ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ

ಯೇಸು ನಿಜವಾಗಲೂ ಇದ್ದನಾ?

ಯೇಸು ನಿಜವಾಗಲೂ ಇದ್ದನಾ?

ಯೇಸು ಒಬ್ಬ ದೊಡ್ಡ ಶ್ರೀಮಂತ ಅಥವಾ ರಾಜಕೀಯವಾಗಿ ಬಲಾಢ್ಯ ವ್ಯಕ್ತಿಯಾಗಿರಲಿಲ್ಲ. ತನ್ನದು ಅಂತ ಹೇಳಿಕೊಳ್ಳಲು ಯೇಸುವಿಗೆ ಮನೆ ಕೂಡ ಇರಲಿಲ್ಲ. ಆದರೆ ಆತನ ಬೋಧನೆಗಳು ಜಗತ್ತಿಗೆ ಪ್ರಸಿದ್ಧ. ಪ್ರಶ್ನೆ ಏನೆಂದರೆ ಯೇಸು ನಿಜವಾಗಲೂ ಇದ್ದನಾ? ಇದರ ಬಗ್ಗೆ ಆಧುನಿಕ ಮತ್ತು ಪ್ರಾಚೀನ ವಿದ್ವಾಂಸರು ಏನು ಹೇಳಿದ್ದಾರೆಂದು ನೋಡೋಣ.

 • ಮೈಕಲ್‌ಗ್ರಾಂಟ್‌, ಇತಿಹಾಸಗಾರ ಮತ್ತು ಪ್ರಾಚೀನ ನಾಗರಿಕತೆಯ ವಿದ್ವಾಂಸ. ಈತ ಗಮನಿಸಿದ್ದು: “ಐತಿಹಾಸಿಕ ಮಾಹಿತಿ ಇರುವ ಪ್ರಾಚೀನ ಬರಹಗಳಿಗೆ ಅನ್ವಯಿಸುವ ನಿಯಮಗಳನ್ನೇ ಹೊಸ ಒಡಂಬಡಿಕೆಗೂ ಅನ್ವಯಿಸುವುದಾದರೆ ಯೇಸು ನಿಜವಾಗಲೂ ಇದ್ದನೆಂಬ ಮಾತನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ. ಪ್ರಾಚೀನ ಕಾಲದ ಪ್ರಸಿದ್ಧ ವ್ಯಕ್ತಿಗಳು ಇದ್ದರಾ ಎಂದು ಯಾರೂ ಪ್ರಶ್ನಿಸಲು ಹೇಗೆ ಆಗುವುದಿಲ್ಲವೋ ಹಾಗೆಯೇ ಯೇಸು ನಿಜವಾಗಿಯೂ ಇದ್ದನಾ ಎಂದೂ ಪ್ರಶ್ನಿಸಲಿಕ್ಕಾಗುವುದಿಲ್ಲ.”

 • ರುಡಾಲ್ಫ್ ಬಲ್ಟ್‌ಮನ್‌, ಹೊಸ ಒಡಂಬಡಿಕೆಗೆ ಸಂಬಂಧಪಟ್ಟ ಅಧ್ಯಯನಗಳ ಪ್ರೊಫೆಸರ್‌. ಇವರು ಹೇಳುವುದು: “ಯೇಸು ನಿಜವಾಗಲೂ ಇದ್ದನಾ ಅಂತ ಸಂಶಯಪಡಲು ಯಾವುದೇ ಕಾರಣವಿಲ್ಲ ಮತ್ತು ಅದು ಅಸಂಬದ್ಧ. [ಕ್ರೈಸ್ತರ] ಪ್ರಾಚೀನ ಪ್ಯಾಲೆಸ್ಟೀನ್‌ ಜನಾಂಗದ ಸ್ಥಾಪಕ ಯೇಸು ಎಂಬುದನ್ನು ಬುದ್ಧಿ ಇರುವ ಯಾವ ವ್ಯಕ್ತಿ ಕೂಡ ಸಂಶಯಿಸುವುದಿಲ್ಲ.”

