ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯೆಹೋವನ ಜನರು

ನಾವು ಯೆಹೋವನ ಜನರು

“ಯಾವ ಜನರಿಗೆ ಯೆಹೋವನೇ ದೇವರಾಗಿದ್ದಾನೋ ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು.”—ಕೀರ್ತ. 33:12.

ಗೀತೆಗಳು: 62, 58

1. ಇಡೀ ವಿಶ್ವವೇ ಯೆಹೋವನ ಆಸ್ತಿ ಎಂದು ಹೇಗೆ ಹೇಳಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

ಇಡೀ ವಿಶ್ವವೇ ಯೆಹೋವನ ಸ್ವತ್ತು! “ಉನ್ನತೋನ್ನತವಾದ ಆಕಾಶಮಂಡಲವೂ ಮತ್ತು ಭೂಮಿಯೂ ಅದರಲ್ಲಿರುವ ಎಲ್ಲವೂ” ಯೆಹೋವನ ಆಸ್ತಿ. (ಧರ್ಮೋ. 10:14; ಪ್ರಕ. 4:11) ಯೆಹೋವನು ಮಾನವರನ್ನು ಸೃಷ್ಟಿಮಾಡಿದ್ದರಿಂದ ನಾವು ಕೂಡ ಆತನ ಆಸ್ತಿ ಆಗುತ್ತೇವೆ. (ಕೀರ್ತ. 100:3) ಆದರೆ ಭೂಮಿಯ ಮೇಲೆ ಜೀವಿಸಿದ ಎಲ್ಲಾ ಜನರಲ್ಲಿ ಕೆಲವರನ್ನು ಆತನು ತನ್ನ ವಿಶೇಷ ಸಂಪತ್ತಾಗಿ ಆರಿಸಿಕೊಂಡಿದ್ದಾನೆ.

2. ಬೈಬಲು ಹೇಳುವ ಪ್ರಕಾರ ಯಾರು ಯೆಹೋವನ ವಿಶೇಷ ಆಸ್ತಿ ಆಗಿದ್ದಾರೆ?

2 ಉದಾಹರಣೆಗೆ, 135​ನೇ ಕೀರ್ತನೆ ಪುರಾತನ ಇಸ್ರಾಯೇಲಿನಲ್ಲಿದ್ದ ಯೆಹೋವನ ನಂಬಿಗಸ್ತ ಆರಾಧಕರನ್ನು ಆತನ “ಸ್ವಕೀಯಜನ” ಎಂದು ಕರೆಯಿತು. (ಕೀರ್ತ. 135:4) ಅಷ್ಟೇ ಅಲ್ಲ, ಇಸ್ರಾಯೇಲ್ಯರಲ್ಲದ ಕೆಲವರು ಸಹ ಯೆಹೋವನ ಜನರಾಗುತ್ತಾರೆ ಎಂದು ಹೋಶೇಯನು ಪ್ರವಾದಿಸಿದನು. (ಹೋಶೇ. 2:23) ಸ್ವರ್ಗದಲ್ಲಿ ಯೇಸುವಿನೊಂದಿಗೆ ಆಳಲು ಇಸ್ರಾಯೇಲ್ಯರಲ್ಲದ ಜನರನ್ನು ಯೆಹೋವನು ಆರಿಸಿಕೊಂಡಾಗ ಈ ಪ್ರವಾದನೆ ನೆರವೇರಿತು. (ಅ. ಕಾ. 10:45; ರೋಮ. 9:23-26) ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟವರನ್ನು “ಪವಿತ್ರ ಜನಾಂಗ” ಎಂದು ಕರೆಯಲಾಗುತ್ತದೆ. ಅವರು ಯೆಹೋವನ “ವಿಶೇಷ ಒಡೆತನಕ್ಕಾಗಿರುವ ಜನ” ಆಗಿದ್ದಾರೆ. (1 ಪೇತ್ರ 2:9, 10) ಈ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆ ಇಟ್ಟುಕೊಂಡಿರುವ ನಂಬಿಗಸ್ತ ಕ್ರೈಸ್ತರ ಬಗ್ಗೆ ಏನು? ಯೆಹೋವನು ಅವರನ್ನೂ  “ನನ್ನ ಜನ” ಮತ್ತು “ನನ್ನ ಆಪ್ತರು” ಎಂದು ಕರೆದಿದ್ದಾನೆ.—ಯೆಶಾ. 65:22.

