ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಕೆಲವು ಹಬ್ಬಗಳನ್ನು ಯಾಕೆ ಮಾಡಲ್ಲ?

ಯೆಹೋವನ ಸಾಕ್ಷಿಗಳು ಕೆಲವು ಹಬ್ಬಗಳನ್ನು ಯಾಕೆ ಮಾಡಲ್ಲ?

 ಯಾವ ಹಬ್ಬ ಮಾಡಬೇಕೆಂದು ಹೇಗೆ ತೀರ್ಮಾನ ಮಾಡುತ್ತಾರೆ?

ಯೆಹೋವನ ಸಾಕ್ಷಿಗಳು ಯಾವ ಹಬ್ಬ ಮಾಡಬೇಕು, ಯಾವ ಹಬ್ಬ ಮಾಡಬಾರದು ಅಂತ ತೀರ್ಮಾನ ಮಾಡುವುದಕ್ಕೆ ಮುಂಚೆ ಬೈಬಲ್‌ ಏನು ಹೇಳುತ್ತೆ ಎಂದು ನೋಡುತ್ತಾರೆ. ಕೆಲವು ಹಬ್ಬ ಆಚರಣೆಗಳು ಬೈಬಲಲ್ಲಿರುವ ತತ್ವಗಳಿಗೆ ವಿರುದ್ಧವಾಗಿವೆ. ಹಾಗಾಗಿ ಅವುಗಳನ್ನು ಯೆಹೋವನ ಸಾಕ್ಷಿಗಳು ಮಾಡಲ್ಲ. ಬೇರೆ ಹಬ್ಬಗಳನ್ನು ಮಾಡಬೇಕಾ ಮಾಡಬಾರದಾ ಅನ್ನೋದು ಅವರವರ ಮನಸ್ಸಾಕ್ಷಿಗೆ ಬಿಟ್ಟ ವಿಷಯ. ಒಟ್ಟಿನಲ್ಲಿ ದೇವರ ನಿಯಮವನ್ನು, ಮನುಷ್ಯರ ನಿಯಮವನ್ನು ಮುರಿಯದೆ ಶುದ್ಧ ಮನಸ್ಸಾಕ್ಷಿ ಇರುವ ಹಾಗೆ ಅವರು ನೋಡಿಕೊಳ್ಳುತ್ತಾರೆ.—ಅಪೊಸ್ತಲರ ಕಾರ್ಯ 24:16.

ಒಂದು ಹಬ್ಬ ಮಾಡಬೇಕಾ ಬೇಡವಾ ಅಂತ ತೀರ್ಮಾನ ಮಾಡುವಾಗ ಯೆಹೋವನ ಸಾಕ್ಷಿಗಳು ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾರೆ. *

 • ಈ ಹಬ್ಬ ಬೈಬಲ್‌ ಬೋಧನೆಗೆ ವಿರುದ್ಧವಾಗಿದೆಯಾ?

  ಬೈಬಲ್‌ ತತ್ವ: “ಯೆಹೋವ ಹೇಳೋದು ಏನಂದ್ರೆ ‘ಹಾಗಾಗಿ ಅವ್ರನ್ನ ಬಿಟ್ಟು ಬನ್ನಿ, ನೀವು ಅವ್ರಿಂದ ಬೇರೆಯಾಗಿ. ಅಶುದ್ಧವಾಗಿದ್ದನ್ನ ಇನ್ನು ಮುಟ್ಟಬೇಡಿ.”—2 ಕೊರಿಂಥ 6:15-17.

  ಬೈಬಲಲ್ಲಿ ಇಲ್ಲದೇ ಇರುವ ಬೋಧನೆಗಳನ್ನು ಪೂರ್ತಿಯಾಗಿ ಬಿಟ್ಟುಬಿಡಬೇಕೆಂದು ಬೈಬಲ್‌ ಹೇಳುತ್ತದೆ. ಇಲ್ಲದಿದ್ದರೆ ದೇವರ ಜೊತೆ ನಮಗಿರುವ ಸಂಬಂಧ ಹಾಳಾಗುತ್ತದೆ. ಹಾಗಾಗಿನೇ ಯೆಹೋವನ ಸಾಕ್ಷಿಗಳು ಕೆಲವು ಹಬ್ಬ ಆಚರಣೆಗಳನ್ನು ಮಾಡಲ್ಲ. ಉದಾಹರಣೆಗೆ,

  ಜನರು ನಂಬುವ, ಪೂಜಿಸುವ ದೇವರುಗಳಿಗೆ ಸಂಬಂಧಪಟ್ಟ ಹಬ್ಬ ಆಚರಣೆಗಳು. “ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆ ಮಾಡಬೇಕು” ಅಂತ ಯೇಸು ಹೇಳಿದನು. (ಮತ್ತಾಯ 4:10) ಯೇಸು ಕೊಟ್ಟ ಈ ಎಚ್ಚರಿಕೆಯನ್ನು ಯೆಹೋವನ ಸಾಕ್ಷಿಗಳು ಪಾಲಿಸುತ್ತಾರೆ. ಹಾಗಾಗಿನೇ ಕ್ರಿಸ್ಮಸ್‌, ಈಸ್ಟರ್‌, ಮೇ ಡೇ ಇದನ್ನೆಲ್ಲ ಆಚರಿಸಲ್ಲ. ಯಾಕೆಂದರೆ ಇವು ಯೆಹೋವನನ್ನು ಬಿಟ್ಟು ಬೇರೆ ದೇವರುಗಳ ಆರಾಧನೆಗೆ ಸಂಬಂಧಪಟ್ಟಿವೆ. ಕೆಳಗೆ ಕೊಟ್ಟಿರುವ ಹಬ್ಬಗಳನ್ನು ಸಹ ಅವರು ಆಚರಿಸಲ್ಲ.

  • ಕ್ವನ್ಜ಼. ಈ ಪದ “ಸ್ವಾಹೀಲಿ ಭಾಷೆಯ ಮಟುನ್‌ಡ ಯಾ ಕ್ವನ್ಜ಼ ಪದಗಳಿಂದ ಬಂದಿದೆ. ಇದರ ಅರ್ಥ ‘ಮೊದಲ ಬೆಳೆ.’ ಆಫ್ರಿಕದ ಇತಿಹಾಸ ಪ್ರಕಾರ ಇದು ಮೊದಲ ಸುಗ್ಗಿಯ ಹಬ್ಬ” ಎಂದು ಕಪ್ಪು ಜನರ ಬಗ್ಗೆ ಅಧ್ಯಯನ—ಎನ್‌ಸೈಕ್ಲಪಿಡೀಯ (ಇಂಗ್ಲಿಷ್‌) ಹೇಳುತ್ತದೆ. ಇದೊಂದು ಧಾರ್ಮಿಕ ಹಬ್ಬ ಅಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಆಫ್ರಿಕದವರು ಆಚರಿಸುವ ಈ ಸುಗ್ಗಿ ಹಬ್ಬದಲ್ಲಿ “ದೇವರುಗಳನ್ನು, ಪೂರ್ವಜರನ್ನು ಪೂಜಿಸಿ ಧನ್ಯವಾದ ಹೇಳಿ ಅವರಿಗೆ ಮೊದಲ ಬೆಳೆಯನ್ನು ಅರ್ಪಿಸುತ್ತಾರೆ” ಎಂದು ಆಫ್ರಿಕದ ಧರ್ಮ—ಎನ್‌ಸೈಕ್ಲಪಿಡೀಯ (ಇಂಗ್ಲಿಷ್‌) ಹೇಳುತ್ತದೆ. ಅಲ್ಲದೆ, “ಪೂರ್ವಜರು ಕೊಟ್ಟಿರುವ ಜೀವ ಆಶೀರ್ವಾದಗಳಿಗೆ ಕೃತಜ್ಞತೆ ಹೇಳಲು, ಋಣಿಯಾಗಿರಲು ಇವತ್ತಿಗೂ ಈ ಹಬ್ಬವನ್ನು ಆಫ್ರಿಕನ್‌-ಅಮೇರಿಕನ್‌ ಜನರು ಆಚರಿಸುತ್ತಾರೆ” ಎಂದು ಹೇಳುತ್ತದೆ.

   ಕ್ವನ್ಜ಼

  • ಸೆಪ್ಟಂಬರ್‌/ಅಕ್ಟೋಬರಲ್ಲಿ ಆಚರಿಸುವ ಹಬ್ಬ. ಇದು ಚಂದ್ರ ದೇವತೆಗೆ ಗೌರವ ಸಲ್ಲಿಸುವ ಹಬ್ಬ ಎಂದು ಪ್ರಪಂಚದ ರಜಾದಿನ ಹಬ್ಬ ಆಚರಣೆಗಳು—ನಿಘಂಟು (ಇಂಗ್ಲಿಷ್‌) ಹೇಳುತ್ತದೆ. ಈ ಹಬ್ಬದ ಆಚಾರದಲ್ಲಿ “ಮನೆಯ ಹೆಂಗಸರೆಲ್ಲ ದೇವತೆಗಳ ಮುಂದೆ ತಲೆ ಬಾಗುತ್ತಾರೆ.”—ಪ್ರಪಂಚದ ಧರ್ಮಗಳು-ನಂಬಿಕೆ, ಆಚಾರವಿಚಾರಗಳ ಸಂಪೂರ್ಣ ಎನ್‌ಸೈಕ್ಲಪಿಡೀಯ. (ಇಂಗ್ಲಿಷ್‌)

