ಮಾಹಿತಿ ಇರುವಲ್ಲಿ ಹೋಗಲು

ಕರ್ತನ ಭೋಜನವನ್ನು ಯೆಹೋವನ ಸಾಕ್ಷಿಗಳು ಆಚರಿಸೋದೇ ಬೇರೆ ತರ ಯಾಕೆ?

ಕರ್ತನ ಭೋಜನವನ್ನು ಯೆಹೋವನ ಸಾಕ್ಷಿಗಳು ಆಚರಿಸೋದೇ ಬೇರೆ ತರ ಯಾಕೆ?

‘ಕರ್ತನ ಭೋಜನವನ್ನು’ ‘ಪ್ರಭು ಭೋಜನ,’ ‘ಒಡೆಯನ ರಾತ್ರಿ ಊಟ‘ ಅಥವಾ ‘ಯೇಸುವಿನ ಮರಣದ ಸ್ಮರಣೆ’ ಎಂದು ಸಹ ಕರೆಯುತ್ತಾರೆ. ಇದನ್ನು ಹೇಗೆ ಆಚರಿಸಬೇಕೆಂದು ಬೈಬಲ್‌ ಹೇಳುತ್ತದೋ ಅದೇ ತರ ನಾವು ಮಾಡುತ್ತೇವೆ. (1 ಕೊರಿಂಥ 11:20, ಸತ್ಯವೇದವು) ಇದನ್ನು ಬೇರೆಬೇರೆ ಪಂಗಡಗಳು ಬೇರೆಬೇರೆ ರೀತಿಯಲ್ಲಿ ಆಚರಿಸುತ್ತವೆ. ಆದರೆ ಅವರು ಆಚರಿಸುವ ವಿಧಾನಕ್ಕೆ, ನಂಬಿಕೆಗೆ ಬೈಬಲಲ್ಲಿ ಆಧಾರ ಇಲ್ಲ.

ಯಾಕೆ ಆಚರಿಸಬೇಕು?

ಯೇಸುವನ್ನು ನೆನಪಿಸಿಕೊಳ್ಳಲು, ಆತನು ನಮಗೋಸ್ಕರ ಕೊಟ್ಟ ಬಲಿಗಾಗಿ ಕೃತಜ್ಞತೆ ತೋರಿಸಲು ನಾವು ಒಡೆಯನ ರಾತ್ರಿ ಊಟದ ಆಚರಣೆಯನ್ನು ಮಾಡುತ್ತೇವೆ. (ಮತ್ತಾಯ 20:28; 1 ಕೊರಿಂಥ 11:24) ನಾವು ಈ ಆಚರಣೆಯಲ್ಲಿ ಸಾಕ್ರಮೆಂಟ್‌ ತಕ್ಕೊಳ್ಳುವುದಿಲ್ಲ, ದೇವರ ಕೃಪೆಯನ್ನು ಅಥವಾ ಪಾಪಗಳ ಕ್ಷಮೆಯನ್ನು ಬೇಡುತ್ತಾ ಧಾರ್ಮಿಕ ವಿಧಿವಿಧಾನಗಳನ್ನು ಸಹ ನಡೆಸುವುದಿಲ್ಲ. * ಯೇಸುವಿನ ಮೇಲೆ ನಂಬಿಕೆ ಇಟ್ಟರೆ ಮಾತ್ರ ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತದೆ, ಧಾರ್ಮಿಕ ಆಚಾರಗಳಿಂದ ಕ್ಷಮೆ ಸಿಗುವುದಿಲ್ಲ ಎಂದು ಬೈಬಲ್‌ ಕಲಿಸುತ್ತದೆ.—ರೋಮನ್ನರಿಗೆ 3:25; 1 ಯೋಹಾನ 2:1, 2.

ಎಷ್ಟು ಸಲ ಆಚರಿಸಬೇಕು?

