ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎರಿಕ್‌ ಮತ್ತು ಏಮಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಘಾನದಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಘಾನದಲ್ಲಿ

ಹೆಚ್ಚು ರಾಜ್ಯ ಪ್ರಚಾರಕರು ಬೇಕಾಗಿದ್ದಾರೆ ಎಂಬ ವಿನಂತಿಗೆ ಓಗೊಟ್ಟು ಬೇರೆ ದೇಶ ಅಥವಾ ಊರಿಗೆ ಸ್ಥಳಾಂತರಿಸಿದ ಸಹೋದರ ಸಹೋದರಿಯರ ಪರಿಚಯ ನಿಮಗಿದೆಯಾ? ಅಂಥವರನ್ನು ‘ಅಗತ್ಯ ಹೆಚ್ಚಿರುವ ಸ್ಥಳದಲ್ಲಿ ಸೇವೆಮಾಡುವವರು’ ಎಂದು ಕರೆಯುತ್ತೇವೆ. ‘ಬೇರೆ ಊರಿಗೆ ಹೋಗಿ ಸೇವೆ ಮಾಡಲು ಅವರಿಗೆ ಯಾವುದು ಪ್ರೇರಣೆ ನೀಡಿತು? ಈ ರೀತಿಯ ಸೇವೆಗಾಗಿ ಅವರು ಹೇಗೆ ತಯಾರಿ ಮಾಡುತ್ತಾರೆ? ನಾನೂ ಹಾಗೆ ಬೇರೆ ಸ್ಥಳಕ್ಕೆ ಹೋಗಿ ಸೇವೆ ಮಾಡಬಹುದಾ?’ ಈ ಪ್ರಶ್ನೆಗಳು ನಿಮ್ಮ ಮನಸ್ಸಿಗೆ ಬಂದಿರಬಹುದು. ಅವುಗಳಿಗೆ ಉತ್ತರ ಪಡೆಯುವ ಉತ್ತಮ ವಿಧ ಆ ರೀತಿ ಸೇವೆ ಮಾಡುತ್ತಿರುವವರ ಜೊತೆ ಮಾತಾಡುವುದೇ. ಈಗ ಅವರ ಸಂದರ್ಶನ ಮಾಡೋಣ.

ಅವರಿಗೆ ಯಾವುದು ಪ್ರೇರಣೆ ನೀಡಿತು?

ಅಗತ್ಯ ಹೆಚ್ಚಿರುವ ದೇಶಕ್ಕೆ ಹೋಗಿ ಸೇವೆ ಮಾಡುವ ಯೋಚನೆ ನಿಮಗೆ ಹೇಗೆ ಬಂತು? ಸುಮಾರು 35 ವಯಸ್ಸಿನ ಅಮೆರಿಕದ ಏಮಿ ಉತ್ತರಿಸುವುದು: “ಇನ್ನೊಂದು ದೇಶಕ್ಕೆ ಹೋಗಿ ಸೇವೆ ಮಾಡಬೇಕೆಂಬ ಯೋಚನೆ ನನಗೆ ವರ್ಷಗಳಿಂದ ಇತ್ತು. ಆದರೆ ನನ್ನಿಂದಂತೂ ಅದು ಯಾವತ್ತೂ ಆಗಲ್ಲ ಎಂದು ನೆನಸುತ್ತಿದ್ದೆ.” ಅವಳ ಈ ಅಭಿಪ್ರಾಯ ಹೇಗೆ ಬದಲಾಯಿತು? “ಬೆಲೀಸ್‌ನಲ್ಲಿ ಸೇವೆಮಾಡುತ್ತಿದ್ದ ಒಂದು ದಂಪತಿ ನಾನು ಅವರೊಂದಿಗೆ ಒಂದು ತಿಂಗಳು ಪಯನೀಯರ್‌ ಸೇವೆ ಮಾಡುವಂತೆ 2004ರಲ್ಲಿ ಆಮಂತ್ರಿಸಿದರು. ನಾನು ಹೋದೆ. ಆ ಸೇವೆ ನನಗೆ ತುಂಬ ಇಷ್ಟವಾಯಿತು. ಒಂದು ವರ್ಷದ ನಂತರ ಘಾನದಲ್ಲಿ ಪಯನೀಯರ್‌ ಸೇವೆ ಮಾಡಲು ನಾನಲ್ಲಿಗೆ ಸ್ಥಳಾಂತರಿಸಿದೆ.”

