ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ

ಚೇತರಿಸಿಕೊಳ್ಳಲು ಹೆಜ್ಜೆಗಳು—ಈಗ ನೀವೇನು ಮಾಡಬಹುದು?

ಚೇತರಿಸಿಕೊಳ್ಳಲು ಹೆಜ್ಜೆಗಳು—ಈಗ ನೀವೇನು ಮಾಡಬಹುದು?

ನೋವಿನಿಂದ ಚೇತರಿಸಿಕೊಳ್ಳಲು ಸಲಹೆಗಳನ್ನು ಹುಡುಕುವುದಾದರೆ, ನಿಮಗೆ ಬೇಕಾದಷ್ಟು ಸಲಹೆಗಳು ಸಿಗಬಹುದು. ಕೆಲವು ತುಂಬ ಒಳ್ಳೇ ಸಲಹೆಗಳು, ಇನ್ನು ಕೆಲವು ಅಷ್ಟೊಂದು ಪ್ರಯೋಜನಕಾರಿ ಅಲ್ಲ ಎಂದು ನಿಮಗನಿಸಬಹುದು. ಕಾರಣ, ನಾವು ಈ ಹಿಂದೆ ಚರ್ಚಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋವನ್ನು ವ್ಯಕ್ತಪಡಿಸುತ್ತಾರೆ. ಆದುದರಿಂದ ಒಬ್ಬರಿಗೆ ಉಪಯುಕ್ತವಾಗಿರುವ ಸಲಹೆ ಮತ್ತೊಬ್ಬರಿಗೆ ಉಪಯೋಗವಾಗಲಿಕ್ಕಿಲ್ಲ.

ವಿಷಯ ಹೀಗಿರುವುದಾದರೂ, ಅನೇಕರಿಗೆ ಪ್ರಯೋಜನವಾಗಿರುವ ಕೆಲವು ನಿರ್ದೇಶನಗಳಿವೆ. ಅವು ಎಲ್ಲಾ ಕಾಲಕ್ಕೂ ಉಪಯುಕ್ತವಾದ, ವಿವೇಕಯುತ ಗ್ರಂಥವಾದ ಬೈಬಲಿನ ತತ್ವಗಳಿಗೆ ಹೊಂದಿಕೆಯಲ್ಲಿವೆ. ಅವುಗಳನ್ನು ದುಃಖಿತರಿಗೆ ಸಲಹೆ ನೀಡುವ ಅನೇಕ ಸಲಹೆಗಾರರು ಹೇಳುತ್ತಿರುತ್ತಾರೆ.

1: ಕುಟುಂಬ ಮತ್ತು ಸ್ನೇಹಿತರಿಂದ ಸಹಾಯ ಪಡೆದುಕೊಳ್ಳಿ

 • ಇದು ನೋವಿನಿಂದ ಹೊರಬರಲು ಸಹಾಯ ಮಾಡುವ ಅತ್ಯುತ್ತಮ ವಿಧಾನ ಎಂದು ತಜ್ಞರು ಹೇಳುತ್ತಾರೆ. ಆದರೆ, ನಿಮಗೆ ಒಬ್ಬರೇ ಇರಬೇಕು ಅಂತ ಅನಿಸಬಹುದು. ನಿಮಗೆ ಸಹಾಯ ಮಾಡಲು ಬಂದವರನ್ನು ನೋಡುವಾಗಲೇ ಕಿರಿಕಿರಿಯಾಗಬಹುದು. ಹೀಗಾಗುವುದು ಸಹಜ.

 • ನೀವು ಯಾವಾಗಲೂ ಬೇರೆಯವರೊಂದಿಗೆ ಇರಬೇಕು ಎಂದು ನೆನಸಬೇಡಿ. ಹಾಗಂತ ಯಾವಾಗಲೂ ಎಲ್ಲರಿಂದ ದೂರ ಇದ್ದು ಬಿಡಬೇಡಿ. ಯಾಕೆಂದರೆ ಭವಿಷ್ಯದಲ್ಲಿ ಅವರ ಸಹಾಯದ ಅಗತ್ಯ ನಿಮಗೆ ಬರಬಹುದು. ಸದ್ಯಕ್ಕೆ ನಿಮಗೆ ಏನು ಬೇಕು, ಏನು ಬೇಡ ಎಂಬುದನ್ನು ವಿನಯದಿಂದ ತಿಳಿಸಿ.