ಯೇಸು ಶಿಷ್ಯರಿಗೆ ಒಡೆಯನ ರಾತ್ರಿ ಊಟವನ್ನು ಆಚರಿಸಬೇಕು ಎಂದು ಹೇಳಿದನು. ಆದರೆ ಇದನ್ನು ಆಚರಿಸುವುದು ವರ್ಷಕ್ಕೆ ಒಂದು ಸಲನಾ, ತಿಂಗಳಿಗೆ ಒಂದು ಸಲನಾ, ವಾರಕ್ಕೆ ಒಂದು ಸಲನಾ ಅಂತ ಹೇಳಲಿಲ್ಲ. (ಲೂಕ 22:19) ಕೆಲವರು ತಿಂಗಳಿಗೆ ಒಂದು ಸಲ ಆಚರಿಸಬೇಕು ಅನ್ನುತ್ತಾರೆ. ಇನ್ನೂ ಕೆಲವರು ವಾರಕ್ಕೆ ಒಂದು ಸಲ, ಪ್ರತಿ ದಿನ, ಒಂದು ದಿನಕ್ಕೆ ತುಂಬ ಸಲ, ನಮಗೆ ಎಷ್ಟು ಸಲ ಮಾಡಬೇಕು ಅಂತ ಅನಿಸುತ್ತೋ ಅಷ್ಟು ಸಲ ಆಚರಿಸಬಹುದು ಎಂದು ಹೇಳುತ್ತಾರೆ. * ಆದರೆ ಗಮನಿಸಬೇಕಾದ ಕೆಲವು ವಿಷಯಗಳಿವೆ ನೋಡಿ.

ಒಡೆಯನ ರಾತ್ರಿ ಊಟವನ್ನು ಯೇಸು ಮೊದಲನೇ ಸಲ ಮಾಡಿದ್ದು ಯೆಹೂದ್ಯರ ಪಸ್ಕ ಹಬ್ಬದ ದಿನದಂದು. ಆ ದಿನ ಮುಗಿಯುವುದಕ್ಕೆ ಸ್ವಲ್ಪ ಮುಂಚೆ ಯೇಸು ಸತ್ತನು. (ಮತ್ತಾಯ 26:1, 2) ಇದೇನೂ ದಿಢೀರಂತ ಆಗಿದ್ದಲ್ಲ. ಯೇಸುವಿನ ಬಲಿಯನ್ನು ಪಸ್ಕದ ಕುರಿಗೆ ಬೈಬಲ್‌ ಹೋಲಿಸುತ್ತದೆ. (1 ಕೊರಿಂಥ 5:7, 8) ಇಸ್ರಾಯೇಲ್ಯರು ಪಸ್ಕ ಹಬ್ಬವನ್ನು ವರ್ಷದಲ್ಲಿ ಒಂದೇ ಸಲ ಆಚರಿಸುತ್ತಿದ್ದರು. (ವಿಮೋಚನಕಾಂಡ 12:1-6; ಯಾಜಕಕಾಂಡ 23:5) ಅದೇ ತರ ಆರಂಭದ ಕ್ರೈಸ್ತರು ಯೇಸುವಿನ ಮರಣದ ಸ್ಮರಣೆಯನ್ನು ವರ್ಷದಲ್ಲಿ ಒಂದೇ ಸಲ ಆಚರಿಸುತ್ತಿದ್ದರು. * ಹಾಗಾಗಿ ಯೆಹೋವನ ಸಾಕ್ಷಿಗಳು ಕೂಡ ಒಡೆಯನ ರಾತ್ರಿ ಊಟವನ್ನು ವರ್ಷದಲ್ಲಿ ಒಂದೇ ಸಲ ಆಚರಿಸುತ್ತಾರೆ.

ಯಾವತ್ತು ಯಾವಾಗ ಆಚರಿಸಬೇಕು?

