ಆಪತ್ತಿನಲ್ಲಿ ಆಪತ್ಭಾಂದವರಾದ ಸಾಕ್ಷಿಗಳು
ಜೊತೆ ಆರಾಧಕರಿಗೆ ಮತ್ತು ಇತರರಿಗೆ ಯೆಹೋವನ ಸಾಕ್ಷಿಗಳು ಆಪತ್ಕಾಲದಲ್ಲಿ ಆಪತ್ಭಾಂದವರು. ಇದಕ್ಕೆ ಕಾರಣ, ಒಬ್ಬರ ಮೇಲೊಬ್ಬರಿಗಿರುವ ಪ್ರೀತಿಯೇ. ಇದು ನಿಜ ಕ್ರೈಸ್ತರ ಗುರುತಾಗಿದೆ.—ಯೋಹಾನ 13:35.
ಇದಕ್ಕೊಂದು ಸಾಕ್ಷಿ ಇಲ್ಲಿದೆ ನೋಡಿ. 2011ರ ಮಧ್ಯದಿಂದ 2012ರ ಮಧ್ಯದಷ್ಟಕ್ಕೆ ವಿಪತ್ತಿಗೆ ಒಳಗಾದ ಕೆಲವು ದೇಶಗಳಿಗೆ ಹೇಗೆ ನೆರವು ನೀಡಲಾಯಿತೆಂದು ತಿಳಿಸುವ ಪಟ್ಟಿಯನ್ನು ಮುಂದೆ ಕೊಡಲಾಗಿದೆ. ಸಾಕ್ಷಿಗಳು ಆಧ್ಯಾತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಸಹಾಯ ಮಾಡುವುದರಲ್ಲಿಯೂ ಮುಂದು. ಆದರೆ ಇಲ್ಲಿ ಅದರ ಬಗ್ಗೆ ತಿಳಿಸಲಾಗಿಲ್ಲ. ಸಾಮಾನ್ಯವಾಗಿ, ನಮ್ಮ ಬ್ರಾಂಚ್ ಆಫೀಸ್‌ಗಳು ವಿಪತ್ತು ಪರಿಹಾರ ಸಮಿತಿಯನ್ನು ನೇಮಿಸಿರುತ್ತವೆ. ಈ ಸಮಿತಿಗಳು ವಿಪತ್ತು ಸಂಭವಿಸಿದ ಪ್ರದೇಶಗಳಿಗೆ ಧಾವಿಸಿ ಬಂದು ಸಹಾಯಹಸ್ತ ನೀಡುತ್ತವೆ. ಅಲ್ಲಿನ ಸ್ಥಳೀಯ ಸಭೆಗಳು ಸಹ ಈ ಕಾರ್ಯದಲ್ಲಿ ಕೈ ಜೋಡಿಸುತ್ತವೆ.
ಜಪಾನ್
ಜಪಾನ್: ಮಾರ್ಚ್ 11, 2011ರಂದು ಸಂಭವಿಸಿದ ಭೂಕಂಪದ ಕಾರಣ ಸುನಾಮಿಯು ಉತ್ತರ ಜಪಾನಿಗೆ ಅಪ್ಪಳಿಸಿತು. ಇದು ಅಲ್ಲಿದ್ದ ಸಾವಿರಾರು ಜನರನ್ನು ಬಾಧಿಸಿತು. ಅವರ ಸಹಾಯಕ್ಕಾಗಿ ಲೋಕದೆಲ್ಲೆಡೆ ಇರುವ ಯೆಹೋವನ ಸಾಕ್ಷಿಗಳು ಉದಾರವಾಗಿ ತಮ್ಮ ಹಣ, ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಧಾರೆಯೆರೆದರು. ಜಪಾನ್‌ನಲ್ಲಿ ಭೂಕಂಪ ಸಂಭವಿಸಿದಾಗ ಹೇಗೆ ಪರಿಹಾರ ನೀಡಲಾಯಿತು ಎಂಬುದನ್ನು ತೋರಿಸುವ ನಮ್ಮ ವಿಡಿಯೋವನ್ನು ನೋಡಿ.
