತರ ಯೋಚ್ನೆ ಮಾಡೋಕೆ ಮತ್ತು ನಡ್ಕೊಳ್ಳೋಕೆ ಕಲಿತ್ರಿ. ಒಂದು ಮಗು ಹೇಗೆ ಅವ್ರ ಅಪ್ಪಅಮ್ಮ ತರ ಇರೋಕೆ ಪ್ರಯತ್ನ ಮಾಡುತ್ತೋ ಹಾಗೆ ಯೆಹೋವನ ತರ ನಡ್ಕೊಳ್ಳೋಕೆ ನೀವು ಶುರು ಮಾಡಿದ್ರಿ.—ಎಫೆಸ 5:1, 2 ಓದಿ.
3. ಯಾವ ಪ್ರಶ್ನೆಗಳನ್ನ ನಾವು ಕೇಳ್ಕೊಬೇಕು?
3 ‘ಸತ್ಯ ಕಲಿತಾಗ ನನಗೆ ಯೆಹೋವನ ಮೇಲಿದ್ದ ಪ್ರೀತಿ ಈಗ್ಲೂ ಹಾಗೇ ಇದ್ಯಾ? ಅಥವಾ ಕಮ್ಮಿ ಆಗಿಬಿಟ್ಟಿದ್ಯಾ? ದೀಕ್ಷಾಸ್ನಾನ ಆದಾಗ ನಾನು ಹೇಗೆ ಯೆಹೋವನ ತರ ಯೋಚ್ನೆ ಮಾಡ್ತಾ, ನಡ್ಕೊಳ್ತಾ ಇದ್ನೋ ಈಗ್ಲೂ ಹಾಗೆ ಮಾಡ್ತಾ ಇದ್ದೀನಾ? ಅದ್ರಲ್ಲೂ ಯೆಹೋವ ದೇವರ ತರಾನೇ ಸಹೋದರ ಸಹೋದರಿಯನ್ನ ಪ್ರೀತಿಸ್ತಾ ಇದ್ದೀನಾ?’ ಅಂತ ನಮ್ಮನ್ನೇ ಕೇಳ್ಕೊಬೇಕು. ಒಂದುವೇಳೆ “ಮೊದ್ಲು ಇದ್ದ ಪ್ರೀತಿ” ಈಗ ಕಮ್ಮಿ ಆಗೋಗಿದ್ರೆ ಬೇಜಾರ್ ಮಾಡ್ಕೊಬೇಡಿ. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೂ ಹೀಗೇ ಆದಾಗ ಯೇಸು ಅವ್ರನ್ನ ದೂರ ಮಾಡಲಿಲ್ಲ. ನಿಮ್ಮನ್ನೂ ಆತನು ದೂರ ಮಾಡಲ್ಲ. (ಪ್ರಕ. 2:4, 7) ಯಾಕಂದ್ರೆ ಆ ಪ್ರೀತಿನ ಮತ್ತೆ ಬೆಳೆಸ್ಕೊಬಹುದು ಅಂತ ಆತನಿಗೆ ಗೊತ್ತು.
4. ಈ ಲೇಖನದಲ್ಲಿ ನಮಗೆ ಯಾವುದಕ್ಕೆ ಉತ್ರ ಸಿಗುತ್ತೆ?
4 ಯೆಹೋವ ದೇವರ ಮೇಲೆ ಮತ್ತು ನಮ್ಮ ಸಹೋದರ ಸಹೋದರಿಯರ ಮೇಲೆ ಇರೋ ಪ್ರೀತಿ ಜಾಸ್ತಿ ಆಗಬೇಕಂದ್ರೆ ಏನು ಮಾಡಬೇಕು? ಇದ್ರಿಂದ ನಮಗೂ ಬೇರೆಯವ್ರಿಗೂ ಹೇಗೆಲ್ಲಾ ಒಳ್ಳೇದಾಗುತ್ತೆ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ರ ನೋಡೋಣ.
ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳಿ
5-6. (ಎ) ಅಪೊಸ್ತಲ ಪೌಲ ಸೇವೆ ಮಾಡುವಾಗ ಯಾವೆಲ್ಲ ಕಷ್ಟಗಳನ್ನ ಅನುಭವಿಸಿದ? (ಬಿ) ಆದ್ರೂ ಅವನು ಯಾಕೆ ಯೆಹೋವನ ಸೇವೆ ಮಾಡ್ತಿದ್ದ?
5 ಅಪೊಸ್ತಲ ಪೌಲ ಯೆಹೋವನ ಸೇವೆನ ಖುಷಿಯಾಗಿ ಮಾಡ್ತಿದ್ದ. ಜೊತೆಗೆ ಕಷ್ಟಗಳನ್ನೂ ಅನುಭವಿಸಿದ. ಅವನು ತುಂಬ ದೂರ-ದೂರ ಪ್ರಯಾಣ ಮಾಡಬೇಕಿತ್ತು. ಆಗಿನ ಕಾಲದಲ್ಲಿ ಅಷ್ಟು ದೂರ ಪ್ರಯಾಣ ಮಾಡೋದು ಸುಲಭ ಆಗಿರಲಿಲ್ಲ. ಅವನಿಗೆ “ನದಿಗಳಿಂದ, ದರೋಡೆಕೋರರಿಂದ” ಅಪಾಯಗಳು ಬಂದ್ವು. ಅವನ ಶತ್ರುಗಳು ಎಷ್ಟೋ ಸಲ ಅವನಿಗೆ ತುಂಬ ಹೊಡೆದ್ರು. (2 ಕೊರಿಂ. 11:23-27) ಅಷ್ಟೇ ಅಲ್ಲ ಸಹೋದರ ಸಹೋದರಿಯರು ಕೂಡ ಅವನು ತೋರಿಸಿದ ಪ್ರೀತಿಗೆ ಕೆಲವೊಮ್ಮೆ ಬೆಲೆ ಕೊಡಲಿಲ್ಲ.—2 ಕೊರಿಂ. 10:10; ಫಿಲಿ. 4:15.