  • ನವ್‌ರುಜ಼್‌. “ಕೆಲವು ಹಬ್ಬಗಳು ಶುರುವಾದದ್ದೇ ಜೋ಼ರಾಸ್ಟ್ರಿಯಾನಿಸಮ್‌ ಧರ್ಮದಿಂದ. ಹಿಂದಿನ ಕಾಲದ ಜೋ಼ರಾಸ್ಟ್ರಿಯಾನ್‌ ಕ್ಯಾಲೆಂಡರಲ್ಲಿ ನವ್‌ರುಜ಼್‌ ಒಂದು ಪವಿತ್ರ ದಿನ. . .  ಚಳಿಗಾಲದ ಆತ್ಮವು ರಫಿತ್ವಿನ್‌ ಎಂಬ ಮಧ್ಯಾಹ್ನದ ಆತ್ಮವನ್ನು ತಣ್ಣನೆಯ ತಿಂಗಳಲ್ಲಿ ನೆಲದಡಿಗೆ ದೂಡಿರುತ್ತದೆ. ಜೋ಼ರಾಸ್ಟ್ರಿಯಾನ್‌ ಸಂಪ್ರದಾಯ ಪ್ರಕಾರ ನವ್‌ರುಜ಼್‌ ದಿನ ಮಧ್ಯಾಹ್ನದಲ್ಲಿ ಜನ ಸಡಗರ ಸಂಭ್ರಮದಿಂದ ಮಧ್ಯಾಹ್ನದ ಆತ್ಮವನ್ನು ಪುನಃ ಸ್ವಾಗತಿಸುತ್ತಾರೆ.”—ಶೈಕ್ಷಣಿಕ ವೈಜ್ಞಾನಿಕ ಸಾಂಸ್ಕೃತಿಕ ವಿಶ್ವಸಂಸ್ಥೆ.

  • ಶಾಬಿ-ಯಾಲ್ಡ. ಇದು ಉತ್ತರಾರ್ಧ ಗೋಳದಲ್ಲಿ ಮಾಡುವ ಆಚರಣೆ. ವರ್ಷದಲ್ಲಿ ಕೆಲವೇ ಗಂಟೆ ಹಗಲು ಇರುವ ದಿನದಂದು ಇದನ್ನು ಆಚರಿಸುತ್ತಾರೆ. ಇದು ಬೆಳಕಿನ ದೇವರಾದ “ಮಿತ್ರ ದೇವರ ಆರಾಧನೆಗೆ ಖಂಡಿತ ಸಂಬಂಧಪಟ್ಟಿದೆ” ಎಂದು ಪರ್ಶಿಯದ ರಹಸ್ಯ ಇತಿಹಾಸದಲ್ಲಿ ಸೂಫಿಸಂ (ಇಂಗ್ಲಿಷ್‌) ಪುಸ್ತಕ ಹೇಳುತ್ತದೆ. ರೋಮ್‌ ಮತ್ತು ಗ್ರೀಕ್‌ನ ಸೂರ್ಯ ದೇವರುಗಳ ಆರಾಧನೆಗೂ ಇದು ಸಂಬಂಧಪಟ್ಟಿರಬಹುದು ಎಂದು ಕೆಲವರು ಹೇಳುತ್ತಾರೆ. *

  • ಥ್ಯಾಂಕ್ಸ್‌ಗಿವಿಂಗ್‌. ಇದು ಕ್ವನ್ಜ಼ ಹಬ್ಬದ ತರ. ಹಿಂದಿನ ಕಾಲದಲ್ಲಿ ಬೇರೆ ಬೇರೆ ದೇವರುಗಳಿಗೆ ಗೌರವ ಸಲ್ಲಿಸಲು ಆಚರಿಸುತ್ತಿದ್ದ ಸುಗ್ಗಿ ಹಬ್ಬಗಳೇ ಥ್ಯಾಂಕ್ಸ್‌ಗಿವಿಂಗ್‌ ಹಬ್ಬದ ಮೂಲ. ಸಮಯ ಕಳೆದಂತೆ ಈ ಪ್ರಾಚೀನ ಸಂಪ್ರದಾಯಗಳನ್ನು ಕ್ರೈಸ್ತ ಧರ್ಮಗಳು ತಮ್ಮದಾಗಿಸಿಕೊಂಡವು.”—ಮಹಾ ಮತ್ತು ದೈವಿಕ ಸಾಹಸಮೊದಲ ಥ್ಯಾಂಕ್ಸ್‌ಗಿವಿಂಗ್‌ನ ತೀರ್ಥಯಾತ್ರಿಗಳು ಮತ್ತು ಪುರಾಣಕಥೆ (ಇಂಗ್ಲಿಷ್‌).

  ಮೂಢನಂಬಿಕೆ ಮತ್ತು ಅದೃಷ್ಟಕ್ಕೆ ಸಂಬಂಧಪಟ್ಟ ಹಬ್ಬಗಳು. ‘ಯೆಹೋವನನ್ನು ತೊರೆದ ಜನ ಅದೃಷ್ಟ ದೇವರಿಗೆ ಮೇಜನ್ನು ಸಿದ್ಧಪಡಿಸುತ್ತಾರೆ’ ಎಂದು ಬೈಬಲ್‌ ಹೇಳುತ್ತದೆ. (ಯೆಶಾಯ 65:11) ಅದಕ್ಕೇ ಯೆಹೋವನ ಸಾಕ್ಷಿಗಳು ಕೆಳಗಿನ ಹಬ್ಬಗಳನ್ನು ಮಾಡುವುದಿಲ್ಲ.

  • ಇವಾನ್‌ ಕುಪಾಲ. “ಈ ಹಬ್ಬ ಆಚರಿಸುವ ದಿನದಂದು ಪ್ರಕೃತಿಗೆ ತುಂಬ ಮಾಂತ್ರಿಕ ಶಕ್ತಿ ಇರುತ್ತದೆ. ಯಾರಿಗೆ ಧೈರ್ಯ ಅದೃಷ್ಟ ಇರುತ್ತೋ ಅವರಿಗೆ ಆ ಶಕ್ತಿ ಸಿಗುತ್ತೆ ಅನ್ನೋದು ಜನರ ನಂಬಿಕೆ” ಎಂದು ಬೆಲುರೂಸ್‌ ಸಂಪೂರ್ಣ ಮಾಹಿತಿ (ಇಂಗ್ಲಿಷ್‌) ಪುಸ್ತಕ ಹೇಳುತ್ತದೆ. ಉತ್ತರಾರ್ಧ ಗೋಳದಲ್ಲಿ ಹಗಲು ಜಾಸ್ತಿ ಇರುವ ದಿನವನ್ನು ಆಚರಿಸಲಿಕ್ಕಾಗಿ ಮಾಡುತ್ತಿದ್ದ ಹಬ್ಬವೇ ಇವಾನ್‌ ಕುಪಾಲ. ಇದನ್ನು ಜೂನ್‌ ತಿಂಗಳಲ್ಲಿ ಆಚರಿಸುತ್ತಿದ್ದರು. ಮೊದಮೊದಲು ಬೇರೆ ಧರ್ಮದವರು ಈ ಹಬ್ಬ ಆಚರಿಸುತ್ತಿದ್ದರು. ಆದರೆ “ಅವರು ಕ್ರೈಸ್ತ ನಂಬಿಕೆಯನ್ನು ಸ್ವೀಕರಿಸಿದ ಮೇಲೆ ಇವಾನ್‌ ಕುಪಾಲ ಹಬ್ಬದ ದಿನವನ್ನು ಚರ್ಚ್‌ ಹಬ್ಬಕ್ಕೆ ಸೇರಿಸಿದರು ಅಂದ್ರೆ ಸ್ನಾನಿಕ ಯೋಹಾನನ ‘ಸಂತನ ದಿನ’ ಎಂದು ಆಚರಿಸಿದರು” ಅಂತ ಸಮಕಾಲೀನ ರಷ್ಯನ್‌ ಸಂಸ್ಕೃತಿ ಬಗ್ಗೆ ನಿಘಂಟು (ಇಂಗ್ಲಿಷ್‌) ಹೇಳುತ್ತದೆ.

  • ಚಂದ್ರಮಾನದ ಹೊಸ ವರ್ಷ (ಚೈನಿಸ್‌ ಹೊಸ ವರ್ಷ, ಕೊರಿಯನ್‌ ಹೊಸ ವರ್ಷ) “ಅವತ್ತು ಒಳ್ಳೇದಾಗಬೇಕು, ದೇವರುಗಳಿಗೆ ಆತ್ಮಗಳಿಗೆ ಗೌರವ ಕೊಡಬೇಕು, ಬರುವ ವರ್ಷದಲ್ಲಿ ಒಳ್ಳೇದಾಗಲಿ ಎಂದು ಹಾರೈಸಬೇಕು ಅನ್ನೋದೇ ಮನೆಮಂದಿ, ಬಂಧುಮಿತ್ರರ ಮುಖ್ಯ ಗುರಿ.” (ಮೂನ್‌ಕೇಕ್ಸ್‌ ಮತ್ತು ಹಸಿದ ದೆವ್ವಗಳು—ಚೀನಾದ ಹಬ್ಬಗಳು, ಇಂಗ್ಲಿಷ್‌) ಅದೇ ತರ ಕೊರಿಯನ್‌ ಹೊಸ ವರ್ಷ ಹಬ್ಬದಲ್ಲಿ “ಪೂರ್ವಜರ ಆರಾಧನೆ ಮಾಡುತ್ತಾರೆ, ದುಷ್ಟಾತ್ಮಗಳನ್ನು ಓಡಿಸಿ ಹೊಸ ವರ್ಷದಲ್ಲಿ ಅದೃಷ್ಟ ಬರಲಿಕ್ಕೆ ಪೂಜೆ ಪುರಸ್ಕಾರಗಳನ್ನು ಮಾಡುತ್ತಾರೆ. ಅಲ್ಲದೆ ಆ ವರ್ಷ ಏನೇನು ನಡೆಯುತ್ತೆ ಅಂತ ತಿಳಿಯಲು ಭವಿಷ್ಯ ನೋಡುತ್ತಾರೆ.”—ಲೋಕವ್ಯಾಪಕವಾಗಿ ಆಚರಿಸುವ ಹೊಸ ವರ್ಷ ನಿಘಂಟು (ಇಂಗ್ಲಿಷ್‌).

