ಮಾಹಿತಿ ಇರುವಲ್ಲಿ ಹೋಗಲು

ನೂತನ ಲೋಕ ಭಾಷಾಂತರ ನಿಖರವಾಗಿದೆಯಾ?

ನೂತನ ಲೋಕ ಭಾಷಾಂತರ ನಿಖರವಾಗಿದೆಯಾ?

 ನೂತನ ಲೋಕ ಭಾಷಾಂತರ a ಮೊದಲ ಭಾಗ 1950ರಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಇಂದಿನವರೆಗೂ ಅದರ ನಿಖರತೆ ಕುರಿತು ಕೆಲವರು ಪ್ರಶ್ನೆಮಾಡುತ್ತಾ ಬಂದಿದ್ದಾರೆ. ಯಾಕೆಂದರೆ ಕೆಲವು ಕಡೆಗಳಲ್ಲಿ ಇದರಲ್ಲಿರುವುದಕ್ಕೂ ಬೇರೆ ಭಾಷಾಂತರದಲ್ಲಿ ಇರುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಹಾಗೆ ವ್ಯತ್ಯಾಸವಿರುವುದಕ್ಕೆ ಈ ಕೆಳಗಿನ ಮೂರು ವಿಷಯಗಳು ಕಾರಣವಾಗಿರಬಹುದು.

 •   ಭರವಸೆಗೆ ಯೋಗ್ಯ. ವಿದ್ವಾಂಸರು ಇಲ್ಲಿಯವರೆಗೆ ನಡೆಸಿದ ಸಂಶೋಧನೆಯಲ್ಲಿ ಸಿಕ್ಕಿದ ಮತ್ತು ಭರವಸಾರ್ಹ ಪುರಾತನ ಹಸ್ತಪ್ರತಿಗಳ ಮೇಲೆ ನೂತನ ಲೋಕ ಭಾಷಾಂತರ ಆಧರಿತ. ಆದರೆ 1611ರ ಕಿಂಗ್‌ ಜೇಮ್ಸ್‌ ಭಾಷಾಂತರಕ್ಕಾಗಿ ಬಳಸಲಾಗಿರುವ ಹಸ್ತಪ್ರತಿಗಳು ಅಷ್ಟೇನು ನಿಷ್ಕೃಷ್ಟವಾದ್ದದ್ದಲ್ಲ ಮತ್ತು ನೂತನ ಲೋಕ ಭಾಷಾಂತರಕ್ಕೆ ಬಳಸಿದಷ್ಟು ಹಳೆಯದ್ದಾಗಿರಲಿಲ್ಲ.

 •   ಮೂಲಪ್ರತಿಗಳಿಗೆ ನಿಷ್ಠೆ. ಮೂಲ ಹಸ್ತಪ್ರತಿಗಳಲ್ಲಿ ಇರುವ ದೇವರ ಸಂದೇಶವನ್ನು ನೂತನ ಲೋಕ ಭಾಷಾಂತರ ನಿಷ್ಠೆಯಿಂದ ಅನುವಾದ ಮಾಡಿದೆ. (2 ತಿಮೊಥೆಯ 3:16) ಆದರೆ ಅನೇಕ ಬೈಬಲ್‌ ಭಾಷಾಂತರಗಳು ಮಾನವ ಕಟ್ಟುಪಾಡಿಗೆ ಗೌರವ ಕೊಟ್ಟು ದೇವರ ಸಂದೇಶಕ್ಕೆ ನಿಷ್ಠೆ ತೋರಿಸಿಲ್ಲ. ಉದಾಹರಣೆಗೆ, ದೇವರ ಹೆಸರನ್ನು ಅಂದರೆ ಯೆಹೋವ ಎನ್ನುವುದನ್ನು ತೆಗೆದುಹಾಕಿ ದೇವರು, ಕರ್ತನು ಎನ್ನುವ ಬಿರುದುಗಳನ್ನು ಬಳಸಿವೆ.