6 ಎಷ್ಟೇ ಕಷ್ಟ ಆದ್ರೂ ಪೌಲ ಯೆಹೋವನ ಸೇವೆಯನ್ನ ಮಾಡ್ತಾ ಇದ್ದ. ಯಾಕಂದ್ರೆ ಪವಿತ್ರ ಗ್ರಂಥದಿಂದ ಮತ್ತು ಯೆಹೋವ ತನ್ನ ಜೊತೆ ನಡ್ಕೊಂಡ ರೀತಿಯಿಂದ ಆತನಲ್ಲಿರೋ ಒಳ್ಳೇ ಗುಣಗಳ ಬಗ್ಗೆ ತಿಳ್ಕೊಂಡ. ಆಗ ತನ್ನನ್ನ ಯೆಹೋವ ದೇವರು ಎಷ್ಟು ಪ್ರೀತಿಸ್ತಾನೆ ಅಂತ ಅವನಿಗೆ ಗೊತ್ತಾಯ್ತು. (ರೋಮ. 8:38, 39; ಎಫೆ. 2:4, 5) ಅದೇ ತರ ಅವನೂ ಯೆಹೋವನನ್ನ ಪ್ರೀತಿಸಿದ. ಆ ಪ್ರೀತಿನ ‘ಪವಿತ್ರ ಜನ್ರ ಸೇವೆ ಮಾಡಿ’ ತೋರಿಸಿದ.—ಇಬ್ರಿ. 6:10.
7. ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು?
7 ಯೆಹೋವನ ಮೇಲಿರೋ ಪ್ರೀತಿನ ಇನ್ನೂ ಜಾಸ್ತಿ ಮಾಡ್ಕೊಳ್ಳೋಕೆ ಬೈಬಲನ್ನ ಚೆನ್ನಾಗಿ ಓದಬೇಕು. ಓದಿದ ವಿಷ್ಯದಿಂದ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ ಅಂತ ಯೋಚಿಸಬೇಕು. ‘ಇದ್ರಿಂದ ಯೆಹೋವ ನನ್ನನ್ನ ಪ್ರೀತಿಸ್ತಾನೆ ಅಂತ ಹೇಗೆ ಗೊತ್ತಾಗುತ್ತೆ? ಇದ್ರಲ್ಲಿರೋ ಯಾವ ವಿಷ್ಯ ನನಗೆ ಯೆಹೋವನ ಮೇಲಿರೋ ಪ್ರೀತಿನ ಇನ್ನೂ ಜಾಸ್ತಿ ಮಾಡ್ತಿದೆ?’ ಅಂತ ಕೇಳ್ಕೊಬೇಕು.
8. ಪ್ರಾರ್ಥನೆ ಮಾಡೋದ್ರಿಂದ ಯೆಹೋವನ ಮೇಲಿರೋ ಪ್ರೀತಿ ಹೇಗೆ ಜಾಸ್ತಿ ಆಗುತ್ತೆ?
8 ಯೆಹೋವ ದೇವರ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳೋಕೆ ನಾವು ಇನ್ನೂ ಏನು ಮಾಡಬೇಕು? ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಆತನ ಹತ್ರ ಹೇಳ್ಕೊಬೇಕು. (ಕೀರ್ತ. 25:4, 5) ಅದಕ್ಕೆ ಆತನು ಉತ್ರನೂ ಕೊಡ್ತಾನೆ. (1 ಯೋಹಾ. 3:21, 22) ಏಷ್ಯಾದಲ್ಲಿರೋ ಸಹೋದರಿ ಕೇರನ್ ಏನು ಹೇಳ್ತಾರೆ ನೋಡಿ. “ನಾನು ಯೆಹೋವ ದೇವರ ಬಗ್ಗೆ ತಿಳ್ಕೊಂಡಾಗ ಆತನ ಮೇಲೆ ಪ್ರೀತಿ ಬೆಳೆಸ್ಕೊಂಡೆ. ಆದ್ರೆ ಆಮೇಲೆ ಆತನು ನನ್ನ ಪ್ರಾರ್ಥನೆಗಳಿಗೆ ಉತ್ರ ಕೊಡೋದನ್ನ ನೋಡಿದಾಗ ಆ ಪ್ರೀತಿ ಇನ್ನೂ ಜಾಸ್ತಿ ಆಯ್ತು. ಇದ್ರಿಂದ ನಾನು ಯಾವಾಗ್ಲೂ ಆತನಿಗೆ ಇಷ್ಟ ಆಗಿರೋದನ್ನೇ ಮಾಡಬೇಕು ಅನ್ನೋ ಆಸೆನೂ ಜಾಸ್ತಿ ಆಯ್ತು.” b
ಸಹೋದರ ಸಹೋದರಿಯರ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳಿ
9. ಸಹೋದರ ಸಹೋದರಿಯರ ಮೇಲೆ ತಿಮೊತಿಗೆ ತುಂಬ ಪ್ರೀತಿ ಇತ್ತು ಅಂತ ಹೇಗೆ ಗೊತ್ತಾಗುತ್ತೆ?