   ಚೈನಿಸ್‌ ಹೊಸ ವರ್ಷ

  ‘ಆತ್ಮ ಅಮರ’ ಬೋಧನೆಗೆ ಸಂಬಂಧಪಟ್ಟ ಹಬ್ಬಗಳು. ಆತ್ಮ ಅಂತ ಏನೋ ಒಂದು ಮನುಷ್ಯನಲ್ಲಿ ಇಲ್ಲ ಎಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. (ಯೆಹೆಜ್ಕೇಲ 18:4) ಅದಕ್ಕೇ ಆತ್ಮಕ್ಕೆ ಸಾವಿಲ್ಲ ಎಂದು ನಂಬಿಕೊಂಡು ಜನ ಆಚರಿಸುವ ಹಬ್ಬಗಳನ್ನು ಯೆಹೋವನ ಸಾಕ್ಷಿಗಳು ಮಾಡಲ್ಲ. ಅಂಥ ಕೆಲವು ಹಬ್ಬ ಯಾವುದೆಂದು ನೋಡಿ:

  • ಸಮಾಧಿ ಪೂಜೆ (ಸತ್ತವರ ದಿನ). ಇದು “ಸತ್ತವರನ್ನೆಲ್ಲ ನೆನಪು ಮಾಡಿಕೊಳ್ಳುವ” ದಿನ ಎಂದು ನ್ಯೂ ಕ್ಯಾಥೋಲಿಕ್‌ ಎನ್‌ಸೈಕ್ಲಪಿಡೀಯ (ಇಂಗ್ಲಿಷ್‌) ಹೇಳುತ್ತದೆ. “ಪರ್ಗೇಟರಿಯಲ್ಲಿ ಇರುವ ಆತ್ಮಗಳು ಜೀವಂತವಾಗಿದ್ದಾಗ ಯಾರೆಲ್ಲ ಅವುಗಳಿಗೆ ಹಿಂಸೆ ಕೊಟ್ಟರೋ ಅವರಿಗೆಲ್ಲ ಭೂತವಾಗಿ ಮಾಟಗಾತಿಯಾಗಿ ಕಪ್ಪೆಯಾಗಿ ಈ ತರ ಎಷ್ಟೋ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಸುಮಾರು ಕ್ರಿ.ಶ. 500 ರಿಂದ ಕ್ರಿ.ಶ.1500 ರಲ್ಲಿ ಜನ ಹೆಚ್ಚಾಗಿ ನಂಬುತ್ತಿದ್ದರು.”

  • ಚಿಂಗ್‌ಮಿಂಗ್‌ ಹಬ್ಬ (ಕಿಂಗ್‌ಮಿಂಗ್‌) ಮತ್ತು ಹಸಿದ ದೆವ್ವದ ಹಬ್ಬ. ಇವೆರೆಡೂ ಪೂರ್ವಜರನ್ನು ಪೂಜೆ ಮಾಡುವ ಹಬ್ಬ. ಚಿಂಗ್‌ಮಿಂಗ್‌ ಹಬ್ಬದಲ್ಲಿ “ಆಹಾರ ಪಾನೀಯ ನೋಟುಗಳನ್ನು ಸುಡುತ್ತಾರೆ. ಸತ್ತವರಿಗೆ ಹಸಿವಾಗಬಾರದು, ಬಾಯಾರಿಕೆ ಆಗಬಾರದು, ದುಡ್ಡಿಲ್ಲದೆ ಹೋಗಬಾರದು ಅಂತ ಹೀಗೆ ಮಾಡುತ್ತಾರೆ” ಎಂದು ಲೋಕ ಸುತ್ತಲಿನ ಜೀವನ ಪದ್ಧತಿಗಳು—ಸೀಮಂತದಿಂದ ಶವಸಂಸ್ಕಾರದವರೆಗೆ (ಇಂಗ್ಲಿಷ್‌) ಪುಸ್ತಕ ಹೇಳುತ್ತದೆ. ಈ ಪುಸ್ತಕ ಇನ್ನೂ ಹೇಳೋದು ಏನಂದ್ರೆ, “ಹಸಿದ ದೆವ್ವದ ಹಬ್ಬ ಮಾಡುವ ತಿಂಗಳಲ್ಲಿ ಬೇರೆ ಯಾವುದೇ ರಾತ್ರಿಗಿಂತ ಹುಣ್ಣಿಮೆ ರಾತ್ರಿಯಲ್ಲೇ ಸತ್ತವರಿಗೂ ಬದುಕಿರುವವರಿಗೂ ಸಂಪರ್ಕ ಜಾಸ್ತಿ [ಇದು ಹಬ್ಬ ಆಚರಿಸುವವರ ನಂಬಿಕೆ]. ಸತ್ತವರು ನಮ್ಮ ಮೇಲೆ ಕೋಪ ಮಾಡಿಕೊಳ್ಳದಿರಲು, ಪೂರ್ವಜರಿಗೆ ಗೌರವ ಕೊಡಲು ಮುಂಜಾಗ್ರತೆ ವಹಿಸೋದು ಮುಖ್ಯ.”

  • ಚುಸಾಕ್‌. ಈ ಹಬ್ಬದಲ್ಲಿ “ಸತ್ತವರ ಆತ್ಮಗಳಿಗೆ ಆಹಾರ ಮತ್ತು ವೈನ್‌ ಕೊಡುತ್ತಾರೆ. ದೇಹ ಸತ್ತ ಮೇಲೂ ಆತ್ಮ ಬದುಕಿರುತ್ತೆ ಅಂತ ನಂಬುವುದರಿಂದಲೇ ಜನ ಅದನ್ನೆಲ್ಲ ಕೊಡುತ್ತಾರೆ” ಎನ್ನುತ್ತದೆ ಧರ್ಮ, ಸಮಾಜ, ನೀತಿ ತತ್ವಗಳ ಕೊರಿಯನ್‌ ಸಂಪ್ರದಾಯ (ಇಂಗ್ಲಿಷ್‌).

  ಮಾಟಮಂತ್ರಕ್ಕೆ ಸಂಬಂಧಪಟ್ಟ ಹಬ್ಬಗಳು. “ಕಣಿಹೇಳೋರು, ಮಾಟಮಂತ್ರ ಮಾಡೋರು, ಶಾಸ್ತ್ರ ಹೇಳೋರು, ಮಂತ್ರವಾದಿಗಳು, ವಶೀಕರಣ ಮಾಡೋರು, ಭವಿಷ್ಯ ಹೇಳೋರು, ಸತ್ತವ್ರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋರು ಅಥವಾ ಸತ್ತವ್ರನ್ನ ವಿಚಾರಿಸೋರು ... ಯೆಹೋವನಿಗೆ ಅಸಹ್ಯ” ಅನ್ನುತ್ತದೆ ಬೈಬಲ್‌. (ಧರ್ಮೋಪದೇಶಕಾಂಡ 18:10-12) ಯೆಹೋವನ ಸಾಕ್ಷಿಗಳು ಯಾವುದೇ ರೀತಿಯ ಮಾಟಮಂತ್ರ ಮಾಡಲ್ಲ, ಜೋತಿಷ್ಯ ನೋಡಲ್ಲ. ಹಾಗಾಗಿ ಹ್ಯಾಲೋವೀನ್‌ ಹಬ್ಬವನ್ನು, ಕೆಳಗೆ ಕೊಟ್ಟಿರುವ ಹಬ್ಬಗಳನ್ನು ಮಾಡಲ್ಲ:

  • ಸಿನ್ಹಾಲ ಮತ್ತು ತಮಿಳ್‌ ಪುತ್ತಾಂಡ್‌. “ಜ್ಯೋತಿಷಿಗಳು ಯಾವ್ಯಾವ ಮುಹೂರ್ತದಲ್ಲಿ ಏನೇನು ಮಾಡಿದರೆ ಒಳ್ಳೇದಾಗುತ್ತೆ ಅಂತ ಹೇಳುತ್ತಾರೆ. ಅದನ್ನು ಮಾಡುವುದು ಈ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದು.”—ಶ್ರೀಲಂಕದ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌).

  • ಸಾಂಗ್‌ಕ್ರಾನ್‌. ಇದೊಂದು ಏಷ್ಯನ್‌ ಹಬ್ಬ. ಸಾಂಗ್‌ಕ್ರಾನ್‌ ಎಂಬ ಪದ “ಒಂದು ಸಂಸ್ಕೃತ ಪದದಿಂದ ಬಂದಿದೆ. ಇದರ ಅರ್ಥ ‘ಚಲನೆ’ ಅಥವಾ ‘ಬದಲಾವಣೆ.’ ಮೇಷ ರಾಶಿಯ ರಾಶಿಚಕ್ರದ ನಕ್ಷತ್ರ ಪುಂಜಕ್ಕೆ ಸೂರ್ಯ ಹೋಗಿದ್ದಾನೆ ಎಂದು ಈ ಹಬ್ಬ ಸೂಚಿಸುತ್ತದೆ.”—ಆಹಾರ, ಔತಣ, ನಂಬಿಕೆ—ಲೋಕ ಧರ್ಮಗಳ ಆಹಾರ ಪದ್ಧತಿಯ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌).

  ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿದ್ದರೂ ಯೇಸುವಿನ ಬಲಿಯ ಮೂಲಕ ಕೊನೆಯಾದ ಆಚರಣೆಗಳು. ಕ್ರಿಸ್ತನ ಮೂಲಕ ಧರ್ಮಶಾಸ್ತ್ರ ಕೊನೆ ಆಯಿತು ಎಂದು ಬೈಬಲ್‌ ಹೇಳುತ್ತದೆ. (ರೋಮನ್ನರಿಗೆ 10:4) ಹಿಂದಿನ ಕಾಲದ ಇಸ್ರಾಯೇಲ್ಯರಿಗೆ ದೇವರು ಕೊಟ್ಟ ಧರ್ಮಶಾಸ್ತ್ರದಲ್ಲಿ ಇರುವ ತತ್ವಗಳಿಂದ ಇವತ್ತಿಗೂ ಕ್ರೈಸ್ತರಿಗೆ ಪ್ರಯೋಜನ ಇದೆ. ಆದರೆ ಅವರು ಧರ್ಮಶಾಸ್ತ್ರದಲ್ಲಿ ಹೇಳಿರುವ ಯಾವ ಹಬ್ಬವನ್ನು ಆಚರಿಸಲ್ಲ. ಮೆಸ್ಸೀಯನ ಆಗಮನಕ್ಕೆ ಸಂಬಂಧಪಟ್ಟ ಹಬ್ಬಗಳನ್ನು ಕೂಡ ಕ್ರೈಸರು ಆಚರಿಸಲ್ಲ, ಏಕೆಂದ್ರೆ ಮೆಸ್ಸೀಯ ಈಗಾಗಲೇ ಬಂದಿದ್ದಾನೆ ಅಂತ ಅವರು ನಂಬುತ್ತಾರೆ. “ಅವು ಮುಂದೆ ಬರಬೇಕಾಗಿದ್ದ ವಿಷ್ಯಗಳ ನೆರಳಷ್ಟೆ, ಆದ್ರೆ ನಿಜವಾದ ವ್ಯಕ್ತಿ ಕ್ರಿಸ್ತ” ಅನ್ನುತ್ತದೆ ಬೈಬಲ್‌. (ಕೊಲೊಸ್ಸೆ 2:17) ಧರ್ಮಶಾಸ್ತ್ರದಲ್ಲಿ ಹೇಳಿರುವ ಹಬ್ಬಗಳ ಉದ್ದೇಶ ಈಗಾಗಲೇ ನೆರವೇರಿದೆ. ಅಲ್ಲದೆ ಆ ಹಬ್ಬಗಳಲ್ಲಿ ಬೈಬಲಿಗೆ ವಿರುದ್ಧವಾಗಿರುವ ಪದ್ಧತಿಗಳನ್ನು ಸೇರಿಸಿದ್ದಾರೆ. ಹಾಗಾಗಿ ಯೆಹೋವನ ಸಾಕ್ಷಿಗಳು ಕೆಳಗೆ ಕೊಟ್ಟೊರುವ ಹಬ್ಬಗಳನ್ನು ಸಹ ಆಚರಿಸಲ್ಲ.

  • ಹಾನಿಕ. ಯೆರೂಸಲೇಮಿನಲ್ಲಿದ್ದ ಯೆಹೂದ್ಯರ ದೇವಾಲಯವನ್ನು ಪುನಃ ಸಮರ್ಪಿಸಿದ ದಿನದ ಆಚರಣೆಯೇ ಹಾನಿಕ. ಈಗ ಯೇಸು ‘ಅತಿ ಶ್ರೇಷ್ಠವಾದ, ಹೆಚ್ಚು ಪರಿಪೂರ್ಣವಾದ ಡೇರೆಯ‘ [ದೇವಾಲಯದ] ಮಹಾ ಪುರೋಹಿತ. ಆ ಡೇರೆ ಕೈಯಿಂದ ಕಟ್ಟಿದ ಅಂದ್ರೆ ಈ ಭೂಮಿಯಲ್ಲಿರೋ ಡೇರೆಯಲ್ಲ ಎಂದು ಬೈಬಲ್‌ ಹೇಳುತ್ತದೆ. (ಇಬ್ರಿಯ 9:11) ಈ ವಚನದಲ್ಲಿ ತಿಳಿಸಿರುವ ಆಲಯವೇ ಕ್ರೈಸ್ತರಿಗೋಸ್ಕರ ಇರುವ ಆಲಯ. ಇದು ಯೆರೂಸಲೇಮಿನಲ್ಲಿದ್ದ ಆಲಯಕ್ಕೆ ಬದಲಿಯಾಗಿದೆ.

  • ರೋಶ್‌ ಅಶನ್ನ. ಇದು ಯೆಹೂದಿ ವರ್ಷದ ಮೊದಲನೇ ದಿನ. ಹಿಂದೆ ಈ ಹಬ್ಬದಲ್ಲಿ ದೇವರಿಗೆ ವಿಶೇಷ ಬಲಿಗಳನ್ನು ಕೊಡುತ್ತಿದ್ದರು. (ಅರಣ್ಯಕಾಂಡ 29:1-6) ಆದರೆ ಮೆಸ್ಸೀಯನಾದ ಯೇಸು ಕ್ರಿಸ್ತ ಈ ‘ಬಲಿ, ಉಡುಗೊರೆ ಅರ್ಪಣೆಗಳನ್ನು ನಿಲ್ಲಿಸಿಬಿಟ್ಟನು,’ ದೇವರು ಅದನ್ನೆಲ್ಲ ಸ್ವೀಕರಿಸಲ್ಲ ಅಂತ ತೋರಿಸಿಕೊಟ್ಟನು.—ದಾನಿಯೇಲ 9:26, 27.

 • ಈ ಆಚರಣೆ ಬೇರೆ ಧರ್ಮದವರ ಹಬ್ಬಗಳಿಗೆ ಪ್ರೋತ್ಸಾಹ ಕೊಡುತ್ತದಾ?

  ಬೈಬಲ್‌ ತತ್ವ: “ಕ್ರೈಸ್ತನು ಮತ್ತು ಕ್ರೈಸ್ತನಲ್ಲದವನು ಒಂದೇನಾ? ದೇವರ ಆಲಯಕ್ಕೂ ಮೂರ್ತಿಗಳಿಗೂ ವ್ಯತ್ಯಾಸ ಇಲ್ವಾ?”—2 ಕೊರಿಂಥ 6:15-17.

  ಯೆಹೋವನ ಸಾಕ್ಷಿಗಳು ಎಲ್ಲರ ಜೊತೆ ಶಾಂತಿಯಿಂದ ಇರುತ್ತಾರೆ. ಏನು ನಂಬಬೇಕು, ನಂಬಬಾರದು ಅನ್ನೋದು ಅವರವರ ಇಷ್ಟ ಅಂತ ಗೌರವದಿಂದ ಒಪ್ಪಿಕೊಳ್ಳುತ್ತಾರೆ. ಆದರೆ ಬೇರೆ ಧರ್ಮದವರ ಜೊತೆ ಸೇರಿ ಅವರ ಹಬ್ಬಗಳನ್ನು ಆಚರಿಸುವುದಿಲ್ಲ. ಕೆಲವು ಉದಾಹರಣೆಗಳನ್ನು ನೋಡಿ.

  ಎಲ್ಲ ಧರ್ಮದವರು ಸೇರಿ ಒಟ್ಟಿಗೆ ಆರಾಧನೆ ಮಾಡಲು ಪ್ರೋತ್ಸಾಹಿಸುವ ಆಚರಣೆಗಳು. ಹಿಂದಿನ ಕಾಲದಲ್ಲಿ ದೇವರು ತನ್ನ ಜನರನ್ನು ಒಂದು ಹೊಸ ದೇಶಕ್ಕೆ ಕರೆದುಕೊಂಡು ಹೋದನು. ಅಲ್ಲಿ ಬೇರೆ ಬೇರೆ ಧರ್ಮದವರು ಇದ್ದರು. ಆಗ ದೇವರು ತನ್ನ ಜನರಿಗೆ, “ನೀವು ಅವರ ಜೊತೆ, ಅವರ ದೇವರುಗಳ ಜೊತೆ ಒಪ್ಪಂದ ಮಾಡ್ಕೊಬಾರದು. ... ನೀವು ಅವರ ದೇವರುಗಳ ಸೇವೆ ಮಾಡಿದ್ರೆ ಅದು ಖಂಡಿತ ನಿಮಗೆ ಉರ್ಲು ಆಗುತ್ತೆ” ಅಂದನು. (ವಿಮೋಚನಕಾಂಡ 23:32, 33) ಹಾಗಾಗಿ ಯೆಹೋವನ ಸಾಕ್ಷಿಗಳು ಕೆಳಗಿನ ಹಬ್ಬಗಳನ್ನು ಮಾಡಲ್ಲ.

  • ಲಾಯ್‌ ಕ್ರಥೋಂಗ್‌. ಇದು ಥಾಯ್‌ಲೆಂಡಿನಲ್ಲಿ ಮಾಡುವ ಹಬ್ಬ. “ಎಲೆಗಳಿಂದ ಬಟ್ಟಲು ಮಾಡಿ, ಮೇಣದಬತ್ತಿ ಅಥವಾ ಊದುಬತ್ತಿ ಹಚ್ಚಿ ಆ ಬಟ್ಟಲಲ್ಲಿ ಇಟ್ಟು ನೀರಲ್ಲಿ ಬಿಡುತ್ತಾರೆ. ಆ ಬಟ್ಟಲು ದುರಾದೃಷ್ಟ ಹೊತ್ತುಕೊಂಡು ಹೋಗುತ್ತೆ ಎಂಬ ನಂಬಿಕೆಯಿದೆ. ನಿಜ ಹೇಳಬೇಕಂದ್ರೆ ಬುದ್ಧನ ಪವಿತ್ರ ದಾರಿಯನ್ನು ನೆನಪಿಸಿಕೊಳ್ಳುವುದಕ್ಕೆ ಈ ಹಬ್ಬ ಮಾಡುತ್ತಾರೆ.”—ಬೌದ್ಧ ಧರ್ಮದ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌).