 • ವಿಲ್‌ಡೂರಾಂಟ್‌, ಇತಿಹಾಸಗಾರ, ಬರಹಗಾರ ಮತ್ತು ತತ್ವಜ್ಞಾನಿ. ಇವರು ಬರೆದದ್ದು: “ಒಂದೇ ತಲೆಮಾರಿಗೆ ಸೇರಿದ ಕೆಲವು ಸಾಮಾನ್ಯ ಮನುಷ್ಯರು ಅಂಥ ಪ್ರಭಾವಶಾಲಿಯಾದ ಮತ್ತು ಚಿತ್ತಾಕರ್ಷಕ ವ್ಯಕ್ತಿಯನ್ನು ಊಹಿಸಿ ವರ್ಣಿಸಿರುವಲ್ಲಿ ಮತ್ತು ಇಷ್ಟೊಂದು ಉನ್ನತವಾದ ನೈತಿಕ ಸೂತ್ರಗಳನ್ನು, ಮಾನವರೆಲ್ಲರೂ ಸಹೋದರರೆಂಬ ಚಿತ್ರಣವನ್ನು ಕೊಟ್ಟಿರುತ್ತಿದ್ದಲ್ಲಿ, ಅದು ತಾನೇ ಸುವಾರ್ತೆಗಳಲ್ಲಿ ದಾಖಲಾದ ಎಲ್ಲಾ ಅದ್ಭುತಗಳಿಗಿಂತ ದೊಡ್ಡ ಅದ್ಭುತವಾಗಿರುತ್ತಿತ್ತು.”

 • ಆಲ್ಬರ್ಟ್ ಐನ್‍ಸ್ಟೈನ್‌, ಜರ್ಮನಿಯ ಭೌತವಿಜ್ಞಾನಿ. ಇವರು ಹೇಳಿದ್ದು: “ನಾನೊಬ್ಬ ಯೆಹೂದಿ. ಆದರೆ ನಜರೇತಿನ ಯೇಸುವಿನ ಆಕರ್ಷಕ ವ್ಯಕ್ತಿತ್ವದಿಂದ ಪುಳಕಿತನಾಗಿದ್ದೇನೆ.” ‘ಯೇಸು ಒಬ್ಬ ಐತಿಹಾಸಿಕ ವ್ಯಕ್ತಿ ಅಂತ ನಂಬುತ್ತೀರಾ’ ಎಂದು ಕೇಳಿದಾಗ ಆತನು ಹೇಳಿದ್ದು: “ಸಂಶಯನೇ ಇಲ್ಲ. ಸುವಾರ್ತಾ ಪುಸ್ತಕಗಳನ್ನು ಓದುವಾಗ ನಮ್ಮ ಕಣ್ಮುಂದೆ ಯೇಸುನೇ ಪ್ರತ್ಯಕ್ಷನಾದಂತೆ ಇರುತ್ತದೆ. ಏಕೆಂದರೆ ಅದರ ಪ್ರತಿ ಪದದಲ್ಲೂ ಆತನ ವ್ಯಕ್ತಿತ್ವ ಅಡಗಿದೆ. ಇದು ಕಟ್ಟುಕಥೆಯಾಗಿರುತ್ತಿದ್ದಲ್ಲಿ ಇಷ್ಟೊಂದು ಜೀವ ತುಂಬಲು ಆಗುತ್ತಿರಲಿಲ್ಲ.”

  “ಸುವಾರ್ತಾ ಪುಸ್ತಕಗಳನ್ನು ಓದುವಾಗ ನಮ್ಮ ಕಣ್ಮುಂದೆ ಯೇಸುನೇ ಪ್ರತ್ಯಕ್ಷನಾದಂತಿರುತ್ತದೆ.”—ಆಲ್ಬರ್ಟ್ ಐನ್‍ಸ್ಟೈನ್‌

 ಇತಿಹಾಸ ಏನು ಹೇಳುತ್ತದೆ?

ಸುವಾರ್ತಾ ಪುಸ್ತಕಗಳೆಂದು ಕರೆಯಲಾಗುವ ಬೈಬಲ್‌ ವೃತ್ತಾಂತಗಳಲ್ಲಿ ಯೇಸುವಿನ ಜೀವನ ಮತ್ತು ಸಾರುವ ಕೆಲಸದ ಬಗ್ಗೆ ವಿವರವಾಗಿ ದಾಖಲಿಸಲಾಗಿದೆ. ಅವುಗಳನ್ನು ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಎಂಬವರು ಬರೆದಿದ್ದು ಅವುಗಳಿಗೆ ಅವರ ಹೆಸರುಗಳನ್ನೇ ಇಡಲಾಗಿದೆ. ಇವರು ಮಾತ್ರವಲ್ಲದೆ ಹಿಂದಿನ ಕಾಲದ ಕ್ರೈಸ್ತರಲ್ಲದ ಅನೇಕರು ಯೇಸುವಿನ ಬಗ್ಗೆ ತಿಳಿಸಿದ್ದಾರೆ.