 •   ಸರಿಯಾದ ಅರ್ಥ ವಿವರಣೆ. ಬೈಬಲಿನ ಸಾರಾಂಶ ತಿಳಿಸಿರುವ ಇತರ ಭಾಷಾಂತರಗಳಂತೆ ನೂತನ ಲೋಕ ಭಾಷಾಂತರ ಇಲ್ಲ. ಅಂದರೆ ಬೇರೆ ಮಾತುಗಳಲ್ಲಿ ಅರ್ಥ ವಿವರಿಸದೆ ನೂತನ ಲೋಕ ಭಾಷಾಂತರ ಪದಗಳಿಗೆ ಹೆಚ್ಚು ಗಮನಕೊಟ್ಟಿದೆ. ಹಾಗಂತ ತಪ್ಪಾದ ಅರ್ಥ ಕೊಡದಂತೆ ಮತ್ತು ಮೂಲಪ್ರತಿಗಳ ಅರ್ಥವನ್ನು ಮರೆಮಾಚದಂತೆ ಎಚ್ಚರ ವಹಿಸಿದೆ. ಯಾಕೆಂದರೆ ಬೈಬಲನ್ನು ಸಾರಾಂಶದಂತೆ ವಿವರಿಸುವಾಗ ಮಾನವರ ಅಭಿಪ್ರಾಯಗಳು ಸೇರಿಕೊಳ್ಳುವ ಮತ್ತು ಮುಖ್ಯ ವಿವರಗಳು ಬಿಟ್ಟುಹೋಗುವ ಸಾಧ್ಯತೆಯಿದೆ.

ನೂತನ ಲೋಕ ಭಾಷಾಂತರಕ್ಕೂ ಇತರ ಭಾಷಾಂತರಗಳಿಗೂ ಇರುವ ವ್ಯತ್ಯಾಸ

 ಕಾಣೆಯಾಗಿರುವ ಪುಸ್ತಕಗಳು. ರೋಮನ್‌ ಕ್ಯಾತೊಲಿಕ್‌ ಮತ್ತು ಆರ್ತೊಡಾಕ್ಸ್‌ ಚರ್ಚುಗಳು ತಮ್ಮ ಬೈಬಲ್‌ಗಳಲ್ಲಿ ಅಪಾಕ್ರಿಫ ಎಂಬ ಬೈಬಲ್‌ ಪುಸ್ತಕಗಳನ್ನು ಸೇರಿಸಿದವು. ಯೆಹೂದಿ ಅಧಿಕೃತ ಪುಸ್ತಕಗಳ ಪಟ್ಟಿಯಲ್ಲಿ ಅವು ಇರಲಿಲ್ಲ. ಹಾಗಾಗಿ ಯೆಹೂದ್ಯರಿಗೆ “ಪವಿತ್ರ ದೈವೋಕ್ತಿಗಳು ಅವರ ವಶಕ್ಕೆ ಕೊಡಲ್ಪಟ್ಟ”ದ್ದು ಎಂದು ಬೈಬಲ್‌ ಹೇಳಿದ್ದು ಗಮನಾರ್ಹ. (ರೋಮನ್ನರಿಗೆ 3:1, 2) ಆದುದರಿಂದ ನೂತನ ಲೋಕ ಭಾಷಾಂತರ ಮತ್ತು ಅನೇಕ ಆಧುನಿಕ ಭಾಷಾಂತರಗಳು ಅಪಾಕ್ರಿಫ ಎಂದು ಕರೆಯಲಾಗುವ ಈ ಹೆಚ್ಚುವರಿ ಪುಸ್ತಕಗಳನ್ನು ಬೈಬಲಿನಲ್ಲಿ ಸೇರಿಸಲಿಲ್ಲ.

