ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷದ ಜೀವನಮಾರ್ಗ

ಆರೋಗ್ಯ ಮತ್ತು ಚೇತರಿಸಿಕೊಳ್ಳುವ ಶಕ್ತಿ

ಆರೋಗ್ಯ ಮತ್ತು ಚೇತರಿಸಿಕೊಳ್ಳುವ ಶಕ್ತಿ

ದೀರ್ಘಕಾಲದ ಕಾಯಿಲೆ ಅಥವಾ ಅಂಗವೈಕಲ್ಯವು ಒಬ್ಬ ವ್ಯಕ್ತಿಯ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಒಂದು ಸಮಯದಲ್ಲಿ ಆರೋಗ್ಯವಂತನಾಗಿದ್ದು ತುಂಬ ಚುರುಕಾಗಿದ್ದ ಜೆರಲ್ಡ್‌ * ಎಂಬವನಿಗೆ ಲಕ್ವ ಹೊಡೆಯಿತು. ಅವನು ಹೀಗಂದನು: “ನಾನು ತುಂಬ ಖಿನ್ನನಾದೆ. ನನ್ನ ಮನೋಬಲ, ಧೈರ್ಯ, ಶಕ್ತಿ ಎಲ್ಲವೂ ಬತ್ತಿಹೋಯಿತು . . . ಪೂರ್ತಿ ‘ನಾಶವಾಗಿ ಹೋಗಿದ್ದೇನೆ’ ಅಂತ ನನಗನಿಸಿತು.”

ಜೆರಲ್ಡ್‌ನ ಅನುಭವವು ಯಾರಿಗೂ ತಮ್ಮ ಆರೋಗ್ಯದ ಮೇಲೆ ಪೂರ್ಣ ನಿಯಂತ್ರಣ ಇಲ್ಲವೆಂಬ ಸಂಗತಿಯನ್ನು ನೆನಪಿಗೆ ತರುತ್ತದೆ. ಹಾಗಿದ್ದರೂ, ಕಾಯಿಲೆಬೀಳುವ ಸಾಧ್ಯತೆಯನ್ನು ಕಡಿಮೆಮಾಡಲು ಕೆಲವೊಂದು ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು. ಹೀಗೆ ಮಾಡಿದರೂ ನಮ್ಮ ಆರೋಗ್ಯ ಕೆಟ್ಟುಹೋದರೆ ಆಗೇನು? ಇದರರ್ಥ ನಾವು ಇನ್ನೆಂದೂ ಸಂತೋಷವಾಗಿರಲು ಸಾಧ್ಯವಿಲ್ಲ ಎಂದಾ? ಅಲ್ಲ. ಈ ವಿಷಯವನ್ನು ಚರ್ಚಿಸಲಿದ್ದೇವೆ. ಆದರೆ ಮೊದಲು, ಒಳ್ಳೇ ಆರೋಗ್ಯಕ್ಕೆ ನೆರವಾಗುವ ಕೆಲವೊಂದು ತತ್ವಗಳ ಬಗ್ಗೆ ಚರ್ಚಿಸೋಣ.

“ಮಿತಸ್ವಭಾವ” ಇರಲಿ. (1 ತಿಮೊಥೆಯ 3:2, 11) ಮಿತಿಮೀರಿ ತಿನ್ನುವ ಅಥವಾ ಕುಡಿಯುವ ರೂಢಿ ಖಂಡಿತವಾಗಿಯೂ ಆರೋಗ್ಯಕ್ಕೆ ಒಳ್ಳೇದಲ್ಲ! ಜೊತೆಗೆ, ಜೇಬಿಗೆ ಕತ್ತರಿ ಬೀಳುವುದಂತೂ ಖಂಡಿತ! “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು. ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು.”—ಜ್ಞಾನೋಕ್ತಿ 23:20, 21.