 • ಟ್ಯಾಸಿಟಸ್‌

  (ಸುಮಾರು ಕ್ರಿ.ಶ. 56-120) ಪ್ರಾಚೀನ ರೋಮಿನ ಇತಿಹಾಸಗಾರರಲ್ಲಿ ಟ್ಯಾಸಿಟಸ್‌ ತುಂಬಾ ಪ್ರಸಿದ್ಧ ವ್ಯಕ್ತಿ. ಅವನು ಬರೆದ ಆ್ಯನಲ್ಸ್ (ದಾಖಲೆಗಳು) ಕಿ.ಶ. 14ರಿಂದ ಕ್ರಿ.ಶ. 68ರವರೆಗಿನ ರೋಮಿನ ಆಳ್ವಿಕೆಯ ಕುರಿತಾಗಿವೆ. (ಯೇಸು ಕ್ರಿ.ಶ. 33ರಲ್ಲಿ ಸತ್ತನು.) ಕ್ರಿ.ಶ. 64ರಲ್ಲಿ ರೋಮ್‌ ಬೆಂಕಿಗೆ ಆಹುತಿಯಾದಾಗ ಇದಕ್ಕೆ ಚಕ್ರವರ್ತಿ ನಿರೋ ಕಾರಣ ಅಂತ ಟ್ಯಾಸಿಟಸ್‌ ಬರೆದನು ಮತ್ತು ಈ “ಸುದ್ದಿ ಹರಡದಂತೆ ತಡೆಯಲು” ನೀರೋ ಇದರ ಆರೋಪವನ್ನು ಕ್ರೈಸ್ತರ ಮೇಲೆ ಹಾಕಿದನೆಂದೂ ಅವನು ತಿಳಿಸಿದ್ದಾನೆ. ನಂತರ ಅವನು ಕೂಡಿಸಿ ಹೇಳಿದ್ದು: “[ಕ್ರೈಸ್ತರು] ಎಂಬ ಹೆಸರು ಯಾರಿಂದ ಬಂತೋ ಆ ಕ್ರಿಸ್ಟಸ್‌[ಕ್ರಿಸ್ತನು] ತಿಬೇರಿಯಸ್‍ನ ಆಳಿಕೆಯ ಕಾಲದಲ್ಲಿ ಆಡಳಿತಗಾರರಲ್ಲಿ ಒಬ್ಬನಾದ ಪೊಂತ್ಯ ಪಿಲಾತನಿಂದ ಮರಣ ದಂಡನೆಯನ್ನು ಅನುಭವಿಸಿದನು.”—ಆ್ಯನಲ್ಸ್, XV, 44.

