ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮಿಸುವ ಗುಣ ಜಗಳವೆಂಬ ಬೆಂಕಿಯನ್ನು ಆರಿಸುತ್ತದೆ

 ದಂಪತಿಗಳಿಗಾಗಿ

4: ಕ್ಷಮೆ

4: ಕ್ಷಮೆ

ಅರ್ಥವೇನು?

ಕ್ಷಮಿಸುವುದು ಅಂದರೆ ಒಬ್ಬರು ನಮ್ಮ ವಿರುದ್ಧ ಮಾಡಿದ ತಪ್ಪನ್ನು ಮತ್ತು ಅದರಿಂದಾಗಿ ನಮಗೆ ಬಂದ ಕೋಪವನ್ನು ಸಹ ಬಿಟ್ಟುಬಿಡುವುದು. ಆದರೆ ಅದೇನೂ ದೊಡ್ಡ ತಪ್ಪಲ್ಲ ಎಂದು ನಾವು ಎಣಿಸಬೇಕೆಂದಾಗಲಿ ಅಥವಾ ತಪ್ಪೇ ಆಗಿಲ್ಲ ಎಂಬಂತೆ ನಡೆದುಕೊಳ್ಳಬೇಕೆಂದಾಗಲಿ ಇದರರ್ಥ ಅಲ್ಲ.

ಬೈಬಲ್‌ ತತ್ವ: “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊಸ್ಸೆ 3:13.

“ನಿಮಗೆ ಒಬ್ಬ ವ್ಯಕ್ತಿಯ ಮೇಲೆ ಪ್ರೀತಿಯಿದ್ದರೆ ಅವರ ತಪ್ಪುಗಳ ಮೇಲೆಯೇ ಗಮನವಿಡುವುದಿಲ್ಲ, ಬದಲಿಗೆ ಅವರು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದಕ್ಕೆ ಗಮನ ಕೊಡುತ್ತೀರಿ.”—ಏರನ್‌.

ಯಾಕೆ ಮುಖ್ಯ?

ಕೋಪವನ್ನು ಇಟ್ಟುಕೊಂಡರೆ ನೀವು ನಿಮಗೇ ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಹಾನಿ ಮಾಡಿಕೊಳ್ಳುತ್ತೀರಿ ಮಾತ್ರವಲ್ಲ, ನಿಮ್ಮ ಮದುವೆ ಬಂಧಕ್ಕೂ ಹಾನಿ ಮಾಡುತ್ತೀರಿ.

“ಒಮ್ಮೆ ನನ್ನ ಗಂಡ ನನಗೆ ಯಾವುದೋ ವಿಷಯದಲ್ಲಿ ತುಂಬ ನೋವು ಮಾಡಿದ್ದಕ್ಕಾಗಿ ಕ್ಷಮೆ ಕೇಳಿದರು. ನನಗೆ ಕ್ಷಮಿಸಲು ತುಂಬ ಕಷ್ಟವಾಯಿತು. ನಿಧಾನಕ್ಕೆ ಕ್ಷಮಿಸಿದೆ, ಆದರೆ ಅದನ್ನು ಬೇಗನೇ ಮಾಡಬೇಕಿತ್ತು ಅಂತ ನನಗೀಗ ಅನಿಸುತ್ತೆ. ಯಾಕೆಂದರೆ ಅದು ನಮ್ಮ ಸಂಬಂಧದ ಮೇಲೆ ಅನಾವಶ್ಯಕವಾಗಿ ಒತ್ತಡ ಹೇರಿತ್ತು.”—ಜೂಲಿಯ.

ನೀವೇನು ಮಾಡಬಹುದು?

ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ

ನಿಮ್ಮ ಸಂಗಾತಿಯ ಮಾತು ಅಥವಾ ಕ್ರಿಯೆಯಿಂದ ನಿಮಗೆ ಮುಂದೆ ಯಾವತ್ತಾದರೂ ನೋವಾದರೆ ಹೀಗೆ ಕೇಳಿಕೊಳ್ಳಿ:

  • ‘ನಾನು ಚಿಕ್ಕಪುಟ್ಟದ್ದಕ್ಕೆಲ್ಲ ಕೋಪ, ಬೇಸರ ಮಾಡಿಕೊಳ್ಳುತ್ತೇನಾ?’

  • ‘ನನ್ನ ಸಂಗಾತಿ ಮಾಡಿರೊ ತಪ್ಪು ನನ್ನ ಹತ್ತಿರ ಕ್ಷಮೆ ಕೇಳಲೇಬೇಕು ಎನ್ನುವಷ್ಟು ದೊಡ್ಡದ್ದಾಗಿದೆಯಾ? ಅಥವಾ ನಾನದನ್ನು ಸುಮ್ಮನೆ ಬಿಟ್ಟುಬಿಡಬಹುದಾ?’

ಸಂಗಾತಿಯೊಂದಿಗೆ ಇದನ್ನು ಚರ್ಚಿಸಿ:

  • ಒಬ್ಬರನ್ನೊಬ್ಬರು ಕ್ಷಮಿಸಲು ನಮಗೆ ಎಷ್ಟು ಸಮಯ ಹಿಡಿಯುತ್ತದೆ?

  • ಅದಕ್ಕಿಂತಲೂ ಬೇಗನೇ ಕ್ಷಮಿಸಲಿಕ್ಕಾಗಿ ನಾವೇನು ಮಾಡ ಬಹುದು?

ಕಿವಿಮಾತು

  • ಸಂಗಾತಿಯಿಂದ ನಿಮಗೆ ನೋವಾದಾಗ ಅವರು ಮನಸ್ಸಿನಲ್ಲಿ ದುರುದ್ದೇಶ ಇಟ್ಟುಕೊಂಡೇ ಹಾಗೆ ಮಾಡಿದರೆಂದು ಯೋಚಿಸಬೇಡಿ.

  • “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ” ಎನ್ನುವುದನ್ನು ನೆನಪಿನಲ್ಲಿಟ್ಟು ನಿಮ್ಮ ಸಂಗಾತಿಯ ತಪ್ಪನ್ನು ಮನ್ನಿಸಲು ಪ್ರಯತ್ನಿಸಿ.—ಯಾಕೋಬ 3:2.

“ನಾವಿಬ್ಬರೂ ತಪ್ಪು ಮಾಡಿದಾಗ ಕ್ಷಮಿಸುವುದು ಸುಲಭ, ಆದರೆ ತಪ್ಪು ನನ್ನ ಸಂಗಾತಿಯದ್ದು ಮಾತ್ರ ಎಂದು ಅನಿಸುವಾಗ ಕ್ಷಮಿಸುವುದು ಕಷ್ಟ. ಅವರು ಕ್ಷಮೆ ಕೇಳುವಾಗ ಕ್ಷಮಿಸಿಬಿಡಲು ನಿಜ ದೀನತೆ ಅಗತ್ಯ.”—ಕಿಂಬರ್ಲೀ.

ಬೈಬಲ್‌ ತತ್ವ: “ಬೇಗನೆ ವಿಷಯಗಳನ್ನು ಇತ್ಯರ್ಥಮಾಡಿಕೊ.”—ಮತ್ತಾಯ 5:25.

ಕೋಪವನ್ನು ಇಟ್ಟುಕೊಂಡರೆ ನೀವು ನಿಮಗೇ ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಹಾನಿ ಮಾಡಿಕೊಳ್ಳುತ್ತೀರಿ ಮಾತ್ರವಲ್ಲ, ನಿಮ್ಮ ಮದುವೆ ಬಂಧಕ್ಕೂ ಹಾನಿ ಮಾಡುತ್ತೀರಿ