 • ನಿಮ್ಮ ಅಗತ್ಯಕ್ಕನುಗುಣವಾಗಿ, ಎಷ್ಟು ಸಮಯ ಇತರರೊಂದಿಗೆ ಇರಬೇಕು ಮತ್ತು ಎಷ್ಟು ಸಮಯ ಒಂಟಿಯಾಗಿರಬೇಕು ಎಂದು ತಿಳಿದುಕೊಳ್ಳಿ.

ಮೂಲತತ್ವ: “ಒಬ್ಬನಿಗಿಂತ ಇಬ್ಬರು ಲೇಸು . . . ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.” —ಪ್ರಸಂಗಿ 4:9, 10.

2: ಊಟಕ್ಕೆ ಗಮನಕೊಡಿ ಮತ್ತು ವ್ಯಾಯಾಮಕ್ಕೆ ಸಮಯ ಮಾಡಿಕೊಳ್ಳಿ

 • ಸಮತೋಲನ ಆಹಾರವು ನೋವಿನ ಒತ್ತಡದಿಂದ ಉಪಶಮನ ಪಡೆಯಲು ಸಹಾಯ ಮಾಡುತ್ತದೆ. ವಿವಿಧ ಬಗೆಯ ಹಣ್ಣು-ತರಕಾರಿಗಳನ್ನು ಮತ್ತು ಪ್ರೋಟೀನ್‌ ಇರುವ ಪದಾರ್ಥಗಳನ್ನು ತಿನ್ನಿ.

 • ಸಾಕಷ್ಟು ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ.

 • ಹಸಿವೆ ಕಡಿಮೆಯಿರುವುದಾದರೆ, ಆಗಾಗ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ. ನಿಮಗೆ ಸೂಕ್ತವಾದ ಆಹಾರ ಪಥ್ಯದ ಬಗ್ಗೆ ನಿಮ್ಮ ಡಾಕ್ಟರ್‌ ಬಳಿ ಕೇಳಬಹುದು. *

 • ವೇಗವಾಗಿ ನಡೆಯುವುದು ಮತ್ತು ಇನ್ನಿತರ ವ್ಯಾಯಾಮಗಳು ಸ್ವಲ್ಪ ಮಟ್ಟಿಗೆ ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡಬಲ್ಲವು. ವ್ಯಾಯಾಮವು ಕಳೆದುಕೊಂಡ ನಿಮ್ಮ ಪ್ರಿಯರ ಬಗ್ಗೆ ಕೊರಗುವಂತೆ ಅಲ್ಲ, ಆಲೋಚಿಸುವಂತೆ ಸಮಯ ಮಾಡಿಕೊಡಬಹುದು.

ಮೂಲತತ್ವ: “ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ.”—ಎಫೆಸ 5:29.

3: ಸಾಕಷ್ಟು ನಿದ್ದೆ ಮಾಡಿ

 • ನಿದ್ದೆ ತುಂಬ ಅವಶ್ಯ. ಸಾಮಾನ್ಯವಾಗಿ, ನೋವಿನಲ್ಲಿರುವವರಿಗೆ ಹೆಚ್ಚು ಆಯಾಸವಾಗುವುದರಿಂದ ಅವರಿಗದು ಹೆಚ್ಚು ಪ್ರಾಮುಖ್ಯ.

 • ನೀವು ಕಾಫಿ ಮತ್ತು ಮದ್ಯಪಾನೀಯ ಸೇವಿಸುವವರಾದರೆ ಎಷ್ಟು ಸೇವಿಸುತ್ತೀರಿ ಎನ್ನುವುದರ ಬಗ್ಗೆ ಜಾಗ್ರತೆ ವಹಿಸಿ, ಏಕೆಂದರೆ ಇದರಿಂದ ನಿದ್ದೆಗೆಡಬಹುದು.

ಮೂಲತತ್ವ: “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು.” —ಪ್ರಸಂಗಿ 4:6.