 • ಸ್ಯೂಟೋನಿಯಸ್‌

  (ಸುಮಾರು ಕ್ರಿ.ಶ. 69-122) ಈ ರೋಮಿನ ಇತಿಹಾಸಗಾರ, ರೋಮನ್ನು ಆಳಿದ ಮೊದಲ 11 ಚಕ್ರವರ್ತಿಗಳ ಆಳ್ವಿಕೆಯಲ್ಲಿ ನಡೆದ ಘಟನೆಗಳ ಬಗ್ಗೆ ಲೈವ್ಸ್‌ ಆಫ್‌ ದ ಸೀಸರ್ಸ್‌ ಎಂಬ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಕ್ಲಾಡಿಯಸ್‌ ಬಗ್ಗೆ ಬರೆಯುವಾಗ ಯೇಸುವಿಗೆ ಸಂಬಂಧಪಟ್ಟಂತೆ ರೋಮ್‍ನಲ್ಲಿದ್ದ ಯೆಹೂದ್ಯರ ನಡುವೆ ಆದ ಗಲಭೆಯ ಕುರಿತು ತಿಳಿಸಿದ್ದಾನೆ. (ಅಪೊಸ್ತಲರ ಕಾರ್ಯಗಳು 18:2) ಸ್ಯೂಟೋನಿಯಸ್‌ ಬರೆದದ್ದು: “ಕ್ರಿಸ್ಟಸ್‌ [ಕ್ರಿಸ್ತ]ನ ಪ್ರೇರೇಪಣೆಯಿಂದಾಗಿ ಯೆಹೂದಿಗಳು ಯಾವಾಗಲೂ ಗಲಭೆಯನ್ನು ನಡೆಸುತ್ತಿದ್ದ ಕಾರಣ ಅವನು [ಕ್ಲಾಡಿಯಸ್‌] ಅವರನ್ನು ರೋಮಿನಿಂದ ಹೊರಗಟ್ಟಿದನು.” (ದ ಡೀಫೈಡ್ ಕ್ಲಾಡಿಯಸ್‌ XXV, 4) ಯೇಸುವೇ ಗಲಭೆಗೆ ಕಾರಣ ಅಂತ ತಪ್ಪಾಗಿ ಆರೋಪಿಸಿದರೂ ಸ್ಯೂಟೋನಿಯಸ್‌ ಯೇಸು ನಿಜವಾಗಿ ಇದ್ದನು ಎನ್ನುವುದರ ಬಗ್ಗೆ ಸ್ವಲ್ಪವೂ ಸಂಶಯಪಡಲಿಲ್ಲ.

 • ಪ್ಲಿನಿ ದ ಯಂಗರ್‌

  (ಸುಮಾರು ಕ್ರಿ.ಶ. 61-113) ರೋಮಿನ ಬರಹಗಾರ ಮತ್ತು ಬಿಥೂನ್ಯದ (ಈಗ ಟರ್ಕಿ) ರಾಜ್ಯಪಾಲನಾದ ಇವನು ಸಾಮ್ರಾಟನಾದ ಟ್ರೇಜನ್‌ಗ ಆ ಪ್ರಾಂತ್ಯದಲ್ಲಿದ್ದ ಕ್ರೈಸ್ತರಿಗೆ ಏನು ಮಾಡಬೇಕೆಂದು ಪತ್ರವನ್ನು ಬರೆದನು. ಕ್ರೈಸ್ತರು ತಮ್ಮ ಧರ್ಮವನ್ನು ಬಿಟ್ಟುಬಿಡಲು ಅವರ ಮೇಲೆ ಒತ್ತಡ ಹಾಕಿ, ಅದನ್ನು ಬಿಡಲು ನಿರಾಕರಿಸಿದವರಿಗೆ ತಾನು ಮರಣದಂಡನೆ ವಿಧಿಸಿದೆ ಎಂದು ಪ್ಲಿನಿ ಹೇಳಿದನು. ಅದರ ಬಗ್ಗೆ ಮತ್ತೂ ತಿಳಿಸಿದ್ದು: “ಯಾರು [ಅನ್ಯ] ದೇವರುಗಳಿಗೆ ಪ್ರಾರ್ಥನೆಗಳನ್ನು ಪುನರುಚ್ಚರಿಸಿದರೋ, ನಿನ್ನ [ಟ್ರೇಜನ್‍ನ] ಪ್ರತಿಮೆಗೆ ಧೂಪ ಮತ್ತು ದ್ರಾಕ್ಷಾರಸವನ್ನು ಅರ್ಪಿಸಿದರೋ . . . ಮತ್ತು ಕ್ರಿಸ್ತನನ್ನು ಶಪಿಸಿದರೋ ಅವರನ್ನು ಬಿಡುಗಡೆಗೊಳಿಸುವುದು ಒಳ್ಳೇದು ಅಂತ ನನಗೆ ಅನಿಸಿತು.”—ಪ್ಲಿನಿಲೆಟರ್ಸ್‌, ಪುಸ್ತಕ X, XCVI.

