ಮಾಹಿತಿ ಇರುವಲ್ಲಿ ಹೋಗಲು

ಹತ್ಯಾಕಾಂಡದಲ್ಲಿ ಯೆಹೋವನ ಸಾಕ್ಷಿಗಳಿಗೆ ಏನಾಯಿತು?

ಹತ್ಯಾಕಾಂಡದಲ್ಲಿ ಯೆಹೋವನ ಸಾಕ್ಷಿಗಳಿಗೆ ಏನಾಯಿತು?

ಹತ್ಯಾಕಾಂಡದ ಸಮಯದಲ್ಲಿ ಜರ್ಮನಿ ಮತ್ತು ನಾಜಿ಼ ಕೈಕೆಳಗಿದ್ದ ದೇಶಗಳಲ್ಲಿ ಸುಮಾರು 35,000 ಯೆಹೋವನ ಸಾಕ್ಷಿಗಳು ಇದ್ದರು. ಅವರಲ್ಲಿ ಅಂದಾಜಿಗೆ 1,500 ಯೆಹೋವನ ಸಾಕ್ಷಿಗಳು ಸಾವನ್ನಪ್ಪಿದರು. ಇವರಲ್ಲಿ ಪ್ರತಿಯೊಬ್ಬರು ಹೇಗೆ ಸತ್ತರು ಅನ್ನುವ ಮಾಹಿತಿ ಇಲ್ಲ. ಇದರ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಾ ಇದೆ. ಹಾಗಾಗಿ ಸಾಕ್ಷಿಗಳಲ್ಲಿ ನಿಜವಾಗಲೂ ಎಷ್ಟು ಜನ ಸತ್ತರು ಮತ್ತು ಅದರ ಬಗ್ಗೆ ಬೇರೆ ಮಾಹಿತಿಗಳು ಮುಂದೆ ಗೊತ್ತಾಗಬಹುದು.

 ಅವರು ಹೇಗೆ ಸತ್ತರು?

 • ತಲೆ ಕಡಿಯಲು ನಾಜಿ಼ಗಳು ಬಳಸುತ್ತಿದ್ದ ಗಿಲೆಟಿನ್‌ ಯಂತ್ರ

  ಮರಣದಂಡನೆ: ಜರ್ಮನಿ ಮತ್ತು ನಾಜಿ಼ ಕೈಕೆಳಗಿದ್ದ ದೇಶಗಳಲ್ಲಿ ಹತ್ತಿರತ್ತಿರ 400 ಸಾಕ್ಷಿಗಳಿಗೆ ಮರಣದಂಡನೆ ವಿಧಿಸಿ ಕೊಲ್ಲಲಾಯಿತು. ಹೆಚ್ಚಿನವರನ್ನು ಕೋರ್ಟಿನಲ್ಲಿ ವಿಚಾರಣೆಗೆ ಒಳಪಡಿಸಿ, ಮರಣದಂಡನೆ ವಿಧಿಸಿ, ತಲೆಕಡಿದರು. ವಿಚಾರಣೆಗೆ ಒಳಪಡಿಸದೆ ಕೆಲವರನ್ನು ಗುಂಡಿಟ್ಟು ಕೊಂದರು, ಇನ್ನು ಕೆಲವರನ್ನು ಗಲ್ಲಿಗೇರಿಸಿದರು.