3. (ಎ) ಯೆಹೋವನೊಟ್ಟಿಗೆ ಇಂದು ಯಾರಿಗೆ ವಿಶೇಷವಾದ ಸಂಬಂಧ ಇದೆ? (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

3 ಸ್ವರ್ಗದಲ್ಲಿ ಸದಾಕಾಲ ಜೀವಿಸಲಿರುವ ‘ಚಿಕ್ಕ ಹಿಂಡು’ ಮತ್ತು ಭೂಮಿಯ ಮೇಲೆ ಸದಾಕಾಲ ಜೀವಿಸಲಿರುವ ‘ಬೇರೆ ಕುರಿಗಳು’ ಇಂದು ‘ಒಂದೇ ಹಿಂಡಾಗಿ’ ಯೆಹೋವನನ್ನು ಆರಾಧಿಸುತ್ತಿದ್ದಾರೆ. (ಲೂಕ 12:32; ಯೋಹಾ. 10:16) ನಮಗೆ ಯೆಹೋವನೊಟ್ಟಿಗೆ ವಿಶೇಷವಾದ ಸಂಬಂಧ ಇರುವುದಕ್ಕೆ ನಾವೆಷ್ಟು ಕೃತಜ್ಞರಾಗಿದ್ದೇವೆ ಎಂದು ಆತನಿಗೆ ತೋರಿಸಲು ಬಯಸುತ್ತೇವೆ. ಈ ವಿಶೇಷ ಗೌರವ ನಮಗೆ ಸಿಕ್ಕಿರುವುದಕ್ಕೆ ನಾವು ಯೆಹೋವನಿಗೆ ಹೇಗೆ ಕೃತಜ್ಞತೆ ತೋರಿಸಬಹುದು ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುತ್ತೇವೆ

4. (ಎ) ಯೆಹೋವನೊಟ್ಟಿಗಿರುವ ಸಂಬಂಧವನ್ನು ನಾವು ತುಂಬ ಮಾನ್ಯಮಾಡುತ್ತೇವೆ ಎಂದು ಹೇಗೆ ತೋರಿಸಬಹುದು? (ಬಿ) ಯೇಸು ಇದನ್ನು ಹೇಗೆ ತೋರಿಸಿದನು?

4 ನಾವು ಯೆಹೋವನಿಗೆ ನಮ್ಮ ಜೀವನವನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳುವಾಗ ನಮ್ಮ ಕೃತಜ್ಞತೆಯನ್ನು ತೋರಿಸುತ್ತೇವೆ. ಆಗ ನಾವು ಯೆಹೋವನ ಜನರಲ್ಲಿ ಒಬ್ಬರಾಗಿರಲು ಬಯಸುತ್ತೇವೆ ಮತ್ತು ಆತನ ಮಾತಿಗೆ ಕಿವಿಗೊಡಲು ಇಷ್ಟಪಡುತ್ತೇವೆ ಎಂದು ಎಲ್ಲರಿಗೂ ಗೊತ್ತಾಗುತ್ತದೆ. (ಇಬ್ರಿ. 12:9) ಯೇಸು ದೀಕ್ಷಾಸ್ನಾನ ಪಡಕೊಂಡಾಗ “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷ” ಎಂದು ಹೇಳಿದಂತಿತ್ತು. (ಕೀರ್ತ. 40:7,8) ಆತನು ಯೆಹೋವನಿಗೆ ಸಮರ್ಪಿತವಾಗಿದ್ದ ಜನಾಂಗದಲ್ಲಿ ಹುಟ್ಟಿದ್ದರೂ ಯೆಹೋವನಿಗೆ ತನ್ನನ್ನು ಅರ್ಪಿಸಿಕೊಂಡನು.

5, 6. (ಎ) ಯೇಸು ದೀಕ್ಷಾಸ್ನಾನ ಪಡಕೊಂಡಾಗ ಯೆಹೋವನು ಏನು ಹೇಳಿದನು? (ಬಿ) ಯೆಹೋವನಿಗೆ ನಮ್ಮ ಜೀವನವನ್ನು ಸಮರ್ಪಿಸಿಕೊಂಡಾಗ ಆತನಿಗೆ ಹೇಗನಿಸುತ್ತದೆ ಎಂದು ಅರ್ಥಮಾಡಿಕೊಳ್ಳಲು ಉದಾಹರಣೆ ಕೊಡಿ.

5 ಯೇಸು ದೀಕ್ಷಾಸ್ನಾನ ಪಡಕೊಂಡಾಗ ಯೆಹೋವನಿಗೆ ಹೇಗನಿಸಿತು? ಬೈಬಲ್‌ ಹೇಳುವುದು: ‘ಯೇಸು ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ನೀರಿನಿಂದ ಕೂಡಲೆ ಮೇಲಕ್ಕೆ ಬರಲು, ಇಗೋ! ಆಕಾಶವು ತೆರೆಯಲ್ಪಟ್ಟಿತು ಮತ್ತು ದೇವರಾತ್ಮವು ಪಾರಿವಾಳದ ರೂಪದಲ್ಲಿ ಅವನ ಮೇಲೆ ಇಳಿದುಬಂತು. ಇದಲ್ಲದೆ ಆಕಾಶದಿಂದ ಒಂದು ವಾಣಿಯು, “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಹೇಳಿತು.’ (ಮತ್ತಾ. 3:16, 17) ಯೇಸು ಈಗಾಗಲೇ ಯೆಹೋವನ ಸ್ವತ್ತಾಗಿದ್ದರೂ ತನ್ನ ಇಡೀ ಜೀವನವನ್ನು ಆತನ ಸೇವೆಗಾಗಿ ಉಪಯೋಗಿಸಲು ಮುಂದೆ ಬಂದಾಗ ಯೆಹೋವನಿಗೆ ತುಂಬ ಸಂತೋಷವಾಯಿತು. ನಾವು ಸಹ ಯೆಹೋವನಿಗೆ ನಮ್ಮ ಜೀವನವನ್ನು ಸಮರ್ಪಿಸಿಕೊಂಡರೆ ಆತನಿಗೆ ತುಂಬ ಖುಷಿಯಾಗುತ್ತದೆ. ಆಗ ಆತನು ನಮ್ಮನ್ನು ಆಶೀರ್ವದಿಸುತ್ತಾನೆ.—ಕೀರ್ತ. 149:4.

