ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾಚೀನ ಹೀಬ್ರು ಅಕ್ಷರಗಳಲ್ಲಿ ದೇವರ ವೈಯಕ್ತಿಕ ಹೆಸರು ಬೈಬಲಿನ ಆರಂಭದ ಹಸ್ತಪ್ರತಿಗಳಲ್ಲಿ ಹೇರಳವಾಗಿ ಕಂಡುಬರುತ್ತದೆ

 ದೇವರ ದೃಷ್ಟಿಕೋನ | ದೇವರ ಹೆಸರು

ದೇವರ ಹೆಸರು

ದೇವರ ಹೆಸರು

ಲಕ್ಷಾಂತರ ಜನರು ದೇವರನ್ನು ಕರ್ತನು, ಸರ್ವೇಶ್ವರ, ಅಲ್ಹಾ ಅಥವಾ ದೇವರು ಎಂಬ ಗೌರವಭರಿತ ಬಿರುದುಗಳಿಂದ ಕರೆಯುತ್ತಾರೆ. ಆದರೆ, ದೇವರಿಗೆ ಒಂದು ವೈಯಕ್ತಿಕ ಹೆಸರು ಇದೆ. ನಾವದನ್ನು ಉಪಯೋಗಿಸಬೇಕಾ?

ದೇವರ ಹೆಸರೇನು?

ಜನರು ಏನು ಹೇಳುತ್ತಾರೆ?

 

ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ದೇವರ ಹೆಸರು ಯೇಸು ಎಂದು ನಂಬುತ್ತಾರೆ. ಕೆಲವರು, ಒಬ್ಬನೇ ಒಬ್ಬ ಸರ್ವಶಕ್ತ ದೇವರು ಇರುವುದರಿಂದ ಆತನ ವೈಯಕ್ತಿಕ ಹೆಸರನ್ನು ಉಪಯೋಗಿಸುವ ಅಗತ್ಯವಿಲ್ಲ ಅಂತ ಹೇಳುತ್ತಾರೆ. ಇನ್ನು ಕೆಲವರು, ದೇವರ ವೈಯಕ್ತಿಕ ಹೆಸರನ್ನು ಉಪಯೋಗಿಸುವುದು ಸರಿಯಲ್ಲ ಅಂತ ಹೇಳುತ್ತಾರೆ.

ಬೈಬಲ್‌ ಏನು ಹೇಳುತ್ತದೆ?

 

ಸರ್ವಶಕ್ತ ದೇವರ ಹೆಸರು ಯೇಸು ಅಲ್ಲ. ಯಾಕೆಂದರೆ ಯೇಸು ಸರ್ವಶಕ್ತ ದೇವರಲ್ಲ. ‘ತಂದೆಯೇ, ನಿನ್ನ ನಾಮ ಪವಿತ್ರೀಕರಿಸಲ್ಪಡಲಿ’ ಎಂದು ದೇವರಿಗೆ ಪ್ರಾರ್ಥಿಸುವಂತೆ ಯೇಸು ತನ್ನ ಜೊತೆ ವಿಶ್ವಾಸಿಗಳಿಗೆ ಕಲಿಸಿದನು. (ಲೂಕ 11:2) ಯೇಸು ಸ್ವತಃ ದೇವರಿಗೆ, “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸು” ಎಂದು ಪ್ರಾರ್ಥಿಸಿದನು.—ಯೋಹಾನ 12:28.

ಬೈಬಲಿನಲ್ಲಿ ದೇವರು, “ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು” ಎಂದು ಹೇಳಿದ್ದಾನೆ. (ಯೆಶಾಯ 42:8) ದೇವರ ಹೆಸರನ್ನು ಹೀಬ್ರು ಭಾಷೆಯಲ್ಲಿ ನಾಲ್ಕು ವ್ಯಂಜನಗಳನ್ನು (YHWH) ಉಪಯೋಗಿಸಿ ಬರೆಯಲಾಗಿದೆ. ಇದನ್ನು ಇಂಗ್ಲಿಷ್‍ನಲ್ಲಿ “ಜೆಹೋವ,” ಕನ್ನಡದಲ್ಲಿ ಯೆಹೋವ ಎಂದು ಭಾಷಾಂತರಿಸಲಾಗಿದೆ. ಆ ಹೆಸರು ಹೀಬ್ರು ಶಾಸ್ತ್ರಗ್ರಂಥದಲ್ಲಿ 7,000ಕ್ಕೂ ಹೆಚ್ಚು ಬಾರಿ ಇದೆ. * ಬೈಬಲ್‍ನಲ್ಲಿ “ದೇವರು,” “ಸರ್ವಶಕ್ತ” ಅಥವಾ “ಕರ್ತನು” ಎಂಬ ಬಿರುದುಗಳನ್ನಾಗಲಿ, “ಅಬ್ರಹಾಮ,” “ಮೋಶೆ” ಅಥವಾ “ದಾವೀದ” ಎಂಬ ಹೆಸರುಗಳನ್ನೇ ಆಗಲಿ ಇಷ್ಟೊಂದು ಸಾರಿ ಬಳಸಲಾಗಿಲ್ಲ.