ದೇಹವನ್ನು ಕಲುಷಿತಗೊಳಿಸಬೇಡಿ. “ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿ”ಕೊಳ್ಳೋಣ. (2 ಕೊರಿಂಥ 7:1) ತಂಬಾಕು ಅಗಿಯುವುದರಿಂದ, ಧೂಮಪಾನ, ಮದ್ಯಪಾನ ಅಥವಾ ಡ್ರಗ್ಸ್‌ ಸೇವನೆ ಮಾಡುವುದರಿಂದ ಜನರು ತಮ್ಮ ದೇಹದಲ್ಲಿ ಕಲ್ಮಶ ತುಂಬಿಸಿಕೊಳ್ಳುತ್ತಾರೆ. ಧೂಮಪಾನದ ಉದಾಹರಣೆ ತೆಗೆದುಕೊಳ್ಳಿ. ಅದು “ರೋಗ ಮತ್ತು ಅಂಗವೈಕಲ್ಯಕ್ಕೆ ನಡೆಸುತ್ತದೆ ಮತ್ತು ದೇಹದ ಬಹುಮಟ್ಟಿಗೆ ಪ್ರತಿಯೊಂದು ಅಂಗಕ್ಕೆ ಹಾನಿಮಾಡುತ್ತದೆ” ಎಂದು ‘ಯು.ಎಸ್‌. ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೇನ್ಷನ್‌’ ಎಂಬ ಇಲಾಖೆ ಹೇಳುತ್ತದೆ.

ನಿಮ್ಮ ದೇಹ ಮತ್ತು ಜೀವ ಅಮೂಲ್ಯ ಉಡುಗೊರೆಗಳೆಂದು ನೆನಪಿಡಿ. ದೇವರಿಂದಲೇ “ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ.” (ಅ. ಕಾರ್ಯಗಳು 17:28) ಈ ನಿಜಾಂಶಕ್ಕಾಗಿ ನಾವು ಕೃತಜ್ಞರಾಗಿದ್ದರೆ, ಕೆಲಸದ ಸ್ಥಳದಲ್ಲಾಗಲಿ, ವಾಹನ ಚಲಾಯಿಸುವಾಗ ಆಗಲಿ, ಕ್ರೀಡೆ-ಮನೋರಂಜನೆಯ ಆಯ್ಕೆ ಮಾಡುವಾಗ ಆಗಲಿ ಅನಾವಶ್ಯಕವಾಗಿ ಅಪಾಯಕ್ಕೆ ತಲೆಯೊಡ್ಡುವುದಿಲ್ಲ. ಕ್ಷಣಮಾತ್ರದ ರೋಮಾಂಚನಕ್ಕಾಗಿ ಜೀವನಪೂರ್ತಿ ಅಂಗವಿಕಲರಾಗುವುದು ಬೇಕೇ?

ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಿ. ದೇಹಕ್ಕೂ ಮನಸ್ಸಿಗೂ ಹತ್ತಿರದ ನಂಟಿದೆ. ಆದ್ದರಿಂದಲೇ ಅನಗತ್ಯವಾದ ಚಿಂತೆ, ಲಂಗುಲಗಾಮಿಲ್ಲದ ಸಿಟ್ಟು, ಅಸೂಯೆ ಮತ್ತು ಬೇರೆ ಹಾನಿಕರ ಭಾವನೆಗಳನ್ನು ದೂರವಿಡಲು ಪ್ರಯತ್ನಿಸಿ. “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು” ಎನ್ನುತ್ತದೆ ಕೀರ್ತನೆ 37:8. ಹೀಗೂ ಹೇಳಲಾಗಿದೆ: “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು.”—ಮತ್ತಾಯ 6:34.