6 ಆದರೆ ಇರುವುದೆಲ್ಲಾ ಯೆಹೋವನದ್ದೇ ಅಲ್ವಾ? ನಾವು ಆತನಿಗೆ ಏನು ಕೊಡಲಿಕ್ಕಾಗುತ್ತದೆ? ಸುಂದರವಾದ ಹೂದೋಟದ ಮಾಲೀಕನ ಉದಾಹರಣೆ ತೆಗೆದುಕೊಳ್ಳಿ. ಒಂದು ದಿನ ಅವನ ಪುಟ್ಟ ಮಗಳು ತೋಟದಿಂದ ಒಂದು ಹೂವನ್ನು ತಂದು ತನ್ನ ಅಪ್ಪಾಜಿಗೆ ಕೊಡುತ್ತಾಳೆ. ಆ ಹೂವು ಅವನ ತೋಟದ್ದೇ ಆಗಿದ್ದರೂ ತನ್ನ ಮಗಳು ಪ್ರೀತಿಯಿಂದ ಕೊಟ್ಟ ಆ ಉಡುಗೊರೆಯನ್ನು ನೋಡಿ ಅವನಿಗೆ ತುಂಬ ಖುಷಿಯಾಗುತ್ತದೆ. ತನ್ನ ತಂದೆಯ ಮೇಲೆ ಎಷ್ಟು ಪ್ರೀತಿ ಇದೆ ಎಂದು ಆ ಹೂವು ಕೊಡುವ ಮೂಲಕ ಆ ಪುಟಾಣಿ ತೋರಿಸಿದ್ದಾಳೆ. ಆ ತಂದೆಗೆ ತನ್ನ ತೋಟದಲ್ಲಿರುವ ಎಲ್ಲಾ ಹೂವಿಗಿಂತ ತನ್ನ ಮಗಳು ಕೊಟ್ಟ ಹೂವು ತುಂಬ ಅಮೂಲ್ಯ. ಅದೇ ರೀತಿ ನಾವು ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಾಗ ಆತನಿಗೆ ತುಂಬ ಸಂತೋಷವಾಗುತ್ತದೆ.—ವಿಮೋ. 34:14.

7. ಸಂತೋಷದಿಂದ ತನ್ನ ಸೇವೆಮಾಡುವವರ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ ಎಂದು ಅರ್ಥಮಾಡಿಕೊಳ್ಳಲು ಮಲಾಕಿಯನು ಹೇಗೆ ಸಹಾಯ ಮಾಡುತ್ತಾನೆ?

7 ಮಲಾಕಿಯ 3:16 ಓದಿ. ನೀವು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವುದು ಯಾಕಷ್ಟು ಪ್ರಾಮುಖ್ಯ? ನೀವು ಅಸ್ತಿತ್ವಕ್ಕೆ ಬಂದಾಗಿಂದಲೇ ನೀವು ನಿಮ್ಮ ಸೃಷ್ಟಿಕರ್ತನಾದ ಯೆಹೋವನ ಸ್ವತ್ತು ಅನ್ನುವುದು ಸತ್ಯಾನೇ. ಆದರೆ ನೀವು ಯೆಹೋವನನ್ನು ನಿಮ್ಮ ರಾಜನಾಗಿ ಸ್ವೀಕರಿಸಿ ಆತನಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳುವಾಗ ಆತನಿಗೆಷ್ಟು ಸಂತೋಷವಾಗುತ್ತದೆಂದು ಯೋಚಿಸಿ. (ಜ್ಞಾನೋ. 23:15) ಯಾರು ಸಂತೋಷದಿಂದ ತನ್ನ ಸೇವೆಯನ್ನು ಮಾಡುತ್ತಾರೆ ಅನ್ನುವುದು ಯೆಹೋವನಿಗೆ ಗೊತ್ತು. ಆತನು ಇಂಥ ವ್ಯಕ್ತಿಗಳ ಹೆಸರನ್ನು ತನ್ನ “ಜ್ಞಾಪಕದ ಪುಸ್ತಕದಲ್ಲಿ” ಬರೆದಿಡುತ್ತಾನೆ.