 •  ಫ್ಲೇವಿಯಸ್‌ ಜೋಸೀಫಸ್‌

  (ಸುಮಾರು ಕ್ರಿ.ಶ. 37-100) ಯೆಹೂದಿ ಯಾಜಕ ಮತ್ತು ಇತಿಹಾಸಗಾರನಾಗಿದ್ದ ಇವನು, ರಾಜಕೀಯವಾಗಿ ಪ್ರಬಲನಾಗಿದ್ದ ಯೆಹೂದಿ ಮಹಾ ಯಾಜಕ ಅನ್ನನ ಬಗ್ಗೆ ಹೇಳಿದ್ದು: ಅವನು “ಸನ್ಹೇದ್ರಿನ್‍ನ [ಯೆಹೂದಿ ಮುಖ್ಯ ನ್ಯಾಯಾಲಯದ] ನ್ಯಾಯಾಧಿಪತಿಗಳನ್ನು ಒಟ್ಟುಸೇರಿಸಿ, ಅವರ ಮುಂದೆ ಯಾಕೋಬ ಎಂಬ ಹೆಸರಿನ ವ್ಯಕ್ತಿಯನ್ನು ತಂದು ನಿಲ್ಲಿಸಿದನು. ಇವನು ಕ್ರಿಸ್ತನೆಂದು ಕರೆಯಲಾದ ಯೇಸುವಿನ ತಮ್ಮನಾಗಿದ್ದನು.”—ಜ್ಯೂವಿಷ್‌ ಆ್ಯಂಟಿಕ್ವಿಟಿಸ್‌, XX, 200.

 • ಟ್ಯಾಲ್ಮುಡ್

  ಇದು ಯೆಹೂದಿ ರಬ್ಬಿಗಳ ಬರಹವಾಗಿದ್ದು ಕ್ರಿ.ಶ. 3ರಿಂದ 6ನೇ ಶತಮಾನದವರೆಗಿನ ದಾಖಲೆಯಾಗಿದೆ. ಇದರಲ್ಲಿ ಯೇಸುವಿನ ವಿರೋಧಿಗಳು ಸಹ ಆತನು ಇದ್ದನೆಂದು ಒಪ್ಪಿಕೊಂಡಿದ್ದರ ಬಗ್ಗೆ ತಿಳಿಸಲಾಗಿದೆ. ಅದರಲ್ಲಿನ ಒಂದು ಭಾಗ ಹೇಳುವುದು: “ಪಸ್ಕಹಬ್ಬದ . . . ದಿನ ನಜರೇತಿನ ಯೇಷುವನ್ನು [ಯೇಸು] ಕಂಬಕ್ಕೇರಿಸಲಾಯಿತು,” ಈ ಮಾತು ಐತಿಹಾಸಿಕವಾಗಿ ನಿಷ್ಕೃಷ್ಟವಾಗಿದೆ. (ಬಾಬಿಲೋನ್ಯನ್‌ ಟ್ಯಾಲ್ಮುಡ್, ಸನ್ಹೇದ್ರಿನ್‌ 43ಎ, ಮ್ಯುನಿಕ್‌ ಕೋಡೆಕ್ಸ್‌; ಯೋಹಾನ 19:14-16 ನೋಡಿ.) ಮತ್ತೊಂದು ಭಾಗ ಹೇಳುವುದು: “ನಮ್ಮಲ್ಲಿ ಯಾರ ಮಗನಾಗಲಿ, ಶಿಷ್ಯನಾಗಲಿ ಆ ನಜರೇತಿನವನಂತೆ ಸಾರ್ವಜನಿಕವಾಗಿ ತನ್ನನ್ನೇ ಅವಮಾನಕ್ಕೊಳಪಡಿಸಿಕೊಳ್ಳುವ ವ್ಯಕ್ತಿಯಾಗದಂತೆ ನಾವು ನೋಡಿಕೊಳ್ಳಬೇಕು.” ನಜರೇತಿನವ ಎಂಬ ಪದವನ್ನು ಹೆಚ್ಚಾಗಿ ಯೇಸುವಿಗೆ ಸೂಚಿಸಿ ಬಳಸಲಾಗುತ್ತಿತ್ತು.—ಬಾಬಿಲೋನ್ಯನ್‌ ಟ್ಯಾಲ್ಮುಡ್, ಬೆರಾಕತ್‌ 17ಬಿ, ಪಾದಟಿಪ್ಪಣಿ, ಮ್ಯುನಿಕ್‌ ಕೋಡೆಕ್ಸ್‌; ಲೂಕ 18:37 ನೋಡಿ.

