ಕನ್ನಡ
ಆಫ್ರಿಕದಲ್ಲಿರುವ ಅಂಧರಿಗೊಂದು ಆಶಾದೀಪ
https://cms-imgp.jw-cdn.org/img/p/502014336/univ/art/502014336_univ_sqr_xl.jpg

ಆಫ್ರಿಕದಲ್ಲಿರುವ ಅಂಧರಿಗೊಂದು ಆಶಾದೀಪ

ಆಫ್ರಿಕದಲ್ಲಿರುವ ಅಂಧರಿಗೊಂದು ಆಶಾದೀಪ

ಮುಂದುವರಿದ ದೇಶಗಳಲ್ಲಿ ಅಂಧರಿಗೆ ಹಲವಾರು ಅನುಕೂಲಗಳಿರುತ್ತವೆ. ಆದರೆ ಮುಂದುವರಿಯುತ್ತಿರುವ ಕೆಲವು ದೇಶಗಳಲ್ಲಿ ಅಂಥ ಅನುಕೂಲಗಳಿಂದ ಅಂಧರು ವಂಚಿತರು. ಕೆಲವೊಮ್ಮೆ ಸಮಾಜ ಅವರನ್ನು ನಿರ್ಲಕ್ಷಿಸುತ್ತದೆ. ಯಾವ ಕೆಲಸಗಳು ಕಣ್ಣು ಕಾಣುವವರಿಗೆ ಸುಲಭವಾಗಿರುತ್ತವೋ, ಅದೇ ಕೆಲಸಗಳು ಅಂಧರಿಗೆ ಸವಾಲಾಗಿರುತ್ತವೆ. ಅದಕ್ಕಾಗಿ ಸಿಗಬೇಕಾದ ಸಹಾಯ ಕೂಡ ಅವರಿಗೆ ಸಿಗುವುದಿಲ್ಲ. ವಿಶೇಷವಾಗಿ, ಮಾರುಕಟ್ಟೆಗೆ ಹೋಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು, ಬಸ್ಸಿನಲ್ಲಿ ಪ್ರಯಾಣಿಸಲು ಮತ್ತು ಹಣವ್ಯವಹಾರ ಮಾಡಲು ತುಂಬಾ ಕಷ್ಟವಾಗುತ್ತದೆ. ಓದುವುದು ಸಹ ಅವರಿಗೆ ಸಮಸ್ಯೆಯೇ. ಕಾರಣ, ಅಂಧರಲ್ಲಿ ಕೆಲವರಿಗೆ ಮಾತ್ರ ಬ್ರೇಲ್‌ ಬರುತ್ತದೆ. ಒಂದುವೇಳೆ ಬ್ರೇಲ್‌ ಓದಲು ಕಲಿತಿದ್ದರೂ ಅವರ ಸ್ವಂತ ಭಾಷೆಯಲ್ಲಿ ಬ್ರೇಲ್‌ ಪ್ರಕಾಶನಗಳು ಸಿಗುವುದು ಅಪರೂಪ.

ನೂರಕ್ಕೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಗಳು ಅಂಧರಿಗಾಗಿ ಬೈಬಲಾಧಾರಿತ ಪ್ರಕಾಶನಗಳನ್ನು ಪ್ರಕಟಿಸುತ್ತಿದ್ದಾರೆ. ಮಲಾವಿ ದೇಶದಲ್ಲಿ ಚಿಚೆವ ಭಾಷೆ ಬಳಕೆಯಲ್ಲಿದೆ. ಹಾಗಾಗಿ, ಇತ್ತೀಚಿಗೆ ಸಾಕ್ಷಿಗಳು ಬ್ರೇಲ್‌ ಪ್ರಕಾಶನಗಳನ್ನು ಮುದ್ರಿಸುವ ಮತ್ತು ಬೈಂಡಿಂಗ್‌ ಮಾಡುವ ಉಪಕರಣವನ್ನು ನೆದರ್ಲೆಂಡ್‌ನಿಂದ ಮಲಾವಿಗೆ ರವಾನಿಸಿದರು. ಈಗ ಚಿಚೆವ ಭಾಷೆಯ ಪ್ರಕಾಶನಗಳು ಬ್ರೇಲ್‌ನಲ್ಲಿ ಲಭ್ಯ.