8, 9. “ಜ್ಞಾಪಕದ ಪುಸ್ತಕದಲ್ಲಿ” ಯಾರ ಹೆಸರಿದೆಯೋ ಅವರು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

 8 ನಮ್ಮ ಹೆಸರು “ಜ್ಞಾಪಕದ ಪುಸ್ತಕದಲ್ಲಿ” ಉಳಿಯಬೇಕಾದರೆ ನಾವೇನು ಮಾಡಬೇಕೆಂದು ಮಲಾಕಿಯನು ಹೇಳುತ್ತಾನೆ. ಅದೇನೆಂದರೆ, ನಾವು ಯೆಹೋವನಿಗೆ ಭಯಪಟ್ಟು ಆತನ ಹೆಸರನ್ನು ಸ್ಮರಿಸಬೇಕು. ನಾವು ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ದೇವರ ಸ್ಥಾನಕ್ಕೆ ಏರಿಸಿದರೆ ಯೆಹೋವನು ನಮ್ಮ ಹೆಸರನ್ನು ತನ್ನ ಪುಸ್ತಕದಿಂದ ಅಳಿಸಿಬಿಡುತ್ತಾನೆ.—ವಿಮೋ. 32:33; ಕೀರ್ತ. 69:28.

9 ಆದ್ದರಿಂದ ಯೆಹೋವನ ಚಿತ್ತವನ್ನು ಮಾಡುತ್ತೇವೆಂದು ಮಾತು ಕೊಟ್ಟು ದೀಕ್ಷಾಸ್ನಾನ ಪಡಕೊಂಡರೆ ಸಾಕಾಗುವುದಿಲ್ಲ. ಇದನ್ನು ನಾವು ಜೀವನದಲ್ಲಿ ಒಂದೇ ಸಾರಿ ಮಾಡುತ್ತೇವೆ. ಆದರೆ ಯೆಹೋವನ ಆರಾಧನೆಯನ್ನು ಜೀವನಪೂರ್ತಿ ಮಾಡಬೇಕು. ನಾವು ಜೀವಂತವಿರುವ ಪ್ರತಿ ದಿನ, ಪ್ರತಿ ಕ್ಷಣ ಯೆಹೋವನ ಮಾತಿನಂತೆ ನಡೆಯಲು ಇಷ್ಟಪಡುತ್ತೇವೆ ಎಂದು ರುಜುಪಡಿಸಬೇಕು.—1 ಪೇತ್ರ 4:1, 2.

ಲೌಕಿಕ ಆಸೆಗಳನ್ನು ತ್ಯಜಿಸುತ್ತೇವೆ

10. ಯೆಹೋವನನ್ನು ಸೇವಿಸುವವರ ಮತ್ತು ಸೇವಿಸದವರ ಮಧ್ಯೆ ಯಾವ ವ್ಯತ್ಯಾಸ ಎದ್ದುಕಾಣಬೇಕು?

10 ನಾವು ಹಿಂದಿನ ಲೇಖನದಲ್ಲಿ ಕಾಯಿನ, ಸೊಲೊಮೋನ ಮತ್ತು ಇಸ್ರಾಯೇಲ್ಯರು ಮಾಡಿದ ತಪ್ಪಿನ ಬಗ್ಗೆ ಓದಿದೆವು. ಅವರು ಯೆಹೋವನ ಆರಾಧಕರೆಂದು ಹೇಳಿಕೊಳ್ಳುತ್ತಿದ್ದರೂ ನಿಷ್ಠಾವಂತರಾಗಿ ಇರಲಿಲ್ಲ. ಆದ್ದರಿಂದ ನಾವು ಯೆಹೋವನ ಆರಾಧಕರೆಂದು ಹೇಳಿಕೊಂಡರೆ ಸಾಕಾಗುವುದಿಲ್ಲ, ಕೆಟ್ಟದ್ದನ್ನು ದ್ವೇಷಿಸಬೇಕು, ಒಳ್ಳೇದನ್ನು ಪ್ರೀತಿಸಬೇಕು ಎಂದು ಕಲಿತೆವು. (ರೋಮ. 12:9) ಸೂಕ್ತವಾಗಿಯೇ “ಜ್ಞಾಪಕದ ಪುಸ್ತಕದ” ಬಗ್ಗೆ ಮಲಾಕಿಯನು ಮಾತಾಡಿದ ಮೇಲೆ ‘ಶಿಷ್ಟರು ಮತ್ತು ದುಷ್ಟರು, ದೇವರನ್ನು ಸೇವಿಸುವವರು ಮತ್ತು ಸೇವಿಸದವರ’ ಮಧ್ಯೆ ಇರಬೇಕಾದ ವ್ಯತ್ಯಾಸದ ಬಗ್ಗೆ ಯೆಹೋವನು ಮಾತಾಡುತ್ತಾನೆ.—ಮಲಾ. 3:18.

11. ನಾವು ಯೆಹೋವನಿಗೆ ಯಾವಾಗಲೂ ನಂಬಿಗಸ್ತರಾಗಿ ಇರುತ್ತೇವೆಂದು ಬೇರೆಯವರಿಗೆ ಯಾಕೆ ಗೊತ್ತಾಗಬೇಕು?