 ಕಾಣೆಯಾಗಿರುವ ವಚನಗಳು: ಲಭ್ಯವಿರುವ ಹಳೆಯ ಬೈಬಲ್‌ ಹಸ್ತಪ್ರತಿಗಳಲ್ಲಿ ಇಲ್ಲದ ವಚನಗಳನ್ನು ಅಥವಾ ಪದಗಳನ್ನು ಕೆಲವು ಭಾಷಾಂತರದಲ್ಲಿ ಸೇರಿಸಲಾಗಿದೆ. ಆದರೆ ನೂತನ ಲೋಕ ಭಾಷಾಂತರದಲ್ಲಿ ಆ ರೀತಿ ಮಾಡಲಾಗಿಲ್ಲ. ಇಂದಿನ ಅನೇಕ ಆಧುನಿಕ ಭಾಷಾಂತರಗಳು ಸಹ ಈ ವಚನಗಳನ್ನು ಅಥವಾ ಪದಗಳನ್ನು ಸೇರಿಸಿಲ್ಲ. ಸೇರಿಸಿದ್ದರೂ ಪಾದಟಿಪ್ಪಣಿಯಲ್ಲಿ ಅವುಗಳಿಗೆ ಸರಿಯಾದ ಆಧಾರ ಇಲ್ಲವೆಂದು ಒಪ್ಪಿಕೊಂಡಿವೆ. b

 ವಿಭಿನ್ನ ಪದಬಳಕೆ. ಸಾಮಾನ್ಯವಾಗಿ ಪದಕ್ಕೆ ಪದವನ್ನು ಭಾಷಾಂತರ ಮಾಡುವುದು ಯಾವಾಗಲೂ ಅಸ್ಪಷ್ಟವಾಗಿರುತ್ತದೆ ಮತ್ತು ತಪ್ಪಾದ ಅರ್ಥ ನೀಡುತ್ತದೆ. ಉದಾಹರಣೆಗೆ ಯೇಸು ಮತ್ತಾಯ 5:3ರಲ್ಲಿ ಹೀಗೆ ಹೇಳಿದನು: “ಆತ್ಮದಲ್ಲಿ ಬಡವರಾಗಿರುವವರು ಧನ್ಯರು.” (ಇಂಗ್ಲಿಷ್‌ ಸ್ಟಾಂಡರ್ಡ್‌ ವರ್ಷನ್‌; ಕಿಂಗ್‌ ಜೇಮ್ಸ್‌ ವರ್ಷನ್‌; ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) “ಆತ್ಮದಲ್ಲಿ ಬಡವರಾಗಿರುವುದು” ಅನ್ನುವುದರ ಅರ್ಥ ಅನೇಕರಿಗೆ ಅಸ್ಪಷ್ಟವಾಗಿದ್ದರೆ, ಇನ್ನು ಕೆಲವರು ಯೇಸು ಬಡವರಾಗಿರುವುದರ ಕುರಿತು ಅಥವಾ ದೀನರಾಗಿರುವುದರ ಕುರಿತು ಮಾತಾಡುತ್ತಿದ್ದನು ಎಂದು ನೆನಸುತ್ತಾರೆ. ಆದರೆ ಯೇಸು ಏನು ಹೇಳಲು ಬಯಸಿದನೆಂದರೆ, ನಿಜ ಸಂತೋಷ ಕಂಡುಕೊಳ್ಳಬೇಕಾದರೆ ದೇವರ ಮಾರ್ಗದರ್ಶನದ ಅಗತ್ಯದ ಅರಿವು ನಮ್ಮಲ್ಲಿರಬೇಕು ಎಂದೇ. ಹಾಗಾಗಿ ನೂತನ ಲೋಕ ಭಾಷಾಂತರ ಇದನ್ನು “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು” ಎಂದು ಭಾಷಾಂತರಿಸಿದೆ.—ಮತ್ತಾಯ 5:3. c

ನೂತನ ಲೋಕ ಭಾಷಾಂತರದ ಕುರಿತು ಯೆಹೋವನ ಸಾಕ್ಷಿಯಲ್ಲದ ವಿದ್ವಾಂಸರು ಕೊಟ್ಟಿರುವ ಸಕಾರಾತ್ಮಕ ಹೇಳಿಕೆಗಳು

