ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಲಿಸ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಟರ್ಕಿಯಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಟರ್ಕಿಯಲ್ಲಿ

ಒಂದನೇ ಶತಮಾನದ ಕ್ರೈಸ್ತರು ತಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಜನರಿಗೆ ‘ರಾಜ್ಯದ ಸುವಾರ್ತೆಯನ್ನು’ ಸಾರಲು ತುಂಬ ಪ್ರಯತ್ನ ಮಾಡಿದರು. (ಮತ್ತಾ. 24:14) ಅದಕ್ಕಾಗಿ ಕೆಲವರು ಬೇರೆ ದೇಶಗಳಿಗೂ ಹೋದರು. ಉದಾಹರಣೆಗೆ, ಅಪೊಸ್ತಲ ಪೌಲನು ಹೋಗಿದ್ದ ಒಂದು ಪ್ರದೇಶ, ಇಂದಿನ ಟರ್ಕಿ ದೇಶ ಆಗಿತ್ತು. ಅಲ್ಲಿ ಅವನು ಮಿಷನರಿಯಾಗಿ ಹೋಗಿ ಎಲ್ಲಾ ಕಡೆ ಸುವಾರ್ತೆ ಸಾರಿದನು. * ಇದಾಗಿ ಸುಮಾರು 2,000 ವರ್ಷಗಳ ನಂತರ ಅಂದರೆ 2014ರಲ್ಲಿ ಅಲ್ಲಿ ಮತ್ತೊಮ್ಮೆ ಒಂದು ವಿಶೇಷ ಸಾರುವಿಕೆಯ ಅಭಿಯಾನ ನಡೆಯಿತು. ಈ ಅಭಿಯಾನವನ್ನು ಯಾಕೆ ಆಯೋಜಿಸಲಾಯಿತು? ಅದರಲ್ಲಿ ಯಾರೆಲ್ಲ ಭಾಗವಹಿಸಿದರು?

“ಏನು ನಡಿತಾ ಇದೆ?”

ಟರ್ಕಿಯಲ್ಲಿ 2,800ಕ್ಕೂ ಹೆಚ್ಚು ಪ್ರಚಾರಕರಿದ್ದಾರೆ. ಆದರೆ ಆ ದೇಶದ ಜನಸಂಖ್ಯೆ 8 ಕೋಟಿಯಷ್ಟಿದೆ! ಅಂದರೆ ಟರ್ಕಿಯಲ್ಲಿರುವ ಒಬ್ಬ ಪ್ರಚಾರಕ 28,000 ಜನರಿಗೆ ಸುವಾರ್ತೆ ಸಾರಬೇಕಿದೆ. ಪ್ರಚಾರಕರು ಆ ದೇಶದಲ್ಲಿರುವ ಸ್ವಲ್ಪ ಜನರಿಗೆ ಮಾತ್ರ ಸಾರಲು ಸಾಧ್ಯವಾಗಿದೆ. ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಾರುವುದೇ ಈ ವಿಶೇಷ ಅಭಿಯಾನದ ಉದ್ದೇಶವಾಗಿತ್ತು. ಬೇರೆ ಬೇರೆ ದೇಶಗಳಿಂದ ಟರ್ಕಿಶ್‌ ಭಾಷೆ ಮಾತಾಡುವ ಸುಮಾರು 550 ಸಹೋದರ ಸಹೋದರಿಯರು ಟರ್ಕಿಗೆ ಬಂದು ಅಲ್ಲಿರುವ ಪ್ರಚಾರಕರ ಜೊತೆ ಅಭಿಯಾನದಲ್ಲಿ ಭಾಗವಹಿಸಿದರು. ಇದರ ಫಲಿತಾಂಶವೇನು?