ಬೈಬಲಿನಲ್ಲಿರುವ ಆಧಾರಗಳು

ಸುವಾರ್ತಾ ಪುಸ್ತಕಗಳು ಯೇಸುವಿನ ಜೀವನ ಮತ್ತು ಸಾರುವ ಕೆಲಸದ ಬಗ್ಗೆ ಸವಿವರವಾದ ಮಾಹಿತಿಯನ್ನು ಕೊಡುತ್ತವೆ. ಅದರಲ್ಲೂ ಇತಿಹಾಸದಲ್ಲಿ ಬರುವ ಪ್ರಮುಖ ಜನರು, ಸ್ಥಳಗಳು ಮತ್ತು ಸಮಯದ ಬಗ್ಗೆ ನಿರ್ದಿಷ್ಟ ಮಾಹಿತಿಗಳನ್ನು ತಿಳಿಸುತ್ತವೆ. ಇವು ವಿಶ್ವಾಸಾರ್ಹ ಇತಿಹಾಸದ ಗುರುತುಗಳಾಗಿವೆ. ಇದಕ್ಕೊಂದು ಉದಾಹರಣೆ ಲೂಕ 3:1, 2 ರಲ್ಲಿದೆ. ಇದರಲ್ಲಿ ಕೊಡಲಾದ ಮಾಹಿತಿ, ಯೇಸು ಸದ್ಯದಲ್ಲೇ ಬರಲಿದ್ದಾನೆಂದು ತಿಳಿಸಿದ ಸ್ನಾನಿಕನಾದ ಯೋಹಾನನು ಯಾವಾಗ ತನ್ನ ಕೆಲಸವನ್ನು ಆರಂಭಿಸಿದನೆಂದು ತಿಳಿಯಲು ನಮಗೆ ಸಹಾಯ ಮಾಡುತ್ತದೆ.

“ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ.”—2 ತಿಮೊಥೆಯ 3:16

ಚಕ್ರವರ್ತಿಯಾದ ತಿಬೇರಿಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಪೊಂತ್ಯ ಪಿಲಾತನು ಯೂದಾಯದ ರಾಜ್ಯಪಾಲನಾಗಿಯೂ ಹೆರೋದನು ಗಲಿಲಾಯದ ಉಪಾಧಿಪತಿಯಾಗಿಯೂ ಅವನ ಸಹೋದರನಾದ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಸೀಮೆಗಳ ಉಪಾಧಿಪತಿಯಾಗಿಯೂ ಲುಸನ್ಯನು ಅಬಿಲೇನೆಯ ಉಪಾಧಿಪತಿಯಾಗಿಯೂ ಇದ್ದಾಗ, ಅನ್ನನೂ ಕಾಯಫನೂ ಮುಖ್ಯ ಯಾಜಕರಾಗಿದ್ದ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅರಣ್ಯದಲ್ಲಿ ದೇವರ ಪ್ರಕಟನೆಯು ಬಂತು” ಎಂದು ಲೂಕ ಬರೆದನು. “ಯೋಹಾನನಿಗೆ ಅರಣ್ಯದಲ್ಲಿ ದೇವರ ಪ್ರಕಟನೆ” ಕ್ರಿ.ಶ. 29ರಲ್ಲಿ ಸಿಕ್ಕಿತು ಅಂತ ಈ ಸವಿವರವಾದ ಪಟ್ಟಿಯಿಂದ ಗೊತ್ತಾಗುತ್ತದೆ.

 ಇಲ್ಲಿ ಲೂಕನು ತಿಳಿಸಿರುವ ಏಳು ವ್ಯಕ್ತಿಗಳ ಹೆಸರುಗಳು ಇತಿಹಾಸಗಾರರಿಗೆ ಚೆನ್ನಾಗಿ ತಿಳಿದಿವೆ. ಆದರೆ ಒಂದು ಸಮಯದಲ್ಲಿ, ಪೊಂತ್ಯ ಪಿಲಾತ ಮತ್ತು ಲುಸನ್ಯ ನಿಜವಾಗಿಯೂ ಇದ್ದರಾ ಎಂದು ಟೀಕಾಕಾರರು ಸಂಶಯ ವ್ಯಕ್ತಪಡಿಸಿದ್ದರು. ಆದರೆ ಈ ಇಬ್ಬರ ಹೆಸರುಗಳಿದ್ದ ಹಳೇ ಕೆತ್ತನೆಲಿಪಿಗಳು ದೊರೆತ ಮೇಲೆ ಲೂಕ ಬರೆದಿರುವುದು ನಿಜ ಎನ್ನುವುದಕ್ಕೆ ಪುಷ್ಟಿ ಸಿಕ್ಕಿತು. * ಹೀಗೆ ಟೀಕಾಕಾರರ ಸಂಶಯಗಳು ಬಗೆಹರಿದವು.

