ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಜೀವನ ಕಥೆ

ಏನೇ ಆದರೂ ಕ್ರಿಸ್ತನ ಸೈನಿಕನಾಗಿಯೇ ಇರುವೆ

ಏನೇ ಆದರೂ ಕ್ರಿಸ್ತನ ಸೈನಿಕನಾಗಿಯೇ ಇರುವೆ

ಬಂದೂಕಿನಿಂದ ಗುಂಡುಗಳು ನನ್ನ ಅಕ್ಕಪಕ್ಕದಲ್ಲೇ ಹಾರಿಹೋದಾಗ ನಾನು ನನ್ನ ಬಿಳೀ ಕರ್ಚೀಫನ್ನು ಮೆಲ್ಲನೆ ಮೇಲಕ್ಕೆತ್ತಿ ಹಿಡಿದೆ. ನಾನು ಬಚ್ಚಿಟ್ಟುಕೊಂಡಿದ್ದ ಜಾಗದಿಂದ ಹೊರಗೆ ಬರುವಂತೆ ಗುಂಡು ಹಾರಿಸುತ್ತಿದ್ದ ಸೈನಿಕರು ಕೂಗಿದರು. ನಾನು ಜೀವಂತ ಉಳಿಯುತ್ತೇನೋ ಇಲ್ಲವೋ ಎಂಬ ಭಯದಿಂದ ಮೆಲ್ಲಮೆಲ್ಲನೆ ಅವರ ಕಡೆಗೆ ಹೆಜ್ಜೆಹಾಕಿದೆ. ನಾನು ಇಂಥ ಸನ್ನಿವೇಶದಲ್ಲಿ ಹೇಗೆ ಸಿಕ್ಕಿಹಾಕಿಕೊಂಡೆ? ಹೇಳುತ್ತೇನೆ ಬನ್ನಿ . . .

ನಾನು ಹುಟ್ಟಿದ್ದು 1926ರಲ್ಲಿ. ನಾವು ಎಂಟು ಜನ ಮಕ್ಕಳು. ನಾನು ಏಳನೆಯವ. ನಮ್ಮದು ಗ್ರೀಸ್‌ ದೇಶದಲ್ಲಿ ಕರಿಟ್ಸ ಎಂಬ ಚಿಕ್ಕದೊಂದು ಹಳ್ಳಿ. ಅಪ್ಪಅಮ್ಮ ಶ್ರಮಜೀವಿಗಳಾಗಿದ್ದರು.

ನಾನು ಹುಟ್ಟುವ ಒಂದು ವರ್ಷ ಹಿಂದೆ ಅಪ್ಪಅಮ್ಮಗೆ ಜಾನ್‌ ಪಪಾರೀಸಸ್‌ ಎಂಬವರು ಸಿಕ್ಕಿದ್ದರು. ಅವರೊಬ್ಬ ಬೈಬಲ್‌ ವಿದ್ಯಾರ್ಥಿ. ಯೆಹೋವನ ಸಾಕ್ಷಿಗಳನ್ನು ಆಗ ಹೀಗೆ ಕರೆಯುತ್ತಿದ್ದರು. ಸಹೋದರ ಜಾನ್‌ಗೆ ತುಂಬ ಹುರುಪು. ತುಂಬ ಮಾತಾಡುತ್ತಿದ್ದರು ಕೂಡ. ಅವರು ಬೈಬಲಿನ ಮೇಲಾಧರಿಸಿ ತರ್ಕಿಸಿದ್ದರಿಂದ ಅಪ್ಪಅಮ್ಮ ತುಂಬ ಪ್ರಭಾವಿತರಾದರು. ನಮ್ಮ ಹಳ್ಳಿಯಲ್ಲಿ ನಡೆಯುತ್ತಿದ್ದ ಬೈಬಲ್‌ ವಿದ್ಯಾರ್ಥಿಗಳ ಕೂಟಗಳಿಗೆ ಹಾಜರಾಗಲೂ ಆರಂಭಿಸಿದರು. ಅಮ್ಮನಿಗೆ ಯೆಹೋವನಲ್ಲಿ ಅಚಲ ನಂಬಿಕೆ ಇತ್ತು. ಅವರಿಗೆ ಓದುಬರಹ ಬರದಿದ್ದರೂ ತಾನು ಕಲಿಯುತ್ತಿದ್ದ ವಿಷಯಗಳ ಬಗ್ಗೆ ಸಂದರ್ಭ ಸಿಕ್ಕಿದಾಗೆಲ್ಲಾ ಬೇರೆಯವರೊಂದಿಗೆ ಮಾತಾಡುತ್ತಿದ್ದರು. ಆದರೆ ಅಪ್ಪ ಸಭೆಯಲ್ಲಿದ್ದವರ ಅಪರಿಪೂರ್ಣತೆಗಳಿಗೆ ಹೆಚ್ಚು ಗಮನ ಕೊಟ್ಟರು. ಸ್ವಲ್ಪ ಸಮಯ ಆದ ಮೇಲೆ ಕ್ರೈಸ್ತ ಕೂಟಗಳಿಗೆ ಹೋಗುವುದನ್ನು ಬಿಟ್ಟುಬಿಟ್ಟರು.