  • ರಾಷ್ಟ್ರೀಯ ಪಶ್ಚಾತ್ತಾಪ ದಿನ. ಈ ಆಚರಣೆ ಮಾಡುವವರು “ಕ್ರೈಸ್ತ ನಂಬಿಕೆಯ ತತ್ವಗಳನ್ನು ಒಪ್ಪಿಕೊಳ್ಳುತ್ತಾರೆ” ಎಂದು ಪಾಪುವ ನ್ಯೂ ಗಿನಿಯ ಸರ್ಕಾರಿ ಅಧಿಕಾರಿಯೊಬ್ಬ ದ ನ್ಯಾಷನಲ್‌ ಎಂಬ ವಾರ್ತಾಪತ್ರಿಕೆಯಲ್ಲಿ ಹೇಳಿದನು. “ಈ ಆಚರಣೆಯು ಕ್ರೈಸ್ತ ಧರ್ಮದ ತತ್ವಗಳನ್ನು ಪಾಲಿಸುವಂತೆ ಜನರನ್ನು ಪ್ರೋತ್ಸಾಹಿಸುತ್ತದೆ” ಎನ್ನುತ್ತಾನೆ ಆ ಅಧಿಕಾರಿ.

  • ಬುದ್ಧ ಜಯಂತಿ (ವೆಸಾಕ್‌). “ಬುದ್ಧನ ಜನನ, ಜ್ಞಾನೋದಯ, ಮರಣ, ಮೋಕ್ಷವನ್ನು ಬೌದ್ಧ ಧರ್ಮದವರು ಆಚರಿಸುವ ಅತಿ ಪವಿತ್ರ ದಿನ.”—ಪ್ರಪಂಚದ ರಜಾದಿನ ಹಬ್ಬ ಆಚರಣೆಗಳು—ನಿಘಂಟು (ಇಂಗ್ಲಿಷ್‌).

   ಬುದ್ಧ ಜಯಂತಿ (ವೆಸಾಕ್‌)

  ಬೈಬಲಲ್ಲಿ ಹೇಳದೇ ಇರುವ ಧಾರ್ಮಿಕ ಸಂಪ್ರದಾಯಗಳ ಮೇಲೆ ಆಧರಿತವಾದ ಆಚರಣೆಗಳು. ಯೇಸು ಧರ್ಮ ಗುರುಗಳಿಗೆ, “ನಿಮ್ಮ ಸಂಪ್ರದಾಯಕ್ಕೋಸ್ಕರ ದೇವರ ಮಾತನ್ನ ತಳ್ಳಿಹಾಕ್ತೀರ” ಎಂದು ಹೇಳಿದನು. ಅವರು “ಮನುಷ್ಯರ ಆಜ್ಞೆಗಳನ್ನ ದೇವರ ಮಾತುಗಳ ತರ” ಕಲಿಸುತ್ತಿದ್ದರು. ಹಾಗಾಗಿ ಅವರು ಮಾಡುವ ಆರಾಧನೆ ವ್ಯರ್ಥ ಅಂತ ಯೇಸು ಹೇಳಿದನು. (ಮತ್ತಾಯ 15:6, 9) ಈ ಎಚ್ಚರಿಕೆಯನ್ನು ಯೆಹೋವನ ಸಾಕ್ಷಿಗಳು ನೆನಪಲ್ಲಿ ಇಟ್ಟಿರುವುದರಿಂದ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡಲ್ಲ.

  • ಅಪ್ಪಿಫುನಿ (ತ್ರಿ ಕಿಂಗ್ಸ್‌ ಡೇ, ಟಿಮ್‌ಕ್ಯಾಟ್‌, ಲಾಸ್‌ ರೇಯಸ್‌ ಮಾಗೋಸ್‌). ದ ಕ್ರಿಸ್ಮಸ್‌ ಎನ್‌ಸೈಕ್ಲಪೀಡಿಯ ಹೇಳುವ ಹಾಗೆ “ಹರಿಯುವ ನೀರು, ನದಿ, ಕಾಲುವೆಗಳ ದೇವರುಗಳನ್ನು ಗೌರವಿಸಲಿಕ್ಕಾಗಿ ಬೇರೆ ಧರ್ಮದವರು ವಸಂತ ಕಾಲದ ಹಬ್ಬಗಳನ್ನು ಮಾಡುತ್ತಿದ್ದರು.” ಆದರೆ ಆ ಹಬ್ಬಗಳನ್ನು ಕ್ರೈಸ್ತರು, ಯೇಸುವನ್ನು ಜ್ಯೋತಿಷಿಗಳು ನೋಡಲು ಬಂದ ದಿನವಾಗಿ ಅಥವಾ ಯೇಸು ದೀಕ್ಷಾಸ್ನಾನ ಪಡೆದ ದಿನವಾಗಿ ಆಚರಿಸಿದರು. ಅದರ ಹೆಸರೇ ಅಪ್ಪಿಫುನಿ. ಇದೇ ತರದ ಇನ್ನೊಂದು ಹಬ್ಬನೇ ಟಿಮ್‌ಕ್ಯಾಟ್‌. “ಇದು ಸಂಪ್ರದಾಯಗಳಲ್ಲಿ ಬೇರೂರಿದೆ.”—ಹಳೇ ಕಾಲದ ಸಂಸ್ಕೃತಿ ಮತ್ತು ಸಮಾಜದ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌).

  • ಕನ್ಯೆ ಮರಿಯಳ ಸ್ವರ್ಗಾರೋಹಣ ಹಬ್ಬ. ಯೇಸುವಿನ ತಾಯಿ ಮರಿಯಳು ಹಾಗೇ ಸ್ವರ್ಗಕ್ಕೆ ಹೋದಳೆಂಬ ನಂಬಿಕೆಯಿಂದ ಈ ಆಚರಣೆ ಮಾಡುತ್ತಾರೆ. “ಈ ನಂಬಿಕೆಯ ಬಗ್ಗೆ ಆರಂಭದ ಕ್ರೈಸ್ತರಿಗೆ ಗೊತ್ತಿರಲಿಲ್ಲ. ಇದರ ಬಗ್ಗೆ ಬೈಬಲಲ್ಲಿ ಎಲ್ಲೂ ಇಲ್ಲ” ಎಂದು ಧರ್ಮ ಮತ್ತ ಸಮಾಜದ ಮೂಲ—ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌) ಹೇಳುತ್ತದೆ.

  • ಪರಿಶುದ್ಧ ಗರ್ಭಧಾರಣೆಯ ಹಬ್ಬ. ಮರಿಯಳು ಗರ್ಭಿಣಿಯಾದ ಕ್ಷಣದಿಂದಲ್ಲೇ ಪಾಪದಿಂದ ಬಿಡುಗಡೆ ಆದಳು ಎಂಬ ನಂಬಿಕೆಯಿಂದ ಈ ಹಬ್ಬ ಆಚರಿಸುತ್ತಾರೆ. ಆದರೆ “ಮರಿಯಳ ಪರಿಶುದ್ಧ ಗರ್ಭಧಾರಣೆಯ ಬಗ್ಗೆ ಬೈಬಲಲ್ಲಿ ಎಲ್ಲೂ ವಿವರ ಇಲ್ಲ ... ಇದರ ಬಗ್ಗೆ ಕಲಿಸಿದ್ದು ಚರ್ಚ್‌.”—ಹೊಸ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌).

  • 40 ದಿನ ಉಪವಾಸ (ಲೆಂಟ್‌ ಕಾಲ). ಇದು ಶೋಕ, ಪಶ್ಚಾತ್ತಾಪ, ಉಪವಾಸದ ಸಮಯ. ಇದು “ನಾಲ್ಕನೇ ಶತಮಾನದಲ್ಲಿ” ಶುರವಾಯಿತು ಎಂದು ಹೊಸ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ ಹೇಳುತ್ತದೆ. ಅಷ್ಟೊತ್ತಿಗಾಗಲೇ ಬೈಬಲ್‌ ಬರೆದು ಮುಗಿಸಿ 200ಕ್ಕಿಂತ ಹೆಚ್ಚು ವರ್ಷ ಆಗಿ ಹೋಗಿತ್ತು. ಲೆಂಟ್‌ ಕಾಲದ ಮೊದಲನೇ ದಿನದ ಬಗ್ಗೆ ಎನ್‌ಸೈಕ್ಲಪೀಡಿಯ ಹೇಳೋದೇನಂದ್ರೆ: “ಬೂದಿ ಬುಧವಾರದಂದು ಪಾದ್ರಿಗಳು ಚರ್ಚ್‌ ಸದಸ್ಯರ ಹಣೆ ಮೇಲೆ ಬೂದಿಯಿಂದ ಶಿಲುಬೆ ಗುರುತನ್ನು ಹಾಕುತ್ತಾರೆ. ಈ ಗುರುತು ಅವರು ಪಶ್ಟಾತ್ತಾಪಪಡಬೇಕು ಅಂತ ನೆನಪಿಸುತ್ತದೆ. ಈ ರೂಢಿಯನ್ನು ಕ್ಯಾಥೊಲಿಕ್‌ ಚರ್ಚ್‌ 1091 ರಲ್ಲಿ ಅಧಿಕೃತವಾಗಿ ಅಂಗೀಕರಿಸಿತು.”