ಇದು ಪ್ರಾಮುಖ್ಯವೇಕೆ?

ಯೇಸು ಜನರಿಗೆ ಇಡೀ ಲೋಕವನ್ನಾಳುವ ಸರ್ಕಾರವಾದ ದೇವರ ರಾಜ್ಯದ ಬಗ್ಗೆ ಕಲಿಸಿದನು

ಯೇಸುವಿನ ಬೋಧನೆಗಳು ತುಂಬಾ ಪ್ರಾಮುಖ್ಯವಾಗಿರುವುದರಿಂದ ಆತನು ಇದ್ದನಾ ಅಂತ ತಿಳಿದುಕೊಳ್ಳುವುದು ಅವಶ್ಯಕ. ಉದಾಹರಣೆಗೆ ಜನರು ಸಂತೋಷ, ಸಂತೃಪ್ತಿಯಿಂದ ಹೇಗೆ ಜೀವಿಸುವುದು ಅಂತ ಯೇಸು ಕಲಿಸಿದನು. * ಅಷ್ಟೇ ಅಲ್ಲದೆ, ಮುಂದೊಂದು ದಿನ ಇಡೀ ಮಾನವಕುಲ “ದೇವರ ರಾಜ್ಯ” ಎಂಬ ಸರ್ಕಾರದ ಕೆಳಗೆ ಒಗ್ಗಟ್ಟಿನಿಂದ, ಶಾಂತಿ-ಸಮಾಧಾನದಿಂದ ಇರುವ ಕಾಲ ಬರುವುದೆಂದು ಮಾತು ಕೊಟ್ಟನು.—ಲೂಕ 4:43.

“ದೇವರ ರಾಜ್ಯ” ಎಂಬ ಹೆಸರು ಸೂಕ್ತವಾಗಿದೆ. ಏಕೆಂ ದರೆ ಈ ಸರ್ಕಾರವು ದೇವರ ಪರಮಾಧಿಕಾರವನ್ನು ಇಡೀ ಭೂಮಿಯ ಮೇಲೆ ಸ್ಥಾಪಿಸುವುದು. (ಪ್ರಕಟನೆ 11:15) ಯೇಸು ಮಾದರಿ ಪ್ರಾರ್ಥನೆಯಲ್ಲಿ ಇದನ್ನೇ ಒತ್ತಿ ಹೇಳಿದನು. ಆತ ಹೇಳಿದ್ದು: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, . . . ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು . . . ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ರಾಜ್ಯದ ಆಳ್ವಿಕೆಯಿಂದ ಮಾನವರಿಗೆ ಯಾವ ಪ್ರಯೋಜನ ಇದೆ ಎಂದು ಪರಿಗಣಿಸಿ:

 • ಯುದ್ಧ ಮತ್ತು ಸಾಮಾಜಿಕ ಗಲಭೆಗಳು ಇಲ್ಲವಾಗುವವು.ಕೀರ್ತನೆ 46:8-11.

 • ಭ್ರಷ್ಟಾಚಾರ, ದುರಾಸೆಯಂಥ ಎಲ್ಲಾ ದುಷ್ಟತನ ಮತ್ತು ದೇವಭಕ್ತಿ ಇಲ್ಲದ ಜನರು ಶಾಶ್ವತವಾಗಿ ನಿರ್ನಾಮವಾಗುವರು.ಕೀರ್ತನೆ 37:10, 11.

 • ದೇವರ ರಾಜ್ಯದ ಪ್ರಜೆಗಳಿಗೆ ಸಂತೋಷದ ಮತ್ತು ಸಂತೃಪ್ತಿಕರ ಕೆಲಸ ಇರುವುದು.ಯೆಶಾಯ 65:21, 22.