ಯೇಸು ಮೊದಲನೇ ಸಲ ಒಡೆಯನ ರಾತ್ರಿ ಊಟದ ಆಚರಣೆ ಮಾಡಿದ್ದು ಅದನ್ನು ನಾವು ಎಷ್ಟು ಸಲ ಆಚರಿಸಬೇಕೆಂದು ತೋರಿಸುತ್ತದೆ. ಅಲ್ಲದೆ, ಅದನ್ನು ಯಾವತ್ತು ಯಾವಾಗ ಆಚರಿಸಬೇಕೆಂದು ಅರ್ಥ ಮಾಡಿಕೊಳ್ಳಲಿಕ್ಕೂ ಸಹಾಯ ಮಾಡುತ್ತದೆ. ಯೆಹೂದ್ಯರು ಚಂದ್ರನ ಕ್ಯಾಲೆಂಡರನ್ನು ನೋಡುತ್ತಿದ್ದರು. ಅದರ ಪ್ರಕಾರ ಕ್ರಿ.ಶ. 33 ರ ನೈಸಾನ್‌ 14 ರಂದು ಸೂರ್ಯ ಮುಳುಗಿದ ಮೇಲೆ ಯೇಸು ಆ ಆಚರಣೆಯನ್ನು ಮಾಡಿದನು. (ಮತ್ತಾಯ 26:18-20, 26) ಆರಂಭದ ಕ್ರೈಸ್ತರು ಕೂಡ ಅದೇ ದಿನ ಕ್ರಿಸ್ತನ ಮರಣದ ಸ್ಮರಣೆಯನ್ನು ಆಚರಿಸಿದರು. * ನಾವು ಕೂಡ ಪ್ರತಿ ವರ್ಷ ಅದೇ ದಿನ ಸ್ಮರಣೆಯನ್ನು ಆಚರಿಸುತ್ತೇವೆ.

ಕ್ರಿ.ಶ. 33 ರಲ್ಲಿ ನೈಸಾನ್‌ 14 ಶುಕ್ರವಾರ ಬಂದಿತ್ತು. ಆದರೆ ಪ್ರತಿ ವರ್ಷ ನೈಸಾನ್‌ 14 ಶುಕ್ರವಾರದಂದೇ ಬರುವುದಿಲ್ಲ, ಬೇರೆಬೇರೆ ದಿನ ಬರುತ್ತದೆ. ನಮ್ಮ ಕ್ಯಾಲೆಂಡರ್‌ನಲ್ಲಿ ನೈಸಾನ್‌ 14 ಯಾವತ್ತು ಬರುತ್ತದೆ ಅಂತ ಲೆಕ್ಕಮಾಡಲು ನಾವು ಯೇಸುವಿನ ದಿನದಲ್ಲಿ ಬಳಸಿದ ವಿಧಾನವನ್ನೇ ಬಳಸುತ್ತೇವೆ. ಇವತ್ತಿನ ಯೆಹೂದಿ ಕ್ಯಾಲೆಂಡರಿಗಾಗಿ ಬಳಸುವ ವಿಧಾನವನ್ನು ಬಳಸುವುದಿಲ್ಲ. *

ರೊಟ್ಟಿ ಮತ್ತು ದ್ರಾಕ್ಷಾಮದ್ಯ

ಯೇಸು ಪಸ್ಕದ ಊಟದಲ್ಲಿ ಮಿಕ್ಕಿದ್ದ ಹುಳಿಯಿಲ್ಲದ ರೊಟ್ಟಿಯನ್ನು, ಕೆಂಪು ದ್ರಾಕ್ಷಾಮದ್ಯವನ್ನು ತನ್ನ ಮರಣದ ಸ್ಮರಣೆಯ ಆಚರಣೆಯಲ್ಲಿ ಬಳಸಿದನು. (ಮತ್ತಾಯ 26:26-28) ಅದೇ ರೀತಿ ನಾವು ಕೂಡ ಆ ಆಚರಣೆಯಲ್ಲಿ ಹುಳಿ ಅಥವಾ ಬೇರೆ ಯಾವುದನ್ನೂ ಬೆರೆಸಿರದ ರೊಟ್ಟಿಯನ್ನು ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ಉಪಯೋಗಿಸುತ್ತೇವೆ. ಈ ದ್ರಾಕ್ಷಾಮದ್ಯದಲ್ಲಿ ಸಿಹಿ, ಬೇರೆ ಮದ್ಯ, ಮಸಾಲೆ ಪದಾರ್ಥ ಯಾವುದನ್ನೂ ಬೆರೆಸಿರುವುದಿಲ್ಲ.

ಕೆಲವು ಕ್ರೈಸ್ತ ಪಂಗಡಗಳು ಹುಳಿ ಅಥವಾ ಈಸ್ಟ್‌ ಬೆರೆಸಿ ಮಾಡಿರುವ ರೊಟ್ಟಿಯನ್ನು ಈ ಆಚರಣೆಯಲ್ಲಿ ಬಳಸುತ್ತವೆ. ಆದರೆ ಬೈಬಲಿನಲ್ಲಿ ಹುಳಿಯು ಪಾಪ ಮತ್ತು ಭ್ರಷ್ಟತೆಯನ್ನು ಸೂಚಿಸುತ್ತದೆ. (ಲೂಕ 12:1; 1 ಕೊರಿಂಥ 5:6-8; ಗಲಾತ್ಯ 5:7-9) ಕ್ರಿಸ್ತನ ಪಾಪವಿಲ್ಲದ ದೇಹವನ್ನು ಸೂಚಿಸಲಿಕ್ಕಾಗಿ ಹುಳಿ ಅಥವಾ ಬೇರೆ ಏನನ್ನೂ ಬೆರೆಸಿರದ ರೊಟ್ಟಿಯನ್ನು ಬಳಸುವುದೇ ಸರಿ. (1 ಪೇತ್ರ 2:22) ಇನ್ನೊಂದು ವಿಷಯ ಏನೆಂದ್ರೆ, ಕೆಲವು ಚರ್ಚ್‌ಗಳು ಈ ಆಚರಣೆಯಲ್ಲಿ ದ್ರಾಕ್ಷಾಮದ್ಯಕ್ಕೆ ಬದಲಾಗಿ ತಾಜಾ ದ್ರಾಕ್ಷಿರಸವನ್ನು ಬಳಸುತ್ತವೆ. ಯಾಕೆಂದರೆ ದ್ರಾಕ್ಷಾಮದ್ಯವನ್ನು ಕುಡಿಯಲೇಬಾರದೆಂದು ಬೈಬಲಲ್ಲಿದೆ ಅಂತ ಅವರು ಹೇಳುತ್ತಾರೆ. ಆದರೆ ಬೈಬಲ್‌ ಹಾಗೆ ಹೇಳುವುದಿಲ್ಲ. (1 ತಿಮೊತಿ 5:23) ಹಾಗಾಗಿ ಕ್ರಿಸ್ತನ ಮರಣದ ಸ್ಮರಣೆಯಲ್ಲಿ ದ್ರಾಕ್ಷಾಮದ್ಯಕ್ಕೆ ಬದಲಾಗಿ ದ್ರಾಕ್ಷಿರಸವನ್ನು ಬಳಸುವುದು ಬೈಬಲ್‌ ಪ್ರಕಾರ ತಪ್ಪು.

ನಿಜವಾದ ದೇಹ ಮತ್ತು ರಕ್ತ ಅಲ್ಲ

ಸ್ಮರಣೆಯಲ್ಲಿ ಬಳಸುವ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯ ಕ್ರಿಸ್ತನ ದೇಹ ಮತ್ತು ರಕ್ತದ ಸಂಕೇತಗಳಾಗಿವೆ. ಕೆಲವರು ನೆನಸುವ ಹಾಗೆ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಅದ್ಭುತವಾಗಿ ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಗುವುದಿಲ್ಲ. ದ್ರಾಕ್ಷಾಮದ್ಯ ಆತನ ರಕ್ತದೊಂದಿಗೆ ರೊಟ್ಟಿ ಆತನ ದೇಹದೊಂದಿಗೆ ಬೆರೆಯುವುದೂ ಇಲ್ಲ. ಇದಕ್ಕೆ ಬೈಬಲಿನಲ್ಲಿ ಆಧಾರ ಇದೆ ನೋಡಿ.

  • ಒಂದುವೇಳೆ ತನ್ನ ರಕ್ತವನ್ನು ಕುಡಿಯಲು ಶಿಷ್ಯರಿಗೆ ಹೇಳಿದ್ದರೆ ರಕ್ತವನ್ನು ತಿನ್ನಬಾರದು ಅಂತ ದೇವರು ಕೊಟ್ಟಿದ್ದ ನಿಯಮವನ್ನು ಮುರಿಯಲಿಕ್ಕೆ ಯೇಸುವೇ ಹೇಳಿದ ಹಾಗೆ ಇರುತ್ತಿತ್ತು. (ಆದಿಕಾಂಡ 9:4; ಅಪೊಸ್ತಲರ ಕಾರ್ಯ 15:28, 29) ಯೇಸು ಖಂಡಿತ ಹಾಗೆ ಹೇಳಿರಲಿಕ್ಕಿಲ್ಲ. ಯಾಕೆಂದರೆ ರಕ್ತ ಪವಿತ್ರವಾದದ್ದು ಅಂತ ತೋರಿಸುವ ದೇವರ ನಿಯಮಗಳನ್ನು ಮುರಿಯಲು ಯೇಸು ಯಾರಿಗೂ ಯಾವತ್ತೂ ಹೇಳಿಕೊಡಲಿಲ್ಲ.—ಯೋಹಾನ 8:28, 29.

  • ಅಪೊಸ್ತಲರು ಯೇಸುವಿನ ರಕ್ತವನ್ನೇ ಕುಡಿದಿದ್ದರೆ ಯೇಸು ‘ನನ್ನ ರಕ್ತವನ್ನು ಸುರಿಸ್ತೀನಿ’ ಅಂತ ಹೇಳುತ್ತಿರಲಿಲ್ಲ. ಯೇಸು ಹೇಳಿದ ಆ ಮಾತು ಆತನು ತನ್ನನ್ನು ಇನ್ನೂ ಬಲಿಯಾಗಿ ಕೊಟ್ಟಿಲ್ಲ, ಮುಂದೆ ಕೊಡಲಿಕ್ಕಿದ್ದಾನೆ ಎಂದು ಸೂಚಿಸುತ್ತದೆ.—ಮತ್ತಾಯ 26:28.

  • ಯೇಸುವಿನ ಬಲಿ “ಒಂದೇ ಒಂದು ಸಲ” ಆಯಿತು. (ಇಬ್ರಿಯ 9:25, 26) ಒಡೆಯನ ರಾತ್ರಿ ಊಟದ ಆಚರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಗುವುದಾದರೆ ಅದನ್ನು ತಿಂದು ಕುಡಿಯುವವರು ಆ ಬಲಿಯನ್ನು ಪದೇಪದೇ ಕೊಡುತ್ತಿದ್ದಾರೆ ಎಂದಾಗುತ್ತದೆ.

  • ಯೇಸು “ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ” ಅಂತ ಹೇಳಿದನೇ ಹೊರತು “ನನ್ನನ್ನು ಬಲಿಕೊಡುವುದಕ್ಕೆ ಇದನ್ನು ಮಾಡುತ್ತಾ ಇರಿ” ಎಂದು ಹೇಳಲಿಲ್ಲ.—1 ಕೊರಿಂಥ 11:24.