9 ಪೌಲ ಕ್ರೈಸ್ತನಾದ ಮೇಲೆ ತಿಮೊತಿ ಅನ್ನೋ ಯುವಕನನ್ನ ಭೇಟಿ ಆದ. ತಿಮೊತಿಗೆ ಯೆಹೋವನ ಮೇಲೆ, ಆತನ ಜನ್ರ ಮೇಲೆ ತುಂಬ ಪ್ರೀತಿ ಇತ್ತು. ಅದನ್ನ ಹೇಗೆ ಹೇಳಬಹುದು? ಪೌಲ ಫಿಲಿಪ್ಪಿ ಸಭೆಗೆ ಬರೆದ ಪತ್ರದಲ್ಲಿ “[ತಿಮೊತಿ] ತರ ನಿಮ್ಮ ಬಗ್ಗೆ ನಿಜವಾದ ಕಾಳಜಿ ತೋರಿಸೋ ವ್ಯಕ್ತಿ ನನ್ನ ಹತ್ರ ಬೇರೆ ಯಾರೂ ಇಲ್ಲ” ಅಂತ ಹೇಳಿದ. (ಫಿಲಿ. 2:20) ಇಲ್ಲಿ ಪೌಲ ಬೇಕಿದ್ರೆ ‘ತಿಮೊತಿ ಚೆನ್ನಾಗಿ ಭಾಷಣ ಕೊಡ್ತಾನೆ, ಸಭೆ ಕೆಲಸಗಳನ್ನೆಲ್ಲ ಚೆನ್ನಾಗಿ ನೋಡ್ಕೊಳ್ತಾನೆ’ ಅಂತ ಬರಿಬಹುದಾಗಿತ್ತು. ಆದ್ರೆ ಅವನು ಯಾಕೆ ತಿಮೊತಿ ತೋರಿಸಿದ ಪ್ರೀತಿ ಬಗ್ಗೆ ಬರೆದ? ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ತಿಮೊತಿಗೆ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿ ಇತ್ತು ಅಂತ ಗೊತ್ತಾಗುತ್ತೆ. ತಮ್ಮ ಸಭೆಗೆ ತಿಮೊತಿ ಬರ್ತಿದ್ದಾನೆ ಅಂತ ಕೇಳಿದಾಗ ಸಹೋದರ ಸಹೋದರಿಯರು ಖಂಡಿತ ಖುಷಿ ಪಟ್ಟಿರ್ತಾರೆ.—1 ಕೊರಿಂ. 4:17.
10. ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದೆ ಅಂತ ಆ್ಯನ ಮತ್ತು ಅವ್ರ ಗಂಡ ಹೇಗೆ ತೋರಿಸಿದ್ರು?
10 ನಮಗೂ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ರೆ ಅವ್ರಿಗೆ ಸಹಾಯ ಮಾಡೋಕೆ ಮುಂದೆ ಬರ್ತೀವಿ. (ಇಬ್ರಿ. 13:16) ಹಿಂದಿನ ಲೇಖನದಲ್ಲಿದ್ದ ಆ್ಯನ ಮತ್ತು ಅವ್ರ ಗಂಡ ಏನು ಮಾಡಿದ್ರು ಅಂತ ನೋಡಿ. ಅವ್ರಿದ್ದ ಜಾಗದಲ್ಲಿ ಒಂದು ದೊಡ್ಡ ಬಿರುಗಾಳಿ ಬಂತು. ಇದ್ರಿಂದ ಒಬ್ಬ ಸಹೋದರನ ಮನೆಯ ಚಾವಣಿ ಬಿದ್ದು ಹೋಯ್ತು. ಅವ್ರ ಮನೆಯಲ್ಲಿದ್ದ ಎಲ್ಲಾ ಬಟ್ಟೆಗಳು ಗಲೀಜಾಗಿ ಹೋಯ್ತು. ಆಗ ಆ್ಯನ ಏನು ಮಾಡಿದ್ರು? “ನಾವು ಆ ಸಹೋದರ ಮತ್ತು ಅವ್ರ ಮನೆಯವ್ರ ಬಟ್ಟೆಗಳನ್ನ ತಗೊಂಡು ಬಂದು ಒಗೆದ್ವಿ. ಆಮೇಲೆ ಅದನ್ನೆಲ್ಲ ಇಸ್ತ್ರಿ ಮಾಡಿ ಮಡಚಿ ಕೊಟ್ವಿ. ನಾವು ಮಾಡಿದ್ದು ಅಷ್ಟು ದೊಡ್ಡ ಸಹಾಯ ಏನೂ ಅಲ್ಲ. ಆದ್ರೆ ಅದ್ರಿಂದ ನಮ್ಮ ಮಧ್ಯ ಬಾಂಧವ್ಯ ಬೆಳೀತು. ಅದು ಇವತ್ತಿಗೂ ಹಾಗೇ ಇದೆ.” ಆ್ಯನ ಮತ್ತು ಅವ್ರ ಗಂಡನಿಗೆ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿ ಇದ್ದಿದ್ದಕ್ಕೆ ಸಹಾಯ ಮಾಡೋಕಾಯ್ತು.—1 ಯೋಹಾ. 3:17, 18.