ಅವರ ಮಕ್ಕಳಾದ ನಮಗೆಲ್ಲರಿಗೂ ಬೈಬಲಿನ ಮೇಲೆ ಗೌರವ ಇದ್ದರೂ ಬೆಳೆಯುತ್ತಾ ಹೋದ ಹಾಗೆ ನಮ್ಮ ಗಮನವೆಲ್ಲ ಆಟೋಟ, ಸ್ನೇಹಿತರ ಮೇಲೆ ಹೋಯಿತು. ಆದರೆ 1939ರಲ್ಲಿ ಎರಡನೇ ಲೋಕ ಯುದ್ಧ ಯೂರೋಪ್‌ನಲ್ಲೆಲ್ಲಾ ಹಬ್ಬಿಕೊಂಡಾಗ ನಮ್ಮ ಹಳ್ಳಿಯಲ್ಲಿ ನಡೆದ ಒಂದು ಘಟನೆಯಿಂದ ನಾವು ಎಚ್ಚೆತ್ತುಕೊಂಡ್ವಿ. ನಮ್ಮ ಮನೆಯ ಹತ್ತಿರದಲ್ಲೇ ಇದ್ದ ನಮ್ಮ ಸಂಬಂಧಿಕ ನಿಕಲಸ್‌ ಸಾರಸ್‌ಗೆ ಗ್ರೀಸ್‌ನ ಸೈನ್ಯಕ್ಕೆ ಸೇರುವ ಆದೇಶ ಬಂತು. ನಿಕಲಸ್‌ಗೆ ಆಗ 20 ವರ್ಷ. ಆಗಷ್ಟೇ ದೀಕ್ಷಾಸ್ನಾನವಾಗಿತ್ತು. ಅವನು ಮಿಲಿಟರಿ ಅಧಿಕಾರಿಗಳಿಗೆ, “ನಾನು ಕ್ರಿಸ್ತನ ಸೈನಿಕ, ಯುದ್ಧ ಮಾಡುವುದಿಲ್ಲ” ಎಂದು ಧೈರ್ಯದಿಂದ ಹೇಳಿದನು. ಈ ವಿಷಯ ಮಿಲಿಟರಿ ನ್ಯಾಯಾಲಯದ ಮೆಟ್ಟಿಲೇರಿತು. ಅವನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆಯಾಯಿತು. ಇದನ್ನು ಕೇಳಿ ನಾವು ಬೆಚ್ಚಿಬಿದ್ದೆವು.

1941ರ ಆರಂಭದಲ್ಲಿ ಬ್ರಿಟಿಷರ ಜಂಟಿ ಪಡೆ ಗ್ರೀಸ್‌ಗೆ ಬಂದು ಸ್ವಲ್ಪಕಾಲ ಅಲ್ಲಿ ಇತ್ತು. ಆಗ ನಿಕಲಸನ್ನು ಜೈಲಿನಿಂದ ಬಿಡಿಸಲಾಯಿತು. ನಮಗೆ ತುಂಬ ಸಂತೋಷವಾಯಿತು. ಅವನು ವಾಪಸ್‌ ಊರಿಗೆ ಬಂದಾಗ ನನ್ನ ಅಣ್ಣ ಇಲ್ಯಾಸ್‌ ಅವನಿಗೆ ಬೈಬಲಿನ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ. ಅವರು ಮಾತಾಡುತ್ತಿದ್ದಾಗ ಗಮನಕೊಟ್ಟು ಕೇಳಿದೆ. ನಂತರ ನಾವಿಬ್ಬರೂ ಮತ್ತು ನಮ್ಮ ತಂಗಿ ಎಫ್‌ಮೋರ್ಫಿಯಾ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡ್ವಿ. ತಪ್ಪದೆ ಕೂಟಗಳಿಗೂ ಹೋದ್ವಿ.  ಮುಂದಿನ ವರ್ಷ ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದ್ವಿ. ನಂತರ ನನ್ನ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರು ಸಹ ನಂಬಿಗಸ್ತ ಸಾಕ್ಷಿಗಳಾದರು.

1942ರಲ್ಲಿ ನಮ್ಮ ಸಭೆಯಲ್ಲಿ 15ರಿಂದ 25 ವಯಸ್ಸಿನ ಒಂಬತ್ತು ಮಂದಿ ಯುವ ಸಹೋದರ ಸಹೋದರಿಯರಿದ್ದರು. ಮುಂದೆ ದೊಡ್ಡ ಪರೀಕ್ಷೆಗಳು ಬರಲಿವೆ ಎಂದು ನಮಗೆ ಗೊತ್ತಾಯಿತು. ಆದ್ದರಿಂದ ಸಾಧ್ಯವಾದಾಗೆಲ್ಲಾ ನಾವು ಒಟ್ಟಿಗೆ ಸೇರಿ ಬೈಬಲನ್ನು ಅಧ್ಯಯನ ಮಾಡುತ್ತಿದ್ವಿ, ರಾಜ್ಯ ಗೀತೆಗಳನ್ನು ಹಾಡುತ್ತಿದ್ವಿ, ಪ್ರಾರ್ಥಿಸುತ್ತಿದ್ವಿ. ಇದರಿಂದ ನಮ್ಮ ನಂಬಿಕೆ ಬಲವಾಯಿತು.

ಕರಿಟ್ಸದಲ್ಲಿ ಡಿಮಿಟ್ರಿಯಸ್‌ ಮತ್ತು ಅವರ ಸ್ನೇಹಿತರು

ಅಂತರ್ಯುದ್ಧ

ಎರಡನೇ ಲೋಕ ಯುದ್ಧ ಮುಗಿಯಲಿಕ್ಕಿದ್ದಾಗ ಗ್ರೀಸ್‌ನ ಕಮ್ಯೂನಿಸ್ಟರು ಗ್ರೀಸ್‌ ಸರ್ಕಾರದ ವಿರುದ್ಧ ದಂಗೆ ಎದ್ದರು. ಇದರಿಂದ ಭಯಂಕರವಾದ ಅಂತರ್ಯುದ್ಧ ಶುರುವಾಯಿತು. ಕಮ್ಯೂನಿಸ್ಟ್‌ ಗೆರಿಲ್ಲಾ ಸೈನಿಕರು ಯಾವಾಗಲೂ ಹಳ್ಳಿಪಳ್ಳಿಗಳಲ್ಲಿ ಸುತ್ತುತ್ತಾ ಇದ್ದರು. ತಮ್ಮ ಜೊತೆ ಸೇರುವಂತೆ ಹಳ್ಳಿಗರನ್ನು ಒತ್ತಾಯಿಸುತ್ತಿದ್ದರು. ಇವರು ನಮ್ಮ ಹಳ್ಳಿಯ ಮೇಲೆ ದಾಳಿ ಮಾಡಿದಾಗ ಯುವ ಸಾಕ್ಷಿಗಳಾದ ಅಂಟನ್ಯೊ ಸೂಕರಿಸ್‌, ಇಲ್ಯಾಸ್‌ ಮತ್ತು ನನ್ನನ್ನು ಅಪಹರಿಸಿದರು. ನಾವು ತಟಸ್ಥರಾಗಿರಲು ಬಯಸುವ ಕ್ರೈಸ್ತರು ಅಂತ ಎಷ್ಟು ಹೇಳಿದರೂ ಅವರು ನಮ್ಮನ್ನು ಬಿಡಲಿಲ್ಲ. ನಮ್ಮ ಹಳ್ಳಿಯಿಂದ ಒಲಿಂಪಸ್‌ ಬೆಟ್ಟದ ತನಕ 12 ತಾಸು ನಡೆಯುವಂತೆ ಮಾಡಿದರು.

ಅಲ್ಲಿದ್ದಾಗ ಒಬ್ಬ ಕಮ್ಯೂನಿಸ್ಟ್‌ ಅಧಿಕಾರಿ ನಮಗೆ ಗೆರಿಲ್ಲಾಗಳ ಒಂದು ದಾಳಿ ಪಡೆ ಜೊತೆ ಸೇರಿಕೊಳ್ಳುವಂತೆ ಅಪ್ಪಣೆ ಕೊಟ್ಟ. ನಿಜ ಕ್ರೈಸ್ತರು ಆಯುಧಗಳನ್ನು ಬಳಸುವುದಿಲ್ಲ, ಬೇರೆಯವರಿಗೆ ಹಾನಿಮಾಡುವುದಿಲ್ಲ ಅಂತ ನಾವು ಹೇಳಿದಾಗ ಅವನಿಗೆ ತುಂಬ ಸಿಟ್ಟು ಬಂತು. ನಮ್ಮನ್ನು ಅವರ ಜನರಲ್‌ ಮುಂದೆ ಎಳಕೊಂಡು ಹೋದ. ನಾವು ನಮ್ಮ ವಿಷಯ ಹೇಳಿದಾಗ, “ಹಾಗಾದರೆ ಒಂದು ಹೇಸರಗತ್ತೆಯನ್ನು ತೆಗೆದುಕೊಂಡು ಹೋಗಿ ರಣರಂಗದಲ್ಲಿ ಗಾಯಗೊಂಡ ನಮ್ಮ ಸೈನಿಕರನ್ನು ಆಸ್ಪತ್ರೆಗೆ ತಲಪಿಸಿ” ಎಂದು ಜನರಲ್‌ ಅಪ್ಪಣೆ ಕೊಟ್ಟ.

“ಆದರೆ ಸರ್ಕಾರದ ಸೈನಿಕರ ಕೈಗೆ ಸಿಕ್ಕಿಬಿದ್ದರೆ ನಮ್ಮ ಗತಿ ಏನು? ಅವರು ನಮ್ಮನ್ನೂ ಸೈನಿಕರೆಂದು ನೆನಸುವುದಿಲ್ವಾ?” ಎಂದು ಕೇಳಿದ್ವಿ. ಆಗ ಅವರು “ಹಾಗಾದರೆ ನಮ್ಮ ಸೈನಿಕರಿಗೆ ಊಟ ತೆಗೆದುಕೊಂಡು ಹೋಗಿ ಕೊಡಿ” ಅಂದರು. ಅದಕ್ಕೆ ನಾವು “ಹೇಸರಗತ್ತೆಯ ಮೇಲೆ ನಾವು ಊಟ ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿ ಒಬ್ಬ ಅಧಿಕಾರಿ ಆಯುಧಗಳನ್ನೂ ತೆಗೆದುಕೊಂಡು ಹೋಗುವಂತೆ ಹೇಳಿದರೆ ಏನು ಮಾಡೋದು?” ಅಂತ ಕೇಳಿದ್ವಿ. ಆಗ ಜನರಲ್‌ ತುಂಬ ಹೊತ್ತು ಯೋಚನೆಮಾಡಿ, “ಸರಿ. ಕುರಿಗಳನ್ನು ನೋಡಿಕೊಳ್ಳುವುದರಲ್ಲಿ ನಿಮಗೇನು ತೊಂದರೆ ಇಲ್ಲ ಅಲ್ಲಾ? ಇಲ್ಲೇ ಬೆಟ್ಟದಲ್ಲಿದ್ದು ಕುರಿಗಳನ್ನು ನೋಡಿಕೊಳ್ಳಿ” ಅಂದ.

ಕುರಿಗಳನ್ನು ನೋಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ನಮ್ಮ ಮನಸ್ಸಾಕ್ಷಿ ಹೇಳಿತು. ಅಂತರ್ಯುದ್ಧದ ಕಾವು ಹೆಚ್ಚುತ್ತಾ ಹೋಯಿತು. ಒಂದು ವರ್ಷವಾದ ಮೇಲೆ ಇಲ್ಯಾಸನ್ನು ಮನೆಗೆ ಹೋಗಲು ಬಿಟ್ಟರು. ಅಪ್ಪ ತೀರಿಕೊಂಡದ್ದರಿಂದ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ದೊಡ್ಡ ಮಗನಾಗಿ ಇಲ್ಯಾಸ್‌ಗಿತ್ತು. ಅಂಟನ್ಯೊ ಕಾಯಿಲೆ ಬಿದ್ದದರಿಂದ ಅವನನ್ನೂ ಮನೆಗೆ ಕಳುಹಿಸಿದರು. ನನ್ನೊಬ್ಬನನ್ನು ಮಾತ್ರ ಬಿಡಲಿಲ್ಲ.

ಇದೆಲ್ಲ ನಡೆಯುತ್ತಿದ್ದಾಗ ಗ್ರೀಸ್‌ ಸರ್ಕಾರದ ಸೈನ್ಯವು ಈ ಕಮ್ಯೂನಿಸ್ಟ್‌ ಗೆರಿಲ್ಲ ಗುಂಪು ಇದ್ದ ಸ್ಥಳಕ್ಕೆ ಹತ್ತಿರತ್ತಿರ ಬಂತು. ಆಗ ನನ್ನನ್ನು ಹಿಡಿದಿಟ್ಟಿದ್ದ ಈ ಗುಂಪು ಬೆಟ್ಟಗಳ ಮಧ್ಯದಿಂದ ಅಲ್ಬೇನಿಯ ದೇಶದ ಕಡೆ ಓಡಿಹೋಗಲು ಆರಂಭಿಸಿತು. ದೇಶದ ಗಡಿಯ ಹತ್ತಿರ ಬಂದಾಗ ಗ್ರೀಸ್‌ ಸೈನಿಕರು ನಮ್ಮನ್ನು ಸುತ್ತುವರಿದರು. ಎಲ್ಲರೂ ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದರು. ನಾನು ಒಂದು ಮರದ ಹಿಂದೆ ಬಚ್ಚಿಟ್ಟುಕೊಂಡೆ. ಆಗ ನಾನು ಪೀಠಿಕೆಯಲ್ಲಿ ಹೇಳಿದ ಘಟನೆ ನಡೆಯಿತು.

ನನ್ನನ್ನು ಕಮ್ಯೂನಿಸ್ಟರು ಬಂದಿಯಾಗಿ ಇಟ್ಟಿದ್ದರು ಎಂದು ಸೈನಿಕರಿಗೆ ಹೇಳಿದಾಗ ಅವರು ನನ್ನನ್ನು ವಿಚಾರಣೆಗಾಗಿ ವರಿಯದ ಹತ್ತಿರವಿದ್ದ ಮಿಲಿಟರಿ ಶಿಬಿರಕ್ಕೆ ಕರೆದುಕೊಂಡು ಹೋದರು. ಈ ವರಿಯ ಬೈಬಲಿನಲ್ಲಿ ತಿಳಿಸಿರುವ ಪ್ರಾಚೀನ ಬೆರೋಯ ಪಟ್ಟಣವಾಗಿತ್ತು. ಸೈನಿಕರು ನಿಂತು ಹೋರಾಡಲು ಬೇಕಾದ ಕಂದಕಗಳನ್ನು ತೋಡುವಂತೆ ನನಗೆ ಹೇಳಲಾಯಿತು. ನಾನು ಇದಕ್ಕೆ ಒಪ್ಪಲಿಲ್ಲ. ಆಗ ಮುಖ್ಯಾಧಿಕಾರಿಯು  ಮಾಕ್ರೊನಿಸೊಸ್‌ (ಮಾಕ್ರೊನಿಸಿ) ದ್ವೀಪಕ್ಕೆ ನನ್ನನ್ನು ಗಡೀಪಾರು ಮಾಡಿದರು. ಈ ದ್ವೀಪ ಯಾವೊಬ್ಬ ಕೈದಿಗೂ ಒಂದು ದುಃಸ್ವಪ್ನವಾಗಿತ್ತು.

ಭಯಾನಕ ದ್ವೀಪ

ಈ ಮಾಕ್ರೊನಿಸೊಸ್‌ ದ್ವೀಪ ಅಥೆನ್ಸ್‌ ನಗರದಿಂದ 50 ಕಿ.ಮೀ. ದೂರದಲ್ಲಿರುವ ಆ್ಯಟಿಕ ಕರಾವಳಿಯ ಹತ್ತಿರವಿದೆ. ಸೂರ್ಯನ ಶಾಖದಿಂದ ಸುಟ್ಟುಹೋದಂತೆ ಕಾಣುವ ಬಂಡೆ ಇದು. ಈ ದ್ವೀಪದಲ್ಲಿ ನೀರಿಲ್ಲ. ಬೋಳುಬೋಳಾಗಿದೆ. ಅದು 13 ಕಿ.ಮೀ. ಉದ್ದ ಮತ್ತು ಬರೀ 2.5 ಕಿ.ಮೀ. ಅಗಲ ಇದೆ. ಆದರೆ 1947ರಿಂದ 1958ರ ತನಕ ಅಲ್ಲಿ 1,00,000 ಕೈದಿಗಳು ಇದ್ದರು. ಕಮ್ಯೂನಿಸ್ಟರನ್ನು ಮತ್ತು ಕಮ್ಯೂನಿಸ್ಟರೆಂಬ ಸಂಶಯ ಇದ್ದ ವ್ಯಕ್ತಿಗಳನ್ನು, ಹಿಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವ್ಯಕ್ತಿಗಳನ್ನು ಮತ್ತು ಎಷ್ಟೋ ಮಂದಿ ನಂಬಿಗಸ್ತ ಯೆಹೋವನ ಸಾಕ್ಷಿಗಳನ್ನು ಇಲ್ಲಿಗೆ ಗಡೀಪಾರು ಮಾಡಲಾಗಿತ್ತು.