 • ಈಗ ಹಾಳಾಗಿರುವ ಭೂಮಿಯು ಚೇತರಿಸಿ, ಹೇರಳ ಆಹಾರವನ್ನು ಒದಗಿಸುವುದು.ಕೀರ್ತನೆ 72:16; ಯೆಶಾಯ 11:9.

ಕೆಲವರು ‘ಇದೆಲ್ಲಾ ಕನಸು, ನಿಜ ಆಗಲು ಸಾಧ್ಯನೇ ಇಲ್ಲ’ ಅಂತ ಹೇಳುತ್ತಾರೆ. ನೆನಪಿಡಿ, ಇದೆಲ್ಲಾ ಮಾನವರ ಪ್ರಯತ್ನದಿಂದ ಆಗುವಂಥದ್ದಲ್ಲ. ಉದಾಹರಣೆಗೆ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವರು ಬಹಳಷ್ಟು ಸಾಧನೆಗಳನ್ನು ಮಾಡಿರುವುದಾದರೂ ಲಕ್ಷಾಂತರ ಜನ ತಮ್ಮ ಮುಂದಿನ ಜೀವನದ ಬಗ್ಗೆ ಇನ್ನೂ ಭಯ ಮತ್ತು ಚಿಂತೆಯಲ್ಲೇ ಮುಳುಗಿದ್ದಾರೆ. ವ್ಯಾಪಾರ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ದುರಾಸೆ ಮತ್ತು ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದನ್ನೆಲ್ಲಾ ಗಮನಿಸಿದ ಮೇಲೆ ನಮಗೆ ಗೊತ್ತಾಗುವುದು ಏನೆಂದರೆ ಮಾನವ ಆಳ್ವಿಕೆ ವಿಫಲ!—ಪ್ರಸಂಗಿ 8:9.

ಹಾಗಾಗಿ, ಯೇಸು ಇದ್ದನಾ ಅಂತ ತಿಳಿದುಕೊಳ್ಳುವುದರಿಂದ ನಮಗೆ ತುಂಬಾ ಪ್ರಯೋಜನ ಇದೆ. * 2 ಕೊರಿಂಥ 1: 19,20 ಹೇಳುವುದು: “ದೇವರ ವಾಗ್ದಾನಗಳು ಎಷ್ಟೇ ಇರುವುದಾದರೂ ಅವು ಅವನ [ಯೇಸು] ಮೂಲಕ ಹೌದಾಗಿ ಪರಿಣಮಿಸಿವೆ.” ▪ (g16-E No. 5)

^ ಪ್ಯಾರ. 23 “ಪ್ರಾಂತ್ಯಾಧಿಕಾರಿ” ಆಗಿದ್ದ ಲುಸನ್ಯನ ಹೆಸರಿರುವ ಹಳೇ ಕೆತ್ತನೆಲಿಪಿಯೊಂದು ದೊರೆತಿದೆ. (ಲೂಕ 3:1, ನೂತನ ಲೋಕ ಭಾಷಾಂತರ, ಪಾದಟಿಪ್ಪಣಿ) ಲೂಕನು ತಿಳಿಸಿರುವ ಸಮಯದಲ್ಲೇ ಲುಸನ್ಯನು ಅಬಿಲೇನೆ ಪ್ರಾಂತ್ಯವನ್ನು ಆಳುತ್ತಿದ್ದನು.

^ ಪ್ಯಾರ. 25 ಯೇಸುವಿನ ಬೋಧನೆಗಳ ಅತ್ಯುತ್ತಮ ಉದಾಹರಣೆ ಮತ್ತಾಯ 5ರಿಂದ 7ನೇ ಅಧ್ಯಾಯದಲ್ಲಿವೆ. ಇದನ್ನು ಪರ್ವತ ಪ್ರಸಂಗ ಎನ್ನುವರು.

^ ಪ್ಯಾರ. 32 ಯೇಸುವಿನ ಮತ್ತು ಆತನ ಬೋಧನೆಗಳ ಬಗ್ಗೆ ಹೆಚ್ಚನ್ನು ತಿಳಿಯಲು www.jw.orgನಲ್ಲಿ ನೋಡಿ ಮತ್ತು BIBLE TEACHINGS > BIBLE QUESTIONS ANSWERED ಎಂಬಲ್ಲಿ ನೋಡಿ.