ಮಾಹಿತಿ ಇರುವಲ್ಲಿ ಹೋಗಲು

‘ಚಿಕ್ಕ ವಿಷ್ಯದಲ್ಲೂ ಪ್ರಾಮಾಣಿಕತೆ’

‘ಚಿಕ್ಕ ವಿಷ್ಯದಲ್ಲೂ ಪ್ರಾಮಾಣಿಕತೆ’

ಡಾನ್ಯೇಲ ದಕ್ಷಿಣ ಆಪ್ರಿಕದಲ್ಲಿರೋ ಯೆಹೋವನ ಸಾಕ್ಷಿ. ಒಂದಿನ ಕಾಫಿ ಶಾಪ್‌ನಲ್ಲಿ ಅವಳಿಗೆ ಒಂದು ಬ್ಯಾಗ್‌ ಸಿಕ್ತು. ಯಾರೋ ಅದನ್ನ ಮರೆತು ಬಿಟ್ಟು ಹೋಗಿದ್ರು. ಆ ಬ್ಯಾಗಲ್ಲಿ ಒಂದು ಪರ್ಸಿತ್ತು. ಅದ್ರಲ್ಲಿ ದುಡ್ಡು, ಕ್ರೆಡಿಟ್‌ ಕಾರ್ಡ್‌ಗಳು ಇದ್ವು. ಈ ಬ್ಯಾಗ್‌ ಯಾರದ್ದಿರಬಹುದು ಅಂತ ತಿಳ್ಕೊಂಡು ಅದನ್ನು ಅವರಿಗೆ ವಾಪಸ್‌ ಕೊಡ್ಲಿಕ್ಕೆ ಅಡ್ರೆಸ್‌ ಅಥವಾ ಫೋನ್‌ ನಂಬರ್‌ ಇದ್ಯಾ ಅಂತ ಡಾನ್ಯೇಲ ಬ್ಯಾಗಲ್ಲಿ ಹುಡುಕಿದಳು. ಆದ್ರೆ ಒಬ್ಬ ವ್ಯಕ್ತಿಯ ಹೆಸರು ಮಾತ್ರ ಸಿಕ್ತು. ಕ್ರೆಡಿಟ್‌ ಕಾರ್ಡ್‌ನಲ್ಲಿರೋ ಬ್ಯಾಂಕ್‌ ಹೆಸರು ನೋಡಿ ಬ್ಯಾಂಕ್‌ ಮೂಲಕವಾದ್ರೂ ಆ ವ್ಯಕ್ತಿನ ಸಂಪರ್ಕಿಸಬಹುದು ಅಂತ ಪ್ರಯತ್ನಿಸಿದಳು, ಆದ್ರೆ ಆಗಲಿಲ್ಲ. ಡಾನ್ಯೇಲ ಪ್ರಯತ್ನ ಬಿಡಲಿಲ್ಲ. ಆ ಬ್ಯಾಗಲ್ಲಿ ಡಾಕ್ಟರ್‌ ಚೀಟಿ ಸಿಕ್ತು. ಅದ್ರಲ್ಲಿ ಒಂದು ಫೋನ್‌ ನಂಬರ್‌ ಇತ್ತು. ಆ ನಂಬರಿಗೆ ಡಾನ್ಯೇಲ ಫೋನ್‌ ಮಾಡಿದಳು. ಆಗ ರಿಸೆಪ್ಶನಿಸ್ಟ್‌ ಡ್ಯಾನ್ಯೇಲಗೆ ನಿಮ್ಮ ನಂಬರ್‌ ಅವರಿಗೆ ಕೊಡ್ತೀನಿ ಅಂದಳು.

ರಿಸೆಪ್ಶನಿಸ್ಟ್‌ ಆ ವ್ಯಕ್ತಿಗೆ ಫೋನ್‌ ಮಾಡಿ, ಡಾನ್ಯೇಲ ಅನ್ನೋ ಹುಡುಗಿಗೆ ನಿಮ್ಮ ಬ್ಯಾಗ್‌ ಸಿಕ್ಕಿದೆ ಅಂತೆ, ಅದನ್ನು ನಿಮಗೆ ವಾಪಸ್‌ ಕೊಡಬೇಕಂತೆ ಎಂದು ಹೇಳಿದಳು. ಇದನ್ನ ಕೇಳಿ ಆ ವ್ಯಕ್ತಿಗೆ ನಂಬಕ್ಕೇ ಆಗ್ಲಿಲ್ಲ. ಅವನು ತನ್ನ ಬ್ಯಾಗ್‌ ತಗೊಳ್ಳಕ್ಕೆ ಹೋದಾಗ ಡಾನ್ಯೇಲ ಮತ್ತು ಅವಳ ತಂದೆ ಅವನನ್ನ ಚೆನ್ನಾಗಿ ಮಾತಾಡಿಸಿದ್ರು. ಅವನನ್ನ ಹುಡುಕಲಿಕ್ಕೆ ಯಾಕೆ ಇಷ್ಟು ಪ್ರಯತ್ನಪಟ್ರು ಅಂತ ಹೇಳಿದ್ರು. ಯೆಹೋವನ ಸಾಕ್ಷಿಗಳಾಗಿ ಇರೋದ್ರಿಂದ ಬೈಬಲ್‌ ತತ್ವಗಳಿಗೆ ಅನುಸಾರ ಬದುಕಲು ಪ್ರಯತ್ನಿಸ್ತೀವಿ, ಯಾವಾಗಲೂ ಪ್ರಾಮಾಣಿಕರಾಗಿರಲು ಇಷ್ಟಪಡ್ತಿವಿ ಅಂತಾನೂ ಹೇಳಿದ್ರು.—ಇಬ್ರಿಯ 13:18.