ನಾನು 1949ರ ಆರಂಭದಲ್ಲಿ ಈ ದ್ವೀಪಕ್ಕೆ ಬಂದಾಗ, ಕೈದಿಗಳನ್ನು ಬೇರೆಬೇರೆ ಶಿಬಿರಗಳಲ್ಲಿ ಹಾಕುತ್ತಿದ್ದರು. ನನ್ನನ್ನು ಕಡಿಮೆ ಭದ್ರತೆಯ ಆವಶ್ಯಕತೆ ಇರುವ ಶಿಬಿರದಲ್ಲಿ ಹಾಕಿದರು. ಇಲ್ಲಿ ನೂರಾರು ಪುರುಷರಿದ್ದರು. 10 ಜನರಿಗಾಗಿದ್ದ ಕ್ಯಾನ್ವಾಸ್‌ ಟೆಂಟುಗಳಲ್ಲಿ 40 ಜನರನ್ನು ಇಡುತ್ತಿದ್ದರು. ನಾವು ನೆಲದ ಮೇಲೆ ಮಲಗಬೇಕಿತ್ತು. ಹಾಳಾಗಿದ್ದ ನೀರನ್ನು ಕುಡಿಯಬೇಕಿತ್ತು. ತಿನ್ನಲು ಹೆಚ್ಚಾಗಿ ಕಾಳು ಮತ್ತು ಬದನೆಕಾಯಿ ಕೊಡುತ್ತಿದ್ದರು. ಯಾವಾಗಲೂ ಬೀಸುತ್ತಿದ್ದ ಗಾಳಿ ಧೂಳಿನಿಂದ ಜೀವನ ಕಂಗಾಲಾಗಿತ್ತು. ಆದರೆ ನಮಗೆ ನೆಮ್ಮದಿ ತಂದ ವಿಷಯ ಏನೆಂದರೆ, ನಮಗೆ ಬಂಡೆ ಕಲ್ಲುಗಳನ್ನು ಆಚೀಚೆ ಎಳೆದುಕೊಂಡು ಹೋಗುತ್ತಾ ಇರಬೇಕಾದ ಕೆಲಸವನ್ನು ಕೊಡಲಿಲ್ಲ. ಈ ಕೆಲಸವು ಅನೇಕ ಕೈದಿಗಳ ಮೈಮನಸ್ಸನ್ನು ಮುರಿದುಹಾಕಿದ ಚಿತ್ರಹಿಂಸೆಯಾಗಿತ್ತು.

ಗಡೀಪಾರು ಮಾಡಲಾಗಿದ್ದ ಬೇರೆ ಸಾಕ್ಷಿಗಳೊಂದಿಗೆ ಮಾಕ್ರೊನಿಸೊಸ್‌ ದ್ವೀಪದಲ್ಲಿ

ಒಂದು ದಿನ ದಡದಲ್ಲಿ ನಡೆಯುತ್ತಿದ್ದಾಗ ನನಗೆ ಬೇರೆ ಶಿಬಿರಗಳ ಅನೇಕ ಸಾಕ್ಷಿಗಳು ಸಿಕ್ಕಿದರು. ಒಬ್ಬರನ್ನೊಬ್ಬರು ನೋಡಿ ತುಂಬ ಖುಷಿಯಾಯಿತು! ಯಾರಿಗೂ ಗೊತ್ತಾಗದ ಹಾಗೆ ನಾವು ಸಾಧ್ಯವಾದಾಗೆಲ್ಲಾ ಒಟ್ಟು ಸೇರುತ್ತಿದ್ವಿ. ಜಾಗರೂಕತೆಯಿಂದ ಬೇರೆ ಕೈದಿಗಳಿಗೂ ಸಾರಿದ್ವಿ. ಇವರಲ್ಲಿ ಕೆಲವರು ನಂತರ ಯೆಹೋವನ ಸಾಕ್ಷಿಗಳಾದರು. ನಾವು ಮಾಡಿದ ಈ ವಿಷಯಗಳು ಮತ್ತು ಪ್ರಾರ್ಥನೆ ಆಧ್ಯಾತ್ಮಿಕತೆ ಕಾಪಾಡಿಕೊಳ್ಳಲು ಸಹಾಯಮಾಡಿತು.