ದೇಶದ ಎಲ್ಲಾ ಕಡೆ ಸಾಕ್ಷಿ ಕೊಡಲಾಯಿತು. ಇಸ್ತಾಂಬುಲ್‌ನಲ್ಲಿರುವ ಒಂದು ಸಭೆಯವರು ಹೀಗೆ ಬರೆದರು: “ಜನರು ನಮ್ಮನ್ನು ನೋಡಿದಾಗ ‘ವಿಶೇಷ ಅಧಿವೇಶನ ಏನಾದ್ರೂ ಇದೆಯಾ? ಎಲ್ಲಿ ನೋಡಿದರೂ ಯೆಹೋವನ ಸಾಕ್ಷಿಗಳೇ ಕಾಣಿಸ್ತಾರೆ!’ ಎಂದು ಹೇಳಿದರು.” ಇಸ್ಮೀರ್‌ ನಗರದ ಒಂದು ಸಭೆಯವರು ಹೀಗೆ ಬರೆದರು: “ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಒಬ್ಬ ಸ್ಥಳೀಯ ಹಿರಿಯನ ಹತ್ತಿರ ಬಂದು ‘ಏನು ನಡಿತಾ ಇದೆ? ನಿಮ್ಮ ಕೆಲಸ ಜಾಸ್ತಿ ಮಾಡಿದ್ದೀರಾ?’ ಎಂದು ಕೇಳಿದ.” ಈ ಅಭಿಯಾನ ಎಲ್ಲರ ಗಮನ ಸೆಳೆಯಿತು.

ಸ್ಟೆಫನ್‌

ಬೇರೆ ದೇಶಗಳಿಂದ ಬಂದ ಪ್ರಚಾರಕರು ಸಾರುವ ಕೆಲಸ ಮಾಡಿ ತುಂಬ ಖುಷಿಪಟ್ಟರು. ಡೆನ್ಮಾರ್ಕ್‌ನಿಂದ ಬಂದ ಸ್ಟೆಫನ್‌ ಹೇಳಿದ್ದು: “ಯೆಹೋವನ ಬಗ್ಗೆ ಇದು ವರೆಗೂ ಏನೂ ಕೇಳಿಸಿಕೊಂಡಿರದ ಜನ ನಮಗೆ ಪ್ರತಿ ದಿನ ಸಿಕ್ಕಿದರು. ಇದರಿಂದಾಗಿ ಯೆಹೋವನ ಹೆಸರನ್ನು ನಿಜವಾಗಲೂ ತಿಳಿಯಪಡಿಸುತ್ತಿದ್ದೇನೆ ಎಂದನಿಸಿತು.” ಫ್ರಾನ್ಸ್‌ಶಾನ್‌-ಡಾವೀಡ್‌ ಬರೆದದ್ದೇನೆಂದರೆ: “ನಾವು ಒಂದೇ ಬೀದಿಯಲ್ಲಿ ಗಂಟೆಗಟ್ಟಲೆ ಸಾರುತ್ತಿದ್ವಿ. ತುಂಬ ಚೆನ್ನಾಗಿತ್ತು! ಹೆಚ್ಚಿನ ಜನರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಗೊತ್ತಿರಲಿಲ್ಲ. ಹೆಚ್ಚುಕಡಿಮೆ ಎಲ್ಲ ಮನೆಯವರ ಹತ್ತಿರನೂ ಮಾತಾಡಿದ್ವಿ, ವಿಡಿಯೊ ತೋರಿಸಿದ್ವಿ, ಸಾಹಿತ್ಯ ಕೊಟ್ವಿ.”

ಶಾನ್‌-ಡಾವೀಡ್‌ (ಮಧ್ಯೆ)

ಈ 550 ಪ್ರಚಾರಕರು ಬರೀ ಎರಡೇ ವಾರಗಳಲ್ಲಿ ಸುಮಾರು 60,000 ಪ್ರಕಾಶನಗಳನ್ನು ಕೊಟ್ಟರು! ನಿಜಕ್ಕೂ ಈ ಅಭಿಯಾನದಿಂದಾಗಿ ಎಲ್ಲಾ ಕಡೆ ಸಾಕ್ಷಿ ಕೊಡಲು ಸಾಧ್ಯವಾಯಿತು.

 ಸುವಾರ್ತೆ ಸಾರುವ ಹುರುಪು ಹೆಚ್ಚಾಯಿತು. ಈ ಅಭಿಯಾನ ಸ್ಥಳೀಯ ಸಹೋದರ ಸಹೋದರಿಯರ ಮೇಲೆ ತುಂಬ ಪರಿಣಾಮ ಬೀರಿತು. ಅನೇಕರು ಪೂರ್ಣ ಸಮಯದ ಸೇವೆಯ ಬಗ್ಗೆ ಯೋಚಿಸಲು ಆರಂಭಿಸಿದರು. ಈ ಅಭಿಯಾನ ಮುಗಿದು 12 ತಿಂಗಳಲ್ಲಿ ಟರ್ಕಿಯಲ್ಲಿರುವ ಪಯನೀಯರರ ಸಂಖ್ಯೆ ಶೇಕಡ 24ರಷ್ಟು ಹೆಚ್ಚಾಯಿತು.

ಶೀರನ್‌

ಬೇರೆ ದೇಶಗಳಿಂದ ಬಂದ ಪ್ರಚಾರಕರು ಅಭಿಯಾನ ಮುಗಿಸಿ ತಮ್ಮ ದೇಶಗಳಿಗೆ ಹೋದ ಮೇಲೆ ಈ ಅಭಿಯಾನದಿಂದಾಗಿ ತಮ್ಮ ಸೇವೆಯ ಮೇಲೆ ಯಾವ ಪರಿಣಾಮ ಆಗಿದೆ ಎಂದು ತಿಳಿಸಿದರು. ಜರ್ಮನಿಶೀರನ್‌ ಎಂಬ ಸಹೋದರಿ ಬರೆದದ್ದು: “ಟರ್ಕಿಯಲ್ಲಿರುವ ಸಹೋದರರು ಆರಾಮವಾಗಿ ಅನೌಪಚಾರಿಕ ಸಾಕ್ಷಿ ಕೊಡುತ್ತಾರೆ. ಆದರೆ ನನಗೆ ನಾಚಿಕೆ ಜಾಸ್ತಿ, ಅನೌಪಚಾರಿಕವಾಗಿ ಸಾಕ್ಷಿ ಕೊಡಲು ತುಂಬ ಹಿಂಜರಿಯುತ್ತಿದ್ದೆ. ಈ ವಿಶೇಷ ಅಭಿಯಾನದಲ್ಲಿ ಭಾಗವಹಿಸಿದ್ದರಿಂದ, ಅಲ್ಲಿನ ಸಹೋದರ ಸಹೋದರಿಯರ ಜೊತೆ ಸೇವೆಮಾಡಿದ್ದರಿಂದ ಮತ್ತು ನಾನು ತುಂಬ ಪ್ರಾರ್ಥನೆ ಮಾಡಿದ್ದರಿಂದ ಅನೌಪಚಾರಿಕ ಸಾಕ್ಷಿ ಕೊಡಲು ಸಾಧ್ಯವಾಗಿದೆ. ಸುರಂಗ ರೈಲಿನಲ್ಲೂ ಸಾರಿದೆ, ಕರಪತ್ರಗಳನ್ನು ಕೊಟ್ಟೆ! ನನಗೀಗ ಮುಂಚಿನಷ್ಟು ನಾಚಿಕೆ ಆಗುವುದಿಲ್ಲ.”