ಬ್ರೆಜಿಲ್: ಪ್ರವಾಹ, ಭೂಕುಸಿತ ಮತ್ತು ಮಣ್ಣುಕುಸಿತದಿಂದಾಗಿ ನೂರಾರು ಜನರು ಸಾವಿಗೀಡಾದರು. ಯೆಹೋವನ ಸಾಕ್ಷಿಗಳು ವಿಪತ್ತು ಬಾಧಿತ ಪ್ರದೇಶಗಳಿಗೆ ಸುಮಾರು 42 ಟನ್‌ಗಳಷ್ಟು ಬೇಗ ಹಾಳಾಗದಂಥ ಆಹಾರ ಪದಾರ್ಥಗಳನ್ನು, 20,000 ನೀರಿನ ಬಾಟಲಿಗಳನ್ನು, 10 ಟನ್ ಬಟ್ಟೆಗಳನ್ನು ಮತ್ತು 5 ಟನ ಶುಚಿ ಮಾಡಲು ಬೇಕಾಗುವಂಥ ಸಾಮಗ್ರಿಗಳನ್ನು, ಔಷಧಿ ಮತ್ತು ಇತರ ಸಾಮಗ್ರಿಗಳನ್ನು ತಡಮಾಡದೆ ಕಳುಹಿಸಿಕೊಟ್ಟರು.
ಕಾಂಗೊ (ಬ್ರೆಸಾವಿಲ್): ಸ್ಫೋಟಕಗಳು ಸಿಡಿದಾಗ ಯೆಹೋವನ ಸಾಕ್ಷಿಗಳ 4 ಮನೆಗಳು ನಾಶವಾದವು. 28 ಸಾಕ್ಷಿಗಳ ಮನೆಗಳು ಹಾಳಾದವು. ಬಾಧಿತರಾದವರಿಗೆ ಊಟ, ಬಟ್ಟೆಯನ್ನು ಕೊಡಲಾಯಿತು. ಈ ವಿಪತ್ತಿನಿಂದ ಹಾನಿಗೊಳಗಾದವರನ್ನು ಸ್ಥಳೀಯ ಸಾಕ್ಷಿಗಳು ತಮ್ಮ ಮನೆಯಲ್ಲಿ ಇರಿಸಿಕೊಂಡರು.
ಕಾಂಗೊ (ಕಿನ್‌ಶಾಸ): ಕಾಲರಾ ಕಾಯಿಲೆ ಬಂದವರಿಗೆ ಔಷಧಿಗಳನ್ನು ಕೊಡಲಾಯಿತು. ಅಲ್ಲದೇ ಧಾರಾಕಾರವಾಗಿ ಸುರಿದ ಮಳೆಯಿಂದ ಉಂಟಾದ ಪ್ರವಾಹದಿಂದ ತತ್ತರಿಸಿದ ಜನರಿಗೆ ಬಟ್ಟೆಗಳನ್ನು ದಾನ ಮಾಡಲಾಯಿತು. ಆಶ್ರಯ ಬಿಡಾರಗಳಲ್ಲಿದ್ದ ನಿರಾಶ್ರಿತರಿಗೆ ವೈದ್ಯಕೀಯ ನೆರವನ್ನು, ವ್ಯವಸಾಯಕ್ಕಾಗಿ ಬೀಜಗಳನ್ನು ಮತ್ತು ಟನ್‌ಗಟ್ಟಲೆ ಬಟ್ಟೆಗಳನ್ನು ಕೊಡಲಾಯಿತು.
