ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

ಪರಿಹಾರಕ್ಕಾಗಿ ಪರದಾಟ

ಪರಿಹಾರಕ್ಕಾಗಿ ಪರದಾಟ

ಒಂದರ ಮೇಲೆ ಒಂದರಂತೆ ಕೆಟ್ಟ ಸುದ್ದಿಗಳನ್ನು ಕೇಳಿ ನಿಮಗೆ ಭಯವಾಗಿದೆಯಾ? ನಿಮ್ಮ ಹಾಗೇ ಅನೇಕರು ಭಯಪಡುತ್ತಿದ್ದಾರೆ. ವಾರ್ತಾಮಾಧ್ಯಮಗಳಲ್ಲಿ ಬರುವ ಎಲ್ಲಾ ಕೆಟ್ಟ ವಿಷಯಗಳನ್ನು ಕೇಳಿ ಅನೇಕರು “ಈ ಲೋಕ ನಿಯಂತ್ರಣ ತಪ್ಪಿದೆ, ಯಾರೂ ಅದನ್ನು ಹತೋಟಿಯಲ್ಲಿಡಲು ಆಗುತ್ತಿಲ್ಲ” ಎಂಬ ನಿರ್ಧಾರಕ್ಕೆ ಬರುತ್ತಾರೆ ಎಂದು ಅಮೆರಿಕಾದ ಅಧ್ಯಕ್ಷರಾಗಿದ್ದ ಬಾರಾಕ್‌ ಒಬಾಮ 2014​ರಲ್ಲಿ ಹೇಳಿದರು.

ಈ ಹೇಳಿಕೆಯನ್ನು ನೀಡಿದ ಸ್ವಲ್ಪ ಸಮಯದ ನಂತರ ಅವರು, ಈ ಲೋಕದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಮಾಡಲಾದ ಯೋಜನೆಗಳ ಬಗ್ಗೆ ಉತ್ಸಾಹದಿಂದ ಮಾತಾಡಿದರು. ಸರ್ಕಾರ ತೆಗೆದುಕೊಂಡ ಕೆಲವು ಕ್ರಮಗಳನ್ನು ಅವರು “ಒಳ್ಳೆಯ ಸುದ್ದಿಗಳು” ಎನ್ನುತ್ತಾ ತನಗೆ ಇವುಗಳಲ್ಲಿ “ಬಲವಾದ ನಿರೀಕ್ಷೆ ಇದೆ” ಮತ್ತು ಇವುಗಳಿಂದ ‘ಖಂಡಿತ ಸುಧಾರಣೆ ಆಗುತ್ತದೆ’ ಎಂದರು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಒಳ್ಳೇ ಮನಸ್ಸಿನ ಜನರು ಮಾಡುವ ಪ್ರಯತ್ನಗಳಿಂದ ಈ ಭೂಮಿಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಲೋಕದ ನಾಶನವನ್ನು ತಪ್ಪಿಸಲು ಸಾಧ್ಯ ಎಂದು ಅವರು ಹೇಳಿದರು.

ಅವರಂತೆ ಅನೇಕರಿಗೆ ಖಂಡಿತ ಸುಧಾರಣೆಯಾಗುತ್ತದೆ ಎಂಬ ಆಶಾಭಾವನೆ ಇದೆ. ಉದಾಹರಣೆಗೆ ವಿಜ್ಞಾನದಿಂದ ಇದೆಲ್ಲ ಸಾಧ್ಯ ಎಂದು ಕೆಲವರು ಭರವಸೆಯಿಡುತ್ತಾರೆ. ತ್ವರಿತವಾಗಿ ಬೆಳಯುತ್ತಿರುವ ತಂತ್ರಜ್ಞಾನ ಲೋಕದ ಸಮಸ್ಯೆಗಳನ್ನು ಸರಿಪಡಿಸಲಿದೆ ಎಂದು ಅವರು ಭವಿಷ್ಯನುಡಿಯುತ್ತಾರೆ. ಡಿಜಿಟಲ್‌ ತಂತ್ರಜ್ಞಾನದ ಮತ್ತು ನವೀನತೆಯ ತಜ್ಞನೊಬ್ಬ ಭರವಸೆಯಿಂದ ಹೇಳಿದ್ದು: 2030​ರಷ್ಟಕ್ಕೆ “ನಮ್ಮ ತಂತ್ರಜ್ಞಾನ ಸಾವಿರ ಪಟ್ಟು ಹೆಚ್ಚು ಪ್ರಗತಿಯಾಗುವುದು ಮತ್ತು 2045​ರಷ್ಟಕ್ಕೆ ಅದು ಲಕ್ಷಗಟ್ಟಲೆ ಪಟ್ಟು ಪ್ರಗತಿಯಾಗುವುದು.” ಮಾತ್ರವಲ್ಲ, “ನಾವು ಈಗಾಗಲೇ ಸಾಕಷ್ಟು ಪ್ರಗತಿ ಮಾಡಿದ್ದೇವೆ. ಹಿಂದೆಂದೂ ಇರದಿದ್ದಷ್ಟು ಸಮಸ್ಯೆಗಳು ನಮಗೆ ಈಗ ಇವೆ ನಿಜ, ಆದರೆ ಸಮಸ್ಯೆಗಳು ಉಂಟಾಗುವುದಕ್ಕಿಂತ ವೇಗವಾಗಿ ಅವುಗಳನ್ನು ಪರಿಹರಿಸುವ ಸಾಮರ್ಥ್ಯ ನಮಗಿದೆ.”