 •   ಬೈಬಲ್‌ ಭಾಷಾಂತರಕಾರ ಹಾಗೂ ವಿದ್ವಾಂಸರಾದ ಎಡ್ಗರ್‌ ಜೆ. ಗುಡ್‌ಸ್ಪೀಡ್‌ ಅವರು ಇಸವಿ 1950 ಡಿಸೆಂಬರ್‌ 8ರ ಪತ್ರದಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಕುರಿತು ಹೀಗೆ ಬರೆದರು: “ನೀವು ಲೋಕವ್ಯಾಪಕವಾಗಿರುವ ಜನರನ್ನು ಮನಸ್ಸಲ್ಲಿಟ್ಟುಕೊಂಡು ಮಾಡುತ್ತಿರುವ ಈ ಕೆಲಸದಲ್ಲಿ ನಾನು ತುಂಬ ಆಸಕ್ತನಾಗಿದ್ದೇನೆ. ನೀವು ಧೈರ್ಯವಾಗಿ ಪ್ರಾಮಾಣಿಕವಾಗಿ ಬಲವಾದ ಹುರುಪಿನಿಂದ ಮಾಡಿದ ಭಾಷಾಂತರವನ್ನು ನಾನು ಮೆಚ್ಚುತ್ತೇನೆ. ಅದನ್ನು ಪರೀಕ್ಷಿಸುತ್ತಾ ಹೋದಂತೆ ಸಮಗ್ರ ಗಂಭೀರ ಅಧ್ಯಯನ ಅದರಲ್ಲಿ ಎದ್ದುಕಾಣುತ್ತೆ.”

  ಎಡ್ಗರ್‌ ಜೆ. ಗುಡ್‌ಸ್ಪೀಡ್‌

 •   ಚಿಕಾಗೋ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಆ್ಯಲನ್‌ ವಿಕ್‌ಗ್ರಾನ್‌ ನೂತನ ಲೋಕ ಭಾಷಾಂತರದ ಕುರಿತು ಮಾತಾಡುತ್ತಾ ಆಧುನಿಕ ಭಾಷೆಗೆ ಇದೊಂದು ಉದಾಹರಣೆ ಎಂದರು. ಮತ್ತು ಇತರ ಬೇರೆ ಯಾವುದೇ ಭಾಷಾಂತರಗಳ ಮೇಲೆ ಹೊಂದಿಕೊಳ್ಳದೆ ಇದನ್ನು ಭಾಷಾಂತರಿಸಲಾಗಿದೆ. “ಸ್ವತಂತ್ರವಾಗಿ ಮಾಡಿರುವ ಈ ಭಾಷಾಂತರಕ್ಕೆ ಹೆಚ್ಚು ಮೌಲ್ಯವಿದೆ” ಎನ್ನುತ್ತಾರವರು.​—ದ ಇಂಟರ್‌ಪ್ರಿಟರ್ಸ್‌ ಬೈಬಲ್‌, ಸಂಚಿಕೆ 1, ಪುಟ 99.

 •   ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಕುರಿತು ಬ್ರಿಟಿಷ್‌ ಬೈಬಲ್‌ ವಿಮರ್ಶಕರಾದ ಅಲೆಕ್ಸಾಂಡರ್‌ ಥಾಮ್‌ಸನ್‌ ಹೀಗೆ ಬರೆದರು: “ಈ ಭಾಷಾಂತರವನ್ನು ಗಮನಿಸುವುದಾದರೆ ಇದು ನಿಜಕ್ಕೂ ಯಾರೋ ನಿಪುಣ ಜಾಣ ವಿದ್ವಾಂಸರು ಮಾಡಿರುವುದಾಗಿ ಗೊತ್ತಾಗುತ್ತದೆ. ಗ್ರೀಕ್‌ ಭಾಷೆಯ ಸಂಪೂರ್ಣ ಸಾರವನ್ನು ಇಂಗ್ಲಿಷ್‌ ಭಾಷೆಯಲ್ಲಿ ಅರ್ಥವಾಗುವಂಥ ರೀತಿಯಲ್ಲಿ ಇದರಲ್ಲಿ ರವಾನಿಸಲಾಗಿದೆ.”​—ದ ಡಿಫ್ರೆನ್ಶೀಯೆಟರ್‌, ಏಪ್ರಿಲ್‌ 1952, ಪುಟ 52.