ಸಕಾರಾತ್ಮಕ ವಿಚಾರಗಳಿಗೆ ಹೆಚ್ಚು ಗಮನಕೊಡಲು ಪ್ರಯತ್ನಿಸಿ. “ಶಾಂತಿಗುಣವು ದೇಹಕ್ಕೆ ಜೀವಾಧಾರ” ಎನ್ನುತ್ತದೆ ಜ್ಞಾನೋಕ್ತಿ 14:30. ಬೈಬಲ್‌ ಹೀಗೂ ಹೇಳುತ್ತದೆ: “ಹರ್ಷಹೃದಯವು ಒಳ್ಳೇ ಔಷಧ.” (ಜ್ಞಾನೋಕ್ತಿ 17:22) ಈ ಮಾತು ನಿಜವೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. “ಸಂತೋಷವಿಲ್ಲದ ಜನರಿಗೆ ಹೋಲಿಸುವಾಗ, ಸಂತೋಷದಿಂದಿರುವವರಿಗೆ ಭವಿಷ್ಯದಲ್ಲಿ ಕಾಯಿಲೆ ಬರುವ ಸಾಧ್ಯತೆಗಳು ಕಡಿಮೆ” ಎಂದು ಸ್ಕಾಟ್ಲೆಂಡಿನಲ್ಲಿ ಒಬ್ಬ ಆರೋಗ್ಯ ಅಧಿಕಾರಿಯಾಗಿರುವ ಡಾ. ಡೆರೆಕ್‌ ಕಾಕ್ಸ್‌ ಹೇಳಿದರು.

ನಿರಾಶೆಯಿಂದ ಚೇತರಿಸಿಕೊಳ್ಳಿ. ಈ ಮುಂಚೆ ತಿಳಿಸಲಾದ ಜೆರಲ್ಡ್‌ನಂತೆ, ಕೆಲವೊಮ್ಮೆ ನಾವು ಒಂದು ಕಷ್ಟವನ್ನು ಸಹಿಸಿಕೊಳ್ಳಬೇಕಾಗುತ್ತದೆ, ಬೇರೆ ದಾರಿ ಇರುವುದಿಲ್ಲ. ಆದರೆ ನಾವದನ್ನು ಹೇಗೆ ಸಹಿಸಿಕೊಳ್ಳುತ್ತೇವೆ ಎನ್ನುವುದು ನಮಗೇ ಬಿಟ್ಟದ್ದು. ಕೆಲವರಂತೂ ನಿರಾಶೆಯಿಂದ ಕುಗ್ಗಿಹೋಗುತ್ತಾರೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಕೆಡುತ್ತದೆ. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ” ಅಥವಾ ನಿರಾಶನಾದರೆ “ನಿನ್ನ ಬಲವೂ ಇಕ್ಕಟ್ಟೇ” ಎನ್ನುತ್ತದೆ ಜ್ಞಾನೋಕ್ತಿ 24:10.

ಇನ್ನೂ ಕೆಲವರು, ಆರಂಭದಲ್ಲಿ ಉಂಟಾಗುವ ಹತಾಶೆ-ನಿರಾಶೆಯ ಭಾವನೆಗಳನ್ನು ಮೆಟ್ಟಿನಿಂತು ಚೇತರಿಸಿಕೊಳ್ಳುತ್ತಾರೆ. ತಮ್ಮ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ. ನಿಭಾಯಿಸಲು ಮಾರ್ಗಗಳನ್ನು ಹುಡುಕುತ್ತಾರೆ. ಜೆರಲ್ಡ್‌ ಸಹ ಇದನ್ನೇ ಮಾಡಿದನು. ತುಂಬ ಪ್ರಾರ್ಥನೆಮಾಡಿ, ಬೈಬಲಿನಲ್ಲಿರುವ ಸಕಾರಾತ್ಮಕ ಸಂದೇಶದ ಕುರಿತು ಧ್ಯಾನಿಸಿದ್ದರಿಂದ “ನನ್ನ ಎದುರಿಗಿರುವ ತಡೆಗಳನ್ನಲ್ಲ, ಅವಕಾಶಗಳನ್ನು ನೋಡಲು ಆರಂಭಿಸಿದೆ” ಎಂದವನು ಹೇಳುತ್ತಾನೆ. ತುಂಬ ಕಷ್ಟಕರವಾದ ಪರಿಸ್ಥಿತಿಗಳಲ್ಲಿರುವ ಅನೇಕರಂತೆ ಅವನು ಸಹ ಕರುಣೆ ಮತ್ತು ಸಹಾನುಭೂತಿಯ ವಿಷಯದಲ್ಲಿ ಅಮೂಲ್ಯ ಪಾಠಗಳನ್ನು ಕಲಿತನು. ಇದು ಅವನಿಗೆ ಬೈಬಲಿನಲ್ಲಿರುವ ಸಾಂತ್ವನದ ಸಂದೇಶವನ್ನು ಇತರರಿಗೆ ತಿಳಿಸಲು ಪ್ರೇರಣೆ ಕೊಟ್ಟಿತು.

