ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೌರವದ ಮಾತು ಸಿಮೆಂಟಿನಂತಿದ್ದು, ನಿಮ್ಮ ಮದುವೆ ಬಂಧ ಮುರಿದುಬೀಳದಂತೆ ಸಹಾಯ ಮಾಡುತ್ತದೆ

 ದಂಪತಿಗಳಿಗಾಗಿ

3: ಗೌರವ

3: ಗೌರವ

ಅರ್ಥವೇನು?

ಒಬ್ಬರನ್ನೊಬ್ಬರು ಗೌರವಿಸುವ ದಂಪತಿಗಳು ಯಾವಾಗಲೂ, ಭಿನ್ನಾಭಿಪ್ರಾಯ ಇದ್ದಾಗಲೂ ಸಂಗಾತಿ ಬಗ್ಗೆ ಕಾಳಜಿ ವಹಿಸುತ್ತಾರೆ. “ಇಂಥ ದಂಪತಿಗಳು ‘ನಾನು ಹೇಳಿದ್ದೇ ಸರಿ’ ಎಂದು ಹಠಹಿಡಿಯುವ ಬದಲಿಗೆ ತಮ್ಮ ಭಿನ್ನಾಭಿಪ್ರಾಯದ ಬಗ್ಗೆ ಪರಸ್ಪರ ಮಾತಾಡಿ, ಸಂಗಾತಿಯ ದೃಷ್ಟಿಕೋನವನ್ನು ಗೌರವದಿಂದ ಕೇಳಿಸಿಕೊಂಡು, ಹೊಂದಾಣಿಕೆ ಮಾಡಿ ಇಬ್ಬರಿಗೂ ಒಪ್ಪುವ ನಿರ್ಧಾರಕ್ಕೆ ಬರುತ್ತಾರೆ” ಎನ್ನುತ್ತದೆ ಟೆನ್‌ ಲೆಸನ್ಸ್‌ ಟು ಟ್ರಾನ್ಸ್‌ಫಾರ್ಮ್‌ ಯೋರ್‌ ಮ್ಯಾರೇಜ್‌ ಎಂಬ ಪುಸ್ತಕ.

ಬೈಬಲ್‌ ತತ್ವ: “ಪ್ರೀತಿಯು . . . ಸ್ವಹಿತವನ್ನು ಹುಡುಕುವುದಿಲ್ಲ.”—1 ಕೊರಿಂಥ 13:4, 5.

“ನನ್ನ ಹೆಂಡತಿಯನ್ನು ಗೌರವಿಸುವುದರ ಅರ್ಥ ನಾನು ಅವಳನ್ನು ಅಮೂಲ್ಯ ಅಂತ ಪರಿಗಣಿಸಬೇಕು ಮತ್ತು ಅವಳಿಗೆ ನೋವಾಗುವಂಥ ಅಥವಾ ನಮ್ಮ ಮದುವೆ ಬಂಧವನ್ನು ಬಲಹೀನಗೊಳಿಸುವಂಥ ಯಾವುದನ್ನೂ ಮಾಡಬಾರದು ಎಂದಾಗಿದೆ.”—ಮೈಕಾ.

ಯಾಕೆ ಮುಖ್ಯ?

ಪರಸ್ಪರ ಗೌರವ ಇಲ್ಲದಿದ್ದರೆ ಗಂಡ ಹೆಂಡತಿ ಮಾತಾಡಿಕೊಳ್ಳುವಾಗ ಟೀಕೆ, ವ್ಯಂಗ್ಯ ಮತ್ತು ತಿರಸ್ಕಾರ ಸಹ ಕಂಡುಬರುತ್ತದೆ. ಇಂಥ ಗುಣಗಳೇ ಮುಂದೆ ವಿಚ್ಛೇದನಕ್ಕೆ ನಡೆಸಬಲ್ಲವು ಎಂದು ತಜ್ಞರು ತಿಳಿಸುತ್ತಾರೆ.

“ಹೆಂಡತಿ ಬಗ್ಗೆ ಅವಹೇಳನಕಾರಿ, ಕೊಂಕು ಮಾತುಗಳನ್ನಾಡುವುದು, ಜೋಕ್ಸ್‌ ಮಾಡುವುದು ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ, ಆಕೆ ನಿಮ್ಮ ಮೇಲಿಟ್ಟಿರುವ ಭರವಸೆಯನ್ನು ನುಚ್ಚುನೂರು ಮಾಡುತ್ತದೆ ಮತ್ತು ನಿಮ್ಮ ಮದುವೆ ಬಂಧಕ್ಕೆ ಕುತ್ತು ತರುತ್ತದೆ.”—ಬ್ರಾಯನ್‌.

ನೀವೇನು ಮಾಡಬಹುದು?

ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ

ಒಂದು ವಾರದ ಮಟ್ಟಿಗೆ ನಿಮ್ಮ ಮಾತುಕತೆ ಮತ್ತು ವರ್ತನೆಯನ್ನು ಪರಿಶೀಲಿಸಿ, ಹೀಗೆ ಕೇಳಿಕೊಳ್ಳಿ:

  • ‘ಸಂಗಾತಿಯನ್ನು ಎಷ್ಟು ಸಲ ಟೀಕಿಸಿದೆ? ಎಷ್ಟು ಸಲ ಪ್ರಶಂಸಿಸಿದೆ?’

  • ‘ಸಂಗಾತಿಗೆ ಗೌರವ ತೋರಿಸಲು ನಾನು ಏನೆಲ್ಲ ಮಾಡಿದೆ?’

ಸಂಗಾತಿಯೊಂದಿಗೆ ಇದನ್ನು ಚರ್ಚಿಸಿ:

  • ಸಂಗಾತಿ ಏನು ಮಾಡಿದರೆ ಅಥವಾ ಹೇಳಿದರೆ ಗೌರವ ಕೊಡುತ್ತಿದ್ದಾರೆಂದು ನಿಮಗಿಬ್ಬರಿಗೂ ಅನಿಸುತ್ತದೆ?

  • ಸಂಗಾತಿ ಏನು ಮಾಡಿದರೆ ಅಥವಾ ಹೇಳಿದರೆ ಅಗೌರವಿಸುತ್ತಿದ್ದಾರೆಂದು ನಿಮಗಿಬ್ಬರಿಗೂ ಅನಿಸುತ್ತದೆ?

ಕಿವಿಮಾತು

  • ನಿಮಗೆ ಗೌರವ ತೋರಿಸಬೇಕೆಂದು ನೀವು ಬಯಸುವ ಮೂರು ವಿಧಗಳನ್ನು ಬರೆಯಿರಿ. ನಿಮ್ಮ ಸಂಗಾತಿಗೂ ಹಾಗೆಯೇ ಮಾಡಲು ಹೇಳಿ. ನಂತರ ನೀವು ಬರೆದದ್ದನ್ನು ಅದಲುಬದಲು ಮಾಡಿ ಆ ಪಟ್ಟಿಯಲ್ಲಿದ್ದ ಹಾಗೆ ಮಾಡಲು ಪ್ರಯತ್ನಿಸಿ.

  • ನಿಮ್ಮ ಸಂಗಾತಿಯಲ್ಲಿ ನೀವು ತುಂಬ ಮೆಚ್ಚುವ ಗುಣಗಳನ್ನು ಪಟ್ಟಿ ಮಾಡಿ. ನಂತರ, ಅವು ನಿಮಗೆಷ್ಟು ಇಷ್ಟ ಎಂದು ಅವರಿಗೆ ಹೇಳಿ.

“ನನ್ನ ಗಂಡನನ್ನು ಗೌರವಿಸುವುದರ ಅರ್ಥ ನಾನು ಅವರನ್ನು ಅಮೂಲ್ಯ ಅಂತ ಪರಿಗಣಿಸುತ್ತೇನೆ ಮತ್ತು ಅವರ ಸಂತೋಷವನ್ನು ಬಯಸುತ್ತೇನೆಂದು ನನ್ನ ಕ್ರಿಯೆಗಳಲ್ಲಿ ತೋರಿಸಬೇಕು ಎಂದಾಗಿದೆ. ಒಂದು ದೊಡ್ಡ ಕೆಲಸ ಮಾಡಿ ಮಾತ್ರ ಗೌರವ ತೋರಿಸುವುದಲ್ಲ, ಕೆಲವೊಮ್ಮೆ ಅನೇಕ ಚಿಕ್ಕಚಿಕ್ಕ ವಿಷಯಗಳನ್ನು ಮಾಡಿಯೂ ನನಗೆ ಅವರ ಮೇಲೆ ನಿಜ ಗೌರವ ಇದೆ ಎಂದು ತೋರಿಸಬಹುದು.”—ಮೇಗನ್‌.

ಸಂಗಾತಿಗೆ ಗೌರವ ತೋರಿಸುತ್ತಿದ್ದೀರಿ ಎಂದು ನಿಮಗೆ ಅನಿಸುತ್ತದಾ ಇಲ್ಲವಾ ಎನ್ನುವುದು ಮುಖ್ಯವಲ್ಲ. ನೀವು ಗೌರವ ತೋರಿಸುತ್ತಿದ್ದೀರೆಂದು ಅವರಿಗೆ ಅನಿಸುತ್ತದಾ ಎನ್ನುವುದೇ ಮುಖ್ಯ.

ಬೈಬಲ್‌ ತತ್ವ: ‘ಸಹಾನುಭೂತಿಯ ಕೋಮಲ ಮಮತೆ, ದಯೆ, ದೀನಮನಸ್ಸು, ಸೌಮ್ಯಭಾವ, ದೀರ್ಘ ಸಹನೆ ಧರಿಸಿಕೊಳ್ಳಿರಿ.’—ಕೊಲೊಸ್ಸೆ 3:12.