11. (ಎ) ನಾವು ಬೇರೆಯವ್ರಿಗೆ ಪ್ರೀತಿ ತೋರಿಸಿದಾಗ ಅವ್ರಿಗೆ ಹೇಗನಿಸುತ್ತೆ? (ಬಿ) ನಾವು ಬೇರೆಯವ್ರಿಗೆ ಪ್ರೀತಿ ತೋರಿಸಿದಾಗ ಯೆಹೋವ ಏನು ಮಾಡ್ತಾನೆ ಅಂತ ಜ್ಞಾನೋಕ್ತಿ 19:17 ಹೇಳುತ್ತೆ?
11 ನಾವು ಬೇರೆಯವ್ರಿಗೆ ಪ್ರೀತಿ, ದಯೆ ತೋರಿಸಿದಾಗ ಯೆಹೋವ ದೇವರ ತರ ನಡ್ಕೊಳ್ತಾ ಇದ್ದೀವಿ ಅನ್ನೋದನ್ನ ಅವರು ಗಮನಿಸ್ತಾರೆ. ಅಷ್ಟೇ ಅಲ್ಲ ನಾವು ಅವ್ರಿಗೆ ಮಾಡಿರೋ ಸಹಾಯನ ಕೂಡ ಮರಿಯಲ್ಲ. ಸಹೋದರಿ ಕೇರನ್ ಏನು ಹೇಳ್ತಾರೆ ನೋಡಿ. “ಸಹೋದರಿಯರು ನಮ್ಮ ಮನೆಗೇ ಬಂದು ನನ್ನನ್ನ ಸೇವೆಗೆ ಕರ್ಕೊಂಡು ಹೋಗ್ತಿದ್ರು. ಆಮೇಲೆ ನನ್ನನ್ನ ಊಟಕ್ಕೆ ಕರೀತಾ ಇದ್ರು. ಸೇವೆ ಮುಗಿದ ಮೇಲೆ ನನ್ನನ್ನ ಮನೆಗೆ ವಾಪಸ್ ತಂದು ಬಿಡ್ತಿದ್ರು. ಇದೆಲ್ಲ ಅಷ್ಟು ಸುಲಭ ಅಲ್ಲ. ಆದ್ರೂ ಅವ್ರಿಗೆ ನನ್ನ ಮೇಲೆ ಪ್ರೀತಿ ಇದ್ದಿದ್ರಿಂದ ಅವರು ಹೀಗೆಲ್ಲ ಮಾಡಿದ್ರು. ಅವರು ಮಾಡಿರೋ ಸಹಾಯಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ.” ಆ ಸಹೋದರಿಯರನ್ನ ಕೇರನ್ ಈಗ್ಲೂ ನೆನಪಿಸ್ಕೊಳ್ತಾರೆ. ಕೇರನ್ ಹೇಳೋದು: “ಅವ್ರ ಋಣ ತೀರಿಸಬೇಕು ಅಂತ ನಂಗೆ ತುಂಬ ಆಸೆ ಇದೆ. ಆದ್ರೆ ಅವ್ರೆಲ್ಲ ಈಗ ಎಲ್ಲಿದ್ದಾರೆ ಅಂತ ನಂಗೊತ್ತಿಲ್ಲ. ಆದ್ರೆ ಯೆಹೋವನಿಗೆ ಗೊತ್ತು. ಅದಕ್ಕೆ ಅವರು ನಂಗೆ ಮಾಡಿರೋ ಸಹಾಯಕ್ಕೆ ಯೆಹೋವನೇ ಅವ್ರಿಗೆ ಪ್ರತಿಫಲ ಕೊಡ್ಲಿ ಅಂತ ಯಾವಾಗ್ಲೂ ಬೇಡ್ಕೊಳ್ತಾ ಇರ್ತೀನಿ.” ನಾವು ಮಾಡಿರೋ ಸಹಾಯನ ಜನ್ರು ಮರೆತುಬಿಡಬಹುದು. ಆದ್ರೆ ಯೆಹೋವ ದೇವರು ಮರಿಯಲ್ಲ. ನಾವು ಬೇರೆಯವ್ರಿಗೆ ಒಂದು ಚಿಕ್ಕ ಸಹಾಯ ಮಾಡಿದ್ರೂ ಅದಕ್ಕೆ ತುಂಬ ಬೆಲೆ ಕೊಡ್ತಾನೆ. ಅದನ್ನ ನಾವು ಆತನಿಗೆ ಕೊಟ್ಟಿರೋ ಸಾಲದ ತರ ನೋಡ್ತಾನೆ. ಅದಕ್ಕೆ ತಕ್ಕ ಪ್ರತಿಫಲ ಕೊಡ್ತಾನೆ.—ಜ್ಞಾನೋಕ್ತಿ 19:17 ಓದಿ.