ಏರನ್‌ ಮತ್ತು ಸ್ಟೆಫಾನಿ

ಅಮೆರಿಕದವಳೇ ಆದ ಸುಮಾರು 30 ವಯಸ್ಸಿನ ಸ್ಟೆಫಾನಿ ಕೆಲವು ವರ್ಷಗಳ ಹಿಂದೆ ತನ್ನ ಪರಿಸ್ಥಿತಿಯನ್ನು ಪರಿಶೀಲಿಸಿ, ‘ನನ್ನ ಆರೋಗ್ಯ ಚೆನ್ನಾಗಿದೆ, ಕುಟುಂಬ ಜವಾಬ್ದಾರಿಯಿಲ್ಲ. ಹಾಗಾಗಿ ಇನ್ನೂ ಜಾಸ್ತಿ ಸೇವೆ ಮಾಡಲು ನನ್ನಿಂದ ಆಗ್ತದೆ’ ಎಂದು ತಿಳಿದಳು. ಈ ಪ್ರಾಮಾಣಿಕ ಸ್ವಪರೀಕ್ಷೆಯು ಘಾನಕ್ಕೆ ಸ್ಥಳಾಂತರಿಸಿ ಸೇವೆಯನ್ನು ಹೆಚ್ಚಿಸುವಂತೆ ಅವಳಿಗೆ ಪ್ರೇರಣೆ ನೀಡಿತು. ಡೆನ್ಮಾರ್ಕ್‌ಫಿಲಿಪ್‌ ಮತ್ತು ಐಡ ಎಂಬ ಪಯನೀಯರ್‌ ದಂಪತಿಗೆ 60 ವಯಸ್ಸು ದಾಟಿದೆ. ಅವರಿಗೆ ಹೆಚ್ಚು ಅಗತ್ಯವಿರುವ ಕ್ಷೇತ್ರಕ್ಕೆ ಹೋಗಿ ಸೇವೆ ಮಾಡಬೇಕೆಂಬ ಕನಸಿತ್ತು. ಆ ಕನಸನ್ನು ನನಸಾಗಿಸಲು ದಾರಿ ಹುಡುಕುತ್ತಿದ್ದರು. ಫಿಲಿಪ್‌ ಹೇಳುತ್ತಾನೆ: “ಕೊನೆಗೂ ಒಂದು ಅವಕಾಶ ಒದಗಿಬಂದಾಗ ಯೆಹೋವನೇ ನಮಗೆ ‘ತಕ್ಕೊಳ್ಳಿ ಈ ಅವಕಾಶ’ ಎಂದು  ಹೇಳಿದಂತಿತ್ತು.” 2008ರಲ್ಲಿ ಅವರು ಘಾನಕ್ಕೆ ಹೋದರು. ಮೂರಕ್ಕಿಂತ ಹೆಚ್ಚು ವರ್ಷ ಅಲ್ಲಿ ಸೇವೆಮಾಡಿದರು.

ಬ್ರೂಕ್‌ ಮತ್ತು ಹ್ಯಾನ್ಸ್‌

ಅಮೆರಿಕದಲ್ಲಿ ಪಯನೀಯರರಾಗಿರುವ ಹ್ಯಾನ್ಸ್‌ ಮತ್ತು ಅವನ ಪತ್ನಿ ಬ್ರೂಕ್‌ಗೆ 30 ವರ್ಷ ದಾಟಿದೆ. 2005ರಲ್ಲಿ ಕಟ್ರೀನ ಚಂಡಮಾರುತದ ನಂತರ ವಿಪತ್ತು ಪರಿಹಾರ ಕೆಲಸದಲ್ಲಿ ಅವರು ಭಾಗವಹಿಸಿದರು. ನಂತರ ಅಂತಾರಾಷ್ಟ್ರೀಯ ಕಟ್ಟಡ ನಿರ್ಮಾಣ ಕೆಲಸಕ್ಕೆ ಅರ್ಜಿಹಾಕಿದರು. ಆದರೆ ಆಮಂತ್ರಣ ಸಿಗಲಿಲ್ಲ. “ಅಧಿವೇಶನದ ಭಾಷಣವೊಂದರಲ್ಲಿ ರಾಜ ದಾವೀದನ ಬಗ್ಗೆ ನಾವು ಒಂದು ವಿಷಯ ಕಲಿತೆವು. ಆಲಯವನ್ನು ಕಟ್ಟಲು ದೇವರು ಅವನಿಗೆ ಅನುಮತಿ ಕೊಡದಿದ್ದಾಗ ಅವನು ಬೇಸರ ಮಾಡದೆ ತನ್ನ ಗುರಿಯನ್ನು ಬದಲಾಯಿಸಿದ. ಇದು ದೇವರ ಸೇವೆಯಲ್ಲಿ ನಾವಿಟ್ಟ ಗುರಿಗಳಲ್ಲಿ ಬದಲಾವಣೆ ಮಾಡಿದರೆ ಏನೂ ತಪ್ಪಿಲ್ಲವೆಂದು ಕಲಿಸಿತು” ಎಂದು ಹ್ಯಾನ್ಸ್‌ ನೆನಪು ಮಾಡಿಕೊಳ್ಳುತ್ತಾನೆ. (1 ಪೂರ್ವ. 17:1-4, 11, 12; 22:5-11) ಬ್ರೂಕ್‌ ಹೇಳುತ್ತಾಳೆ: “ನಾವು ಇನ್ನೊಂದು ವಿಧದ ಸೇವೆಗಾಗಿ ಪ್ರಯತ್ನಿಸಬೇಕೆಂದು ಯೆಹೋವನು ಬಯಸಿದನೆಂದು ಕಾಣುತ್ತದೆ.”