11 ಯೆಹೋವನು ನಮ್ಮನ್ನು ತನ್ನ ಆಸ್ತಿಯಾಗಿ ಆರಿಸಿಕೊಂಡಿರುವುದಕ್ಕೆ ನಾವು ಕೃತಜ್ಞತೆ ತೋರಿಸುವ ಇನ್ನೊಂದು ವಿಧ ಇಲ್ಲಿದೆ. ನಮ್ಮ ಆಧ್ಯಾತ್ಮಿಕ ಪ್ರಗತಿ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಬೇಕು. (ಮತ್ತಾ. 5:16; 1 ತಿಮೊ. 4:15) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ಯೆಹೋವನಿಗೆ ಯಾವಾಗಲೂ ನಂಬಿಗಸ್ತನಾಗಿ ಇರುತ್ತೇನೆ ಎಂದು ಬೇರೆಯವರಿಗೆ ಗೊತ್ತಾ? ನಾನೊಬ್ಬ ಯೆಹೋವನ ಸಾಕ್ಷಿ ಎಂದು ಹೇಳಲು ಹೆಮ್ಮೆಪಡುತ್ತೇನಾ?’ ಯೆಹೋವನು ನಮ್ಮನ್ನು ತನ್ನವರೆಂದು ಆರಿಸಿಕೊಂಡ ಮೇಲೆ, ನಾವು ಯೆಹೋವನಿಗೆ ಸೇರಿದವರೆಂದು ಹೇಳಿಕೊಳ್ಳಲು ಹಿಂಜರಿಯುವುದಾದರೆ ಆತನಿಗೆ ತುಂಬ ನೋವಾಗುತ್ತದೆ.—ಕೀರ್ತ. 119:46; ಮಾರ್ಕ 8:38 ಓದಿ.

ನಿಮ್ಮ ಜೀವನ ರೀತಿ ನೀವೊಬ್ಬ ಯೆಹೋವನ ಸಾಕ್ಷಿ ಎಂದು ತೋರಿಸುವ ರೀತಿಯಲ್ಲಿದೆಯಾ? (ಪ್ಯಾರ 12, 13 ನೋಡಿ)

12, 13. ಕೆಲವರು ಹೇಗೆ ಯೆಹೋವನ ಸಾಕ್ಷಿಗಳಿಗೆ ಯೋಗ್ಯವಲ್ಲದ ರೀತಿಯಲ್ಲಿ ನಡಕೊಂಡಿದ್ದಾರೆ?

 12 ದುಃಖಕರ ವಿಷಯವೇನೆಂದರೆ, ಯೆಹೋವನ ಸಾಕ್ಷಿಗಳಲ್ಲಿ ಕೆಲವರು ‘ಲೋಕದ ಮನೋಭಾವವನ್ನು’ ತೋರಿಸುತ್ತಾರೆ. ಇದರಿಂದಾಗಿ ಅವರ ಮಧ್ಯೆ ಮತ್ತು ಲೋಕದ ಜನರ ಮಧ್ಯೆ ಹೆಚ್ಚೇನು ವ್ಯತ್ಯಾಸ ಕಾಣುವುದಿಲ್ಲ. (1 ಕೊರಿಂ. 2:12) “ಲೋಕದ ಮನೋಭಾವ” ಇರುವ ವ್ಯಕ್ತಿ ತನ್ನ ಸ್ವಂತ ಆಸೆಗಳನ್ನು ಪೂರೈಸಿಕೊಳ್ಳುವುದರ ಬಗ್ಗೆನೇ ಯೋಚಿಸುತ್ತಾ ಇರುತ್ತಾನೆ. (ಎಫೆ. 2:3) ಉದಾಹರಣೆಗೆ, ಯಾವ ರೀತಿಯ ಬಟ್ಟೆ ಹಾಕಬೇಕೆಂಬುದರ ಬಗ್ಗೆ ತುಂಬ ಸಲ ಸಲಹೆ ಸಿಕ್ಕಿರುವುದಾದರೂ ಕೆಲವರು ಮರ್ಯಾದೆಗೆ ತಕ್ಕ ಉಡುಪನ್ನು ಹಾಕುವುದಿಲ್ಲ. ತುಂಬ ಬಿಗಿಯಾಗಿರುವ ಅಥವಾ ಮೈಕಾಣಿಸುವಂಥ ಬಟ್ಟೆಗಳನ್ನು ಕ್ರೈಸ್ತರು ಆರಾಧನೆಗೆಂದು ಸೇರಿಬರುವಾಗಲೂ ಹಾಕುತ್ತಾರೆ. ಅವರ ಕೇಶಶೈಲಿ ವಿಚಿತ್ರವಾಗಿ ಇರುತ್ತದೆ. (1 ತಿಮೊ. 2:9, 10) ಆದ್ದರಿಂದಲೇ ಅವರನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಲು ಬೇರೆಯವರಿಗೆ ಕಷ್ಟವಾಗುತ್ತದೆ.—ಯಾಕೋ. 4:4.