4: ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಿ

 • ಪ್ರತಿಯೊಬ್ಬರೂ ನೋವನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಆದುದರಿಂದ ನಿಮಗೆ ಯಾವುದು ಸೂಕ್ತವೆಂಬುದನ್ನು ನೀವೇ ಪತ್ತೆಹಚ್ಚಬೇಕು.

 • ಅನೇಕರಿಗೆ, ಇತರರೊಂದಿಗೆ ತಮ್ಮ ನೋವನ್ನು ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ, ಇನ್ನು ಕೆಲವರು ಅದನ್ನು ಹೇಳಿಕೊಳ್ಳಲು ಬಯಸುವುದಿಲ್ಲ. ನೋವನ್ನು ಇತರರ ಹತ್ತಿರ ಹೇಳಿಕೊಳ್ಳುವುದು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದಾ ಎನ್ನುವುದರ ಬಗ್ಗೆ ತಜ್ಞರಿಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ನಿಮಗೆ ನೋವನ್ನು ಇತರರೊಂದಿಗೆ ಹೇಳಿಕೊಳ್ಳಬೇಕು ಎಂದನಿಸುವುದಾದರೂ ಸಂಕೋಚವಾಗುವುದಾದರೆ, ಮೊದಲು ನಿಮ್ಮ ಆಪ್ತ ಸ್ನೇಹಿತರೊಬ್ಬರ ಹತ್ತಿರ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.

 • ಕೆಲವರಿಗೆ ಅಳುವುದರಿಂದ ಮನಸ್ಸು ಹಗುರವಾಗುತ್ತದೆ, ಇನ್ನು ಕೆಲವರು ಹೆಚ್ಚು ಅಳದಿದ್ದರೂ ನೋವಿನಿಂದ ಚೇತರಿಕೊಳ್ಳುತ್ತಾರೆ.

ಮೂಲತತ್ವ: “ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು.”—ಜ್ಞಾನೋಕ್ತಿ 14:10.

5: ದುರಭ್ಯಾಸಗಳಿಂದ ದೂರವಿರಿ

 • ಕೆಲವರು ನೋವನ್ನು ಮರೆಯಲು ಮದ್ಯಪಾನೀಯ ಮತ್ತು ಅಮಲೌಷಧವನ್ನು ಆಶ್ರಯಿಸುತ್ತಾರೆ. ಆ ರೀತಿಯ ಅಭ್ಯಾಸಗಳು ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತವೆ. ಅಂಥ ಚಟಗಳಿಂದ ಸ್ವಲ್ಪ ಸಮಯ ಉಪಶಮನ ಸಿಗುತ್ತದಾದರೂ ಅದರ ನಂತರ ತುಂಬ ಕೆಟ್ಟ ಪರಿಣಾಮಗಳಾಗುತ್ತವೆ. ನಿಮ್ಮ ಚಿಂತೆಗಳನ್ನು ದೂರವಾಗಿಸಲು ಸರಿಯಾದ ವಿಷಯಗಳನ್ನು ಮಾಡಿ.

ಮೂಲತತ್ವ: ‘ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಳ್ಳೋಣ.’—2 ಕೊರಿಂಥ 7:1.

6: ಸನ್ನಿವೇಶಕ್ಕೆ ತಕ್ಕಂತೆ ಸಮಯವನ್ನು ಉಪಯೋಗಿಸಿಕೊಳ್ಳಿ

 • ತುಂಬ ನೋವು ಅನಿಸುವಾಗ ಅದನ್ನು ಮರೆಯಲು ಸಹಾಯಮಾಡುವ ಚಟುವಟಿಕೆಗಳಲ್ಲಿ ಒಳಗೂಡುವ ಮೂಲಕ ಅನೇಕರು ತಮ್ಮ ಸನ್ನಿವೇಶಗಳನ್ನು ನಿಭಾಯಿಸಿದ್ದಾರೆ.

 • ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು, ಹೊಸ ಹೊಸ ವಿಷಯಗಳನ್ನು ಕಲಿಯುವುದು ಮತ್ತು ಮನೋರಂಜನೆಯಲ್ಲಿ ಒಳಗೂಡುವುದರಿಂದ ಸ್ವಲ್ಪ ಸಮಯಕ್ಕೆ ನಿಮಗೆ ಉಪಶಮನವಾಗಬಹುದು.