ಬಾಣಲೆಯಿಂದ ಬೆಂಕಿಗೆ

ಮಾಕ್ರೊನಿಸೊಸ್‌ನಲ್ಲಿ ಹತ್ತು ತಿಂಗಳು ಇದ್ದ ಮೇಲೆ ನಾನು ಸರಿ ಹೋಗಿರಬೇಕು ಎಂದು ನೆನಸಿ ನನ್ನನ್ನು ಬಂಧಿಸಿದವರು ಮಿಲಿಟರಿ ಸಮವಸ್ತ್ರ ಧರಿಸಲು ನನಗೆ ಆದೇಶ ಕೊಟ್ಟರು. ನಾನು ಒಪ್ಪದಿದ್ದಾಗ ನನ್ನನ್ನು ಶಿಬಿರದ ಕಮಾಂಡರನ ಹತ್ತಿರ ಎಳೆದುಕೊಂಡು ಹೋದರು. ನಾನು ಆ ಕಮಾಂಡರಿಗೆ “ನಾನು ಕ್ರಿಸ್ತನಿಗೆ ಮಾತ್ರ ಸೈನಿಕನಾಗಿರಲು ಬಯಸುತ್ತೇನೆ” ಎಂದು ಬರೆದು ಕೊಟ್ಟೆ. ಈ ಕಮಾಂಡರು ನನಗೆ ಬೆದರಿಕೆ ಹಾಕಿದ ಮೇಲೆ ನನ್ನನ್ನು ತನ್ನ ಕೆಳಗಿದ್ದ ಅಧಿಕಾರಿಯ ಹತ್ತಿರ ಕಳುಹಿಸಿದ. ಈ ಉಪ ಅಧಿಕಾರಿ ಗ್ರೀಸಿನ ಆರ್ತಡಾಕ್ಸ್‌ ಚರ್ಚಿನ ಆರ್ಚ್‌ಬಿಷಪ್‌ ಆಗಿದ್ದ. ಬಿಷಪರ ವೇಷಭೂಷಣದಲ್ಲಿದ್ದ. ಅವನು ಕೇಳಿದ ಪ್ರಶ್ನೆಗಳಿಗೆ ನಾನು ಧೈರ್ಯವಾಗಿ ಬೈಬಲಿನಿಂದ ಉತ್ತರ ಕೊಟ್ಟಾಗ ಅವನಿಗೆ ತುಂಬ ಸಿಟ್ಟುಬಂತು. “ಇವನನ್ನು ಕರಕೊಂಡು ಹೋಗಿ! ಇವನೊಬ್ಬ ಮತಾಂಧ!” ಎಂದು ಗುಡುಗಿದ.

ಮರುದಿನ ಬೆಳಗ್ಗೆ ಸೈನಿಕರು ನನಗೆ ಮಿಲಿಟರಿ ಸಮವಸ್ತ್ರ ಧರಿಸುವಂತೆ ಪುನಃ ಅಪ್ಪಣೆ ಕೊಟ್ಟರು. ನಾನು ಒಪ್ಪದಿದ್ದಾಗ ನನ್ನನ್ನು ಹಿಗ್ಗಾಮುಗ್ಗಾ ಥಳಿಸಿ ಲಾಠಿಯಿಂದ ಹೊಡೆದರು. ಆಮೇಲೆ ಶಿಬಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನ್ನ ಮೂಳೆ ಯಾವುದಾದರೂ ಮುರಿದಿದೆಯಾ ಅಂತ ನೋಡಿದರು. ನಂತರ ನನ್ನನ್ನು ಎಳಕೊಂಡು ಬಂದು ಟೆಂಟಲ್ಲಿ ಹಾಕಿದರು. ಎರಡು ತಿಂಗಳ ವರೆಗೆ ದಿನಾ ಈ ಹಿಂಸೆ ಮುಂದುವರಿಯಿತು.

ನಾನು ನನ್ನ ನಂಬಿಕೆಯನ್ನು ಬಿಡಲಿಲ್ಲವಾದ್ದರಿಂದ ಬೇಸತ್ತುಹೋದ ಸೈನಿಕರು ಕೊನೆಗೆ ಒಂದು ಹೊಸ ವಿಧಾನ ಬಳಸಿದರು. ನನ್ನ ಕೈಗಳನ್ನು ಹಿಂದಕ್ಕೆ ಕಟ್ಟಿ ನನ್ನ ಪಾದದ ಕೆಳಭಾಗವನ್ನು ಹಗ್ಗದಿಂದ ತುಂಬ ಜೋರಾಗಿ ಹೊಡೆಯುತ್ತಾ ಇದ್ದರು. ಇದರಿಂದಾದ ನೋವನ್ನು ನಾನು ವರ್ಣಿಸಲಿಕ್ಕಾಗಲ್ಲ. ಆ ನೋವಿನಲ್ಲೂ ನಾನು, ‘ಜನರು ನಿಮ್ಮನ್ನು ದೂಷಿಸಿ ಹಿಂಸೆಪಡಿಸುವಾಗ ನೀವು ಸಂತೋಷಿತರು. ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ. ಏಕೆಂದರೆ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಅವರು ಅದೇ ರೀತಿಯಲ್ಲಿ ಹಿಂಸೆಪಡಿಸಿದರು’ ಎಂಬ ಯೇಸುವಿನ ಮಾತುಗಳನ್ನು ನೆನಪುಮಾಡಿಕೊಂಡೆ. (ಮತ್ತಾ. 5:11, 12) ಈ ಚಿತ್ರಹಿಂಸೆಗೆ ಕೊನೆಯೇ ಇಲ್ಲ ಎಂದು ಅನಿಸಿತು. ಕೊನೆಯಲ್ಲಿ ಪ್ರಜ್ಞೆತಪ್ಪಿ ಬಿದ್ದೆ.