ತನ್ನ ಹೆಸರನ್ನು ಗೌರವಯುತವಾಗಿ ಬಳಸಬಾರದೆಂದು ಬೈಬಲಿನಲ್ಲಿ ಎಲ್ಲಿಯೂ ಯೆಹೋವನು ಹೇಳಲಿಲ್ಲ. ಬದಲಿಗೆ, ದೇವರ ಸೇವಕರು ಆತನ ಹೆಸರನ್ನು ಧಾರಾಳವಾಗಿ ಬಳಸಿದರೆಂದು ಬೈಬಲ್‌ ಹೇಳುತ್ತದೆ. ಅವರು ತಮ್ಮ ಮಕ್ಕಳಿಗೆ ಇಟ್ಟ ಹೆಸರುಗಳಲ್ಲೂ ದೇವರು ಹೆಸರನ್ನು ಸೇರಿಸುತ್ತಿದ್ದರು. ಉದಾಹರಣೆಗೆ, ಎಲೀಯ ಹೆಸರಿನ ಅರ್ಥ “ನನ್ನ ದೇವರು ಯೆಹೋವನಾಗಿದ್ದಾನೆ” ಮತ್ತು ಜೆಕರ್ಯ ಅಂದರೆ “ಯೆಹೋವನು ಜ್ಞಾಪಿಸಿಕೊಂಡಿದ್ದಾನೆ” ಎಂದಾಗಿದೆ. ಅವರು ತಮ್ಮ ದೈನಂದಿನ ಸಂಭಾಷಣೆಗಳಲ್ಲಿ ದೇವರ ಹೆಸರನ್ನು ಬಳಸಲು ಹಿಂಜರಿಯಲಿಲ್ಲ.—ರೂತಳು 2:4.

ತನ್ನ ಹೆಸರನ್ನು ನಾವು ಬಳಸಬೇಕೆಂದು ದೇವರು ಬಯಸುತ್ತಾನೆ. “ಯೆಹೋವನಿಗೆ ಉಪಕಾರ ಸ್ತುತಿಮಾಡಿರಿ; ಆತನ ಹೆಸರನ್ನು ಕರೆಯಿರಿ” ಎಂದು ನಮ್ಮನ್ನು ಉತ್ತೇಜಿಸಲಾಗಿದೆ. (ಕೀರ್ತನೆ 105:1, ಪವಿತ್ರ ಗ್ರಂಥ ಭಾಷಾಂತರ) ‘ತನ್ನ ನಾಮಸ್ಮರಣೆಮಾಡುವವರನ್ನು’ ಆತನು ಮೆಚ್ಚುತ್ತಾನೆ.—ಮಲಾಕಿಯ 3:16.

“ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”ಕೀರ್ತನೆ 83:18.

 ದೇವರ ಹೆಸರಿನ ಅರ್ಥವೇನು?

ಹೀಬ್ರುವಿನಲ್ಲಿ ಯೆಹೋವನ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದು ಕೆಲವು ವಿದ್ವಾಂಸರು ನಂಬುತ್ತಾರೆ. ಅದರ ಅರ್ಥ ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ತಾನು ಏನಾಗಬೇಕೋ ಹಾಗೆ ಆಗುತ್ತಾನೆ ಮಾತ್ರವಲ್ಲ ತನ್ನ ಸೃಷ್ಟಿಯನ್ನು ಕೂಡ ತಾನು ಹೇಗೆ ಬಯಸುತ್ತಾನೋ ಹಾಗೆ ಆಗುವಂತೆ ಮಾಡುತ್ತಾನೆ ಎಂದಾಗಿದೆ. ಕೇವಲ ಸರ್ವಶಕ್ತ ಸೃಷ್ಟಿಕರ್ತನಿಗೆ ಮಾತ್ರ ತನ್ನ ಹೆಸರಿಗೆ ತಕ್ಕಂತೆ ಜೀವಿಸಲು ಸಾಧ್ಯ.

ನಿಮಗೇನು ಪ್ರಯೋಜನ?