 • ಸಮಯ ಸಂದಂತೆ ಪರಿಸ್ಥಿತಿ ಬದಲಾಗುತ್ತದೆ. ನಿಮ್ಮ ನೋವು ಕಡಿಮೆಯಾಗಬಹುದು. ಹೀಗೆ ಮನಸ್ಸಿಗಾದ ಗಾಯ ನಿಧಾನವಾಗಿ ಗುಣವಾಗಬಹುದು.

ಮೂಲತತ್ವ: ‘ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯವಿದೆ.’—ಪ್ರಸಂಗಿ 3:1, 4.

7: ದಿನಚರಿಯನ್ನು ಇಟ್ಟುಕೊಳ್ಳಿ

 • ಆದಷ್ಟು ಬೇಗ ನಿಮ್ಮ ಹಿಂದಿನ ದಿನಚರಿಯನ್ನು ಪ್ರಾರಂಭಿಸಿ.

 • ನಿದ್ದೆ, ಕೆಲಸ ಮತ್ತು ಇನ್ನಿತರ ಚಟುವಟಿಕೆಗಳನ್ನು ದಿನಚರಿಗನುಸಾರ ಮಾಡಲು ಪ್ರಯತ್ನಿಸಿ. ಇದರಿಂದ ನೀವು ಮುಂಚಿನಂತೆ ಸಹಜ ಸ್ಥಿತಿಗೆ ಬರಲು ಸಹಾಯವಾಗುತ್ತದೆ.

 • ನಿಮಗೆ ಸಂತೋಷ ತರುವ ಚಟುವಟಿಕೆಗಳಲ್ಲಿ ಒಳಗೂಡುವುದರಿಂದ ನಿಮ್ಮ ಮನಸ್ಸಿನಲ್ಲಿರುವ ನೋವನ್ನು ಹೋಗಲಾಡಿಸಬಹುದು.

ಮೂಲತತ್ವ: “ಇಂಥವನು ತನ್ನ ಜೀವಮಾನದ ದಿನಗಳನ್ನು ಹೆಚ್ಚಾಗಿ ಗಣನೆಗೆ ತಾರನು; ಇವನು ತನ್ನ ಹೃದಯಾನಂದದಲ್ಲಿ ಮಗ್ನನಾಗಿರುವಂತೆ ದೇವರು ಮಾಡಿದ್ದಾನಷ್ಟೆ.” —ಪ್ರಸಂಗಿ 5:20.

8: ದೊಡ್ಡ ದೊಡ್ಡ ನಿರ್ಣಯಗಳನ್ನು ಈ ಸಮಯದಲ್ಲಿ ಮಾಡಬೇಡಿ

 • ಆಪ್ತರನ್ನು ಕಳಕೊಂಡ ಮೇಲೆ ಒಡನೇ ಮಾಡಿದ ನಿರ್ಣಯಗಳ ಬಗ್ಗೆ ಅನೇಕರು ಆಮೇಲೆ ಪರಿತಪಿಸುತ್ತಾರೆ.

 • ಸ್ಥಳಾಂತರಿಸಬೇಕಾ, ಕೆಲಸ ಬದಲಾಯಿಸಬೇಕಾ ಅಥವಾ ತೀರಿಹೋದವರ ವಸ್ತುಗಳನ್ನು ಏನು ಮಾಡಬೇಕು ಎನ್ನುವುದರ ಬಗ್ಗೆ ನಿರ್ಣಯಗಳನ್ನು ಸಾಧ್ಯವಾದರೆ ಸ್ವಲ್ಪ ಸಮಯಾನಂತರ ಮಾಡಿ.

ಮೂಲತತ್ವ: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ.”—ಜ್ಞಾನೋಕ್ತಿ 21:5.

