ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ದಯೆಯ ಒಂದೇ ಒಂದು ಕ್ರಿಯೆ

ಕ್ರೈಸ್ತ ದಯೆಯ ಒಂದೇ ಒಂದು ಕ್ರಿಯೆ

ಭಾರತದ ಗುಜರಾತ್‌ನಲ್ಲಿರುವ ಒಂದು ಚಿಕ್ಕ ಪಟ್ಟಣದಲ್ಲಿ, ಜಾನ್‌ ಎಂಬವರ ತಂದೆ 60 ವರ್ಷಗಳ ಹಿಂದೆ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾಗಿದ್ದರು. ಆದರೆ ಆ ಸಮಯದಲ್ಲಿ ಹದಿಪ್ರಾಯದವನಾಗಿದ್ದ ಜಾನ್‌, ಅವರ ಐದು ಮಂದಿ ಸಹೋದರ ಸಹೋದರಿಯರು ಹಾಗೂ ಅವರ ತಾಯಿ ಪಕ್ಕಾ ರೋಮನ್‌ ಕ್ಯಾಥೊಲಿಕರಾಗಿದ್ದರು. ಯೆಹೋವನ ಸಾಕ್ಷಿಯಾಗಿದ್ದ ಅವರ ತಂದೆಯನ್ನು ಅವರೆಲ್ಲರೂ ವಿರೋಧಿಸುತ್ತಿದ್ದರು.

ಒಂದು ದಿನ ಜಾನ್‌ರ ತಂದೆ ತಮ್ಮ ಸಭೆಯ ಸ್ನೇಹಿತನಿಗೆ ಒಂದು ಪತ್ರವನ್ನು ಕೊಟ್ಟು ಬರುವಂತೆ ಜಾನ್‌ಗೆ ಹೇಳಿದರು. ಆದರೆ ಅದೇ ದಿನ ಬೆಳಗ್ಗೆ ಜಾನ್‌ ತಗಡಿನ ಒಂದು ಡ್ರಮ್‌ ಅನ್ನು ತೆರೆಯುವಾಗ ತಮ್ಮ ಬೆರಳಿಗೆ ಗಾಯಮಾಡಿಕೊಂಡರು. ಗಾಯದಿಂದ ತುಂಬ ರಕ್ತ ಸೋರುತ್ತಿತ್ತು. ಆದರೂ ತಂದೆ ಹೇಳಿದಂತೆ ಮಾಡಲು ಅವರು ಬೆರಳಿಗೆ ಬಟ್ಟೆ ಕಟ್ಟಿಕೊಂಡು ಪತ್ರವನ್ನು ತಲುಪಿಸಲು ಹೊರಟರು.

ತಂದೆ ಕೊಟ್ಟ ವಿಳಾಸಕ್ಕೆ ಜಾನ್‌ ತಲುಪಿದಾಗ ಆ ಸ್ನೇಹಿತರ ಹೆಂಡತಿಗೆ ಪತ್ರ ಕೊಟ್ಟರು. ಅವರು ಯೆಹೋವನ ಸಾಕ್ಷಿಯಾಗಿದ್ದರು. ಅವರು ಜಾನ್‌ರ ಬೆರಳಿಗೆ ಬಟ್ಟೆ ಕಟ್ಟಿರುವುದನ್ನು ನೋಡಿ ಸ್ವಲ್ಪ ಔಷಧಿ ಹಚ್ಚಿ ಬ್ಯಾಂಡೇಜ್‌ ಕಟ್ಟಲಾ ಎಂದು ಕೇಳಿದರು. ಅವರ ಮನೆಯಲ್ಲಿದ್ದ ಪ್ರಥಮ ಚಿಕಿತ್ಸೆ ಡಬ್ಬಿ ತಂದು, ಗಾಯವನ್ನು ಶುಚಿಗೊಳಿಸಿ, ಬೆರಳಿಗೆ ಬ್ಯಾಂಡೇಜ್‌ ಹಾಕಿದರು. ನಂತರ ಜಾನ್‌ಗೆ ಕುಡಿಯಲು ಬಿಸಿಬಿಸಿ ಟೀ ಮಾಡಿಕೊಟ್ಟು, ಸ್ನೇಹಪರವಾಗಿ ಬೈಬಲಿನ ಬಗ್ಗೆ ಮಾತಾಡಿದರು.