12. ಸಹೋದರರು ಹೇಗೆ ಸಭೆಯವ್ರಿಗೆ ಪ್ರೀತಿ ತೋರಿಸಬಹುದು? (ಚಿತ್ರಗಳನ್ನೂ ನೋಡಿ.)
12 ನೀವು ಒಬ್ಬ ಸಹೋದರನಾಗಿದ್ರೆ ಬೇರೆಯವ್ರಿಗೆ ಹೇಗೆ ಪ್ರೀತಿ ತೋರಿಸಬಹುದು? ಹೇಗೆ ಸಹಾಯ ಮಾಡಬಹುದು? ಸಹೋದರ ಜಾರ್ಡನ್ ಏನು ಮಾಡಿದ ನೋಡಿ. ಅವನು ತಮ್ಮ ಸಭೆಯಲ್ಲಿದ್ದ ಹಿರಿಯರ ಹತ್ರ ಹೋಗಿ ‘ಸಭೆಯವ್ರಿಗೆ ನಾನಿನ್ನೂ ಹೇಗೆಲ್ಲ ಸಹಾಯ ಮಾಡಬಹುದು?’ ಅಂತ ಕೇಳಿದ. ಜಾರ್ಡನ್ ಈಗಾಗ್ಲೇ ಸಹೋದರ ಸಹೋದರಿಯರಿಗೆ ತುಂಬ ಸಹಾಯ ಮಾಡ್ತಿದ್ದ. ಅದಕ್ಕೆ ಆ ಹಿರಿಯ ಮೊದ್ಲು ಅವನನ್ನ ಹೊಗಳಿದ್ರು. ಆಮೇಲೆ, ಇನ್ನೂ ಏನೆಲ್ಲ ಮಾಡಬಹುದು ಅಂತ ಹೇಳ್ಕೊಟ್ರು. ಅವರು ಅವನಿಗೆ, ರಾಜ್ಯ ಸಭಾಗೃಹಕ್ಕೆ ಬೇಗ ಬಂದು ಸಹೋದರ ಸಹೋದರಿಯರನ್ನ ಮಾತಾಡಿಸೋಕೆ, ಕೂಟಗಳಲ್ಲಿ ಚೆನ್ನಾಗಿ ಉತ್ರ ಕೊಡೋಕೆ, ಅವನ ಕ್ಷೇತ್ರ ಸೇವಾ ಗುಂಪಿನಲ್ಲಿರೋ ಸಹೋದರ ಸಹೋದರಿಯರ ಜೊತೆ ಇನ್ನೂ ಜಾಸ್ತಿ ಸೇವೆ ಮಾಡೋಕೆ ಹೇಳಿದ್ರು. ಸಭೆಯವ್ರಿಗೆ ಇನ್ನೂ ಹೇಗೆಲ್ಲ ಸಹಾಯ ಮಾಡಬಹುದು ಅಂತ ಯೋಚ್ನೆ ಮಾಡೋಕೂ ಹೇಳಿದ್ರು. ಅವರು ಹೇಳಿದ್ದನ್ನೆಲ್ಲ ಜಾರ್ಡನ್ ಮಾಡಿದ. ಇದ್ರಿಂದ ಅವನು ಹೊಸಹೊಸ ಕೌಶಲಗಳನ್ನ ಬೆಳೆಸ್ಕೊಳ್ಳೋದರ ಜೊತೆಗೆ ಅವನಿಗೆ ಸಹೋದರ ಸಹೋದರಿಯರ ಮೇಲಿದ್ದ ಪ್ರೀತಿನೂ ಜಾಸ್ತಿ ಆಯ್ತು. ಇದ್ರಿಂದ ಜಾರ್ಡನ್ಗೆ ಒಂದು ವಿಷ್ಯ ಗೊತ್ತಾಯ್ತು. ಅದೇನಂದ್ರೆ ಒಬ್ಬ ಸಹೋದರ ಸಹಾಯಕ ಸೇವಕನಾದ ಮೇಲಲ್ಲ, ಅದಕ್ಕೂ ಮುಂಚೆಯಿಂದಾನೇ ಬೇರೆಯವ್ರಿಗೆ ಸಹಾಯ ಮಾಡೋಕೆ ಶುರು ಮಾಡಬೇಕು. ಅದ್ರಲ್ಲೂ ಸಹಾಯಕ ಸೇವಕ ಆದ್ಮೇಲೆ ಇನ್ನೂ ಜಾಸ್ತಿ ಸಹಾಯ ಮಾಡಬೇಕು.—1 ತಿಮೊ. 3:8-10, 13.
13. ಮತ್ತೆ ಹಿರಿಯನಾಗಿ ಸೇವೆ ಮಾಡೋಕೆ ಸಹೋದರ ಕ್ರಿಸ್ಟಿಯನ್ಗೆ ಯಾವುದು ಸಹಾಯ ಮಾಡ್ತು?