ಲಿಯೋ ಎಂಬವರಿಗೆ ಬ್ರೇಲ್‌ ಪ್ರಕಾಶನಗಳ ತಯಾರಿಕೆಯ ಅನುಭವವಿದೆ. ಅವರು ಬ್ರೆಜಿಲ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ನಿಂದ ಮಲಾವಿಗೆ ಹೋದರು. ಅವರು ಬ್ರೇಲ್‌ನಲ್ಲಿ ಸಾಹಿತ್ಯಗಳನ್ನು ತಯಾರಿಸುವಂಥ ಉಪಕರಣದ ಉಪಯೋಗವನ್ನು ಮತ್ತು ಭಾಷಾಂತರಿಸಲು ಯೆಹೋವನ ಸಾಕ್ಷಿಗಳು ತಯಾರಿಸಿದಂಥ ಕಂಪ್ಯೂಟರ್‌ ಪ್ರೋಗ್ರಾಮನ್ನು ಅಲ್ಲಿನ ಐದು ಜನರ ಒಂದು ತಂಡಕ್ಕೆ ಕಲಿಸಿದರು. ಪ್ರೋಗ್ರಾಮ್‌ ಚಿಚೆವ ಭಾಷೆಯಲ್ಲಿದ್ದ ಮಾಹಿತಿಯನ್ನು ಚಿಚೆವ ಬ್ರೇಲ್‌ ಲಿಪಿಗೆ ಮಾರ್ಪಡಿಸುತ್ತದೆ. ಇದಕ್ಕಾಗಿ ಒಂದು ಕನ್ವರ್ಷನ್‌ ಟೇಬಲನ್ನು ತಯಾರಿಸಬೇಕಿತ್ತು. ಆ ಟೇಬಲಿನಲ್ಲಿ ಪ್ರತಿಯೊಂದು ಚಿಚೆವ ಭಾಷೆಯ ಅಕ್ಷರಕ್ಕೆ ಬದಲಿಯಾಗಿರುವ ಚಿಚೆವ ಬ್ರೇಲ್‌ ಲಿಪಿಯ ಅಕ್ಷರಗಳಿರುತ್ತವೆ. ಹೀಗೆ, ಮಾಹಿತಿಯನ್ನು ಆ ಪ್ರೋಗ್ರಾಮ್‌ ಬ್ರೇಲ್‌ ಲಿಪಿಯನ್ನಾಗಿ ಮಾರ್ಪಡಿಸುತ್ತದೆ. ಜೊತೆಗೆ, ಅಂಧರು ಸುಲಭವಾಗಿ ಓದುವಂಥ ರೀತಿಯಲ್ಲಿ ಸಾಹಿತ್ಯಗಳನ್ನು ತಯಾರಿಸುತ್ತದೆ. ಮಲಾವಿ ದೇಶದಲ್ಲಿ ವಾಸವಿರುವ ಕೆಲವು ಅಂಧರು ತಮ್ಮ ಬ್ರೇಲ್‌ ಲಿಪಿಯ ಪ್ರಕಾಶನಗಳ ಕುರಿತು ಏನು ಹೇಳುತ್ತಾರೆಂದು ಬನ್ನಿ ತಿಳಿಯೋಣ.

ಮುನ್ಯರಾಡ್ಜೆ ಎಂಬ ಯುವತಿ ಒಂದು ರೆಡಿಯೋ ಸ್ಟೇಷನ್‌ನಲ್ಲಿ ತನ್ನ ಸ್ವಂತ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಾಳೆ. ಈಕೆಗೆ ಕಣ್ಣು ಕಾಣುವುದಿಲ್ಲ. ಪ್ರತಿ ತಿಂಗಳು ಆಕೆ ಇತರರಿಗೆ ಬೈಬಲ್‌ ಬಗ್ಗೆ ಕಲಿಸಲು 70 ತಾಸುಗಳನ್ನು ವ್ಯಯಿಸುತ್ತಾಳೆ. “ಮುಂಚೆ ನನ್ಗೆ ಬ್ರೇಲ್‌ ಪ್ರಕಾಶನಗಳು ಇಂಗ್ಲಿಷ್‌ ಭಾಷೆಯಲ್ಲಿ ಸಿಗುತ್ತಿತ್ತು. ಆದರೆ, ಈಗ ಅವುಗಳನ್ನ ನನ್ನ ಮಾತೃ ಭಾಷೆಯಲ್ಲಿ ಪಡೆಯುತ್ತಿರುವಾಗ ನನ್ನ ಹೃದಯ ತುಂಬಿ ಬರುತ್ತದೆ. ಇದಕ್ಕಾಗಿ ನನ್ನ ಪ್ರಿಯ ಸಹೋದರರು ಸಾಕಷ್ಟು ಪ್ರಯತ್ನ ಮತ್ತು ಖರ್ಚು ಮಾಡಿದ್ದಾರೆ. ಅವರ ಈ ಸಹಾಯಕ್ಕಾಗಿ ನಾನು ಆಭಾರಿ. ನಮ್ಮಂಥವರನ್ನೂ ಮರೆತಿಲ್ಲ, ನಮಗೂ ಪ್ರಾಮುಖ್ಯತೆ ಕೊಡುತ್ತಾರೆಂದು ಇದರಿಂದ ಗೊತ್ತಾಗುತ್ತದೆ” ಎಂದು ಆಕೆ ಹೇಳುತ್ತಾಳೆ.