ಬೇರೆ ದೇಶಗಳಲ್ಲಿ ಸೇವೆ ಮಾಡಿದ ತಮ್ಮ ಮಿತ್ರರಿಂದ ಒಳ್ಳೊಳ್ಳೆ ಅನುಭವಗಳನ್ನು ಕೇಳಿದಾಗ ಹ್ಯಾನ್ಸ್‌ ಮತ್ತು ಬ್ರೂಕ್‌ರಿಗೆ ಇನ್ನೊಂದು ದೇಶದಲ್ಲಿ ಪಯನೀಯರ್‌ ಸೇವೆಮಾಡಲು ಪ್ರೇರಣೆ ಸಿಕ್ಕಿತು. 2012 ರಲ್ಲಿ ಅವರು ಘಾನಕ್ಕೆ ಹೋಗಿ ನಾಲ್ಕು ತಿಂಗಳು ಸೇವೆಮಾಡಿದರು. ಅಲ್ಲಿ ಸನ್ನೆ ಭಾಷೆಯ ಸಭೆಗೆ ನೆರವು ನೀಡಿದರು. ಆಮೇಲೆ ಅವರು ಅಮೆರಿಕಕ್ಕೆ ಹಿಂದಿರುಗಬೇಕಾಯಿತು. ಆದರೂ ಘಾನದಲ್ಲಿ ಅವರಿಗಾದ ಅನುಭವದಿಂದ ರಾಜ್ಯ ಕೆಲಸಕ್ಕೆ ಜೀವನದಲ್ಲಿ ಮೊದಲ ಸ್ಥಾನ ನೀಡಬೇಕೆಂಬ ಅವರ ಆಸೆ ಇನ್ನೂ ಬಲವಾಯಿತು. ನಂತರ ಅವರು ಮೈಕ್ರೊನೇಷಿಯದ ಬ್ರಾಂಚ್‌ ಕಟ್ಟಡ ನಿರ್ಮಾಣದಲ್ಲಿ ನೆರವಾದರು.

ಗುರಿಮುಟ್ಟಲು ತಕ್ಕೊಂಡ ಹೆಜ್ಜೆಗಳು

ಅಗತ್ಯ ಹೆಚ್ಚಿರುವ ಸ್ಥಳಕ್ಕೆ ಹೋಗಿ ಸೇವೆಮಾಡಲು ನೀವು ಹೇಗೆ ತಯಾರಿ ಮಾಡಿದ್ದಿರಿ? “ಹೆಚ್ಚು ಅಗತ್ಯವಿರುವ ಸ್ಥಳದಲ್ಲಿ ಸೇವೆ ಮಾಡುವುದರ ಬಗ್ಗೆ ತಿಳಿಸುವ ಕಾವಲಿನಬುರುಜು ಲೇಖನಗಳನ್ನು ಹುಡುಕಿ ಓದಿದೆ. ನನ್ನ ಈ ಆಸೆಯ ಕುರಿತು ಹಿರಿಯರೊಂದಿಗೆ, ಸರ್ಕಿಟ್‌ ಮೇಲ್ವಿಚಾರಕ ಮತ್ತು ಅವರ ಪತ್ನಿಯೊಂದಿಗೆ ಮಾತಾಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಗುರಿಯ ಬಗ್ಗೆ ಯೆಹೋವನಿಗೆ ಯಾವಾಗಲೂ ತಿಳಿಸುತ್ತಾ ಸಹಾಯ ಮಾಡುವಂತೆ ಪ್ರಾರ್ಥಿಸಿದೆ” ಎಂದಳು ಸ್ಟೆಫಾನಿ. * ಅದೇ ಸಮಯದಲ್ಲಿ ಅವಳು ತನ್ನ ಬದುಕನ್ನು ಸರಳವಾಗಿಟ್ಟಳು. ಇದರಿಂದ ಅವಳಿಗೆ ವಿದೇಶದಲ್ಲಿ ತನ್ನ ಖರ್ಚನ್ನು ತಾನೇ ನೋಡಿಕೊಳ್ಳಲಿಕ್ಕಾಗಿ ಹಣ ಉಳಿತಾಯಮಾಡಲು ಆಯಿತು.