 •   ಕೆಲವು ಕಡೆಗಳಲ್ಲಿ ಹಾಕಿರುವ ವಿಧ ವಿಚಿತ್ರವಾಗಿದೆ ಎಂದನಿಸಿದರೂ ಲೇಖಕರಾದ ಚಾರ್ಲ್ಸ್‌ ಫ್ರಾನ್ಸಿಸ್‌ ಪಾಟರ್‌ ಹೀಗೆ ಬರೆದರು: “ಅನಾಮಿಕರಾದ ಈ ಭಾಷಾಂತರಕಾರರು ಗ್ರೀಕ್‌ ಮತ್ತು ಹೀಬ್ರುವಿನಲ್ಲಿ ಲಭ್ಯವಿರುವ ಹಸ್ತಪ್ರತಿಗಳಲ್ಲಿ ಅತ್ಯುತ್ತಮವಾದದ್ದನ್ನು ಆರಿಸಿ ನುರಿತ ಸಾಮರ್ಥ್ಯದಿಂದ ಮತ್ತು ಬುದ್ಧಿವಂತಿಕೆಯಿಂದ ಅನುವಾದಿಸಿದ್ದಾರೆ.”​—ದ ಫೇತ್ಸ್‌ ಮೇನ್‌ ಲಿವ್‌ ಬೈ, ಪುಟ 300.

 •   ನೂತನ ಲೋಕ ಭಾಷಾಂತರದಲ್ಲಿ ನೈಪುಣ್ಯತೆಯೂ ಕುಂದುಕೊರತೆಗಳೂ ಇವೆ ಎಂದು ಅಭಿಪ್ರಾಯಪಟ್ಟ ರಾಬರ್ಟ್‌ ಎಮ್‌. ಮಾಕಾಯ್‌ ಎಂಬವರು ಕೊನೆಗೆ ಈ ಹೇಳಿಕೆಯನ್ನು ಕೊಟ್ಟರು: “ಇದರ ಹೊಸ ಒಡಂಬಡಿಕೆಯ ಭಾಷಾಂತರದ ಮೂಲಕ ಬೈಬಲಿನ ಭಾಷಾಂತರದಲ್ಲಿರುವ ಅನೇಕ ಸವಾಲುಗಳನ್ನು ಚಾಕಚಕ್ಯತೆಯಿಂದ ನಿಭಾಯಿಸಲು ಆಗುತ್ತದೆ ಎಂದು [ಯೆಹೋವನ ಸಾಕ್ಷಿಗಳು] ವಿದ್ವಾಂಸರು ರುಜುಮಾಡಿದ್ದಾರೆ.”​—ಆ್ಯಂಡೋವರ್‌ ನ್ಯೂಟನ್‌ ಕ್ವಾರ್ಟರ್ಲಿ, ಜನವರಿ 1963, ಪುಟ 31.

 •   ಪ್ರೊಫೆಸರ್‌ ಎಸ್‌. ಮ್ಯಾಕಲಿನ್‌ ಗಿಲ್‌ಮೊರ್‌ ನೂತನ ಲೋಕ ಭಾಷಾಂತರದಲ್ಲಿ ಕೊಡಲಾಗಿರುವ ಎಲ್ಲ ಅರ್ಥ ವಿವರಣೆಯನ್ನು ಒಪ್ಪದಿದ್ದರೂ ಅವರು ಹೇಳಿದ್ದು ಇದರ ಅನುವಾದಕರಲ್ಲಿ “ಗ್ರೀಕ್‌ ಅನ್ನು ಅರ್ಥಮಾಡಿಕೊಳ್ಳುವ ಅದ್ಭುತ ಶಕ್ತಿಯಿದ್ದಿರಬೇಕು.”​—ಆ್ಯಂಡೋವರ್‌ ನ್ಯೂಟನ್‌ ಕ್ವಾರ್ಟರ್ಲಿ, ಸೆಪ್ಟೆಂಬರ್‌ 1966, ಪುಟ 26.