 

ದೇವರ ಹೆಸರನ್ನು ತಿಳಿದುಕೊಳ್ಳುವುದರಿಂದ ಆತನ ಬಗ್ಗೆ ನೀವು ಯೋಚಿಸುವ ರೀತಿಯೇ ಬದಲಾಗುತ್ತದೆ. ಆಗ ನೀವು ಸುಲಭವಾಗಿ ದೇವರಿಗೆ ಆಪ್ತರಾಗಬಹುದು. ಒಬ್ಬ ವ್ಯಕ್ತಿಯ ಹೆಸರೇ ತಿಳಿಯದೆ ಅವನೊಟ್ಟಿಗೆ ಆಪ್ತರಾಗಲು ಸಾಧ್ಯನಾ? ಇಲ್ಲ ತಾನೇ. ಯೆಹೋವನು ತನ್ನ ಹೆಸರನ್ನು ನಮಗೆ ತಿಳಿಸಿರುವುದರಿಂದ ನಾವು ಆತನಿಗೆ ಆಪ್ತರಾಗುವಂತೆ ಆತನು ಬಯಸುತ್ತಾನೆ ಎಂದು ಗೊತ್ತಾಗುತ್ತದೆ.—ಯಾಕೋಬ 4:8.

ಕೊಟ್ಟ ಮಾತನ್ನು ಯಾವಾಗಲೂ ನೆರವೇರಿಸುವ ಯೆಹೋವ ದೇವರು ತನ್ನ ಹೆಸರಿಗೆ ತಕ್ಕಂತೆ ಜೀವಿಸುತ್ತಾನೆ ಎಂದು ಆತನಲ್ಲಿ ನೀವು ಪೂರ್ಣ ಭರವಸೆ ಇಡಬಹುದು. “ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು” ಎಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 9:10) ನಿಷ್ಠಾವಂತ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ನ್ಯಾಯದಂಥ ಗುಣಗಳಿಗೂ ಯೆಹೋವನ ಹೆಸರಿಗೂ ಬೇರ್ಪಡಿಸಲಾಗದ ರೀತಿಯ ಸಂಬಂಧವಿದೆ ಎಂದು ಕಲಿಯುವಾಗ ನೀವು ಅಂತಹ ಭರವಸೆಯನ್ನು ಬೆಳೆಸಿಕೊಳ್ಳುತ್ತೀರಿ. (ವಿಮೋಚನಕಾಂಡ 34:5-7) ಯೆಹೋವನು ಕೊಟ್ಟ ಮಾತನ್ನು ಯಾವಾಗಲೂ ನೆರವೇರಿಸುತ್ತಾನೆ ಮತ್ತು ಆತನ ಗುಣಗಳಿಗೆ ವಿರುದ್ಧವಾಗಿ ನಡೆಯುವುದಿಲ್ಲ ಎಂದು ತಿಳಿಯುವಾಗ ಎಷ್ಟೋ ಸಾಂತ್ವನ ಸಿಗುತ್ತದೆ.

ಸರ್ವಶಕ್ತ ದೇವರ ಹೆಸರನ್ನು ತಿಳಿಯುವುದು ನಿಜವಾಗಿಯೂ ಒಂದು ಸುಯೋಗ. ಇದರಿಂದ ನಮಗೆ ಈಗ ಮತ್ತು ಮುಂದೆ ಅನೇಕ ಆಶೀರ್ವಾದಗಳು ಸಿಗುವವು. “ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು” ಎಂದು ದೇವರೇ ಮಾತು ಕೊಟ್ಟಿದ್ದಾನೆ. —ಕೀರ್ತನೆ 91:14.

“ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.”ಯೋವೇಲ 2:32.

ಬೇರೆ ಬೇರೆ ಭಾಷೆಗಳಲ್ಲಿ ದೇವರ ಹೆಸರಿನ ಭಾಷಾಂತರ

^ ಪ್ಯಾರ. 9 ಅನೇಕ ಬೈಬಲ್‌ ಭಾಷಾಂತರಗಳಲ್ಲಿ ದೇವರ ಹೆಸರನ್ನು ತೆಗೆದುಹಾಕಿ ಅದರ ಸ್ಥಳದಲ್ಲಿ “ಕರ್ತನು” (LORD) ಎಂದು ದೊಡ್ಡಕ್ಷರಗಳಲ್ಲಿ ಹಾಕಲಾಗಿದೆ. ಇನ್ನು ಕೆಲವರು ದೇವರ ಹೆಸರನ್ನು ಕೆಲವೇ ಕೆಲವು ನಿರ್ದಿಷ್ಟ ವಚನಗಳಲ್ಲಿ ಅಥವಾ ಪಾದಟಿಪ್ಪಣಿಗಳಲ್ಲಿ ಮಾತ್ರ ಹಾಕಿದ್ದಾರೆ. ನ್ಯೂ ವರ್ಲ್ಡ್‌ ಟ್ರಾನ್ಸಲೇಷನ್‌ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌/ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಲ್ಲಿ ದೇವರ ಹೆಸರನ್ನು ಹೇರಳವಾಗಿ ಬಳಸಲಾಗಿದೆ.