 ಹ್ಯಾನ್ಸ್‌ ಹೇಳುತ್ತಾನೆ: “ಯೆಹೋವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದ್ವಿ. ಆತನು ಎಲ್ಲಿಗೆ ನಡೆಸುತ್ತಾನೊ ಅಲ್ಲಿಗೆ ಹೋಗುವುದು ನಮ್ಮ ಬಯಕೆಯಾಗಿತ್ತು. ಅಲ್ಲದೆ ನಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ಹಾಕುವ ನಿರ್ದಿಷ್ಟ ತಾರೀಖನ್ನು ಸಹ ಪ್ರಾರ್ಥನೆಯಲ್ಲಿ ತಿಳಿಸಿದ್ವಿ.” ಈ ದಂಪತಿ ನಾಲ್ಕು ಬ್ರಾಂಚ್‌ ಆಫೀಸುಗಳಿಗೆ ಪತ್ರಬರೆದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಘಾನದ ಬ್ರಾಂಚ್‌ನಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ ಅವರಲ್ಲಿಗೆ ಎರಡು ತಿಂಗಳಿಗಾಗಿ ತೆರಳಿದರು. ಹ್ಯಾನ್ಸ್‌ ಹೇಳುವುದು: “ಅಲ್ಲಿ ಸಭೆಯೊಂದಿಗೆ ಸೇರಿ ಕೆಲಸಮಾಡುವುದರಲ್ಲಿ ಎಷ್ಟು ಆನಂದಿಸಿದೆವೆಂದರೆ ಇನ್ನೂ ಜಾಸ್ತಿ ಸಮಯ ಅಲ್ಲಿ ಉಳುಕೊಂಡೆವು.”

ಆ್ಯಡ್ರಿಯಾ ಮತ್ತು ಜಾರ್ಜ್‌

ಕೆನಡದವರಾದ ಜಾರ್ಜ್‌ ಮತ್ತು ಅವನ ಪತ್ನಿ ಆ್ಯಡ್ರಿಯಾಗೆ ಸುಮಾರು 40 ವಯಸ್ಸು. ಬರೀ ಮನಸ್ಸಿದ್ದರೆ ಮಾತ್ರ ಸಾಕಾಗಲ್ಲ, ಒಳ್ಳೇ ನಿರ್ಣಯ ಮಾಡಿ ಮುಂದೆ ಹೆಜ್ಜೆ ಇಟ್ಟರೆ ಯೆಹೋವನು ಆಶೀರ್ವದಿಸುತ್ತಾನೆಂದು ಅವರಿಗೆ ತಿಳಿದಿತ್ತು. ಹಾಗಾಗಿ ಘಾನದಲ್ಲಿ ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡುತ್ತಿದ್ದ ಒಬ್ಬ ಸಹೋದರಿಯನ್ನು ಸಂಪರ್ಕಿಸಿ ಅನೇಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಕೆನಡದಲ್ಲಿ ಮತ್ತು ಘಾನದಲ್ಲಿರುವ ಬ್ರಾಂಚ್‌ ಆಫೀಸುಗಳಿಗೆ ಪತ್ರ ಬರೆದರು. ಆ್ಯಡ್ರಿಯಾ ಹೀಗನ್ನುತ್ತಾಳೆ: “ನಾವು ಮೊದಲಿಗಿಂತಲೂ ಇನ್ನೂ ಹೆಚ್ಚಾಗಿ ನಮ್ಮ ಜೀವನವನ್ನು ಸರಳಗೊಳಿಸಲು ನೋಡಿದೆವು.” ಇದರಿಂದ 2004ರಲ್ಲಿ ಘಾನಕ್ಕೆ ಸ್ಥಳಾಂತರಿಸಲು ಅವರಿಗೆ ತುಂಬ ಸಹಾಯವಾಯಿತು.