ಫ್ರಾನ್ಸಿಸ್‌ ಎಂಬ ಯೆಹೋವನ ಸಾಕ್ಷಿ ಉತ್ತರ ಮಲಾವಿಯವರು. ಆತನಿಗೆ ಕಣ್ಣು ಕಾಣದಿದ್ದರಿಂದ ಓದಲು ಮತ್ತೊಬ್ಬರನ್ನು ಅವಲಂಬಿಸಬೇಕಾಗಿತ್ತು. ಮೊದಲ ಬಾರಿ ಚಿಚೆವ ಭಾಷೆಯ ಪ್ರಕಾಶನವನ್ನು ಬ್ರೇಲ್‌ನಲ್ಲಿ ಪಡೆದಾಗ ಆತನು ಉದ್ಗರಿಸಿದ್ದು: “ಇದೇನು ಕನಸಾ ನನಸಾ? ಅದ್ಭುತ!”

ಅಂಧರಾಗಿರುವ ಲೋಯ್ಸ್‌ ಸುವಾರ್ತೆ ಸಾರುವ ಕೆಲಸದಲ್ಲಿ ಪ್ರತಿ ತಿಂಗಳು 70 ತಾಸು ಕಳೆಯುತ್ತಾರೆ. ಬೈಬಲ್‌ ಸತ್ಯ ತಿಳಿದುಕೊಂಡು ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳುವಂತೆ 52 ಜನರಿಗೆ ಅವರು ಸಹಾಯ ಮಾಡಿದ್ದಾರೆ. ಕಣ್ಣು ಕಾಣದಿದ್ದ ಇವರು, ಯೆಹೋವನ ಸಾಕ್ಷಿಗಳು ತಯಾರಿಸುವ ಮುದ್ರಿತ ಮತ್ತು ಬ್ರೇಲ್‌ ಸಾಹಿತ್ಯಗಳೆರಡನ್ನು ಉಪಯೋಗಿಸಿ ಅಧ್ಯಯನ ನಡೆಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಮುದ್ರಿತ ಸಾಹಿತ್ಯವನ್ನು ಉಪಯೋಗಿಸುವಾಗ ಲೋಯ್ಸ್‌ ಬ್ರೇಲ್‌ ಪ್ರಕಾಶನಗಳನ್ನು ಉಪಯೋಗಿಸಿ ಕಲಿಸುತ್ತಾರೆ.

ಲೋಯ್ಸ್‌ ಬೈಬಲ್‌ ಅಧ್ಯಯನ ಮಾಡುತ್ತಿರುವುದು

ಲೇಖನದ ಆರಂಭದಲ್ಲಿ ಪರಿಚಯಿಸಲಾಗಿರುವ ತರಬೇತಿಗಾರನಾದ ಲಿಯೋ ಹೇಳಿದ್ದು: “ಬ್ರೇಲ್‌ನಲ್ಲಿ ತಯಾರಿಸಿದ ಬೈಬಲ್‌ ಪ್ರಕಾಶನಗಳನ್ನ ಅಂಧರ ಕೈಗೆ ಕೊಡೊವಾಗ, ಅದು ಅವ್ರ ಭಾಷೆಯಲ್ಲಿದೆ ಅಂತ ತಿಳಿದು ಅವರಿಗಾಗುವ ಅತ್ಯಾನಂದವನ್ನ ನೋಡುವಾಗ ಹೇಳ ತೀರದಷ್ಟು ಸಂತೃಪ್ತಿ ನನಗೆ ಸಿಗ್ತದೆ. ಈಗ ಅಂಧರು ಕೂಟಗಳಿಗಾಗಿ ಮತ್ತು ಸುವಾರ್ತಾ ಕೆಲಸಕ್ಕಾಗಿ ಬೇರೆಯವರ ಮೇಲೆ ಅವಲಂಬಿಸಬೇಕಾಗಿಲ್ಲ. ಸ್ವತಃ ಅವರೇ ತಯಾರಿಮಾಡಲು ಸಾಧ್ಯವಾಗುತ್ತಿದೆ. ಈ ಎಲ್ಲವನ್ನು ಒದಗಿಸಿದ ಯೆಹೋವನಿಗೆ ತಮ್ಮ ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಈಗ ಅವರ ವೈಯಕ್ತಿಕ ಅಧ್ಯಯನ ನಿಜಕ್ಕೂ ವೈಯಕ್ತಿಕವಾಗಿದೆ. ಆಧ್ಯಾತ್ಮಿಕವಾಗಿ ಬೆಳೆಯುವಂತೆ ಅವರು ತಮ್ಮ ಕುಟುಂಬಕ್ಕೆ ಇನ್ನೂ ಉತ್ತಮವಾಗಿ ಸಹಾಯ ಮಾಡಶಕ್ತರಾಗಿದ್ದಾರೆ. ಜೊತೆಗೆ, ಯೆಹೋವನಿಗೆ ಹೆಚ್ಚೆಚ್ಚು ಸಮೀಪವಾಗುತ್ತಿದ್ದಾರೆ.”