ಸ್ವಲ್ಪ ಹೊತ್ತು ಆದ ಮೇಲೆ ಅವನು ಬ್ಯಾಗ್‌ ಮತ್ತು ಪರ್ಸ್‌ ವಾಪಸ್‌ ಕೊಟ್ಟದ್ದಕ್ಕೆ ಮತ್ತೆ ಥ್ಯಾಂಕ್ಸ್‌ ಹೇಳ್ತಾ ಡಾನ್ಯೇಲ ಮತ್ತು ಅವಳ ತಂದೆಗೆ ಈ ಮೆಸ್ಸೇಜ್‌ ಕಳಿಸಿದನು: “ನನ್ನನ್ನ ಹುಡುಕೋಕೆ ನೀವು ಎಷ್ಟು ಕಷ್ಟ ಪಟ್ರಿ, ನಿಜವಾಗ್ಲೂ ಅದನ್ನ ಮೆಚ್ಚಬೇಕು. ನಿಮ್ಮನ್ನ ನಿಮ್ಮ ಕುಟುಂಬದವರನ್ನ ಭೇಟಿ ಮಾಡಿ ನನಗೆ ಸಂತೋಷ ಆಯ್ತು. ನಿಮ್ಮ ಒಳ್ಳೇ ಮನಸ್ಸು, ನಿಮ್ಮ ಒಳ್ಳೇ ಗುಣನ ನೆನಸಿಕೊಂಡ್ರೆ ತುಂಬ ಖುಷಿ ಆಗುತ್ತೆ. ನನ್ನ ಸಮಾಧಾನಕ್ಕೆ ನಾನು ನಿಮಗೆ ಸ್ಪಲ್ಪ ಹಣ ಕೊಡಬೇಕು ಅಂದ್ಕೊಂಡಿದ್ದೀನಿ. ನಿಮ್ಮ ದೇವರ ಸೇವೆ ಮಾಡಕ್ಕೆ ನೀವು ತುಂಬ ತ್ಯಾಗಗಳನ್ನ ಮಾಡ್ತೀರ ಅಂತ ನಂಗೊತ್ತು. ಡಾನ್ಯೇಲಳ ಪ್ರಾಮಾಣಿಕತೆ ನೋಡಿನೇ ನೀವು ಒಳ್ಳೇ ಜನ ಅಂತ ಗೊತ್ತಾಯ್ತು. ಇನ್ನೊಂದು ಸಲ ನಿಮಗೆ ತುಂಬ ಥ್ಯಾಂಕ್ಸ್‌ ಹೇಳಕ್ಕೆ ಇಷ್ಟಪಡ್ತೀನಿ. ದೇವರು ನಿಮ್ಮ ಸೇವೆಯನ್ನ ಆಶೀರ್ವದಿಸಲಿ.”

ಕೆಲವು ತಿಂಗಳ ನಂತ್ರ ಆ ವ್ಯಕ್ತಿ ಡಾನ್ಯೇಲಳ ತಂದೆನ ಮತ್ತೆ ಭೇಟಿಯಾದ. ಆಗ ಅವನು ಅವನಿಗಾದ ಅನುಭವವನ್ನ ಹೇಳಿದ. ಇತ್ತೀಚೆಗೆ ಅವನು ಶಾಪಿಂಗೆ ಹೋದಾಗ ಒಂದು ಪರ್ಸ್‌ ಸಿಕ್ತು ಅಂತ ಹೇಳಿದ. ಆ ಪರ್ಸ್‌ ಯಾರದ್ದು ಅಂತ ಹುಡುಕಿ ಅದನ್ನ ಅವರಿಗೆ ವಾಪಸ್‌ ಕೊಟ್ಟ. ಅವನು ಯಾಕೆ ಇದನ್ನ ವಾಪಸ್‌ ಕೊಡ್ತಿದ್ದಾನೆ ಅನ್ನೋದಕ್ಕೆ ಕಾರಣ ಹೇಳಿದ. ಕಳೆದುಹೋಗಿದ್ದ ತನ್ನ ಪರ್ಸ್‌ ಬೇರೆಯವರಿಗೆ ಸಿಕ್ಕಿದಾಗ ಅವರು ನನಗೆ ವಾಪಸ್‌ ತಂದು ಕೊಟ್ರು. ಅವನು ಹೇಳೋದು ಏನಂದ್ರೆ, “ಒಬ್ರು ಚಿಕ್ಕ ವಿಷ್ಯದಲ್ಲೂ ಪ್ರಾಮಾಣಿಕರಾಗಿದ್ರೆ, ದಯೆ ತೋರಿಸಿದ್ರೆ ಇನ್ನೊಬ್ರಿಗೂ ಹಾಗೆ ಮಾಡಬೇಕು ಅಂತ ಅನಿಸುತ್ತೆ. ಇದ್ರಿಂದ ಸಮಾಜದಲ್ಲಿ ಎಲ್ಲರ ಜೀವನ ಚೆನ್ನಾಗಿರುತ್ತೆ.”