 • ಕಠಿಣ ಬಂಧನ: ನಾಜಿ಼ ಸೆರೆಶಿಬಿರಗಳಲ್ಲಿ ಮತ್ತು ಸೆರೆಮನೆಗಳಲ್ಲಿ ಯೆಹೋವನ ಸಾಕ್ಷಿಗಳನ್ನು ಕಠಿಣವಾಗಿ ದುಡಿಸಿಕೊಂಡರು, ಚಿತ್ರಹಿಂಸೆ ಕೊಟ್ಟರು, ಅವರಿಗೆ ಊಟ ಕೊಡಲಿಲ್ಲ, ಅವರನ್ನು ಚಳಿಯಲ್ಲಿ ಹೊರಗೆ ನಿಲ್ಲಿಸುತ್ತಿದ್ದರು, ಅವರು ಕಾಯಿಲೆ ಬಿದ್ದರು, ಬೇಕಾಗಿರುವ ಔಷಧಿ ಅವರಿಗೆ ಕೊಡಲಿಲ್ಲ. ಈ ಎಲ್ಲ ಕಾರಣದಿಂದ 1,000ಕ್ಕಿಂತ ಹೆಚ್ಚು ಸಾಕ್ಷಿಗಳು ಅಲ್ಲೇ ಸತ್ತರು. ಎರಡನೇ ಮಹಾ ಯುದ್ಧದ ಕೊನೆಯಲ್ಲಿ ಕೆಲವು ಸಾಕ್ಷಿಗಳಿಗೆ ಬಿಡುಗಡೆ ಆಯಿತು. ಆದರೆ ಅವರು ಸೆರೆಮನೆಯಲ್ಲಿ ಕ್ರೂರ ಹಿಂಸೆ ಅನುಭವಿಸಿದ್ದರಿಂದ ಬೇಗ ಸತ್ತುಹೋದರು.

 • ಬೇರೆ ರೀತಿಯಲ್ಲಿ: ಕೆಲವು ಸಾಕ್ಷಿಗಳನ್ನು ಗ್ಯಾಸ್‌ ಚೇಂಬರ್‌ಗಳಲ್ಲಿ ಸಾಯಿಸಿದರು. ಇನ್ನು ಕೆಲವರ ಮೇಲೆ ಹೊಸ ಔಷಧಿಗಳನ್ನು ಪ್ರಯೋಗ ಮಾಡಿ ಸಾಯಿಸಲಾಯಿತು. ಲೀಥಲ್‌ ಎಂಬ ವಿಷಕಾರಿ ಇಂಜೆಕ್ಷನ್‌ ಚುಚ್ಚಿ ಕೊಲೆ ಮಾಡಲಾಯಿತು.

 ಅವರಿಗೆ ಯಾಕೆ ಹಿಂಸೆ ಕೊಟ್ಟರು?

ಬೈಬಲ್‌ ಹೇಳುವ ಹಾಗೆ ನಡೆದದ್ದರಿಂದ ಯೆಹೋವನ ಸಾಕ್ಷಿಗಳಿಗೆ ಹಿಂಸೆ ಕೊಟ್ಟರು. ಯಾವ ವಿಷಯಗಳನ್ನು ಮಾಡಬಾರದು ಅಂತ ಬೈಬಲ್‌ ಹೇಳುತ್ತದೋ ಅದೇ ವಿಷಯಗಳನ್ನು ಮಾಡಬೇಕು ಅಂತ ನಾಜಿ಼ ಸರ್ಕಾರ ಹೇಳಿದಾಗ ಸಾಕ್ಷಿಗಳು ಅದಕ್ಕೆ ಒಪ್ಪಲಿಲ್ಲ. ಮನುಷ್ಯರಿಗಿಂತ ಹೆಚ್ಚಾಗಿ ತಮ್ಮ ರಾಜನಾದ ದೇವರಿಗೆ ವಿಧೇಯರಾಗಲು ಅವರು ನಿರ್ಧಾರ ಮಾಡಿದರು. (ಅಪೊಸ್ತಲರ ಕಾರ್ಯ 5:29) ಅಂಥ ಎರಡು ವಿಷಯಗಳು ಯಾವುದು ಅಂತ ಗಮನಿಸಿ.