ಹಾಗಾದರೆ ಈ ಲೋಕದ ಪರಿಸ್ಥಿತಿ ಎಷ್ಟರಮಟ್ಟಿಗೆ ಕೆಟ್ಟುಹೋಗಿದೆ? ನಿಜವಾಗಿಯೂ ನಾವು ಲೋಕ ನಾಶನದ ಅಂಚಿನಲ್ಲಿದ್ದೇವಾ? ಕೆಲವು ವಿಜ್ಞಾನಿಗಳು ಮತ್ತು ರಾಜಕಾರಣಿಗಳು ಸಮಸ್ಯೆಗಳೆಲ್ಲಾ ಮುಂದೆ ಪರಿಹಾರವಾಗುತ್ತವೆ ಎಂದು ತಿಳಿಸುತ್ತಿದ್ದರೂ ಅನೇಕರಿಗೆ ಮುಂದೇನಾಗಬಹುದೋ ಎಂಬ ಚಿಂತೆ ಕಾಡುತ್ತಿದೆ. ಯಾಕೆ?

 ಭಾರಿ ವಿನಾಶಮಾಡುವ ಶಸ್ತ್ರಾಸ್ತ್ರಗಳು. ವಿಶ್ವ ಸಂಸ್ಥೆ ಹಾಗೂ ಬೇರೆ ಸಂಘಟನೆಗಳು ಅಣ್ವಸ್ತ್ರಗಳ ತಯಾರಿಕೆಯನ್ನು ತಡೆಗಟ್ಟಲು ಎಷ್ಟೇ ಪ್ರಯತ್ನಿಸಿದರೂ ವಿಫಲವಾಗಿವೆ. ಈ ಸಂಘಟನೆಗಳಿಗೆ ಬೆಲೆಕೊಡದ ನಾಯಕರು ಶಸ್ತ್ರ ನಿಯಂತ್ರಣ ನಿಯಮಗಳನ್ನು ಧಿಕ್ಕರಿಸಿದ್ದಾರೆ. ಅಣ್ವಸ್ತ್ರಗಳನ್ನು ಹೊಂದಿರುವ ಇತಿಹಾಸವುಳ್ಳ ರಾಷ್ಟ್ರಗಳು ತಮ್ಮಲ್ಲಿರುವ ಹಳೆಯ ಬಾಂಬ್‌ಗಳನ್ನು ನವೀಕರಿಸಿ ಹೆಚ್ಚು ಶಕ್ತಿಯುತವಾಗಿ ಮಾಡುತ್ತಿದ್ದಾರೆ ಮತ್ತು ಇನ್ನಷ್ಟು ಮಾರಕವಾದ ಹೊಸ ಬಾಂಬ್‌ಗಳನ್ನು ತಯಾರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಭಾರಿ ಪ್ರಮಾಣದ ನಾಶನಮಾಡುವ ಸಾಮರ್ಥ್ಯವಿಲ್ಲದಿದ್ದ ಕೆಲವು ರಾಷ್ಟ್ರಗಳಿಗೆ ಈಗ ಅಸಂಖ್ಯಾತ ಜನರನ್ನು ನಾಶಮಾಡುವ ಸಾಮರ್ಥ್ಯವಿದೆ.

ರಾಷ್ಟ್ರಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಪರಮಾಣು ಯುದ್ಧಗಳನ್ನು ಮಾಡಲು ಸಿದ್ಧವಾಗಿವೆ. ಇದು “ಶಾಂತಿ”ಯ ಪರಿಸ್ಥಿತಿಯಲ್ಲೂ ಈ ಲೋಕವನ್ನು ಅಪಾಯದ ಸ್ಥಳವಾಗಿ ಮಾಡಿದೆ. “ಉದಾಹರಣೆಗೆ, ಮಾನವ ಸಹಾಯ ಅಥವಾ ಮೇಲ್ವಿಚಾರಣೆಯಿಲ್ಲದೆ ಸ್ವಯಂಚಾಲಿತವಾಗಿ ‘ಧ್ವಂಸಗೊಳಿಸಬಲ್ಲ’ ಮಾರಣಾಂತಿಕ ಶಸ್ತ್ರಾಸ್ತ್ರ ವ್ಯವಸ್ಥೆಯು ಜನರಲ್ಲಿ ತುಂಬ ಆತಂಕ ಸೃಷ್ಟಿಸುವ ವಿಷಯವಾಗಿದೆ” ಎಂದು ಬುಲೆಟಿನ್‌ ಆಫ್‌ ದಿ ಅಟೋಮಿಕ್‌ ಸೈನ್‌ಟಿಸ್ಟ್ಸ್ ಎಚ್ಚರಿಸಿದೆ.

ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆ. ವಿಜ್ಞಾನ ನಮಗೆ ತಕ್ಕಮಟ್ಟಿಗೆ ಒಳ್ಳೆಯ ಆರೋಗ್ಯವನ್ನು ಕೊಡಬಹುದಾದರೂ ಅದಕ್ಕೆ ಮಿತಿಯಿದೆ. ರೋಗಗಳಿಗೆ ಕಾರಣವಾಗಿರುವ ಅಧಿಕ ರಕ್ತದೊತ್ತಡ, ಬೊಜ್ಜು, ವಾಯುಮಾಲಿನ್ಯ, ಮಾದಕ ವಸ್ತುಗಳ ಸೇವನೆಯಂತಹ ಅಂಶಗಳು ಹೆಚ್ಚಾಗುತ್ತಿವೆ. ಅನೇಕ ಜನರು ಕ್ಯಾನ್ಸರ್‌, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ಸಕ್ಕರೆ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಬೇರೆ ಕಾಯಿಲೆಗಳಿಂದ, ಕೆಲವೊಂದು ಮಾನಸಿಕ ಕಾಯಿಲೆಗಳಿಂದಲೂ ಎಲ್ಲರಂತೆ ಸಾಧಾರಣ ಜೀವನ ನಡೆಸಲಿಕ್ಕಾಗದ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅನಿರೀಕ್ಷಿತವಾಗಿ ಎಬೋಲಾ ಮತ್ತು ಝೀಕ ವೈರಸ್‌ಗಳಂಥ ಮಾರಣಾಂತಿಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿವೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಕಾಯಿಲೆಗಳು ಮಾನವನ ನಿಯಂತ್ರಣವನ್ನು ಮೀರಿವೆ ಮತ್ತು ಇವುಗಳಿಗೆ ಕೊನೆಯೇ ಇಲ್ಲವೆಂಬಂತಿದೆ!

ಪ್ರಕೃತಿಯ ಮೇಲೆ ಮಾನವನ ದಾಳಿ. ಕಾರ್ಖಾನೆಗಳು ಭೂಮಿಯ ವಾತಾವರಣವನ್ನು ಮಾಲಿನ್ಯಗೊಳಿಸುತ್ತಾ ಇವೆ. ಕಲುಷಿತ ಗಾಳಿಯನ್ನು ಉಸಿರಾಡುತ್ತಿರುವುದರಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಿದ್ದಾರೆ.

ಜನರು, ಸಮುದಾಯಗಳು, ಸರ್ಕಾರಿ ಸೇವಾಸಂಸ್ಥೆಗಳು ಕಸವನ್ನು, ವೈದ್ಯಕೀಯ ಮತ್ತು ಕೃಷಿ ತ್ಯಾಜ್ಯಗಳನ್ನು, ಪ್ಲ್ಯಾಸ್ಟಿಕ್‌ ಮತ್ತಿತರ ಮಾಲಿನ್ಯಕಾರಕಗಳನ್ನು ಸಾಗರಕ್ಕೆ ಎಸೆಯುತ್ತಿವೆ. “ಈ ವಿಷಕಾರಿ ವಸ್ತುಗಳು ಸಾಗರ-ಸಮುದ್ರದಲ್ಲಿರುವ ಪ್ರಾಣಿ, ಮೀನು ಮತ್ತು ಸಸ್ಯಗಳನ್ನು ಹಾಳುಮಾಡುತ್ತಿವೆ. ಹೀಗೆ ಕಲುಷಿತಗೊಂಡಿರುವ ಈ ಸಮುದ್ರ ಜೀವಿಗಳನ್ನು ತಿನ್ನುವ ಮಾನವರಿಗೂ ಹಾನಿಯಾಗುತ್ತದೆ” ಎಂದು ಎನ್‌ಸೈಕ್ಲಪೀಡಿಯ ಆಫ್‌ ಮರೀನ್‌ ಸೈಯನ್ಸ್‌ ತಿಳಿಸುತ್ತದೆ.