9: ನಿಮ್ಮ ಆಪ್ತರನ್ನು ಮರೆಯದಿರಿ

 • ತೀರಿಹೋದವರ ಸವಿನೆನಪನ್ನು ಹಸಿರಾಗಿಡುವ ವಿಷಯಗಳನ್ನು ಮಾಡುವುದರಿಂದ ತುಂಬ ಪ್ರಯೋಜನವಾಗುತ್ತದೆ ಎಂದು ಆಪ್ತರನ್ನು ಕಳೆದುಕೊಂಡಿರುವ ಅನೇಕರು ನೆನಸುತ್ತಾರೆ.

 • ತೀರಿಹೋದವರ ಭಾವಚಿತ್ರಗಳನ್ನು ಸಂಗ್ರಹಿಸುವುದು ಅಥವಾ ಅವರ ಬಗ್ಗೆ, ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳ ಬಗ್ಗೆ ಮತ್ತು ನಿಮಗಿಷ್ಟವಾದ ಘಟನೆಗಳ ಬಗ್ಗೆ ಬರೆದಿಡುವುದರಿಂದ ಸಾಂತ್ವನ ಸಿಗಬಹುದು.

 • ಸಂತೋಷದ ಕ್ಷಣಗಳನ್ನು ನೆನಪಿಸುವಂಥ ವಸ್ತುಗಳನ್ನು ತೆಗೆದಿಡಿ. ಆಮೇಲೆ ಅವುಗಳನ್ನು ನೋಡುವಾಗ ನಿಮಗೆ ಸಂತೋಷವಾಗಬಹುದು.

ಮೂಲತತ್ವ: “ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ.”—ಧರ್ಮೋಪದೇಶಕಾಂಡ 32:7.

10: ಮನೆಯಲ್ಲೇ ಇದ್ದುಬಿಡಬೇಡಿ

 • ಪ್ರವಾಸಕ್ಕೆ ಹೋಗುವುದರ ಬಗ್ಗೆ ಯೋಚಿಸಬಹುದು.

 • ಹೆಚ್ಚು ದಿವಸಗಳು ಅಸಾಧ್ಯವಾದರೆ, ಒಂದೊ ಅಥವಾ ಎರಡೊ ದಿವಸಕ್ಕಾಗಿ ಪ್ರವಾಸ ಹೋಗಬಹುದು, ವಸ್ತು ಸಂಗ್ರಹಾಲಯಕ್ಕೆ, ಬೆಟ್ಟದ ಪ್ರದೇಶಗಳಿಗೆ ಹೋಗಬಹುದು ಅಥವಾ ಸ್ವಲ್ಪ ದೂರ ಪ್ರಯಾಣ ಮಾಡಿಬರಬಹುದು.

 • ನೀವು ಸ್ವಲ್ಪ ಸಮಯ ದಿನಾಲೂ ಮಾಡುವ ವಿಷಯಗಳನ್ನು ಬದಿಗಿಟ್ಟು ಬೇರೆ ವಿಷಯಗಳಲ್ಲಿ ಒಳಗೂಡುವುದು ನಿಮ್ಮ ನೋವನ್ನು ಮರೆಯಲು ಸಹಾಯ ಮಾಡುವುದು.

ಮೂಲತತ್ವ: “ನೀವು ಏಕಾಂತವಾದ ಸ್ಥಳಕ್ಕೆ ಬಂದು ತುಸು ದಣಿವಾರಿಸಿಕೊಳ್ಳಿರಿ.”—ಮಾರ್ಕ 6:31.

11: ಸಹಾಯಮಾಡಿ

 • ನೀವು ಬೇರೆಯವರಿಗೆ ಸಹಾಯ ಮಾಡುವಾಗ ಅದರಿಂದ ನಿಮಗೂ ಒಳಿತಾಗುವುದು ಎಂಬುದನ್ನು ಮರೆಯದಿರಿ.

 • ನಿಮ್ಮ ಪ್ರಿಯರ ಸಾವಿನಿಂದ ದುಃಖಪಡುತ್ತಿರುವ ಇತರರಿಗೆ ಅಂದರೆ ಸ್ನೇಹಿತರು ಅಥವಾ ಸಂಬಂಧಿಕರಿಗೆ ಮೊದಲು ಸಹಾಯ ಮಾಡಬಹುದು. ಯಾಕೆಂದರೆ, ಅವರಿಗೆ ತಮ್ಮ ದುಃಖವನ್ನು ತೋಡಿಕೊಳ್ಳಲು ಸ್ನೇಹಿತರ ಅಗತ್ಯ ಇರುತ್ತದೆ.