ರೊಟ್ಟಿ ಮತ್ತು ದ್ರಾಕ್ಷಾಮದ್ಯ ನಿಜವಾಗಲೂ ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಯಿತು ಎಂದು ಜನ ನಂಬಲು ಕಾರಣವೇನು? ಕೆಲವು ಬೈಬಲ್‌ ವಚನಗಳಲ್ಲಿ ಇರುವ ಪದಗಳಿಂದ ಹಾಗೆ ನಂಬುತ್ತಾರೆ. ಉದಾಹರಣೆಗೆ, “ಇದು ನನ್ನ ರಕ್ತ” ಎಂದು ಯೇಸು ಹೇಳಿದನೆಂದು ಅನೇಕ ಬೈಬಲ್‌ ಭಾಷಾಂತರಗಳಲ್ಲಿ ಇವೆ. (ಮತ್ತಾಯ 26:28) ಆದರೆ ಯೇಸುವಿನ ಮಾತನ್ನು “ಇದು ನನ್ನ ರಕ್ತವನ್ನ ಸೂಚಿಸುತ್ತೆ” “ಇದು ನನ್ನ ರಕ್ತವನ್ನು ಪ್ರತಿನಿಧಿಸುತ್ತದೆ” * ಎಂದೂ ಭಾಷಾಂತರ ಮಾಡಬಹುದು. ಇಲ್ಲಿ ಯೇಸು ರೂಪಕಾಲಂಕಾರ ಉಪಯೋಗಿಸಿ ಕಲಿಸುತ್ತಿದ್ದ. ಹೆಚ್ಚಾಗಿ ಯೇಸು ರೂಪಕಾಲಂಕಾರ ಬಳಸಿ ಬೋಧಿಸುತ್ತಿದ್ದನು.—ಮತ್ತಾಯ 13:34, 35.

ಯಾರು ತಿನ್ನುತ್ತಾರೆ?

ಯೆಹೋವನ ಸಾಕ್ಷಿಗಳು ಒಡೆಯನ ರಾತ್ರಿ ಊಟದ ಆಚರಣೆಯನ್ನು ಮಾಡುವಾಗ ಕೆಲವರಷ್ಟೇ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತಕ್ಕೊಳ್ಳುತ್ತಾರೆ. ಯಾಕೆ?

ಯೇಸು ಸುರಿಸಿದ ರಕ್ತದ ಮೂಲಕ “ಒಂದು ಹೊಸ ಒಪ್ಪಂದವನ್ನು” ಮಾಡಲಾಯಿತು. ಈ ಒಪ್ಪಂದವು ಯೆಹೋವ ದೇವರು ಹಿಂದಿನ ಕಾಲದ ಇಸ್ರಾಯೇಲ್‌ ಜನಾಂಗದ ಜೊತೆ ಮಾಡಿದ್ದ ಒಪ್ಪಂದಕ್ಕೆ ಬದಲಿಯಾಗಿದೆ. (ಇಬ್ರಿಯ 8:10-13) ಈ ಹೊಸ ಒಪ್ಪಂದದಲ್ಲಿ ಇರುವವರು ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತಕ್ಕೊಳ್ಳುತ್ತಾರೆ. ಈ ಹೊಸ ಒಪ್ಪಂದದಲ್ಲಿ ಎಲ್ಲ ಕ್ರೈಸ್ತರು ಇಲ್ಲ, ವಿಶೇಷ ರೀತಿಯಲ್ಲಿ “ದೇವರು ಯಾರನ್ನೆಲ್ಲ ಕರೆದಿದ್ದಾನೋ” ಅವರು ಮಾತ್ರ ಇದ್ದಾರೆ. (ಇಬ್ರಿಯ 9:15; ಲೂಕ 22:20) ಇವರು ಸ್ವರ್ಗದಲ್ಲಿ ಕ್ರಿಸ್ತನ ಜೊತೆ ರಾಜರಾಗಿ ಆಳುತ್ತಾರೆ. ಈ ಅದ್ಭುತ ಅವಕಾಶ 1,44,000 ಜನರಿಗೆ ಮಾತ್ರ ಇದೆಯೆಂದು ಬೈಬಲ್‌ ತಿಳಿಸುತ್ತದೆ.—ಲೂಕ 22:28-30; ಪ್ರಕಟನೆ 5:9, 10; 14:1, 3.