 •   ಕಿಂಗ್‌ಡಮ್‌ ಇಂಟರ್‌ಲಿನಿಯರ್‌ ಟ್ರಾನ್ಸ್‌ಲೇಶನ್‌ನ ಭಾಗವಾಗಿರುವ ನೂತನ ಲೋಕ ಭಾಷಾಂತರವನ್ನು ಅವಲೋಕಿಸಿದ ಪ್ರೊಫೆಸರ್‌ ಥಾಮಸ್‌ ಎನ್‌. ವಿಂಟರ್‌ ಹೀಗೆ ಬರೆದರು: “ಅನುವಾದಕರು ಯಾರೆಂದು ಹೆಸರಿಲ್ಲದ ಈ ಭಾಷಾಂತರ ಕಮಿಟಿಯು ಇಲ್ಲಿಯವರೆಗಿನ ಮಾಹಿತಿಯನ್ನು ಪಕ್ಕಾ ಆಗಿ ಇಟ್ಟಿದೆ ಮತ್ತು ನಿಖರವಾಗಿಯೂ ಇದೆ.”​—ದ ಕ್ಲಾಸಿಕಲ್‌ ಜರ್ನಲ್‌, ಏಪ್ರಿಲ್‌-ಮೇ 1974, ಪುಟ 376.

 •   ಇಸ್ರೇಲಿನ ಹೀಬ್ರು ವಿದ್ವಾಂಸರಾದ ಬೆಂಜಮಿನ್‌ ಕೇಡಾರ್‌-ಕೊಪ್ಸ್‌ಟೈನ್‌1989ರಲ್ಲಿ ಹೀಗೆ ಹೇಳಿದರು: “ಹೀಬ್ರು ಬೈಬಲಿಗೆ ಮತ್ತು ಭಾಷಾಂತರಕ್ಕೆ ಸಂಬಂಧಿಸಿದ ಭಾಷಾ ಸಂಶೋಧನೆಗೆ ನಾನು ಇಂಗ್ಲಿಷ್‌ ಭಾಷೆಯ ನೂತನ ಲೋಕ ಭಾಷಾಂತರ ಎಂದು ಕರೆಯಲಾಗುವ ಭಾಷಾಂತರವನ್ನು ಆಗಾಗ್ಗೆ ಬಳಸುತ್ತೇನೆ. ಇದರ ಭಾಷಾಂತರಕಾರರು ಮೂಲ ಬರಹಗಳನ್ನು ಸಾಧ್ಯವಾದಷ್ಟು ನಿಖರವಾಗಿಡಲು ಪ್ರಾಮಾಣಿಕ ಪ್ರಯಾಸ ಹಾಕಿದ್ದಾರೆ ಎನ್ನುವುದು ನನಗೆ ಪದೇ ಪದೇ ದೃಢವಾಗಿದೆ.”

