ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲರ ಜೊತೆ ಶಾಂತಿಯಿಂದ ಇರೋಕೆ ಏನು ಮಾಡಬೇಕು?

ಎಲ್ಲರ ಜೊತೆ ಶಾಂತಿಯಿಂದ ಇರೋಕೆ ಏನು ಮಾಡಬೇಕು?

ನಮ್ಮ ಸೃಷ್ಟಿಕರ್ತ ದೇವರು ನಾವು ಎಲ್ರ ಜೊತೆ ಶಾಂತಿಯಿಂದ ಇರಬೇಕು ಅಂತ ಇಷ್ಟಪಡ್ತಾರೆ. ಹಾಗಾಗಿ ನಾವು ಎಲ್ಲೇ ಇದ್ರೂ ಬೇರೆಯವರ ಜೊತೆ ಶಾಂತಿ ಸಮಾಧಾನದಿಂದ ಇರ್ಬೇಕು. ಅದಕ್ಕೆ ಸಹಾಯ ಮಾಡೋ ಕೆಲವು ಸಲಹೆಗಳು ಈ ಲೇಖನದಲ್ಲಿ ಇದೆ.

ಕ್ಷಮಿಸೋಕೆ ರೆಡಿಯಾಗಿರಿ

“ಬೇರೆಯವರು ತಪ್ಪು ಮಾಡಿದ್ರೂ . . . ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.”—ಕೊಲೊಸ್ಸೆ 3:13.

ನಾವೆಲ್ಲರೂ ತಪ್ಪು ಮಾಡಿ ಬೇರೆಯವರ ಮನಸ್ಸನ್ನ ನೋಯಿಸ್ತೀವಿ. ಬೇರೆಯವರೂ ನಮ್ಮನ್ನ ನೋಯಿಸಬಹುದು. ಅದು ಏನೇ ಆಗಿರಲಿ, ನಾವು ಬೇರೆಯವರನ್ನ ಕ್ಷಮಿಸೋಕೆ ರೆಡಿಯಾಗಿರಬೇಕು. ಯಾಕಂದ್ರೆ ಬೇರೆಯವರು ನಮ್ಮನ್ನ ಕ್ಷಮಿಸಬೇಕು ಅಂತ ನಾವೂ ಬಯಸ್ತೀವಿ ಅಲ್ವಾ? ನಾವು ಬೇರೆಯವರನ್ನ ಕ್ಷಮಿಸಿದಾಗ ಅವರ ಬಗ್ಗೆ ತಪ್ಪು ಅಭಿಪ್ರಾಯ ಇರಲ್ಲ. ‘ಯಾರಾದ್ರೂ ನಮಗೆ ಕೆಟ್ಟದ್ದು ಮಾಡಿದ್ರೆ ನಾವೂ ಅವರಿಗೆ ಕೆಟ್ಟದ್ದು ಮಾಡಬಾರದು.’ ಪದೇ ಪದೇ ಅವರ ತಪ್ಪನ್ನು ಹೇಳಿ ಮನಸ್ಸು ನೋಯಿಸಬಾರದು. (ರೋಮನ್ನರಿಗೆ 12:17) ಆದ್ರೆ ಅವರು ಮಾಡಿದ ನೋವನ್ನು ನಮಗೆ ಮರೆಯೋಕೆ ಆಗ್ತಿಲ್ಲ ಅಂದ್ರೆ ಏನು ಮಾಡೋದು? ಆಗ ನಾವು ಅವರ ಹತ್ರ ಮಾತಾಡಬೇಕು. ಹಾಗಂತ ಅವರ ಜೊತೆ ಮತ್ತೆ ಜಗಳ ಮಾಡೋದಲ್ಲ, ಆಗಿರೋ ಸಮಸ್ಯೆನ ಸಮಾಧಾನದಿಂದ ಬಗೆಹರಿಸಬೇಕು.—ರೋಮನ್ನರಿಗೆ 12:18.