13 ನೀವು ಈ ಮುಂಚೆ ಸಹಾಯ ಸೇವಕನಾಗಿ, ಹಿರಿಯನಾಗಿ ಸೇವೆ ಮಾಡಿದ್ದೀರಾ? ಆಗ ನೀವು ಪ್ರೀತಿಯಿಂದ ಮಾಡಿರೋ ಸೇವೆನಾ ಯೆಹೋವ ಯಾವತ್ತೂ ಮರಿಯಲ್ಲ. ಈಗ ನೀವು ತೋರಿಸ್ತಿರೋ ಪ್ರೀತಿನೂ ಆತನು ಮರಿಯಲ್ಲ. (1 ಕೊರಿಂ. 15:58) ಸಹೋದರ ಕ್ರಿಸ್ಟಿಯನ್ ಅವ್ರ ಉದಾಹರಣೆ ನೋಡಿ. ಹಿರಿಯನಾಗಿ ಸೇವೆ ಮಾಡೋ ಸುಯೋಗನ ಕಳ್ಕೊಂಡಾಗ ಅವ್ರಿಗೆ ತುಂಬ ಬೇಜಾರಾಯ್ತು. ಆಗ ಅವರು ಏನು ಮಾಡಿದ್ರು? “ನನಗೆ ಸುಯೋಗ ಇರಲಿ ಇಲ್ದೆ ಇರಲಿ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ನನ್ನಿಂದ ಎಷ್ಟಾಗುತ್ತೋ ಅಷ್ಟು ಆತನ ಸೇವೆ ಮಾಡ್ತೀನಿ ಅಂತ ತೀರ್ಮಾನ ಮಾಡಿದೆ” ಅಂತ ಅವರು ಹೇಳ್ತಾರೆ. ಸ್ವಲ್ಪ ಸಮಯ ಆದ್ಮೇಲೆ ಆ ಸಹೋದರನನ್ನ ಮತ್ತೆ ಹಿರಿಯನಾಗಿ ನೇಮಿಸ್ತಾರೆ. ಆಗ ಕ್ರಿಸ್ಟಿಯನ್ ಹೇಳಿದ್ದು, “ಮತ್ತೆ ಹಿರಿಯನಾಗಿ ಸೇವೆ ಮಾಡಬೇಕು ಅಂದಾಗ ನನಗೆ ಸ್ವಲ್ಪ ಭಯ ಆಯ್ತು. ಆದ್ರೆ ಯೆಹೋವನೇ ನನಗೆ ಕರುಣೆ ತೋರಿಸಿ ಆ ಸುಯೋಗನ ಕೊಡ್ತಾ ಇದ್ದಾರೆ ಅಂದ್ಮೇಲೆ ಅದನ್ನ ಮಾಡಲೇಬೇಕು ಅಂತ ಅಂದ್ಕೊಂಡೆ. ಅಷ್ಟೇ ಅಲ್ಲ, ಯೆಹೋವ ದೇವರ ಮೇಲೆ ಮತ್ತು ಸಹೋದರ ಸಹೋದರಿಯರ ಮೇಲಿರೋ ಪ್ರೀತಿಯಿಂದ ನಾನು ಇದನ್ನ ಮಾಡ್ತೀನಿ ಅಂತ ಒಪ್ಕೊಂಡೆ.”
14. ಎಲೆನಾ ಅವ್ರ ಉದಾಹರಣೆಯಿಂದ ನೀವೇನು ಕಲಿತ್ರಿ?
14 ಯೆಹೋವನ ಸೇವಕರು ತಮ್ಮ ಸುತ್ತಮುತ್ತ ಇರೋ ಜನ್ರನ್ನೂ ಪ್ರೀತಿಸ್ತಾರೆ. (ಮತ್ತಾ. 22:37-39) ಜಾರ್ಜಿಯದಲ್ಲಿರೋ ಸಹೋದರಿ ಎಲೆನಾ ಅವ್ರ ಉದಾಹರಣೆ ನೋಡಿ. ಅವರು ಹೇಳೋದು, “ಮೊದಮೊದ್ಲು ನಾನು ಯೆಹೋವ ದೇವರ ಮೇಲಿರೋ ಪ್ರೀತಿಯಿಂದ ಜನ್ರಿಗೆ ಸಿಹಿಸುದ್ದಿ ಸಾರುತ್ತಿದ್ದೆ. ಆದ್ರೆ ಯೆಹೋವನ ಮೇಲೆ ಪ್ರೀತಿ ಜಾಸ್ತಿ ಆಗ್ತಾ ಹೋದ ಹಾಗೆ ಜನ್ರ ಮೇಲೂ ಪ್ರೀತಿ ಜಾಸ್ತಿ ಆಯ್ತು. ಅವರು ಏನೆಲ್ಲಾ ಕಷ್ಟ ಪಡ್ತಿದ್ದಾರೆ, ಅವ್ರಿಗೆ ಯಾವುದ್ರ ಬಗ್ಗೆ ಮಾತಾಡಿದ್ರೆ ಇಷ್ಟ ಆಗುತ್ತೆ ಅಂತ ಯೋಚ್ನೆ ಮಾಡ್ದೆ. ನಾನು ಅವ್ರ ಬಗ್ಗೆ ಹೀಗೆ ಯೋಚ್ನೆ ಮಾಡ್ತಾ ಮಾಡ್ತಾ ಅವ್ರಿಗೆ ಸಹಾಯ ಮಾಡಬೇಕು ಅನ್ನೋ ಆಸೆನೂ ಜಾಸ್ತಿ ಆಯ್ತು.”—ರೋಮ. 10:13-15.