  • ಮೆಸ್ಕೋಲ್‌ (ಅಥವಾ, ಮಸ್ಕಲ್‌). ಇದು ಇಥಿಯೋಪ್ಯದವರು ಮಾಡುವ ಹಬ್ಬ. “ನಿಜವಾದ ಶಿಲುಬೆ (ಕ್ರಿಸ್ತನನ್ನು ಜಡಿದಿದ್ದ ಶಿಲುಬೆ) ಕಂಡುಹಿಡಿದದ್ದನ್ನು ಆಚರಿಸುವುದೇ ಈ ಹಬ್ಬ. ಈ ಹಬ್ಬ ಮಾಡುವಾಗ ಬೆಂಕಿ ಹಾಕಿ ಜನ ಅದರ ಸುತ್ತ ನೃತ್ಯ ಆಡುತ್ತಾರೆ” ಎಂದು ಮಧ್ಯಯುಗದ ಸಂಸ್ಕೃತಿ ಮತ್ತು ಸಮಾಜದ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌). ಆದರೆ ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಶಿಲುಬೆಯನ್ನು ಉಪಯೋಗಿಸುವುದಿಲ್ಲ.

 • ಈ ಹಬ್ಬ ಒಬ್ಬ ವ್ಯಕ್ತಿ, ಸಂಸ್ಥೆ ಅಥವಾ ರಾಷ್ಟ್ರ ಚಿಹ್ನೆಯನ್ನು ಮೇಲಕ್ಕೇರಿಸುತ್ತದಾ?

  ಬೈಬಲ್‌ ತತ್ವ: “ಯೆಹೋವ ಹೀಗೆ ಹೇಳ್ತಾನೆ ‘ಏನೂ ಅಲ್ಲದ ಮನುಷ್ಯನ ಮೇಲೆ ನಂಬಿಕೆ ಇಡೋ, ಅವನ ಶಕ್ತಿ ಮೇಲೆ ಹೊಂದ್ಕೊಂಡಿರೋ, ಯೆಹೋವನನ್ನ ಬಿಟ್ಟುಹೋಗೋ ಬಲಶಾಲಿ ಮನುಷ್ಯನಿಗೆ ಶಾಪ ತಟ್ಟಲಿ.’”—ಯೆರೆಮೀಯ 17:5.

  ಯೆಹೋವನ ಸಾಕ್ಷಿಗಳು ಬೇರೆಯವರಿಗೆ ಕೃತಜ್ಞತೆ ಹೇಳುತ್ತಾರೆ, ಅವರಿಗೋಸ್ಕರ ಪ್ರಾರ್ಥಿಸುತ್ತಾರೆ. ಹಾಗಿದ್ದರೂ ಕೆಳಗಿನ ಆಚರಣೆಗಳನ್ನು ಮಾಡುವುದಿಲ್ಲ.

  ಒಬ್ಬ ಅಧಿಕಾರಿ ಅಥವಾ ಪ್ರಸಿದ್ಧ ವ್ಯಕ್ತಿಯನ್ನು ಗೌರವಿಸುವ ಹಬ್ಬಗಳು. “ನಿಮ್ಮ ಒಳ್ಳೇದಕ್ಕೇ ಹೇಳ್ತಿದ್ದೀನಿ, ಮೂಗಿಂದ ಉಸಿರಾಡೋ ನಶಿಸಿ ಹೋಗೋ ಮನುಷ್ಯನಲ್ಲಿ ಭರವಸೆ ಇಡಬೇಡಿ. ಮನುಷ್ಯನನ್ನ ಯಾಕೆ ಲೆಕ್ಕಕ್ಕೆ ತಗೋಬೇಕು?” ಅನ್ನುತ್ತದೆ ಬೈಬಲ್‌. (ಯೆಶಾಯ 2:22) ಹಾಗಾಗಿ ಯೆಹೋವನ ಸಾಕ್ಷಿಗಳು ಪ್ರಸಿದ್ಧ ವ್ಯಕ್ತಿಗಳ ಹುಟ್ಟುಹಬ್ಬವನ್ನು ಆಚರಿಸಲ್ಲ.

  ರಾಷ್ಟ್ರ ಧ್ವಜಕ್ಕೆ ಸಂಬಂಧಪಟ್ಟ ಆಚರಣೆಗಳು. ಯೆಹೋವನ ಸಾಕ್ಷಿಗಳು ಧ್ವಜ ದಿನಾಚರಣೆಯನ್ನು ಆಚರಿಸಲ್ಲ. ಯಾಕೆ? ಯಾಕೆಂದರೆ ಬೈಬಲ್‌ ಹೀಗೆ ಹೇಳುತ್ತದೆ: “ಮೂರ್ತಿಗಳು ನಿಮ್ಮನ್ನ ದಾರಿತಪ್ಪಿಸದ ಹಾಗೆ ಹುಷಾರಾಗಿ ಇರಿ.” (1 ಯೋಹಾನ 5:21) ಇವತ್ತು ಕೆಲವರು ಧ್ವಜವನ್ನು ಒಂದು ವಿಗ್ರಹ ಅಂದರೆ ಆರಾಧಿಸುವ ವಸ್ತು ಅಂತ ನೆನಸಲ್ಲ. “ಧ್ವಜವು ರಾಷ್ಟ್ರೀಯತೆಯ ನಂಬಿಕೆಯ ಮುಖ್ಯ ಸಂಕೇತ. ಅದು ಆರಾಧನೆಯ ಕೇಂದ್ರ ವಸ್ತು ಸಹ ಆಗಿದೆ” ಎಂದು ಇತಿಹಾಸಕಾರ ಕಾರ್ಲ್‌ಟನ್‌ ಹೇಯಿಸ್‌ ಬರೆದನು.

  ಸಂತರನ್ನು ಗೌರವಿಸಲು ಮಾಡುವ ಹಬ್ಬ ಆಚರಣೆಗಳು. ದೇವರಿಗೆ ಭಯಪಟ್ಟ ಒಬ್ಬ ವ್ಯಕ್ತಿ ಅಪೊಸ್ತಲ ಪೇತ್ರನಿಗೆ ಬಗ್ಗಿ ನಮಸ್ಕರಿಸಿದಾಗ ಏನಾಯ್ತು? “ಪೇತ್ರ ಅವನನ್ನ ಮೇಲೆತ್ತಿ ‘ಎದ್ದೇಳು, ನಾನೂ ನಿನ್ನ ತರ ಒಬ್ಬ ಮನುಷ್ಯ ಅಷ್ಟೇ’ ಅಂದ” ಅನ್ನುತ್ತದೆ ಬೈಬಲ್‌. (ಅಪೊಸ್ತಲರ ಕಾರ್ಯ 10:25, 26) ಪೇತ್ರನಾಗಲಿ ಬೇರೆ ಅಪೊಸ್ತಲರಾಗಲಿ ಜನರಿಂದ ವಿಶೇಷ ಗೌರವವನ್ನು, ಆರಾಧನೆಯನ್ನು ಸ್ವೀಕರಿಸಲಿಲ್ಲ. ಅದೇ ರೀತಿ ಯೆಹೋವನ ಸಾಕ್ಷಿಗಳು ಸಂತರನ್ನು ಗೌರವಿಸುವ ಹಬ್ಬ ಆಚರಣೆಗಳನ್ನು ಮಾಡುವುದಿಲ್ಲ. ಕೆಲವು ಯಾವುದೆಂದರೆ,

  • ಸಂತರ ದಿನ. “ಎಲ್ಲ ಸಂತರನ್ನು ಗೌರವಿಸಲಿಕ್ಕಾಗಿ ಈ ಹಬ್ಬ ಮಾಡುತ್ತಾರೆ. ... ಈ ಹಬ್ಬ ಹೇಗೆ ಆರಂಭ ಆಯಿತು ಅಂತ ಯಾರಿಗೂ ಗೊತ್ತಿಲ್ಲ.”—ಹೊಸ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌).

  • ಗ್ವಾಡಲೂಪೆಯ ಮಾತೆ ಮರಿಯಳ ಹಬ್ಬ. “ಮೆಕ್ಸಿಕೋದ ರಕ್ಷಕಿ ಸಂತಳನ್ನು” ಗೌರವಿಸಲು ಈ ಹಬ್ಬ ಮಾಡುತ್ತಾರೆ. ಈ ರಕ್ಷಕಿ ಯೇಸುವಿನ ತಾಯಿ ಮರಿಯಳು ಅಂತ ಕೆಲವರು ನಂಬುತ್ತಾರೆ. ಆಕೆ 1531 ರಲ್ಲಿ ಒಬ್ಬ ಬಡ ರೈತನಿಗೆ ಅದ್ಭುತವಾಗಿ ಪ್ರತ್ಯಕ್ಷಳಾದಳು ಅನ್ನೋದು ಕೆಲವರ ನಂಬಿಕೆ.—ಲಾಟಿನ್‌ ಅಮೇರಿಕ ಸಾಹಿತ್ಯದ ಗ್ರೀನ್‌ವುಡ್‌ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌).

   ಗ್ವಾಡಲೂಪೆಯ ಮಾತೆ ಮರಿಯಳ ಹಬ್ಬ

  • ನಾಮಕರಣ. “ಮಗುವಿಗೆ ದೀಕ್ಷಾಸ್ನಾನ ಮಾಡಿಸುವಾಗಲೋ ಚರ್ಚಲ್ಲಿ ನಂಬಿಕೆಯನ್ನು ಸ್ಥಿರೀಕರಿಸುವಾಗಲೋ ಒಬ್ಬ ಸಂತನ ಹೆಸರನ್ನು ಇಡಲಾಗುತ್ತದೆ. ಇದೇ ನಾಮಕರಣ ದಿನ” ಎಂದು ಲೋಕ ಸುತ್ತಲಿನ ಜೀವನ ಪದ್ಧತಿಗಳು—ಸೀಮಂತದಿಂದ ಶವಸಂಸ್ಕಾರದವರೆಗೆ (ಇಂಗ್ಲಿಷ್‌) ಪುಸ್ತಕ ಹೇಳುತ್ತದೆ. “ಧರ್ಮಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅವತ್ತು ಜನ ಮಾಡುತ್ತಾರೆ” ಎಂದೂ ಆ ಪುಸ್ತಕ ಹೇಳುತ್ತದೆ.