ಬೇರೆಯವರನ್ನ ಶ್ರೇಷ್ಠರಾಗಿ ನೋಡಿ, ಗೌರವಿಸಿ

“ದೀನತೆ ತೋರಿಸಿ, ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ.”—ಫಿಲಿಪ್ಪಿ 2:3.

ನಾವು ನಮ್ಮ ಸ್ನೇಹಿತರನ್ನ ಶ್ರೇಷ್ಠರಾಗಿ ನೋಡಿದ್ರೆ, ಗೌರವಿಸಿದ್ರೆ ಅವರು ಯಾವಾಗ್ಲೂ ನಮ್ಮ ಜೊತೆ ಇರೋಕೆ ಇಷ್ಟಪಡ್ತಾರೆ. ಬೇಕುಬೇಕಂತ ನಾವು ಅವರ ಮನಸ್ಸು ನೋಯಿಸಲ್ಲ ಅಂತನೂ ಅರ್ಥಮಾಡಿಕೊಳ್ತಾರೆ. ಆದ್ರೆ ‘ಬೇರೆಯವರಿಗಿಂತ ನನಗೆ ಎಲ್ಲ ಚೆನ್ನಾಗಿ ಗೊತ್ತು, ನಾನು ಹೇಳಿದ್ದೆ ನಡಿಬೇಕು’ ಅಂತ ನೆನಸಿದ್ರೆ ಭಿನ್ನಾಭಿಪ್ರಾಯಗಳು ಆಗಬಹುದು, ಚಿಂತೆನೂ ಜಾಸ್ತಿ ಆಗಬಹುದು. ಒಂದುವೇಳೆ ಈ ಕೆಟ್ಟ ಗುಣಗಳು ನಮ್ಮಲ್ಲಿ ಇದ್ರೆ ಫ್ರೆಂಡ್ಸ್‌ ನಮ್ಮನ್ನ ಬಿಟ್ಟುಹೋಗ್ತಾರೆ.

ಭೇದಭಾವ ಮಾಡಬೇಡಿ

“ದೇವರು ಭೇದಭಾವ ಮಾಡಲ್ಲ . . . ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.”—ಅಪೊಸ್ತಲರ ಕಾರ್ಯ 10:34, 35.

ಸರ್ವಶಕ್ತ ದೇವರು ಯಾವುದೇ ಭೇದಭಾವ ಮಾಡದೆ ಎಲ್ರನ್ನೂ ಒಂದೇ ತರ ನೋಡ್ತಾರೆ. ಹಾಗಾಗಿ ದೇಶ, ಭಾಷೆ, ಶ್ರೀಮಂತ, ಬಡವ ಅಂತ ಭೇದಭಾವ ಮಾಡಲ್ಲ. ಅದಕ್ಕೆ “ದೇವರು ಒಬ್ಬ ಮನುಷ್ಯನಿಂದಾನೇ ಎಲ್ಲಾ ದೇಶದ ಜನ್ರನ್ನ ಸೃಷ್ಟಿ ಮಾಡಿದ್ದಾನೆ.” (ಅಪೊಸ್ತಲರ ಕಾರ್ಯ 17:26) ಅಂದ್ರೆ ನಾವೆಲ್ರೂ ಸಹೋದರ ಸಹೋದರಿಯರು. ಹಾಗಾಗಿ ಎಲ್ಲರ ಜೊತೆ ಪ್ರೀತಿ ದಯೆಯಿಂದ ನಡ್ಕೊಂಡ್ರೆ ಖುಷಿಖುಷಿಯಾಗಿ ಇರ್ತಿವಿ. ನಮ್ಮ ಪ್ರೀತಿಯ ದೇವರಿಗೂ ತುಂಬ ಖುಷಿ ಆಗುತ್ತೆ.

ಸೌಮ್ಯರಾಗಿರಿ

‘ಸೌಮ್ಯತೆಯನ್ನ ಬಟ್ಟೆ ತರ ಹಾಕ್ಕೊಳ್ಳಿ.’—ಕೊಲೊಸ್ಸೆ 3:12.

