ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಏಕೆ ಕ್ರಿಸ್ಮಸ್‌ ಆಚರಿಸುವುದಿಲ್ಲ?

ಯೆಹೋವನ ಸಾಕ್ಷಿಗಳು ಏಕೆ ಕ್ರಿಸ್ಮಸ್‌ ಆಚರಿಸುವುದಿಲ್ಲ?

ಸಾಮಾನ್ಯ ತಪ್ಪುಕಲ್ಪನೆ

ತಪ್ಪಭಿಪ್ರಾಯ: ಯೆಹೋವನ ಸಾಕ್ಷಿಗಳು ಯೇಸುವನ್ನು ನಂಬದ ಕಾರಣ ಕ್ರಿಸ್ಮಸ್‌ ಆಚರಿಸುವುದಿಲ್ಲ.

ವಾಸ್ತವಾಂಶ: ನಾವು ಕ್ರೈಸ್ತರು. ನಮ್ಮ ರಕ್ಷಣೆ ಯೇಸು ಕ್ರಿಸ್ತನ ಮೂಲಕ ಮಾತ್ರ ಸಾಧ್ಯ ಎಂದು ನಂಬುತ್ತೇವೆ.​—ಅಪೊಸ್ತಲ ಕಾರ್ಯಗಳು 4:12.

ತಪ್ಪಭಿಪ್ರಾಯ: ಕ್ರಿಸ್ಮಸ್‌ ಆಚರಿಸಬಾರದು ಎಂದು ಜನರಿಗೆ ಕಲಿಸುವ ಮೂಲಕ ನೀವು ಕುಟುಂಬಗಳನ್ನು ಒಡೆಯುತ್ತೀರಿ.

ವಾಸ್ತವಾಂಶ: ಕುಟುಂಬಗಳು ಪ್ರೀತಿ, ಐಕ್ಯತೆಯಲ್ಲಿ ಇರಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ಕುಟುಂಬ ಬಂಧವನ್ನು ಬಲಪಡಿಸಲು ಬೈಬಲ್‌ನಿಂದ ಸಹಾಯ ಮಾಡುತ್ತೇವೆ.

ತಪ್ಪಭಿಪ್ರಾಯ: ಶಾಂತಿ ಮತ್ತು ಔದಾರ್ಯತೆ ತೋರಿಸುವ, ಇತರರಿಗೆ ಸಹಾಯಮಾಡುವ ಮುಂತಾದ ಅವಕಾಶಗಳು ಕ್ರಿಸ್ಮಸ್‌ ಆಚರಣೆಯ ಸಮಯದಲ್ಲಿ ಸಿಗುತ್ತವೆ. ಇಂಥ ಅವಕಾಶಗಳನ್ನು ನೀವು ಕಳೆದುಕೊಳ್ಳುತ್ತಿದ್ದೀರಿ.

ವಾಸ್ತವಾಂಶ: ನಾವು ಪ್ರತಿದಿನ ಔದಾರ್ಯ ತೋರಿಸಲು, ಜನರೊಂದಿಗೆ ಶಾಂತಿಯಿಂದಿರಲು ನಮ್ಮಿಂದಾದ ಸಕಲ ಪ್ರಯತ್ನಮಾಡುತ್ತೇವೆ. (ಜ್ಞಾನೋಕ್ತಿ 11:25; ರೋಮನ್ನರಿಗೆ 12:18) ಉದಾಹರಣೆಗೆ, ಯೇಸು ಮಾರ್ಗದರ್ಶಿಸಿದಂತೆ ನಾವು ನಮ್ಮ ಕೂಟಗಳನ್ನು ನಡೆಸುತ್ತೇವೆ ಮತ್ತು ಸುವಾರ್ತೆ ಸಾರುತ್ತೇವೆ. ಅವನಂದದ್ದು: “ನೀವು ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.” (ಮತ್ತಾಯ 10:8) ಅಲ್ಲದೆ, ಭೂಮಿಯ ಮೇಲೆ ನಿಜ ಶಾಂತಿಯನ್ನು ತರಲು ದೇವರ ರಾಜ್ಯದಿಂದ ಮಾತ್ರ ಸಾಧ್ಯ ಎಂದು ಜನರಿಗೆ ತಿಳಿಸುತ್ತೇವೆ.​—ಮತ್ತಾಯ 10:7.

ಯೆಹೋವನ ಸಾಕ್ಷಿಗಳು ಏಕೆ ಕ್ರಿಸ್ಮಸ್‌ ಆಚರಿಸುವುದಿಲ್ಲ?

  • ತನ್ನ ಮರಣ ದಿನವನ್ನು ಜ್ಞಾಪಿಸಿಕೊಳ್ಳುವಂತೆ ಯೇಸು ಕ್ರಿಸ್ತ ಹೇಳಿದನೇ ಹೊರತು ಜನನ ದಿನವನ್ನಲ್ಲ.​—ಲೂಕ 22:​19, 20.