ತುಂಬ ಕಷ್ಟವನ್ನು ಅನುಭವಿಸಿದ ಇನ್ನೊಬ್ಬ ವ್ಯಕ್ತಿ ಸ್ಟೀವ್‌. 15 ವರ್ಷ ಪ್ರಾಯದಲ್ಲಾದ ಅಪಘಾತದಿಂದ ಅವನು ಕುತ್ತಿಗೆಯಿಂದ ಕೆಳಗೆ ಸ್ವಾಧೀನ ಕಳೆದುಕೊಂಡನು. 18 ವರ್ಷವಾಗುವಷ್ಟಕ್ಕೆ ಅವನು ಕೈಗಳನ್ನು ಮತ್ತೆ ಬಳಸಲು ಶಕ್ತನಾದನು, ನಂತರ ವಿಶ್ವವಿದ್ಯಾನಿಲಯಕ್ಕೆ ಹೋದನು. ಆದರೆ ಅಲ್ಲಿ ಡ್ರಗ್ಸ್‌ ಸೇವನೆ, ಮದ್ಯಪಾನ ಮತ್ತು ಲೈಂಗಿಕ ಅನೈತಿಕತೆಯಲ್ಲಿ ತೊಡಗಿ ಅವನ ಜೀವನ ಕೆಳಮಟ್ಟಕ್ಕಿಳಿಯಿತು. ಬದುಕಿನಲ್ಲಿ ಅವನಿಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ ಅವನು ಬೈಬಲಿನ ಅಧ್ಯಯನ ಶುರುಮಾಡಿದಾಗ ಇದೆಲ್ಲಾ ಬದಲಾಯಿತು. ಈ ಅಧ್ಯಯನದಿಂದಾಗಿ ಅವನಿಗೆ ಜೀವನದ ಬಗ್ಗೆ ಹೊಸ ನೋಟ ಸಿಕ್ಕಿತು ಮತ್ತು ದುಶ್ಚಟಗಳನ್ನು ನಿಲ್ಲಿಸಲು ಸಹಾಯವಾಯಿತು. “ನನಗೆ ಅಷ್ಟು ಸಮಯದ ವರೆಗೆ ಕಾಡುತ್ತಿದ್ದ ಶೂನ್ಯಭಾವನೆ ಮಾಯವಾಗಿ, ಈಗ ನನ್ನ ಜೀವನದಲ್ಲಿ ಶಾಂತಿ, ಸಂತೋಷ, ತೃಪ್ತಿ ತುಂಬಿಕೊಂಡಿದೆ” ಎನ್ನುತ್ತಾನೆ ಅವನು.

ಸ್ಟೀವ್‌ ಮತ್ತು ಜೆರಲ್ಡ್‌ರ ಮಾತುಗಳು ಕೀರ್ತನೆ 19:7, 8 ರ ಈ ಮಾತುಗಳನ್ನು ಮನಸ್ಸಿಗೆ ತರುತ್ತವೆ: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. . . . ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.”

[ಪಾದಟಿಪ್ಪಣಿ]

^ ಪ್ಯಾರ. 3 ಹೆಸರನ್ನು ಬದಲಾಯಿಸಲಾಗಿದೆ.