ಕ್ರಿಸ್ತನ ಜೊತೆ ರಾಜರಾಗಿ ಆಳಲು ದೇವರು ಯಾರನ್ನೆಲ್ಲ ಕರೆದಿದ್ದಾನೋ ಅವರು ಚಿಕ್ಕ ಹಿಂಡಾಗಿದ್ದಾರೆ. ಆದರೆ ಹೆಚ್ಚಿನ ‘ಜನ ಒಂದು ದೊಡ್ಡ ಗುಂಪಿನಲ್ಲಿ’ ಇದ್ದಾರೆ. ಇವರು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುತ್ತಾರೆ. (ಲೂಕ 12:32; ಪ್ರಕಟನೆ 7:9, 10) ಭೂಮಿಯ ಮೇಲೆ ಜೀವಿಸುವ ನಿರೀಕ್ಷೆ ಇರುವ ನಾವೆಲ್ಲ ಯೇಸುವಿನ ಮರಣದ ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತಕ್ಕೊಳ್ಳುವುದಿಲ್ಲ. ನಮಗೋಸ್ಕರ ಯೇಸು ಮಾಡಿದ ತ್ಯಾಗಕ್ಕಾಗಿ ಕೃತಜ್ಞತೆ ತೋರಿಸಲು ಸ್ಮರಣೆಗೆ ಹಾಜರಾಗುತ್ತೇವೆ.—1 ಯೋಹಾನ 2:2.

^ ಪ್ಯಾರ. 2 “ಸಾಕ್ರಮೆಂಟ್‌ ಪದ ಹೊಸ ಒಡಂಬಡಿಕೆಯಲ್ಲಿ ಎಲ್ಲೂ ಇಲ್ಲ. μυστήριον [ಮಿಸ್ಟೀರಿಯನ್‌] ಎಂಬ ಗ್ರೀಕ್‌ ಪದವನ್ನು ದೀಕ್ಷಾಸ್ನಾನಕ್ಕಾಗಲಿ ಕರ್ತನ ಭೋಜನಕ್ಕಾಗಲಿ ಯಾವುದೇ ಆಚರಣೆಗಾಗಲಿ ಉಪಯೋಗಿಸಿಲ್ಲ” ಎಂದು ಮೆಕ್ಲಿಂಟಕ್‌ ಹಾಗೂ ಸ್ಟ್ರಾಂಗ್‌ರವರ ಸೈಕ್ಲಪೀಡೀಯ ಸಂಪುಟ 9, ಪುಟ 212 ಹೇಳುತ್ತದೆ.

^ ಪ್ಯಾರ. 3 ಒಡೆಯನ ರಾತ್ರಿ ಊಟದ ಆಚರಣೆ ಬಗ್ಗೆ ಹೇಳುವಾಗ ಕೆಲ ವು ಬೈಬಲ್‌ ಭಾಷಾಂತರಗಳು “ಆಗಾಗ” ಎಂಬ ಪದವನ್ನು ಉಪಯೋಗಿಸುತ್ತವೆ. ಕೆಲವರು ಈ ಪದವನ್ನು ಹಿಡಿದುಕೊಂಡು ಈ ಆಚರಣೆಯನ್ನು ಎಷ್ಟು ಸಲ ಆಚರಿಸಬೇಕೆಂದು ತೋರಿಸುತ್ತದೆ ಅಂತ ಅರ್ಥಮಾಡಿಕೊಂಡಿದ್ದಾರೆ. ಆದರೆ ಮೂಲಭಾಷೆಯಲ್ಲಿ ಆ ಪದಕ್ಕಿರುವ ಸರಿಯಾದ ಅರ್ಥ ‘ಮಾಡುವಾಗೆಲ್ಲ’ ಎಂದಾಗಿದೆ.—1 ಕೊರಿಂಥ 11:25, 26 ಸತ್ಯವೇದವು.