ಪ್ರೀತಿ ತೋರಿಸೋದ್ರಿಂದ ಸಿಗೋ ಪ್ರಯೋಜನಗಳು
15-16. ಚಿತ್ರದಲ್ಲಿ ನೋಡ್ತಿರೋ ಹಾಗೆ ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ?
15 ನಾವು ಒಬ್ರಿಗೆ ಪ್ರೀತಿ ತೋರಿಸೋದ್ರಿಂದ ತುಂಬ ಜನ ಪ್ರಯೋಜನ ಪಡ್ಕೊತಾರೆ. ಕೋವಿಡ್ ಶುರು ಆದ್ಮೇಲೆ ಸಹೋದರ ಪೌಲೋ ಮತ್ತು ಅವ್ರ ಹೆಂಡತಿ ಹೇಗೆ ಪ್ರೀತಿ ತೋರಿಸಿದ್ರು ನೋಡಿ. ಫೋನಿಂದ ಸಿಹಿಸುದ್ದಿ ಸಾರೋದು ಹೇಗೆ ಅಂತ ಅವರು ವಯಸ್ಸಾದ ಸಹೋದರಿಯರಿಗೆ ಹೇಳಿಕೊಟ್ರು. ಅವ್ರಲ್ಲಿ ಒಬ್ಬ ಸಹೋದರಿಗೆ ‘ಈ ವಯಸ್ಸಲ್ಲಿ ಇದೆಲ್ಲ ಕಲಿಯೋಕಾಗಲ್ಲ’ ಅಂತ ಅನಿಸ್ತು. ಆದ್ರೂ ಆಮೇಲೆ ಅವರು ಕಲಿತ್ರು. ಅವರು ಫೋನಲ್ಲೇ ತುಂಬ ಸಂಬಂಧಿಕರನ್ನ ಕ್ರಿಸ್ತನ ಮರಣದ ಸ್ಮರಣೆಗೆ ಕರೆದ್ರು. ಅವ್ರಲ್ಲಿ 60 ಜನ ವಿಡಿಯೋ ಕಾನ್ಫರೆನ್ಸ್ ಮೂಲಕ ಆ ಕಾರ್ಯಕ್ರಮಕ್ಕೆ ಹಾಜರಾದ್ರು. ಹೀಗೆ ಆ ವಯಸ್ಸಾದ ಸಹೋದರಿ ಅಷ್ಟೇ ಅಲ್ಲ, ಅವ್ರ ಸಂಬಂಧಿಕರೂ ಸಹೋದರ ಪೌಲೋ ಮತ್ತು ಅವ್ರ ಹೆಂಡತಿ ಮಾಡಿದ ಸಹಾಯದಿಂದ ತುಂಬ ಪ್ರಯೋಜನ ಪಡ್ಕೊಂಡ್ರು. ಆ ವಯಸ್ಸಾದ ಸಹೋದರಿ “ನೀವು ನಮಗೆ ಇದನ್ನೆಲ್ಲ ಕಲಿಸಿಕೊಟ್ಟಿದ್ದಕ್ಕೆ ತುಂಬ ಥ್ಯಾಂಕ್ಸ್. ವಯಸ್ಸಾದವ್ರಿಗೆ ಯೆಹೋವ ದೇವರು ಎಷ್ಟು ಕಾಳಜಿ ವಹಿಸ್ತಾರೆ ಅನ್ನೋದು ಇದ್ರಿಂದ ಗೊತ್ತಾಯ್ತು” ಅಂತ ಪೌಲೋಗೆ ಹೇಳಿದ್ರು.
16 ಸಹೋದರ ಪೌಲೋ ಹೀಗೆ ಹೇಳ್ತಾರೆ: “ನಾನು ಸಂಚರಣ ಮೇಲ್ವಿಚಾರಕನಾಗಿದ್ದಾಗ ಎಷ್ಟೋ ಭಾಷಣಗಳನ್ನ ಕೊಟ್ಟಿದ್ದೆ. ನಾನು ಕೊಟ್ಟ ಭಾಷಣ ಸಹೋದರ ಸಹೋದರಿಯರಿಗೆ ನೆನಪಿದ್ಯೋ ಇಲ್ವೋ ಗೊತ್ತಿಲ್ಲ, ಆದ್ರೆ ನಾನು ಮಾಡಿದ ಸಹಾಯನ ಅವ್ರಿನ್ನೂ ಮರೆತಿಲ್ಲ.” ಹಾಗಾಗಿ ಜ್ಞಾನ ಅಥವಾ ಸಾಮರ್ಥ್ಯ ಮುಖ್ಯ ಅಲ್ಲ, ಪ್ರೀತಿ ತೋರಿಸೋದೇ ತುಂಬ ಮುಖ್ಯ ಅಂತ ಅವರು ಅರ್ಥ ಮಾಡ್ಕೊಂಡ್ರು.
17. ಪ್ರೀತಿ ತೋರಿಸೋದ್ರಿಂದ ಇನ್ಯಾರಿಗೆ ಸಹಾಯ ಆಗುತ್ತೆ?