ನಾವೆಲ್ಲರೂ ಸಿಹಿ ನೀರಿಗಾಗಿ ಪರದಾಡುತ್ತಿದ್ದೇವೆ. ಬ್ರಿಟನ್‍ನವರಾದ ವಿಜ್ಞಾನದ ಲೇಖಕ ರಾಬಿನ್‌ ಮ್ಯಾಕಿ ಎಚ್ಚರಿಸುವುದು: “ಈ ಲೋಕ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದೆ. ಇದು ಇಡೀ ಭೂಮಿಯನ್ನೇ ಪ್ರಭಾವಿಸುತ್ತದೆ.” ನೀರಿನ ಸಮಸ್ಯೆಗೆ ಮುಖ್ಯ ಕಾರಣ ಮಾನವನೇ ಆಗಿದ್ದಾನೆ ಮತ್ತು ಇದು ತುಂಬಾ ಅಪಾಯಕಾರಿಯಾಗಿದೆ ಎಂದು ರಾಜಕಾರಣಿಗಳು ಒಪ್ಪಿಕೊಳ್ಳುತ್ತಾರೆ.

ಮಾನವನ ಮೇಲೆ ಪ್ರಕೃತಿಯ ದಾಳಿ. ಬಿರುಗಾಳಿ, ತೂಫಾನು, ಸುಂಟರಗಾಳಿ, ಚಂಡಮಾರುತ, ಮತ್ತು ಭೂಕಂಪಗಳು ಪ್ರಳಯವನ್ನು, ವಿಧ್ವಂಸಕಾರಿ ಭೂಕುಸಿತವನ್ನು, ಮತ್ತಿತರ ವಿನಾಶಗಳನ್ನು ಉಂಟುಮಾಡುತ್ತಿವೆ. ಪ್ರಕೃತಿಯ ವಿಕೋಪದಿಂದ ಮತ್ತು ಅದರ ಪರಿಣಾಮಗಳಿಂದಾಗಿ ಹಿಂದೆಂದಿಗಿಂತಲೂ ಹೆಚ್ಚು ಜನರು ಸಾಯುತ್ತಿದ್ದಾರೆ ಅಥವಾ ತೊಂದರೆ ಅನುಭವಿಸುತ್ತಿದ್ದಾರೆ. ಯು.ಎಸ್‌. ನ್ಯಾಷನಲ್‌ ಏರೋನೋಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಆ್ಯಡ್‌ಮಿನಿಸ್ಟ್ರೇಷನ್‍ನ ಒಂದು ಅಧ್ಯಯನ ಪ್ರಕಟಿಸಿದಂತೆ “ಅತಿ ಶಕ್ತಿಶಾಲಿಯಾದ ಬಿರುಗಾಳಿ, ಮಾರಣಾಂತಿಕ ಉಷ್ಣ ಅಲೆಗಳು ಮತ್ತು ತೀವ್ರ ನೆರೆ-ಬರ ಚಕ್ರಗಳು” ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಹಾಗಾದರೆ ಪ್ರಕೃತಿ ಮಾನವಕುಲವನ್ನು ನಾಶ ಮಾಡುತ್ತದಾ?

ನಮ್ಮ ಉಳಿವಿಗೆ ಬೆದರಿಕೆಯಾಗಿರುವ ಇನ್ನಿತರ ಅಪಾಯಗಳ ಬಗ್ಗೆ ಯೋಚಿಸಿ. ಇಂದು ಸಂಭವಿಸುತ್ತಿರುವ ಎಲ್ಲಾ ಕೆಟ್ಟ ವಿಷಯಗಳನ್ನು ವಿಶ್ಲೇಷಿಸಿದರೂ ಭವಿಷ್ಯದ ಕುರಿತು ಸರಿಯಾದ, ನಿಖರ ಉತ್ತರಗಳನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ರಾಜಕಾರಣಿಗಳ ಮತ್ತು ವಿಜ್ಞಾನಿಗಳ ಮಾತಿಗೆ ಕಿವಿಗೊಡುವುದರಿಂದಲೂ ನಮಗೆ ಭವಿಷ್ಯದ ಬಗ್ಗೆ ತೃಪ್ತಿಕರ ಉತ್ತರ ಸಿಗಲ್ಲ ಎಂದು ಕೆಲವರು ಹೇಳಬಹುದು. ಹಿಂದಿನ ಲೇಖನದಲ್ಲಿ ತಿಳಿಸಲಾದಂತೆ, ಅನೇಕರು ಈ ಲೋಕದ ಪರಿಸ್ಥಿತಿಯ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತೃಪ್ತಿಕರವಾದ ಉತ್ತರಗಳನ್ನು ಕಂಡುಕೊಂಡಿದ್ದಾರೆ. ಆ ಉತ್ತರಗಳು ಎಲ್ಲಿ ಸಿಗುತ್ತವೆ?