^ ಪ್ಯಾರ. 4 ದ ನ್ಯೂ ಶ್ಯಾಫ್‌-ಹರ್‌ಜೋ಼ಗ್‌ ಎನ್‌ಸೈಕ್ಲಪೀಡೀಯ ಆಫ್‌ ರಿಲೀಜಿಯಸ್‌ ನಾಲೆಜ್‌, ಸಂಪುಟ 4, ಪುಟ 43-44, ಮತ್ತು ಮೆಕ್ಲಿಂಟಕ್‌ ಹಾಗೂ ಸ್ಟ್ರಾಂಗ್‌ರವರ ಸೈಕ್ಲಪೀಡೀಯ ಸಂಪುಟ 8, ಪುಟ 836 ನೋಡಿ.

^ ಪ್ಯಾರ. 5 ದ ನ್ಯೂ ಕೇಂಬ್ರಿಡ್ಜ್‌ ಹಿಸ್ಟರಿ ಆಫ್‌ ದ ಬೈಬಲ್‌, ಸಂಪುಟ 1, ಪುಟ 841.

^ ಪ್ಯಾರ. 6 ಇವತ್ತಿನ ಯೆಹೂದಿ ಕ್ಯಾಲೆಂಡರ್‌ ಪ್ರಕಾರ ನೈಸಾನ್‌ ತಿಂಗಳು ಅಮಾವಾಸ್ಯೆಯ ದಿನದಿಂದ ಶುರುವಾಗುತ್ತದೆ. ಆದರೆ ಒಂದನೇ ಶತಮಾನದಲ್ಲಿ ಈ ವಿಧಾನವನ್ನು ಉಪಯೋಗಿಸಲಿಲ್ಲ. ಯೆರೂಸಲೇಮಿನಲ್ಲಿ ಅಮಾವಾಸ್ಯೆಯ ನಂತರ ಚಂದ್ರ ಮೊದಲನೇ ಸಲ ಕಾಣಿಸಿಕೊಂಡಾಗ ನೈಸಾನ್‌ ತಿಂಗಳು ಶುರುವಾಗಿದೆ ಎಂದು ಲೆಕ್ಕ ಮಾಡುತ್ತಿದ್ದರು. ಇದು ಅಮಾವಾಸ್ಯೆ ನಂತರ ಒಂದು ಅಥವಾ ಎರಡು ದಿನ ಆದಮೇಲೆ ಬರುತ್ತಿತ್ತು. ಹಾಗಾಗಿ ಇವತ್ತು ಯೆಹೂದ್ಯರು ಪಸ್ಕ ಹಬ್ಬ ಆಚರಿಸುವ ತಾರೀಖು ಮತ್ತು ಯೆಹೋವನ ಸಾಕ್ಷಿಗಳು ಕ್ರಿಸ್ತನ ಮರಣದ ಸ್ಮರಣೆ ಆಚರಿಸುವ ತಾರೀಖು ಯಾವಾಗಲೂ ಒಂದೇ ಆಗಿರುವುದಿಲ್ಲ.

^ ಪ್ಯಾರ. 14 ಜೇಮ್ಸ್‌ ಮೊಫಾಟ್‌ರವರ ಎ ನ್ಯೂ ಟ್ರಾನ್ಸ್‌ಲೇಷನ್‌ ಆಫ್‌ ದ ಬೈಬಲ್‌; ಚಾರ್ಲ್ಸ್‌ ಬಿ. ವಿಲಿಯಮ್ಸ್‌ರವರ ದ ನ್ಯೂ ಟೆಸ್ಟಮೆಂಟ್‌—ಎ ಟ್ರಾನ್ಸ್‌ಲೇಷನ್‌ ಇನ್‌ ದ ಲಾನ್‌ಗ್ವೇಜ್‌ ಆಫ್‌ ದ ಪೀಪಲ್‌; ಹಗ್‌ ಜೆ. ಸ್ಕಾನ್‌ಫೀಲ್ಡ್‌ರವರ ದ ಒರಿಜಿನಲ್‌ ನ್ಯೂ ಟೆಸ್ಟಮೆಂಟ್‌.