ಯೊಹಾನಸ್‌

“ನಾನು ಮಾಡಿದ ಸೇವೆಯಿಂದ ಕೆಲವು ಪಾಠಗಳನ್ನು ಕಲಿತೆ” ಎನ್ನುತ್ತಾರೆ ಜರ್ಮನಿಯಿಂದ ಬಂದಿದ್ದ ಯೊಹಾನಸ್‌. ಅವರು ಹೇಳಿದ್ದು: “ಟರ್ಕಿಯಲ್ಲಿರುವ ಸಹೋದರರು ತಮ್ಮಿಂದಾದಷ್ಟು ಹೆಚ್ಚು ಜನರಿಗೆ ಸತ್ಯ ತಿಳಿಸಲು ಪ್ರಯತ್ನಿಸುತ್ತಾರೆ. ಸಾಕ್ಷಿ ಕೊಡಲು ಅವರಿಗೆ ಸಿಗುತ್ತಿದ್ದ ಒಂದು ಅವಕಾಶವನ್ನೂ ಅವರು ಬಿಡುತ್ತಿರಲಿಲ್ಲ. ನಾನು ಜರ್ಮನಿಗೆ ವಾಪಸ್ಸು ಹೋದ ಮೇಲೆ ಇದನ್ನೇ ಮಾಡಬೇಕು ಅಂತ ತೀರ್ಮಾನ ಮಾಡಿದೆ. ಈಗ ನಾನು ಮುಂಚೆಗಿಂತ ಜಾಸ್ತಿ ಜನರಿಗೆ ಸುವಾರ್ತೆ ಸಾರುತ್ತೇನೆ.”

ಜ್ಯಾನೆಪ್‌

ಫ್ರಾನ್ಸ್‌ಜ್ಯಾನೆಪ್‌ ಹೇಳಿದ್ದು: “ಈ ಅಭಿಯಾನ ನನ್ನ ಸೇವೆಯ ಮೇಲೆ ತುಂಬ ಪರಿಣಾಮ ಬೀರಿತು. ಇನ್ನೂ ಧೈರ್ಯದಿಂದ ಸಾರಲು, ಯೆಹೋವನ ಮೇಲೆ ಹೆಚ್ಚು ಭರವಸೆ ಇಡಲು ಕಲಿತಿದ್ದೇನೆ.”

ಪ್ರಚಾರಕರು ಒಬ್ಬರಿಗೊಬ್ಬರು ಆಪ್ತರಾದರು. ಬೇರೆ ಬೇರೆ ದೇಶಗಳಿಂದ ಬಂದಿದ್ದರೂ ಸಹೋದರರ ಮಧ್ಯೆ ಪ್ರೀತಿ, ಅನ್ಯೋನ್ಯತೆ ಇತ್ತು. ಇದು ಸಹೋದರರ ಮನಸ್ಸಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. “ನಾವು ಸಹೋದರರ ಅತಿಥಿಸತ್ಕಾರವನ್ನು ಆನಂದಿಸಿದೆವು” ಎಂದು ಈ ಮುಂಚೆ ತಿಳಿಸಲಾದ ಶಾನ್‌-ಡಾವೀಡ್‌ ಹೇಳಿದರು. ಅವರು ಮುಂದುವರಿಸಿದ್ದು: “ಅವರು ನಮ್ಮನ್ನು ಸ್ನೇಹಿತರ ತರ, ತಮ್ಮ ಸ್ವಂತ ಕುಟುಂಬದವರ ತರ ನೋಡಿಕೊಂಡರು. ಅವರ ಮನೆಯಲ್ಲೇ ನಮ್ಮನ್ನು ಉಳಿಸಿಕೊಂಡರು. ನಮಗೊಂದು ಲೋಕವ್ಯಾಪಕ ಸಹೋದರ ಬಳಗ ಇದೆ ಅಂತ ಗೊತ್ತಿತ್ತು, ನಮ್ಮ ಪ್ರಕಾಶನಗಳಲ್ಲೂ ಅದರ ಬಗ್ಗೆ ತುಂಬ ಸಾರಿ ಓದಿದ್ದೆ. ಆದರೆ ಈ ಸಾರಿ ಅದನ್ನು ಸ್ವತಃ ನಾನೇ ಅನುಭವಿಸಿದೆ. ಯೆಹೋವನ ಜನರಲ್ಲಿ ಒಬ್ಬನಾಗಿರಲು ನನಗೆ ತುಂಬ ಹೆಮ್ಮೆ ಅನಿಸಿತು. ಇಂಥ ಸುಯೋಗ ಸಿಕ್ಕಿದ್ದಕ್ಕೆ ಯೆಹೋವನಿಗೆ ನಾನು ಋಣಿ.”