 •   ಧಾರ್ಮಿಕ ಅಧ್ಯಯನದ ಪ್ರೊಫೆಸರ್‌ ಜಾಸನ್‌ ಡೇವಿಡ್‌ ಬೆಡೂನಾ ಇಂಗ್ಲಿಷ್‌ ಭಾಷೆಯ ಹೆಸರಾಂತ ಒಂಬತ್ತು ಭಾಷಾಂತರಗಳನ್ನು ವಿಶ್ಲೇಷಿಸಿದ ಮೇಲೆ ಹೀಗೆ ಬರೆದರು: “ಎಲ್ಲ ಭಾಷಾಂತರಗಳಿಗೆ ಹೋಲಿಸಿ ನೋಡುವಾಗ ನೂತನ ಲೋಕ ಭಾಷಾಂತರದ ನಿಖರತೆ ಎದ್ದುಕಾಣುತ್ತದೆ.” ಆದರೂ ಇದರ ಭಾಷಾಂತರಕಾರರಿಗೆ ಬೇರೆಯೇ ಧಾರ್ಮಿಕ ನಂಬಿಕೆಗಳಿದ್ದರಿಂದ ಈ ರೀತಿಯ ಭಾಷಾಂತರ ತಯಾರಾಗಿದೆ ಅಂತ ಅನೇಕ ಬೈಬಲ್‌ ವಿದ್ವಾಂಸರು ಮತ್ತು ಜನರು ನೆನಸುತ್ತಾರೆ. ಆದರೆ ಬೆಡೂನಾ ಹೇಳುತ್ತಾರೆ: “ಹೊಸ ಒಡಂಬಡಿಕೆಯ ಬರಹಗಾರರು ಬರೆದಿದ್ದನ್ನು ನೂತನ ಲೋಕ ಭಾಷಾಂತರದಲ್ಲಿ ಯಥಾ ನಕಲು ಮಾಡಲಾಗಿದೆ ಮತ್ತು ನಿಖರ ಅರ್ಥದಲ್ಲಿ ಭಾಷಾಂತರಿಸಲಾಗಿದೆ. ಇದೇ ವ್ಯತ್ಯಾಸಗಳಿಗೆ ಕಾರಣ.”​—ಟ್ರುತ್‌ ಇನ್‌ ಟ್ರಾನ್ಸಲೇಶನ್‌, ಪುಟ 163, 165.

a 2013ರ ಇಂಗ್ಲಿಷ್‌ ನೂತನ ಲೋಕ ಭಾಷಾಂತರಕ್ಕಿಂತ ಮುಂಚೆ ಬಿಡುಗಡೆಯಾದ ಭಾಷಾಂತರ.

b ಉದಾಹರಣೆಗೆ, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌ ಮತ್ತು ಕ್ಯಾತೊಲಿಕ್‌ ನ್ಯೂ ಜೆರೂಸಲೇಮ್‌ ಬೈಬಲ್‌ ನೋಡಿ. ಸೇರಿಸಲಾಗಿರುವ ವಚನಗಳು—ಮತ್ತಾಯ 17:21; 18:11; 23:14; ಮಾರ್ಕ 7:16; 9:44, 46; 11:26; 15:28; ಲೂಕ 17:36; 23:17; ಯೋಹಾನ 5:4; ಅಪೊಸ್ತಲರ ಕಾರ್ಯಗಳು 8:37; 15:34; 24:7; 28:29; ಮತ್ತು ರೋಮನ್ನರಿಗೆ 16:24. 1 ಯೋಹಾನ 5:7, 8ರಲ್ಲಿ ತ್ರಿಯೇಕದ ಕುರಿತ ಹೇಳಿಕೆಗಳನ್ನು ಕಿಂಗ್‌ ಜೇಮ್ಸ್‌ ಮತ್ತು ಡುಯೇ ರೈಮ್ಸ್‌ ಭಾಷಾಂತರದಲ್ಲಿ ಕಾಣಬಹುದು. ಬೈಬಲ್‌ ಬರೆದು ನೂರಾರು ವರ್ಷಗಳಾದ ಮೇಲೆ ಈ ಹೇಳಿಕೆಗಳನ್ನು ಸೇರಿಸಲಾಗಿದೆ.

c ಅದೇ ರೀತಿ ಜೆ. ಬಿ. ಫಿಲಿಪ್ಸ್‌ ಭಾಷಾಂತರದಲ್ಲಿ ಯೇಸುವಿನ ಈ ಮಾತನ್ನು “ದೇವರ ಅಗತ್ಯ ತಮಗಿದೆಯೆಂದು ಅರಿತವರು” ಎಂದು ಭಾಷಾಂತರಿಸಿದೆ. ಟ್ರಾನ್ಸ್‌ಲೇಟರ್ಸ್‌ ನ್ಯೂ ಟೆಸ್ಟಮೆಂಟ್‌ ಇದನ್ನು “ತಮ್ಮ ಆಧ್ಯಾತ್ಮಿಕ ಅಗತ್ಯದ ಕುರಿತು ತಿಳಿದವರು” ಎಂದು ಭಾಷಾಂತರಿಸಿದೆ.