 1. ಯಾವುದೇ ರಾಜಕೀಯ ಪಕ್ಷ ವಹಿಸಲಿಲ್ಲ. ಇವತ್ತು ಎಲ್ಲ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳ ಹಾಗೆಯೇ ನಾಜಿ಼ ಆಳ್ವಿಕೆಯ ಸಮಯದಲ್ಲಿದ್ದ ಯೆಹೋವನ ಸಾಕ್ಷಿಗಳು ಕೂಡ ಯಾವುದೇ ರಾಜಕೀಯ ಪಕ್ಷ ವಹಿಸಲಿಲ್ಲ. (ಯೋಹಾನ 18:36) ಹಾಗಾಗಿ ಅವರು

  • ಮಿಲಿಟರಿ ಸೇವೆ ಮಾಡಲು ಒಪ್ಪಲಿಲ್ಲ, ಯುದ್ಧಕ್ಕೆ ಸಂಬಂಧಪಟ್ಟ ಯಾವುದೇ ಕೆಲಸ ಮಾಡಲಿಲ್ಲ.—ಯೆಶಾಯ 2:4; ಮತ್ತಾಯ 26:52.

  • ಚುನಾವಣೆಯಲ್ಲಿ ಮತ ಹಾಕಲಿಲ್ಲ, ನಾಜಿ಼ ಸಂಸ್ಥೆಗಳಿಗೆ ಸೇರಲಿಲ್ಲ.—ಯೋಹಾನ 17:16.

  • ಸ್ವಸ್ತಿಕ್‌ ಚಿಹ್ನೆಗೆ ಸಲ್ಯೂಟ್‌ ಹೊಡೆಯಲಿಲ್ಲ, “ಹಿಟ್ಲರ್‌ಗೆ ಜೈ” ಅಂತ ಹೇಳಲಿಲ್ಲ.—ಮತ್ತಾಯ 23:10; 1 ಕೊರಿಂಥ 10:14.

 2. ನಂಬಿಕೆಯನ್ನು ಬಿಡಲಿಲ್ಲ. ತಮ್ಮ ನಂಬಿಕೆಯನ್ನು ಬಿಟ್ಟುಬಿಡಬೇಕು ಅಂತ ಹೇಳಿದಾಗಲೂ ಯೆಹೋವನ ಸಾಕ್ಷಿಗಳು

  • ಪ್ರಾರ್ಥನೆ ಮತ್ತು ಆರಾಧನೆ ಮಾಡಲು ಸೇರಿಬಂದರು.—ಇಬ್ರಿಯ 10:24, 25.

  • ಬೈಬಲ್‌ ಸಂದೇಶವನ್ನು ಸಾರಿದರು, ಬೈಬಲ್‌ ಸಾಹಿತ್ಯವನ್ನು ಹಂಚಿದರು.—ಮತ್ತಾಯ 28:19, 20.

  • ಯೆಹೂದ್ಯರ ಜೊತೆ ಮತ್ತು ಬೇರೆಯವರ ಜೊತೆ ದಯೆಯಿಂದ ನಡೆದುಕೊಂಡರು.—ಮಾರ್ಕ 12:31.

  • ನಂಬಿಕೆಯನ್ನು ಬಿಟ್ಟುಬಿಡುತ್ತೇವೆಂದು ಹೇಳುವ ಪತ್ರಕ್ಕೆ ಸಹಿಹಾಕಲಿಲ್ಲ. ಎಷ್ಟೇ ಕಷ್ಟ ಬಂದರೂ ಅವರೇನು ನಂಬಿದ್ದರೋ ಅದೇ ಪ್ರಕಾರ ಜೀವಿಸಿದರು.—ಮಾರ್ಕ 12:30.

“ನಾಜಿ಼ ಆಳ್ವಿಕೆಯಲ್ಲಿ ಧಾರ್ಮಿಕ ನಂಬಿಕೆಗೋಸ್ಕರ ಹಿಂಸೆಗೆ ಒಳಗಾದ ಒಂದೇ ಒಂದು ಗುಂಪು“ ಯೆಹೋವನ ಸಾಕ್ಷಿಗಳು ಎಂದು ಪ್ರೊಫೆಸರ್‌ ರಾಬರ್ಟ್‌ ಗರ್ವರ್ಟ್‌ ಹೇಳಿದರು. * ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಯನ್ನು ಬಿಡದೇ ಇರುವುದನ್ನು ಸೆರೆಶಿಬಿರಗಳಲ್ಲಿದ್ದ ಬೇರೆ ಕೈದಿಗಳು ನೋಡಿ ಅವರನ್ನು ಹೊಗಳಿದರು. ಒಬ್ಬ ಆಸ್ಟ್ರಿಯನ್‌ ಕೈದಿ ಏನು ಹೇಳಿದನೆಂದರೆ, “ಅವರು ಯುದ್ಧಕ್ಕೆ ಹೋಗಲ್ಲ. ಸಾಯುವ ಪರಿಸ್ಥಿತಿ ಬಂದರೂ ಅವರು ಬೇರೆಯವರನ್ನು ಸಾಯಿಸುವುದಿಲ್ಲ.”