ಕ್ಲ್ಯಾರ್‌ (ಮಧ್ಯೆ)

 ಫ್ರಾನ್ಸ್‌ಕ್ಲ್ಯಾರ್‌ ಹೇಳುವುದು: “ನಾವು ಡೆನ್ಮಾರ್ಕ್‌, ಫ್ರಾನ್ಸ್‌, ಜರ್ಮನಿ, ಟರ್ಕಿ ಎಲ್ಲಿಂದಲೇ ಬಂದಿರಲಿ ಒಂದೇ ಕುಟುಂಬದಂತೆ ಇದ್ದೆವು. ಇದು ಹೇಗಿತ್ತು ಅಂದರೆ ದೇವರು ಒಂದು ದೊಡ್ಡ ರಬ್ಬರ್‌ ತಗೊಂಡು ಎಲ್ಲ ದೇಶಗಳ ಗಡಿರೇಖೆಗಳನ್ನು ಅಳಿಸಿಹಾಕಿದ ಹಾಗಿತ್ತು.”

ಸ್ಟೆಫನೀ (ಮಧ್ಯೆ)

ಫ್ರಾನ್ಸ್‌ಸ್ಟೆಫನೀ ಹೇಳಿದ್ದು: “ನಮ್ಮನ್ನು ಒಂದುಗೂಡಿಸೋದು ಸಂಸ್ಕೃತಿಯಲ್ಲ, ಭಾಷೆಯಲ್ಲ, ಯೆಹೋವನ ಮೇಲೆ ನಮಗೆಲ್ಲರಿಗೂ ಇರುವ ಪ್ರೀತಿಯೇ ಅಂತ ಈ ವಿಶೇಷ ಅಭಿಯಾನ ಕಲಿಸಿದೆ.”

ದೀರ್ಘಕಾಲದ ಪ್ರಯೋಜನಗಳೂ ಸಿಕ್ಕಿವೆ

ಟರ್ಕಿಯಲ್ಲಿ ಇನ್ನೂ ಬೆಟ್ಟದಷ್ಟು ಕೆಲಸ ಮಾಡಲಿಕ್ಕಿದೆ. ಅಲ್ಲಿ ಸೇವೆ ಮಾಡಿದ ಬೇರೆ ದೇಶದ ಪ್ರಚಾರಕರಲ್ಲಿ ಅನೇಕರು ಟರ್ಕಿಗೆ ವಾಪಸ್‌ ಬಂದು ಇಲ್ಲೇ ಇದ್ದು ಸಹಾಯ ಮಾಡುವುದರ ಬಗ್ಗೆ ಯೋಚಿಸಿದರು. ಈಗಾಗಲೇ ಇವರಲ್ಲಿ ಎಷ್ಟೋ ಮಂದಿ ಟರ್ಕಿಗೆ ಬಂದು ಸೇವೆ ಆರಂಭಿಸಿದ್ದಾರೆ. ಹೆಚ್ಚು ಅಗತ್ಯ ಇರುವ ಸ್ಥಳಗಳಿಗೆ ಹೋಗಿ ಸೇವೆ ಮಾಡುವ ಇಂಥವರನ್ನು ನಾವು ಮೆಚ್ಚಲೇಬೇಕು.

ದೂರದ ಪ್ರದೇಶವೊಂದರಲ್ಲಿ 25 ಪ್ರಚಾರಕರಿರುವ ಒಂದು ಚಿಕ್ಕ ಗುಂಪಿತ್ತು. ತುಂಬ ವರ್ಷಗಳಿಂದ ಅಲ್ಲಿ ಒಬ್ಬ ಹಿರಿಯನು ಮಾತ್ರ ಇದ್ದನು. 2015ರಲ್ಲಿ ಜರ್ಮನಿ ಮತ್ತು ನೆದರ್ಲೆಂಡ್ಸ್‌ನಿಂದ ಆರು ಮಂದಿ ಅಲ್ಲಿ ಸೇವೆ ಮಾಡಲು ಹೋದಾಗ ಅಲ್ಲಿದ್ದ ಪ್ರಚಾರಕರಿಗೆ ತುಂಬ ಸಂತೋಷ ಆಯಿತು!