ಸಮಸ್ಯೆಗಳನ್ನು ನಿರ್ವಹಿಸಿದ ವಿಧ

ಸ್ಥಳಾಂತರಿಸಿದ ನಂತರ ಯಾವ ಸಮಸ್ಯೆಗಳನ್ನು ಎದುರಿಸಿದಿರಿ? ಅವುಗಳನ್ನು ಹೇಗೆ ನಿರ್ವಹಿಸಿದಿರಿ? ಮೊದಮೊದಲು ಏಮಿಗೆ ಮನೆಯ ನೆನಪು ಕಾಡುತ್ತಿತ್ತು. ಅವಳಂದದ್ದು: “ನನಗೆ ರೂಢಿಯಾಗಿದ್ದ ವಿಷಯಗಳು ಬೇರೆ, ಇಲ್ಲಿ ಎಲ್ಲವೂ ಹೊಸದಾಗಿತ್ತು.” ಅವಳಿಗೆ ಹೇಗೆ ಸಹಾಯಸಿಕ್ಕಿತು? “ಮನೆಮಂದಿ ಫೋನ್‌ ಮಾಡಿ ನಾನು ಈ ರೀತಿಯ ಸೇವೆಮಾಡುತ್ತಿರುವುದರಿಂದ ಅವರಿಗೆಷ್ಟು ಖುಷಿ ಆಗುತ್ತದೆಂದು ಹೇಳಿದರು. ಅದು ನಾನಿಲ್ಲಿಗೆ ಬಂದ ಗುರಿಯನ್ನು ಮನಸ್ಸಿನಲ್ಲಿಡಲು ನೆರವಾಯಿತು. ನಂತರ ನಾನು ನನ್ನ ಕುಟುಂಬದೊಂದಿಗೆ  ವಿಡಿಯೋ ಚ್ಯಾಟ್‌ ಮಾಡಲು ಶುರುಮಾಡಿದೆ. ಇದರಿಂದ ನಮಗೆ ಒಬ್ಬರನ್ನೊಬ್ಬರು ನೋಡಲು ಆಯಿತು. ನನ್ನ ಕುಟುಂಬ ಎಲ್ಲೋ ದೂರದಲ್ಲಿದ್ದಾರೆಂಬ ಅನಿಸಿಕೆ ಹೋಗಿಬಿಟ್ಟಿತು.” ಸ್ಥಳೀಯ ಅನುಭವಿ ಸಹೋದರಿಯೊಂದಿಗೆ ಏಮಿ ಸ್ನೇಹ ಬೆಳೆಸಿಕೊಂಡಳು. ಅವರಿಂದ ಅಲ್ಲಿನ ಬೇರೆಬೇರೆ ಪದ್ಧತಿಗಳನ್ನು ತಿಳಿದುಕೊಳ್ಳಲು ಅವಳಿಗೆ ಸಹಾಯವಾಯಿತು. “ಜನರ ನಿರ್ದಿಷ್ಟ ವರ್ತನೆ, ಮಾತು ನನಗೆ ಅರ್ಥವಾಗದಿದ್ದಾಗ ಆ ಸ್ನೇಹಿತೆ ಹತ್ತಿರ ಹೋಗಿ ಕೇಳುತ್ತಿದ್ದೆ. ಏನು ಮಾಡಬೇಕು, ಏನು ಮಾಡಬಾರದೆಂದು ಅವರಿಂದ ಕಲಿತೆ. ಇದರಿಂದ ನಾನು ಸೇವೆಯನ್ನು ಸಂತೋಷದಿಂದ ಮಾಡಲು ಆಯಿತು.”

ಘಾನಕ್ಕೆ ಹೋದಾಗ ಜಾರ್ಜ್‌ ಮತ್ತು ಆ್ಯಡ್ರಿಯಾಗೆ ತಾವು ಹಳೇ ಕಾಲದಲ್ಲಿ ಜೀವಿಸುತ್ತಿದ್ದೇವೇನೊ ಎಂದು ಅನಿಸಿತ್ತಂತೆ. “ವಾಷಿಂಗ್‌ ಮೆಷೀನ್‌ ಇರಲಿಲ್ಲ. ಬಕೆಟ್‌ಗಳನ್ನು ಬಳಸಬೇಕಿತ್ತು. ಕೆನಡದಲ್ಲಿ ನಮಗೆ ಅಡಿಗೆಮಾಡಲು ಹಿಡಿಯುತ್ತಿದ್ದ ಸಮಯಕ್ಕಿಂತ ಇಲ್ಲಿ ಹತ್ತು ಪಟ್ಟು ಜಾಸ್ತಿ ಸಮಯ ಹಿಡಿಯುತ್ತಿತ್ತು! ದಿನಕಳೆದಂತೆ ಈ ಕಷ್ಟಗಳೆಲ್ಲ ಹೊಚ್ಚ ಹೊಸ ಅನುಭವ ಅಂತ ಅನಿಸಿತು” ಎನ್ನುತ್ತಾಳೆ ಆ್ಯಡ್ರಿಯಾ. ಬ್ರೂಕ್‌ ಹೇಳುತ್ತಾಳೆ: “ಪಯನೀಯರರಾದ ನಮಗೆ ಇಂಥ ಸಮಸ್ಯೆಗಳು ಎದುರಾದರೂ ಜೀವನದಲ್ಲಿ ಸಂತೃಪ್ತಿ ಇದೆ. ನಮ್ಮ ನಂಬಿಕೆ ಬಲಪಡಿಸಿದ ಈ ಎಲ್ಲ ಅನುಭವಗಳ ಸವಿನೆನಪುಗಳು ಒಂದು ಸುಂದರ ಹೂಗುಚ್ಛದಂತಿದೆ. ಅವುಗಳನ್ನು ಮರೆಯಲಿಕ್ಕಾಗಲ್ಲ.”