 • ಇತರರಿಗೆ ಬೆಂಬಲ ಮತ್ತು ಸಾಂತ್ವನ ಕೊಡುವುದರಿಂದ ನಿಮ್ಮ ಜೀವನಕ್ಕೊಂದು ಹೊಸ ಅರ್ಥ ಸಿಗಬಹುದು. ಇದರಿಂದ ಪುನಃ ಸಂತೋಷ ಸಿಗುವುದು.

ಮೂಲತತ್ವ: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅಪೊಸ್ತಲರ ಕಾರ್ಯಗಳು 20:35.

12: ಆದ್ಯತೆಗಳನ್ನು ಪರೀಕ್ಷಿಸಿ

 • ಜೀವನದಲ್ಲಿ ನಿಜವಾಗಿಯೂ ಯಾವುದು ತುಂಬ ಪ್ರಾಮುಖ್ಯ ಎಂದು ಅರ್ಥಮಾಡಿಕೊಳ್ಳಲು ಇಂಥ ಕ್ಷಣಗಳು ಸಹಾಯ ಮಾಡುತ್ತವೆ.

 • ನಿಮ್ಮ ಜೀವನ ಹೇಗಿದೆ ಎಂದು ಪರೀಕ್ಷಿಸಿಕೊಳ್ಳಲು ಈ ಸಮಯವನ್ನು ಉಪಯೋಗಿಸಿಕೊಳ್ಳಿ.

 • ಅಗತ್ಯವಿದ್ದರೆ ನಿಮ್ಮ ಆದ್ಯತೆಗಳನ್ನು ಬದಲಾಯಿಸಿಕೊಳ್ಳಿ.

ಮೂಲತತ್ವ: “ಔತಣದ ಮನೆಗಿಂತ ಮರಣದುಃಖದ ಮನೆಗೆ ಹೋಗುವದು ಲೇಸು; ಎಲ್ಲಾ ಮನುಷ್ಯರಿಗೂ ಕೊನೆಗೆ ಇದೇ ಗತಿ; ಜೀವಂತನು ಇದನ್ನು ನೋಡಿ ಸ್ಮರಿಸಿಕೊಳ್ಳುವನು.”—ಪ್ರಸಂಗಿ 7:2.

ಯಾವುದೇ ವಿಷಯವು ನೋವನ್ನು ಸಂಪೂರ್ಣವಾಗಿ ಹೋಗಲಾಡಿಸುವುದಿಲ್ಲ ಎನ್ನುವುದು ನಿಜ. ಆದರೂ, ಮೇಲೆ ತಿಳಿಸಲಾದ ಕೆಲವು ವಿಷಯಗಳನ್ನು ಮಾಡುವ ಮೂಲಕ ಸಾಂತ್ವನ ಪಡೆದುಕೊಂಡಿದ್ದೇವೆ ಎನ್ನುತ್ತಾರೆ ಅನೇಕರು. ನೋವನ್ನು ಮರೆಯಲಿಕ್ಕೆ ಮಾಡಬಹುದಾದ ಎಲ್ಲಾ ವಿಷಯಗಳನ್ನು ಇಲ್ಲಿ ಕೊಡಲಾಗಿಲ್ಲ. ಆದರೆ, ಮೇಲೆ ಕೊಡಲಾದ ಸಲಹೆಗಳನ್ನು ಪಾಲಿಸುವಲ್ಲಿ ಖಂಡಿತ ನಿಮಗೆ ಸಹಾಯವಾಗುವುದು.

^ ಪ್ಯಾರ. 13 ಎಚ್ಚರ! ಪತ್ರಿಕೆಯು ಯಾವುದೇ ನಿರ್ದಿಷ್ಟ ಚಿಕಿತ್ಸಾ ಕ್ರಮವನ್ನು ಶಿಫಾರಸ್ಸು ಮಾಡುವುದಿಲ್ಲ.