ಪ್ರಜ್ಞೆ ಬಂದಾಗ ತುಂಬ ತಣ್ಣಗಿದ್ದ ಒಂದು ಸೆರೆ ಕೋಣೆಯಲ್ಲಿದ್ದೆ. ತಿನ್ನಲಿಕ್ಕೆ ಏನೂ ಇರಲಿಲ್ಲ. ನೀರು ಸಹ ಇರಲಿಲ್ಲ. ಒಂದು ಕಂಬಳಿ ಕೂಡ ಇರಲಿಲ್ಲ. ಆದರೂ ಏನೋ ಒಂದು ಪ್ರಶಾಂತತೆ ನನ್ನಲ್ಲಿತ್ತು. ಬೈಬಲ್‌ ಹೇಳುವಂತೆ “ದೇವಶಾಂತಿಯು” ನನ್ನ ಹೃದಯವನ್ನೂ ಯೋಚನೆಗಳನ್ನೂ ಕಾಯುತ್ತಿತ್ತು. (ಫಿಲಿ. 4:7) ಮರುದಿನ ನನಗೆ ಒಬ್ಬ ಸೈನಿಕ ದಯೆಯಿಂದ ಸ್ವಲ್ಪ ಬ್ರೆಡ್ಡು, ನೀರು ಮತ್ತು ಒಂದು ಉದ್ದ ಕೋಟನ್ನು ಕೊಟ್ಟನು. ಇನ್ನೊಬ್ಬ ಸೈನಿಕ ಅವನಿಗೆ ಊಟಕ್ಕೆಂದು ಸಿಕ್ಕಿದ್ದನ್ನು ನನಗೆ ಕೊಟ್ಟನು. ಈ ರೀತಿ ಅನೇಕ ವಿಧಗಳಲ್ಲಿ ಯೆಹೋವನು ನನ್ನನ್ನು ಕೋಮಲವಾಗಿ ನೋಡಿಕೊಂಡನು.

‘ಇವನು ಸುಧಾರಣೆ ಆಗಲ್ಲ’ ಎಂದು ನೆನಸಿ ಅಧಿಕಾರಿಗಳು ನನ್ನನ್ನು ಅಥೆನ್ಸಿನ ಮಿಲಿಟರಿ ನ್ಯಾಯಾಲಯದ ಮುಂದೆ ತಂದು ನಿಲ್ಲಿಸಿದರು. ನ್ಯಾಯಾಲಯ ನನಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಮಾಕ್ರೊನಿಸೊಸ್‌ನ ಪೂರ್ವ ದಿಕ್ಕಿನಲ್ಲಿ 50 ಕಿ.ಮೀ. ದೂರದಲ್ಲಿದ್ದ ಯಾರೊಸ್‌ (ಗಯಾರೊಸ್‌) ಎಂಬ ದ್ವೀಪದಲ್ಲಿದ್ದ ಕಾರಾಗೃಹಕ್ಕೆ ನನ್ನನ್ನು ಕಳುಹಿಸಲಾಯಿತು.

“ನಿಮ್ಮ ಮೇಲೆ ನಂಬಿಕೆ ಇದೆ”

ಯಾರೊಸ್‌ ಕಾರಾಗೃಹವನ್ನು ಕೆಂಪು ಇಟ್ಟಿಗೆಯಿಂದ ಕಟ್ಟಲಾಗಿದ್ದು ಅದೊಂದು ಭದ್ರ ಕೋಟೆಯಂತಿತ್ತು. ರಾಜಕೀಯ ಕಾರಣಗಳಿಗಾಗಿ ಬಂಧಿಸಲಾಗಿದ್ದ 5,000ಕ್ಕೂ ಹೆಚ್ಚು ಕೈದಿಗಳು ಅಲ್ಲಿದ್ದರು. ಏಳು ಮಂದಿ ಯೆಹೋವನ ಸಾಕ್ಷಿಗಳೂ ಅಲ್ಲಿದ್ದರು. ನಮ್ಮನ್ನು ತಾಟಸ್ಥ್ಯದ ಕಾರಣ ಅಲ್ಲಿ ಹಾಕಲಾಗಿತ್ತು. ಒಟ್ಟು ಸೇರಿಬರುವುದನ್ನು ಖಡಾಖಂಡಿತವಾಗಿ ನಿಷೇಧಿಸಲಾಗಿತ್ತಾದರೂ ನಾವು ಗುಪ್ತವಾಗಿ ಒಟ್ಟುಸೇರಿ ಬೈಬಲನ್ನು ಅಧ್ಯಯನ  ಮಾಡುತ್ತಿದ್ವಿ. ನಮಗೆ ಕಾವಲಿನಬುರುಜು ಪತ್ರಿಕೆ ಸಹ ತಪ್ಪದೆ ಸಿಗುತ್ತಿತ್ತು. ಹೇಗಾದರೂ ಕದ್ದುಮುಚ್ಚಿ ಅದನ್ನು ಒಳಗೆ ತರಲಾಗುತ್ತಿತ್ತು. ಇದನ್ನು ನಾವು ಕೈಯಿಂದ ಬರೆದು ನಕಲು ಮಾಡಿ ಅಧ್ಯಯನ ಮಾಡುವಾಗ ಉಪಯೋಗಿಸುತ್ತಿದ್ವಿ.