17 ನಾವು ಬೇರೆಯವ್ರಿಗೆ ಪ್ರೀತಿ ತೋರಿಸಿದಾಗ ಅದ್ರಿಂದ ನಮಗೇ ಪ್ರಯೋಜನ ಆಗುತ್ತೆ. ಆ ತರ ಆಗುತ್ತೆ ಅಂತ ನಾವು ಅಂದ್ಕೊಂಡೇ ಇರಲ್ಲ. ನ್ಯೂಜಿಲೆಂಡ್ನಲ್ಲಿರೋ ಸಹೋದರ ಜೊನಾತನ್ಗೆ ಹೀಗೇ ಆಯ್ತು. ಒಂದಿನ ಶನಿವಾರ ಮಧ್ಯಾಹ್ನ ತುಂಬ ಬಿಸಿಲಿತ್ತು. ದಾರೀಲಿ ಒಬ್ಬ ಪಯನೀಯರ್ ಸಹೋದರ ಒಬ್ರೇ ಸೇವೆ ಮಾಡ್ತಿದ್ರು. ಇದನ್ನ ನೋಡಿದಾಗ ಸಹೋದರ ಜೊನಾತನ್, ‘ಇನ್ಮುಂದೆ ಪ್ರತೀ ಶನಿವಾರ ನಾನು ಅವ್ರ ಜೊತೆ ಸೇವೆ ಮಾಡ್ತೀನಿ, ಇದ್ರಿಂದ ಅವ್ರಿಗೆ ತುಂಬ ಸಹಾಯ ಆಗುತ್ತೆ’ ಅಂತ ಅಂದ್ಕೊಂಡ್ರು. ಆದ್ರೆ ಜೊನಾತನ್ಗೇ ಅದ್ರಿಂದ ತುಂಬ ಸಹಾಯ ಆಯ್ತು. ಅದ್ರ ಬಗ್ಗೆ ಜೊನಾತನ್ ಹೀಗೆ ಹೇಳ್ತಾರೆ, “ಮೊದಮೊದ್ಲು ನನಗೆ ಸೇವೆ ಮಾಡೋದಂದ್ರೆ ಇಷ್ಟ ಇರಲಿಲ್ಲ. ಆದ್ರೆ ಆ ಸಹೋದರ ಬೇರೆಯವ್ರಿಗೆ ಕಲಿಸ್ತಿದ್ದ ರೀತಿನ ಅದ್ರಿಂದ ಸಿಕ್ತಿದ್ದ ಪ್ರತಿಫಲನ ನೋಡಿದಾಗ ನಾನೂ ಅವ್ರ ತರ ಹುರುಪಿಂದ ಸೇವೆ ಮಾಡೋಕೆ ಶುರುಮಾಡ್ದೆ. ಅವರು ನನಗೆ ಬೆಸ್ಟ್ಫ್ರೆಂಡ್ ಆದ್ರು. ನಾನು ಸಭೆಲಿ ಪ್ರಗತಿ ಮಾಡೋಕೆ, ಚೆನ್ನಾಗಿ ಸೇವೆ ಮಾಡೋಕೆ, ಯೆಹೋವ ದೇವರಿಗೆ ಹತ್ರ ಆಗೋಕೆ ಅವರು ನನಗೆ ಸಹಾಯ ಮಾಡಿದ್ರು.”
18. ಯೆಹೋವ ನಾವೇನು ಮಾಡಬೇಕಂತ ಇಷ್ಟಪಡ್ತಾನೆ?
18 ಯೆಹೋವನ ಮೇಲೆ ಮತ್ತು ಸಹೋದರ ಸಹೋದರಿಯರ ಮೇಲಿರೋ ಪ್ರೀತಿನ ನಾವು ಜಾಸ್ತಿ ಮಾಡ್ಕೊಬೇಕಂತ ಯೆಹೋವ ಇಷ್ಟಪಡ್ತಾನೆ. ಈಗಾಗ್ಲೇ ಕಲಿತ ಹಾಗೆ ಯೆಹೋವನ ಮೇಲೆ ನಾವು ಪ್ರೀತಿನ ಜಾಸ್ತಿ ಮಾಡ್ಕೊಬೇಕಂದ್ರೆ ಬೈಬಲನ್ನ ಚೆನ್ನಾಗಿ ಓದಬೇಕು, ಓದಿದ ವಿಷ್ಯದ ಬಗ್ಗೆ ಯೋಚಿಸಬೇಕು, ಯಾವಾಗ್ಲೂ ಯೆಹೋವನಿಗೆ ಪ್ರಾರ್ಥನೆ ಮಾಡಬೇಕು. ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಜಾಸ್ತಿಯಾಗಬೇಕಂದ್ರೆ ನಾವು ಅವ್ರಿಗೆ ಸಹಾಯ ಮಾಡಬೇಕು. ಹೀಗೆ ಯೆಹೋವ ದೇವರಿಗೆ ಮತ್ತು ಸಹೋದರ ಸಹೋದರಿಯರಿಗೆ ತುಂಬ ಹತ್ರ ಆಗ್ತೀವಿ. ಈ ಫ್ರೆಂಡ್ಶಿಪ್ ಶಾಶ್ವತವಾಗಿರುತ್ತೆ.
ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