ಮುಂಚೂಣಿಯಲ್ಲಿದ್ದು ಸೇವೆ ಮಾಡುವುದು

ಹೆಚ್ಚಿನ ಪ್ರಚಾರಕರ ಅಗತ್ಯವಿರುವ ಟರ್ಕಿಗೆ ಹೋದವರು ಸ್ವಲ್ಪ ಸಮಯ ಅಲ್ಲಿದ್ದ ಮೇಲೆ ಅಲ್ಲಿನ ಜೀವನದ ಬಗ್ಗೆ ಏನು ಹೇಳುತ್ತಾರೆ? ಕೆಲವೊಮ್ಮೆ ಕಷ್ಟಗಳು ಬರುತ್ತವೆ ನಿಜ. ಆದರೆ ಹೆಚ್ಚು ಅಗತ್ಯ ಇರುವ ಪ್ರದೇಶಕ್ಕೆ ಹೋಗಿ ಸೇವೆ ಮಾಡುವುದರಿಂದ ತುಂಬ ಆಶೀರ್ವಾದಗಳು ಸಿಗುತ್ತವೆ. ಹೀಗೆ ಸೇವೆ ಮಾಡಲು ಹೋದವರಲ್ಲಿ ಕೆಲವರು ಹೇಳಿದ ಮಾತುಗಳು ಇಲ್ಲವೆ:

ಫೆಡೆರೀಕೊ

40ರ ಪ್ರಾಯ ದಾಟಿರುವ ಫೆಡೆರೀಕೊ ಎಂಬ ವಿವಾಹಿತ ಸಹೋದರ ಸ್ಪೇನ್‌ನಿಂದ ಟರ್ಕಿಗೆ ಹೋಗಿ ಸೇವೆ ಮಾಡುತ್ತಿದ್ದಾರೆ. ಅವರು ಹೇಳುವುದು: “ನಮ್ಮ ಹತ್ತಿರ ಹೆಚ್ಚು ಪ್ರಾಪಂಚಿಕ ವಸ್ತುಗಳು ಇಲ್ಲದ್ದರಿಂದ ನಮಗೆ ಸುಲಭವಾಗಿ ಓಡಾಡುವ ಸ್ವಾತಂತ್ರ್ಯ ಇತ್ತು. ಇದರಿಂದ ತುಂಬ ಮುಖ್ಯವಾದ ವಿಷಯಗಳಿಗೆ ಗಮನ ಕೊಡಲು ಸಾಧ್ಯ ಆಯಿತು.” ಈ ರೀತಿಯ ಸೇವೆ ಮಾಡಲು ಅವರು ಬೇರೆಯವರಿಗೆ ಪ್ರೋತ್ಸಾಹ ಕೊಡುತ್ತಾರಾ? “ಹೌದು, ಖಂಡಿತ” ಎನ್ನುತ್ತಾರೆ ಅವರು. ಅವರು ಮುಂದುವರಿಸಿ ಹೇಳುವುದು: “ಯೆಹೋವನ ಬಗ್ಗೆ ಜನರಿಗೆ ತಿಳಿಸಬೇಕೆಂಬ ಉದ್ದೇಶದಿಂದ ನೀವು ಬೇರೆ ದೇಶಕ್ಕೆ ಹೋಗುವುದಾದರೆ ಅದರರ್ಥ ಯೆಹೋವನ ಕೈಗೆ ನಿಮ್ಮನ್ನು ಒಪ್ಪಿಸಿದ್ದೀರಿ ಅಂತ. ಯೆಹೋವನು ನಿಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ನೀವೇ ನೋಡುತ್ತೀರಿ.”