13 ಯೆಹೋವನ ಸಾಕ್ಷಿಗಳಲ್ಲಿ ಕೆಲವರು ಬೇರೆ ಕೆಲವು ವಿಧಗಳಲ್ಲಿ ತಾವು ಲೋಕದವರಿಗಿಂತ ಅಷ್ಟೇನು ಭಿನ್ನರಲ್ಲ ಎನ್ನುವ ರೀತಿಯಲ್ಲಿ ನಡಕೊಂಡಿದ್ದಾರೆ. ಉದಾಹರಣೆಗೆ, ಪಾರ್ಟಿಗಳಲ್ಲಿ ಕೆಲವರು ಡ್ಯಾನ್ಸ್‌ ಮಾಡಿರುವುದು ಮತ್ತು ನಡಕೊಂಡಿರುವುದು ಕ್ರೈಸ್ತರಿಗೆ ಯೋಗ್ಯವಾದ ರೀತಿಯಲ್ಲಿಲ್ಲ. ಇನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳನ್ನು ಮತ್ತು ಹೇಳಿಕೆಗಳನ್ನು ಹಾಕಿರುವ ರೀತಿ ಅವರ ಶಾರೀರಿಕ ಯೋಚನೆಯನ್ನು ತೋರಿಸುತ್ತದೆ. ಗಂಭೀರ ತಪ್ಪು ಮಾಡಿದ ವ್ಯಕ್ತಿಗಳಿಗೆ ಸಿಗುವ ತರ ಇವರಿಗೆ ಕ್ರೈಸ್ತ ಸಭೆಯಿಂದ ಶಿಸ್ತು ಸಿಗದೇ ಇರಬಹುದು. ಆದರೆ ಲೋಕದವರಿಗಿಂತ ಭಿನ್ನವಾಗಿರಲು ತುಂಬ ಪ್ರಯಾಸಪಡುತ್ತಿರುವ ಸಹೋದರ ಸಹೋದರಿಯರ ಮೇಲೆ ಇಂಥವರು ಕೆಟ್ಟ ಪ್ರಭಾವ ಬೀರುತ್ತಾರೆ.—1 ಪೇತ್ರ 2:11, 12 ಓದಿ.

ತಾವು ಯೆಹೋವನ ಜನರು ಎಂದು ಸ್ಪಷ್ಟವಾಗಿ ತೋರಿಸಿಕೊಡದವರ ಪ್ರಭಾವಕ್ಕೆ ಒಳಗಾಗಬೇಡಿ

14. ಯೆಹೋವನ ಜೊತೆ ನಮಗಿರುವ ವಿಶೇಷ ಸಂಬಂಧವನ್ನು ಕಾಪಾಡಿಕೊಳ್ಳಲು ನಾವೇನು ಮಾಡಬೇಕು?

14 ಈ ಲೋಕದಲ್ಲಿರುವ ಎಲ್ಲ ವಿಷಯಗಳೂ ‘ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನವನ್ನು’ ಪ್ರೋತ್ಸಾಹಿಸುತ್ತದೆ. (1 ಯೋಹಾ. 2:16) ಆದರೆ ನಾವು ಯೆಹೋವನ ಜನ, ಲೋಕದವರಿಗಿಂತ ಭಿನ್ನ. ನಾವು “ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸ್ವಸ್ಥಬುದ್ಧಿಯಿಂದಲೂ ನೀತಿಯಿಂದಲೂ ದೇವಭಕ್ತಿಯಿಂದಲೂ” ಜೀವಿಸಬೇಕೆಂಬ ಪ್ರೋತ್ಸಾಹ ನಮಗೆ ಕೊಡಲಾಗಿದೆ. (ತೀತ 2:12) ನಮ್ಮ ಇಡೀ ಜೀವನ ರೀತಿ ಅಂದರೆ ನಾವು ಮಾತಾಡುವ, ತಿನ್ನುವ, ಕುಡಿಯುವ, ಬಟ್ಟೆ ಧರಿಸುವ, ಕೆಲಸ ಮಾಡುವ ರೀತಿ ನಾವು ಯೆಹೋವ ದೇವರಿಗೆ ಸೇರಿದವರೆಂದು ಎಲ್ಲರಿಗೂ ಸ್ಪಷ್ಟವಾಗುವಂತಿರಬೇಕು.—1 ಕೊರಿಂಥ 10:31, 32 ಓದಿ.

 ನಾವು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತೇವೆ

15. ನಾವು ಯಾಕೆ ನಮ್ಮ ಸಹೋದರ ಸಹೋದರಿಯರೊಂದಿಗೆ ಪ್ರೀತಿ, ದಯೆಯಿಂದ ನಡಕೊಳ್ಳಬೇಕು?