ಸೌಮ್ಯರಾಗಿದ್ರೆ ಬೇರೆಯವರು ಬೇಗ ನಮ್ಮ ಫ್ರೆಂಡ್ಸ್‌ ಆಗ್ತಾರೆ ಮತ್ತು ನಮ್ಮ ಜೊತೆ ಆರಾಮಾಗಿ ಮಾತಾಡ್ತಾರೆ. ನಮ್ಮನ್ನು ತಿದ್ದೋಕೂ ಹೆದರಲ್ಲ. ಯಾರಾದ್ರೂ ನಮ್ಮ ಮೇಲೆ ಕೋಪ ಮಾಡ್ಕೊಂಡಾಗ ಸೌಮ್ಯರಾಗಿದ್ದರೆ ಅವರ ಕೋಪ ತಣ್ಣಗಾಗಿ ಬಿಡುತ್ತೆ. “ಮೃದುವಾದ ಉತ್ತರ ಕೋಪ ಕಡಿಮೆ ಮಾಡುತ್ತೆ, ಒರಟಾದ ಮಾತು ಕೋಪ ಬರಿಸುತ್ತೆ” ಅಂತ ಜ್ಞಾನೋಕ್ತಿ 15:1 ಹೇಳುತ್ತೆ.

ಧಾರಾಳವಾಗಿ ಕೊಡಿ ಮತ್ತು ಕೃತಜ್ಞರಾಗಿರಿ

“ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.”—ಅಪೊಸ್ತಲರ ಕಾರ್ಯ 20:35.

ಈ ಲೋಕದಲ್ಲಿರೋ ತುಂಬ ಜನ ಬರೀ ತಮ್ಮ ಬಗ್ಗೇನೇ ಯೋಚನೆ ಮಾಡ್ತಾರೆ. ಆದ್ರೆ ನಿಜ ಏನಂದ್ರೆ ನಾವು ಬೇರೆಯವರಿಗೆ ಕೊಟ್ಟಾಗಲೇ ಖುಷಿ ಸಿಗೋದು. (ಲೂಕ 6:38) ಧಾರಾಳವಾಗಿ ಕೊಡುವವರು ವಸ್ತುಗಳನ್ನಲ್ಲ ಜನರನ್ನು ಪ್ರೀತಿಸ್ತಾರೆ. ಹಾಗಾಗಿ ತುಂಬ ಖುಷಿಯಾಗಿ ಇರ್ತಾರೆ. ಬೇರೆಯವರು ಏನಾದ್ರೂ ತಂದ್ಕೊಟ್ರೂ ಅದಕ್ಕೆ ಕೃತಜ್ಞರಾಗಿ ಇರ್ತಾರೆ ಮತ್ತೆ ಅವರನ್ನು ಮೆಚ್ಚುತ್ತಾರೆ. (ಕೊಲೊಸ್ಸೆ 3:15) ನಿಮ್ಮನ್ನೇ ಕೇಳ್ಕೊಳಿ: ‘ನಾನು ಕೃತಜ್ಞತೆ ಇಲ್ಲದವರ, ಕಂಜೂಸ್‌ ಆಗಿರುವವರ ಜೊತೆ ಇರೋಕೆ ಇಷ್ಟಪಡ್ತಿನಾ ಅಥವಾ ಉದಾರಿಗಳ, ಕೃತಜ್ಞತೆ ತೋರಿಸುವವರ ಜೊತೆ ಇರೋಕೆ ಇಷ್ಟಪಡ್ತಿನಾ?’ ಹಾಗಾದ್ರೆ ಬೇರೆಯವರು ಹೇಗಿರಬೇಕು ಅಂತ ನೀವು ಇಷ್ಟಪಡ್ತಿರೋ ಹಾಗೇ ನೀವೂ ಇರಿ.—ಮತ್ತಾಯ 7:12.