ವೆನೆಜುವೇಲಾ: ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಮಣ್ಣುಕುಸಿತ ಉಂಟಾಯಿತು. ವಿಪತ್ತು ಪರಿಹಾರ ಸಮಿತಿಗಳು ಹಾನಿಗೊಳಗಾದ 288 ಸಾಕ್ಷಿಗಳಿಗೆ ನೆರವು ನೀಡಿದವು. 50ಕ್ಕಿಂತ ಹೆಚ್ಚು ಹೊಸ ಮನೆಗಳನ್ನು ನಿರ್ಮಾಣ ಮಾಡಲಾಯಿತು. ವೆಲೆನ್ಸಿಯ ಸರೋವರದ ನೀರಿನ ಮಟ್ಟ ಏರಿದ್ದ ಕಾರಣ ಕೆಲವು ಮನೆಗಳಿಗೆ ಹಾನಿಯಾಗಿತ್ತು. ಪರಿಹಾರ ಸಮಿತಿಗಳು ಆ ಮನೆಗಳಲ್ಲಿದ್ದವರಿಗೂ ನೆರವು ನೀಡಿದವು.
ಫಿಲಿಪ್ಪೀನ್ಸ್
ಫಿಲಿಪ್ಪೀನ್ಸ್: ಬಿರುಗಾಳಿಯಿಂದಾಗಿ ಪ್ರವಾಹ ಉಂಟಾಯಿತು. ಪ್ರವಾಹ ಪೀಡಿತರಿಗೆ ಬ್ರಾಂಚ್ ಆಫೀಸ ಆಹಾರ ಪದಾರ್ಥಗಳನ್ನು, ಬಟ್ಟೆಗಳನ್ನು ಕಳುಹಿಸಿತು. ನೀರಿನ ಮಟ್ಟ ಇಳಿದ ನಂತರ ಸ್ಥಳೀಯ ಸಾಕ್ಷಿಗಳು ಶುಚಿ ಮಾಡುವ ಕಾರ್ಯದಲ್ಲಿ ಅಲ್ಲಿನವರಿಗೆ ಸಹಾಯ ಮಾಡಿದರು.
ಕೆನಡಾ: ಆಲ್ಬರ್ಟಾದಲ್ಲಿ ಭೀಕರ ಕಾಡ್ಗಿಚ್ಚು ಹರಡಿದ್ದರಿಂದ ಅದನ್ನು ಶುಚಿಗೊಳಿಸಲು ಸ್ಲೇವ್ ಲೇಕ್‌ನ ಸಭೆಯವರಿಗೆ ಹತ್ತಿರದ ಸಭೆಗಳಿಂದ ಸಾಕಷ್ಟು ಪ್ರಮಾಣದ ಹಣಕಾಸಿನ ನೆರವು ಹರಿದು ಬಂತು. ಆದರೆ ಅಷ್ಟು ಹಣದ ಅಗತ್ಯ ಆ ಸಭೆಗೆ ಇಲ್ಲದಿದ್ದದ್ದರಿಂದ ಅರ್ಧಕ್ಕಿಂತ ಹೆಚ್ಚಿನ ಹಣವನ್ನು ಲೋಕದ ಇತರ ಭಾಗಗಳಲ್ಲಿ ವಿಪತ್ತುಗಳಿಂದ ಬಾಧಿತರಾದವರಿಗೆ ಸಹಾಯ ಮಾಡಲು ಕಳುಹಿಸಿತು.
ಕೋಟ್ ಡೀವಾರ್: ಈ ದೇಶದಲ್ಲಿ ಯುದ್ಧ ನಡೆಯುತ್ತಿತ್ತು. ಆಗ ಅಲ್ಲಿನವರಿಗೆ ಬೇಕಾದ ಸಾಮಗ್ರಿಗಳನ್ನು, ವಸತಿ ಸೌಕರ್ಯವನ್ನು, ವೈದ್ಯಕೀಯ ನೆರವನ್ನು ಯುದ್ಧದ ಮುಂಚೆ, ಯುದ್ಧ ನಡೆಯುವಾಗ ಮತ್ತು ಯುದ್ಧದ ನಂತರ ಸಹ ಒದಗಿಸಲಾಯಿತು.
ಫಿಜಿ: ಭಾರೀ ಮಳೆಯಿಂದಾಗಿ ಉಂಟಾದ ಭೀಕರ ಪ್ರವಾಹದಿಂದ 192 ಸಾಕ್ಷಿಗಳು ನಷ್ಟವನ್ನು ಅನುಭವಿಸಿ ಆಹಾರದ ಮತ್ತು ಆದಾಯದ ಮೂಲಗಳನ್ನು ಕಳೆದುಕೊಂಡರು. ಅವರಿಗೆ ಆಹಾರದ ಸರಬರಾಜನ್ನು ಮಾಡಲಾಯಿತು.
ಘಾನ: ಈ ದೇಶದ ಪೂರ್ವ ಭಾಗದಲ್ಲಿ ಪ್ರವಾಹ ಬಂದ ಕಾರಣ ಆಹಾರವನ್ನು, ವ್ಯವಸಾಯಕ್ಕಾಗಿ ಬೀಜಗಳನ್ನು ಸರಬರಾಜು ಮಾಡಲಾಯಿತು. ಅಲ್ಲಿನ ಮನೆಗಳನ್ನು ದುರಸ್ತಿ ಮಾಡಲಾಯಿತು.
ಅಮೆರಿಕ: ಸುಂಟರಗಾಳಿಯಿಂದ ಇಲ್ಲಿನ ಮೂರು ರಾಜ್ಯಗಳಲ್ಲಿದ್ದ ಸಾಕ್ಷಿಗಳ 66 ಮನೆಗಳು ಹಾಳಾದವು, 12 ಮನೆಗಳು ಧ್ವಂಸಗೊಂಡವು. ಆ ಮನೆಗಳ ಮಾಲೀಕರ ಹತ್ತಿರ ವಿಮಾ ಸೌಲಭ್ಯವಿದ್ದರೂ ಮನೆಗಳನ್ನು ಸುಸ್ಥಿತಿಗೆ ತರಲು ಅವರಿಗೆ ಹಣದ ಸಹಾಯ ಮಾಡಲಾಯಿತು.
ಅರ್ಜೆಂಟೀನ: ಜ್ವಾಲಾಮುಖಿ ಹೊರಸೂಸಿದ ಬೂದಿಯಿಂದಾಗಿ ಇಲ್ಲಿನ ದಕ್ಷಿಣ ಭಾಗದಲ್ಲಿದ್ದ ಮನೆಗಳು ಹಾಳಾದವು. ಆಗ ಯೆಹೋವನ ಸಾಕ್ಷಿಗಳು ನೆರವು ನೀಡಿದರು.
ಮೊಸಾಂಬೀಕ್: ಬರಗಾಲದಿಂದ ತತ್ತರಿಸಿದ 1,000ಕ್ಕೂ ಹೆಚ್ಚಿನ ಜನರಿಗೆ ಆಹಾರದ ಸರಬರಾಜನ್ನು ಮಾಡಲಾಯಿತು.
ನೈಜೀರಿಯ: ಭೀಕರ ಬಸ್ ಅಪಘಾತದಿಂದ 24 ಸಾಕ್ಷಿಗಳು ಗಾಯಗೊಂಡರು. ಅವರಿಗೆ ಹಣದ ನೆರವನ್ನು ನೀಡಲಾಯಿತು. ಆ ದೇಶದ ಉತ್ತರದಲ್ಲಿ ಜನಾಂಗೀಯ ದ್ವೇಷಗಳಿಂದಾಗಿ ಮನೆಗಳನ್ನು ಕಳೆದುಕೊಂಡಂಥ ನಿರಾಶ್ರಿತರಿಗೆ ಸಹ ನೆರವನ್ನು ನೀಡಲಾಯಿತು.
ಬೆನಿನ್: ಭಾರೀ ಪ್ರವಾಹದಿಂದಾಗಿ ಹಾನಿಗೊಳಗಾದವರಿಗೆ ಔಷಧಿ, ಬಟ್ಟೆ, ಸೊಳ್ಳೆ ಪರದೆ, ಶುದ್ಧ ನೀರು ಮತ್ತು ವಸತಿ ಸೌಕರ್ಯಗಳನ್ನು ನೀಡಲಾಯಿತು.
ಡೊಮಿನಿಕನ್ ರಿಪಬ್ಲಿಕ್
ಡೊಮಿನಿಕನ್ ರಿಪಬ್ಲಿಕ್: ಐರಿನ್ ಸುಂಟರಗಾಳಿಯಿಂದಾಗಿ ಹಾನಿಗೊಳಗಾದವರಿಗೆ ಸ್ಥಳೀಯ ಸಭೆಗಳಲ್ಲಿದ್ದವರು ಅವರ ಮನೆಗಳನ್ನು ದುರಸ್ತಿಗೊಳಿಸಿ ಅಗತ್ಯವಿದ್ದ ಸಾಮಗ್ರಿಗಳನ್ನು ಕೊಟ್ಟರು.
ಇಥಿಯೋಪಿಯ: ಬರ ಸಂಭವಿಸಿದ ಎರಡು ಪ್ರದೇಶಗಳಲ್ಲಿ ಮತ್ತು ಪ್ರವಾಹ ಬಂದ ಒಂದು ಪ್ರದೇಶದಲ್ಲಿದ್ದ ಜನರಿಗೆ ಹಣದ ಸಹಾಯವನ್ನು ಪೂರೈಸಲಾಯಿತು.
ಕೀನ್ಯ: ಬರಪೀಡಿತ ಜನರಿಗೆ ಹಣಕಾಸಿನ ನೆರವನ್ನು ನೀಡಲಾಯಿತು.
ಮಲಾವಿ: ಡ್ಜಾಲೇಕ ನಿರಾಶ್ರಿತ ಶಿಬಿರದಲ್ಲಿದ್ದವರಿಗೆ ಸಹಾಯ ಮಾಡಲಾಯಿತು.
ನೇಪಾಳ: ಭೂಕುಸಿತದಿಂದಾಗಿ ಸಾಕ್ಷಿಯೊಬ್ಬಳ ಮನೆ ಬಹಳಷ್ಟು ಹಾಳಾಗಿತ್ತು. ಸ್ಥಳೀಯ ಸಭೆಯವರು ತಾತ್ಕಾಲಿಕವಾಗಿ ವಾಸಿಸಲು ಆಕೆಗೆ ಒಂದು ಮನೆ ವ್ಯವಸ್ಥೆ ಮಾಡಿಕೊಟ್ಟರು.
ಪಾಪುವ ನ್ಯೂ ಗಿನಿ: 8 ಸಾಕ್ಷಿಗಳ ಮನೆಗಳಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ಸುಟ್ಟು ಹಾಕಿದರು. ಆ ಮನೆಗಳನ್ನು ಪುನಃ ಕಟ್ಟಿಕೊಡಲು ವ್ಯವಸ್ಥೆ ಮಾಡಲಾಯಿತು.
ರೊಮೇನಿಯ: ಪ್ರವಾಹ ಬಂದ ಕಾರಣ ಕೆಲವು ಸಾಕ್ಷಿಗಳು ತಮ್ಮ ಮನೆಗಳನ್ನು ಕಳೆದುಕೊಂಡರು. ಅವರ ಮನೆಗಳನ್ನು ಪುನಃ ಕಟ್ಟಲು ಏರ್ಪಾಡು ಮಾಡಲಾಯಿತು.
ಮಾಲೀ: ಬರಗಾಲದ ಪರಿಣಾಮ ಬೆಳೆಗಳಿಗೆ ಹಾನಿಯಾಗಿ ಹಸಿವೆಯಲ್ಲಿದ್ದವರಿಗೆ ನೆರೆರಾಷ್ಟ್ರವಾದ ಸೆನೆಗಲ್‌ನಿಂದ ಹಣದ ಸಹಾಯ ಸಿಕ್ಕಿತು.
ಸಿಯೆರಾ ಲಿಯೋನ್: ಯುದ್ಧಪೀಡಿತ ಪ್ರದೇಶದಲ್ಲಿ ಗಾಯಗೊಂಡ ಜೊತೆ ಆರಾಧಕರಿಗೆ ಚಿಕಿತ್ಸೆ ನೀಡಲು ವೈದ್ಯರಾಗಿದ್ದ ಯೆಹೋವನ ಸಾಕ್ಷಿಗಳು ಫ್ರಾನ್ಸಿನಿಂದ ಬಂದರು.