ಒಂದು ದಿನ ನಾವು ಗುಪ್ತವಾಗಿ ಅಧ್ಯಯನ ಮಾಡುತ್ತಿದ್ದಾಗ ಒಬ್ಬ ಕಾವಲುಗಾರ ನಮ್ಮನ್ನು ನೋಡಿಬಿಟ್ಟ. ನಮ್ಮ ಹತ್ತಿರವಿದ್ದ ಸಾಹಿತ್ಯವನ್ನೆಲ್ಲ ಕಿತ್ತುಕೊಂಡ. ಆಮೇಲೆ ನಮ್ಮನ್ನು ವಾರ್ಡನಿನ ಕಚೇರಿಗೆ ಕರೆದುಕೊಂಡು ಹೋಗಲಾಯಿತು. ನಮ್ಮ ಶಿಕ್ಷೆ ಜಾಸ್ತಿ ಆಗಲಿಕ್ಕಿದೆ ಎಂದು ಅನಿಸಿತು. ಆದರೆ ವಾರ್ಡನ್‌, “ನೀವು ಯಾರು ಅಂತ ನಮಗೆ ಗೊತ್ತು. ನಿಮ್ಮ ನಿಲುವನ್ನು ನಾವು ಗೌರವಿಸುತ್ತೇವೆ. ನಿಮ್ಮ ಮೇಲೆ ನಂಬಿಕೆ ಇದೆ. ಹೋಗಿ ಕೆಲಸ ಮಾಡಿ” ಅಂದರು. ನಮ್ಮಲ್ಲಿ ಕೆಲವರಿಗೆ ಸ್ವಲ್ಪ ಸುಲಭವಾದ ಕೆಲಸವನ್ನೂ ಕೊಟ್ಟರು. ಯೆಹೋವನಿಗೆ ತುಂಬ ಕೃತಜ್ಞತೆ ಹೇಳಿದ್ವಿ. ನಮ್ಮ ಕ್ರೈಸ್ತ ಸಮಗ್ರತೆಯಿಂದ ನಾವು ಜೈಲಿನಲ್ಲೂ ಯೆಹೋವನಿಗೆ ಮಹಿಮೆ ತರಲಿಕ್ಕಾಯಿತು.

ನಮ್ಮ ನಂಬಿಗಸ್ತಿಕೆಯಿಂದ ಬೇರೆ ಪ್ರಯೋಜನಗಳೂ ಸಿಕ್ಕಿದವು. ಅದೇ ಜೈಲಿನಲ್ಲಿ ಬಂಧಿಯಾಗಿದ್ದ ಒಬ್ಬ ಪ್ರೊಫೆಸರ್‌ ನಮ್ಮ ಒಳ್ಳೇ ನಡತೆಯನ್ನು ಸೂಕ್ಷ್ಮವಾಗಿ ಗಮನಿಸಿ ಪ್ರಭಾವಿತರಾಗಿ ನಮ್ಮ ನಂಬಿಕೆಗಳ ಬಗ್ಗೆ ಕೇಳಿದರು. ಸಾಕ್ಷಿಗಳಾಗಿದ್ದ ನಮ್ಮನ್ನು 1951ರ ಆರಂಭದಲ್ಲಿ ಬಿಡುಗಡೆ ಮಾಡಿದಾಗ ಅವರನ್ನೂ ಬಿಡುಗಡೆ ಮಾಡಲಾಯಿತು. ನಂತರ ಅವರು ದೀಕ್ಷಾಸ್ನಾನ ಪಡೆದುಕೊಂಡು ಪೂರ್ಣ ಸಮಯ ಸುವಾರ್ತೆ ಸಾರುವ ಕೆಲಸ ಮಾಡಿದರು.

ಈಗಲೂ ಸೈನಿಕನೇ

ನನ್ನ ಪತ್ನಿ ಜ್ಯಾನೆಟ್‌ ಜೊತೆ

ನನಗೆ ಬಿಡುಗಡೆಯಾದ ಮೇಲೆ ಕರಿಟ್ಸದಲ್ಲಿದ್ದ ನನ್ನ ಕುಟುಂಬದವರ ಹತ್ತಿರ ಹೋದೆ. ನಂತರ ನಮ್ಮ ಊರಲ್ಲಿದ್ದ ಅನೇಕ ಜನರೊಂದಿಗೆ ಸೇರಿ ಆಸ್ಟ್ರೇಲಿಯದಲ್ಲಿರುವ ಮೆಲ್ಬರ್ನ್‌ಗೆ ವಲಸೆ ಹೋದೆ. ಅಲ್ಲಿ ನನಗೆ ಜ್ಯಾನೆಟ್‌ ಎಂಬ ಒಳ್ಳೇ ಸಹೋದರಿ ಸಿಕ್ಕಿದರು. ಅವರನ್ನು ಮದುವೆ ಮಾಡಿಕೊಂಡೆ. ನಮಗೆ ಒಬ್ಬ ಮಗ ಮತ್ತು ಮೂರು ಹೆಣ್ಣುಮಕ್ಕಳು. ಅವರನ್ನು ಸತ್ಯದಲ್ಲಿ ಚೆನ್ನಾಗಿ ಬೆಳೆಸಿದ್ದೇವೆ.

ಈಗ ನನಗೆ 90 ವರ್ಷ ದಾಟಿದೆ. ಒಬ್ಬ ಕ್ರೈಸ್ತ ಹಿರಿಯನಾಗಿ ಇನ್ನೂ ಸೇವೆ ಮಾಡುತ್ತಿದ್ದೇನೆ. ನನ್ನ ಹಳೇ ಗಾಯಗಳಿಂದ ಈಗಲೂ ಆಗಾಗ ದೇಹದಲ್ಲಿ ಮತ್ತು ಪಾದದಲ್ಲಿ ನೋವಾಗುತ್ತದೆ. ಹೆಚ್ಚಾಗಿ ತುಂಬ ನೋವಾಗುವುದು ಸೇವೆಗೆ ಹೋಗಿ ಬಂದ ಮೇಲೆ. ಹಾಗಿದ್ದರೂ ‘ಕ್ರಿಸ್ತನ ಸೈನಿಕನಾಗಿಯೇ ಇರುವೆ’ ಎಂಬ ನನ್ನ ದೃಢತೀರ್ಮಾನ ಬದಲಾಗಿಲ್ಲ.—2 ತಿಮೊ. 2:3.