 ಅವರು ಎಲ್ಲಿ ಸತ್ತರು?

 • ಸೆರೆಶಿಬಿರಗಳಲ್ಲಿ: ಹೆಚ್ಚಿನ ಯೆಹೋವನ ಸಾಕ್ಷಿಗಳು ತಮ್ಮ ಪ್ರಾಣ ಕಳೆದುಕೊಂಡದ್ದು ಸೆರೆಶಿಬಿರಗಳಲ್ಲಿ. ಔಷ್ವಿಟ್ಸ್‌, ಬೂಕನ್‌ವಾಲ್ಡ್‌, ಡಾಕಾವ್‌, ಫ್ಲಾಸನ್‌ಬರ್ಗ್‌, ಮೌತಾವಸನ್‌, ನ್ಯೂಯನ್‌ಗ್ಯಾಮ್‌, ನೇಡಹಾಗನ್‌, ರಾವನ್ಸ್‌ಬ್ರೂಕ್‌ ಮತ್ತು ಜಾಕ್ಸನ್‌ಹೌಜನ್‌ನಲ್ಲಿದ್ದ ಶಿಬಿರಗಳಲ್ಲಿ ಸಾಕ್ಷಿಗಳನ್ನು ಬಂಧಿಸಿದ್ದರು. ಜಾಕ್ಸನ್‌ಹೌಜನ್‌ ಒಂದರಲ್ಲೇ ಸುಮಾರು 200 ಸಾಕ್ಷಿಗಳು ಸತ್ತರೆಂದು ದೃಢೀಕರಿಸಲಾಗಿದೆ.

 • ಸೆರೆಮನೆಗಳಲ್ಲಿ: ಕೆಲವು ಸಾಕ್ಷಿಗಳನ್ನು ಸೆರೆಮನೆಗಳಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸಲಾಯಿತು. ಇನ್ನು ಕೆಲವರು ವಿಚಾರಣೆಯ ಸಮಯದಲ್ಲಿ ಮಾಡಿದ ಹೊಡೆತ, ಗಾಯಗಳಿಂದ ಪ್ರಾಣ ಕಳೆದುಕೊಂಡರು.

 • ಕೊಂದ ಸ್ಥಳಗಳು: ಮುಖ್ಯವಾಗಿ ಯೆಹೋವನ ಸಾಕ್ಷಿಗಳನ್ನು ಕೊಂದದ್ದು ಬರ್ಲಿನ್‌-ಪ್ಲಟ್‌ಜ಼ನ್‌ಜಿ಼, ಬ್ರಾಂಡೆನ್‌ಬರ್ಗ್‌ ಮತ್ತು ಹಲ್ಲ/ಜಾ಼ಲೆ ಸೆರೆಮನೆಗಳಲ್ಲಿ. ಅಲ್ಲದೆ, ದಾಖಲೆಗಳ ಪ್ರಕಾರ ಇನ್ನು ಬೇರೆ 70 ಸ್ಥಳಗಳಲ್ಲೂ ಯೆಹೋವನ ಸಾಕ್ಷಿಗಳನ್ನು ಕೊಲ್ಲಲಾಯಿತು.