ರೂಡೀ

ಹತ್ತಿರಹತ್ತಿರ 60ರ ವಯಸ್ಸಿನ ನೆದರ್ಲೆಂಡ್ಸ್‌ನ ವಿವಾಹಿತ ಸಹೋದರ ರೂಡೀ ಹೇಳುವುದು: “ನಾವೇ ಮುಂಚೂಣಿಯಲ್ಲಿದ್ದು ಸೇವೆ  ಮಾಡಿದರೆ ಮತ್ತು ಸತ್ಯವನ್ನು ಕೇಳಿಸಿಕೊಂಡಿಲ್ಲದ ಜನರಿಗೆ ಅದನ್ನು ತಿಳಿಸಿದರೆ ಅದರಿಂದ ತುಂಬ ತೃಪ್ತಿ ಸಿಗುತ್ತದೆ. ಇದೇ ಸತ್ಯ ಎಂದು ತಿಳಿದುಕೊಂಡಾಗ ಜನರಿಗೆ ಆಗುವ ಸಂತೋಷವನ್ನು ನೋಡುವುದು ಎಲ್ಲಿಲ್ಲದ ಆನಂದವನ್ನು ಕೊಡುತ್ತದೆ.”

ಸಾಶ

40 ದಾಟಿರುವ ಸಾಶ ಎಂಬ ವಿವಾಹಿತ ಸಹೋದರ ಜರ್ಮನಿಯಿಂದ ಬಂದು ಸೇವೆ ಮಾಡುತ್ತಿದ್ದಾರೆ. ಅವರು ಹೇಳುವುದು: “ನಾನು ಸೇವೆಗೆ ಹೋದಾಗೆಲ್ಲಾ ಸತ್ಯದ ಬಗ್ಗೆ ಮೊದಲನೇ ಸಾರಿ ಕೇಳಿಸಿಕೊಳ್ಳುತ್ತಿರುವ ಜನ ಸಿಗುತ್ತಾರೆ. ಅವರಿಗೆ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿದಾಗ ನನಗೆ ತುಂಬ ತೃಪ್ತಿಯಾಗುತ್ತದೆ.”

ಆಟ್ಸೂಕೊ

ಹೆಚ್ಚುಕಡಿಮೆ 35 ವಯಸ್ಸಿನ ವಿವಾಹಿತ ಸಹೋದರಿ ಆಟ್ಸೂಕೊ ಜಪಾನ್‌ನಿಂದ ಬಂದು ಸೇವೆ ಮಾಡುತ್ತಿದ್ದಾರೆ. “ನಾನು ಮೊದಲೆಲ್ಲ ಅರ್ಮಗೆದೋನ್‌ ಬೇಗ ಬರಬೇಕು ಅಂತ ನೆನಸುತ್ತಿದ್ದೆ. ಆದರೆ ಟರ್ಕಿಗೆ ಬಂದ ಮೇಲೆ, ಯೆಹೋವನು ತಾಳ್ಮೆ ತೋರಿಸುತ್ತಿರುವುದಕ್ಕೆ ಧನ್ಯವಾದ ಹೇಳುತ್ತೇನೆ. ಯೆಹೋವನು ಲೋಕದ ಎಲ್ಲಾ ಕಡೆ ಸಾರುವ ಕೆಲಸವನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ನೋಡುವಾಗ ಆತನಿಗೆ ಇನ್ನಷ್ಟು ಆಪ್ತಳಾಗಲು ಮನಸ್ಸಾಗುತ್ತೆ” ಎಂದು ಅವರು ಹೇಳುತ್ತಾರೆ.

30 ದಾಟಿರುವ ಆಲಿಸ ಎಂಬ ಸಹೋದರಿ ರಷ್ಯದಿಂದ ಬಂದಿದ್ದಾರೆ. ಅವರು ಹೇಳುವುದು: “ಈ ರೀತಿ ಯೆಹೋವನ ಸೇವೆ ಮಾಡುವುದರಿಂದ ಯೆಹೋವನ ಒಳ್ಳೇತನವನ್ನು ಸಂಪೂರ್ಣವಾಗಿ ಸವಿಯಲು ಸಾಧ್ಯವಾಗಿದೆ.” (ಕೀರ್ತ. 34:8) ಅವರು ಇನ್ನೂ ಹೇಳುವುದು: “ಯೆಹೋವನು ನನಗೆ ತಂದೆ ಮಾತ್ರ ಅಲ್ಲ, ಆಪ್ತ ಸ್ನೇಹಿತ ಕೂಡ. ಬೇರೆ ಬೇರೆ ಪರಿಸ್ಥಿತಿಗಳಲ್ಲಿದ್ದು ಆತನನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ನನ್ನ ಜೀವನ ಸಂತೋಷದ ಕ್ಷಣಗಳಿಂದ, ರೋಮಾಂಚಕ ಅನುಭವಗಳಿಂದ, ಹೇರಳವಾದ ಆಶೀರ್ವಾದಗಳಿಂದ ತುಂಬಿದೆ.”

“ಹೊಲಗಳನ್ನು ನೋಡಿರಿ”

ಟರ್ಕಿಯಲ್ಲಿ ನಡೆದ ವಿಶೇಷ ಸಾರುವ ಅಭಿಯಾನದಿಂದಾಗಿ ತುಂಬ ಜನರಿಗೆ ಸುವಾರ್ತೆ ತಲಪಿದೆ. ಅಲ್ಲಿ ಇನ್ನೂ ಸುವಾರ್ತೆ ತಲಪಿರದ ಅನೇಕ ಪ್ರದೇಶಗಳಿವೆ. ಬೇರೆ ದೇಶಗಳಿಂದ ಟರ್ಕಿಗೆ ಹೋಗಿ ಸೇವೆ ಮಾಡುತ್ತಿರುವ ಪ್ರಚಾರಕರಿಗೆ ಪ್ರತಿದಿನ ಯೆಹೋವನ ಬಗ್ಗೆ ಇದುವರೆಗೂ ಕೇಳಿಸಿಕೊಂಡೇ ಇರದ ಜನರು ಸಿಗುತ್ತಿದ್ದಾರೆ. ಅಂಥ ಕ್ಷೇತ್ರದಲ್ಲಿ ಸೇವೆ ಮಾಡಲು ನೀವು ಬಯಸುತ್ತೀರಾ? ಹಾಗಾದರೆ, “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಕೊಯ್ಲಿಗೆ ಸಿದ್ಧವಾಗಿವೆ.” (ಯೋಹಾ. 4:35) ಲೋಕದಲ್ಲಿ ಯಾವ ಕ್ಷೇತ್ರ ‘ಕೊಯ್ಲಿಗೆ ಸಿದ್ಧವಾಗಿದೆಯೋ’ ಅಲ್ಲಿ ಹೋಗಿ ಸೇವೆ ಮಾಡಲು ನಿಮಗೆ ಮನಸ್ಸಿದೆಯಾ? ಇರುವುದಾದರೆ, ಆ ಗುರಿಯನ್ನು ತಲಪಲು ಬೇಕಾದ ಪ್ರಾಯೋಗಿಕ ಹೆಜ್ಜೆಗಳನ್ನು ಈಗಲೇ ತೆಗೆದುಕೊಳ್ಳಿ. ಒಂದಂತೂ ಸತ್ಯ: “ಭೂಮಿಯ ಕಟ್ಟಕಡೆಯ ವರೆಗೂ” ಇರುವ ಜನರಿಗೆ ಸುವಾರ್ತೆ ತಲಪಿಸಲು ನೀವು ಮಾಡುವ ಪ್ರಯತ್ನಕ್ಕೆ ಸಿಗುವ ಫಲ, ಆಶೀರ್ವಾದಕ್ಕೆ ಸರಿಸಾಟಿ ಯಾವುದೂ ಇಲ್ಲ!—ಅ. ಕಾ. 1:8.

^ ಪ್ಯಾರ. 2 ‘ಒಳ್ಳೆಯ ದೇಶವನ್ನು ನೋಡಿ’ ಕಿರುಹೊತ್ತಗೆಯ ಪುಟ 32-33 ನೋಡಿ.