  ರಾಜಕೀಯ ಮತ್ತು ಸಮಾಜ ಅಭಿವೃದ್ಧಿಗೆ ಸಂಬಂಧಪಟ್ಟ ಆಚರಣೆಗಳು. “ಮನುಷ್ಯರ ಮೇಲೆ ಭರವಸೆ ಇಡೋದಕ್ಕಿಂತ ಯೆಹೋವನನ್ನ ಆಶ್ರಯಿಸೋದೇ ಮೇಲು” ಎನ್ನುತ್ತದೆ ಬೈಬಲ್‌. (ಕೀರ್ತನೆ 118:8, 9) ಲೋಕದಲ್ಲಿರೋ ಸಮಸ್ಯೆಗಳಿಗೆ ಪರಿಹಾರ ದೇವರು ಮಾತ್ರ ತರಲಿಕ್ಕೆ ಸಾಧ್ಯ, ಮನುಷ್ಯರು ಅದನ್ನೆಲ್ಲ ಸರಿಮಾಡಲ್ಲ ಅಂತ ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಹಾಗಾಗಿ ರಾಜಕೀಯ ಅಥವಾ ಸಮಾಜ ಅಭಿವೃದ್ಧಿಗೆ ಬೆಂಬಲ ಕೊಡುವ ಯುವ ದಿನಾಚರಣೆ ಅಥವಾ ಮಹಿಳಾ ದಿನಾಚರಣೆಗಳಿಗೆ ಅವರು ಕೈಜೋಡಿಸಲ್ಲ. ಇದೇ ಕಾರಣಕ್ಕಾಗಿಯೇ ವಿಮೋಚನಾ ದಿನ (ಇಮಾನ್ಸಿಪೇಷನ್‌ ಡೇ) ಇಂಥ ಬೇರೆ ಆಚರಣೆಗಳನ್ನು ಮಾಡಲ್ಲ. ವರ್ಣಭೇದ ನೀತಿ ಮತ್ತು ಅಸಮಾನತೆಯ ಸಮಸ್ಯೆಗಳಿಗೆ ದೇವರ ಆಡಳಿತವೇ ಪರಿಹಾರ ತರುತ್ತದೆ ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ.—ರೋಮನ್ನರಿಗೆ 2:11; 8:21.

 • ಈ ಹಬ್ಬ ಒಂದು ದೇಶ, ಒಂದು ಜಾತಿಯನ್ನು ಬೇರೆ ದೇಶ, ಜಾತಿಗಿಂತ ಮೇಲು ಎಂದು ತೋರಿಸುತ್ತದಾ?

  ಬೈಬಲ್‌ ತತ್ವ: “ದೇವರು ಭೇದಭಾವ ಮಾಡಲ್ಲ ... ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.”—ಅಪೊಸ್ತಲರ ಕಾರ್ಯ 10:34, 35.

  ಯೆಹೋವನ ಸಾಕ್ಷಿಗಳಿಗೆ ತಮ್ಮ ತಾಯ್ನಾಡು ಅಂದ್ರೆ ಇಷ್ಟ ಇರುತ್ತೆ. ಆದರೆ ಅವರು ತಮ್ಮ ದೇಶ ಜಾತಿಯನ್ನು ಮೇಲು ಅಂತ ತೋರಿಸುವ ಆಚರಣೆಗಳನ್ನು ಮಾಡಲ್ಲ. ಅವುಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ.

  ಮಿಲಿಟರಿಯನ್ನು ಗೌರವಿಸುವ ಆಚರಣೆಗಳು. ಯೇಸು ತನ್ನ ಹಿಂಬಾಲಕರಿಗೆ ಯುದ್ಧ ಮಾಡಿ ಅಂತ ಹೇಳಲಿಲ್ಲ. ಅದಕ್ಕೆ ಬದಲಾಗಿ ಹೀಗೆ ಹೇಳಿದನು: “ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ. ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ.” (ಮತ್ತಾಯ 5:44) ಹಾಗಾಗಿ ಸೈನಿಕರಿಗೆ ಗೌರವ ಕೊಡುವ ಆಚರಣೆಗಳನ್ನು ಯೆಹೋವನ ಸಾಕ್ಷಿಗಳು ಮಾಡಲ್ಲ. ಉದಾಹರಣೆಗೆ,

  • ಆನ್‌ಸಾ಼ಕ್‌ ಡೇ. “ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡಿನ ಸೇನಾ ಪಡೆಯನ್ನು ಗುರುತಿಸಲು ಉಪಯೋಗಿಸುವ ಚುಟುಕು ಹೆಸರೇ ಆನ್‌ಸಾ಼ಕ್‌ (Anzac).” “ಸಮಯ ಕಳೆದಂತೆ ಈ ದಿನವನ್ನು ಯುದ್ಧದಲ್ಲಿ ಹುತಾತ್ಮರಾದವರ ಸ್ಮರಣೆಯ ದಿನವಾಗಿ ಮಾಡಿದರು.”—ಆಸ್ಟ್ರೇಲಿಯ ಚರಿತ್ರೆಯ ನಿಘಂಟು (ಇಂಗ್ಲಿಷ್‌).

  • ವೆಟರನ್ಸ್‌ ಡೇ (ನೆನಪಿನ ದಿನ, ಸ್ಮರಣೆ ಭಾನುವಾರ ಸ್ಮರಣೆ ದಿನ). ಈ ಆಚರಣೆಗಳನ್ನು “ವೀರ ಯೋಧರ ಮತ್ತು ಯುದ್ಧದಲ್ಲಿ ಮಡಿದವರ ಗೌರವಾರ್ಥವಾಗಿ ಮಾಡುತ್ತಾರೆ.— ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ (ಇಂಗ್ಲಿಷ್‌).

  ಚಾರಿತ್ರಿಕ ದಿನ ಅಥವಾ ಸ್ವತಂತ್ರ ದಿನಾಚರಣೆ. ಯೇಸು ತನ್ನ ಶಿಷ್ಯರ ಬಗ್ಗೆ ಹೀಗಂದನು: “ನಾನು ಹೇಗೆ ಈ ಲೋಕದವರ ತರ ಇಲ್ವೋ ಅದೇ ತರ ಇವ್ರೂ ಈ ಲೋಕದವರ ತರ ಇಲ್ಲ.” (ಯೋಹಾನ 17:16) ದೇಶದ ಇತಿಹಾಸದ ಬಗ್ಗೆ ಕಲಿಯಲು ಯೆಹೋವನ ಸಾಕ್ಷಿಗಳು ಇಷ್ಟಪಡುತ್ತಾರೆ. ಹಾಗಿದ್ದರೂ ಕೆಳಗಿನ ಆಚರಣೆಗಳನ್ನು ಮಾಡಲ್ಲ.

  • ಆಸ್ಟ್ರೇಲಿಯ ಡೇ. ಸಂಸ್ಕೃತಿ ಮತ್ತು ದಿನನಿತ್ಯದ ಜೀವನದ ಬಗ್ಗೆ ವರ್ಲ್ಡ್‌ಮಾರ್ಕ್‌ ಎನ್‌ಸೈಕ್ಲಪೀಡಿಯ (ಇಂಗ್ಲಿಷ್‌) ಹೇಳುವ ಹಾಗೆ “1788 ರಲ್ಲಿ ಬ್ರಿಟಿಷ್‌ ಸೈನಿಕರು ತಮ್ಮ ಬಾವುಟವನ್ನು ಆಸ್ಟ್ರೇಲಿಯದಲ್ಲಿ ಹಾರಿಸಿ ಅದನ್ನು ಹೊಸ ಕಾಲೋನಿ ಎಂದು ಘೋಷಿಸಿದರು.” ಆ ದಿನವನ್ನು ನೆನಪಿಸಿಕೊಳ್ಳಲು ಮಾಡುವ ಆಚರಣೆಯೇ ಆಸ್ಟ್ರೇಲಿಯ ಡೇ.

  • ಗೈ ಫೌಕ್ಸ್‌ ಡೇ. “1605 ರಲ್ಲಿ ಗೈ ಫೌಕ್ಸ್‌ ಮತ್ತು ಅವನನ್ನು ಬೆಂಬಲಿಸಿದ ಇತರ ಕ್ಯಾಥೋಲಿಕರು ರಾಜ 1 ನೇ ಜೇಮ್ಸ್‌ ಮತ್ತು ಇಂಗ್ಲೆಂಡಿನ ಸರ್ಕಾರಿ ಸದಸ್ಯರನ್ನು ಕೊಲ್ಲಲು ಮಾಡಿದ ವಿಫಲ ಪ್ರಯತ್ನವನ್ನು ನೆನಪಿಸಿಕೊಳ್ಳುವ ರಾಷ್ಟ್ರೀಯ ಆಚರಣೆಯೇ” ಗೈ ಫೌಕ್ಸ್‌ ಡೇ.—ಇಂಗ್ಲಿಷ್‌ ಜನಪದ ಸಾಹಿತ್ಯದ ನಿಘಂಟು (ಇಂಗ್ಲಿಷ್‌).