15 ನಾವು ನಮ್ಮ ಸಹೋದರ ಸಹೋದರಿಯರೊಂದಿಗೆ ನಡಕೊಳ್ಳುವ ರೀತಿಯಿಂದ ಯೆಹೋವನ ಸಂಬಂಧವನ್ನು ಮಾನ್ಯಮಾಡುತ್ತೇವೆಂದು ತೋರಿಸುತ್ತೇವೆ. ನಮ್ಮಂತೆ ಅವರು ಸಹ ಯೆಹೋವನ ಸ್ವತ್ತು. ಇದನ್ನು ಮನಸ್ಸಲ್ಲಿಟ್ಟುಕೊಂಡರೆ ನಾವು ಅವರೊಂದಿಗೆ ಪ್ರೀತಿ, ದಯೆಯಿಂದ ನಡಕೊಳ್ಳುತ್ತೇವೆ. (1 ಥೆಸ. 5:15) ಯೇಸು ತನ್ನ ಹಿಂಬಾಲಕರಿಗೆ ಹೀಗಂದನು: “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.”—ಯೋಹಾ. 13:35.

16. ಯೆಹೋವನಿಗೆ ತನ್ನ ಜನರ ಮೇಲಿರುವ ಪ್ರೀತಿಯ ಬಗ್ಗೆ ಮೋಶೆಯ ಧರ್ಮಶಾಸ್ತ್ರದಿಂದ ನಾವೇನು ಕಲಿಯಬಹುದು?

16 ಮೋಶೆಯ ಧರ್ಮಶಾಸ್ತ್ರದಿಂದ ಒಂದು ಉದಾಹರಣೆ ನೋಡೋಣ. ನಾವು ನಮ್ಮ ಸಭೆಯಲ್ಲಿರುವವರ ಜೊತೆ ಹೇಗೆ ನಡಕೊಳ್ಳಬೇಕೆಂದು ಇದರಿಂದ ಗೊತ್ತಾಗುತ್ತದೆ. ಯೆಹೋವನ ಆಲಯದಲ್ಲಿ ದೇವರ ಆರಾಧನೆಗೆಂದು ಮೀಸಲಾಗಿಟ್ಟಿದ್ದ ಪಾತ್ರೆಗಳು ಇದ್ದವು. ಲೇವಿಯರು ಈ ಪಾತ್ರೆಗಳನ್ನು ಹೇಗೆ ಬಳಸಬೇಕೆಂದು ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಯಾರಾದರೂ ಆ ನಿರ್ದೇಶನಗಳನ್ನು ಪಾಲಿಸದೆ ಹೋದರೆ ಅವರನ್ನು ಕೊಲ್ಲಬೇಕಾಗಿತ್ತು. (ಅರ. 1:50, 51) ಯೆಹೋವನು ತನ್ನ ಆರಾಧನೆಯಲ್ಲಿ ಬಳಸುತ್ತಿದ್ದ ಪಾತ್ರೆಗಳ ಬಗ್ಗೆನೇ ಇಷ್ಟು ಜಾಗ್ರತೆ ವಹಿಸುತ್ತಾನಾದರೆ ತನ್ನ ಸಮರ್ಪಿತ ನಿಷ್ಠಾವಂತ ಆರಾಧಕರ ಬಗ್ಗೆ ಇನ್ನೆಷ್ಟು ಜಾಗ್ರತೆ ವಹಿಸುವನಲ್ಲವೇ? “ನಿಮ್ಮನ್ನು ತಾಕುವವನು ಯೆಹೋವನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ” ಎಂದು ಬೈಬಲ್‌ ಹೇಳುತ್ತದೆ. ನಾವು ಯೆಹೋವನ ದೃಷ್ಟಿಯಲ್ಲಿ ಅಷ್ಟು ಅಮೂಲ್ಯ!—ಜೆಕ. 2:8.

17. ಯೆಹೋವನು ಯಾವುದನ್ನು ‘ಕಿವಿಗೊಟ್ಟು ಆಲಿಸುತ್ತಾನೆ’?

17 ತನ್ನ ಜನರು ಒಬ್ಬರೊಂದಿಗೆ ಒಬ್ಬರು ಹೇಗೆ ಮಾತಾಡುತ್ತಾರೆ ಎಂದು ಯೆಹೋವನು ‘ಕಿವಿಗೊಟ್ಟು ಆಲಿಸುತ್ತಾನೆ.’ (ಮಲಾ. 3:16) ಯೆಹೋವನಿಗೆ ‘ತನ್ನವರು ಯಾರೆಂದು’ ಚೆನ್ನಾಗಿ ಗೊತ್ತಿದೆ. (2 ತಿಮೊ. 2:19) ನಾವೇನು ಮಾಡುತ್ತೇವೆ, ಮಾತಾಡುತ್ತೇವೆ ಅನ್ನುವುದು ಆತನಿಗೆ ಚೆನ್ನಾಗಿ ಗೊತ್ತು. (ಇಬ್ರಿ. 4:13) ನಾವು ನಮ್ಮ ಸಹೋದರ ಸಹೋದರಿಯರ ಜೊತೆ ನಿರ್ದಯವಾಗಿ ನಡಕೊಂಡರೆ ಯೆಹೋವನು ಅದನ್ನು ನೋಡುತ್ತಾನೆ. ನಾವು ಅತಿಥಿಸತ್ಕಾರ, ಉದಾರತೆ, ದಯೆ ತೋರಿಸಿದರೆ ಮತ್ತು ಬೇರೆಯವರನ್ನು ಕ್ಷಮಿಸಿದರೆ ಅದನ್ನೂ ನೋಡುತ್ತಾನೆ.—ಇಬ್ರಿ. 13:16; 1 ಪೇತ್ರ 4:8, 9.