ಥಾಯ್‌ಲೆಂಡ್: ಅನೇಕ ಪ್ರಾಂತ್ಯಗಳಲ್ಲಿ ವಿಪತ್ಕಾರಕ ಪ್ರವಾಹಗಳು ಭಾರೀ ನಷ್ಟವನ್ನು ಉಂಟುಮಾಡಿದವು. ಪರಿಹಾರ ತಂಡಗಳು 100 ಮನೆಗಳನ್ನು ಮತ್ತು 6 ರಾಜ್ಯ ಸಭಾಗೃಹಗಳನ್ನು ದುರಸ್ತಿಗೊಳಿಸಿದವು.
ಚೆಕ್ ರಿಪಬ್ಲಿಕ್: ಚೆಕ್ ರಿಪಬ್ಲಿಕ್‌ನಲ್ಲಿ ಸಂಭವಿಸಿದ ಪ್ರವಾಹಗಳಿಂದಾಗಿ ಅನೇಕ ಮನೆಗಳು ಹಾಳಾದವು. ಅವರಿಗೆ ಹತ್ತಿರದ ಸ್ಲೊವಾಕಿಯದಿಂದ ಸಾಕ್ಷಿಗಳು ಬಂದು ನೆರವು ನೀಡಿದರು.
ಶ್ರೀಲಂಕಾ: ಸುನಾಮಿಯಿಂದಾಗಿ ಬಾಧಿತವಾಗಿದ್ದ ಸ್ಥಳಗಳಲ್ಲಿ ವಿಪತ್ತು ಪರಿಹಾರ ಕಾರ್ಯಗಳನ್ನು ಸಂಪೂರ್ಣವಾಗಿ ಮಾಡಿ ಮುಗಿಸಲಾಯಿತು.
ಸೂಡಾನ್: ಈ ದೇಶದಲ್ಲಿ ನಡೆಯುತ್ತಿದ್ದ ಜಗಳಗಳಿಂದಾಗಿ ತಪ್ಪಿಸಿಕೊಂಡಿದ್ದ ಯೆಹೋವನ ಸಾಕ್ಷಿಗಳಿಗೆ ಆಹಾರ, ಬಟ್ಟೆಗಳು, ಶೂಸ್‌ಗಳು ಮತ್ತು ಪ್ಲಾಸ್ಟಿಕ್ ಶೀಟ್‌ಗಳನ್ನು ಒದಗಿಸಲಾಯಿತು.
ಟಾನ್ಸೇನಿಯ: ಭಯಂಕರ ಪ್ರವಾಹದಿಂದಾಗಿ 14 ಕುಟುಂಬಗಳು ತಮಗಿದ್ದುದೆಲ್ಲವನ್ನು ಕಳೆದುಕೊಂಡವು. ಅವರಿಗೆ ಆ ಪ್ರದೇಶದಲ್ಲಿದ್ದ ಸಭೆಗಳವರು ಬಟ್ಟೆ, ಮನೆಗೆ ಬೇಕಾದ ವಸ್ತುಗಳನ್ನು ಕೊಟ್ಟರು. ಅವರಲ್ಲಿ ಒಬ್ಬರಿಗೆ ಪುನಃ ಮನೆಯನ್ನು ಕಟ್ಟಿಕೊಡಲಾಯಿತು.
ಜಿಂಬಾಬ್ವೆ: ಆ ದೇಶದ ಒಂದು ಪ್ರದೇಶದಲ್ಲಿ ಬರಗಾಲದ ಪರಿಣಾಮ ಜನರು ಹಸಿವಿನಿಂದ ತತ್ತರಿಸಿ ಹೋಗಿದ್ದರು. ಅವರಿಗೆ ಆಹಾರ ಮತ್ತು ಹಣವನ್ನು ಕೊಡಲಾಯಿತು.
ಬುರುಂಡಿ: ನಿರಾಶ್ರಿತರಿಗೆ ವೈದ್ಯಕೀಯ ನೆರವಿನ ಜೊತೆಗೆ ಇನ್ನಿತರ ಸಹಾಯವನ್ನು ಮಾಡಲಾಯಿತು.