ಸಂತೃಪ್ತಿ ತರುವ ಸೇವೆ

ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆ ಮಾಡಲು ನೀವು ಬೇರೆಯವರನ್ನು ಯಾಕೆ ಪ್ರೋತ್ಸಾಹಿಸುತ್ತೀರಿ? “ಈ ಟೆರಿಟೊರಿಯಲ್ಲಿ ಜನರು ಸತ್ಯ ಕಲಿಯಲು ಎಷ್ಟು ಉತ್ಸುಕರೆಂದರೆ ಬೈಬಲನ್ನು ಪ್ರತಿ ದಿನ ಅಧ್ಯಯನ ಮಾಡಲಿಕ್ಕೂ ಸಿದ್ಧರಿದ್ದಾರೆ! ಇದನ್ನು ನೋಡಿ ತುಂಬ ಸಂತೋಷ ಆಗ್ತದೆ. ಇದುವರೆಗೆ ನಾನು ಮಾಡಿದ ನಿರ್ಣಯಗಳಲ್ಲೇ ಅತ್ಯುತ್ತಮ ನಿರ್ಣಯವೆಂದರೆ ಅಗತ್ಯವಿರುವಲ್ಲಿಗೆ ಹೋದದ್ದೇ!” ಎನ್ನುತ್ತಾಳೆ ಸ್ಟೆಫಾನಿ. 2014ರಲ್ಲಿ ಸ್ಟೆಫಾನಿ ಏರನ್‌ನನ್ನು ಮದುವೆಯಾದಳು. ಇಂದು ಅವರಿಬ್ಬರೂ ಘಾನದ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುತ್ತಿದ್ದಾರೆ.

“ಅದು ನಿಜಕ್ಕೂ ತುಂಬ ಒಳ್ಳೇ ಅನುಭವ” ಎನ್ನುತ್ತಾಳೆ ಕ್ರಿಸ್ಟೀನ್‌. ಈಗ 30 ದಾಟಿರುವ ಇವಳು ಜರ್ಮನಿಯಲ್ಲಿ ಪಯನೀಯರಳಾಗಿದ್ದಳು. ಘಾನಕ್ಕೆ ಸ್ಥಳಾಂತರಿಸುವ ಮುಂಚೆ ಬೊಲಿವಿಯದಲ್ಲೂ ಸೇವೆಮಾಡಿದಳು. ಅವಳನ್ನುವುದು: “ನನ್ನ ಕುಟುಂಬ ತುಂಬ ದೂರವಿರುವುದರಿಂದ ಯಾವಾಗಲೂ ಸಹಾಯಕ್ಕಾಗಿ ಯೆಹೋವನಿಗೇ ಮರೆಹೋಗುತ್ತೇನೆ. ಆತನು ನನಗೆ ಎಂದಿಗಿಂತಲೂ ಈಗ ಹೆಚ್ಚು ನೈಜ ವ್ಯಕ್ತಿಯಾಗಿದ್ದಾನೆ. ಯೆಹೋವನ ಜನರನ್ನು ಬಿಟ್ಟರೆ ಬೇರೆ ಯಾರ ಮಧ್ಯೆಯೂ ಇರದ ಐಕ್ಯವನ್ನು ಸಹ ಸವಿಯುತ್ತಿದ್ದೇನೆ. ಈ ಸೇವೆಯಿಂದ ಸಾರ್ಥಕ ಜೀವನ ನನ್ನದಾಗಿದೆ.” ಕ್ರಿಸ್ಟೀನ್‌ ಇತ್ತೀಚೆಗೆ ಗಿಡಿಯನ್‌ನನ್ನು ಮದುವೆಯಾದಳು. ಅವರು ಈಗಲೂ ಘಾನದಲ್ಲೇ ಇದ್ದು ಒಟ್ಟಿಗೆ ಸೇವೆ ಮಾಡುತ್ತಿದ್ದಾರೆ.