ಆಕೆಯ ದಯಾಪೂರ್ವಕ ಕ್ರಿಯೆಯಿಂದ ಜಾನ್‌ಗೆ ಯೆಹೋವನ ಸಾಕ್ಷಿಗಳ ಬಗ್ಗೆ ಇದ್ದ ತಪ್ಪಾದ ಮನೋಭಾವ ಬದಲಾಗತೊಡಗಿತು. ಆದ್ದರಿಂದ ಯೆಹೋವನ ಸಾಕ್ಷಿಗಳ ಹಾಗೂ ಚರ್ಚಿನ ಬೋಧನೆಗಳಲ್ಲಿದ್ದ ವ್ಯತ್ಯಾಸದ ಬಗ್ಗೆ ಎರಡು ಪ್ರಶ್ನೆಗಳನ್ನು ಕೇಳಿದರು. ಯೇಸು ದೇವರಾ? ಕ್ರೈಸ್ತರು ಮರಿಯಳಿಗೆ ಪ್ರಾರ್ಥಿಸಬೇಕಾ? ಆ ಸಹೋದರಿ ಗುಜರಾತಿ ಭಾಷೆ ಕಲಿತಿದ್ದರಿಂದ ಜಾನ್‌ಗೆ ಅವರ ಮಾತೃಭಾಷೆಯಲ್ಲೇ ಉತ್ತರ ಕೊಟ್ಟರು. ಉತ್ತರಗಳನ್ನು ಬೈಬಲಿನಿಂದಲೇ ತೋರಿಸಿ, “ರಾಜ್ಯದ ಈ ಸುವಾರ್ತೆ” ಎಂಬ ಕಿರುಪುಸ್ತಿಕೆಯನ್ನು ನೀಡಿದರು.

ಜಾನ್‌ ಆ ಪುಸ್ತಕವನ್ನು ಓದಿದ ನಂತರ ತಾವು ಓದುತ್ತಿರುವ ವಿಷಯವು ಸತ್ಯ ಎಂದು ಅವರಿಗೆ ಮನದಟ್ಟಾಯಿತು. ನಂತರ ಅವರು ಪಾದ್ರಿಯ ಬಳಿಗೆ ಹೋಗಿ ಅದೇ ಪ್ರಶ್ನೆಗಳನ್ನು ಕೇಳಿದರು. ಆಗ ಪಾದ್ರಿ ಕೋಪದಿಂದ ಅವನೆಡೆಗೆ ಬೈಬಲನ್ನು ಬಿಸಾಡುತ್ತಾ “ನೀನು ಸೈತಾನ ಆಗಿಬಿಟ್ಟಿದ್ದಿಯ!” ಎಂದು ಕಿರುಚಿದರು. “ಯೇಸು ದೇವರಲ್ಲ ಎಂದು ಬೈಬಲಿನಲ್ಲಿ ಎಲ್ಲಿ ಹೇಳಿದೆ ತೋರಿಸು. ಮರಿಯಳನ್ನು ಆರಾಧಿಸಬಾರದು ಎಂದು ಬೈಬಲಿನಲ್ಲಿ ಎಲ್ಲಿ ತಿಳಿಸಿದೆ ತೋರಿಸು!” ಎಂದರು ಆ ಪಾದ್ರಿ. ಅವರು ಈ ರೀತಿ ವರ್ತಿಸಿದ್ದರಿಂದ ಜಾನ್‌ಗೆ ಸಿಡಿಲು ಬಡಿದಂತಾಯಿತು. ಇನ್ನೆಂದಿಗೂ ಕ್ಯಾಥೊಲಿಕ್‌ ಚರ್ಚಿಗೆ ಕಾಲಿಡಲ್ಲ ಎಂದು ಜಾನ್‌ ಆ ಪಾದ್ರಿಗೆ ಹೇಳಿದರು. ಮತ್ತೆಂದಿಗೂ ಅವರು ಚರ್ಚಿಗೆ ಹೋಗಲೇ ಇಲ್ಲ.

ಜಾನ್‌ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಿ ಸತ್ಯವನ್ನು ಸ್ವೀಕರಿಸಿ ಯೆಹೋವನ ಸೇವೆ ಮಾಡಲು ಆರಂಭಿಸಿದರು. ಸಮಯಾನಂತರ ಅವರ ಕುಟುಂಬದ ಇತರ ಸದಸ್ಯರೂ ಯೆಹೋವನ ಆರಾಧಕರಾದರು. ಇವತ್ತಿಗೂ ಅಂದರೆ 60 ವರ್ಷಗಳಾದ ಮೇಲೂ ಜಾನ್‌ರ ಬಲಗೈಯ ತೋರುಬೆರಳಿನಲ್ಲಿ ಆ ಗಾಯದ ಗುರುತು ಹಾಗೇ ಇದೆ. ಇದು, ಕ್ರೈಸ್ತ ದಯೆಯ ಒಂದೇ ಒಂದು ಕ್ರಿಯೆ ಅವರಿಗೆ ಜೀವನಪೂರ್ತಿ ಯೆಹೋವನನ್ನು ಆರಾಧಿಸುವಂತೆ ಪ್ರೇರಿಸಿದ್ದನ್ನು ನೆನಪುಹುಟ್ಟಿಸುತ್ತಾ ಇರುತ್ತದೆ.—2 ಕೊರಿಂ. 6:4, 6.