ಯೆಹೋವನು ತನ್ನ ಜನರ ಕೈಬಿಡುವುದಿಲ್ಲ

18. ಯೆಹೋವನು ನಮ್ಮನ್ನು ತನ್ನ ಜನರಾಗಿ ಆರಿಸಿರುವುದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

18 ಯೆಹೋವನು ನಮ್ಮನ್ನು ತನ್ನ ಜನರಾಗಿ ಆರಿಸಿಕೊಂಡಿರುವುದಕ್ಕೆ ನಾವೆಷ್ಟು ಕೃತಜ್ಞರು ಎಂದು ತೋರಿಸಲು ಬಯಸುತ್ತೇವೆ. ನಾವು ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡದ್ದು ಬುದ್ಧಿವಂತಿಕೆಯ ಕೆಲಸವಾಗಿತ್ತು. “ವಿಕೃತವಾದ ಮತ್ತು ವಕ್ರವಾದ ಸಂತತಿಯ ಮಧ್ಯೆ” ನಾವು ಜೀವಿಸುತ್ತಿರುವುದಾದರೂ “ನಿರ್ದೋಷಿಗಳೂ ನಿರಪರಾಧಿಗಳೂ” ಆಗಿದ್ದು “ಲೋಕದಲ್ಲಿ ಬೆಳಕು ಕೊಡುವ ವ್ಯಕ್ತಿಗಳಂತೆ” ಹೊಳೆಯಬಹುದು. (ಫಿಲಿ. 2:15) ಯೆಹೋವನಿಗೆ ಇಷ್ಟವಾಗದ ಯಾವ ವಿಷಯವನ್ನೂ ನಾವು ಮಾಡುವುದಿಲ್ಲ ಎಂದು ದೃಢಮನಸ್ಸು ಮಾಡಿದ್ದೇವೆ. (ಯಾಕೋ. 4:7) ನಮ್ಮ ಸಹೋದರ ಸಹೋದರಿಯರನ್ನು ಪ್ರೀತಿಸಿ ಗೌರವಿಸುತ್ತೇವೆ. ಯಾಕೆಂದರೆ ಅವರು ಸಹ ಯೆಹೋವನ ಆಸ್ತಿ ಆಗಿದ್ದಾರೆ.—ರೋಮ. 12:10.

19. ಯೆಹೋವನು ತನ್ನ ಜನರನ್ನು ಹೇಗೆ ಆಶೀರ್ವದಿಸುತ್ತಾನೆ?

19 ಯೆಹೋವನು ತನ್ನ ಜನರ ಕೈಬಿಡುವುದಿಲ್ಲ ಎಂದು ಬೈಬಲ್‌ ಹೇಳುತ್ತದೆ. (ಕೀರ್ತ. 94:14) ಏನೇ ಆದರೂ ಈ ಮಾತು ಸುಳ್ಳಾಗಲ್ಲ. ನಾವು ಸತ್ತು ಮಣ್ಣಾದರೂ ಯೆಹೋವನು ನಮ್ಮನ್ನು ಮರೆಯಲ್ಲ. (ರೋಮ. 8:38, 39) “ನಾವು ಜೀವಿಸಿದರೆ ಯೆಹೋವನಿಗಾಗಿ ಜೀವಿಸುತ್ತೇವೆ, ಸತ್ತರೆ ಯೆಹೋವನಿಗಾಗಿ ಸಾಯುತ್ತೇವೆ. ಆದುದರಿಂದ ನಾವು ಜೀವಿಸಿದರೂ ಸತ್ತರೂ ಯೆಹೋವನವರೇ.” (ರೋಮ. 14:8) ಸತ್ತುಹೋಗಿರುವ ತನ್ನ ನಿಷ್ಠಾವಂತ ಸ್ನೇಹಿತರನ್ನೆಲ್ಲ ಯೆಹೋವನು ಪುನಃ ಜೀವಂತವಾಗಿ ಎಬ್ಬಿಸುವ ಸಮಯಕ್ಕಾಗಿ ನಾವು ಎದುರುನೋಡುತ್ತಿದ್ದೇವೆ. (ಮತ್ತಾ. 22:32) ಈಗ ಸಹ ನಾವು ನಮ್ಮ ಸ್ವರ್ಗೀಯ ತಂದೆಯಿಂದ ಅನೇಕ ಆಶೀರ್ವಾದಗಳನ್ನು ಪಡೆಯುತ್ತೇವೆ. “ಯಾವ ಜನರಿಗೆ ಯೆಹೋವನೇ ದೇವರಾಗಿದ್ದಾನೋ ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು” ಎಂದು ಬೈಬಲ್‌ ಹೇಳುತ್ತದೆ.—ಕೀರ್ತ. 33:12.