ಕ್ರಿಸ್ಟೀನ್‌ ಮತ್ತು ಗಿಡಿಯನ್‌

ಫಿಲಿಪ್‌ ಮತ್ತು ಐಡ ತಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಪ್ರಗತಿಮಾಡಲು ಹೇಗೆ ನೆರವಾದರೆಂದು ತಿಳಿಸುತ್ತಾರೆ: “ನಮಗೆ 15ಕ್ಕಿಂತ ಹೆಚ್ಚು ಬೈಬಲ್‌ ಅಧ್ಯಯನಗಳಿದ್ದವು. ಆದರೆ ಅವನ್ನು 10ಕ್ಕೆ ಇಳಿಸಿದೆವು. ಹಾಗಾಗಿ ನಮ್ಮ ವಿದ್ಯಾರ್ಥಿಗಳಿಗೆ ಚೆನ್ನಾಗಿ ಕಲಿಸಲು ಆಯಿತು.” ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಕ್ಕಿತಾ? ಫಿಲಿಪ್‌ ಹೇಳುವುದು: “ಮೈಕಲ್‌ ಎಂಬ ಯುವಕ ಪ್ರತಿ ದಿನ ಬೈಬಲ್‌ ಅಧ್ಯಯನ ಮಾಡ್ತಿದ್ದ. ಎಷ್ಟು ಚೆನ್ನಾಗಿ ತಯಾರಿ ಮಾಡ್ತಿದ್ದನೆಂದರೆ ಬೈಬಲ್‌ ಬೋಧಿಸುತ್ತದೆ ಇಡೀ ಪುಸ್ತಕದ ಅಧ್ಯಯನವನ್ನು ಒಂದೇ ತಿಂಗಳಲ್ಲಿ ಮುಗಿಸಿಬಿಟ್ಟೆವು. ಆಮೇಲೆ ಪ್ರಚಾರಕನಾದ. ಮೊದಲ ದಿನ ಸೇವೆಗೆ ಬಂದಾಗ ಅವನು ನನಗೆ, ‘ನನಗಿರುವ ಬೈಬಲ್‌ ಅಧ್ಯಯನಗಳನ್ನು ನಡೆಸಲು ಸಹಾಯ ಕೊಡ್ತೀರಾ?’ ಎಂದು ಕೇಳಿದ. ನನಗೆ ಆಶ್ಚರ್ಯವಾಯಿತು. ಮೈಕಲ್‌ ಈಗಾಗಲೇ ಮೂರು ಅಧ್ಯಯನಗಳನ್ನು ಆರಂಭಿಸಿದ್ದ. ಅವುಗಳನ್ನು ನಡೆಸಲು ಅವನಿಗೆ ಸಹಾಯ ಬೇಕಿತ್ತು.” ಸ್ವಲ್ಪ ಯೋಚಿಸಿ, ಅಲ್ಲಿ ಬೈಬಲ್‌ ಬೋಧಕರ ಅಗತ್ಯ ಎಷ್ಟಿದೆಯೆಂದರೆ ಇನ್ನೂ ಬೈಬಲ್‌ ಕಲಿಯುತ್ತಿರುವವರೇ ಬೇರೆಯವರಿಗೆ ಬೈಬಲ್‌ ಕಲಿಸುತ್ತಿದ್ದಾರೆ!