  • ಯೇಸುವಿನ ಅಪೊಸ್ತಲರು ಮತ್ತು ಆರಂಭದ ಶಿಷ್ಯರು ಕ್ರಿಸ್ಮಸ್‌ ಆಚರಿಸಲಿಲ್ಲ. ನ್ಯೂ ಕ್ಯಾಥೋಲಿಕ್‌ಎನ್‌ಸೈಕ್ಲೋಪಿಡಿಯ ಹೇಳುವುದು “ಯೇಸುವಿನ ಜನನವನ್ನು ಆಚರಿಸಲು ಆರಂಭಿಸಿದ್ದು ಕ್ರಿ.ಶ. 243 ನಂತರವೇ.” ಇದರ ಅರ್ಥ ಕೊನೆಯ ಅಪೊಸ್ತಲನು ಸತ್ತ ನಂತರವೇ ಈ ಆಚರಣೆ ಆರಂಭವಾಯಿತು.

  • ಯೇಸು ಡಿಸಂಬರ್‌ 25ಕ್ಕೆ ಜನಿಸಿದ್ದೆಂದು ಯಾವುದೇ ಪುರಾವೆಯಿಲ್ಲ; ಬೈಬಲಿನಲ್ಲಿ ಎಲ್ಲೂ ಆತನ ಜನ್ಮ ದಿನಾಂಕವನ್ನು ತಿಳಿಸಿಲ್ಲ.

  • ಕ್ರಿಸ್ಮಸ್‌ ಬೇರೆ ಧರ್ಮದಿಂದ ಬಂದ ವಿಚಾರವಾಗಿರುವ ಕಾರಣ ಅದನ್ನು ದೇವರು ಅಂಗೀಕರಿಸುವುದಿಲ್ಲ ಎಂದು ನಾವು ನಂಬುತ್ತೇವೆ.

ಕ್ರಿಸ್ಮಸ್‌ ಆಚರಣೆಯನ್ನು ಒಂದು ದೊಡ್ಡ ಸಮಸ್ಯೆಯಾಗಿ ಯಾಕೆ ಮಾಡುತ್ತೀರಿ?

ಕ್ರಿಸ್ಮಸ್‌ ವಿಧರ್ಮಿ ಮೂಲದಿಂದ ಬಂದಿದೆ, ಅದಕ್ಕೆ ಯಾವುದೇ ಬೈಬಲ್‌ ಆಧಾರವಿಲ್ಲ ಎಂದು ತಿಳಿದರೂ ಅನೇಕರು ಅದನ್ನು ಆಚರಿಸುತ್ತಾರೆ. ಅಂಥ ಜನರು ಹೀಗೆ ಪ್ರಶ್ನಿಸುತ್ತಾರೆ: ನೀವ್ಯಾಕೆ ಇಂಥ ಜನಪ್ರಿಯವಲ್ಲದ ನಿಲುವನ್ನು ತೆಗೆದುಕೊಳ್ಳುತ್ತೀರಿ? ಅದನ್ನೇಕೆ ಅಷ್ಟು ದೊಡ್ಡ ವಿಷಯ ಮಾಡುತ್ತೀರಿ?

ನಮ್ಮ ಯೋಚಾನಶಕ್ತಿಯನ್ನು ಬಳಸುವಂತೆ ಅಥವಾ, “ವಿವೇಚನಾಶಕ್ತಿ” ಉಪಯೋಗಿಸುವಂತೆ ಬೈಬಲ್‌ ಪ್ರೋತ್ಸಾಹಿಸುತ್ತದೆ. (ರೋಮನ್ನರಿಗೆ 12:​1, 2) ಹೀಗೆ ಮಾಡಿದರೆ ಬೈಬಲ್‌ ಸತ್ಯದ ಮೌಲ್ಯವನ್ನು ನಾವು ಅರಿತುಕೊಳ್ಳುತ್ತೇವೆ. (ಯೋಹಾನ 4:​23, 24) ಇತರರು ನಮ್ಮ ಬಗ್ಗೆ ಏನು ತಿಳಿಯುತ್ತಾರೆ, ಅವರು ನಮ್ಮನ್ನು ಇಷ್ಟಪಡುತ್ತಾರೋ ಇಲ್ಲವೋ ಎನ್ನುವುದಕ್ಕಿಂತ ಬೈಬಲ್‌ ಮೂಲತತ್ವಗಳನ್ನು ಎತ್ತಿಹಿಡಿಯುವುದೇ ನಮ್ಮ ಹೃದಯಾಳದ ಇಚ್ಛೆ.

ನಾವು ಕ್ರಿಸ್ಮಸ್‌ ಆಚರಿಸದಿದ್ದರೂ ಈ ವಿಚಾರದಲ್ಲಿ ಬೇರೆಯವರ ಆಯ್ಕೆಯನ್ನು ನಾವು ಗೌರವಿಸುತ್ತೇವೆ. ಹಾಗಾಗಿ ಬೇರೆಯವರು ಕ್ರಿಸ್ಮಸ್‌ ಆಚರಿಸುವಾಗ ನಾವದನ್ನು ತಡೆಯುವುದಿಲ್ಲ.