 ಸತ್ತವರಲ್ಲಿ ಕೆಲವರು

 • ಹೆಸರು: ಹ್ಯಾಲನ ಗಾಟ್‌ಹೋಲ್ಡ್‌

  ಕೊಂದ ಸ್ಥಳ: ಪ್ಲಟ್‌ಜ಼ನ್‌ಜಿ಼ (ಬರ್ಲಿನ್‌)

  ಹ್ಯಾಲನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಅವಳನ್ನು ತುಂಬ ಸಲ ಅರೆಸ್ಟ್‌ ಮಾಡಿ ಜೈಲಿಗೆ ಹಾಕಿದರು. 1937 ರಲ್ಲಿ ಒಂದು ಸಲ ವಿಚಾರಣೆ ಸಮಯದಲ್ಲಿ ಅವಳಿಗೆ ಎಷ್ಟು ಕ್ರೂರ ಹಿಂಸೆ ಕೊಟ್ಟರೆಂದರೆ ಅವಳ ಹೊಟ್ಟೆಯಲ್ಲಿದ್ದ ಮಗು ಸತ್ತು ಹೋಯಿತು. 1944 ಡಿಸೆಂಬರ್‌ 8 ರಂದು ಬರ್ಲಿನ್‌ನ ಪ್ಲಟ್‌ಜ಼ನ್‌ಜಿ಼ ಸೆರೆಮನೆಯಲ್ಲಿ ಗಿಲೆಟಿನ್‌ ಯಂತ್ರದಲ್ಲಿ ಅವಳ ತಲೆ ಕಡಿದರು.

 • ಹೆಸರು: ಗೇರ್‌ಹಾರ್ಟ್‌ ಲೀಬಾಲ್ಡ್‌

  ಕೊಂದ ಸ್ಥಳ: ಬ್ರಾಂಡೆನ್‌ಬರ್ಗ್‌

  1943 ಮೇ 6 ರಂದು ಗೇರ್‌ಹಾರ್ಟ್‌ನ ತಲೆ ಕಡಿದರು. ಆಗ ಅವನಿಗೆ 23 ವರ್ಷ. ಅವನ ತಲೆ ಕಡಿದ ಅದೇ ಸೆರೆಮನೆಯಲ್ಲಿ ಎರಡು ವರ್ಷಕ್ಕೆ ಮುಂಚೆ ಅವನ ತಂದೆಯ ತಲೆಯನ್ನು ಕಡಿದಿದ್ದರು. ಕುಟುಂಬದವರಿಗೆ ಮತ್ತು ಮದುವೆ ಆಗಲಿಕ್ಕಿದ್ದ ಹುಡುಗಿಗೆ ಅವನು ಬರೆದ ಕೊನೆಯ ಪತ್ರದಲ್ಲಿ ಹೀಗಿದೆ: “ಒಡೆಯ ಶಕ್ತಿ ಕೊಡದಿದ್ರೆ ಈ ದಾರಿಯಲ್ಲಿ ನಡೆಯಲು ನನಗೆ ಆಗ್ತಿರಲಿಲ್ಲ.”

 • ಹೆಸರು: ರೂಡಾಲ್ಫ್‌ ಆಷನೆರ್‌

  ಕೊಂದ ಸ್ಥಳ: ಹಲ್ಲ/ಜಾ಼ಲೆ

  1944 ಸೆಪ್ಟೆಂಬರ್‌ 22 ರಂದು ರೂಡಾಲ್ಫ್‌ನ ತಲೆ ಕಡಿದರು. ಆಗ ಅವನಿಗೆ ಬರೀ 17 ವರ್ಷ. ಅಮ್ಮನಿಗೆ ಬರೆದ ಕೊನೆಯ ಪತ್ರದಲ್ಲಿ ಅವನು ಹೀಗಂದ: “ತುಂಬ ಸಹೋದರರು ಈ ದಾರಿಯಲ್ಲಿ ನಡೆದಿದ್ದಾರೆ. ನಾನು ಇದರಲ್ಲೇ ನಡೆಯುತ್ತೇನೆ.”

^ ಪ್ಯಾರ. 15 ಹಿಟ್ಲರ್ಸ್‌ ಹ್ಯಾಂಗ್‌ಮ್ಯಾನ್‌: ದ ಲೈಫ್‌ ಆಫ್‌ ಹೇಡ್‌ರಿಚ್‌, ಪುಟ 105.