ಐಡ ಮತ್ತು ಫಿಲಿಪ್‌

ಹೆಚ್ಚು ಪ್ರಚಾರಕರ ಅಗತ್ಯವಿರುವ ಇನ್ನೊಂದು ಕ್ಷೇತ್ರದ ಕುರಿತು ಹೇಗೆ ಗೊತ್ತಾಯಿತೆಂದು ಏಮಿ ವಿವರಿಸುತ್ತಾಳೆ: “ಘಾನಕ್ಕೆ ಬಂದ ಸ್ವಲ್ಪದರಲ್ಲಿ ನಾವೊಂದು ಚಿಕ್ಕ ಹಳ್ಳಿಯಲ್ಲಿ ಸಾರುತ್ತಾ ಕಿವುಡರಿಗಾಗಿ ಹುಡುಕಿದೆವು. ಒಂದೇ ಹಳ್ಳಿಯಲ್ಲಿ ಒಬ್ಬಿಬ್ಬರಲ್ಲ ಎಂಟು ಮಂದಿ ಕಿವುಡರು ಸಿಕ್ಕಿದರು!” ಏಮಿ ಘಾನದಲ್ಲಿ ಎರಿಕ್‌ನನ್ನು ಮದುವೆಯಾದಳು. ಅವರಿಬ್ಬರು ವಿಶೇಷ ಪಯನೀಯರರಾಗಿ ಸೇವೆಮಾಡುತ್ತಿದ್ದಾರೆ. ಸನ್ನೆ ಭಾಷೆಯ ಸಭೆಯಲ್ಲಿ ಕೆಲಸಮಾಡುತ್ತಿದ್ದಾರೆ. ಆ ದೇಶದಲ್ಲಿ 300ಕ್ಕಿಂತಲೂ ಹೆಚ್ಚು ಕಿವುಡ ಪ್ರಚಾರಕರು ಮತ್ತು ಆಸಕ್ತ ಜನರು ಇದ್ದಾರೆ. ಘಾನದಲ್ಲಿ ಸೇವೆಮಾಡಿದ್ದರಿಂದ ಜಾರ್ಜ್‌ ಮತ್ತು ಆ್ಯಡ್ರಿಯಾಗೆ ಮಿಷನರಿ ಸೇವೆಯ ಬಗ್ಗೆ ಒಳ್ಳೇ ಅನುಭವ ಸಿಕ್ಕಿತು. ಗಿಲ್ಯಡ್‌ ಶಾಲೆಯ 126ನೇ ಕ್ಲಾಸ್‌ಗೆ ಹಾಜರಾಗಲು ಆಮಂತ್ರಣ ಸಿಕ್ಕಿದಾಗ ಅವರ ಖುಷಿ ಮುಗಿಲುಮುಟ್ಟಿತು. ಈಗ ಅವರು ಮೊಸಾಂಬೀಕ್‌ನಲ್ಲಿ ಮಿಷನರಿಗಳಾಗಿದ್ದಾರೆ.

ಪ್ರೀತಿಯೇ ಪ್ರೇರಣೆ

ಕೊಯ್ಲಿನ ಕೆಲಸದಲ್ಲಿ ಭಾಗವಹಿಸಲು ಬೇರೆಬೇರೆ ದೇಶಗಳಿಂದ ಬಂದ ಎಷ್ಟೋ ಪಯನೀಯರರು ಸ್ಥಳೀಯ ಸಹೋದರ ಸಹೋದರಿಯರೊಂದಿಗೆ ಕಷ್ಟಪಟ್ಟು ಕೆಲಸಮಾಡುತ್ತಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಷಯ! (ಯೋಹಾ. 4:35) ಘಾನದಲ್ಲಿ ಪ್ರತಿವಾರ ಸರಾಸರಿ 120 ಮಂದಿ ದೀಕ್ಷಾಸ್ನಾನ ಪಡೆಯುತ್ತಿದ್ದಾರೆ. ಅಲ್ಲಿಗೆ ಸ್ಥಳಾಂತರಿಸಿದ 17 ಮಂದಿಯಂತೆಯೇ ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆಮಾಡಲು ಸಾವಿರಾರು ಸಾಕ್ಷಿಗಳಿಗೆ ಪ್ರೇರಣೆ ಕೊಟ್ಟದ್ದು ಯೆಹೋವನ ಮೇಲಿರುವ ಪ್ರೀತಿಯೇ. ಹೀಗೆ ಅವರು ತಮ್ಮನ್ನೇ ಮನಃಪೂರ್ವಕವಾಗಿ ನೀಡಿಕೊಳ್ಳುತ್ತಿದ್ದಾರೆ. ಇಂಥ ಸಿದ್ಧಮನಸ್ಸಿನ ಸೇವಕರು ಖಂಡಿತವಾಗಿಯೂ ಯೆಹೋವನ ಹೃದಯಕ್ಕೆ ಸಂತೋಷ ತರುತ್ತಿದ್ದಾರೆ.—ಕೀರ್ತ. 110:3; ಜ್ಞಾನೋ. 27:11.

^ ಪ್ಯಾರ. 9 ಉದಾಹರಣೆಗೆ, “ರಾಜ್ಯ ಪ್ರಚಾರಕರ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಬಲ್ಲಿರೋ?” ಮತ್ತು “ಮಕೆದೋನ್ಯಕ್ಕೆ ಬಂದು ಸಹಾಯಮಾಡುವಿರೋ?” ಎಂಬ ಲೇಖನಗಳನ್ನು ನೋಡಿ.—ಕಾವಲಿನಬುರುಜು ಏಪ್ರಿಲ್‌ 15 ಮತ್ತು ಡಿಸೆಂಬರ್‌ 15, 2009.