  • ಸ್ವತಂತ್ರ ದಿನಾಚರಣೆ. ತಾಯ್ನಾಡು ಪರದೇಶದವರ ಅಧಿಕಾರದಿಂದ ಬಿಡುಗಡೆಯಾದ ದಿನವನ್ನು ಪ್ರತಿ ವರ್ಷ ಇಡೀ ದೇಶಕ್ಕೆ ದೇಶವೇ ಆಚರಿಸುತ್ತದೆ. ಅನೇಕ ದೇಶಗಳಲ್ಲಿ ಮಾಡುವ ಈ ಆಚರಣೆಯೇ ಸ್ವತಂತ್ರ ದಿನಾಚರಣೆ.

 • ಈ ಹಬ್ಬ ಮಾಡುವಾಗ ಲಂಗುಲಗಾಮು ಇಲ್ಲದ ವರ್ತನೆ ಅಥವಾ ಅನೈತಿಕತೆ ಇರುತ್ತದಾ?

  ಬೈಬಲ್‌ ತತ್ವ: “ಈ ಮುಂಚೆ ನೀವು ಲೋಕದ ಜನ್ರ ತರ ಇದ್ರಿ. ನಾಚಿಕೆಗೆಟ್ಟು ನಡ್ಕೊಳ್ಳೋದು, ಲೈಂಗಿಕ ಅನೈತಿಕತೆ ನಡ್ಸೋಕೆ ಆಸೆಪಡೋದು, ಕಂಠಪೂರ್ತಿ ಕುಡಿಯೋದು, ಕುಡಿದು ಕುಪ್ಪಳಿಸೋದು, ಕುಡಿಯೋದ್ರಲ್ಲಿ ಪೈಪೋಟಿ, ಅಸಹ್ಯ ಮೂರ್ತಿಪೂಜೆ ಇಂಥ ವಿಷ್ಯಗಳಲ್ಲೇ ತುಂಬ ಸಮಯ ಕಳೆದುಬಿಟ್ರಿ.”—1 ಪೇತ್ರ 4:3.

  ಈ ತತ್ವವನ್ನು ಯೆಹೋವನ ಸಾಕ್ಷಿಗಳು ಪಾಲಿಸುತ್ತಾರೆ. ಹಾಗಾಗಿ ಜನ ಕುಡಿದು ಕುಣಿದು ಕುಪ್ಪಳಿಸುವ ಆಚರಣೆಗಳನ್ನು ಅವರು ಮಾಡಲ್ಲ. ಸ್ನೇಹಿತರ ಜೊತೆ ಸೇರಿ ಅವರು ಸಹ ಪಾರ್ಟಿ ಮಾಡುತ್ತಾರೆ. ಡ್ರಿಂಕ್ಸ್‌ ಮಾಡುವುದಾದರೆ ಅದನ್ನು ಮಿತವಾಗಿ ತಕ್ಕೊಳ್ಳುತ್ತಾರೆ. “ನೀವು ತಿಂದ್ರೂ ಕುಡಿದ್ರೂ ಬೇರೇನೇ ಮಾಡಿದ್ರೂ ಅದನ್ನೆಲ್ಲ ದೇವರಿಗೆ ಗೌರವ ತರೋ ಹಾಗೆ ಮಾಡಿ” ಎನ್ನುತ್ತದೆ ಬೈಬಲ್‌. (1 ಕೊರಿಂಥ 10:31) ಅದೇ ತರ ನಡೆಯಲು ಅವರು ತಮ್ಮಿಂದ ಆದಷ್ಟು ಪ್ರಯತ್ನಿಸುತ್ತಾರೆ.

  ಹಾಗಾಗಿ ಬೈಬಲ್‌ ಖಂಡಿಸುವ ಅಸಭ್ಯ ನಡತೆಯಲ್ಲಿ ಒಳಗೂಡುವಂತೆ ಮಾಡುವ ಕಾರ್ನಿವಲ್‌ ಹಬ್ಬ ಅಥವಾ ಬೇರೆ ಯಾವ ಹಬ್ಬಗಳನ್ನೂ ಯೆಹೋವನ ಸಾಕ್ಷಿಗಳು ಮಾಡಲ್ಲ. ಯೆಹೂದಿಗಳ ಹಬ್ಬವಾದ ಪೂರೀಮ್‌ ಅನ್ನು ಕೂಡ ಮಾಡಲ್ಲ. ಕ್ರಿ. ಶ. 5 ನೇ ಶತಮಾನದಲ್ಲಿ ತಮಗೆ ಸಿಕ್ಕಿದ ಬಿಡುಗಡೆಯನ್ನು ಆಚರಿಸಲಿಕ್ಕಾಗಿ ಯೆಹೂದ್ಯರು ಈ ಹಬ್ಬವನ್ನು ಎಷ್ಟೋ ವರ್ಷದಿಂದ ಮಾಡುತ್ತಾ ಇದ್ದಾರೆ. ಆದರೆ “ಈಗ ಇದು, ಮಾರ್ಡಿ ಗ್ರಾ ಮತ್ತು ಕಾರ್ನಿವಲನ್ನು ಯೆಹೂದಿಗಳು ಆಚರಿಸುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಹೆಚ್ಚಾಗಿ ಹೆಂಗಸರ ಬಟ್ಟೆಯನ್ನು ಗಂಡಸರು ಹಾಕಿಕೊಳ್ಳುತ್ತಾರೆ. ಎಲ್ಲರೂ ಕಂಠಪೂರ್ತಿ ಕುಡಿದು ಕಿವಿ ಕಿತ್ತು ಹೋಗುವಷ್ಟು ಭಾರೀ ಶಬ್ಧ ಮಾಡುತ್ತಾರೆ” ಎಂದು ಯೆಹೂದಿ ಮತದ ಪ್ರಮುಖ ವಿಷಯಗಳು (ಇಂಗ್ಲಿಷ್‌) ಅನ್ನುವ ಪುಸ್ತಕ ಹೇಳುತ್ತದೆ.

 ಕುಟುಂಬದವರು ಹಬ್ಬ ಮಾಡಿದರೆ ಅವರನ್ನು ಯೆಹೋವನ ಸಾಕ್ಷಿಗಳು ಪ್ರೀತಿಸಲ್ಲವಾ?

ಖಂಡಿತ ಪ್ರೀತಿಸುತ್ತಾರೆ. ಕುಟುಂಬದವರು ಏನೇ ನಂಬಿದರೂ ಅವರೆಲ್ಲರನ್ನು ಪ್ರೀತಿಸಬೇಕು ಅಂತ ಬೈಬಲ್‌ ಹೇಳುತ್ತದೆ. (1 ಪೇತ್ರ 3:1, 2, 7) ಯೆಹೋವನ ಸಾಕ್ಷಿಗಳು ಹಬ್ಬ ಮಾಡುವುದನ್ನು ಬಿಟ್ಟುಬಿಟ್ಟಾಗ ಅವರ ಸಂಬಂಧಿಕರಿಗೆ ತುಂಬ ಬೇಜಾರು ಆಗಬಹುದು, ನೋವು ಆಗಬಹುದು, ದ್ರೋಹ ಮಾಡ್ತಿದ್ದಾರೆ ಅಂತ ನೆನಸಬಹುದು. ಹಾಗಾಗಿ ಯೆಹೋವನ ಸಾಕ್ಷಿಗಳು ಬೇರೆ ಸಂದರ್ಭಗಳಲ್ಲಿ ಸಂಬಂಧಿಕರ ಮನೆಗೆ ಹೋಗಿ ಅವರನ್ನು ಎಷ್ಟು ಪ್ರೀತಿಸುತ್ತಾರೆಂದು ತೋರಿಸುತ್ತಾರೆ ಮತ್ತು ಹಬ್ಬ ಮಾಡದೇ ಇರಲಿಕ್ಕೆ ಕಾರಣ ಏನು ಅಂತ ಜಾಣ್ಮೆಯಿಂದ ವಿವರಿಸುತ್ತಾರೆ.

 ಹಬ್ಬ ಮಾಡಬೇಡಿ ಅಂತ ಹೇಳುತ್ತಾರಾ?

ಇಲ್ಲ. ಹಬ್ಬ ಮಾಡಬೇಕಾ ಮಾಡಬಾರದಾ ಅನ್ನೋದು ಅವರವರಿಗೆ ಬಿಟ್ಟ ವಿಷಯ ಅಂತ ಅವರು ನಂಬುತ್ತಾರೆ. (ಯೆಹೋಶುವ 24:15) ಜನರ ನಂಬಿಕೆ ಏನೇ ಇದ್ದರೂ ಯೆಹೋವನ ಸಾಕ್ಷಿಗಳು ‘ಎಲ್ಲ ತರದ ಜನ್ರನ್ನ ಗೌರವಿಸುತ್ತಾರೆ.’—1 ಪೇತ್ರ 2:17.

^ ಪ್ಯಾರ. 2 ಯಾವ್ಯಾವ ಹಬ್ಬ ಆಚರಣೆಗಳನ್ನು ಯೆಹೋವನ ಸಾಕ್ಷಿಗಳು ಮಾಡುವುದಿಲ್ಲ ಅಂತ ಈ ಲೇಖನದಲ್ಲಿ ಪಟ್ಟಿಮಾಡಿಲ್ಲ. ಇದರ ಬಗ್ಗೆ ತೀರ್ಮಾನ ಮಾಡಲು ಸಹಾಯ ಮಾಡುವ ಎಲ್ಲ ಬೈಬಲ್‌ ತತ್ವಗಳನ್ನು ಸಹ ಇಲ್ಲಿ ಕೊಟ್ಟಿಲ್ಲ.

^ ಪ್ಯಾರ. 10 ಮಿತ್ರ, ಮಿತ್ರಾಯಿಸಂ, ಕ್ರಿಸ್ಮಸ್‌ ಡೇ ಮತ್ತು ಯಾಲ್ಡ—ಕೆ. ಈ. ಇಡುಲ್‌ಜಿ, ಪುಟ 31-33.