ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಝಯನಿಸ್ಟ್‌ಗಳಾ ಅಂದರೆ ಯೆಹೂದ್ಯರ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಜನರಾ?

ಯೆಹೋವನ ಸಾಕ್ಷಿಗಳು ಝಯನಿಸ್ಟ್‌ಗಳಾ ಅಂದರೆ ಯೆಹೂದ್ಯರ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಜನರಾ?

ಇಲ್ಲ. ಯೆಹೋವನ ಸಾಕ್ಷಿಗಳು ಬೈಬಲನ್ನು ತಮ್ಮ ನಂಬಿಕೆಗೆ ಆಧಾರವಾಗಿಟ್ಟುಕೊಂಡಿರುವ ಕ್ರೈಸ್ತರು. ಪ್ಯಾಲಸ್ತಿನ್‌ ಪ್ರದೇಶದಲ್ಲಿ ಯೆಹೂದ್ಯರು ಒಟ್ಟುಗೂಡುತ್ತಿರುವುದು ಬೈಬಲ್‌ ಪ್ರವಾದನೆಗೆ ಹೊಂದಿಕೆಯಲ್ಲಿದೆ ಎಂದು ಕೆಲವು ಧರ್ಮಗಳು ಕಲಿಸುತ್ತಿವೆಯಾದರೂ ಯೆಹೋವನ ಸಾಕ್ಷಿಗಳು ಇದನ್ನು ನಂಬುವುದಿಲ್ಲ. ಈ ರಾಜಕೀಯ ವಿಚಾರಗಳ ಕುರಿತು ಬೈಬಲ್‌ ಮುಂತಿಳಿಸಿದೆ ಎಂದು ಸಹ ಅವರು ನಂಬುವುದಿಲ್ಲ. ವಾಸ್ತವದಲ್ಲಿ, ಬೈಬಲ್‌ ಯಾವುದೇ ಮಾನವ ಸರ್ಕಾರವನ್ನು ಬೆಂಬಲಿಸುವುದಿಲ್ಲ. ಇಲ್ಲವೆ ಯಾವುದೇ ಒಂದು ಜನಾಂಗ ಅಥವಾ ಜನರು ಇನ್ನೊಬ್ಬರಿಗಿಂತ ಮೇಲಿನವರೆಂದು ತಿಳಿಸುವುದಿಲ್ಲ. ಯೆಹೋವನ ಸಾಕ್ಷಿಗಳ ಅಧಿಕೃತ ಪತ್ರಿಕೆ ಕಾವಲಿನಬುರುಜು ಸ್ಪಷ್ಟವಾಗಿ ಹಾಗೂ ಖಚಿತವಾಗಿ ತಿಳಿಸಿದ್ದು: “ರಾಜಕೀಯ ಉದ್ದೇಶದಿಂದ ಮಾಡುವ ಈ ಚಳವಳಿಯನ್ನು ಬೈಬಲ್‌ ಬೆಂಬಲಿಸುವುದಿಲ್ಲ.”

ಝಯನಿಝಂ (Zionism) ಅಂದರೆ “ಪ್ಯಾಲೆಸ್ತಿನಿನಲ್ಲಿ ಯೆಹೂದಿ ರಾಷ್ಟ್ರವನ್ನು ಸ್ಥಾಪಿಸುವ ಹಾಗೂ ಅದನ್ನು ಬೆಂಬಲಿಸುವ ಉದ್ದೇಶದಿಂದ ಯೆಹೂದಿ ರಾಷ್ಟೀಯತವಾದಿಗಳು ನಡೆಸುತ್ತಿರುವ ಚಳುವಳಿ” ಎಂದು ಎನ್‌ಸೈಕ್ಲಪೀಡಿಯಾ ಬ್ರಿಟಾನಿಕ ವಿವರಿಸುತ್ತದೆ. ಈ ಚಳುವಳಿಗೆ ರಾಜಕೀಯ ಹಾಗೂ ಧಾರ್ಮಿಕ ದುರದ್ದೇಶಗಳಿವೆ. ಝಯನಿಝಂ ಅನ್ನು ಒಂದು ಧಾರ್ಮಿಕ ಸಿದ್ಧಾಂತವೆಂದು ಯೆಹೋವನ ಸಾಕ್ಷಿಗಳು ಒಪ್ಪುವುದಿಲ್ಲ. ಈ ವಿಷಯದಲ್ಲಿ ಅವರು ಸಂಪೂರ್ಣವಾಗಿ ತಾಟಸ್ಥ್ಯರಾಗಿದ್ದಾರೆ.

ಯೆಹೋವನ ಸಾಕ್ಷಿಗಳ ಸಂಘಟನೆ ಸಂಪೂರ್ಣವಾಗಿ ಧಾರ್ಮಿಕ ಸಂಘಟನೆಯಾಗಿದೆ. ಅದು ಝಯನಿಝಂ ಅನ್ನು ಸೇರಿಸಿ ಯಾವುದೇ ರಾಜಕೀಯ ವ್ಯವಸ್ಥೆಯನ್ನು ಬೆಂಬಲಿಸುವುದಿಲ್ಲ. ಯೆಹೋವನ ಸಾಕ್ಷಿಗಳು ರಾಜಕೀಯವಾಗಿ ತಾಟಸ್ಥ್ಯರಾಗಿರುತ್ತಾರೆ ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಅನೇಕ ದೇಶಗಳಲ್ಲಿ ಸಾಕ್ಷಿಗಳು ತಮ್ಮ ತಾಟಸ್ಥ್ಯತೆಯನ್ನು ಬಿಟ್ಟುಕೊಡದ ಕಾರಣ ತೀವ್ರವಾದ ಹಿಂಸೆಗೆ ಗುರಿಯಾಗಿದ್ದಾರೆ. ಈ ಭೂಮಿಯಲ್ಲಿ ಬಾಳುವ ಶಾಂತಿಯನ್ನು ಸ್ಥಾಪಿಸಲು ಕೇವಲ ದೇವರ ರಾಜ್ಯದಿಂದ ಮಾತ್ರ ಸಾಧ್ಯವೆಂದು ನಾವು ಸಂಪೂರ್ಣವಾಗಿ ನಂಬುತ್ತೇವೆ. ಅದು ಯಾವುದೇ ಮಾನವ ಸರ್ಕಾರಕ್ಕಾಗಲಿ ಚಳವಳಿಗಾಗಲಿ ಎಂದಿಗೂ ನಿಲುಕಲಾರದ ವಿಷಯ.

ಯೆಹೋವನ ಸಾಕ್ಷಿಗಳು ಎಲ್ಲೇ ವಾಸಿಸುತ್ತಿರಲಿ ಅಲ್ಲಿನ ಸರ್ಕಾರದ ನಿಯಮಗಳಿಗೆ ವಿಧೇಯತೆ ತೋರಿಸುತ್ತಾರೆ. ಇದು ಅವರ ಧಾರ್ಮಿಕ ಮೂಲಭೂತ ನಂಬಿಕೆ. ಅವರು ಸರಕಾರಿ ಅಧಿಕಾರಿಗಳ ವಿರುದ್ಧ ದಂಗೆ ಏಳುವುದಿಲ್ಲ ಅಥವಾ ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ.